ಚಟ್ಪಟ್‌, ಚಟಾಪಟ್‌ ಚಟ್ನಿ

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ .

ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ.

ಅಷ್ಟೇ ಆಗಿದ್ದರೆ ಇದನ್ನು ಒಂದು ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತಿದ್ದೇವೇನೋ..!

ಆಕೆಗೆ ಒಳಗಣ್ಣಿದೆ. ಒಂದು ಆಹಾರ ಹೇಗೆ ಒಂದು ಸಂಸ್ಕೃತಿಯ ಭಾಗವಾಗಿ ಬರುತ್ತದೆ ಎನ್ನುವುದರ ಬಗ್ಗೆ ಹಾಗೂ ಹೇಗೆ ಆಹಾರ ಒಂದು ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದರ ಬಗ್ಗೆಯೂ

ಹಾಗಾಗಿಯೇ ಇದು ರಸದೂಟವೂ ಹೌದು ಸಮಾಜ ಶಾಸ್ತ್ರದ ಪಾಠವೂ ಹೌದು.

ಒಮ್ಮೆ ಕರಿಚಟ್ನಿ ತಿಂದು ನೋಡಬೇಕು.. ನವರಂಧ್ರಗಳಲ್ಲೂ ಗಾಳಿಬಿಟ್ಟಂಗಾತದ.. ಕಣ್ಣುರಿ, ಮೂಗುರಿಯಂತೂ ಕೂಡಲೆ ಶುರುವಾಗ್ತದ.. ಉಳಕದ್ದು ಮರುದಿನದಿಂದ ಉರೀತದ…

ಏಯ್‌… ನೀವು ರಾಯಚೂರಿನ ಕರಿಚಟ್ನಿ ಹೇಳಬ್ಯಾಡ್ರಿ.. ನಮ್ಮ ಕಲ್ಲನ್‌ಚಟ್ನಿ ತಿಂದು ನೋಡ್ರಿ… ಖಾರನೂ ಇರ್ತದ, ಶಿವಿನೂ ಇರ್ತದ. ಅಗ್ದಿ ಹದ ಅಂದ್ರ ನಮ್ದೆ ಕಲ್ಲನ್‌ಚಟ್ನಿ.

ಹಿಂಗ ನಮ್ಮವ್ವ ವಿಜಯಪುರದಕಿ, ನಮ್ಮಜ್ಜಿ ರಾಯಚೂರದಕಿ, ಇಬ್ಬರೂ ತಮ್ಮ ತಮ್ಮ ಚಟ್ನಿ ಹದ ಹೊಗಳೋರು. ಕರಿಚಟ್ನಿ ತಿಂದ್ರ, ಹೊಟ್ಟಿ ಸಾಪ ಆಗ್ತದ. ಕರುಳು ಸೈತ ಸ್ವಚ್ಛೆ ಆಗ್ತದ. ಕಲ್ಲನ್‌ಚಟ್ನಿ ತಿಂದ್ರ ಕರುಳು ಸ್ವಚ್ಛೆ ಆಗೂದ್ರ ಜೊತಿಗೆ ಮೆತ್ಗಾಗತಾವ. ಹಿಂಗ ಅವರ ಜುಗಲ್‌ ಬಂದಿ ನಡೀತಿತ್ತು.

ಕಾರಣ, ಎರಡೂ ಒಂದೇ ಚಟ್ನಿ. ಬ್ಯಾರೆಬ್ಯಾರೆ ಹೆಸರಿನವು. ವಿಜಯಪುರದೊಳಗ, ಖಾರ, ಹುಳಿ ಬಿತ್ತಂದ್ರ ಅದಕ್ಕ ಒಂಚೂರು.. ಅಲ್ಲಲ್ಲ.. ತುಸುವಾದ್ರೂ ಬೆಲ್ಲ ಒಗಿಯೋರೆ. ಹಿಂಗಾಗಿ ಸಿಹಿ ಬ್ಯಾಡವಾದ ಅಜ್ಜಿಗೆ ತನ್ನ ಕರಿಯಚಟ್ನಿ ಅಂದ್ರ ಕರಿಯಷ್ಟೇ ಅಗಾಧ ಪ್ರೀತಿ. 

ಆರೋಗ್ಯದ ನೆಪದೊಳಗ ಅತ್ತಿ ಚಟ್ನಿ ಅಲ್ಲಗಳಿಯೂದೆ ಆಗ್ತಿತ್ತು. ಇರಲಿ ಈ ಚಟ್ನಿ ಅರಿಯೋದ್ರೊಳಗ ಇಬ್ಬರೂ ಅವರವರ ಸಂಸ್ಕೃತಿನು ಅರೀತಿದ್ರು. ಕರಿಚಟ್ನಿ ಯಾವಾಗಲೂ ಹೋಳಿಗಿ, ಕಡಬು ಮಾಡಿದಾಗ ಮಾಡ್ತಾರ. ಜೀರ್ಣ ಸುಲಭ ಆಗಲಿ ಅಂತ. ಇದಕ್ಕ ಮುಖ್ಯವಾಗಿ ಬೇಕಿರೂದು, ಹಸಿಮೆಣಸಿನಕಾಯಿ, ಉಳ್ಳಾಗಡ್ಡಿ, ಬಳ್ಳೊಳ್ಳಿ, ಜೀರಗಿ, ಉಪ್ಪು, ಚೂರು ಹುಣಸಿಹಣ್ಣು.

ಎಲ್ಲಾನೂ ಹಂಚಿನ ಮ್ಯಾಲೆ ಹಾಕಿ, ಮನಿತುಂಬಾ ಘಾಟೆಬ್ಬಿಸಿ, ಹುರೀಬೇಕು. ಮನಿಮಂದಿಯೆಲ್ಲ ಖೆಮ್ಮಾಕ ಶುರುಮಾಡಿದ್ದು, ಖಾತ್ರಿಯಾದಾಗ, ಅದರ ಮ್ಯಾಲೆ ತಾಟು ಮುಚ್ಚಿ ಹೊರಗ ಬಂದು ಕೂರಬೇಕು. ಮನಿ ತುಂಬಾ ಹೊಗಿ ಮುಸುಕಿರ್ತದ. ಆ ಹೊತ್ತಿಗೆ ಮನಿಗೆ ಬಂದೋರು ಖೆಮ್ಕೊಂತ ಬರ್ತಾರ.. ಕರಿಚಟ್ನಿ ಅರೀತೇರೇನು ಅಂತ ನಮ್ಮ ಗುಟ್ಟು ಅರಿತವರ ಹಂಗ ಕೇಳ್ಕೊಂತ ಒಳಗ ಬರ್ತಾರ.

ಹಿಂಗ ಹುರದಿರುವ ಎಲ್ಲ ಮಸಾಲಿಗೆ ಕೊತ್ತಂಬರಿ ಹಾಕಿ, ಚಟ್ನಿ ಮಾಡಬೇಕು. ಇದು ಸಣ್ಣ ಆದಾಗ ಬಿಳಿಯೆಳ್ಳರೆ, ಸೇಂಗಾನರೆ ಸ್ವಲ್ಪ ಹುರುದು ಮೆಣಸಿನಕಾಯಿ ಚಟ್ನಿಗೆ ಬೆರಸಬಹುದು. ರಾಯಚೂರಿನವರು ಅದನ್ನು ಹಂಗೆ ಕಡಕ್ಕಾಗಿ ತಿಂತಾರ. ಅಗ್ದಿ ನಾಲಗಿಗೆ ಹತ್ತಿದ ಕೂಡಲೇ ನಮ್ಮ ಭ್ರೂಮಧ್ಯ ಕೇಂದ್ರ ಜಾಗೃತಾವಸ್ಥೆಗೆ ಬಂದಂಗ, ನಡುನೆತ್ತಿ ಮ್ಯಾಲೆ ಯಾರೋ ಜೋರಗೆ ಏಟು ಕೊಟ್ಟಂಗ, ಯಾರನ್ನೋ ನೆನಪಿಸಿಕೊಂಡು ಬಿಕ್ಕಿದ್ಹಂಗ ಆಗ್ತದ. ಖಾರ ತಿನ್ನಲಾರದವರಿಗೆ ಅಪ್ಪ, ಅಮ್ಮ ಎಲ್ಲಾರೂ ನೆನಪಾದಂಗ ಆಗಿ ಬಿಕ್ಕಳಿಕಿನೂ ಬರ್ತದ. ಹಂಗ ಚುರ್‌ ಅನಿಸುವ ಚಟ್ನಿ ಇದು.

ಇದರ ಜೊತಿಗೆ ಕಾದೆಣ್ಣಿ ಇರ್ತದ. ಕಾದೆಣ್ಣಿ ಅಂದ್ರೇನಂತ ಈ ಹಿಂದ ಪುಂಡಿಪಲ್ಯೆ ಸುದ್ದಿ ಹೇಳೂಮುಂದ ಹೇಳಿದ್ದೆ. ಕಮ್ಮಗೆ ಕಾಯಿಸಿದ ಎಣ್ಣಿಗೆ ಜೀರಗಿ ಮತ್ತು ಬಳ್ಳೊಳ್ಳಿ ಜೊತಿಗೆ ಕರಿಬೇವು ಹಾಕಿ ಇಟ್ಟಿರ್ತಾರ. 

ಪಲ್ಯೆ ಉಣ್ಣಾಕ ಒಲ್ಲೆ ಆದ್ರ ಹಿಂಡಿಗೆ, ಮಸಾಲಿಖಾರಕ್ಕ ಈ ಕಾದೆಣ್ಣಿ ಹಾಕೊಂಡು ಉಣ್ತಾರ. ಕುಸುಬಿಯೆಣ್ಣಿ ಕಾದೆಣ್ಣಿ ಮಾಡ್ಕೊಂಡು ಉಂಡ್ರ ಅದರ ರುಚಿನೆ ಬ್ಯಾರೆ. ಹಿಂಗ ಇರೂ ಖಾರವನ್ನು ಮಂದ ಮಾಡಬೇಕು ಅನ್ಕೊಳ್ಳೋರು, ಬಿಸಿ ರೊಟ್ಟಿ ಚಪಾತಿಗೆ ಬೆಣ್ಣಿ ಹಾಕ್ಕೊಂಡು, ಚಟ್ನಿ ಸವರಕೊಂಡು ತಿಂದ್ರ ಆಹಹಾ..

ಹೋಳಿಗಿ ಉಂಡ ಮ್ಯಾಲೆ ಚಪಾತಿ ತಿನ್ನಲಾರದವರು ಇದನ್ನು ಬಿಸಿ ಅನ್ನ, ತುಪ್ಪ ಮತ್ತು ಚಟ್ನಿ ಕಲಸ್ಕೊಂಡು ತಿಂತಾರ. ಒಂಚೂರು ನಿಂಬೆಹಣ್ಣು ಹಿಂಡ್ಕೊಂಡ್ರಂತೂ ಸ್ವರ್ಗಕ್ಕ ಕಿಚ್ಚು ಹಚ್ಚುವ ಕಿಡಿ ನಿಮ್ಮ ನಾಲಗಿ ಮ್ಯಾಲೆ ಇರ್ತದ. ಈ ಚಟ್ನಿಯ ಸ್ವಾದ ಹೆಂಗಂದ್ರ ಅಗ್ದಿ ನಿಷ್ಠುರಗೆ ಮಾತಾಡುವಂಥದ್ದು. ತೋಪಿನ್ಹಂಗ ಸಿಡೀತದ. ಅಷ್ಟು ಖಾರಾಕಡಕ್‌. ಗಿಲೀಟಿನ ಪ್ರಶ್ನೆನೆ ಇಲ್ಲ. ಏಕ್‌ ಮಾರ್‌ ದೋ ತುಕಡಾ ಇದ್ದಂಗ. ಕರಿಚಟ್ನಿ ಮೆಣಸಿನಕಾಯಿ ಮಾತು ನಿನ್ನೂವು ಅಂತ ಬೈಕೊಂತನ ಹೊಗಳ್ತಾರ.

ಇಂಥಾದ್ದೇ ಕರಿಚಟ್ನಿ, ಕಲ್ಲನ್‌ ಚಟ್ನಿ ಆಗೂದು ಯಾವಾಗ ಅಂದ್ರ ಹುರಿಯೂಮುಂದ ಹುಣಸಿಹಣ್ಣು ಹಾಕಬೇಕು. ಅರಿಯೂಮುಂದ ಬೆಲ್ಲ ಹಾಕಬೇಕು. ಕರಿಬೇವು, ಒಗ್ಗರಣಿಗೂ ಧಾರಾಳವಾಗಿ ಹಾಕಬೇಕು. ಈ ಚಟ್ನಿ ಹೆಂಗಂದ್ರ ಇವು ಅಗ್ದಿ ಖರೇ ಹೇಳಿದ್ರೂ ಪ್ರಿಯವಾಗುವಂತೆ ಹೇಳು ಅಂತಾರಲ್ಲ ಹಂಗ. 

ಕರುಳು ಸ್ವಚ್ಛೆ ಮಾಡೂದೆ ಖರೆ ಆದರೂ ನಾಲಗಿಗೆ ಹಿತ ಆಗಿರಬೇಕು. ಏಕ್ದಮ್‌ ಚಟ್‌ಪಟಾ ಖಾರ, ಸಿಹಿ, ಹುಳಿ ಎಲ್ಲಾನೂ ತಾಕಿರಬೇಕು. ಹೊಟ್ಟಿಗೆ ಹೋದ ಮ್ಯಾಲೆ ಕರಿಚಟ್ನಿ ಮಾಡುವ ಕೆಲಸಾನೇ ಇದೂನು ಮಾಡ್ತದ. ಅಗ್ದಿ ಅರ್ಧ ಚಮಚೆ, ಒಂದು ಚಮಚೆಯಷ್ಟೇ ನೀಡ್ತಾರ ಈ ಚಟ್ನಿ. ಇಲ್ಲಾಂದ್ರ ಮರುದಿನ ಮತ್ತ ಕೈಕಾಲು ಸಹ ನೋವು ಬರ್ತಾವ… ಕರುಳು ಸ್ವಚ್ಛೆ ಆಗೋದ್ರೊಳಗ..

ಇವೆರಡು ಚಟ್ನಿಯಷ್ಟೇ ಪ್ರೀತಿ ಮತ್ತು ಒಲವನ್ನು ತೋರುವ ಇನ್ನೊಂದು ಚಟ್ನಿ, ರಂಜಕ ಮತ್ತು ಕಲ್ಯಾಣಿ. ಒಂದು ಕೆಂಪು ಬಣ್ಣದ ರಂಜಕ. ಅಗ್ದಿ ನಿಮ್ಮ ಪ್ರೀತಿಯ ಹುಡುಗಿಯ ಕೆಂದುಟಿ ಇದ್ದಂಗ ಕೆಂಪು. ಕೆಂಪು ಹಣ್ಣು ಮೆಣಸಿನಕಾಯಿಯನ್ನು ತೊಳದು, ಒರಸಿ, ನೀರಿನಂಶ ಇಲ್ದಂಗ ಮಾಡಿ, ನಿಂಬೆಹಣ್ಣಿನ ರಸ ಮತ್ತು ಹರಳುಪ್ಪು ಹಾಕಿ ಅರೀತಾರ. ಇದಕ್ಕ ಒಂಚೂರು ಜೀರಗಿ, ಮೆಂತ್ಯ ಕಾಳು ಹಂಚಿನ ಮ್ಯಾಲೆ ಬಿಸಿ ಮಾಡಿ, ಹಾಕಿರ್ತಾರ. ಕೆಂಬಣ್ಣದ ರಂಜಕ ತುಪ್ಪದ ಜೊತಿಗೆ, ಬೆಣ್ಣಿ ಜೊತಿಗೆ ತಿನ್ನುವ ಸುಖ ತಿಂದೋರಿಗೆ ಗೊತ್ತು. ಬರಿಯ ಖಾರ ಮತ್ತು ಹುಳಿಯ ಈ ರುಚಿ ಎಲ್ಲಾರಿಗೂ ಹಿಡಸೂದಿಲ್ಲ. ಆದ್ರ ಬಣ್ಣಾ ನೋಡಿದ ಮ್ಯಾಲೆ ತಿನ್ನದೇ ಇರಾಕೂ ಆಗಂಗಿಲ್ಲ. 

ಹಂಗಾಗಿಯೇ ಯಾರದರೆ ಮದಿವಿ ಬಗ್ಗೆ ಮಾತಾಡಬೇಕಾದ್ರ, ಬಣ್ಣ, ಆಕರ್ಷಣೆಗೆ ಮರುಳಾಗಿ ಮದುವಿಯಾಗಿ, ತ್ರಾಸ ಪಡ್ತಿದ್ರ, ರಂಜಕತಿಂದು ಬಯಲಿಗೆ ಹೋದಂಗ ಆಯ್ತು ಅವರ ಪರಿಸ್ಥಿತಿ ಅಂತಾರ. ನೋಡಾಕ ಚಂದ ಅಂತ ಭಾಳ ತಿಂದ್ರ ಮತ್ತ ಮರುದಿನ ಪರದಾಡೂದು ತಪ್ಪೂದಿಲ್ಲ.

ಇದೇ ರಂಜಕದ ಇನ್ನೊಂದು ಸ್ವರೂಪ ಕಲ್ಯಾಣಿ ಚಟ್ನಿ. ಇದಕ್ಕ ಬಳ್ಳೊಳ್ಳಿ, ಹುಣಸಿಹಣ್ಣು, ಬೆಲ್ಲ ಹಾಕಿ ರುಬ್ಬತಾರ. ಎರಡೂ ಚಟ್ನಿಗಳಿಗೂ ನೀರು ಮುಟ್ಟಸೂದಿಲ್ಲ. ಹುಣಸಿಹಣ್ಣು ಮತ್ತು ಬೆಲ್ಲನ ನೀರು ಬಿಡ್ತದ. ಗಟ್ಟಿ ಚಟ್ನಿ ಆಗ್ತದ. ಇದಕ್ಕೂ ನಮ್ಮ ನೈಸರ್ಗಿಕ ಪ್ರಿಸರ್ವೇಟಿವ್‌ಗಳಾದ ಮೆಂತ್ಯ ಕಾಳು ಮತ್ತು ಜೀರಗಿಯಂತೂ ಹಾಕಿರ್ತೀವಿ.

ಹಂಗಾಗಿ ಲಗೂ ಕೆಡೂದಿಲ್ಲ. ಗಟ್ಟಿ ಭರಣಿಯೊಳಗ ಮುಚ್ಚಿಟ್ರ ಇವೆರಡೂ ಹಾಳಾಗೂದಿಲ್ಲ. ಬೇಕಾದಾಗ ಹೊರಗ ತಗದು, ಅದಕ್ಕ ಒಂದಷ್ಟು ಇಂಗಿನ ಒಗ್ಗರಣಿ ಹಾಕ್ಕೊಂಡ ತಿಂದ್ರ, ಅಗ್ದಿ ಬದುಕಿನ ಎಲ್ಲ ಅನುಭವಗಳನ್ನೂ ಸವಿಯುವ ಅವಕಾಶ ನಮ್ದಾಗ್ತದ.

‍ಲೇಖಕರು ಅನಾಮಿಕಾ

December 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: