ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಶೇಖರ ಆಲೂರು ಕಾಲಂ: ಬೆಳ್ಳಿ ಮೋಡ ಸುರಿಸಿದ ವರ್ಷಧಾರೆ

ಅಂದು ಭಾನುವಾರ. ಬೇಸಗೆಯ ರಣ ರಣ ಬಿಸಿಲು. ಆಗೊಮ್ಮೆ ಈಗೊಮ್ಮೆ ಬೀಸುವ ಗಾಳಿ ಕೂಡ ಬಿಸಿ ಹಬೆಯಂತೆ ಮುಖಕ್ಕೆ ರಾಚುತ್ತಿತ್ತು. ಇಷ್ಟಾಗಿಯೂ ನಾನು ಮನೆಯಿಂದ ಹೇಗೆ ಪರಾರಿ ಆಗುವುದು ಎಂದು ಹೊಂಚು ಹಾಕುತ್ತಾ ಪಡಸಾಲೆಯ ಮೇಲೆ ನಿಂತಿದ್ದೆ. ಮನೆಯ ಮಾಲಿಕ ಎತ್ತಿನ ಕೊಂಬು ಎರೆದು ಮುಗಿಸಿ, ಬಿಳಿ ಬಟ್ಟೆಯಲ್ಲಿ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಉಜ್ಜಿ ಉಜ್ಜಿ ಪಾಲಿಶ್ ಮಾಡುತ್ತಿದ್ದರು. ನಾನು ಅದನ್ನು ನೋಡುವ ನೆಪದಲ್ಲಿ ಸ್ವಲ್ಪ ಸ್ವಲ್ಪವೇ ಮುಂದೆ ಹೋಗುತ್ತಿದ್ದೆ.

ಅದೇ ಸಮಯಕ್ಕೆ ಒಂದು ಬಿಳಿಯ ಅಂಬಾಸೆಡರ್ ಕಾರು ನಮ್ಮ ಮನೆ ಮುಂದೆ ಬಂದು ನಿಂತಿತು. ಕಾರಿನಿಂದ ಇಳಿದು ಬಂದ ಡ್ರೈವರ್ `ಸ್ಟೇಷನ್ ಮಾಸ್ಟರ್ ಮನೆ ಇದೇನಾ’ ಎನ್ನುತ್ತಾ ಮನೆ ಒಳಗೆ ಬಂದು ನಮ್ಮ ತಾಯಿಯ ಬಳಿ, “ಚಂದ್ರು, ಆಶಾ ಅಂಥ ಇಬ್ಬರು ಮಕ್ಕಳು ಇದಾರಲ್ಲ ಅವರನ್ನ ಎಡತೊರೆ ಟಾಕೀಸ್ಗೆ ಸಿನೆಮಾಕ್ಕೆ ಕರೆತರಲು ಮೇಷ್ಟ್ರು ಹೇಳಿದಾರೆ. ನಮ್ಮ ಮಾಲಿಕರ ಕಾರು ಇದು. ಅವರನ್ನ ಸಾಲಿಗ್ರಾಮಕ್ಕೆ ಬಿಟ್ಟು ಬರಲು ಹೋಗಿದ್ದೆ” ಎಂದ. ನಾವು ಸಂಭ್ರಮದಿಂದ, ನಮ್ಮ ತಾಯಿ ಆಶ್ಚರ್ಯದಿಂದ ಆತನನ್ನು ನೋಡುತ್ತಿರುವಾಗ ಡ್ರೈವರ್, “ಸಂಜೆ ಸಿನೆಮಾ ಆದ ಮೇಲೆ ರೈಲ್ವೆ ಸ್ಟೇಷನ್ಗೆ ಬಿಡ್ತೀನಿ. ಮಕ್ಕಳು ಮಾಸ್ಟರ್ ಜೊತೇಲೇ ವಾಪಸ್ ಬರ್ತಾರೆ…” ಎಂದೂ ಸೇರಿಸಿದ.

ಅಷ್ಟು ಹೇಳಿದ ಮೇಲೆ ನಮ್ಮ ತಾಯಿ ನಮ್ಮಿಬ್ಬರಿಗೂ ರೆಡಿಯಾಗಲು ಸೂಚಿಸಿ ಡ್ರೈವರ್ಗೆ ಶರಬತ್ತು ಮಾಡಿ ತಂದು ಕೊಟ್ಟರು. ಹಿಂದಿನ ವಾರ ಯಾವಾಗಲೋ ತಂದೆಯವರು, “ಎಡತೊರೆ ಟಾಕೀಸ್ಗೆ `ಕಾಡ ಸಿದ್ಧಮ್ಮನ ಕಥೆ’ ಬಂದಿದೆಯಂತೆ. ಆ ಟಾಕಿಸಿನ ಓನರ್ ನಿಮ್ಮ ಮಕ್ಕಳನ್ನು ಕರ್ಕೊಂಬನ್ನಿ ಅಂತಿದ್ದರು. ನನಗೆ ಟೈಂ ಆಗಲ್ಲ. ನೀನು ಆಶಾ ಹೋಗುವಿರಂತೆ” ಅಂದಿದ್ದರು. ಅದೊಂದು ಲೋಕಾಭಿರಾಮದ ಮಾತು ಎಂಬಂತೆ ನಾವ್ಯಾರೂ ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಈಗ ನೋಡಿದರೆ ಕಾರಿನಲ್ಲಿ ಹೋಗುವ ಯೋಗ. ಆ ಕಾಲಕ್ಕೆ ಕಾರು ಎಂದರೆ ಮಹಾನ್ ಲಕ್ಷುರಿಯೇ ಸರಿ. ಅದೂ ಕಾರಿನಲ್ಲಿ ಇಬ್ಬರೇ ಕುಳಿತು ಹೋಗುವುದೆಂದರೆ…

ಕಾಲ ಒಳ್ಳೆಯದಾಗಿದ್ದರಿಂದ ಮನೆಯಲ್ಲಿ ಯಾರೂ ಅನುಮಾನ ಕೂಡ ಪಡಲಿಲ್ಲ. ನಾನು ಅಕ್ಕ ಆಶಾ `ಕಾಡಸಿದ್ಧಮ್ಮನ ಕಥೆ’ ಅಥರ್ಾತ್ `ಭಾಗ್ಯದೇವತೆ’ ಎಂಬ ಸಿನೆಮಾ ನೋಡಲು ಹೊರಟೆವು.

ಗೆಳೆಯ ಚಾಮುಂಡಿ ಬಿಡುವು ಸಿಕ್ಕಿದಾಗಲೆಲ್ಲ ತಾನು ಮೈಸೂರಿನಲ್ಲಿ ನೋಡಿದ ಹೊಸ ಚಿತ್ರಗಳ ಬಗ್ಗೆ ಅದರಲ್ಲಿಯೂ ತಮಿಳಿನ ಎಂ.ಜಿ.ಆರ್, ಶಿವಾಜಿ ಗಣೇಶನ್; ತೆಲುಗಿನ ಎನ್.ಟಿ.ಆರ್., ನಾಗೇಶ್ವರ ರಾವ್ ಮುಂತಾದ ನಾವು ಕೇಳದ ಹೀರೋಗಳ ಚಿತ್ರಗಳ ಕತೆಯನ್ನು ಚಿತ್ರವತ್ತಾಗಿ ಹೇಳುತ್ತಿದ್ದ. ಅದಕ್ಕಿಂತ ಮಿಗಿಲಾಗಿ ಅಲ್ಲಿನ ಥಿಯೇಟರುಗಳ ಭವ್ಯತೆಯನ್ನು ವಣರ್ಿಸುತ್ತಿದ್ದ. “ಹಂಗಾದ್ರೆ ಅಲ್ಲಿ ನೆಲ ಇಲ್ಲವೇ ಇಲ್ಲ” ಎಂದು ಯಾರಾದರೊಬ್ಬರು ಕೇಳುವುದೂ ಸಾಮಾನ್ಯವಾಗಿತ್ತು. “ನೆಲದ ಕ್ಲಾಸು ಇರುತ್ತೆ, ಕಮ್ಮಿ ದುಡ್ಡು. ಆದರೆ ಅದರ ಮೇಲೂ ಸೀಟುಗಳು ಇರುತ್ತೆ… ಅದಕ್ಕೆ ಗಾಂಧಿ ಕ್ಲಾಸ್ ಎಂದು ಕರೆಯುತ್ತಾರೆ…” ಮುಂತಾಗಿ ಚಾಮುಂಡಿ ವಿವರಿಸುತ್ತಿದ್ದ. ಅಂದರೆ ಬಾಲ್ಕನಿ ಇರುವಂತೆ `ಗಾಂಧಿ ಕ್ಲಾಸ್’ ಎಂಬುದು ಕೂಡ ಒಂದು ಅಧಿಕೃತ ವಿಭಾಗ ಎನ್ನುವಂತೆ! ಅಲ್ಲಿಯವರೆಗೆ ನಾನು ನೋಡಿದ ಬಹುಪಾಲು ಸಿನೆಮಾಗಳು ಟೆಂಟ್ಗಳಲ್ಲಿ ವೀಕ್ಷಿಸಿದವೇ ಆದರೂ ನಾಲ್ಕಾರು ಸಿನೆಮಾಗಳನ್ನು ಟಾಕಿಸ್ಗಳಲ್ಲಿ ನೋಡಿದ ಅನುಭವ ನನಗೂ ಇತ್ತು.

ನಾವು ಕೊಡಗನೂರಿನಲ್ಲಿದ್ದಾಗ ನಮ್ಮ ಸರೋಜಕ್ಕ-ಭಾವನವರೊಂದಿಗೆ ದಾವಣಗೆರೆಯಲ್ಲಿ ನೋಡಿದ `ಬ್ರಹ್ಮಚಾರಿ’ ಎಂಬ ಹಿಂದಿ ಸಿನೆಮಾದ ನೆನಪು ನನ್ನ ಮನದಲ್ಲಿ ಅಚ್ಚೊತ್ತಿದಂತಿದೆ. ಆದರೆ ಅದು ಸಿನೆಮಾದ ಕಾರಣಕ್ಕಾಗಿ ಅಲ್ಲ. ಥಿಯೇಟರ್ನ ಕಾರಣಕ್ಕಾಗಿ. ಹೊಚ್ಚ ಹೊಸ ಥಿಯೇಟರ್. ಚಿತ್ರ ಮಂದಿರದ ಭವ್ಯವಾದ ಆಸನಗಳನ್ನೂ ಮೀರಿ ನಮ್ಮ ಮನಸೆಳೆದದ್ದು ಅದರ ವಿಶಾಲವಾದ ಪರದೆ, ಅಂದರೆ ಬೆಳ್ಳಿ ಪರದೆಯಲ್ಲ, ಅದನ್ನು ಆವರಿಸಿಕೊಂಡಿದ್ದ ಚಿನ್ನದ ಬಣ್ಣದ, ಹಲವು ನೆರಿಗೆಗಳ (ವಿಕ್ಟೋರಿಯಾ ರಾಣಿಯ ಗೌನಿನಂತೆ!) ಫ್ರಿಲ್ಗಳ ಪರದೆ. ಚಿತ್ರ ಆರಂಭವಾಗುವ ಮುನ್ನ ಸ್ವಪ್ನ ಲೋಕವನ್ನು ಅನಾವರಣಗೊಳಿಸುವಂತೆ ಆ ಪರದೆ ನಿಧಾನವಾಗಿ ಇಂಚಿಚೇ ಮೇಲಕ್ಕೆ ಎತ್ತಿಕೊಳ್ಳುತ್ತಿದ್ದ ಬಗೆ ಒಂದು ದಿವ್ಯವಾದ ಅನುಭವವನ್ನು ನೀಡಿತ್ತು. ಇದಕ್ಕಿಂತಲೂ ಮಿಗಿಲಾದುದು ಆ ಹೊನ್ನ ಪರದೆ ನಿಧಾನವಾಗಿ ಇಳಿಯುತ್ತಿದ್ದ ಪರಿ. ಹಿನ್ನೆಲೆಯಲ್ಲಿ ರಾಷ್ಟ್ರಗೀತೆ ಬರುತ್ತಿದ್ದರೂ, ಯಾಂತ್ರಿಕವಾಗಿ ನಿಂತಿದ್ದರೂ, ಮನಸ್ಸು ಇಳಿಯುತ್ತಿರುವ ಪರದೆಯಲ್ಲಿ ನೆಟ್ಟಿರುತ್ತಿತ್ತು. ಒಂದು ಕನಸಿನ ಲೋಕಕ್ಕೆ ತೆರೆ ಬೀಳುತ್ತಿದೆಯೇನೋ ಎಂಬಂತೆ ಅದರೆಲ್ಲ ನೆರಿಗೆಗಳೊಂದಿಗೆ ಇಳಿಯುತ್ತಾ ತಾನೇ ಅನಾವರಣಗೊಳಿಸಿದ ಬೆಳ್ಳಿ ಪರದೆಯನ್ನು ಮತ್ತೆ ಆವರಿಸಿಕೊಂಡು ಬಿಡುತ್ತಿತ್ತು.

ಎಡತೊರೆಯ ಚಿತ್ರ ಮಂದಿರದಲ್ಲಿ ಇಂಥ ನೂರು ನೆರಿಗೆಯ, ಫ್ರಿಲ್ಗಳ ಪರದೆ ಇರುವುದಿಲ್ಲ ಎಂದು ನನಗೆ ತಿಳಿದಿತ್ತು. ಕಾರಿನಲ್ಲಿ ಕುಳಿತೇ ಕಣ್ಣ ಮುಂದೆ ಮೇಲೆ ಏರುವ, ಕೆಳಗೆ ಇಳಿವ ಪರದೆಯ ದೃಶ್ಯ ಮೂಡಿದ್ದಕ್ಕೆ ಸಂತಸವಾಗಿತ್ತು. ಅದನ್ನು ನೋಡಿರದಿದ್ದ ಆಶಾಳಿಗೆ ಅದರ ಚಂದವನ್ನು ನೂರೊಂದನೇ ಬಾರಿ ವಣರ್ಿಸಿದೆ. ಕೆ.ಆರ್.ನಗರದಲ್ಲಿ ಚಿತ್ರಮಂದಿರದ ಮುಂದೆ ಇಳಿದಾಗ ನಿರಾಶೆಯಾಯ್ತು. ಅಲ್ಲಿ ಕಾಡಸಿದ್ಧಮ್ಮನ ಕಥೆ ಅಥವಾ ಭಾಗ್ಯದೇವತೆ ಇರಲಿಲ್ಲ. ಅದರ ಬದಲು ಯಾವುದೋ `ಬೆಳ್ಳಿಮೋಡ’ ಎಂಬ ಸಿನೆಮಾ. ಕಲ್ಯಾಣ್ಕುಮಾರ್, ಕಲ್ಪನಾ. ಚಿತ್ರದ ಪೋಸ್ಟರುಗಳನ್ನು ನೋಡುತ್ತಿದ್ದಂತೆಯೇ ಈ ಚಿತ್ರದಲ್ಲಿ ಖಂಡಿತಾ ಫೈಟಿಂಗ್ ಇರಲಾರದು ಅನ್ನಿಸಿ ಮತ್ತಷ್ಟು ನಿರಾಶೆಯಾಯ್ತು.

“ಪುಟ್ಟಣ್ಣ ಅಂತ ಹೊಸ ಡೈರೆಕ್ಟರ್ ಮಾಡಿರೋ ಸಿನೆಮಾ. ಕಲ್ಪನಾ ತುಂಬ ಚೆನ್ನಾಗಿ ಮಾಡಿದಾಳೆ. ಕತೆ ಒಂಥರಾ ಹೊಸದು, ನಿಮಗೆ ಬೇಜಾರಾಗೋಲ್ಲ…” ಬಹುಶಃ ನಮ್ಮ ಮುಖದ ಮೇಲೆ ಮೂಡಿದ್ದ ನಿರಾಶೆಯ ಭಾವವನ್ನು ಗ್ರಹಿಸಿದಂತೆ ಕಂಡ ಥಿಯೇಟರ್ನ ಮೆನೇಜರ್ ಮುಂದೆ ಕೂರಿಸಿಕೊಂಡು ಕಾಫಿ ಕೊಡಿಸಿ ಹೇಳುತ್ತಿದ್ದರು.

`ಮೂಡಣ ಮನೆಯಾ ಮುತ್ತಿನ ನೀರಿನಾ ಎರಕಾವ ಹೊಯ್ದಾ’ ಹಾಡನ್ನು ಕೇಳುತ್ತಿದ್ದಂತೆಯೇ ನನ್ನ ಪುಟ್ಟ ಹೃದಯ ಕಂಪಿಸಿತು. ಆಗಲೇ ಪ್ರಕೃತಿಪ್ರಿಯನಾಗಿದ್ದ ನನ್ನನ್ನು ಈ ಹಾಡು ಇಡಿಯಾಗಿ ಆವರಿಸಿಕೊಂಡುಬಿಟ್ಟಿತು. ಸುಂದರವಾದ ಬೆಳಗಿನಂತೆ, ಬೆರಗಿನಂತೆ. `ಗಿಡಗಂಟೀಯ ಕೊರಳೊಳಗಿಂದ ಹಕ್ಕಿಗಳಾ ಹಾಡು ಗಂಧರ್ವರ ಸೀಮೆಯಾಯಿತು ಕಾಡಿನಾ ನಾಡು.’ ನಾವೊಂದು ಹೊಸ ಬಗೆಯ ಚಿತ್ರ ನೋಡುತ್ತಿದ್ದೀವಿ ಎಂಬ ಅನುಭವ ನಮ್ಮಿಬ್ಬರಿಗೂ ಒಂದೇ ಸಲ ಆದಂತೆ, ಹಾಡು ಮುಗಿಯುತ್ತಿದ್ದಂತೆಯೇ ನಾನು ಆಶಾ ಪರಸ್ಪರ ಮುಖ ನೋಡಿಕೊಂಡೆವು.

ಮುಂದೆ ಬೆಳ್ಳಿ ಮೋಡದ ಅಂಚಿನಿಂದ ಮೂಡಿ ಬಂದ ಆಶಾಕಿರಣ, ಇದೇ ನನ್ನ ಉತ್ತರ ಕೊಡುವೆ ಬಾರೇ ಹತ್ತಿರ… ಮುಂತಾದ ಗೀತೆಗಳು ಮುದ ನೀಡಿದವು. ಕಲ್ಪನಾ ತನ್ನ ತಮ್ಮನೊಂದಿಗೆ ಆಡುತ್ತಾ `ಊರಿಂದ ಭಾವ ಬರ್ತಾರೆ, ಏರೋಪ್ಲೇನು ತರ್ತಾರೆ, ಓಡೋಡಿ ಬಂದು ಹತ್ತಿರ ನಿಂದು ಕೆನ್ನೆಗೆ ಮುದ್ದು ಕೊಡ್ತಾರೆ’ ಎಂದಾಗ ಬಾಲಕೃಷ್ಣ ಯಾರಿಗಮ್ಮಣ್ಣಿ ಎನ್ನುವುದು… ಒಟ್ಟಾರೆ ಚಿತ್ರ ಮೂಡಿಸಿದ ಮಲೆನಾಡಿನ ವಾತಾವರಣ, ನಿರಾಭರಣವಾದ ಆಡು ಭಾಷೆ, ಇಂಪಾದ ಹಾಡುಗಳು… ಆ ಬಾಲ್ಯ ಕಾಲದ ಮನಸ್ಸುಗಳನ್ನು ಸೂರೆಗೊಂಡವು.

ಕಡೆಯಲ್ಲಿ ಒಡೆಯಿತು ಒಲವಿನ ಕನ್ನಡಿ ಹಾಡಿನ ದೃಶ್ಯದಲ್ಲಿ, ನಂತರ ಅಂತಿಮ ದೃಶ್ಯದಲ್ಲಿ ಕಲ್ಪನಾ ಕೊಡಲಿಯಿಂದ ಮರದ ಮೇಲೆ ಪ್ರೇಮದ ಸಂಕೇತವಾಗಿ ಮೂಡಿಸಿದ್ದ ಹೆಸರುಗಳನ್ನು ಕೊಚ್ಚಿ ಹಾಕುವಾಗ ನಾವಿಬ್ಬರೂ ಅವಳಿ ಮಕ್ಕಳಂತೆ ಒಂದೇ ಬಾರಿ ಸೊರಕ್ಕೆಂದೆವು! ಕತೆಯ ವಿವರವೆಲ್ಲ ಇಲ್ಲಿ ಅನಗತ್ಯ. ಅಂದು ನಮ್ಮಿಬ್ಬರ ಕಣ್ಣಿನಲ್ಲಿ `ಬೆಳ್ಳಿ ಮೋಡ’ ವರ್ಷಧಾರೆಯನ್ನು ಹರಿಸಿತು! ಕನ್ನಡ ಚಿತ್ರರಂಗದ ಮೇಲೆ ಈ `ಬೆಳ್ಳಿ ಮೋಡ’ ಸುರಿಸಿದ ವರ್ಷ ಧಾರೆ, ಅದು ಅಮೃತಧಾರೆ. ಕನ್ನಡ ಚಿತ್ರರಂಗಕ್ಕೆ ಒಂದು ಹೊಸ ದಿಕ್ಕನ್ನು, ನವನವೀನ ಸಾಧ್ಯತೆಗಳ ಅನಂತ ಲೋಕವನ್ನು ಪುಟ್ಟಣ್ಣ ಈ ಚಿತ್ರದ ಮೂಲಕ ತೆರೆದಿಟ್ಟರು. ಕಪ್ಪು ಬಿಳುಪಿನ ಈ ದೃಶ್ಯ ಕಾವ್ಯ ಕನ್ನಡ ಚಿತ್ರರಂಗದಲ್ಲಿ ಖಿಡಿಜಟಿಜ ಖಜಣಣಜಡಿ ಆಯ್ತು, ಒಂದು ಮೈಲಿಗಲ್ಲಾಯ್ತು… ಎನ್ನುವುದು ಈಗ ಇತಿಹಾಸ.

ಈ ಚಿತ್ರದ ಬಗ್ಗೆ ಚಚರ್ಿಸುವುದು ನನ್ನ ಉದ್ದೇಶವಲ್ಲ. `ಬೆಳ್ಳಿ ಮೋಡ’ ಅಂದು ನನ್ನೊಳಗೆ ಇಳಿದ ಪರಿ ವಿಶಿಷ್ಟವಾದುದು. ಸಾಧಾರಣ ಮತ್ತು ಅಸಾಧಾರಣ ಸಿನೆಮಾಗಳ ನಡುವೆ ಗೆರೆ ಹಾಕುವುದನ್ನು `ಬೆಳ್ಳಿ ಮೋಡ’ ನನ್ನ ಬಾಲ್ಯಕಾಲದ ಮನಸ್ಸಿಗೆ ಕಲಿಸಿತು. ಕಾಡಸಿದ್ಧಮ್ಮನ ಕಥೆ ನೋಡಲು ಹೋದ ನಮಗೆ ಆಧುನಿಕ ಮನೋಭಾವದ ಯುವತಿಯೊಬ್ಬಳ ದರ್ಶನವಾಯ್ತು. ಆದರೆ ಅವಳೂ ಕಾಡಸಿದ್ಧಮ್ಮನಂತೆ ನೋವು, ಯಾತನೆ ಅನುಭವಿಸಿದಳು. ಆ ಪುರಾಣ ಕಥೆಯಲ್ಲಿ ಅವಳಿಗೆ ಕಡೆಗೂ ಕಷ್ಟ-ಕಾರ್ಪಣ್ಯ, ಸಂಕಟದಿಂದ ಮುಕ್ತಿ ದೊರೆಯುತ್ತದೆ. ಆದರೆ ಈ ಆಧುನಿಕ ಯುವತಿ ಅದರೊಂದಿಗೇ ಬದುಕುವ ಅನಿವಾರ್ಯಕ್ಕೆ ಸಿಲುಕುತ್ತಾಳೆ.

ಸಾಧಾರಣ ಮತ್ತು ಅಸಾಧಾರಣ ಚಿತ್ರದ ನಡುವಿನ ವ್ಯತ್ಯಾಸವನ್ನು ಚಂದ್ರು ಮತ್ತು ಆಶಾ ಎಂಬ ಇಬ್ಬರು ಮಕ್ಕಳು ಅರಿತುಕೊಂಡಿದ್ದು ಹೀಗೆ.

 

 

 

‍ಲೇಖಕರು G

26 July, 2011

1 Comment

  1. ushakirana

    ನೆನಪುಗಳೆ ಸು೦ದರ …………….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading