ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರಶೇಖರ ಆಲೂರು ಕಾಲಂ: ಗೋಳಗುಮ್ಮಟದಲ್ಲಿ ಕಾಡಿದ ಈಜಿಪ್ಟ್ ನ ಪಿರಮಿಡ್

ಅಲ್ಲಿ ನಿಂತಿದ್ದ ನೂರಾರು ಜನರು ಕೂಗುತ್ತಿದ್ದರು , ಚಪ್ಪಾಳೆ ತಟ್ಟುತ್ತಿದ್ದರು , ಸಿಳ್ಳೆ ಹೊಡೆಯುತ್ತಿದ್ದರು, ಪ್ರಿಯರ ಹೆಸರುಗಳನ್ನೂ ಪಿಸುಗುಡುತ್ತಿದ್ದರು….. ಅವರವರ ಭಾವಕ್ಕೆ. ಗೋಳ ಗುಮ್ಮಟದ ಗ್ಯಾಲರಿಯಲ್ಲಿ ನಿಂತು ಕೆಳ ನೋಡಿದಾಗ , ಅಲ್ಲಿ ಆಳದಲ್ಲಿ ನಿರ್ಮಿಸಿರುವ ಸಮಾಧಿಗಳನ್ನು ಕಂಡಾಗ ತಕ್ಷಣ ನೆನಪಿಗೆ ಬಂದದ್ದು ಈಜಿಪ್ಟ್ ನ ಜಗದ್ವಿಖ್ಯಾತ ಗೀಜಾ ಪಿರಮಿಡ್ ನ ಗ್ರ್ಯಾಂಡ್ ಗ್ಯಾಲರಿ . ಯಾಕೆ? ಅದಕ್ಕೆ ಮುನ್ನ:

ಮೊನ್ನೆ ಸೋಮವಾರ ನಾನು ಬಿಜಾಪುರದಲ್ಲಿದ್ದೆ . ಅಲ್ಲಿಂದ ಸುಮಾರು ಇಪ್ಪತ್ತು-ಇಪ್ಪತ್ತೈದು ಕಿಲೋ ಮೀಟರ್ ದೂರದಲ್ಲಿರುವ ಲಂಬಾಣಿ ತಾಂಡಾದಲ್ಲಿ ನಡೆದ ನನ್ನ ಕಿರಿಯ ಸಹೋದ್ಯೋಗಿ ಮಿತ್ರ ಗಂಗಾಧರ ಲಮಾಣಿಯವರ ಮದುವೆಯಲ್ಲಿ ಪಾಲ್ಗೊಳ್ಳಲು . ನನ್ನೊಂದಿಗೆ ಮತ್ತೊಬ್ಬ ಕಿರಿಯ ಗೆಳೆಯ ನದಾಫ್ ಇದ್ದರು. ಅವರೂ ಬಿಜಾಪುರದ ಬಳಿಯ ಹಳ್ಳಿಯೊಂದರಿಂದ ಬಂದವರು. ನಾವು ಪ್ರಯಾಣ ಮಾಡಲಿರುವ ಬಸ್ಸು ಸ್ಲೀಪರ್ ಕೋಚ್ ಎಂದು ನದಾಫ್ ತಿಳಿಸಿದಾಗ ನನಗೆ ಗಾಬರಿಯಾಗಿತ್ತು . ಬಸ್ ನಲ್ಲಿ ಕುಳಿತು ಪ್ರಯಾಣ ಮಾಡುವುದೇ ಚೆಂದ ಮಲಗುವುದು ಎಂದರೆ ಹಿಂಸೆ .

ಆದರೇನು ಆಗಲೇ ರಿಸರ್ವ್ ಮಾಡಿಸಿ ಆಗಿತ್ತು. ಸ್ಲೀಪರ್ ಕೋಚ್ ಬಗ್ಗೆ ಕೇಳಿದ್ದೆನಾದರು ಅದರ ಬಗ್ಗೆ ಒಂದು ರೀತಿಯ ಅಲರ್ಜಿ . ಅದರಲ್ಲಿ ಪ್ರಯಾಣ ಮಾಡಲು ಮನಸ್ಸು ಹಿಂಜರಿಯುತ್ತಿತ್ತು. ಮನಸ್ಸು ಅದೇಕೆ ಅಷ್ಟು ಸುಲಭವಾಗಿ ಬದಲಾವಣೆಗೆ , ಪರಿವರ್ತನೆಗೆ ಹೊಂದಿಕೊಳ್ಳುವುದಿಲ್ಲ . ನಾನು ಅಮೆರಿಕಗೆ ಹೋಗಲು ವಿಮಾನ ಹತ್ತುವರೆಗೂ western commode ಬಳಸಲು ಅಂತರ್ಯದಲ್ಲಿಯೇ ಒಂದು ಬಗೆಯ ವಿರೋಧ . ಆಧುನಿಕ ಹೊಟೇಲುಗಳಲ್ಲಿ ತಂಗುವಾಗ indian toilet ಇರುವ ಕೊಠಡಿ ಕೇಳುತ್ತಿದ್ದೆ,(ಈಗ ಅದಕ್ಕೆ ವಿರುದ್ಧ) ಯಾಕೆ ಹೀಗೆ ನಮ್ಮನ್ನ ಪ್ರಯೋಗಶೀಲತೆಗೆ ಒಡ್ಡಿಕೊಳ್ಳಲು ನಾವು ಹಿಂಜರಿಯುತ್ತೇವೆ , ಇದು ತಪ್ಪಲ್ಲವೇ . ಅನಿವಾರ್ಯವಾದಾಗ ಹೊಂದಿಕೊಳ್ಳುತ್ತೇವೆ ಎಂಬುದು ಬೇರೆಯ ಸಂಗತಿ (ಬಿಜಾಪುರದಿಂದ ಅಂದೇ ರಾತ್ರಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ‘ಕರೋನ’ ಎಂಬ ಸ್ಲೀಪರ್ ಕೋಚ್ ನಲ್ಲಿ ಬಂದಾಗ ಅರೆ not bad ಟ್ರೈನಿಗಿಂತ ಸ್ವಚ್ಚವಾಗಿದೆ ಅನ್ನಿಸಿತ್ತು ) ಭಾನುವಾರ ರಾತ್ರಿ ಎಂಟಕ್ಕೆ ಹೊರಟವರು ಬಿಜಾಪುರ ತಲಪುವ ವೇಳೆಗೆ ಬೆಳಗ್ಗೆ ಎಂಟು ದಾಟಿತ್ತು . ಅಲ್ಲಿ ನಮ್ಮೊಂದಿಗೆ ಸೇರಿಕೊಂಡ ಲಮಾಣಿಯ ಮಿತ್ರರು ಸ್ವಲ್ಪವೂ ಸಮಯ ವ್ಯರ್ಥ ಮಾಡದಂತೆ ನನಗೆ ಬಿಜಾಪುರ ದರ್ಶನ ಮಾಡಿಸಲು ನಿರ್ಧರಿಸಿದ್ದರು. ತಾಂಡ್ಯದಲ್ಲಿ ಮದುವೆ ಕಾರ್ಯಕ್ರಮ ನಡೆಯುವುದು ಸ್ವಲ್ಪ ತಡವಾಗುತ್ತದೆ ಎಂದು ಹೇಳಿ ಅಲ್ಲಿಗೇ ಹೋಗುವ ಮುನ್ನ ಬಾರಾ ಕಮಾನು, ಗೋಲ್ ಗುಂಬಜ್ ಮತ್ತು ಹೊಸದಾಗಿ ನಿರ್ಮಿಸಲಾದ ಶಿವನ ಪ್ರತಿಮೆಯನ್ನ ನೋಡಿಕೊಂಡು ಹೋಗುವ ಕಾರ್ಯಕ್ರಮ ರೂಪುಗೊಂಡಿತು . ಮಧ್ಯ ಕಾಲೀನ ಮುಸ್ಲಿಂ ರಾಜಮನೆತನಗಳಲ್ಲಿ ಸಿಂಹಾಸನಕ್ಕಾಗಿ ಪಿತೃ ಹತ್ಯಾ ಮತ್ತು ಪುತ್ರ ಹತ್ಯೆ ಅತ್ಯಂತ ಸಹಜ ಕ್ರಿಯೆಯಾಗಿತ್ತು .ಬಾರಾ ಕಮಾನು ಅದರೆಲ್ಲ ಸೌಂದರ್ಯ , ಅಪೂರ್ಣತೆಯೊಂದಿಗೆ ಇಂಥದೊಂದು ಪುತ್ರ ಹತ್ಯೆಯನ್ನ ನೆನಪಿಸುತ್ತದೆ .

ಅಲ್ಲಿಂದ ಗೋಳ ಗುಮ್ಮಟ ನೋಡಲು ಹೋಗಿ ಅತ್ಯಂತ ಕಡಿದಾದ ಮೆಟ್ಟಿಲುಗಳನ್ನ ಹತ್ತುತ್ತಾ ಹೋಗಿ ಮೇಲೆ ನಿಂತಾಗಲೇ ಈಜಿಪ್ಟ್ ನ Grand Gallery ನೆನಪಾಗಿದ್ದು.ಆದರೆ ಅಲ್ಲಿ ಇಲ್ಲಿನಂತೆ ನೈಸರ್ಗಿಕವಾದ ಗಾಳಿ ಬೆಳಕು ಇರಲಿಲ್ಲ . ಪಿರಮಿಡ್ ಒಳಗೆ ಹೋದ ಮೇಲು ಮತ್ತೆ ಹತ್ತಾರು ಟನ್ ತೂಗುವ ಗ್ರಾನೈಟ್ ಶಿಲೆಗಳಿಂದ ಕಟ್ಟಿದ ಗೋಡೆಗಳೇ ಕಾಣುತ್ತವೆ . ನೂರಾರು ಮೆಟ್ಟಿಲುಗಳನ್ನು ಹತ್ತಿ ಹೋಗಿ , ಕತ್ತಲೆಗೆ ಹೊಂದಿಕೊಂಡ ಮೇಲೆ ತಲುಪಿದ ಪುಟ್ಟ ಕೋಣೆಯೊಂದರಲ್ಲಿ ಕೆಂಪು ಗ್ರಾನೈಟ್ ನಿಂದ ನಿರ್ಮಿಸಿದ ತೊಟ್ಟಿ ಕಾಣುತ್ತದೆ. ಅದು ರಾಜನ ದೇಹವನ್ನು ಅಥವಾ ಮಮ್ಮಿಯನ್ನು ಇಡಲು ಬಳಸಲಾಗುತ್ತಿದ್ದ ಗ್ರಾನೈಟ್ ಪೆಟ್ಟಿಗೆ .

ಇಂಥ ಸಮಾಧಿಗಳನ್ನ , ಪಿರಮಿಡ್ ಗಳನ್ನ , ರಾಜ ರಾಣಿಯರನ್ನ ದೇವಸ್ಥಾನಗಳನ್ನ ಸಂಪೂರ್ಣವಾಗಿ ನಿರಾಕರಿಸಿ, ಎಲ್ಲ ಬಗೆಯ ಸ್ಥಾವರವನ್ನ ವಿರೋಧಿಸಿ ಜನ್ಮ ತಾಳಿದ್ದೇ ಇಸ್ಲಾಂ. ಸುಮಾರು ಐದು ಸಾವಿರ ವರ್ಷ ಕಾಲ ಒಂದು ಭವ್ಯ ನಾಗರೀಕತೆಯನ್ನ ಪೋಷಿಸಿದ , ವಿಶ್ವದ ಮೂರು ಪ್ರಮುಖ ಧರ್ಮಗಳಾದ ಜುದಾಯಿಸಂ, ಕ್ರೈಸ್ತ ಹಾಗೂ ಇಸ್ಲಾಂ ಧರ್ಮಕ್ಕೆ ತನ್ನದೇ ಆದ ರೀತಿಯಲ್ಲಿ ಸ್ಫೂರ್ತಿ ಹಾಗೂ ಹಲವು ಆಚರಣೆಗಳನ್ನ ನಾಡಿನ ಈಜಿಪ್ತಿಯನ್ ಧರ್ಮ ಮತ್ತು ಭಾಷೆಯನ್ನ ಸಂಪೂರ್ಣವಾಗಿ ಮಾಯಾ ಮಾಡಿದ ಇಸ್ಲಾಂ ಅಲ್ಲಿನ ಜನತೆಗೆ ಅರೇಬಿಕ್ ಭಾಷೆಯನ್ನೂ ನೀಡಿತು. ಇದನ್ನು ಪ್ರಸ್ಥಾಪಿಸಲು ಮುಖ್ಯ ಕಾರಣ ಯಾವ ಮುಸ್ಲಿಂ ರಾಜರು ಎಲ್ಲ ಬಗೆಯ ಸ್ಥಾವರಗಳನ್ನು ನಿರ್ನಾಮ ಮಾಡಲು ಯತ್ನಿಸಿದರೋ ಅವರೇ ಯಾಕೆ ಇಂಥ ಭವ್ಯ ಸಮಾಧಿ ಗಳನ್ನು ಸೃಷ್ಟಿಸಲು ಹೊರಟರು? After Life ಮರಣಾ ನಂತರ ಏನು ಎಂಬುದು ವೈದಿಕರನ್ನ , ಕ್ರೈಸ್ತರನ್ನ ಕಾಡಿದಂತೆ ಮಹಮ್ಮದೀಯ ದೊರೆಗಳನ್ನು ಕಾಡಿತೇ? ಇಲ್ಲದಿದ್ದರೆ ಭವ್ಯವಾದ ಸ್ಮಾರಕಗಳನ್ನ ನಿರ್ಮಿಸಲು ಸಮಾಧಿಯೇ ಕಾರಣವಾಗಬೇಕಿರಲಿಲ್ಲ, ಅಲ್ಲವೇ?.

ಈ ವಿಷಯ ನನಗೆ ಅಷ್ಟಾಗಿ ತಿಳಿಯದು. ಆದರೆ ಫರೋಗಳ ಸಂಸ್ಕೃತಿಯನ್ನ ಆಚರಣೆಯನ್ನ ಇಸ್ಲಾಂ ವಿರೋಧಿಸಿಯೇ ಅಂಥ ಧರ್ಮದ ಪ್ರಚಾರಕ್ಕೆ ನಿಂತ ದೊರೆಗಳು ಈಜಿಪ್ಟ್ ನ ಫರೊಗಳಂತೆ ಭವ್ಯ ಸಮಾಧಿಗಳತ್ತ ಯಾಕೆ ಮುಖ ಮಾಡಿದರು. ಗೋಳ ಗುಮ್ಮಟದಲ್ಲಿ ನಿಂತಾಗ , ಅಲ್ಲಿ ಕೆಳಗೆ ಕಂಡ ಸಮಾಧಿಗಳು , ಪಿರಮಿಡ್ ನ ಮೇಲ್ಭಾಗದಲ್ಲಿ ಕಂಡ ಸಮಾಧಿಗಳನ್ನ ಯಾಕೆ ನೆನಪಿಸಿದವೋ ತಿಳಿಯದು! ಅಥವಾ ಈ ಸಮಾಧಿ ಅಥವಾ ಪಿರಮಿಡ್ ಎಂಬುದು ಕೂಡಾ ಪ್ರೀತಿ ಅಥವಾ ಧಾರ್ಮಿಕ ಕಾರಣಕ್ಕೆ ಬದಲಾಗಿ ತಮ್ಮ ಕತೃತ್ವ ಶಕ್ತಿಯನ್ನು ಮೆರೆಯಲು,ತಮ್ಮ ಕೀರ್ತಿ , ಘನತೆಯನ್ನು ವಿಸ್ತರಿಸಿಕೊಳ್ಳಲು ರಾಜಮಹಾರಾಜರು ಕಂಡುಕೊಂಡ ಮಾರ್ಗ ಅಥವಾ ನೆಪ ಇರಬಹುದೇನೋ .

ಇದೆ ಗುಂಗಿನಲ್ಲಿ ಅವಸರವಸರವಾಗಿ ಮೆಟ್ಟಿಲುಗಳನ್ನ ಇಳಿಯುವಾಗ ಕ್ಷಣ ಮಾತ್ರದಲ್ಲಿ ಎಲ್ಲವನ್ನೂ ಕಂಡೆನೆಂಬ, ಅರಿತು ಬಿಟ್ಟೆನೆಂಬ ಪ್ರವಾಸಿ ಮನೋಭಾವ ಕಂಡು ನಗುಬಂತು .

ಲಂಬಾಣಿ ಹೆಣ್ಣು ಮಕ್ಕಳ ಉಡುಪಿನ ವರ್ಣ ವೈಭವ ಹಾಗೂ ಮುಸ್ಲಿಮರ ಕೆತ್ತನೆಯ ಪಿಂಗಾಣಿ ಬಟ್ಟಲು, ತಟ್ಟೆ , ಹೂದಾನಿ ಮುಂತಾದವು ನನ್ನನ್ನ ಬಾಲ್ಯ ಕಾಲದಿಂದಲೂ ಮರುಳು ಮಾಡಿವೆ . ಇಲ್ಲಿಯೂ ವರ್ಣಗಳ ವಿಜೃಂಭಣೆಯೇ ಇತ್ತು. ನಮ್ಮ ಕಡೆಯಂತೂ ಮನೆ ಮುಂದೆ ಚಪ್ಪರ ಹಾಕಿ ಮದುವೆ ಮಾಡುವುದು ತೀರಾ ಅಂದರೆ ತೀರಾ ವಿರಳವಾಗಿ ಬಿಟ್ಟಿದೆ . ಗೆಳೆಯ ಲಮಾಣಿಯವರ ಮನೆಯ ಮುಂದಿನ ಚಪ್ಪರ ಕಂಡು ಮನಸ್ಸು ಸಂಭ್ರಮಿಸಿತು . ನನ್ನ ಸೋದರಿಯರ ಮದುವೆ ನಮ್ಮ ಮನೆ ಮುಂದೆ ಚಪ್ಪರ ಹಾಕಿಯೇ ಮಾಡಿದ್ದು . ಅಷ್ಟೇ ಅಲ್ಲ ನಾನು ಎಂಎ ಮುಗಿಸಿ ಕೆಲವು ದಿನ ಊರಲ್ಲಿದ್ದಾಗ ಹೀಗೆ ಊರಲ್ಲಿ ನಡೆಯುತ್ತಿದ್ದ ಮದುವೆ ಮನೆಗಳಲ್ಲಿ ತರಕಾರಿ ಹೆಚ್ಚಲು , ಊಟ ಬಡಿಸಲು ಹೋಗುತ್ತಿದ್ದುದು ನೆನಪಿಗೆ ಬಂತು. ಇಲ್ಲಿಯೂ ಅಂಥದೇ ಸಂಭ್ರಮವಿತ್ತು . ಆಧುನಿಕ ಲಂಬಾಣಿ ಹೆಣ್ಣು ಮಕ್ಕಳು ಸಾಂಪ್ರದಾಯಿಕ ಉಡುಪು ತೊಡದಿದ್ದರೂ ರಾಚುವ ಬಣ್ಣಗಳ ಉಡುಗೆ ತೊಟ್ಟಿದ್ದರು . ಇಡೀ ಮದುವೆ ಮನೆಯಲ್ಲಿ ಬಣ್ಣಗಳ ಮೇಳ .

ಗೆಳೆಯರು ತಿಳಿಸಿದ್ದಂತೆ ಮದುವೆ ಶಾಸ್ತ್ರಗಳು ಮುಗಿಯುವುದು ತಡವೇ ಆಯ್ತು. ವಧು ವರರಿಗೆ ಶುಭ ಹಾರೈಸಿ , ಸಿಹಿ ಊಟ ಮಾಡಿ ಹೊರಟಾಗ ನಮ್ಮಲ್ಲಿ ಕೆಲವರಿಗೆ ಹೊಟೇಲಿಗೆ ಹೋಗಿ ವಿಶ್ರಾಂತಿ ಪಡೆವ ಮನಸ್ಸಿತ್ತು . ಆದರೆ ಹಾಗೆ ಮಾಡಿದರೆ ರಾತ್ರಿ ಬಸ್ಸಿಗೆ ಹತ್ತುವುದು ಹೊರತಾಗಿ ಬೇರೇನೂ ಆಗುವುದಿಲ್ಲ ಎಂದು ನಿರ್ಧರಿಸಿ ಇಬ್ರಾಹಿಂ ರೋಜಾ ನೋಡಲು ಹೊರಟೆವು. ಅತ್ಯಂತ ಸುವಿಶಾಲವಾದ ಪ್ರಾರ್ಥನಾ ಮಂದಿರದಂತೆ ಕಾಣುತ್ತದೆ ಇಬ್ರಾಹಿಂ ರೋಜಾ. ಹತ್ತಾರು ರಕ್ತ ಸಿಕ್ತ ಯುದ್ಧಗಳನ್ನು ಕಂಡ ಅಲ್ಲಿ ಓಡಾಡುವಾಗ ನಿಜಕ್ಕೂ ಒಂದು ಬಗೆಯ ಶಾಂತಿ, ನೆಮ್ಮದಿ ನೆಲೆಸಿದಂತೆ ಕಾಣುತ್ತಿತ್ತು. ಎಷ್ಟು ಓಡಾಡಿದರೂ ದೇಹ ದಣಿಯಲಿಲ್ಲ. ಆದರೆ ನಮ್ಮ ಬಳಿ ಸಮಯ ಇರಲಿಲ್ಲ.

ಗೋಲ್ ಗುಂಬಜ್ , ಮ್ಯೂಸಿಯಂ , ಬಾರಾ ಕಮಾನ್, ಇಬ್ರಾಹಿಂ ರೋಜಾ ಇವೆಲಾ ಹಲವು ವರ್ಷಗಳ ಹಿಂದೆ ಕಂಡಂತೆ ಕೊಳಕಾಗಿಲ್ಲ . ಮಳೆಯಲ್ಲಿ ತೊಯ್ದು ಶುಭ್ರವಾದಂತೆ ಸ್ವಚ್ಚವಾಗಿ ನಳನಳಿಸುತ್ತಿವೆ. ಬಹುಶಃ ಪುರಾತತ್ವ ಇಲಾಖೆ ಈಗಲಾದರೂ ರಾಷ್ಟ್ರೀಯ ಸ್ಮಾರಕಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುತಿರುವಂತೆ ಕಾಣುತ್ತಿದೆ. ರಾತ್ರಿ ಗೆಳೆಯ ನದಾಫ್ ಗೆ ವಿದಾಯ ಹೇಳಿ ಬಸ್ ಹತ್ತಿದಾಗ ಒಂದು ಬೇಸರ ಕಾಡಲಾರಂಭಿಸಿತು . ಈಜಿಪ್ಟಿನಲ್ಲಿ ಪಿರಮಿಡ್ ಗಳು , ಮ್ಯೂಸಿಯಂ ಮಾತ್ರವಲ್ಲ ದೂರದ ಲಕ್ಸರ್ , ಕಾರ್ನಾಕ್ , ಅಲೆಗ್ಸಾಂಡ್ರಿಯ, ವೈಟ್ ಡೆಸರ್ಟ್ , ರೆಡ್ ಸೀ….ಹೀಗೆ ಎಲ್ಲಿ ಹೋದರು ನೂರಾರು , ಕೆಲವು ಕಡೆ ಸಾವಿರಾರು ವಿದೇಶಿ ಪ್ರಯಾಣಿಕರು ಒಟ್ಟಿಗೆ ಕಾಣುತ್ತಿದ್ದರು . ಬಿಜಾಪುರದಲ್ಲಿ ಅಷ್ಟೆಲ್ಲ ಭವ್ಯ ಸ್ಮಾರಕಗಳಲ್ಲಿ ಓಡಾಡಿದಾಗ ಯಾವೊಬ್ಬ ವಿದೇಶಿ ಪ್ರವಾಸಿಗರು ಕಾಣಲಿಲ್ಲ . ಕಾರಣಗಳನ್ನ ಹುಡುಕುವ ಅಗತ್ಯವಿಲ್ಲ!.

 

‍ಲೇಖಕರು G

26 June, 2011

3 Comments

  1. Badarinath Palavalli

    ನಾನೂ ಕಮಾನುಗಳ ಊರಿಗೆ ಕೂಡಲೇ ಹೊರಡುವಂತೆ ಹುಚ್ಚು ತರಿಸಿದ್ದಕ್ಕಾಗಿ ಧನ್ಯವಾದಗಳು.

  2. tarun

    ವರ್ಷಗಳ ಹಿಂದೆ ಕಂಡಂತೆ ಕೊಳಕಾಗಿಲ್ಲ
    ಓಡಾಡಿದರೂ ದೇಹ ದಣಿಯಲಿಲ್ಲ
    ನಿರ್ಮಿಸಲು ಸಮಾಧಿಯೇ ಕಾರಣವಾಗಬೇಕಿರಲಿಲ್ಲ
    ಕಾರಣಗಳನ್ನ ಹುಡುಕುವ ಅಗತ್ಯವಿಲ್ಲ

    …feels like there is a hidden poem (or a poem hidden!?) in this article 🙂

    -tarun

  3. D.RAVIVARMA

    nimma kavymaya lekhana chennagide,bijapur aste alla neevu badami hihole,pattadakallu, nanu omomme odagalella nanage visista anubhava tandukoduttave,but nanu nimma hage barahagaranalla adellavannu baraharupadallisalu,nimage gotytirali hampi yannu you may not belive sa vira savira sala nodiddene egalu prati ravivara hampiyalliruttene nanage hampi endu bore anisilla omme banni neevu nodalarada hampi torisutytene i find pleasure in it but teera ittichege sarakara unesco ottandadindalo eno pravasi tanagalala bagge kelavu stalagala bagge ecchara vahisi kone paksha kasa ettu hakuva bagge niga vahisiddare nimma abhimani nanu anta helikkolludakke bnanage kushi hai bangalore ninda nimmannu oduttale iruve nimma ella pustikegalu sikkilla teera ithige cinema hadugala bagge nimma pustaka odi kushigonde

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading