ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಿ ರಾಮಣ್ಣ ಆಲ್ಮರ್ಸಿ ಕೇರಿ ಓದಿದ ‘ಮುಗಿಲ ಸಂಚಲನ’

ಚಂದಿರನ ಬೆಳಕಲ್ಲಿ ತಂಪಾದವಳು..

ಡಿ ರಾಮಣ್ಣ ಆಲ್ಮರ್ಸಿ ಕೇರಿ

ಯುವ ಕವಿ ಶ್ರೀ ಈರಪ್ಪ ಬಿಜಲಿಯವರ ‘ಮುಗಿಲ ಸಂಚಲನ’ ಎಂಬ ಕವನ ಸಂಕಲನವು ಮೊಹಬತ್ ನ್ನೇ ತುಂಬಿಕೊಂಡಿದೆ. ಪ್ರೀತಿಯನ್ನೇ ಉಸಿರಾಗಿಸಿಕೊಂಡು, ಧ್ಯಾನಿಸುವ ಕವಿ ಏಕಾಂತದಲ್ಲೊಂದು ಸಂವಹನ ಸ್ಥಿತಿಯಲ್ಲಿ ಗೆಳತಿಗಾಗಿ ಹಂಬಲಿಸುವ ಅನನ್ಯ ಭಾವಗಳೇ ಇಲ್ಲಿ ಕವಿತೆಯಾಗಿ ಮೈದುಂಬಿಕೊಂಡು ದಿಬ್ಬಣಕ್ಕೆ ಹೊರಟಿವೆ. ಅವಳ ಭಾವ ಭಂಗಿಗಳಿಗೆ ಮನಸೋತು ಕವಿ ಕಾವ್ಯದ ಮೂಲಕ ಆರಾಧಿಸುತ್ತಾ ಅವಳನ್ನು ಹೃದಯದಲ್ಲಿ ನೆಲೆಗೊಳಿಸಿಕೊಳ್ಳುವಿಕೆಯ ಪರಿ ನಿಜಕ್ಕೂ ಸೋಜಿಗವೇ ಸರಿ.

“ಇರುವುದೆಲ್ಲವ ಮರೆತು
ಇರದುದರೆಡೆಗೆ ತುಡಿಯುವುದೆ ಜೀವನ”

ಎಂಬ ಕವಿಯ ಅನುಭವದ ಮಾತಿನಂತೆ ಪ್ರೀತಿಗೆ ಅಂಥದ್ದೊಂದು ಶಕ್ತಿ ಹಾಗೂ ಸೆಳೆತವಿದೆ. ಇಂಥಹ ಪ್ರೀತಿಯ ಸೆಳೆತದಲ್ಲಿ ಮಿಂದೆದ್ದ ಕವಿಮಿತ್ರ ಈರಪ್ಪ ಬಿಜಲಿಯವರು ಅಕ್ಷರಗಳ ಮೂಲಕ ವಿರಾಟಮಾರ್ಗಗಳನ್ನು ಕಂಡುಕೊಂಡು ಗೆಳತಿಯನ್ನು ಸಂದಿಸುವ ಪರಿ ನಿಜಕ್ಕೂ ಬೆರಗು ಮೂಡಿಸುತ್ತದೆ.

ವಾಸ್ತವದಲ್ಲಿ ಕಾಣುವ ಸೌಂದರ್ಯ ಹಾಗೂ ಹೆಣ್ಣಿನ ಸೊಬಗನ್ನು ಕಾವ್ಯದ ಮೂಲಕ ಮನೋಜ್ಞವಾಗಿ ಚಿತ್ರಿಸುತ್ತಾರೆ. ಸೌಂದರ್ಯ ನೋಡುಗರ ಕಣ್ಣಲ್ಲಿರುತ್ತದೆಂದು ಹೇಳುತ್ತಾರೆ ಅನುಭಾವಿಗಳು. ಕವಿಯ ವಯೋ ಸಹಜ ನೋಟದಿಂಧ ಗಿಡ, ಮರ ಹೂ ಬಳ್ಳಿ ಪ್ರಕೃತಿ ಹಾಗೂ ಹೆಣ್ಣು ತುಂಬಾ ಆಕರ್ಷಕವಾಗಿ ಕಾಣುತ್ತದೆ. ತನಗಿಷ್ಟವಾದ ಗೆಳತಿಯನ್ನು ಒಲಿಸಿಕೊಳ್ಳುವ, ವರ್ಣಿಸುವ ಧಾವಾಂತದಲ್ಲಿ ಎಲ್ಲೂ ಚೌಕಟ್ಟನ್ನು ಮೀರುವುದಿಲ್ಲ, ಇದು ಕವಿಯ ಗುಣವೂ ಹೌದು.

ಪ್ರೀತಿಯ ಇಂಗಿತದಾಚೆ ಸುತ್ತಲಿರುವ ಸಮಾಜವನ್ನು ಸೂಕ್ಷ್ಮ ನೋಟಗಳಿಂದ ನೋಡುವ ದೃಷ್ಟಿ ಕೋನವನ್ನು ಕವಿ ಬೆಳೆಸಿಕೊಂಡಿದ್ದಾನೆ. ಕಾವ್ಯ ಸಮಾಜದೊಂದಿಗೆ ಮಾತನಾಡಬೇಕು, ಕವಿತೆ ಸಮಾಜದ ಕೈಗನ್ನಡಿಯಾಗಬೇಕೆಂಬಂತೆ, ಇಂತಹ ಸಾಮಾಜಿಕ ಜವಾಬ್ದಾರಿಗಳನ್ನ ಕಾವ್ಯದ ಮೂಲಕ ಕವಿ ಮಾಡಿದ್ದಾನೆನ್ನುವುದೆ ಸಮಾದಾನದ ಸಂಗತಿ. ಸಮಾಜದಲ್ಲಿನ ಕೆಡಕುಗಳ ಬಗ್ಗೆ ಕವಿ ತುಂಬಾ ಕನಲುತ್ತಾನೆ. ಕಳವಳ ಪಡುತ್ತಾನೆ. ಅನ್ಯರ ಸಂಕಟ ದುಃಖ ದುಮ್ಮಾನಗಳಿಗೆ ಕವಿ ಧ್ವನಿಯಾಗಿದ್ದಾನೆ.

ಕವಿಮಿತ್ರ ಕಾವ್ಯೋತ್ಸವದಲ್ಲಿ ಸಂಭ್ರಮಿಸುತ್ತಾನೆ. ಇನ್ನಿಲ್ಲದ ಉತ್ಸಾಹ, ಹುರುಪು, ಉಲ್ಲಾಸವನ್ನು ಕಾವ್ಯದ ಮೂಲಕ ಈ ಸಂಕಲನದ ತುಂಬೆಲ್ಲಾ ಗಂಧದಂತೆ ಚೆಲ್ಲಿ ಹೆಮ್ಮೆಯಿಂದ ಬೀಗುತ್ತಾನೆ, ಬಾಗುತ್ತಾನೆ, ಬಾಗುವಿಕೆಯ ಗುಣದಿಂದಾಗಿ ಪ್ರೀತಿ, ವಿಶ್ವಾಸ, ಸ್ನೇಹದಿಂದ ಬೆಳೆದು ಬೆಳಾಕಬಲ್ಲೆ ಎಂಬ ಆತ್ಮವಿಶ್ವಾಸದ ನುಡಿಗಳನ್ನ ಕಾವ್ಯದ ಮೂಲಕ ಸಾಬೀತು ಪಡಿಸಿದ್ದಾರೆ. ಕಾವ್ಯ ಸಮಾಜದ ನೆರಳಾಗಬೇಕೆಂಬ ಹಂಬಲದಿ ಬಹುದೊಡ್ಡ ಕನಸುಗಳನ್ನ ಹೊತ್ತು, ಸುತ್ತಲೂ ಸಂಚರಿಸಿ ಲೋಕ ಉಂಡ ತಲ್ಲಣಗಳನ್ನ ತನ್ನಲ್ಲಿ ಇಟ್ಟುಕೊಳ್ಳದೇ ತಾಳಲಾರದೇ, ಕಾವ್ಯದ ಮೂಲಕ ಪ್ರತಿನಿಧಿಸುವ ದಿಟ್ಟತನವನ್ನು ಕವಿ ತೋರುತ್ತಾನೆ.ಸಮಾಜದ ಆಗು ಹೋಗುಗಳನ್ನ, ಆದರ್ಶಗಳನ್ನ,ಮೌಲ್ಯಗಳನ್ನ, ತಾತ್ವಿಕ ಬದುಕಿನ ಸೂತ್ರಗಳನ್ನ, ನೈತಿಕ ಮಾರ್ಗಗಳನ್ನ ಕವಿತೆ ಪ್ರತಿನಿಧಿಸಿವೆ. ಇದೊಂದು ಕವಿಯ ಜವಾಬ್ದಾರಿ ಕೂಡ.

ಆಧುನಿಕ ಆವಿಷ್ಕಾರಗಳ,ಫಲದಿಂದಾಗಿ,ಸುಲಭವಾಗಿ ಕೈಗೆಟುಕುವ ವಿದ್ಯುನ್ಮಾನ ಸಾಧನಗಳ ಬಳಕೆಯಲ್ಲಿ,( ಉದಾ:ಮೊಬೈಲ್, ಟಿವಿ,ಲ್ಯಾಪ್ ಟಾಪ್,ಕಂಪ್ಯೂಟರ್) ಮಕ್ಕಳಾದಿಯಾಗಿ, ವೃದ್ದರೂ, ವಯಸ್ಕರರು, ಮಹಿಳೆಯರು ದಿನದ ಬಹುತೇಕ ಸಮಯವನ್ನ ಅದರಲ್ಲಿ ಕಳೆದು ಅಮೂಲ್ಯವಾದ ಸಮಯವನ್ನ ಹಾಳು ಮಾಡುತ್ತಿರುವ ಬಗ್ಗೆ ವಿಷಾಧತೆಯನ್ನ ವ್ಯಕ್ತಪಡಿಸುತ್ತಾರೆ. ಆಧುನಿಕ ತಂತ್ರಜ್ಞಾನ ಮನುಷ್ಯನನ್ನ ಅಡಿಯಾಳಾಗಿಸಿಕೊಳ್ಳಬಾರದು, ವಿವೇಕದಿಂದ ಬಳಸಬೇಕೆಂಬ ಕವಿಯ ಆಶಯಗಳು ಗಮನ ಸೆಳೆಯುತ್ತವೆ.

ಪ್ರೀತಿ ಪ್ರೇಮ ವಿರಹ ಕವಿಯನ್ನ ಬಹಳಷ್ಟು ಕಾಡಿವೆ. ಕಿವಿಗೊಟ್ಟು ಕೇಳುವವರಿಗೆ ಮಾತ್ರ, ಸಖಿಯ ಹೃದಯ ಬಡಿತ ಕೇಳುತ್ತದೆಂದು ಅವರ ನಂಬಿಕೆ. ಏಕಾಂತದಲ್ಲಿ ಅವಳೊಂದಿಗೆ ಅನುಸಂದಾನಕ್ಕಿಳಿಯುವ ಪರಿ ನಿಜಕ್ಕೂ ಸೋಜಿಗವೆನಿಸುತ್ತದೆ. ಕವಿತೆಗಳು ಪ್ರೀತಿಯ ಸೆಳವಿನಲ್ಲಿ ಓದುಗರನ್ನು ತಳ್ಳುತ್ತವೆಂದು ಭಾಸವಾಗುತ್ತದೆ.

ಹವಾಮಾನ ವೈಪರೀತ್ಯಗಳಿಂದ ಉಂಟಾಗುವ ಪ್ರಕೃತಿಯಲ್ಲಿನ ಬಿಕ್ಕಟ್ಟುಗಳು, ಬರ, ನೆರೆಹಾವಳಿ, ಜಲಪ್ರಳಯ, ಅತಿವೃಷ್ಟಿ, ಅನಾವೃಷ್ಟಿಗಳಿಂದ ಎದುರಿಸ ಬಹುದಾದ ಮನುಷ್ಯ ಸಹಜ ಸಂಕಟಗಳಿಗೆ ಮರುಗುತ್ತಾರೆ. ತಲೆಯ ಮೇಲಿನ ಸೂರು ಬದುಕಿನ ಊರುಗೋಲುಗಳನ್ನ ಕಳೆದು ಕೊಂಡ ಕುಟುಂಬಗಳ ಕಣ್ಣೀರು ಒರೆಸಿ, ಸಾಂತ್ವನ ಹೇಳುವ ಮೂಲಕ ಜೀವಪರ ಕಾಳಜಿಯನ್ನ ಕವಿ ಮೆರೆಯತ್ತಾನೆ.

“ನೀತಿ-ನಿಯಮಗಳ ಬೇಲಿ ಇಲ್ಲದ
ಸಾಮಾಜಿಕ ಜೀವನ ಅಸಾಧ್ಯ” ಎನ್ನುತ್ತಾರೆ.

ಗೋಪಾಲ ಕೃಷ್ಣ ಅಡಿಗರು. ಅವರ ಮಾತಿನ ತಾತ್ಪರ್ಯದಂತೆ ಕವಿಮಿತ್ರ ಈರಪ್ಪ ಬಿಜಲಿಯವರು ತಾತ್ವಿಕ ನಿಲುವುಗಳನ್ನ ಒಂದಷ್ಟು ರೂಡಿಸಿ ಕೊಂಡು ಸಾಂಘಿಕ ಜೀವನಕ್ಕೆ ಮುಖಾ ಮುಖಿಯಾಗತ್ತಾರೆ. ಸುತ್ತಲಿನ ಸಮಾಜವನ್ನ ಸೂಕ್ಷ್ಮ ಹಾಗೂ ತೀಕ್ಷಣವಾದ ದೃಷ್ಟಿ ಕೋನಗಳಿಂದ ನೋಡಿದಾಗ, ಒಳಗಿನ ತುಡಿತ ಕಾವ್ಯವಾಗಿ, ಬರಹಗಳಾಗಿ ಹೊರ ಹೊಮ್ಮಿದೆ.

ಇಂತಹ ಸಂವೇದನೆಗಳು ಅವರನ್ನ ಕ್ರೀಯಾಶೀಲರನ್ನಾಗಿ, ಸೃಜನಶೀಲರನ್ನಾಗಿ ಮಾಡಿವೆ. ಎರಡು ದಶಕದಿಂದಲೂ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳೊಂದಿಗೆ ಒಡನಾಡಿರುವುದರಿಂದ ಕಲಿಸುವಿಕೆಯ, ಕಲಿಯುವ ಅನುಭವಗಳು ಅವರನ್ನ ಕಾವ್ಯ ಕೃಷಿಯೆಡೆಗೆ ಪ್ರೇರೇಪಿಸಿವೆ. ಈ ಕೃತಿಯಲ್ಲಿ ೬೦ ಕ್ಕೂ ಹೆಚ್ಚು ಕವಿತೆಗಳಿವೆ. ಹಲವು ಕವಿತೆಗಳು ಅವರು, ಗಂಭೀರ, ಕಾವ್ಯ ಕೃಷಿಕರೆಂಬುದನ್ನು ಸಾಬೀತು ಪಡಿಸುತ್ತವೆ. “ನಮ್ಮಲ್ಲಿರುವ ಅತ್ಯುತ್ತಮ ಶಕ್ತಿಯನ್ನು ಬೆಳಕಿಗೆ ತರುವವನೇ ಉತ್ತಮ ಸ್ನೇಹಿತ”. ಎಂದು ಹೇಳುತ್ತಾನೆ ತತ್ವಜ್ಞಾನಿ. ಆತನ ಮಾತಿನಂತೆ ಈರಣ್ಣ ಸಾಹಿತ್ಯದ ಸ್ನೇಹ ಮಾಡಿದ್ದಾನೆ. ಸ್ನೇಹಿತನ ಮಾರ್ಗದರ್ಶನದಿಂದ ಖಂಡಿತಾ ಬೆಳಕು ತೋರುವ ಕವಿಯಾಗಬಲ್ಲ. ನಂಬಿಕೆ, ವಿಶ್ವಾಸ, ಒಡನಾಟಗಳಿಂದ ಸ್ನೇಹಗಟ್ಟಿಗೊಳ್ಳುತ್ತದೆ. ಅಪರೂಪದ ಸ್ನೇಹ-ಸಂಬಂಧ ಬೆಳೆಸಿದಲ್ಲಿ ಕವಿಯೂ ಬೆಳೆಯಬಲ್ಲ.

ಎಲ್ಲರೂ ಪ್ರೀತಿಯನ್ನ ಹೃದಯದಲ್ಲಿ ಬಚ್ಚಿಟ್ಟಕೊಂಡರೆ ಕವಿಯು ಕಪ್ಪೆ ಚಿಪ್ಪಿನಲ್ಲಿಟ್ಟು, ಜತನದಿಂದ ಅದನ್ನು ಮುತ್ತಾಗಿಸುತ್ತಾನೆ. ಪ್ರೀತಿಯ ನದಿಯಲ್ಲಿ ಅವರು ಕೊಚ್ಚಿ ಹೋಗಿದ್ದಾರೆ.

” ಗಂಗೆಯಷ್ಟೇ ಪವಿತ್ರ ಪ್ರೀತಿ
ಪರಿಶುದ್ಧ ಸುವರ್ಣದ ರೀತಿ”
ಈ ಸಾಲುಗಳು ಸಮುದ್ರದ ಒಳಗೆ ಮುತ್ತಾಗುವ ಬಗೆಯನ್ನೇ ಹೇಳುತ್ತವೆ.
” ಬಡ ಮಕ್ಕಳಿಗೆ ಇವು ನಂದಾದೀಪಗಳು
ಬಡವರ ಬಾಳಿಗೆ ಇವೇ ದಾರಿದೀಪಗಳು”

ಕವಿ ಕನ್ನಡ ಶಾಲೆಗಳ ಕುರಿತಾಗಿ ಈ ಮೇಲಿನಂತೆ ಹೇಳುತ್ತಾರೆ. ಶಾಲೆಗಳ ಸಬಲೀಕರಣಕ್ಕೆ ಸರ್ಕಾರ ಹಲವಾರು ಯೋಜನೆಗಳನ್ನ ಜಾರಿಗೆ ತಂದು, ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುತ್ತದೆಂಬುದನ್ನು ಕವಿತೆಯಲ್ಲಿ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಬಡಮಕ್ಕಳು ಹಾಗೂ ಕನ್ನಡ ಶಾಲೆಗಳ ಕುರಿತಾಗಿ ತೋರುವ ಪ್ರೀತಿ, ಕಾಳಜಿ ಮೆಚ್ಚುವಂತದ್ದು.

“ಹಣಕ್ಕಿಂತಲೂ ಗುಣಮೇಲೆಂದನವನು
ಧನಕ್ಕಿಂತಲೂ ಜನ ಮೇಲೆಂದವನು”

ಅಪ್ಪನ ಕುರಿತಾಗಿ ಕವಿತೆ ಮುಂದುವರಿಯುತ್ತದೆ.ಮಕ್ಕಳಿಗೆ ಮನೆ,ಸಂಸ್ಕಾರ ನೀಡುವ ಪಾಠ ಶಾಲೆ.ಅಪ್ಪ ಅಮ್ಮ ಇವರೇ ಆ ಮನೆಯ ರೂವಾರಿಗಳು. ಅಪ್ಪನ ಗುಣ, ನಡವಳಿಕೆ, ಪ್ರೀತಿ, ವಾತ್ಸಲ್ಯ, ಸಮಾಜದೊಂದಿಗಿನ ಆತನ ನಂಟು, ಮಕ್ಕಳಿಗೆ ಆತ ತೋರಿದ ಅಕ್ಕರೆ, ಅವರನ್ನ ತುಂಬಾ ಪ್ರಭಾವಿಸಿದೆ. ಹಾಗೆ ಎಲ್ಲರನ್ನ ಪ್ರಭಾವಿಸಬೇಕು ಕೂಡ.” ಅವರ್ಣನೀಯ ಅಪ್ಪ ” ಎಂಬ ಕವಿತೆಯಲ್ಲಿ ಅಪ್ಪನ ಭಾವನಾತ್ಮಕ ಎಲ್ಲ ನೆಲೆಗಳನ್ನ ದಾಖಲಿಸಿದ್ದಾರೆ. ನಮ್ಮ ಬದುಕಿನ ದಾರಿದೀಪದಂತಿರುವ ಅಪ್ಪ ಅಮ್ಮನನ್ನ ಬದುಕಿನ ಮುಸ್ಸಂಜೆಯಲ್ಲಿ ಪ್ರೀತಿ ಗೌರವಾಧರಗಳಿಂದ ನೋಡಿಕೊಳ್ಳಬೇಕೆಂಬ ಎಚ್ಚರಿಕೆಯನ್ನು ಕವಿತೆ ಸೂಕ್ಷ್ಮವಾಗಿ ಓದುಗರಿಗೆ ತಿಳಿಯಪಡಿಸುತ್ತದೆ.

” ನಾನು ನೀನು ಜನುಮದ ಜೋಡಿ
ಹಾಡೋಣ ಹೊಸರಾಗದಲಿ ಕೂಡಿ”
ಎಂದು ಹೇಳುತ್ತಾ ಪ್ರೀತಿಯೊಂದಿಗೆ ಬೆಸೆದು, ಹೊಸಬದುಕನ್ನ ಕಟ್ಟುವ ಮೂಲಕ ಜಗ ಮುಚ್ಚುವಂತೆ ನಾವಿಬ್ಬರೂ ಬದುಕಬೇಕೆಂದು ಕವಿ ಗೆಳತಿಗೆ ವಿನಂತಿಸಿಕೊಳ್ಳುತ್ತಾನೆ. ಹೆಣ್ಣಿನ ಒಲುಮೆಯೇ ಅಂಥದ್ದು. ಆಕೆಯೆ ಒಲುಮೆಯಿಂದಾಗಿಯೇ ಬದುಕು ಚಲುವಾಗುವುದು, ಗೆಲುವಾಗುವದು.

“ಸೇದಿ ಬಿಟ್ಟರ ನೀನು ಹೊಗೆ
ನಿನ್ಮನೆ ಮುಂದೆ ಹಾಕುವರು ಹೊಗೆ”

ಈ ಸಾಲುಗಳು ಧೂಮಪಾನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸುತ್ತವೆ. ಬೀಡಿ ಸಿಗರೇಟ್, ಗುಟ್ಕಾ, ತಂಬಾಕು ಮನುಷ್ಯನ ದೇಹದೊಳಗಿನ,ಸೂಕ್ಷ್ಮ ಅಂಗಗಳನ್ನ ನಾಶಗೊಳಿಸುತ್ತವೆ. ಆಗ ಮನುಷ್ಯ, ಸಾವಿನ ಕದ ತಟ್ಟ ಬೇಕಾಗುತ್ತದೆನ್ನುವುದನ್ನ ಕವಿತೆ ಹೇಳುತ್ತದೆ.” ಆರೋಗ್ಯವೇ ಭಾಗ್ಯ “ಎಂಬುದನ್ನ ಓದುಗರಿಗೆ ಕವಿತೆಯ ಕೆಲ ಸಾಲುಗಳು ಮನವರಿಕೆ ಮಾಡಿಕೊಡುತ್ತವೆ.

” ತೋರು ನಮಗೆ ನಿನ್ನಯ ಕರುಣೆ
ನೀಗಿಸು ನಮ್ಮ ಬದುಕಿನ ಬವಣೆ”.
ಎಂದು ಗುರುವಿನ ಭಕ್ತಿಯ ನೆಲೆಗಳನ್ನು ಕವಿತೆಯಲ್ಲಿ ಮನಮುಟ್ಟುವಂತೆ ಬರೆಯುತ್ತಾರೆ. ಹಿಂದೆ ಗುರು, ಮುಂದೆ ಗುರಿ ಇದ್ದರೆ ಯಾವುದೇ ವ್ಯಕ್ತಿ ಏನನ್ನಾದರೂ ಸಾಧಿಸಬಲ್ಲ, ಗುರುವಾದವನು ಅಕ್ಷರ ಜ್ಞಾನ ನೀಡುವ ಮೂಲಕ ಸ್ಪೂರ್ತಿಯ ಸೆಲೆಯಾದರೆ, ಸಾಮಾನ್ಯನು ಕೂಡ ಅಸಾಮಾನ್ಯ ಸಾಧನೆಯನ್ನು ಮಾಡಬಲ್ಲ. ಇಂಥಹ ಸಾಧನೆಗೆ ಪ್ರೇರೇಪಿಸುವ ಬಹುದೊಡ್ಡ ಶಕ್ತಿ ಗುರು.

” ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ”. ಎಂಬ ದಾಸರ ವಾಣಿಯಂತೆ ಅವರ ಪ್ರೀತಿಯ ಸ್ಪರ್ಶಕ್ಕೊಳಗಾಗಬೇಕು. ಅಂದಾಗ ಮಾತ್ರ ಬದುಕಿನ ಸಾರ್ಥಕತೆ ಹಾಗೂ ಮುಕ್ತಿಯ ಪಥವನ್ನು ಕಂಡುಕೊಳ್ಳಬಹುದು ಎಂಬುದನ್ನು ಕವಿತೆ ಶಿಷ್ಯ ಸಮುದಾಯಕ್ಕೆ ಅರ್ಥವಾಗಿಸುತ್ತದೆ.

“ಅತಿವೃಷ್ಟಿ ಅನಾವೃಷ್ಠಿಯಿಂದ ಆಯಿತು ಜಲಪ್ರಳಯ
ನುಂಗಿ ಹಾಕಿತು ಅದು ಜಗದ ಜೀವ ಕಳೆಯ”
ಕವಿತೆ ಹೀಗೆ ಮುಂದುವರಿಯುತ್ತದೆ. ಪ್ರ

ಕೃತಿ ಮುನಿಸಿಕೊಂಡಾಗಲೆಲ್ಲ ಜಲಪ್ರಳಯವಾಗುತ್ತದೆ. ಉತ್ತರ ಕರ್ನಾಟಕದಲ್ಲಾದ ಇತ್ತೀಚಿನ ಜಲಪ್ರಳಯದಿಂದಾಗಿ ಬಹುತೇಕ ಜಿಲ್ಲೆಗಳು ಅಕ್ಷರಶಃ ಮುಳುಗಿ ಹೋಗಿದ್ದವು. ಮನೆ, ಮಠ, ಜಾನುವಾರುಗಳನ್ನ ಕಳೆದುಕೊಂಡು ಜನ, ಬೀದಿಗೆ ಬಿದ್ದರು.ಹಸು-ಹಸುಗೂಸುಗಳು, ಆಹಾರ ಸಿಗದೆ ಧಾರುಣವಾಗಿ ಸತ್ತು ಹೋದವು. ಇಂತಹ ಸಂಕಟದ ಬದುಕನ್ನು ಕವಿತೆ ಧ್ವನಿಸುತ್ತದೆ. ಮಾನವನ ಸ್ವಾರ್ಥ, ದುರಾಸೆಯ ಫಲದಿಂದಾಗಿ ಇವುಗಳನ್ನೆಲ್ಲ ಅನುಭವಿಸಬೇಕಾಗಿ ಬಂತು ಎಂದು ಕವಿ ದುಃಖಿತನಾಗುತ್ತಾನೆ. ಲೋಕದ ಸಂಕಟಕ್ಕೆ ಧ್ವನಿಯಾಗುತ್ತಾನೆ.

ಈರಪ್ಪ ಬಿಜಲಿಯವರು ಕಾವ್ಯವನ್ನು ತುಂಬಾ ಸರಳವಾಗಿಯೂ, ವಸ್ತುವಿನ ಆಯ್ಕೆಯ ವಿಷಯದಲ್ಲಿ ವೈವಿಧ್ಯತೆ ತೋರದೆ, ಸಮಷ್ಠೀ ಪ್ರಜ್ಞೆಯಲ್ಲಿ ಕವಿತೆ ಮೈದಾಳದೆ, ಪ್ರಾಸಕ್ಕನುಗುಣವಾಗಿ ಶಬ್ಧ ಜೋಡಿಸುವ ಮ‌ೂಲಕ ಕವಿತೆಗೆ ಕೊನೆ ಹೇಳಿ ಬಿಡುತ್ತಾರೆ. ಪ್ರಾಸ ಪದಗಳ ಶಬ್ಧಾರ್ಥವೇ ಕಾವ್ಯವಾಗುವುದಿಲ್ಲ. ಕಮ್ಮಾರ ಕುಲುಮೆಯಲ್ಲಿ ಕಾಸಿ ಬಡಿದಂತೆ, ಪದಗಳನ್ನ ಜೋಡಿಸಿ ಶೃಂಗಾರ ಆಕಾರಕ್ಕೆ ತರುವ ಪ್ರಯತ್ನ ಮಾಡಬೇಕು.

ನೇಕಾರ ಬಟ್ಟೆಗಳನ್ನ ನೇಯ್ದದಂತೆ ನೇಯಬೇಕು, ಓದು ಬದುಕಿನ ಅನುಭವ ದಕ್ಕಿಸಿಕೊಂಡಲ್ಲಿ ಖಂಡಿತಾ ಕವಿಮಿತ್ರ ಈ ಕೆಲಸವನ್ನು ಮಾಡುತ್ತಾರೆನ್ನುವುದಕ್ಕೆ ಈ ಕೃತಿಯೇ ಸಾಕ್ಷಿಯಾಗಿದೆ. ಬಿಜಲಿಯವರ ಲೇಖನಿಯ ಬೆಳಕಿನಲ್ಲಿ ಇನ್ನಷ್ಟು ಕೃತಿಗಳು ಹೊರಬರಲಿ. ಬೆಳಕಿನ ಪಥದಲ್ಲಿ ಕಾವ್ಯಪ್ರಭೆ, ಓದುಗರ ಮುಖದಲ್ಲಿ ಮಂದಹಾಸ ಮೂಡಿಸಲಿ. ಸಹೃದಯಿ ಓದುಗರು ಈ ಕೃತಿಯನ್ನ ಅಪ್ಪಿಕೊಂಡು ಕಾವ್ಯ
ಪ್ರೀತಿಯನ್ನು ತೋರಲೆಂದು ತುಂಬು ಹೃದಯದಿಂದ ಶುಭ ಹಾರೈಸುವೆ.

‍ಲೇಖಕರು Admin

23 February, 2022

1 Comment

  1. T S SHRAVANA KUMARI

    ಉತ್ತಮ ಪುಸ್ತಕ ಪರಿಚಯ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading