ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋಮಾಳದಲ್ಲಿ ಗಾಯದ ಗೆರೆಗಳಿವೆ…

ಚಲಂ ಹಾಡ್ಲಹಳ್ಳಿ ಅವರ ಹೊಸ ಕಥಾ ಸಂಕಲನ ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.

ಕೃತಿಗೆ ಲೇಖಕರು ಬರೆದ ಮಾತು ಇಲ್ಲಿದೆ-

ಚಲಂ ಹಾಡ್ಲಹಳ್ಳಿ 

ನನ್ನೂರಿನಲ್ಲಿ ಗೋಮಾಳಕ್ಕೆಂದೇ ಹತ್ತತ್ತಿರ ನೂರು ಎಕರೆ ಜಾಗವನ್ನು ಮೀಸಲಿಟ್ಟಿದ್ದರು. ನನ್ನ ಹಿರಿಯರು ಕಥೆಗಳನ್ನು ಓದುವಾಗ ಊರಿನವರೆಲ್ಲಾ ಅಲ್ಲಿ ದನ ಮೇಯಿಸಬಹುದಿತ್ತು. ಊರಿನ ದನಗಳೆಲ್ಲಾ ಅಲ್ಲಿ ದಿನವೆಲ್ಲಾ ಮೇಯ್ದು ಕೆಳಗಿನ ಕೆರೆಯಲ್ಲಿ ನೀರು ಕುಡಿದು, ಗೋಮಾಳದ ಜಾಗದಲ್ಲಿ ಅಲ್ಲಲ್ಲಿ ನೆಟ್ಟಿದ್ದ ಕಲ್ಲುಗಳಿಗೆ ಮೈಯ್ಯುಜ್ಜಿಕೊಂಡು ಸುಖಿಸುತ್ತಿದ್ದವು. ಊರಿನ ಎಲ್ಲಾ ದನಗಳು ಒಟ್ಟಿಗೆ ಮೇಯ್ದು ಸಂಜೆ ಅವರವರ ಮನೆಗಳಿಗೆ ಹೋಗುತ್ತಿದ್ದವು.

ನಾನು ಕಥೆ ಓದುವ ಕಾಲಕ್ಕೆ ಅದಷ್ಟೂ ಜಾಗವನ್ನು ಊರಿನ ಒಂದೆರಡು ಜನ ಹರಾಜಿನಲ್ಲಿ ಕೂಗಿಕೊಂಡು ಅವರ ಮನೆಯ ದನಗಳನ್ನು ಮಾತ್ರ ಮೇಯಿಸಿಕೊಳ್ಳುತ್ತಿದ್ದರು. ಅವರು ಹರಾಜಿನಲ್ಲಿ ಕೂಗಿದ ಹಣ ಊರಟ್ಟಿಯ ದುಡ್ಡಿಗೆ ಸೇರಿ ದೇವಸ್ಥಾನ ಕಟ್ಟಲು, ವರ್ಷಕ್ಕೊಮ್ಮೆ ಮರಿ ಹೊಡೆಯಲೋ ವ್ಯಯವಾಗುತ್ತಿತ್ತು. ಆಗ ಆ ಗೋಮಾಳದಲ್ಲಿ ಬೇರೆಯವರ ದನಗಳು ಆಗಾಗ ಹೋಗುತ್ತಿದ್ದುದರಿಂದ ಹರಾಜು ಕೂಗಿದವರಿಗೂ ಬೇರೆ ದನಗಳ ಮಾಲೀಕರಿಗೂ ಗಲಾಟೆಗಳಾಗುತ್ತಿದ್ದವು. ಹಳ್ಳಿಯ ಮಜಬೂತಾದ ಭಾಷೆಯಲ್ಲಿ ನಡೆಯುತ್ತಿದ್ದ ಆ ಜಗಳಕ್ಕೆ ವಿಶೇಷ ಕಲೆ ಸಿದ್ದಿಸಿತ್ತು. ಹಳ್ಳಿಯ ಆ ಚಂದದ ಹೆಂಗಸರ ಬಾಯಲ್ಲಿ ಎಂತೆಂಥಾ ಪದಗಳು ಹೊರಬರುತ್ತಿದ್ದವು ಎಂಬುದು ಈಗ ಇತಿಹಾಸ. ಹಳ್ಳಿಯ ಹೆಂಗಸರು ಅಲ್ಲಿನ ಗಂಡಸರಿಗಿಂತ ಹೆಚ್ಚು ಯುದ್ದೋತ್ಸಾಹಿಗಳು. ತಮ್ಮ ತಂಟೆಗೆ ಯಾರಾದರೂ ಬರದೇ ಹೋದರೆ ಅತ್ಯಂತ ಕರುಣಾಮಯಿಗಳಾಗಿರುತ್ತಿದ್ದ ಅವರು ಜಗಳಕ್ಕೆ ಬಿದ್ದರೆ ದೈಹಿಕ ಹಿಂಸೆಯ ಮಟ್ಟಕ್ಕೆ ಹೋಗದೇ ಬೈದು ಬೈದೂ ಸುಸ್ತಾಗಿ ಪ್ರಜ್ಞೆತಪ್ಪಿ ಬೀಳೂತ್ತಿದ್ದ ಉದಾಹರಣೆಗಳು ಇವೆ.

ನಾನು ಕಥೆಗಳನ್ನು ಓದುತ್ತಲೇ ಒಂದಷ್ಟು ಘಟನೆಗಳನ್ನು, ಭಾವನೆಗಳನ್ನು ಕಥೆಗಳ ರೂಪದಲ್ಲಿ ಕಟ್ಟಿಕೊಡುವ ಹೊತ್ತಿಗೆ ನಮ್ಮ ಊರಿನ ಹೆಣ್ಣುಮಕ್ಕಳು ಜಗಳ ಮಾಡುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ ಎನಿಸುತ್ತದೆ. ಗಂಡಸರು ಯಾವಾಗ ಬೇಕಾದರೂ ಕುಡಿದು ಸತ್ತುಹೋಗಬಹುದಾದ ಕ್ರಿಮಿನನಾಶಕಗಳನ್ನು ಜತೆಯಲ್ಲಿಯೇ ಇಟ್ಟುಕೊಂಡು ತಿರುಗುವ ಹ್ಯೂಮನ್ ಬಾಂಬರುಗಳಾಗಿ ಕಾಣುತ್ತಾರೆ.

ಈಗ ನನ್ನೂರಿನಲ್ಲಿ ಗೋಮಾಳವಿಲ್ಲ. ಗೋಮಾಳವಿದ್ದ ಜಾಗವನ್ನು ಊರಿನ ಜನರು ಹಂಚಿಕೊಂಡಿದ್ದಾರೆ. ಮನೆ ಕಟ್ಟಬಹುದಾದಷ್ಟು ಜಾಗ ಮಾತ್ರ ಸಿಕ್ಕಿರುವ ಆ ಭಾಗದ ಜಮೀನಿನಲ್ಲಿ ಇರುವ ಸಣ್ಣಸಣ್ಣ ಗೆರೆಗಳಂತ ಬದುಗಳು ದೊಡ್ಡ ಗೋಡೆಗಳಂತೆ ವಿಶಾಲವಾದ ಗೋಮಾಳದ ತುಂಬಾ ಕಾಣುತ್ತವೆ. ಅಲ್ಲೀಗ ದನಗಳು ಮೇಯುವುದಿಲ್ಲ.

ಗೋಮಾಳದಲ್ಲಿ ಮೇಯುವಂತಹಾ ದನಗಳ ತಳಿಗಳೂ ಇಲ್ಲ. ಇಡೀ ಊರಿನಲ್ಲಿ ಬಿತ್ತನೆಗೆ ಅರೆ ಹೊಡೆಯಲು ಬೇಕಾಗುವಂತಹಾ ನಾಲ್ಕೈದು ಜತೆ ದೇಸಿ ತಳಿಯ ಹಸುಗಳಿರಬಹುದಷ್ಟೇ. ಇನ್ನುಳಿದಂತೆ ಎಲ್ಲರ ಮನೆಯಲ್ಲೂ ಹೊತ್ತಿಗೆ ಏನಿಲ್ಲವೆಚಿದರೂ ಐದಾರು ಲೀಟರ್ ಹಾಲು ಕೊಡುವ ಹೆ.ಎಫ್ ಅಥವಾ ಸಿಂಧಿ ಹಸುಗಳಿವೆ. ಈ ಜಾತಿಯ ಹಸುಗಳು ಬಿಸಿಲಿನಲ್ಲಿ ಅಡ್ಡಾಡಿಕೊಂಡು ಮೇಯುವುದಿಲ್ಲವಾದ್ದರಿಂದ ಈ ಹಸುಗಳಿಗೂ ಗೋಮಾಳಕ್ಕೂ ಸಂಬಂಧವೇ ಇಲ್ಲ. ತುಂಬು ಯೌವ್ವನಾವಸ್ಥೆಯ ಸೀಮೆಹುಲ್ಲು, ಜೋಳದ ಪೈರನ್ನು ತಿಂದು ಬದುಕುವ ಈ ಹಸುಗಳನ್ನು ಹೆಚ್ಚಿನಂಶ ನಮ್ಮ ಊರಿನ ಹೆಂಗಸರೇ ಸಾಕುತ್ತಾರೆ.

ನಾನು ಕತೆ ಬರೆಯದೇ ಓದಲು ಶುರು ಮಾಡಿದ ಕಾಲದಲ್ಲಿ ನಮ್ಮ ಮನೆಯಲ್ಲಿ ಒಂದು ಹಸುವಿತ್ತು. ಮಲೆನಾಡ ಗಿಡ್ಡ. ಅದಕ್ಕೆ ಗೌರಿ ಎಂದು ಹೆಸರಿಟ್ಟಿದ್ದೆವು. ಅದು ಕಿತ್ತುಕೊಂಡು ಓಡಲು ಶುರು ಮಾಡಿದರೆ ಕನಿಷ್ಟ ಐದಾರು ಕಿಲೋಮೀಟರ್ ಓಡುತ್ತಿತ್ತು. ಅದನ್ನು ಹಿಡಿದು ತರುವುದು ಅತ್ಯಂತ ಸಾಹಸಮಯವಾದ ಕೆಲಸವಾಗಿತ್ತು. ಆಗ ಎಲ್ಲರ ಮನೆಯಲ್ಲೂ ಇಂತಹಾಆ ಗೌರಿಯರು ಇದ್ದರು. ಎಲ್ಲರ ಮನೆಯ ಗೌರಿಯರ ಕಥೆಯೂ ಇದೇ ತರಹದ್ದಾಗಿತ್ತು.
ಹಾಲು ಕೊಡುವ ವಿಚಾರದಲ್ಲೂ ಅಷ್ಟೇ. ಬಹುತೇಕ ಗೌರಿಯರು ಹಾಲು ಕರೆಯುವ ಸಮಯದಲ್ಲಿ ಕೊಟ್ಟಿಗೆಯಲ್ಲಿ ಮನೆಯವರೊಂದಿಗೆ ಜಗಳಕ್ಕೆ ಬೀಳುತ್ತಿದ್ದರು. ಆ ಜಗಳದಲ್ಲಿ ಆ ಗೌರಿಯರನ್ನು ಮಣಿಸಿ ಹಾಲು ಕರೆದುಕೊಂಡು ಬರಬೇಕಾದರೆ ಆ ಮನೆಯ ಹೆಂಗಸರುಗಳು ಅಷ್ಟೇ ಗಟ್ಟಿಗಿತ್ತಿಯರಾಗಬೇಕಿತ್ತು.

ಈಗ ಓಡುವ ಹಸುಗಳಿರಲಿ, ಹಾಲು ಕರೆಯುವಾಗ ಕಾಲನ್ನು ಎತ್ತಲೂ ಆಗದಂತಹಾ ದಷ್ಟಪುಷ್ಟ ಕ್ರಾಸ್ ಹಸುಗಳು ಪ್ರತಿಮೆಯಂತೆ ನಿಂತಿರುತ್ತವೆ. ಕಾಳಜಿಯನ್ನು ಹಾಗೇ ಉಳಿಸಿಕೊಂಡು, ಬಾಯ್ತುಂಬಾ ಬೈಯ್ಯುವುದನ್ನು ಮರೆತ ಹೆಂಗಸರು, ಕ್ರಿಮಿನಾಶಕಗಳನ್ನು ಜೇಬಿನಲ್ಲಿಟ್ಟುಕೊಂಡು ಚೀಪರ್ ಎಣ್ಣೆಯನ್ನು ದುಬಾರಿ ಬೆಲೆಗೆ ಕೊಂಡು ಕುಡಿದು ತಿರುಗಾಡುವ ಗಂಡಸರು, ಗೋಮಾಳದ ತುಂಬಾ ಸೀಳಿನಂತಹಾ ಗೆರೆಗಳ ಬದುಗಳು, ಎದುರಿಗೆ ತಂದು ಬಾಯಿಗೆ ಹಿಡಿದರೆ ಮಾತ್ರ ಮೇಯುವ ಹಸುಗಳು…
ಇದೆಲ್ಲಾ ನಾನು ಕಥೆ ಬರೆಯುವ ಕಾಲಕ್ಕೆ ನೋಡಲು ಸಿಗುವ ನೋಟಗಳು..

‍ಲೇಖಕರು avadhi

21 January, 2020

1 Comment

  1. T S SHRAVANA KUMARI

    ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading