ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋಪಾಲ ವಾಜಪೇಯಿ ಕಾಲಂ : ಸದ್ದು ಮಾಡುವ ರೊಟ್ಟಿ!?

ಸುಮ್ಮನೇ ನೆನಪುಗಳು – 18

ಸ್ವಲ್ಪ ನೆನಪು ಮಾಡಿಕೊಳ್ಳಿ… ಮಿರಜ್ ಸಂಸ್ಥಾನಿಕ ಬಾಳಾಸಾಹೇಬ ಪಟವರ್ಧನರು ರಾಣೀಸಾಹೇಬರೊಂದಿಗೆ ನಮ್ಮ ಊರಿಗೆ ಬರುತ್ತಿದ್ದ ಸಂದರ್ಭದ ಆ ಸಂಭ್ರಮದ ಕ್ಷಣಗಳನ್ನು… ಈ ಹಿಂದೊಮ್ಮೆ ವರ್ಣಿಸಿದ್ದೆನಲ್ಲ…

ಅದೇ, ಸಂಸ್ಥಾನಿಕ ದಂಪತಿಯನ್ನು ಎದುರುಗೊಳ್ಳಲು ಗುಡಗೇರಿ ಅಗಸಿಯಲ್ಲೊಂದು ದೊಡ್ಡ ಕಮಾನು ; ಕಿಲ್ಲೆಯವರೆಗೆ ಅವರನ್ನು ಕರೆದೊಯ್ಯಲು ಮೆರವಣಿಗೆಯ ಏರ್ಪಾಟು ; ಆ ಮೆರವಣಿಗೆ ಸಾಗುವ ರಸ್ತೆಯ ಇಕ್ಕೆಲಗಳಿಗೆ ತಳಿರು ತೋರಣ ಸಾಲು ; ಥಳಿ (ನೀರು ಚಿಮುಕಿಸುವುದು) ರಂಗೋಲಿ ; ಕೈಯಲ್ಲಿ ಬಣ್ಣ ಬಣ್ಣದ ರಂಗೋಲಿ ಸಿದ್ಧಪಡಿಸಿಕೊಂಡು ನಾನಾ ನಮೂನೆಯ ಚಿತ್ತಾರಗಳನ್ನು ಬಿಡಿಸಲು ಹೆಂಗಸರಲ್ಲೇ ನಾ ಮುಂದು ತಾ ಮುಂದು ಎಂಬ ಪೈಪೋಟಿ ; ಅವರೆಲ್ಲ ಪರಸ್ಪರ ಚೇಷ್ಟೆ ಮಾಡಿಕೊಳ್ಳುತ್ತ, ಹಿಗ್ಗಿನಿಂದಲೇ ರಸ್ತೆಯ ಇಕ್ಕೆಲಗಳನ್ನೂ ತಮ್ಮ ಕೈಚಳಕದಿಂದ ಅಂದಗೊಳಿಸಿಬಿಡುತ್ತಿದ್ದರು ಅಂತ ಹೇಳಿದ್ದೆನಲ್ಲ…

ಮತ್ಯಾಕೆ ಈ flashback ಎಂದು ಹುಬ್ಬು ಗಂಟಿಕ್ಕಬೇಡಿ. ನಾನೀಗಬಾಳಾಸಾಹೇಬರ ವಿಚಾರವನ್ನು ಸುತರಾಂ ಪುನರಾವರ್ತಿಸುವುದಿಲ್ಲ…

ಆದರೆ, ಅವರ ಧರ್ಮಪತ್ನಿ ರಾಣೀ ಸಾಹೇಬ ಉಮಾಬಾಯಿ ಪಟವರ್ಧನರ ಬಗ್ಗೆ ಹೇಳದೇ ಮುಂದುವರಿಯುವುದೂ ಇಲ್ಲ. ಹಾಗೆ ಮುಂದುವರಿಯುವುದೂ ಸಾಧ್ಯವಿಲ್ಲ. ಹಾಗೇನಾದರೂ ಮಾಡಿದರೆ ಅದು ‘ಅಪೂರ್ಣ’ ಚಿತ್ರವೆನಿಸುತ್ತದೆ.

ಯಾಕಂದರೆ, ಬಾಳಾಸಾಹೇಬ ಪಟವರ್ಧನರು ಸಂಗೀತ, ಸಂಸ್ಕೃತಿ, ಶಾರೀರಿಕ ಶಿಕ್ಷಣಗಳೇ ಮೊದಲಾದವುಗಳಿಗೆ ಕೊಟ್ಟಷ್ಟೇ ಮಹತ್ವವನ್ನು ರಾಣೀ ಸಾಹೇಬ ಉಮಾಬಾಯಿಯವರು ಶಿಕ್ಷಣ ಮತ್ತು ಮಹಿಳಾ ಜಾಗೃತಿಗೆ ನೀಡಿದರು. ಇವರ ಹೆಸರಿನಲ್ಲೇ ಒಂದು ಶೈಕ್ಷಣಿಕ ಟ್ರಸ್ಟ್ ಕೂಡ ಇತ್ತು.

ಈ ವಿಚಾರಕ್ಕೆ ಆ ಮೇಲೆ ಬರುತ್ತೇನೆ.

ಕಳೆದ ಶತಮಾನದ ಆರಂಭದ ದಶಕಗಳ ಮಹಿಳೆಯರು ಗಂಡ ಹಾಕಿದ ಗೆರೆಯನ್ನು ದಾಟದವರು. ತಲೆತಗ್ಗಿಸಿಕೊಂಡು ಮೈತುಂಬ ದುಡಿಯುತ್ತ ‘ತಮ್ಮತನ’ವನ್ನೇ ಮರೆತವರು. ಮನೆ-ಮಕ್ಕಳು, ಹಬ್ಬ-ಹರಿದಿನ, ಮದುವೆ-ಮುಂಜಿವೆ ಇಷ್ಟೇ ಗೊತ್ತಿದ್ದವರು. ಹೊರಗಿನ ಪ್ರಪಂಚದ ಅರಿವೇ ಇಲ್ಲದೆ ಅಡಿಗೆ ಮನೆಯಲ್ಲೇ ಬದುಕು ದೂಡಿದವರು. ಉಳಿದ ವ್ಯವಹಾರಗಳಲ್ಲಿ ಬಾಯಿ ಹಾಕದವರು.

ಮುಂಬಯಿ ಪ್ರಾಂತದ ನಮ್ಮ ಭಾಗದ ಹೆಂಗಸರಲ್ಲಿ ಆಗ ಓದಿದವರು ತೀರ ಕಡಿಮೆ. ನಮ್ಮೂರಲ್ಲೂ ಅದೇ ಸ್ಥಿತಿ. ಆದರೆ, ಹುಬ್ಬಳ್ಳಿ-ಧಾರವಾಡಗಳಂಥ ಊರುಗಳಲ್ಲಿ ಶಿಕ್ಷಣಗಳೇ ಮುಂತಾದವುಗಳ ಮೂಲಕ ಮಹಿಳೆಯರಿಗೆ ‘ಪ್ರಪಂಚ’ದ ಅರಿವು ಮೂಡಿಸುವ ದಿಶೆಯ ಅನೇಕ ಪ್ರಯತ್ನಗಳು ಆಗಳೇ ಶುರುವಾಗಿದ್ದುವು. ರಾಣೀ ಸಾಹೇಬರಿಗೆ ಅಡಿಗೆ ಮನೆಯಲ್ಲೇ ಬದುಕು ದೂಡುತ್ತಿದ್ದಂಥ ಅವರನ್ನು ‘ಹೊರ ಪ್ರಪಂಚ’ಕ್ಕೆ ಕರೆತರುವ ಇಚ್ಚೆ. ಅವರಲ್ಲಿದ್ದ ಆತ್ಮವಿಶ್ವಾಸವನ್ನು ಜಾಗೃತಗೊಳಿಸುವ ಇಚ್ಚೆ. ಆ ಮೂಲಕ ಮಹಿಳೆಯರೆಲ್ಲ ಮೈಚಳಿ ಬಿಟ್ಟು ಸಮಾಜದ ಕೆಲಸಕ್ಕೆ ತೊಡಗಿಕೊಳ್ಳುವಂತೆ ಮಾಡುವ ಇಚ್ಚೆ. ಅದಕ್ಕೇ ನಮ್ಮ ಊರಿನ ಮಹಿಳೆಯರನ್ನು ಕಿಲ್ಲೆಯ ಗೌರಿ ಪೂಜೆಗೆ ಬರುವಂತೆ ಮಾಡುವುದರ ಮೂಲಕ, ಅವರಿಗಾಗಿ ‘ಪ್ರತಿಭಾ ಸ್ಪರ್ಧೆ’ಗಳನ್ನು ಏರ್ಪಡಿಸುವುದರ ಮೂಲಕ ರಾಣೀ ಸಾಹೇಬರು ಈ ಕಾರ್ಯವನ್ನು ಸಾಧಿಸಲು ಮುಂದಾದರು. ಇಂಥ ಜಾಗೃತಿಯ ಕೆಲಸಕ್ಕೆ ಹೆಂಗಸರನ್ನು ಸೇರಿಸಲು ‘ಪೂಜೆ’ಗಿಂತ ಬೇರೆ ಯಾವ ಒಳ್ಳೆಯ ಉಪಾಯವಿದ್ದೀತು?

ನಾಲ್ಕು ಜನ ಪರಸ್ಪರ ಭೇಟಿಯಾದರೆ ವಿಚಾರ ವಿನಿಮಯ ನಡೆಯುತ್ತದೆ. ಹೊಸ ದಾರಿ, ಹೊಸ ಯೋಜನೆ, ಹೊಸ ಯೋಚನೆ ಹೊಳೆಯುತ್ತದೆ. ಮನಸ್ಸು ಉಲ್ಲಸಿತವಾಗುತ್ತದೆ. ‘ಒಗ್ಗಟ್ಟೇ ಬಲ’ವೆಂಬ ಅರಿವು ಮೂಡುತ್ತದೆ. ಒಬ್ಬ ನಿಜವಾದ ಜನವಾದಿ ಇಂಥ ಸಂಘಟನೆಗಳಿಗೆ ಹೆಚ್ಹೆಚ್ಚು ಅವಕಾಶ ಕಲ್ಪಿಸಿಕೊಡುತ್ತಾನೆ. ಆದರೆ ಪ್ರತಿಗಾಮಿ ಇಂಥವಕ್ಕೆ ಅಡ್ಡಿ ಒಡ್ಡುತ್ತಾನೆ. ಜನ ಮನೆ ಬಿಟ್ಟು ಹೊರ ಬರದಂಥ ಉಪಾಯ ಹುಡುಕುತ್ತಾನೆ.

ಲೋಕಮಾನ್ಯರು ಜನಜಾಗೃತಿಗೆ ಸಾರ್ವಜನಿಕ ಗಣೇಶೋತ್ಸವವನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳಲಿಲ್ಲವೇ?

ರಾಣೀ ಸಾಹೇಬ ಉಮಾಬಾಯಿ ಪಟವರ್ಧನರಿಗೆ ತಾವು ಕಿಲ್ಲೆಯಲ್ಲಿ ಬಂದಿಯಾಗಿರಲು ಎಳ್ಳಷ್ಟೂ ಮನಸ್ಸಿರುತ್ತಿರಲಿಲ್ಲ. ಅದಕ್ಕೇ ಮಿರಜಿನಲ್ಲಿಯೇ ಇರಲಿ, ನಮ್ಮೂರಿಗೇ ಬರಲಿ, ಅವರು ಊರ ಹೆಂಗಸರ ಜೊತೆ ಬೆರೆಯುವ, ಬೆರೆತು ಮಾತಾಡುವ ಅವಕಾಶಗಳನ್ನು ಕಲ್ಪಿಸಿಕೊಳ್ಳುತ್ತಿದ್ದರು.

ಬಾಳಾಸಾಹೇಬರೊಡನೆ ರಾಣೀ ಸಾಹೇಬ ಉಮಾಬಾಯಿ ಪಟವರ್ಧನರು ಲಕ್ಷ್ಮೇಶ್ವರಕ್ಕೆ ಬರುತ್ತಿದ್ದರಲ್ಲ… ಬಂದಮೇಲೆ ಮೆರವಣಿಗೆಯಲ್ಲಿ ಕಿಲ್ಲೆಯತನಕ ಸಾಗುತ್ತಿದ್ದರಲ್ಲ… ಆಗ ಅವರ ಲಕ್ಷ್ಯವೆಲ್ಲ ಇರುತ್ತಿದ್ದುದು ಬೀದಿಯ ಇಕ್ಕೆಲಗಳನ್ನು ಅಲಂಕರಿಸಿರುತ್ತಿದ್ದ ವರ್ಣಮಯ ರಂಗೋಲಿಗಳ ಮೇಲೆ. ಹೆಂಗಳೆಯರೆಲ್ಲ ಹಿಗ್ಗಿನಿಂದಲೇ ರಸ್ತೆಯ ಇಕ್ಕೆಲಗಳನ್ನೂ ತಮ್ಮ ಕೈಚಳಕದಿಂದ ಅಂದಗೊಳಿಸಿರುತ್ತಿದ್ದ ಚಿತ್ತಾರಗಳ ಮೇಲೆ… ಯಾವುದಾದರೂ ರಂಗೋಲಿ ಅವರಿಗೆ ಇಷ್ಟವಾಯಿತೋ, ಕೂಡಲೇ ಅಲ್ಲಿಯೇ ನಡೆದುಬರುತ್ತಿದ್ದ ಕಾರಭಾರಿಯನ್ನು ಅದು ಯಾವ ಬಣ (ಓಣಿ), ಅದು ಯಾರ ಮನೆ ಎಂಬುದನ್ನು ಗುರುತಿಸಿಟ್ಟುಕೊಳ್ಳುವಂತೆ ಸೌಜ್ಞೆಯಲ್ಲಿಯೇ ಸೂಚಿಸುತ್ತಿದ್ದರಂತೆ. ರಾಣೀ ಸಾಹೇಬರ ಈ ‘ಆಸಕ್ತಿ’ಯನ್ನು ಅರಿತಿದ್ದ ಕಾರಭಾರಿ ಸಾರೋಟು ನಡೆಸುವಾತನಿಗೆ, ”ರಂಗೋಲಿಗಳು ಕಂಡಾಕ್ಷಣ ಮಂದಗತಿಯಲ್ಲಿ ಸಾಗಬೇಕು,” ಎಂಬ ಸೂಚನೆಯನ್ನು ಮೊದಲೇ ಕೊಟ್ಟುಬಿಟ್ಟಿರುತ್ತಿದ್ದ…

1930 ರ ದಶಕದ ಹೊತ್ತಿಗಾಗಲೇ ಮಹಿಳೆಯರ ಆಲೋಚನೆಗಳಲ್ಲಿ ಸ್ವಲ್ಪ ಬದಲಾವಣೆಯಾಗಿತ್ತು. ಇತ್ತ ಹಳ್ಳಿಯೂ ಅಲ್ಲದ, ಅತ್ತ ಪಟ್ಟಣವೂ ಅಲ್ಲದ ನಮ್ಮ ಊರಿನಂಥಲ್ಲಿಯೂ ಅಡಿಗೆಮನೆಯ ತನಕ ‘ಬದಲಾವಣೆಯ ಗಾಳಿ’ ಬೀಸುವಂತೆ ಮಾಡಿದ ಶ್ರೇಯಸ್ಸು ಖಂಡಿತವಾಗಿ ರಾಣೀ ಸಾಹೇಬ ಉಮಾಬಾಯಿ ಪಟವರ್ಧನರಿಗೆ ಸಲ್ಲಬೇಕು.

ಕಿಲ್ಲೆಯಲ್ಲಿ ಬಾಳಾಸಾಹೇಬರು ಮಾಡುತ್ತಿದ್ದ ಗಣೇಶ ಚವತಿಯ ಹಬ್ಬದ ಬಗ್ಗೆ ನಿಮಗೆ ಈಗಾಗಲೇ ಹೇಳಿದ್ದೆನಷ್ಟೇ. ಆಗ ಗೌರಿಯ ಹಬ್ಬವೂ ಬರುತ್ತದಲ್ಲ… ಅದನ್ನು ಗಮನದಲ್ಲಿಟ್ಟುಕೊಂಡು ರಾಣೀ ಸಾಹೇಬ ಉಮಾಬಾಯಿಯವರು ತಾವು ಬರುವ ಮೊದಲೇ ಕಿಲ್ಲೆಯಲ್ಲಿ ಗೌರಿಯನ್ನು ಕೂರಿಸಿ ಶಾಸ್ತ್ರೋಕ್ತ ಪೂಜೆ ಮಾಡಿಸುವಂತೆ ಸೂಚನೆ ಕಳಿಸಿರುತ್ತಿದ್ದರು. ಅದರ ಏರ್ಪಾಡೆಲ್ಲವೂ ಆಗಿರುತ್ತಿತ್ತು. ರಾಣೀ ಸಾಹೇಬರು ಬಂದಮೇಲೆ ಗೌರೀ ಪೂಜೆಗೂ ನಿಜವಾದ ರಂಗು ಬರುತ್ತಿತ್ತು…!

ಪ್ರತಿವರ್ಷ ಆ ಸಂದರ್ಭದ ಸಂಭ್ರಮಕ್ಕೆಂದೇ ಊರಿನ ಮಹಿಳೆಯರು ಕಾದುಕೊಂಡಿರುತ್ತಿದ್ದರು. ರಾಣೀ ಸಾಹೇಬರ ಆಗಮನದ ವೇಳೆ ಅವರು ಬೀದಿಯ ಇಕ್ಕೆಲಗಳನ್ನು ವರ್ಣಮಯ ರಂಗೋಲಿಗಳಿಂದ ಅಂದಗೊಳಿಸಿರುತ್ತಿದ್ದರಲ್ಲ, ಅದು ಕಿಲ್ಲೆಯವರು ಮಹಿಳೆಯರಿಗಾಗಿ ಏರ್ಪಡಿಸುತ್ತಿದ್ದ ಸ್ಪರ್ಧೆಗಳ ಒಂದು ಭಾಗವೇ ಆಗಿರುತ್ತಿತ್ತು. ಅದಕ್ಕೇ ರಾಣೀ ಸಾಹೇಬರಿಗೆ ಆ ರಂಗೋಲಿಗಳ ಚಿತ್ತಾರಗಳ ಮೇಲೆ ಗಮನ.

ಕಿಲ್ಲೆಯ ಗಣೇಶ ಚತುರ್ಥಿ ಎಂದರೆ ಅದು ಒಂಬತ್ತು ದಿನದ ಕಾರ್ಯಕ್ರಮ. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಗಣೇಶನನ್ನು ಇಟ್ಟು ಪೂಜೆ ಮಾಡುವುದಂತೂ ಸರಿಯೇ. ಆದರೆ, ಯಾರೂ ಕಿಲ್ಲೆಯ ಗಣೇಶನ ಪೂಜೆಯನ್ನು ಎಂದಿಗೂ ಯಾವ ಕಾರಣಕ್ಕೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಗಂಡಸರಿಗೆ ಅದು ದೊರೆಯ ಅರಮನೆಯಲ್ಲಿ ನಡೆಯುವ ಪೂಜೆ ಎಂಬುದಕ್ಕೆ ಮಹತ್ವದ್ದೆನಿಸಿದರೆ, ಮಹಿಳೆಯರಿಗೆ ಅದು ರಾಣೀ ಸಾಹೇಬರ ಜೊತೆ ಗೌರಿಯ ಪೂಜೆಯಲ್ಲಿ ಪಾಲ್ಗೊಳ್ಳುವ ಸುವರ್ಣಾವಕಾಶ. ಅವರು ಏರ್ಪಡಿಸುತ್ತಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಇಲ್ಲದಿದ್ದರೆ, ಆ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದವರ ಜೊತೆ ಕಿಲ್ಲೆಯ ಒಳಭಾಗದಲ್ಲಿ ಒಂದಷ್ಟು ಹೊತ್ತು ಅಡ್ಡಾಡುವ ಅವಕಾಶ. ಕೆಲವೊಮ್ಮೆ ಅರಮನೆಯವರು ತುಂಬುತ್ತಿದ್ದ ಉಡಿಯನ್ನು ಪಡೆಯುವ ಭಾಗ್ಯವೂ ಇವರದಾಗುತ್ತಿತ್ತು.

ನಾನಿಲ್ಲಿ ಪೂಜೆಯ ವಿವರಗಳಿಗೆ ಹೋಗುವದಿಲ್ಲ. ಆದರೆ, ಸಂಸ್ಥಾನದ ಒಬ್ಬ ರಾಣಿ ಉಳಿದ ಹೆಂಗಸರೊಂದಿಗೆ ಸೇರಿ, ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ತಾನೂ ಅವರ ಹಾಗೆಯೇ ; ಅವರಲ್ಲೊಬ್ಬಳು ; ಅವರಿಗಿಂತ ಭಿನ್ನಳೇನಲ್ಲ ಎಂದು ಮಹಿಳೆಯರಿಗೆ ಮನದಟ್ಟು ಮಾಡಿಸುವುದರ ಮೂಲಕ ಅವರ ನಾಚಿಕೆ ಸ್ವಭಾವವನ್ನು, ಅವರಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸುವುದಿದೆಯಲ್ಲ ಅದು ಮುಖ್ಯವೆನಿಸುತ್ತದೆ.

ಹಾಂ… ಈ ಸ್ಪರ್ಧೆಗಳಲ್ಲಿ ಕಿಲ್ಲೆಯ ಸಿಬ್ಬಂದಿ ವರ್ಗದವರ ಹೆಂಗಸರು ಪಾಲ್ಗೊಳ್ಳುವಂತೆಯೇ ಇರಲಿಲ್ಲ.

ಆ ಸ್ಪರ್ಧೆಗಳಾದರೂ ಯಾವವು? ಎಲ್ಲವೂ ಹೆಂಗಸರಿಗೆ ಸಂಬಂಧಪಟ್ಟವುಗಳೇ. ದೇವರ ನಾಮ, ಕಸೂತಿ, ಕೇಶಾಲಂಕಾರ, ಅಡಿಗೆ ಸ್ಪರ್ಧೆಗಳು ಹಿರಿಯ ಹೆಂಗಸರಿಗೆ ಮೀಸಲು. ಕಥಾನಿರೂಪಣೆ, ಭಾಷಣ, ಖೋ ಖೋ, ಮದರಂಗಿ (ಮೆಹಂದಿ) ಶೃಂಗಾರ ಮುಂತಾದವು ಯುವತಿಯರಿಗೆ… ಈ ಪೈಕಿ ದೇವರ ನಾಮದ ಸ್ಪರ್ಧೆಯಲ್ಲಿ ಭಾವಪೂರ್ಣತೆ ಮತ್ತು ಉಚ್ಹಾರಸ್ಪಷ್ಟತೆ ಗಣನೆಗೆ ಬರುತ್ತಿತ್ತು. ಅಡಿಗೆ, ರಂಗೋಲಿ ಮತ್ತು ಕಸೂತಿಗಳಲ್ಲಿ ಅವರವರ ‘ಸ್ವಂತಿಕೆ’ ಹಾಗೂ ‘ಸೃಜನಶೀಲತೆ’ಯೇ ಮುಖ್ಯ. ಪ್ರಶಸ್ತಿಗೆ ಅದೇ ಮಾನದಂಡ. ಸ್ವತಃ ರಾಣೀ ಸಾಹೇಬರೇ ತೀರ್ಪುಗಾರರಾಗಿರುತ್ತಿದ್ದರು. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು, ಹಾಗೂ ವೀಕ್ಷಿಸಲು ಎಲ್ಲ ಹೆಂಗಸರಿಗೂ ಮುಕ್ತ ಅವಕಾಶವಿರುತ್ತಿತ್ತು.

ಇವೆಲ್ಲವುಗಳ ಜೊತೆ, ಒಂದು ವಿಶೇಷ ‘ಪ್ರದರ್ಶನ’. ಮಹಿಳೆಯರು ಮನೆಯಲ್ಲೇ ಮಾಡಿಕೊಂಡು ಬಂದ ಅಪರೂಪದ ವಸ್ತುಗಳ, ಪದಾರ್ಥಗಳ, ಕಲಾಕೃತಿಗಳ ಪ್ರದರ್ಶನ. ಎರಡು-ಮೂರು ದಿನ ಕೆಡದೆ ಉಳಿಯುವಂಥ ಅಡಿಗೆ ಪದಾರ್ಥಗಳನ್ನೂ ಈ ಪ್ರದರ್ಶನದಲ್ಲಿ ಇಡಬಹುದಾಗಿತ್ತು. ನಮ್ಮ ಊರಿನ ಹೆಂಗಳೆಯರ ಸೃಜನಾತ್ಮಕ ಶಕ್ತಿಗೊಂದು ಸಾಕ್ಷಿಯಾಗಿ , ಅವರನ್ನು ಪ್ರೋತ್ಸಾಹಿಸುವ ವೇದಿಕೆಯಾಗಿ ನಿಲ್ಲುತ್ತಿತ್ತು ಈ ಪ್ರದರ್ಶನ.

‘ಪಾಕ ಪ್ರಾವೀಣ್ಯ’ವನ್ನು ಪ್ರದರ್ಶಿಸುವ ಸ್ಪರ್ಧೆಯ ತೀರ್ಪುಗಾರರಾಗಿ ರಾಣೀ ಸಾಹೇಬರೇ ಕೂತುಕೊಂಡಿರುತ್ತಿದ್ದರು. ಆಗೆಲ್ಲ ಅದೆಷ್ಟು ಮೌನ ಎಂದರೆ ಒಗ್ಗರಣೆಗೆ ಹಾಕಿದ ಸಾಸಿವೆ ಕೂಡ ಚಟಪಟ ಸಿಡಿಯಲೋ ಬೇಡವೋ ಎಂದು ಒಳಗೊಳಗೇ ಚಡಪಡಿಸುತ್ತಿತ್ತು. ಅಕಸ್ಮಾತ್ತಾಗಿ ಯಾವುದಾದರೂ ಅಡಿಗೆಯ ಮಸಾಲೆಯ ಘಮ ಮೂಗನ್ನಡರಿ, ಯಾರಾದರೂ ‘ಆಹಾ!’ ಎಂದು ಉದ್ಗರಿಸಿದರೆ ಮಾತ್ರ ಮೌನಭಂಗವಾಗಬೇಕು, ಅಷ್ಟೇ. ಹಾಗೆ ‘ಆಹಾ!’ ಎಂದು ಉದ್ಗರಿಸಿದವರು ಸ್ವತಃ ರಾಣೀ ಸಾಹೇಬರೇ ಹೊರತು, ಬೇರಾರೂ ಆಗಿರುತ್ತಿರಲಿಲ್ಲ.

ಈಗೀಗ ಟೀ.ವಿ. ಚಾನಲ್ಲುಗಳು ಏರ್ಪಡಿಸುತ್ತಿರುವ ಅಡುಗೆ ಕಾರ್ಯಕ್ರಮ ನೋಡಿದಾಗೆಲ್ಲ ತೊಂಬತ್ತರ ನಮ್ಮವ್ವ ಮೂಗು ಮುರಿಯುತ್ತಿರುತ್ತಾಳೆ. ಅಲ್ಲಿ ಕೊಟ್ಟ ಗಡುವಿನೊಳಗೆ, ಕೊಟ್ಟ ಸಾಮಗ್ರಿಗಳನ್ನು ಬಳಸಿ ಅಡಿಗೆ ಮಾಡಿ ತೋರಿಸುವುದನ್ನು ನೋಡಿ ನಗುತ್ತಾಳೆ. ಅವರೇನಾದರೂ ಸಾಮಾನು ಹಾಕುವುದು ಹೆಚ್ಚು ಕಮ್ಮಿ ಆಯಿತೆನಿಸಿದರೆ ಈಕೆ ಕೂತಲ್ಲಿಯೇ ‘ತ್ಚು ತ್ಚು… ಊಹೂಂ… ಹಂಗಲ್ಲ’ ಎನ್ನುತ್ತಿರುತ್ತಾಳೆ.

ಕಿಲ್ಲೆಯ ಆ ಅಡಿಗೆ ಮುಂತಾದ ಸ್ಪರ್ಧೆಗಳನ್ನು ಕಣ್ಣಾರೆ ಕಂಡಾಕೆ ನಮ್ಮವ್ವ. ಅಷ್ಟೇ ಅಲ್ಲ, ಸ್ವತಃ ಭಾಗವಹಿಸಿದಾಕೆ. ಲಕ್ಷ್ಮೇಶ್ವರ ನಮ್ಮ ಅವ್ವನಿಗೆ ‘ಅಜ್ಜಿಯ ಮನೆ’ಯೂ ಹೌದು, ‘ಅತ್ತೆಯ ಮನೆ’ಯೂ ಹೌದು… ಸೋದರಮಾವನಿಗೇ ಅವಳನ್ನು ಕೊಟ್ಟಾಗಿತ್ತಲ್ಲ… ಮೊದಲಿನಿಂದಲೂ ಅಜ್ಜಿಗೆ ನಮ್ಮ ಅವ್ವನ ಮೇಲೆ ಬಲು ಪ್ರೀತಿ (ಆಕೆ ನಮ್ಮ ಅವ್ವನ ದೊಡ್ಡವ್ವ.) ಆಕೆಗೆ ಬರೀ ಇಬ್ಬರು ಗಂಡುಮಕ್ಕಳು. ಹೀಗಾಗಿ ಆಕೆ ನಮ್ಮ ಅವ್ವನನ್ನೇ ಮಗಳಿಗಿಂತ ಹೆಚ್ಚಾಗಿ ಹಚ್ಚಿಕೊಂಡಿದ್ದಳು. ತನ್ನ ಹಿರಿಯರು ತನಗೆ ಹೇಳಿಕೊಟ್ಟ ‘ಸುಖಸಂಸಾರದ ಸೂತ್ರ’ಗಳನ್ನು ಆಕೆ ಈ ‘ಪ್ರೀತಿಯ’ ಮಗಳಿಗೆ ಹೇಳಿಕೊಟ್ಟಿದ್ದಳು.

ನಮ್ಮ ಅಜ್ಜಿಯದು ಅಡಿಗೆಯಲ್ಲಿ ಎತ್ತಿದ ಕೈ. ಆಕೆ ಸಾಕ್ಷಾತ್ ಅನ್ನಪೂರ್ಣೆ. ರಾತ್ರಿ ಅಪರಾತ್ರಿಯಲ್ಲಿ ಯಾರಾದರೂ ಅತಿಥಿಗಳು ಬಂದರೂ ಕನಿಷ್ಠ ಇಬ್ಬರಿಗಾಗುವಷ್ಟು ಅಡಿಗೆಯಾದರೂ ಅಜ್ಜಿಯ ಮನೆಯಲ್ಲಿ ಸ್ಟಾಕ್ ಇರುತ್ತಿತ್ತು. ಒಂದು ವೇಳೆ ಹಾಗೇನೂ ಮಿಕ್ಕುಳಿದಿಲ್ಲ ಎಂಬಂಥ ಸಂದರ್ಭದಲ್ಲಿ ಅಕಸ್ಮಾತ್ ಯಾರಾದರೂ ತಡರಾತ್ರಿಯಲ್ಲಿ ಬಂದುಬಿಟ್ಟರೆನ್ನೋಣ. ಅಜ್ಜಿ ಏನೂ ಟೆನ್ಶನ್ ಮಾಡಿಕೊಳ್ಳದೆ, ಒಲೆಯನ್ನೂ ಹೊತ್ತಿಸದೆ (ಆ ಕಾಲದಲ್ಲಿ ಒಲೆ ಹೊತ್ತಿಸುವುದೇ ಒಂದು ದೊಡ್ಡ ಸಾಹಸ…) ಬಂದವರು ತಿಂದು ತೃಪ್ತಿಯಾಗುವಷ್ಟು ಪದಾರ್ಥವನ್ನು ಸಿದ್ಧಪಡಿಸಿ ಬಡಿಸಿಬಿಡುತ್ತಿದ್ದಳು. ಎಲ್ಲವೂ ಮನೆಯಲ್ಲಿ ಸುಲಭಲಭ್ಯವಿರುವಂಥ ಪದಾರ್ಥಗಳೇ. ಅಂಥ ಅಜ್ಜಿಯ ಬಳಿ ನುರಿತವಳು ನಮ್ಮ ಅವ್ವ. ಅದಕ್ಕೇ ಆ ‘ಹದ’ವನ್ನು ಕರಗತಗೊಳಿಸಿಕೊಂಡವಳು. ಹೀಗೊಮ್ಮೆ ರಜೆಗೆಂದು ಲಕ್ಷ್ಮೇಶ್ವರಕ್ಕೆ ಬಂದ ನಮ್ಮ ಅವ್ವನನ್ನೂ ಕಿಲ್ಲೆಯ ಗೌರಿ ಪೂಜೆಗೆ ಕರೆದೊಯ್ದಿದ್ದಾಳೆ ಅಜ್ಜಿ. ಅಲ್ಲಿಯ ಅಡಿಗೆ ಸ್ಪರ್ಧೆಯಲ್ಲಿ ತನ್ನ ಜೊತೆ ಈಕೆಯ ಹೆಸರನ್ನೂ ಬರೆಸಿದ್ದಾಳೆ. ”ಇಲ್ಲಿಲ್ಲ, ಇಕೀ ಇನ್ನೂ ಹುಡಿಗಿ. ಬೇಕಾದ್ರ ಈಕಿ ಭಾಷಣ ಅಥವಾ ಖೋ ಖೋ ಸ್ಪರ್ಧಾಕ್ಕ ಹೋಗಲಿ,” ಎಂದಿದ್ದಾರೆ ಒಬ್ಬ ಸಿಬ್ಬಂದಿ. ಅಜ್ಜಿ, ”ಈಕಿ ಅಡಿಗೀ ಮಸ್ತ್ ಮಾಡತಾಳ, ಕೊಟ್ಟು ನೋಡ್ರಿ ಒಂದು ಅವಕಾಶಾ…” ಎಂದೆಲ್ಲ ತಾರೀಫು ಮಾಡಿ, ನಮ್ಮ ಅವ್ವನೂ ಅಡಿಗೆ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ನೋಡಿಕೊಂಡಿದ್ದಾಳೆ. ಮಜಾ ಸಂಗತಿ ಅಂದರೆ, ಆ ವರ್ಷ ನಮ್ಮ ಅವ್ವ ಮಾಡಿದ ಅಡಿಗೆ ಪದಾರ್ಥಕ್ಕೆ ‘ವಿಶೇಷ ಬಹುಮಾನ’ ಮತ್ತು ಅಜ್ಜಿಯ ಅಡಿಗೆಗೆ ‘ಪ್ರಥಮ ಬಹುಮಾನ’ ಬಂದಿತಂತೆ. ನಮ್ಮ ಅವ್ವ ‘ಮುರಿಗೀ ಕರ್ಚೀಕಾಯಿ’ ಮಾಡಿದ್ದರೆ, ಅಜ್ಜಿ ‘ಸುರಳೀ ಹೋಳಿಗೆ’ಯನ್ನು ವಿನೂತನ ರೀತಿಯಲ್ಲಿ ಮಾಡಿದ್ದಳು. ರಾಣೀ ಸಾಹೇಬರು ಇವೆರಡನ್ನೂ ಮೆಚ್ಚಿಕೊಂಡು, ನಾನು ಈ ಮೊದಲೇ ಹೇಳಿದ್ದೆನಲ್ಲ, ಆ ‘ಪ್ರದರ್ಶನ’ದಲ್ಲಿ ಇರಿಸಲು ಶಿಫಾರಸು ಮಾಡಿದರಂತೆ.

ಈ ಪ್ರದರ್ಶನವನ್ನು ಸ್ವತಃ ಬಾಳಾಸಾಹೇಬರು ತುಂಬ ಆಸ್ಥೆಯಿಂದ ವೀಕ್ಷಿಸುತ್ತಿದ್ದರಂತೆ. ಇನ್ನು ಅವರು ಮೆಚ್ಚಿದರೆ ಮುಗಿದೇ ಹೋಯಿತು. ಆ ಪದಾರ್ಥವನ್ನು ಮಾಡಿದಾಕೆಗೆ ಸ್ವರ್ಗ ಮೂರೇ ಗೇಣು ದೂರ…!

ಮಾರನೆಯ ವರುಷವೂ ನಮ್ಮ ಅವ್ವ ಕಿಲ್ಲೆಯ ಸ್ಪರ್ಧೆಯಲ್ಲಿ ಪಾಲ್ಗೊಂಡಳಂತೆ. ಅದಕ್ಕೂ ಮೂರು ದಿನ ಮೊದಲೇ ಆಕೆ ಮನೆಯಲ್ಲಿ ತಾನೇ ಮಾಡಿದ್ದ ಪದಾರ್ಥವನ್ನು ‘ಪ್ರದರ್ಶನ’ದಲ್ಲಿ ಇಟ್ಟು ಎಲ್ಲರ ಅಚ್ಚರಿಗೂ ಕಾರಣಳಾದಳಂತೆ. ಈ ಪ್ರದರ್ಶನವನ್ನು ನೋಡಲು ಬಂದ ಬಾಳಾಸಾಹೇಬರೂ, ಆ ಸಲ ಅವರೊಂದಿಗೆ ಅಲ್ಲಿಗೆ ಬಂದಿದ್ದ ಬ್ರಿಟಿಶ್ ಅಧಿಕಾರಿಗಳೂ ಈ ಪ್ರದರ್ಶನವನ್ನು ನೋಡಿ ವಿಸ್ಮಿತರಾದರಂತೆ…

ನಮ್ಮ ಅವ್ವ ಒಂದು ರೊಟ್ಟಿ ಮಾಡಿದ್ದಳು. ‘ರೊಟ್ಟಿ ತಾನೇ… ಅದರಲ್ಲೇನು ವಿಶೇಷ?’ ಎಂದು ನೀವು ಕೇಳಲೇಬೇಕು, ನಾನು ಹೇಳಲೇಬೇಕು. ಯಾಕಂದರೆ ಅದು ಅಂತಿಂಥ ರೊಟ್ಟಿಯಾಗಿರಲಿಲ್ಲ. ಈ ಉತ್ತರ ಭಾರತದ ‘ಚನಾ ಬಟೋರಾ’ ಅಂತಾರಲ್ಲ, ಅದರಲ್ಲಿಯ ಬಟೋರಾವನ್ನು ಕಣ್ಣಮುಂದೆ ತಂದುಕೊಳ್ಳಿ. ನಮ್ಮ ಅವ್ವ ಮಾಡಿದ ರೊಟ್ಟಿ ಆ ಬಟೋರಾದಷ್ಟು ದೊಡ್ಡದು ಮತ್ತು ಅಷ್ಟು ಉಬ್ಬಿದ್ದು…! ಬೆರಳು ಚುಚ್ಚಿದರೆ ಬಟೋರಾ ‘ಪುಸ್’ ಎಂದು ಒಡೆದು ತುಂಡು ತುಂಡಾಗುತ್ತದೆ. ಆದರೆ ನಮ್ಮ ಅವ್ವ ಒಲೆಯ ಮೇಲಿಟ್ಟು, ಎರಡೂ ಬದಿಗೆ ಏಕಪ್ರಕಾರವಾಗಿ ಉಬ್ಬುವಂತೆ ಮಾಡಿ, ಒಣಗಿಸಿದ್ದ ಬಿಳಿ ಜೋಳದ ಕಟಗ ರೊಟ್ಟಿ ಹಾಗೆಲ್ಲ ಬಡಪೆಟ್ಟಿಗೆ ಪುಡಿಯಾಗುವದಲ್ಲ… ಹಾಗೇ ನಸುಗತ್ತಲಲ್ಲಿ ದೂರದಲ್ಲಿಟ್ಟು ನೋಡಿದರೆ ಥೇಟ್ ಆ ಚಂದ್ರಾಮನೆ… ಇದಿಷ್ಟೇ ಆಗಿದ್ದರೆ ಬಾಳಾಸಾಹೇಬರಾಗಲೀ ಅವರೊಂದಿಗೆ ಬಂದಿದ್ದ ಬ್ರಿಟಿಶ್ ಅಧಿಕಾರಿಗಳಾಗಲೀ ಯಾಕೆ ವಿಸ್ಮಿತರಾಗಬೇಕಿತ್ತು?

ಯಾಕಂದರೆ, ನಮ್ಮ ಅವ್ವ ಮಾಡಿದ್ದ ಆ ವಿಶಿಷ್ಟ ರೊಟ್ಟಿ ತನ್ನ ಹೊಟ್ಟೆಯೊಳಗೆ ಅದೇನನ್ನೋ ‘ಅಡಗಿಸಿ’ಕೊಂಡಿತ್ತು. ಅಲುಗಾಡಿಸಿದಾಗೆಲ್ಲ ಚಿಕ್ಕ ಮಕ್ಕಳ ಆಟಿಗೆಯ ಗಿಲಿಗಿಂಚಿಯ ಹಾಗೆ ಕಳ ಕಳ ಸದ್ದು ಮಾಡುತ್ತಿತ್ತು…

ಸದ್ದು ಮಾಡುವ ಈ ರೊಟ್ಟಿಯನ್ನು ಆ ಬ್ರಿಟಿಶ್ ಅಧಿಕಾರಿ ಎತ್ತಿ ಹಿಡಿದು, ಅಲುಗಾಡಿಸಿ ನೋಡಿ, ಪಕ್ಕದಲ್ಲಿದ್ದ ಬಾಳಾಸಾಹೇಬರತ್ತ ಪ್ರಶ್ನಾರ್ಥಕ ದೃಷ್ಟಿಯಿಂದ ನೋಡಿದನಂತೆ… ಇದು ಹೇಗೆ ಸಾಧ್ಯ ಎಂಬುದು ಆತನ ಜಿಜ್ಞಾಸೆ. ”ಇದರಲ್ಲಿರುವ ಆ ವಸ್ತು ಯಾವದು? ಇದರಲ್ಲಿ ಆ ವಸ್ತುವನ್ನು ಎಲ್ಲಿಂದ ತೂರಿಸಿದ್ದು? ತೂರಿಸಿದ ಮೇಲೆ ಹೇಗೆ ಅದನ್ನು ಗಟ್ಟಿಯಾಗಿ seal ಮಾಡಿದ್ದು ?” ಎಂದೆಲ್ಲ ಆತ ಬಾಳಾಸಾಹೇಬರನ್ನು ಕೇಳತೊಡಗಿದನಂತೆ. ಹಳ್ಳಿಗಳಲ್ಲಿ ಮನೆಯ ಗೋಡೆಗಳ ಮೇಲೆ ತಟ್ಟಿರುವ ಬೆರಣಿಯನ್ನು ನೋಡಿ, ನಿಬ್ಬೆರಗಾಗಿ, ”ಅರೆ, ನಿಮ್ಮಲ್ಲಿ ದನಗಳು ಅದು ಹೇಗೆ ಗೋಡೆಯ ಮೇಲೆ ಚಂದ್ರನಂತೆ ಇಷ್ಟು ದುಂಡಗೆ ಇಷ್ಟು ಚಂದವಾಗಿ, ಸಗಣಿ ಹಾಕುತ್ತವೆ?” ಎಂದು ಕೇಳುವಂಥ ಜನ ಅವರು…! ಇನ್ನು ಇಂಥ ರೊಟ್ಟಿಯನ್ನು ನೋಡಿದರೆ ಅಚ್ಚರಿಪಡದೇ ಏನು?

ವಾಸ್ತವವಾಗಿ ನಮ್ಮ ಅವ್ವ ರೊಟ್ಟಿ ಮಾಡುವಾಗ ಅದರಲ್ಲಿ ಒಂದು ‘ಪೈ’ ನಾಣ್ಯವನ್ನು ಚಾಣಾಕ್ಷತೆಯಿಂದ ಇಟ್ಟು, ರೊಟ್ಟಿ ಉಬ್ಬುವಂತೆ ನೋಡಿಕೊಂಡಿದ್ದಳು. ಅಲುಗಾಡಿಸಿದಾಗ ಕಳ ಕಳ ಸದ್ದು ಕೇಳಿಸುತ್ತಿತ್ತು, ಅಷ್ಟೇ… ಹಾಂ. ‘ಪೈ’ ಅಂತ ಹೇಳಿದೆನಲ್ಲ… ಅದು ಆ ಕಾಲದ ನಾಣ್ಯಪದ್ಧತಿಯಲ್ಲೇ ಅತ್ಯಂತ ಕನಿಷ್ಠ ಮೌಲ್ಯದ್ದು. ಈಗ ‘ರೂಪಾಯಿ-ನಯಾಪೈಸೆ’ ಎಂದು ಲೆಕ್ಕ ಬರೆಯುವ ಹಾಗೆ, ಆಗ ‘ರೂಪಾಯಿ-ಆಣೆ-ಪೈ’ ಎಂದು ಲೆಕ್ಕ ಬರೆಯುವ ರೂಢಿ. ನಾವು ತೊಡುವ ಶರ್ಟ್ ಗುಂಡಿಗಿಂತ ಸ್ವಲ್ಪ ದೊಡ್ಡದಾದ, ತೆಳುವಾದ ತಾಮ್ರದ ನಾಣ್ಯ ಈ ‘ಪೈ’. (”ದುಡದದ್ದರಾಗ ಪೈಪೈ ಕೂಡಿಸಿ, ಇವಗ ತಿನಿಸಿ ಉಣಿಸಿ ಬೆಳಿಸಿ ಪೈಲವಾನನ್ನ ಮಾಡೀನಿ…” ಎಂದು ತಾನು ಪಟ್ಟ ಕಷ್ಟದ ಬಗ್ಗೆ ಒಬ್ಬ ಹೇಳಿಕೊಳ್ಳುತ್ತಿದ್ದ ಬಗ್ಗೆ ಯಾವುದೋ ಕಥೆಯಲ್ಲಿ ಓದಿದ ನೆನಪು.)

ಅವತ್ತು ‘ಸದ್ದು ಮಾಡುವ ರೊಟ್ಟಿ’ ಊರೆಲ್ಲ ಸುದ್ದಿ ಮಾಡಿತು. ಯಾಕೆ ಗೊತ್ತೇ? ಆ ಬ್ರಿಟಿಶ್ ಅಧಿಕಾರಿ ಮತ್ತು ಬಾಳಾಸಾಹೇಬರು ತಮ್ಮ ತಮ್ಮ ಕಡೆಯಿಂದ ನಮ್ಮ ಅವ್ವನಿಗೆ ವಿಶೇಷ ಬಹುಮಾನಗಳನ್ನು ನೀಡಿ ‘ವಾಹವ್ವಾ’ ಮಾಡಿದರಂತೆ…!

ಹಾಂ… ಇನ್ನೊಂದು ವಿಚಾರ ಹೇಳಿ ಈ ಕಂತನ್ನು ಮುಗಿಸುತ್ತೇನೆ. ಕಿಲ್ಲೆಯ ಗೌರಿ ಪೂಜೆಗೆ ಬಂದ ಮುತ್ತೈದೆಯರಿಗೆಲ್ಲ ಅರಿಶಿನ-ಕುಂಕುಮ ನೀಡಿ, ಉಡಿ ತುಂಬಿದ ಮೇಲೆ, ದಕ್ಷಿಣೆಯ ವ್ಯವಸ್ಥೆಯನ್ನೂ ಅಲ್ಲಿ ಮಾಡಿರುತ್ತಿದ್ದರಂತೆ. ಅದೂ ಒಂದು ‘ಅಚ್ಚರಿದಾಯಕ’ ರೀತಿಯಲ್ಲಿ…

ಉಡಿ ತುಂಬಿಸಿಕೊಂಡ ಮೇಲೆ ಮುತ್ತೈದೆಯರೆಲ್ಲ ಒಬ್ಬೊಬ್ಬರಾಗಿ ಬಲಗಡೆಯ ಕೋಣೆಯನ್ನು ಪ್ರವೇಶಿಸಬೇಕು. ಆ ಕೋಣೆಯಲ್ಲಿ ನಟ್ಟನಡುವೆ ಒಂದು ಎತ್ತರದ ಮೇಜು. ಅದರ ಮೇಲೊಂದು ಹರಿವಾಣ. ಅದರಲ್ಲಿ ರಾಶಿ ಹಾಕಿ ಪೇರಿಸಿಟ್ಟ ನಾಲ್ಕಾಣೆಯ ನಾಣ್ಯಗಳು. ಅದನ್ನು ಕಾಯಲು ಒಬ್ಬಳು ಅರಮನೆ ಸಿಬ್ಬಂದಿ. ಒಳಗೆ ಹೋದ ಮುತ್ತೈದೆ ಆ ರಾಶಿಯಿಂದ ಒಂದು ಮುಷ್ಟಿ ನಾಣ್ಯಗಳನ್ನು ಎತ್ತಿಕೊಳ್ಳಬೇಕು. ಒಂದೇ ಒಂದು ಮುಷ್ಟಿ ನಾಣ್ಯಗಳನ್ನು… ಅಷ್ಟೇ. ಹಾಗೆ ಎತ್ತಿಕೊಂಡ ಮುಷ್ಟಿ ನಾಣ್ಯಗಳ ಸಮೇತ ಇನ್ನೊಂದು ಬಾಗಿಲಿನ ಮೂಲಕ ಹೊರಬರಬೇಕು. ಆಕೆ ಹೊರಬಂದ ಮೇಲೆ ಅಲ್ಲಿದ್ದ ಆ ಸಿಬ್ಬಂದಿಯ ಹೆಂಗಸು ಮತ್ತೆ ಆ ನಾಣ್ಯಗಳನ್ನೆಲ್ಲ ಪೇರಿಸಿ ಇಡಬೇಕು… (ಆ ಕೋಣೆಯಲ್ಲಿ ನಡೆಯುತ್ತಿದ್ದ ‘ಎಲ್ಲ’ವನ್ನೂ ವೀಕ್ಷಿಸುವ ಒಂದು ಗುಪ್ತ ವ್ಯವಸ್ಥೆಯೂ ಅಲ್ಲಿತ್ತು !)

ಒಂದು ಮುಷ್ಟಿ ನಾಣ್ಯಗಳನ್ನು ಹಿಡಿದು ಹೊರಬಂದ ಮುತ್ತೈದೆ ಎಷ್ಟು ದಕ್ಷಿಣೆ ಬಂದಿದೆ ಎಂದು ಎಣಿಸುವುದು ಸಹಜವಷ್ಟೇ…

ಎಷ್ಟು ಬಂದಿರಬಹುದು ಅಂತ ನೀವು ಊಹಿಸಿ ನೋಡೋಣ…

ರಾಣೀ ಸಾಹೇಬ ಉಮಾಬಾಯಿ ಪಟವರ್ಧನ

 

‍ಲೇಖಕರು G

14 October, 2012

16 Comments

  1. Atmananda

    ಸರ್ ಸಗಣಿ ಮತ್ತು ಚಂದಪ್ಪ!!! ಹ ಹ ಹ ಹ… ಭಾಲ್ ಚಂದ್ ಇತ್ತು ಓದೋಕೆ… ನಮ್ ಅವ್ವನ್ ಭಕ್ರಿ ನೆನಪ ಆತು!!

  2. N Rekha pradeep

    ನಾನಂತೂ ರಾಣಿಸಾಹೇಬರ ಜೊತೆ ನಿಮ್ಮೂರಿನ ರಂಗವಲ್ಲಿಗಳನ್ನು ನೋಡುತ್ತಾ , ಆ ಬೆರಗುಗಣ್ಣುಗಳ ಹೆಂಗಸರನ್ನು ನೋಡುತ್ತಾ , ಪ್ರದರ್ಶನದಲ್ಲಿ ಇಟ್ಟಿದ್ದ ಅಡಿಗೆಗಳನ್ನು ಕಲ್ಪಿಸಿಕೊಂಡು ಓದಿದ್ದಾಯಿತು. ಅಷ್ಟು ಚೆನ್ನಾಗಿ ಅವುಗಳನ್ನು ನಮ್ಮ ಕಣ್ಮುಂದೆ ಬಿಡಿಸಿದ್ದೀರಿ . ನೀವು ಹೇಳಿದ ಹಾಗೆ ಈಗಿನ ಕಾಲದ ನಾವು ಇಷ್ಟೇ ತಿಣುಕಿದರೂ, ಪ್ರಪಂಚದ ಎಷ್ಟೊಂದು ಅಡಿಗೆ ಪ್ರಕಾರಗಳನ್ನು ನೋಡಿ ಮಾಡಿದರೂ, ಅಂದಿನ ನಮ್ಮ ಅಮ್ಮ , ಅಜ್ಜಿಯರ ಹದವರಿತ ಅಡುಗೆಗಳನ್ನು ಮಾಡಲು ಸಾಧ್ಯವಿಲ್ಲ . ಒಟ್ಟಿನಲ್ಲಿ ರಾಣಿ ಸಾಹೇಬರ ಮಹಿಳೆಯರ ಬಗ್ಗಿನ ಕಾಳಜಿಯನ್ನು ಮೆಚ್ಚಬೇಕಾದ್ದೆ.

  3. sugunamahesh

    ಹಳೆಯ ಕಾಲದ ಸಂಪ್ರದಾಯಗಳೇ ವಿಭಿನ್ನ ಆಗಿನ ಸಂಭ್ರಮದ ಅಡಿಗೆ ಈಗ ಬರುವುದಿಲ್ಲ. ಬಹಳ ಚೆನ್ನಾಗಿ ನಿಮ್ಮ ನಮ್ಮ ಕಣ್ಣಿಗೆ ಕಟ್ಟುವಂತೆ ನಿರೂಪಣೆ ನೀಡಿದ್ದೀರಿ. ಅಂದ ಹಾಗೆ ಒಂದು ಮುಷ್ಟಿಯಲ್ಲಿ ಎಷ್ಟು ನಾಣ್ಯಗಳು ಬಂದಿರಬಹುದೆಂದು ಊಹಿಸಿದ್ರೂ ಗೊತ್ತಾಗುತ್ತಿಲ್ಲ ಹಹಹ ಎಣಿಕೆ ಮಾಡಿದ್ದವರನ್ನೇ ಕೇಳಬೇಕು..:))

  4. umesh desai

    ಗುರುಗಳ ಶರಣೆಂದೆ..ಉಫ್ ಆ ರೊಟ್ಟಿ ಅದರ ಸೊಗಸಾದ ವರ್ಣನಾ ಏನು ಹೇಳಲಿ..
    ನಿಮ್ಮ ಅವ್ವಾವರಿಗೆ ಶಿಸಾನಗಳು. ಇಂಥಾ ಹಿರಿಜೀವ ನೂರ್ಕಾಲ ಬಾಳಬೇಕ್ರಿ..
    ಅದ್ಭುತ ಅನ್ನೂದು ಒಂದು ಶಬ್ಡ ಇದನ್ನ ವರ್ಣನಾ ಮಾಡಲಿಕ್ಕೆ ಕಮಿ ಅದ….

  5. gayathri

    Thumba chennagide, nanna ammana adige ruchi jnaapaka banthu,haage thenaali raamana kathenu jnaapaka banthu, raaja heLida haage thanna buddiyannelaa maaDikeyoLage haakalu avanu, putta kumbaLakaayi peechannu maDikeyoLage haaki beLasi, maDakeyastu maaDi rajanige koduthane, haagide rottiyoLagina naaNya, jaaNmeyella rottiyoLage haakiddare.

  6. ಶಮ್ಮಿ

    ಗತಕಾಲಕ್ಕೆ ಕರಕೊಂಡು ಹೋಯ್ತು ನಿಮ್ಮ ಲೇಖನ…ರಾಣಿ ಸಾಹೇಬರ ಜೊತೆ ನಾನೂ ಇದ್ದಂತೆ…ಅವರ ಮಹಿಳಾ ಜಾಗೃತಿಯ ಉಪಾಯಗಳು ಬಹಳ ಚೆನ್ನಾಗಿವೆ…ಮುಂದ???

  7. ಮಂಜುಳಾ ಬಬಲಾದಿ

    ಗಿಲಿಗಿಲಿಕಿ ಭಕ್ರಿ ಕಥಿ ಛಂದ ಅದ… ಮುತ್ತೈದ್ಯಾರ ಕೈ ಅಗಲದಷ್ಟು ನಾಲ್ಕಾಣೆಗಳು, ಅವೆಷ್ಟೋ ನಾ ಕಾಣೆ 🙂

  8. bharathi bv

    Esht chanda bardidira wajapeyi sir … kannige kattidanthe nimma niroopana shaili…. tumba ishtavaythu

  9. Pushparaj Chauta

    ಇಂಥವರೆಲ್ಲ ಆದರ್ಶರಾಗುತ್ತಾರೆ ಮುಂದಿನ ಪೀಳಿಗೆಗೆ. ತನ್ನ ಸಂಘಟನಾ ಚಾತುರ್ಯ ಮತ್ತು ಒಂದು ಗುರಿಯನ್ನು ಸಾಧಿಸುವ ಛಲ ಇವರಲ್ಲಿತ್ತು.

    ಇನ್ನು ನಮ್ಮ ಹಿರಿಯರ ಚಾಕಚಕ್ಯತೆ ಬಗ್ಗೆ ಮಾತೇ ಎತ್ತುವಂತಿಲ್ಲ. ನೈಪುಣ್ಯತೆ ಸಾಧಿಸುವ ಛಲ ಅವರಲ್ಲಿತ್ತು. ಈಗೀಗ ನಾವೋ ಆಲಸಿಗಳು. ಎಲ್ಲವೂ ರೆಡಿ ಟು ಈಟ್ ನಮಗೆ ಬೇಕು! ಈಳಿಗೆ ಮಣೆಯನ್ನೇ ನೋಡದ ಎಷ್ಟೋ ಮುಖಗಳು ನನ್ನ ಕಣ್ಣೆದುರಿಗೆ ದಿನ ಸಿಗುತ್ತವೆ! ಇನ್ನು ಅಡುಗೆಯ ಮಾತು ಬಿಡಿ. ಎಂಟಿಆರ್ ರಸಂ ಪೌಡರ್… ಅಯ್ಯಂಗಾರ್ಸ್ ಪುಳಿಯೋಗರೆ!

    ಉಳ್ಳಾಗಡ್ಡೀ ಆರೋಗ್ಯಕ್ಕೆ ಒಳ್ಳೆಯದಲ್ಲ, ಕಣ್ಣೀರು ಬರುತ್ತದಲ್ಲ ಹಾಗಾಗಿ!

    ಸರ್, ಜೋಳದ ರೊಟ್ಟಿ ಗುರೆಳ್ಳ್ ಚಟ್ನಿ ರುಚಿ ಇನ್ನೂ ಮರೆಯಲಾಗದು! ಮತ್ತಷ್ಟು ಉಣ್ಣುವ ಬಯಕೆಯಿದೆ.

  10. Anitha Naresh Manchi

    tumbaa chennaagide.. naanoo aa kaaladondige kaalu haakide.

  11. Dr.Vasanthkumar Perla

    ಬರೆವಣಿಗೆಯ ಶೈಲಿ ಆಪ್ತವಾಗಿದೆ. ನಿಮ್ಮ ನೆನಪುಗಳನ್ನ ಈ ರೀತಿ ಬರೆಯುತ್ತಾ ಹೋದರೆ ಉತ್ತಮ ಸಾಹಿತ್ಯ ಆಗಬಲ್ಲುದು. ಅಭಿನಂದನೆಗಳು ವಾಜಪೇಯಿಯವರೇ !

  12. samyuktha

    ಮತ್ತೊಮ್ಮೆ ಹ್ಯಾಟ್ಸ್ ಆಫ್ ಸರ್! ನಿಮ್ಮ ಭಾಷೆಗೆ, ಬರವಣಿಗೆಗೆ ಮತ್ತು ಈ ಕಥೆಗೆ! 🙂

  13. ರಾ.ಶಿ.ಕುಲಕರ್ಣಿ

    ನಿಮ್ಮ ಅಂಕಣಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ. ಇದು ಒಂದು ಅದ್ಭುತ ಸವಿನೆನಪು. ನಮ್ಮ ಹಳೆಯ ನೆನಪುಗಳು ಮತ್ತೆ ಮರುಕಳಿಸುವಂತೆ ಇವೆ ಅಲ್ಲದೆ ಇಂದಿನ ಪೀಳಿಗೆಗೆ ತಿಳಿಯದ ಎಷ್ಟೋ ಪದಗಳು ತಿಳಿಸುತ್ತಿರುವ ಬಗೆ ಬಹಳ ಚಂದ.

  14. ಇಂದುಶೇಖರ ಅಂಗಡಿ

    ನಮ್ಮ ಅವ್ವನೂ ಹಿಂಗ ರೊಟ್ಟಿ ಬಡಿತಿದ್ದಳ್ರಿ ಸಾಹೇಬ್ರ. ಬಿಜಾಪುರ ಜೋಳದ ರೊಟ್ಟಿನ ಗುಂಡಕ ಬಡಿದು,ಹಂಚಿನೊಳಗ ಉಬ್ಬೋ ಹಂಗ ಮಾಡಿ, ಡೈರಕ್ಟ್ ಆಗಿ ನಮ್ಮ ಕೈಯಾಗ ಕೊಡತಿದ್ದಳ್ರಿ. ನಾವ್ ಅದಕ್ಕ ಕರಿಂಡಿ ಹಚಿಗೊಂಡು ಸುರ್ಳಿ ಸುತಿಗೊಂಡು ತಿಂದು ಮುಗಿಸಿ, ಪಾಟೀಚೀಲಾ ತೊಗೊಂಡು ಸಾಲಿಗೆ ಓಡುತಿದ್ದಿವ್ರಿ. ಹೊಲಕ್ಕ ಚರಗಾ ಚಲ್ಲಾಕ ಹೋದಾಗ, ಎಳ್ಳು ಹಚ್ಚಿದ ಕಟಕ ರೊಟ್ಟಿ, ಮುಳುಗಾಯಿ ಎಣಿಗಾಯಿ, ಕೊರೆದ ಹಿಟ್ಟಿನ ಪಲ್ಯೆ ಮರಿಯಾಕಾಗಲ್ಲ. ಈಗ ಅವ್ವಗ ವಯಸ್ಸಾಗೈತಿ. ರೊಟ್ಟಿ ಬಡ್ಯಾಕ ಆಗಲ್ಲಾ. ನನ್ನ ಹೆಂಡತಿ ರೊಟ್ಟಿ ಮಾಡತಾಳ್ ಖರೆ. ಆದರ ಅಕೀ ಚಪಾತಿ ಥರಾ ಲಟ್ಟಿಸಿ ರೊಟ್ಟಿ ಮಾಡಿ ಕೊಡತಾಳ.

  15. ಭಾರತಿ ಉತ್ತರೇಶ್ವರ್

    ನಮ್ಮ ಅವ್ವ ಹೇಳತಿದ್ಲು ನಮ್ಮ ಆಯಿ ಹಿಂಗ ಭಕ್ಕರಿ ಮಾಡಿ ಅದರೊಳಗ ರೊಕ್ಕ ಹಾಕಿ ಬುಡಬುಡಕಿಯವರಂಗ
    ಸಪ್ಪಳ ಮಾಡುವಂಥ ಭಕ್ರಿ ಮತ್ತ ಒಂದರೊಳಗ ಒಂದ ಭಕ್ರಿಮಾಡತಿದ್ದರು.ಇದಕ ಬೆಳ್ಳಿ ಪದಕ ಬಹುಮಾನ
    ತೊಗಂಡಿದ್ದರಂತ ! ಹಿಂಗ ಪಕ್ವಾನ್ನನು ಭಾಳ ರುಚಿ ಮಾಡತಿದ್ದರು . ಸಣ್ಣಕಿದ್ದಾಗ ನಾನು ಸ್ವಲ್ಪ ರುಚಿ ನೋಡೆನಿ
    ಅದ್ಭುತ .ಹುಳಿ ಸಾರು ಕಲಿಸಿದ್ದ ಕೈ ಎರಡೆರಡ ದಿನಾ ಆದರೂ ವಾಸನಿ ಹಂಗ ಇರತಿತ್ತ.ಖರೆ ಈಗ ಅಂಥ
    ಪುಡಿಸಾರ ವಾಸನಿ …..
    ಲೇಖನ ಓದಿ ಭಾಳಾ ಖುಷಿ ಆತು. ಇವೆಲ್ಲಾ ನೆನಪ ಬಂತು.
    ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading