ಗೋಪಾಲ ವಾಜಪೇಯಿ ಕಾಲಂ : 'ಸತ್ತವರ ನೆರಳು'ಗೊಂದು ಸೀನು ಬರೆದೆ!

ಸುಮ್ಮನೇ ನೆನಪುಗಳು – 30

ರಂಗ ನಿರ್ದೇಶಕ ಜಯತೀರ್ಥ ಜೋಶಿ ಆ ಕಾಲದಲ್ಲಿ ಸಾಗಿದ ವೇಗವಿದೆಯಲ್ಲ, ಅದು ನಿಜಕ್ಕೂ ನಾಗಾಲೋಟ.
1981ರಲ್ಲಿ ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗಶಿಕ್ಷಣ ಮುಗಿಸಿ, ಮತ್ತೊಂದು ವರ್ಷ ಹೆಚ್ಚಿನ ತರಬೇತಿ ಪಡೆದುಕೊಂಡವರು ಜೋಶಿ. ಆ ನಂತರ ರಾಂಚಿ, ಕೋಲ್ಕೊತ್ತಾ ಮತ್ತು ಅಸ್ಸಾಂ, ಮಣಿಪುರ, ಮಧ್ಯ ಪ್ರದೇಶಗಳಲ್ಲಿ ನಾಟಕ ಶಿಬಿರಗಳನ್ನು ಯಶಸ್ವಿಯಾಗಿಸಿ, ಕರ್ನಾಟಕಕ್ಕೆ ಬಂದರು ನೋಡಿ. ಶುರುವಾಯಿತು ಭರಾಟೆ.
ಜೋಶಿ NSDಯಲ್ಲಿರುವಾಗಲೇ, ರಜೆಯಲ್ಲಿ ಗದಗಿಗೆ ಬಂದರೆ ತಮ್ಮದೇ ತಂಡಕ್ಕಾಗಿ (‘ಅಭಿನಯ ರಂಗ’) ಒಂದಿಲ್ಲೊಂದು ನಾಟಕವನ್ನು ಕೈಗೆತ್ತಿಕೊಳ್ಳುತ್ತಿದ್ದರು. 1978ರಲ್ಲಿ ಸೋಫೋಕ್ಲಿಸ್ ನ ‘ದೊರೆ ಈಡಿಪಸ್’ ನಾಟಕವನ್ನು ಜೋಶಿ ಗದಗಿನ ತಮ್ಮ ತಂಡಕ್ಕೆ ನಿರ್ದೇಶಿಸಿದ್ದರು. ಹುಬ್ಬಳ್ಳಿಯಲ್ಲಿ ಅದರ ಒಂದು ಪ್ರದರ್ಶನ. ಯಾಕೋ ನಮ್ಮ ಜನಕ್ಕೆ ಆ ಭಾಷೆ, ಆ ವಸ್ತು ಇಷ್ಟವಾಗಲಿಲ್ಲ. ”ತಾಯಿಗ್ಗಂಡನ ಕತಿ” ಅಂತ ಪ್ರೇಕ್ಷಕರು ಗಲಾಟೆ ಮಾಡತೊಡಗಿದರು. ಅವರನ್ನು ತಮಣಿಗೊಳಿಸುವ ಪ್ರಯತ್ನಕ್ಕೆ ಕೈಹಾಕಿದರೆ ಕೈಗೆ ಕೈ ಹತ್ತುವ ಸಾಧ್ಯತೆ ಇತ್ತು. ಹೀಗಾಗಿ ಹೆಚ್ಚು ಪ್ರತಿರೋಧ ಒಡ್ಡದೇ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ನಡೆಯುತ್ತಿದ್ದ ‘ದೊರೆ ಈಡಿಪಸ್’ ನಾಟಕ ಪ್ರದರ್ಶನವನ್ನು ಅವರು ಅರ್ಧಕ್ಕೇ ನಿಲ್ಲಿಸಬೇಕಾಯಿತು.
ನಿಜವಿದ್ದ ಮಾತೆಂದರೆ ವೃತ್ತಿ ರಂಗಭೂಮಿಯ ನಾಟಕಗಳನ್ನು ಪ್ರೋತ್ಸಾಹಿಸಿ, ಪೋಷಿಸಿ, ಬೆಳೆಯಿಸಿದವರು ಹುಬ್ಬಳ್ಳಿಯ ಜನ. ನಾಟಕವೆಂದರೆ ಹಿಡಿದ ಕೆಲಸ ಬಿಟ್ಟು ಬಂದು ನೋಡುವಂಥವರು. ಆದರೆ, ಆಗಿನ ಹುಬ್ಬಳ್ಳಿಯ ಸಾಮಾನ್ಯ ಪ್ರೇಕ್ಷಕರಿಗೆ ಇನ್ನೂ ಇಂಥ ಪ್ರಾಯೋಗಿಕ, ವೈಚಾರಿಕ ನಾಟಕಗಳು ತೀರ ಹೊಸವು. ವೃತ್ತಿ ರಂಗಭೂಮಿಯ ಆದರ್ಶಮಯ ನಾಟಕಗಳನ್ನು ನೋಡುತ್ತ ಬೆಳೆದ ಅವರಿಗೆ ‘ದೊರೆ ಈಡಿಪಸ್’ನಂಥ ನಾಟಕ ಗ್ರಾಹ್ಯವೆನಿಸೀತಾದರೂ ಹೇಗೆ?
ಅಲ್ಲಿ ಯಾರ ತಪ್ಪು ಎಂದು ಹೇಳಲಿಕ್ಕಾಗದು. ಅದೇ ತಾನೇ ಪ್ರೇಕ್ಷಕವರ್ಗವನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದ ಸ್ಥಳೀಯ ಸಂಘಟಕರು ತಾವು ಅವರಿಗೆ ನೀಡಲು ಹೊರಟಿರುವ ನಾಟಕದ ವಸ್ತುವಿನ ಬಗ್ಗೆ ಮೊದಲೇ ಯೋಚಿಸಬೇಕಾಗಿತ್ತು. ಒಟ್ಟಿನಲ್ಲಿ ಹುಬ್ಬಳ್ಳಿಯ ಈ ಪ್ರಸಂಗದಿಂದ ಜೋಶಿಗೆ ತುಂಬ ಅವಮಾನವಾದಂತಾಗಿತ್ತು.
NSDಯಿಂದ ಬಂದ ಮೇಲೆ ಹುಬ್ಬಳ್ಳಿಯ ಒಂದು ತಂಡಕ್ಕೆ ಮೋಲಿಯರನ ‘ಲವ್ ದಿ ಪೇಂಟರ್’ ನಾಟಕದ ಅನುವಾದವನ್ನು ಪ್ರಯೋಗಕ್ಕಾಗಿ ಕೈಗೆತ್ತಿಕೊಂಡರು ಜೋಶಿ. ಆ ಸಂದರ್ಭದಲ್ಲಿಯೂ ಅವರಿಗೆ ಮತ್ತೆ ಅಸಮಾಧಾನ. ಅದಕ್ಕೆ ಕಾರಣ, ಆ ನಾಟಕದಲ್ಲಿ ಉದ್ದಕ್ಕೂ ಬ್ಯಾಂಡ್ ನುಡಿಸುವವರ ಒಂದು ತಂಡ ಅವಶ್ಯವಾಗಿ ಇರಬೇಕೆಂದು ಜೋಶಿ ಆಗ್ರಹಿಸಿದ್ದು. ನಾಟಕಕ್ಕೆ ಬ್ಯಾಂಡ್ ತಂಡ ಬೇಕೇ ಬೇಕೆಂಬುದು ಅವರ ವಾದ. ಆದರೆ, ಒಂದು ತಿಂಗಳ ತನಕ ದಿನವೂ ಸಂಜೆ ಮೂರು ತಾಸು ತಾಲೀಮು ಮಾಡಲು ವೃತ್ತಿಪರ ಬ್ಯಾಂಡ್ ತಂಡ ಒಪ್ಪಲಿಲ್ಲ. ಅಂತೂ ಇಂತೂ ಬೇರೆ ಬ್ಯಾಂಡ್ ತಂಡವನ್ನು ಕರೆತಂದರೆ, ಅವರು ದಿನಕ್ಕೆ ಕನಿಷ್ಠ 500 ರೂ. ಸಂಭಾವನೆ ಕೇಳಿದರು. ಅಷ್ಟು ಖರ್ಚು ಮಾಡಲು ಯಾವ ತಂಡಕ್ಕೆ ತಾನೇ ಸಾಧ್ಯ? ಹೀಗಾಗಿ ಆ ಹವ್ಯಾಸಿ ನಾಟಕ ತಂಡ ಕೈ ಎತ್ತಿಬಿಟ್ಟಿತು. ಜೋಶಿಗೆ ಮತ್ತೆ ಉತ್ಸಾಹ ಭಂಗ. (ಮುಂದೆ ಒಂದೆರಡು ವರ್ಷಗಳ ನಂತರ ‘ಧಾರವಾಡ ಗೆಳೆಯರು’ ಎಂಬ ತಂಡ ಈ ಅನುವಾದವನ್ನು ‘ನಾನೊಂದು ನೆನೆದರೆ…’ ಎಂಬ ಹೆಸರಿನಲ್ಲಿ ಪ್ರಯೋಗಿಸಿತು.)
ಆ ನಂತರದ ಜೋಶಿಯೇ ಬೇರೆ… ನಾಟಕ
ಫೋರ್ಡ್ ಫೌಂಡೇಶನ್ ನೆರವಿನಿಂದ ಶುರುವಾದ ಹೆಗ್ಗೋಡಿನ ‘ನೀನಾಸಂ ಜನಸ್ಪಂದನ’ ಯೋಜನೆಗೆ ಜೋಶಿ ದುಡಿಯತೊಡಗಿದ್ದು 1983ರಿಂದ. ಅದಕ್ಕೂ ಮುನ್ನವೇ ಅವರು ಧಾರವಾಡದ ಹವ್ಯಾಸಿಗಳಿಗೆ ಹೊಸ ದಿಕ್ಕು ತೋರಿಸಿದ್ದರು. ಕಾಲು ಶತಮಾನಕ್ಕಿಂತ ಹೆಚ್ಚಿನ ಕಾಲದಿಂದ ರಂಗಚಟುವಟಿಕೆಗಳಲ್ಲಿ ತೊಡಗಿದ್ದ ಧಾರವಾಡದ ‘ಕರ್ನಾಟಕ ಕಲೋದ್ಧಾರಕ ಸಂಘ’ಕ್ಕೆ 1982ರಲ್ಲಿ ಶೂದ್ರಕನ ‘ಮೃಚ್ಛಕಟಿಕ’ ನಾಟಕವನ್ನು ಜಯತೀರ್ಥ ನಿರ್ದೇಶಿಸಿದ್ದರು. ಅದಕ್ಕಿಂತ ಮೊದಲೇ ತನ್ನ NSDಪೂರ್ವ ದಿನಗಳಲ್ಲಿ ಜೋಶಿ ನಿರ್ದೇಶಿಸಿದ್ದ ‘ಕೇಳು ಜನಮೇಜಯ’, ‘ಅಂಧಯುಗ’ ಮತ್ತು ‘ಕದಡಿದ ನೀರು’ ನಾಟಕಗಳನ್ನು ನೋಡಿದ್ದೆ. (‘ಕದಡಿದ ನೀರು’ ನಾಟಕದಲ್ಲಿ ಶಿವಪ್ಪನ ಪಾತ್ರ ವಹಿಸಿದ್ದವರು ವೃತ್ತಿ ರಂಗಭೂಮಿಯನ್ನೇ ಬದುಕಿನ ಜೀವಾಳವನ್ನಾಗಿಸಿಕೊಂಡಿದ್ದ ಗರುಡ ಶ್ರೀಪಾದರಾಯರು.) ಆಗಿನ್ನೂ ನನಗೆ ಜಯತೀರ್ಥನ ನಿಕಟ ಪರಿಚಯ ಆಗಿರಲಿಲ್ಲ. ಕಂಡಾಗೊಮ್ಮೆ ಒಂದು ಮುಗುಳ್ನಗೆ ಮತ್ತು ಔಪಚಾರಿಕ ಉಭಯಕುಶಲೋಪರಿ, ಅಷ್ಟೇ. ನಾಟಕಗಳಿಗೆ ನಾನು ಹಾಡು ಬರೆಯುತ್ತೇನೆ ಎಂದು ಕೇಳಿ ಗೊತ್ತಿದ್ದುದರಿಂದ ‘ಮೃಚ್ಛಕಟಿಕ’ ಸಂದರ್ಭದಲ್ಲಿ ಜೋಶಿ ನನ್ನಿಂದಲೇ ಹಾಡುಗಳನ್ನು ಬರೆಸಿಕೊಳ್ಳಲು ಬಯಸಿದ್ದರಂತೆ. ಆದರೆ, ಯಾರೋ ನನ್ನ ಬಗ್ಗೆ ‘ಬೇರೆಯದೇ ಆದ’ ಅಭಿಪ್ರಾಯ ಅವರಲ್ಲಿ ಮೂಡುವಂತೆ ಮಾಡಿದ್ದರಂತೆ. ಸಂಪರ್ಕಸೌಲಭ್ಯಗಳು ಈಗಿನಷ್ಟು ಇರಲಿಲ್ಲ ನೋಡಿ. ಹೀಗಾಗಿ ಇಂಥ ‘ದೂರ’ಗಳು ಮತ್ತು ‘ದೂರು’ಗಳು ಸೃಷ್ಟಿಯಾಗುತ್ತಿದ್ದವು.
ಈ ವಿಚಾರ ನನಗೆ ಗೊತ್ತಾದದ್ದು ಜೋಶಿಯಿಂದಲೇ. ಹೆಗ್ಗೋಡಿನಲ್ಲಿ ‘ನೀನಾಸಂ ಜನಸ್ಪಂದನ’ದ ನಾಟಕ ರಚನಾ ಶಿಬಿರದ ಸಂದರ್ಭದಲ್ಲಿ (1983 ಅಕ್ಟೋಬರ್). ಆಗ ಅಲ್ಲಿಯ ಹರಿಜನ ಕೇರಿಯ ಯುವಕ-ಯುವತಿಯರಿಗೆ ದೇವನೂರು ಮಹಾದೇವರ ‘ಮಾರಿಕೊಂಡವರು’ ಕಥೆಯನ್ನು ಆಧರಿಸಿದ ಅದೇ ಹೆಸರಿನ ನಾಟಕವನ್ನು ನಿರ್ದೇಶಿಸುತ್ತಲಿದ್ದರು ಜೋಶಿ.

ನಾಟಕ ಲೋಕದ ಮಹಾ ಪುರುಷರು : ಕೆ.ವಿ.ಸುಬ್ಬಣ್ಣ – ಜಿ.ಬಿ. ಜೋಶಿ

ನಾನಾಗ ಆ ಶಿಬಿರದಲ್ಲಿಯೇ ಬರೆದಿದ್ದ ‘ನೀಲ-ಗಿರಿ’ ಎಂಬ ಹೊಸ ನಾಟಕದ ಹಸ್ತಪ್ರತಿಯ ಪರಿಷ್ಕರಣೆಯಲ್ಲಿ ತೊಡಗಿದ್ದೆ. ಆದಿವಾಸಿಗಳು ಮತ್ತು ಆಧುನಿಕತಾವಾದಿಗಳ ನಡುವಿನ ಸಂಘರ್ಷದ ಕತೆ ಅದು. ‘ಪರಿಸರ ರಕ್ಷಕ’ರಾದ ಆದಿವಾಸಿಗಳನ್ನು ಕಾಡಿನಿಂದ ಓಡಿಸಿ, ಅಲ್ಲಿ ದೊಡ್ಡ ಕಾರಖಾನೆಯೊಂದನ್ನು ಸ್ಥಾಪಿಸಲು ಉದ್ದೇಶಿಸುವ ‘ಪರಿಸರ ಭಕ್ಷಕ’ರು. ಮತ್ತು ಆ ಯೋಜನೆಯನ್ನು ಪುರಸ್ಕರಿಸುವ ಆಳುವ ಸರಕಾರ… ಇತ್ಯಾದಿ ಆ ಕತೆಯ ವಸ್ತು.
ಒಂದು ಬೆಳಿಗ್ಗೆ ತಿಂಡಿ ಮುಗಿಸಿ ಮರಳುತ್ತಿದ್ದಾಗ ಎದುರಾದ ಜೋಶಿ ಜತೆ ಜತೆಗೆ ಹೆಜ್ಜೆ ಹಾಕಿ, ನಾನಿಳಿದಿದ್ದಲ್ಲಿಯೇ ಬಂದರು. ಆ ಹೊಸ ನಾಟಕದ ಹಸ್ತಪ್ರತಿಯನ್ನು ನೋಡುವ ಇಚ್ಚೆ ಅವರಿಗೆ. ಕೊಟ್ಟೆ. ಪುಟ ಬಿಡಿಸಿ ನೋಡಿ, ”ಮುತ್ತು, ಮುತ್ತು ನಿಮ್ಮಕ್ಷರ… ಹೂಂ, ನೀವs ಓದಿಬಿಡ್ರಿ…” ಅಂತ ಹಸ್ತಪ್ರತಿಯನ್ನು ನನಗೆ ಮರಳಿಸಿ, ಧ್ಯಾನಸ್ಥ ಸ್ಥಿತಿಯಲ್ಲಿ ಕೂತರು. ನಾನು ಓದುತ್ತ ಹೋದೆ.
ಅದರಲ್ಲಿಯ ಹಾಡುಗಳನ್ನು ನನ್ನಿಂದ ಎರಡೆರಡು ಸಲ ಓದಿಸಿದ ಜೋಶಿ, ”ಇದರ ಪರಿಷ್ಕರಣ ಪೂರ್ತಿ ಮುಗದ ಮ್ಯಾಲ ನನಗs ಕೊಡ್ರಿ. ನನ್ನ ಬಿಟ್ಟು ಬ್ಯಾರೆ ಯಾರಿಗೂ ಇದರ ವಾಸನಿ ಹತ್ತದಂಗ ನೋಡಿಕೋರಿ…” ಅಂದರು. ಏನು ಹೇಳಬೇಕೆಂದು ತೋಚದೆ ನಾನು ಜೋಶಿಯನ್ನೇ ನೋಡುತ್ತ ಕೂತೆ.
ಅದರಲ್ಲಿಯ ಒಂದೆರಡು ಸನ್ನಿವೇಶಗಳನ್ನು ತಾನು ಅದು ಹೇಗೆ ರಂಗದ ಮೇಲೆ ತರಬಹುದು ಎಂಬುದನ್ನು ಜಯತೀರ್ಥ ವಿವರಿಸುತ್ತಿದ್ದಾಗ, ನಾನು ಕೂತಲ್ಲಿಯೇ ನೆಲದಿಂದ ಮೂರು ಮಾರು ಮೇಲಕ್ಕೇರಿದ್ದೆ…
ಆದರೆ, ಅದಾರು ‘ಒಂಟಿ ಸೀನು’ ಸೀತರೋ…
ಪರಿಷ್ಕರಿಸಲ್ಪಟ್ಟ ಆ ಹಸ್ತಪ್ರತಿಯ ಮೇಲೆ, ಆ ರಾತ್ರಿ, ಕುಡಿಯುವ ನೀರಿನ ತಂಬಿಗೆ ಉರುಳಿ, ಮುಕ್ಕಾಲು ಪಾಲು ಹಾಳೆಗಳು ಮಸಿಯ ಹಸಿಯ ಮುದ್ದೆಗಳಾದವು.
ನೀರಲ್ಲಿ ಮುಳುಗಿ ಏದುಸಿರು ಬಿಡುತ್ತ ಕೊನೆಯುಸಿರೆಳೆಯುವ ಹಂತ ತಲಪಿದ ಕೂಸನ್ನು ನೋಡುತ್ತ ಕೂತ ತಾಯಿಯ ಹಾಗೆ, ನಾನು ಬೆಳತನಕ ಖಿನ್ನನಾಗಿಯೇ ಕೂತಿದ್ದೆ.
ವಿಷಯ ತಿಳಿದ ಜೋಶಿ, ”ಇಷ್ಟಕ್ಕೆಲ್ಲಾ ತಲಿ ಕೆಡಿಸಿಗೊಂಡು ಕೂತ್ರ ಏನ್ ಮಾಡಿದಂಗಾತು…? ಮತ್ ಬರೀರಿ, ಅದಕ್ಕೇನು?” ಅಂತ ಸಮಾಧಾನ ಮಾಡಿದರು.
‘ನೀಲ-ಗಿರಿ’ಯನ್ನು ಮತ್ತೆ ಮುಟ್ಟುವ ಮನಸ್ಸಾಗಲಿಲ್ಲ ನನಗೆ…

-೦-೦-೦-೦-೦-

‘ನೀಲ-ಗಿರಿ’ಯ ಹಾಡುಗಳು ಮತ್ತು ನಾನು ಬಳಸಿದ ದೇಸಿ ಭಾಷೆ ತನ್ನನ್ನು ಬಹುವಾಗಿ ಕಾಡುತ್ತದೆಂದು ಜೋಶಿಯೇ ಆಗೀಗ ಹೇಳಿದ್ದಿದೆ. ಅದಕ್ಕೇ ‘ತಾಮ್ರಪತ್ರ’ವನ್ನು ಧಾರವಾಡ ಪರಿಸರ ಮತ್ತು ಭಾಷೆಗೆ ರೂಪಾಂತರಿಸಲು ನನಗೆ ಹೇಳಿದ್ದು… ‘ಧರ್ಮಪುರಿಯ ಶ್ವೇತವೃತ್ತ’, ‘ನಂದಭೂಪತಿ’ಗಳನ್ನು ಬರೆಯುವ ಸುವರ್ಣಾವಕಾಶವನ್ನು ನನಗೆ ಕೊಟ್ಟದ್ದು.
ಇಂಥ ಜೋಶಿಗೆ ಯಾವಾಗ, ಏನು ಹೊಳೆಯುತ್ತಿತ್ತೋ, ಮತ್ತೇನು ಪ್ರೇರಣೆಯಾಗುತ್ತಿತ್ತೋ…! ಅಲ್ಲಲ್ಲಿಯ ಪ್ರತಿಭೆಗಳನ್ನು ಪೂರ್ತಿ ಬಳಸಿಕೊಂಡು ಅವರಿಂದ ಮತ್ತೇನೋ ಹೊಸದನ್ನು ಹೊರ ತಂದು ಎದುರಿಗೆ ನಿಲ್ಲಿಸಿಬಿಡುತ್ತಿದ್ದ. ಜೋಶಿಯ ಆ ‘ಕೌಶಲ’ ನಿಜಕ್ಕೂ ಮೆಚ್ಚುವಂಥದ್ದು. ಇರುವುದನ್ನು ‘ಮುರಿದು’ ಮತ್ತೆ ‘ಕಟ್ಟುವ’ ಕೆಲಸ ಆತನಿಗೆ ಬಲು ಪ್ರಿಯವಾದದ್ದೇನೋ. ಆ ಮುರಿದ ‘ಚೂರು’ಗಳು ಪ್ರತ್ಯೇಕವಾಗಿ ನೀಡುತ್ತಿದ್ದ ಅರ್ಥ ಒಂದು ಬಗೆಯದಾದರೆ ಒಟ್ಟಾರೆಯಾಗಿ ಅವು ಹೊಮ್ಮಿಸುತ್ತಿದ್ದ ಅರ್ಥ ಇನ್ನೇನೋ ಬೇರೆಯೇ ಆಗಿರುತ್ತಿತ್ತು. ಅದೇ ಹೊತ್ತಿಗೆ, ಯಾವುದೂ ಯಾರಿಗೂ ಅಸಹಜ ಎಂದೆನಿಸದಂತೆ, ಸುಲಭವಾಗಿ ತಿಳಿಯುವಂತೆ ಇರುತ್ತಿತ್ತು ಆತನ ರಚನಾತ್ಮಕತೆ.
ಜೋಶಿಯ ಪ್ರಕಾರ ನಾಟಕ ‘ಸ್ಥಾವರ’ವಲ್ಲ… ಅದು ‘ಜಂಗಮ’… ಅದಕ್ಕೇ ಮತ್ತೆ ಮತ್ತೆ ‘ಮಾಡು’ವುದು ಅಥವಾ ‘ಆಡು’ವುದು. ಅದಕ್ಕೇ ಅದನ್ನು ‘ಪ್ರದರ್ಶನ’ ಎನ್ನದೇ ‘ಪ್ರಯೋಗ’ ಎನ್ನುವುದು. ಹಾಗಿದ್ದರೆ ಅದು ಯಾರು ಮಾಡುವ ಪ್ರಯೋಗ? ನಿರ್ದೇಶಕ ಮಾಡುವ ಪ್ರಯೋಗವೇ? ನಟರು ಮಾಡುವ ಪ್ರಯೋಗವೇ? ಖಂಡಿತವಾಗಿ ನಿರ್ದೇಶಕ ಮಾಡುವ ಪ್ರಯೋಗ. ಒಂದು ನಾಟಕವನ್ನು ಬೇರೆ ಬೇರೆ ತಂಡಗಳಿಗೆ ಮಾಡಿಸಿದಾಗಲೂ ಅದನ್ನು ನಿರ್ದೇಶಕ ಒಂದು ‘ಹೊಸ’ ಪ್ರಯೋಗವೆಂದೇ ಪರಿಗಣಿಸುತ್ತಾನೆ ; ಪರಿಗಣಿಸಬೇಕು. ಇಲ್ಲದಿದ್ದರೆ ಅದು ಕೇವಲ ಇನ್ನೊಂದು ‘ಪ್ರದರ್ಶನ’ ಆಗಿಬಿಡುತ್ತದೆ.
ಹಾಗೆ ಒಂದೇ ನಾಟಕವನ್ನು ಜೋಶಿ ಬೇರೆ ಬೇರೆ ತಂಡಗಳಿಗೆ ಮಾಡಿಸಿದ ಉದಾಹರಣೆಗಳಿವೆ. ಅವುಗಳಲ್ಲಿ ಥಟ್ಟನೆ ನೆನಪಿಗೆ ಬರುವ ನಾಟಕವೆಂದರೆ ಜಡಭರತರ ‘ಸತ್ತವರ ನೆರಳು’.
ಅದಾಗಲೇ ಇನ್ನಾರೂ ಮುಟ್ಟಲು ಧೈರ್ಯ ಮಾಡದ ರೀತಿಯಲ್ಲಿ ‘ಸತ್ತವರ ನೆರಳು’ ನಾಟಕಕ್ಕೆ ತಮ್ಮ ಸ್ಪರ್ಶದಿಂದ ‘ಅಮರ ಪ್ರಯೋಗ’ವನ್ನಾಗಿಸಿಬಿಟ್ಟಿದ್ದರಲ್ಲ ಬಿ. ವಿ. ಕಾರಂತರು… ಬೇರೆ ಯಾರೇ ಅದನ್ನು ಕೈಗೆತ್ತಿಕೊಳ್ಳಬೇಕೆಂದರೂ ನೂರು ಸಲ ಯೋಚಿಸಬೇಕು, ಹಾಗೆ ಮಾಡಿಟ್ಟುಬಿಟ್ಟಿದ್ದರಲ್ಲ… ಎಲ್ಲೆಡೆಗೂ ‘ಸತ್ತವರ ನೆರಳು’ ಜಯಭೇರಿ ಬಾರಿಸಿ, ಅದರಲ್ಲಿ ಕಾರಂತರು ಬಳಸಿದ್ದ ದಾಸರ ಪದಗಳು ಮತ್ತು ದಾಸ ಕೂಟದ (ಗುಂಪಿನ) ಚಲವಲನಗಳ ಗತಿ ನೆನಪಿನಲ್ಲಿ ಉಳಿಯುವಂತಾಯಿತೇ ಹೊರತು ನಾಟಕ ನೆನಪಿನಲ್ಲಿ ಉಳಿಯಲಿಲ್ಲ ಎನ್ನುವವರೂ ಇದ್ದಾರೆ. ಹೀಗಾಗಿ, ‘ಸತ್ತವರ ನೆರಳು’ ಎಂದಾಕ್ಷಣ ಕಾರಂತರು ಮಾತು ಅವರು ದಾಸರಲ್ಲೊಬ್ಬರಾಗಿ ಮೇಳವನ್ನು ಮುನ್ನಡೆಸುತ್ತಿದ್ದ ಚಿತ್ರವೇ ಕಣ್ಣಿಗೆ ಕಟ್ಟುತ್ತದೆ.
‘ಜಡಭರತ’ ಜಿ. ಬಿ. ಜೋಶಿಯವರಿಗೆ ಆ ಪ್ರಯೋಗ ಪೂರ್ಣ ಒಪ್ಪಿತವಾಗಿರಲಿಲ್ಲವೆಂಬ ಒಂದು ಅಭಿಪ್ರಾಯವೂ ಇದೆ.
ಈ ಸಂದರ್ಭದಲ್ಲಿ, ಗೆಳೆಯ ಜಯಂತ ಕಾಯ್ಕಿಣಿ ಈ ಟೀವಿ ವಾಹಿನಿಯಲ್ಲಿ ನಡೆಸಿದ ಜಯತೀರ್ಥ ಜೋಶಿಯ ಒಂದು ಸಂದರ್ಶನ ನನಗೆ ನೆನಪಿಗೆ ಬರುತ್ತದೆ.

ಜಯತೀರ್ಥ ಜೋಶಿ

ಆನುಷಂಗಿಕವಾಗಿ ಜೋಶಿ ನಿರ್ದೇಶಿಸಿದ್ದ ‘ಸತ್ತವರ ನೆರಳು’ ನಾಟಕದ ಕುರಿತು ಆ ಸಂದರ್ಶನದಲ್ಲಿ ಜಯಂತ ಪ್ರಸ್ತಾಪಿಸಿದ್ದರು.
”… ‘ಸತ್ತವರ ನೆರಳು’ ನಾಟಕವನ್ನು ಕಾರಂತರ ನಂತರ ಬೇರೆ ಯಾರೂ ಮುಟ್ಟೋದಕ್ಕೂ ಹೋಗಿಲ್ಲ… ನೀವು ಅದನ್ನು ಕೈಗೆತ್ತಿಕೊಂಡು ನಿಮ್ಮದೇ ರೀತಿಯಲ್ಲಿ ಪ್ರಯೋಗಿಸಿ ಯಶಸ್ಸು ಪಡೆದವರು… ಅದನ್ನು ಮಾಡಬೇಕು ಅಂತ ನಿಮಗೆ ಯಾಕನ್ನಿಸಿತು?” ಅಂತ ಜಯಂತ ಪ್ರಶ್ನೆ ಎಸೆದಿದ್ದರು.
”ಯಾಕಂದರೆ, ‘ಸತ್ತವರ ನೆರಳು’ ನಾಟಕವನ್ನು ಅಕಾರಂತ ಮಾಡಬೇಕು, ಅಂದರೆ, ಕಾರಂತತನವಿಲ್ಲದ ‘ಸತ್ತವರ ನೆರಳು’ ನನ್ನ ಎಂಬುದೇ ನನ್ನ ಉದ್ದೇಶವಾಗಿತ್ತು.
ಇಳಕಲ್ ಮತ್ತು ಬೆಳಗಾಂವಿ ಎರಡೂ ಕಡೆ ನಾನು ಆ ನಾಟಕ ಮಾಡಿಸಿದೆ. ಈ ‘ಸತ್ತವರ ನೆರಳು’ದಲ್ಲಿ ದಾಸರ ಹಾಡು, ಪದ ಇತ್ಯಾದಿ ಏನೂ ಇರಲಿಲ್ಲ. ಅದು pure ಜಿ. ಬಿ. ಜೋಷಿ ಮತ್ತು ಜಯತೀಥ ಜೋಶಿಯ ‘ಸತ್ತವರ ನೆರಳು’ ಆಯಿತು….”
ಕಾರಂತತನವಿಲ್ಲದ ‘ಸತ್ತವರ ನೆರಳು’ ನಾಟಕವನ್ನು ಜೋಶಿ ಬೆಳಗಾಂವಿಯಲ್ಲಿ ಮಾಡಿಸಿದ್ದು, ಸದಾ ಕೇಳಿಬರುವ ‘ಝಾಲಾsಚ್ ಪಾಹಿಜೆ’ ಕೂಗಿನ ನಡುವೆಯೂ ಕನ್ನಡದ ರಂಗಧ್ವಜ ಫಡಫಡಿಸುವಂತೆ ನೋಡಿಕೊಂಡಿರುವ ‘ರಂಗಸಂಪದ’ ತಂಡಕ್ಕೆ. ಹುಬ್ಬಳ್ಳಿಯಲ್ಲಿ ನಾನು ಗೆಳೆಯರೊಂದಿಗೆ ಕಟ್ಟಿದ ‘ಅಭಿನಯ ಭಾರತಿ’ ತಂಡದೊಂದಿಗೆ ಹೆಗಲೆಣೆಯಾಗಿ ನಿಂತದ್ದು ‘ರಂಗಸಂಪದ’. ಅದರ ಕರ್ಣಧಾರತ್ವವನ್ನು ಸಮರ್ಥವಾಗಿ ನಿರ್ವಹಿಸಿದ ಗೆಳೆಯ ಶ್ರೀಪತಿ ಮಂಜನಬೈಲು. ಆತನ ಅಖಂಡ ರಂಗಸೇವೆಯ 30ನೆಯ ವರ್ಷವಿದು. ನಮ್ಮಿಬ್ಬರ ಸ್ನೇಹಕ್ಕೂ ಈಗ ಅಷ್ಟೇ ವಯಸ್ಸು. ಆತ ಇಂದಿಗೂ ಬೆಂಗಳೂರಿನ ಹವ್ಯಾಸಿ ತಂಡಗಳೊಂದಿಗೆ ಸಕ್ರಿಯನಾಗಿ ರಂಗನಟನೆಯಲ್ಲಿ ತೊಡಗಿಕೊಂಡಿದ್ದಾನೆ.
ಬಹುಶಃ ಅದು 1985ರ ಮಾರ್ಚ್-ಎಪ್ರಿಲ್ ಇರಬೇಕು. ನಮ್ಮ ಆಫೀಸಿಗೆ ಜಯತೀರ್ಥ ಜೋಶಿಯಿಂದ ಫೋನು :
”ಇವತ್ತ ರಾತ್ರಿ ನಾವು-ನೀವು ಕೂಡಿ ಬೆಳಗಾಂವಿ ಒಳಗ ಊಟಾ ಮಾಡೂಣು…”
”ಆಂ…? ಬೆಳಗಾಂವಿ ಒಳಗs…? ಏನು ವಿಶೇಷ…?”
”ಅದು ನೀವಿಲ್ಲೆ ಬಂದ ಮ್ಯಾಲೆ ಗೊತ್ತಾಗ್ತದ… ರಾತ್ರಿ ಒಂಬತ್ತಕ್ಕ ಬಸ್ ಸ್ಟ್ಯಾಂಡಿನ್ಯಾಗ ಕಾಯ್ತೀವಿ…” ಅಂತ ಫೋನಿಟ್ಟುಬಿಟ್ಟ ಮಹಾಶಯ.
ಹುಬ್ಬಳ್ಳಿಯಿಂದ ಬೆಳಗಾಂವಿಗೆ ನೂರು ಕಿಲೋಮೀಟರ್ ಅಂತರ. ಆ ಕಾಲದಲ್ಲಿ ಎರಡು ಗಂಟೆಯ ಬಸ್ ಪ್ರಯಾಣ. ಆಫೀಸು ಮುಗಿಸಿ, ಮನೆಗೆ ಹೋಗಿ, ವಿಷಯ ತಿಳಿಸಿ, ಬಸ್ ನಿಲ್ದಾಣಕ್ಕೆ ಬರಲು ಒಂದರ್ಧ ಗಂಟೆಯಾದರೂ ಬೇಡವೇ? ಅಂತೂ ಸಂಜೆ 6.30 ಇಲ್ಲವೇ 6.45ಕ್ಕೆ ಬಸ್ ಸಿಕ್ಕರೆ ಜೋಶಿ ಹೇಳಿದ ಸಮಯಕ್ಕೆ ಸರಿಯಾಗಿ ಬೆಳಗಾಂವಿ ತಲಪಬಹುದು, ಎಂದುಕೊಳ್ಳುತ್ತಲೇ ಆಫೀಸಿನಿಂದ ಹೊರಬಿದ್ದೆ.

-೦-೦-೦-೦-೦-

ಬೆಳಗಾಂವಿ ರಂಗಚೇತನ ಶ್ರೀಪತಿ ಮಂಜನಬೈಲು

ಬೆಳಗಾಂವಿಯ ಆ ಖಾನಾವಳಿಯಲ್ಲಿ ನಾನು, ಜಯತೀರ್ಥ ಮತ್ತು ಶ್ರೀಪತಿ ಮಂಜನಬೈಲು… ಆ ಮೊದಲಿನ ‘ತಾಮ್ರಪತ್ರ’, ‘ಧರ್ಮಪುರಿಯ ಶ್ವೇತವೃತ್ತ’ಗಳ ಸಂಭಾಷಣೆ ಹಾಡುಗಳ ಮೆಲುಕು ಗಡಿನಾಡಿನ ಆ ಅಡಿಗೆಯ ರುಚಿಯನ್ನು ಇನ್ನಷ್ಟು ಹೆಚ್ಚಿಸಿತ್ತು.
ಒಂದೆರಡು ಸಲ ಜೋಶಿಯಿಂದ, ”ನೀವು ಭಾಳ ಚೊಲೊ ಬರೀತೀರಿ… ಇದs ನನಗ ಬೇಕಾದ ಭಾಷಾ…” ಅಂತ ಹೊಗಳಿಕೆ.
”ಏ… ಖರೇನs ಮಸ್ತ್ ಬರೀತೀಯೋ ದೋಸ್ತ…” ಅಂತ ಅದಕ್ಕೆ ಶ್ರೀಪತಿಯ ಒಗ್ಗರಣೆ.
ನನ್ನ ಕತ್ತಿಗೆ ಇನ್ನೊಂದು ‘ಕುಣಿಕೆ’ ಸಿದ್ಧವಾಗಿದೆ ಎಂಬುದು ಸ್ಪಷ್ಟವಾಗಿ ಹೋಯಿತು.
”ನಾ ಈಗ ಏನ್ ಬರದುಕೊಡಬೇಕು ಅದನ್ನ ಹೇಳ್ರಿ ಮದಲ…” ಅಂದೆ.
”…’ಸತ್ತವರ ನೆರಳು’ಕ್ಕ ಒಂದು ಸೀನು…” ಅಂತ ಜೋಶಿ.
ಬಾಯಿಯೊಳಗೆ ತುರುಕಿಕೊಂಡ ತುತ್ತು ಗಂಟಲಲ್ಲೇ ಸಿಕ್ಕಿಹಾಕಿಕೊಂಡು ಬಿಟ್ಟಿತು…
ಒಂದು ಕ್ಷಣ ಅಲ್ಲಿದ್ದವರೆಲ್ಲ ಸತ್ತವರ ನೆರಳುಗಳಂತೆ ಕಾಣತೊಡಗಿದರು.
ಹೌದು… ನಿಜಕ್ಕೂ ‘ನುಂಗಲಾಗದ’ ತುತ್ತು…
ನಾನು ನೀರು ಕುಡಿದು ಸುಧಾರಿಸಿಕೊಳ್ಳುತ್ತಿದ್ದರೆ ಜಯತೀರ್ಥನಿಗೆ ಎಲ್ಲಿ, ಯಾವ ಸೀನು, ಹೇಗಿರಬೇಕು ಎಂಬುದನ್ನು ವಿವರಿಸುವ ಗಡಿಬಿಡಿ.
ಅಂತೂ ಅವತ್ತು ನನಗೆ ನಿದ್ದೆಯಿಲ್ಲದ ರಾತ್ರಿ…
‘ಸತ್ತವರ ನೆರಳು’ ನಾಟಕದ ಕಥೆ ನಿಮಗೆ ಗೊತ್ತಲ್ಲ… ಮಾಧ್ವ ಮಠವೊಂದರ ವ್ಯವಹಾರ-ಅವ್ಯವಹಾರ, ಆ ಎಲ್ಲ ಕಪಟ, ವಂಚನೆ, ಅಧಿಕಾರ ಲಾಲಸೆ, ಅದನ್ನು ಪಡೆಯುವ ಪೈಪೋಟಿಗಳನ್ನಿಲ್ಲಿ ಎಳೆ ಎಳೆಯಾಗಿ ಬಿಡಿಸಿಡುತ್ತಾರೆ ‘ಜಡಭರತ’ರು. ಮಠದ ಸರ್ವಸೂತ್ರ, ಸರ್ವಾಧಿಕಾರ, ಸರ್ವ ಸ್ವತ್ತು ಎಲ್ಲವನ್ನೂ ತನ್ನ ಕೈಯಲ್ಲೇ ಇಟ್ಟುಕೊಳ್ಳುವ ದುರುದ್ದೇಶದ ದಿವಾನರು. ನಾರಾಯಣನೆಂಬ ಮದಡ (ಮಡ್ಡ)ನನ್ನು ಬಲವಂತವಾಗಿ ಎಳೆದು ತಂದು ಸಂನ್ಯಾಸ ದೀಕ್ಷೆ ಕೊಡಿಸಿ, ಕೂಡಿಸಿದ್ದಾರೆ. ಈಗಾತ ‘ಗುಣನಿಧಿತೀರ್ಥ’. ಆ ಉಸಿರುಗಟ್ಟಿಸುವ ವಾತಾವರಣ ಆತನಿಗೆ ಒಗ್ಗುವುದಿಲ್ಲ. ತಾನು ‘ಬಂದಿ’ ಎಂಬ ಅರಿವು ಆಗುತ್ತಲೇ, ಅಲ್ಲಿಂದ ಹೊರಗೆ ಹೋಗಬೇಕು ಎಂದೆನಿಸಿ, ಯಾತ್ರೆಯ ನೆಪದಲ್ಲಿ ಮಠ ತ್ಯಜಿಸಿ ಹೋಗುತ್ತಾನೆ ‘ಗುಣನಿಧಿತೀರ್ಥ’.
ಆತನೇನೋ ಸಂನ್ಯಾಸಿಯಾಗಿಬಿಟ್ಟ. ಪೀಠವೇರಿಬಿಟ್ಟ. ‘ಗುಣನಿಧಿತೀರ್ಥ’ನೆನಿಸಿಬಿಟ್ಟ. ಆದರೆ ಆತನ ಪೂರ್ವಾಶ್ರಮದ ಹೆಂಡತಿ ಮಕ್ಕಳ ಗತಿ?
ನಾರಾಯಣ ಅರ್ಥಾತ್ ‘ಗುಣನಿಧಿತೀರ್ಥ’ರ ಪೂರ್ವಾಶ್ರಮದ ಹೆಂಡತಿ ರೊಚ್ಚಿಗೆದ್ದು ಮಠಕ್ಕೇ ಬಂದಿದ್ದಾಳೆ. ಆ ದೃಶ್ಯವನ್ನೇ ನಾನು ಬರೆಯಬೇಕಾಗಿದ್ದದ್ದು. ಏಕಾಂತದಲ್ಲಿ ನಾರಾಯಣ ಆಕೆಯೊಂದಿಗೆ ಮಾತಾಡುವ ಸನ್ನಿವೇಶ ಅದು. ಗಂಡನನ್ನು ಆಕೆ ಮನಬಂದಂತೆ ಬೈಯುತ್ತಾಳೆ. ಅಲ್ಲಿ ‘ಜಡಭರತ’ರು ನಾಟಕದುದ್ದಕ್ಕೂ ಬಳಸಿದ ಭಾಷೆಯನ್ನೇ ಬಳಸಬೇಕಿತ್ತು. ಸಂಸಾರದಿಂದ ಇದ್ದಕ್ಕಿದ್ದಂತೆ ಎದ್ದು ಬಂದ ಗಂಡನನ್ನು ಆಕೆ ಇನ್ನಾವ ಪರಿಯಲ್ಲಿ ಚುಚ್ಚಿಯಾಳು…? ಅಷ್ಟಕ್ಕೂ ತನ್ನ ಗಂಡ ಎಂಥವ ಎಂಬುದು ಗೊತ್ತಿರುವ ಆಕೆ ಯಾವ ಮಾತಿನಲ್ಲಿ ಆತನನ್ನು ಚಚ್ಚಿಯಾಳು…?
”ಹೀಂಗ ಸಂಸಾರಾ ಬಿಟ್ಟು ಸಂನ್ಯಾಸಾ ತೊಗೊಳ್ಳೋದು ಅಂದ್ರ ಆಟಾ ಅಂತಿಳದೀರೇನು?”
ಆತ ಉತ್ತರಿಸುವುದಿಲ್ಲ. ಮುಂದುವರಿದ ಆಕೆ,
”ಸ್ನಾನಾ ಮಾಡೂ ಮುಂದ ಹಚಿಗೊಂಡ ಪಂಜಾನ ಕಳದೊಗದು ಕಾಲಿಲೆ ಮೂಲಿಗೊತ್ತಿದಂಗ ಮಾಡಿಬಿಟ್ರಿ ನೀವು…”
-ಎಂಬ ಆಕೆಯ ಮಾತು ಇಂದಿಗೂ ಸ್ನಾನ ಮಾಡಿ ಮೈ ಒರೆಸಿಕೊಳ್ಳುತ್ತಿರುವಾಗ ನನಗೆ ನೆನಪಾಗುತ್ತಿರುತ್ತದೆ.
ಆಕೆ ಮುಂದುವರಿದು ಹೇಳುತ್ತಾಳೆ :
”ಮೂಲಿಗೊತ್ತಿದ ಆ ಪಂಜಾ ಅಲ್ಲೇ ಬಿಟ್ರ, ಕೊಳತು ನಾರಲಿಕ್ಕೆ ಸುರೂ ಆಗತದ… ಈಗ ನಮ್ಮ ಪರಿಸ್ಥಿತೀನೂ ಹಂಗs ಆಗೇದ…”

-೦-೦-೦-೦-೦-

ಅಂದು ಬೆಳಗಾಂವಿಯ ‘ಸ್ಕೂಲ್ ಆಫ್ ಕಲ್ಚರ್’ ತುಂಬ ಜನವೋ ಜನ. ನಾಟಕ ನೋಡಲು ಧಾರವಾಡದಿಂದ ಜಿ.ಬಿ. ಜೋಶಿ, ಕೀರ್ತಿನಾಥ ಕುರ್ತಕೋಟಿ ಇತ್ಯಾದಿ ಬಂದಿದ್ದರು. ಮುಂದಿನ ಸಾಲಿನಲ್ಲಿಯೇ ಕೂತಿದ್ದ ಅಜ್ಜನ ಮುಖದಲ್ಲಿ ಸಂತಸ ಅಲೆಯಲೆಯಾಗಿ ಕಂಡುಬರುತ್ತಿತ್ತು.
ನಾಟಕ ಮುಗಿದಮೇಲೆ ಅವರೆಲ್ಲ ಗ್ರೀನ್ ರೂಮಿಗೆ ಬಂದರು. ‘ನಿರ್ದೇಶಕ’ ಜೋಶಿಯನ್ನು ‘ನಾಟಕಕಾರ’ ಜೋಶಿಯವರು ಅಂದು ಒಂದು ಸಲ ಕಣ್ಣ ತುಂಬಾ ನೋಡಿದರು… ಬಾಗಿ ನಮಿಸಹೋದ ಆತನನ್ನು ತಡೆದ ಜಿ.ಬಿ. ಪ್ರೀತಿಯಿಂದ ಬೆನ್ನ ಮೇಲೊಮ್ಮೆ ಚಪ್ಪರಿಸಿದರು. ಅದು ಅವರ ಅಭಿನಂದನೆಯ ರೀತಿ, ಆ ಪ್ರಯೋಗದ ಬಗ್ಗೆ ಅವರು ಕೊಟ್ಟ ಪ್ರಮಾಣಪತ್ರ.
ಜಯತೀರ್ಥನ ಕನಸು ನನಸಾಗಿತ್ತು. ‘ಜಡಭರತ’ರಿಗೆ ತೃಪ್ತಿಯಾಗಿತ್ತು.
ನಾನು ಅಲ್ಲೇ ನಿಂತು ಅದನ್ನೆಲ್ಲ ನೋಡುತ್ತಿದ್ದೆ. ಅಜ್ಜ ನನ್ನತ್ತ ಬಂದರು. ಬಲಗೈ ಮುಷ್ಟಿಯಿಂದ ನನ್ನ ಎಡತೋಳಿಗೆ ಒಂದು ಗುದ್ದಿದರು…
ಅವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದುದೇ ಹಾಗೆ…

 

‍ಲೇಖಕರು G

January 6, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. Paresh Saraf

    ಜಯತೀರ್ಥ ಜೋಶಿಯವರ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು. ನಿಮ್ಮ ಲೇಖನ ಸರಣಿ ಕನ್ನಡ ನಾಟಕ ರಂಗದ ಒಂದು ಪಕ್ಷಿನೋಟ. ನಿರೂಪಣೆ ಅದ್ಭುತ

    ಪ್ರತಿಕ್ರಿಯೆ
  2. umesh desai

    ನಿಮ್ಮ ರಂಗಪಯಣದ ನೋವು ನಲಿವು ಎಂಥಾಪರಿ ಅದಾವ ಗುರುಗಳ..
    ವಾಹ್ ಅನ್ನಬೇಕೋ ಉಘೆ ಉಘೆ ಅನ್ನಬೇಕೋ ಹೇಳಿಬಿಡರಿ…

    ಪ್ರತಿಕ್ರಿಯೆ
  3. Jayalaxmi Patil

    ಕಾಕಾ, ನಿಮ್ ನೆನಪಿನ ಖಜಾನಿ ಒಳಗ ಯಾವೆಲ್ಲ, ಎಷ್ಟೆಲ್ಲಾ ಮುತ್ತು ರತ್ನ ಅದಾವ್ರೀ!!

    ಪ್ರತಿಕ್ರಿಯೆ
  4. prakash hegde

    ಅಣ್ನಾ…
    ನಿಮ್ಮ ನಾಟಕಗಳನ್ನು ಓದಬೇಕು….
    ನೋಡಬೇಕೆಂಬ ಆಸೆ ಹೆಚ್ಚಾಗಿದೆ…
    ದಯವಿಟ್ಟು ಸಹಾಯ ಮಾಡಿ….

    ಪ್ರತಿಕ್ರಿಯೆ
  5. Sathish Naik

    Nimma Savi savi nenapugalanna kelthaa hodashtoo Saviye saar…satthavara neralina prasangavoo kooda..

    ಪ್ರತಿಕ್ರಿಯೆ
  6. kalpana naganath

    Good show Joshi. Karanthara savaalige karanthara shishyana jawab. Tamma shishyavrundakke karanthara challenge ade. ondu vastuvina eleyannu hege bere bere tharaha interpret maduvudu endu.

    ಪ್ರತಿಕ್ರಿಯೆ
  7. ಸವಿತ ಇನಾಮದಾರ್

    ನಿಮ್ಮ ನಿರೂಪಣೆಯ ಒಂದು ಅಧ್ಯಾಯ ಓದುತ್ತಾ ಹೋದಂತೆ ಇನ್ನಷ್ಟು ಓದುವ ತವಕ ಹೆಚ್ಚಾಗ್ತದ ನೋಡ್ರಿ. ಮತ್ತ ನಿಮ್ಮ ಆತ್ಮೀಯ ಗೆಳೆಯ ಶ್ರೀಪತಿ ಮಂಜನಬೈಲು ಕಾಕಾ ಅವರಿಗೆ ಬೆಳಗಾಂವಿಯ ರಂಗಚೇತನವೇ ಅನ್ನಬೇಕು. ಕಳೆದ ಬಾರಿ ಅವರನ್ನ ಬೆಳಗಾವಿಯ ನಮ್ಮ ಮನೆಯಲ್ಲಿ ಭೇಟಿ ಮಾಡಿದಾಗ ನನಗೂ ನಿಮ್ಮ ಪರಿಚಯವಿದೆ ಎಂದು ತಿಳಿದಾಗ ಅವರಿಗೆ ಭಾರೀ ಖುಷಿಯಾಗಿತ್ತು. ಅಂದು ನಿಮ್ಮೀರ್ವರ ಗೆಳೆತನದ ಆಳ ಕಾಣಲು ಸಿಕ್ತು.. ಖರೇ ಹೇಳಬೇಕಂದ್ರ ಈ ಜಗತ್ತು ಭಾಳ ತುಂಬಾ ಸಣ್ಣದು ಅನಸ್ತದ.

    ಪ್ರತಿಕ್ರಿಯೆ
  8. D.Ravivarma

    ಅಂದು ಬೆಳಗಾಂವಿಯ ‘ಸ್ಕೂಲ್ ಆಫ್ ಕಲ್ಚರ್’ ತುಂಬ ಜನವೋ ಜನ. ನಾಟಕ ನೋಡಲು ಧಾರವಾಡದಿಂದ ಜಿ.ಬಿ. ಜೋಶಿ, ಕೀರ್ತಿನಾಥ ಕುರ್ತಕೋಟಿ ಇತ್ಯಾದಿ ಬಂದಿದ್ದರು. ಮುಂದಿನ ಸಾಲಿನಲ್ಲಿಯೇ ಕೂತಿದ್ದ ಅಜ್ಜನ ಮುಖದಲ್ಲಿ ಸಂತಸ ಅಲೆಯಲೆಯಾಗಿ ಕಂಡುಬರುತ್ತಿತ್ತು.
    ನಾಟಕ ಮುಗಿದಮೇಲೆ ಅವರೆಲ್ಲ ಗ್ರೀನ್ ರೂಮಿಗೆ ಬಂದರು. ‘ನಿರ್ದೇಶಕ’ ಜೋಶಿಯನ್ನು ‘ನಾಟಕಕಾರ’ ಜೋಶಿಯವರು ಅಂದು ಒಂದು ಸಲ ಕಣ್ಣ ತುಂಬಾ ನೋಡಿದರು… ಬಾಗಿ ನಮಿಸಹೋದ ಆತನನ್ನು ತಡೆದ ಜಿ.ಬಿ. ಪ್ರೀತಿಯಿಂದ ಬೆನ್ನ ಮೇಲೊಮ್ಮೆ ಚಪ್ಪರಿಸಿದರು. ಅದು ಅವರ ಅಭಿನಂದನೆಯ ರೀತಿ, ಆ ಪ್ರಯೋಗದ ಬಗ್ಗೆ ಅವರು ಕೊಟ್ಟ ಪ್ರಮಾಣಪತ್ರ.
    ಜಯತೀರ್ಥನ ಕನಸು ನನಸಾಗಿತ್ತು. ‘ಜಡಭರತ’ರಿಗೆ ತೃಪ್ತಿಯಾಗಿತ್ತು.
    ನಾನು ಅಲ್ಲೇ ನಿಂತು ಅದನ್ನೆಲ್ಲ ನೋಡುತ್ತಿದ್ದೆ. ಅಜ್ಜ ನನ್ನತ್ತ ಬಂದರು. ಬಲಗೈ ಮುಷ್ಟಿಯಿಂದ ನನ್ನ ಎಡತೋಳಿಗೆ ಒಂದು ಗುದ್ದಿದರು…
    ಅವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದುದೇ ಹಾಗೆ…….
    sir , it is excellent….

    ಪ್ರತಿಕ್ರಿಯೆ
  9. hipparagi Siddaram

    ಖರೇವಂದ್ರೂ….ರಂಗಪಯಣದಲ್ಲಿಯ ನಿಮ್ಮ ಒಂದೊಂದು ಅನುಭವಗಳು ಸಹ ಅಮೃತತ್ವವಿದ್ದಂಗೆ ಇವೆ….ನನಗೆ ಏನು ಹೇಳಬೇಕೆಂಬುದೇ ತಿಳಿಯುತ್ತಿಲ್ಲ….ರಂಗಭೂಮಿ ಅಜರಾಮರ….ಶುಭದಿನ ಸರ್….ನಮಸ್ಕಾರಗಳು !

    ಪ್ರತಿಕ್ರಿಯೆ
  10. bharathi

    ಎಂಥಾ ಅದ್ಭುತ ಬರಹ ಇದು ! ಸತ್ತವರ ನೆರಳು ನಾಟಕ ನೋಡಿದ್ದೀನಿ ಆದರೆ ಬಿ.ವಿ.ಕಾರಂತರದ್ದು … ಇದು ಎಂದಾದ್ರೂ ಸಿಗುತ್ತಾ? ನಿಮ್ಮ ನಾಟಕದ ಹಸ್ತಪ್ರತಿ ನೀರು ಪಾಲಾಗಿದ್ದು ಓದ್ತಾ ಒಂದು ಸಣ್ಣ ಕೂಗು ಬಂದುಬಿಡ್ತು ನನ್ನಿಂದ …

    ಪ್ರತಿಕ್ರಿಯೆ
  11. Pushparaj Chauta

    ನೆನಪಿನ ನೆರಳು ಹಿಂಬಾಲಿಸುತ್ತಿದ್ದೇನೆ ಸರ್. ಹ್ಯಾಂಗ್ ನೆನಪಾ ಇಟ್ಕೋತೀರಿ ಸರ್ ಇವೆಲ್ಲಾ? ನಮಗ ಈಗ ಮಾಡಿದ್ದು ಮುಂದಿನ ಎರಡು ನಿಮಿಷಕ್ಕ ನೆನಪಿರಂಗಿಲ್ಲ… ಮಾಡೋ ‘ಅಗಾಧ ಸಾಧನೆ’ ನೆನಪ ಹಾರಂಗಿಲ್ಲ ಬಿಡ್ರೀ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: