ಗೋಪಾಲ ವಾಜಪೇಯಿ ಕಾಲಂ : ‘ಶ್ವೇತವೃತ್ತ’ದ ಸುತ್ತಮುತ್ತ…

ಸುಮ್ಮನೇ ನೆನಪುಗಳು- 29

ನಮ್ಮ ತಂಡಕ್ಕೆ ‘ತಾಮ್ರಪತ್ರ’ ನಿರ್ದೇಶಿಸಿದ ಮೇಲೆ ಜಯತೀರ್ಥ ಜೋಶಿ ನನ್ನನ್ನು ಸುಮ್ಮನೆ ಕೂಡಗೊಡಲಿಲ್ಲ. ‘ಕೈತುಂಬಾ’ ಕೆಲಸ ಕೊಡತೊಡಗಿದರು. ಬರೆಯುವ ಕೆಲಸ. ನನ್ನ ವೃತ್ತಿಯೇ ಬರೆಯುವುದು. ಅದಕ್ಕೇ ಸಂಬಳ ಸಿಗುತ್ತಿತ್ತು ನನಗೆ. ಆದರಿಲ್ಲಿ ಜಯತೀರ್ಥನ ಕೆಲಸದಿಂದ ದೊರೆಯುತ್ತಿದ್ದದ್ದು ಹಣವಲ್ಲ, ಅದಕ್ಕಿಂತ ಎಷ್ಟೋ ಮಿಗಿಲಾದ ತೃಪ್ತಿ.

ಆದರೂ ಒಮ್ಮೊಮ್ಮೆ ತಲೆಚಿಟ್ಟು ಹಿಡಿದು ಹೋಗುತ್ತಿತ್ತು. ಹಗಲಿಡೀ ಪತ್ರಿಕಾಲಯದಲ್ಲಿ ಕೆಲಸ, ಮತ್ತು, ಮನೆಗೆ ಬಂದ ಮೇಲೆ ತಡರಾತ್ರಿಯ ತನಕ ಜಯತೀರ್ಥನ ಕೆಲಸ. ಅದರಿಂದ ತಪ್ಪಿಸಿಕೊಳ್ಳಲು ನೋಡುವ ಯತ್ನಗಳೆಲ್ಲ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ. ಮರುದಿನ ನೇರ ನನ್ನ ಕಚೇರಿಗೆ ಬಂದು ಬಿಡುವ ಆಸಾಮಿ ಆತ. ಪುಣ್ಯಕ್ಕೆ ಆಗ ನಮ್ಮ ಕಚೇರಿಯಲ್ಲಿ ಜೋಶಿಯನ್ನು, ಆತನ ಮನೆತನದ ಘನತೆಯನ್ನು ಅರಿತ ಹಿರಿಯರಿದ್ದರು.

ಹಾಗೆ ನೋಡಿದರೆ ನಾನು ಕೆಲಸ ಮಾಡುತ್ತಿದ್ದ ‘ಕಸ್ತೂರಿ’ ಪತ್ರಿಕೆಗೂ ನಾಟಕ ಸಾಹಿತ್ಯಕ್ಕೂ ಏನೋ ಒಂದು ಅವಿನಾಭಾವ ಸಂಬಂಧವಿದ್ದಂತೆ ತೋರುತ್ತದೆ. ಪಾ.ವೆಂ. ಆಚಾರ್ಯರು ‘ಕಸ್ತೂರಿ’ಯನ್ನು ಕಟ್ಟಿ ಬೆಳೆಸಿದರಷ್ಟೇ. ಆರಂಭಕಾಲದಿಂದಲೂ ಆಚಾರ್ಯರ ಜೊತೆ ಇದ್ದವರು ಜಿ. ಜಿ. ಹೆಗಡೆ ಎಂಬೊಬ್ಬರು. (ಅವರ ಮಗ ಗೋಪಾಲ ಹೆಗಡೆ ಸದ್ಯ ‘ಪ್ರಜಾವಾಣಿ’ಯ ಸಹ ಸಂಪಾದಕ. ಕ್ರೀಡಾ ಲೇಖನಗಳಿಗೆ ಹೆಸರಾದವರು.) ಮೂಲತಃ ಒಬ್ಬ ನಾಟಕಕಾರರಾಗಿದ್ದ ಈ ಜಿ. ಜಿ. ಹೆಗಡೆಯವರು ಬರೆದದ್ದು ‘ಶಾಲಾ ಮಾಸ್ತರ್’, ‘ಹರಿಶ್ಚಂದ್ರ’ ಮುಂತಾದ ಒಟ್ಟು 12 ಪೂರ್ಣಾವಧಿಯ ನಾಟಕಗಳು. ಏಣಿಗಿ ಬಾಳಪ್ಪನವರ ಕಂಪನಿಗೆ ಅವರು ಪೂರ್ಣಾವಧಿಯ ನಾಟಕಗಳನ್ನು ಬರೆದುಕೊಡುತ್ತಿದ್ದರು. ಮತ್ತು, ಅವು ನೂರಾರು ಪ್ರಯೋಗಗಳನ್ನು ಕಾಣುತ್ತಿದ್ದವು.

ನಾನು ‘ಕಸ್ತೂರಿ’ಯನ್ನು ಸೇರುವ ಹೊತ್ತಿಗೆ ಜಿ. ಜಿ. ಹೆಗಡೆಯವರು ನಿವೃತ್ತರಾಗಿ ವರ್ಷಗಳೇ ಆಗಿತ್ತು. ಆದರೆ, ‘ಕಸ್ತೂರಿ’ಯ ಹಳೆಯ ಸಂಚಿಕೆಗಳು ನನಗೆ ಅವರ ಪುರಾಣ ಜ್ಞಾನ, ಇತಿಹಾಸದ ಬಗೆಗಿನ ಮಾಹಿತಿ, ಮತ್ತು ಅವರ ಬರವಣಿಗೆಯ ಶೈಲಿಗಳ ಪರಿಚಯ ಮಾಡಿಸಿ ನನ್ನನ್ನು ಅವಾಕ್ಕಾಗಿಸಿಬಿಟ್ಟವು. (‘ಕಸ್ತೂರಿ’ಯ ಹಳೆಯ ‘ವಸಂತ ಸಂಚಿಕೆ’ಯೊಂದರಲ್ಲಿ ಪ್ರಕಟವಾಗಿದ್ದ ಶ್ರೀರಂಗರ ಒಂದು ಏಕಾಂಕ ‘ಸಹನಾವವತು… ಸಹನೆ ಮೀರಿತು…’ ಕಣ್ಣಿಗೆ ಬಿದ್ದದ್ದು ಆ ಸಂದರ್ಭದಲ್ಲೇ.)

‘ಕಸ್ತೂರಿ’ಯ ನನ್ನ ಹಿರಿಯ ಸಹೋದ್ಯೋಗಿಗಳಿಗೆ ರಂಗಭೂಮಿಯಲ್ಲಿ ತೀರ ಆಸಕ್ತಿ ಇರದಿದ್ದರೂ, ನಮ್ಮ ನಾಟಕ ಪ್ರದರ್ಶನಗಳಿದ್ದಾಗ ಬಂದು ನೋಡುವಷ್ಟು ಅಭಿರುಚಿ ಇತ್ತು. ಅವರೆಲ್ಲ ನನ್ನ ಆಸಕ್ತಿಗೆ ಎಂದೂ ಅಡ್ಡ ಬರುತ್ತಿರಲಿಲ್ಲ. ಹೀಗಾಗಿಯೇ ನಾನು ಕೊಂಡಜ್ಜಿ, ಹೆಗ್ಗೋಡುಗಳ ನಾಟಕ ರಚನಾ ಶಿಬಿರ, ಹೂವಿನ ಹಡಗಲಿಯ ಜಾನಪದ ರಂಗಭೂಮಿ ಅಧ್ಯಯನ ಶಿಬಿರ, ಮತ್ತು ಅಲ್ಲಲ್ಲಿ ನಡೆಯುತ್ತಿದ್ದ ನಾಟಕೋತ್ಸವಗಳಿಗೆ ನಿರುಮ್ಮಳವಾಗಿ ಹೋಗಿ ಬರಲು ಸಾಧ್ಯವಾದದ್ದು.

ನಮ್ಮದು ಪತ್ರಿಕಾ ಕಚೇರಿಯಾದ್ದರಿಂದ ಲೇಖಕರು ಬರುತ್ತಿದ್ದುದು ಸಹಜವೇ… ಅದರಲ್ಲೂ ವಿಶೇಷವಾಗಿ ಮೇ ತಿಂಗಳಲ್ಲಿ ಹುಬ್ಬಳ್ಳಿ-ಧಾರವಾಡಗಳಲ್ಲಿ ನಡೆಯುತ್ತಿದ್ದ SSLC, PUC ಪರೀಕ್ಷೆಗಳ ‘ಉತ್ತರ ಪತ್ರಿಕಾ ಮೌಲ್ಯ ಮಾಪನ’ಕ್ಕೆ ಬರುತ್ತಿದ್ದ ಲೇಖಕ-ಶಿಕ್ಷಕರು ಪ್ರೀತಿಯಿಂದ ‘ದಾಳಿ’ಯಿಡುತ್ತಿದ್ದರು. ಆ ಕಾಲದಲ್ಲಿ ‘ಸಂಪಾದಕರನ ಭೆಟ್ಯಾಗಬೇಕು’ ಎಂಬ ಇಚ್ಛೆಯಿಂದ ನಮ್ಮ ಕಚೇರಿಯ ಬಾಗಿಲಿಗೆ ಬರುತ್ತಿದ್ದವರನ್ನು ಸೆಕ್ಯುರಿಟಿಯವರು ಗೌರವದಿಂದ ಒಳಗೆ ಬಿಡುತ್ತಿದ್ದರು.

ಹೀಗೆ ಬರುತ್ತಿದ್ದವರಲ್ಲಿ ಒಮ್ಮೊಮ್ಮೆ ನಾಟಕಕಾರರು, ರಂಗ ನಿರ್ದೇಶಕರು, ಗಾಯಕರು, ಸಂಗೀತ ಸಂಯೋಜಕರು ಇರುತ್ತಿದ್ದರು. ಅವರೊಂದಿಗೆ ನಾಟಕ ಸಾಹಿತ್ಯದ ಬಗ್ಗೆ, ಸಂಗೀತದ ಬಗ್ಗೆ ನಮ್ಮ ಸಂಪಾದಕರು ಶುರು ಮಾಡುತ್ತಿದ್ದ ಚರ್ಚೆ ನನ್ನ ‘ಮಾಹಿತಿಕೋಶದ ವಿಸ್ತರಣೆ’ಗೆ ನೆರವಾಯಿತು. ಹೀಗೆ ಬಂದು ನಮ್ಮ ಕಚೇರಿಯ ಅತಿಥ್ಯ ಸ್ವೀಕರಿಸಿದವರಲ್ಲಿ ಏಣಿಗಿ ಬಾಳಪ್ಪ, ಬಿ.ವಿ. ಕಾರಂತ, ಕೆ.ವಿ. ಸುಬ್ಬಣ್ಣ, ವಿ. ರಾಮಮೂರ್ತಿ, ಹುಕ್ಕೇರಿ ಬಾಳಪ್ಪ, ಸಿ. ಅಶ್ವತ್ಥ, ಶಿವಮೊಗ್ಗ ಸುಬ್ಬಣ್ಣ, ಗಂಗಾಧರ ಸ್ವಾಮಿ, ಆರ್. ನಾಗೇಶ್, ಶ್ರೀಪತಿ ಮಂಜನಬೈಲು, ಮುಂತಾದವರು ಮುಖ್ಯರು. ವಿಮರ್ಶಕ ಟಿ.ಪಿ. ಅಶೋಕ ‘ಕಸ್ತೂರಿ’ಗಾಗಿ ಬಿ.ವಿ. ಕಾರಂತರ ವಿಶೇಷ ಸಂದರ್ಶನ ಲೇಖನ ಬರೆದುಕೊಟ್ಟದ್ದು ಇಂಥದೇ ಒಂದು ಸಂದರ್ಭದಲ್ಲಿ. (ಅದು ಕಾರಂತರ ‘ಭೋಪಾಲ ಕಾಂಡ’ಕ್ಕೂ ಮೊದಲು.) ಅವರಿಬ್ಬರೂ ಹುಬ್ಬಳ್ಳಿಗೆ ಬಂದಿದ್ದಾಗ…

ಹೀಗೊಮ್ಮೆ ಜಯತೀರ್ಥ ಜೋಶಿ ಬಂದ ಸಂದರ್ಭದಲ್ಲಿ ನಾನು ಬಾಸ್ ಚೇಂಬರಿನಲ್ಲಿದ್ದೆ. ನಮ್ಮ ಬಾಸ್ ಮಾಧವ ಮಹಿಷಿ. ಆಗವರು ‘ಕಸ್ತೂರಿ’ಯ ಸಹ ಸಂಪಾದಕ. ಕಾನೂನು ಪದವಿ ಪಡೆದವರು. ಬೇಂದ್ರೆಯವರ ಹುಟ್ಟೂರು ಶಿರಹಟ್ಟಿಯ ಸುಪ್ರಸಿದ್ಧ ಮನೆತನದ ಪ್ರತಿಭಾವಂತ ಈ ಮಾಧವ ಮಹಿಷಿ. ‘ಕನ್ನಡ ಸಾಹಿತ್ಯ ಚರಿತ್ರೆ’ಯನ್ನು ಬರೆದ ಡಾ. ರಂ. ಶ್ರೀ. ಮುಗಳಿಯವರ ಶಿಷ್ಯ. ವರ್ತನೆ ತುಸು ಒರಟು ಎಂಬಂತೆ ಕಂಡರೂ, ಮಾತು ಸ್ವಲ್ಪ ಕಹಿ ಎನಿಸಿದರೂ, ಪ್ರಾಂಜಲ ಮನಸ್ಸಿನ ವ್ಯಕ್ತಿ. ಅನಿಸಿದ್ದನ್ನು ಎದುರಾ ಎದುರಾ ಹೇಳಿಬಿಡುವಂಥ ಮನುಷ್ಯ. ಯಾವುದೇ ವಿಷಯವಿದ್ದರೂ ಗಂಟೆಗಟ್ಟಲೆ ಚರ್ಚಿಸಬಲ್ಲಂಥವರು. ನನಗೆ ‘ಬರವಣಿಗೆ’ಯನ್ನು ಕಲಿಸಿದ ಗುರು. ಜಯತೀರ್ಥನ ಬಗ್ಗೆ ಅವರಿಗೆ ಆತ್ಮೀಯಭಾವವಿತ್ತು. ಅದಕ್ಕೆ ಕಾರಣ ಆತನ ತಂದೆ ಜಿ. ಬಿ. ಜೋಶಿ ಶಿರಹಟ್ಟಿಯಲ್ಲಿ ಒಂದೆರಡು ವರ್ಷ ಹೈಸ್ಕೂಲು ಮಾಸ್ತರಾಗಿ ಕೆಲಸ ಮಾಡಿದ್ದು. (‘ಜಡಭರತ’ ನಾಮಾಂಕಿತ ಜಿ.ಬಿ.ಯವರ ಅಣ್ಣ ಈ ಜಿ. ಬಿ. ಜೋಶಿಯವರು. ಪಂ. ಭೀಮಸೇನ ಜೋಶಿಯವರ ತಂದೆ.)

ಅವತ್ತು ಒಳಗೆ ಬಂದ ಜಯತೀರ್ಥ ಜೋಶಿಯನ್ನು ಚೇಂಬರಿಗೇ ಕರೆದರು ಮಹಿಷಿ. ಆಗ ಜೋಶಿಯ ಕೈಯಲ್ಲಿದ್ದದ್ದು ಬ್ರೆಕ್ಟ್ ಬರೆದ ‘ದಿ ಕಕೇಶಿಯನ್ ಚಾಕ್ ಸರ್ಕಲ್…’ ನಾಟಕ. ಮಹಿಷಿಯವರ ಕಣ್ಣು ಅದರ ಮೇಲೆ ಬಿತ್ತು. ಸರಿ, ಶುರುವಾಯಿತು ಆ ಕುರಿತ ಅವರ ಜಿಜ್ಞಾಸೆ. ಅವತ್ತು ಅವರು ತಮಗೆ ತಿಳಿದದ್ದನ್ನು ಹೇಳುತ್ತಾ, ತಿಳಿಯದ್ದನ್ನು ಕೇಳಿ ತಿಳಿಯುತ್ತಾ ಜಯತೀರ್ಥನೊಂದಿಗೆ ಮಾಡಿದ ಚಿಂತನ-ಮಂಥನ ಇದೆಯಲ್ಲ, ಅದು ಎಷ್ಟೊಂದು ವಿಷಯಗಳನ್ನು ತಿಳಿಸಿಕೊಟ್ಟಿತು ನನಗೆ…!

‘ಮಾತು ಮಾತು ಮಥಿಸಿ ಬಂತು ಭಾವದ ನವನೀತ’ ಎಂಬ ಬೇಂದ್ರೆ ವಾಣಿ ನೂರಕ್ಕೆ ನೂರು ನಿಜ…

ವಾಸ್ತವ ಸಂಗತಿ ಎಂದರೆ ಜೋಶಿ ಅವತ್ತು ಆ ನಾಟಕದ ಕುರಿತು ಮಾತನಾಡಲೆಂದೇ ನನ್ನ ಬಳಿಗೆ ಬಂದದ್ದು. ಹೆಗ್ಗೋಡಿನ ‘ನೀನಾಸಂ ಜನಸ್ಪಂದನ’ ಯೋಜನೆಯ ಅಡಿಯಲ್ಲಿ ಜೋಶಿ ಗ್ರಾಮೀಣ ಪ್ರದೇಶಗಳಲ್ಲಿ ರಂಗ ತರಬೇತಿ ಶಿಬಿರ ಏರ್ಪಡಿಸುತ್ತಿದ್ದರು. ಅಲ್ಲಲ್ಲಿಯ ಸಂಪನ್ಮೂಲಗಳು, ಸಾಂಸ್ಕೃತಿಕ ಹಿನ್ನೆಲೆ, ಜಾನಪದ ಕಲೆಗಳನ್ನು ಗಮನದಲ್ಲಿಟ್ಟುಕೊಂಡು ಆ ಶಿಬಿರಾರ್ಥಿಗಳ ಪ್ರತಿಭೆಯನ್ನು ಬಳಸಿಕೊಂಡು ಒಂದು ನಾಟಕವನ್ನು ಆಡಿಸುವುದು ಜೋಶಿಯ ಉದ್ದೇಶ. ಅದೊಂದು ರೀತಿ ಪ್ರಾದೇಶಿಕ ರಂಗಭೂಮಿಯ ಪುನರುತ್ಥಾನದ ಪ್ರಯತ್ನ.

ಅದಾಗಲೇ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಜಯತೀರ್ಥ ಶಿಬಿರ ಶುರು ಮಾಡಿಯಾಗಿತ್ತು. ಆ ಶಿಬಿರಾರ್ಥಿಗಳಲ್ಲಿ ಅಡಗಿದ ಪ್ರತಿಭೆಯನ್ನು ಗುರುತಿಸಿ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದಷ್ಟೇ ಜೋಶಿಯ ಉದ್ದೇಶವಾಗಿರಲಿಲ್ಲ. ಆಯಾ ಶಿಬಿರಾರ್ಥಿ ಮೈಚಳಿ ಬಿಟ್ಟು ಎಲ್ಲರೊಡನೊಂದಾಗಿ ನಿಲ್ಲಬೇಕು ; ಎಲ್ಲರೊಡನೆ ಒಂದಾಗಿ ನಿಂತು ತನ್ನ ಪ್ರದೇಶದ ಸಾಂಸ್ಕೃತಿಕ ಮಹತ್ವವನ್ನು ಇತರರಿಗೆ ಸಾರಿ ಹೇಳುವ ಮಹತ್ತರ ಕಾರ್ಯವನ್ನು ನಿರಂತರ ಕ್ರಿಯೆಯನ್ನಾಗಿ ಮಾಡಿಕೊಳ್ಳಬೇಕು.

ಇದು ಜಯತೀರ್ಥ ಕಂಡ ಕನಸು.

ಆವತ್ತು ರಾತ್ರಿ ನನ್ನೆದುರು ಕಿತ್ತೂರಿನ ಪ್ರತಿಭೆಗಳನ್ನು ಪ್ರಶಂಸಿಸಿದ ಜಯತೀರ್ಥ, ”ಆ ಎಲ್ಲಾರ್ನೂ ಒಂದಿಲ್ಲಾ ಒಂದು ರೀತಿ ನಾಟಕದೊಳಗ ಹಿಡದಿಟಗೋಬೇಕು. ಹಂಗ ಎಲ್ಲಾರ್ನೂ ಹಿಡದಿಟಗೋಬಹುದಾದ ನಾಟಕ ಇದು… ಇದನ್ನ ಆಧಾರ ಆಗಿ ಇಟಗೊಂಡು, ನಮ್ಮ ನೆಲದ್ದು ಅನಸೂವಂಥಾ ಒಂದು ನಾಟಕಾ ಬರದು ಕೊಡ್ರಿ. ಮುಂದಿನ ತಿಂಗಳ ಈ ನಾಟಕಾ ಆಗಬೇಕು ಕಿತ್ತೂರಾಗ…” ಅಂತ ‘ಚಾಕ್ ಸರ್ಕಲ್’ ಪುಸ್ತಕವನ್ನ ನನ್ನತ್ತ ಸರಿಸಿದರು.

ಪುಸ್ತಕವನ್ನು ಕೈಗೆತ್ತಿಕೊಂಡು ಸುಮ್ಮನೆ ಪುಟಗಳನ್ನು ‘ಪರ್’ ಎಂದು ಆಚೆಯಿಂದ ಈಚೆಗೊಮ್ಮೆ, ಈಚೆಯಿಂದ ಆಚೆಗೊಮ್ಮೆ ತಿರುವಿ, ”ಹಾಂಗಿದ್ರ ನೀವು ನನಗ ಇದರದೊಂದು ರೀಡಿಂಗ್ ಕೊಡ್ರಿ…” ಅಂತ ಪುಸ್ತಕವನ್ನು ಆತನೆಡೆ ತಳ್ಳಿದೆ.

ಯಾರಾದರೂ ನಾಟಕ ಅಥವಾ ಕಾದಂಬರಿಯನ್ನು ಕಿವಿಗೆ ತಟ್ಟುವಂತೆ, ಮನಕ್ಕೆ ಮುಟ್ಟುವಂತೆ ಓದುತ್ತಿದ್ದರೆ ನನಗೆ ಬಲೇ ಖುಷಿ. ಕಣ್ಣುಮುಚ್ಚಿ ಕೂತು ಅದನ್ನು ಆಸ್ವಾದಿಸುವುದಿದೆಯಲ್ಲ ಆ ಅನುಭವವೇ ಬೇರೆ.

ಈಗಂತೂ ನನ್ನೆದುರಿಗೆ ಬ್ರೆಕ್ಟನ ನಾಟಕವನ್ನು ಓದುತ್ತಿದ್ದವರು ಅದನ್ನು ನಿರ್ದೇಶಿಸುವ ಇರಾದೆಯಿದ್ದ ನಿರ್ದೇಶಕನೇ. ಅದು ಇನ್ನೂ ಒಂದು ಪ್ಲಸ್ ಪಾಯಿಂಟು.

ಜಯತೀರ್ಥ ಸಂಭಾಷಣೆಗಳನ್ನು ಹೇಳುವಾಗಿನ ಭಾವಗಳು, ಏರಿಳಿತಗಳು ನನಗೆ ಆ ಮೊದಲೇ ಗೊತ್ತಿದ್ದವು. ಆತ ಗಿರೀಶ ಕಾರ್ನಾಡರ ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಈರಗನ ಪಾತ್ರಕ್ಕೆ ಧ್ವನಿದಾನ ಮಾಡಿದ ರೀತಿಗೆ, ಆ ತನ್ಮಯತೆಗೆ ಮಾರು ಹೋಗಿದ್ದೆ.

ಆ ರಾತ್ರಿ ಮಿರ್ಚಿ-ಮಂಡಕ್ಕಿಗಳ ಸಣ್ಣ ಗುಡ್ಡೆಯನ್ನು ಹಾಕಿಕೊಂಡು ನಾವಿಬ್ಬರೂ ‘ಸರ್ಕಲ್ ‘ ಸುತ್ತುವುದಕ್ಕೆ ಸಿದ್ಧರಾದೆವು.

ಆತ ಓದುತ್ತ ಹೋದ ; ನಾನು ‘ತಿನ್ನುತ್ತ’ ಹೋದೆ…

-೦-೦-೦-೦-೦-

ನೀವು ಒಂದು ಕಥೆಯನ್ನು ಕೇಳುವಾಗ, ಒಂದು ಕಾದಂಬರಿಯನ್ನು ಓದುವಾಗ ಅಥವಾ ಒಂದು ಘಟನೆಯ ವಿವರಗಳನ್ನು ಆಲಿಸುವಾಗ ಅದೆಲ್ಲವನ್ನೂ ನಿಮ್ಮ ಮನದಲ್ಲಿ ‘ಚಿತ್ರಿಸಿ’ಕೊಳ್ಳತೊಡಗುತ್ತೀರಷ್ಟೇ … ಅವತ್ತು ಮಹಿಷಿಯವರ ಪ್ರಶ್ನೆಗಳಿಗೆ ಜಯತೀರ್ಥ ಉತ್ತರಿಸುತ್ತಿದ್ದಾಗಲೇ ನನಗೆ ‘ದಿ ಕಕೇಶಿಯನ್ ಚಾಕ್ ಸರ್ಕಲ್…’ ಬಗ್ಗೆ ಕೆಲವು ವಿವರಗಳು ಗೊತ್ತಾಗಿದ್ದವು. ಆ ಆಧಾರದ ಮೇಲೆ ಒಂದು ಕಥೆ ಅದಾಗಲೇ ನನ್ನೊಳಗೆ ರೂಪುಗೊಳ್ಳತೊಡಗಿತ್ತು. ಆ ಸಂಜೆ ನಾಟಕದ ವಾಚನ ಆ ‘ಕಥೆ’ಗೆ ಇನ್ನಷ್ಟು ಸ್ಪಷ್ಟ ರೂಪವನ್ನು ಇತ್ತಿತು.

ಇದಕ್ಕೆ ಕೆಲವು ವಾರಗಳ ಹಿಂದಷ್ಟೇ ನಾನು ಕೊಂಡಜ್ಜಿಯ ನಾಟಕ ರಚನಾ ಶಿಬಿರದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿ ಶಿಬಿರದ ಅಂಗವಾಗಿ ಪ್ರತಿ ಸಂಜೆ ಏರ್ಪಡಿಸುತ್ತಿದ್ದ ಜಾನಪದ ರಂಗಶೈಲಿಯ ಪ್ರದರ್ಶನಗಳು ನಮ್ಮನ್ನೆಲ್ಲ ಚಕಿತಗೊಳಿಸಿದ್ದವು… ಆ ಪೈಕಿ ನನ್ನನ್ನು ಹೆಚ್ಚು ಹುಚ್ಚಿಗೀಡುಮಾಡಿದ್ದು ‘ಜೋಗ್ಯಾರ ಆಟ’. ಸೊರಬದ ಕಡೆಯ ಜೋಗಿ ಫಕ್ಕೀರಪ್ಪ ಅಂಥ ಮೋಡಿ ಮಾಡಿಬಿಟ್ಟಿದ್ದ.

ಅರೆ…! ಬ್ರೆಕ್ಟನ ಈ ಕಥೆಯನ್ನು ನಮ್ಮ ಜೋಗ್ಯಾರ ಆಟದ ಶೈಲಿಯಲ್ಲಿ ಹೇಳಿದರೆ ಹೇಗೆ ಎಂಬೊಂದು ಯೋಚನೆ ಬಂತು.

ಹೌದು… ಅದೇ ಸರಿ. ‘ಹಿರಿಜೋಗಿ’ (ಫಕ್ಕೀರಪ್ಪ) ಮತ್ತು ‘ಕಿರಿಜೋಗಿ’ (ಚಿಕ್ಕೀರಪ್ಪ) ಕಥೆಯ ಸೂತ್ರಧಾರರು. ಅವರ ಮೂಲಕ ಕಥೆ ಬಿಚ್ಚಿಕೊಳ್ಳುತ್ತಾ ಸಾಗಬೇಕು. ಹಾಡುಗಳು ಮತ್ತು (ಅಲ್ಲಲ್ಲಿ) ಹಾಸ್ಯೋಕ್ತಿಗಳು ಎಲ್ಲ ಸೇರಿ ಈ ನಾಟಕ ಒಂದು ‘ರಸಘಟ್ಟಿ’ಯಾಗಬೇಕು. ಧಾರವಾಡ-ಬೆಳಗಾವಿಗಳ ಮಧ್ಯದ ನಾಡಿನ ‘ದೇಸಿ’ಭಾಷೆಯನ್ನು ಬಳಸಿಕೊಳ್ಳಬೇಕು. ನಮ್ಮ ನಡುವಿನ ಪಾತ್ರಗಳೇ ಅಲ್ಲಿ ಮೆರೆದಾಡಿ, ಅದು ಪಾಶ್ಚಾತ್ಯ ನಾಟಕವಲ್ಲ, ನಮ್ಮ ನೆಲದ್ದೇ ಕತೆ ಎಂದೆನಿಸಬೇಕು…

ಅಂತೂ ಸಿದ್ಧವಾಯಿತು ನಾಟಕ ರೂಪಾಂತರದ ನೀಲ ನಕ್ಷೆ.

ಹೀಗೆ ಶುರುವಾಯಿತು ‘ದಿ ಕಕೇಶಿಯನ್ ಚಾಕ್ ಸರ್ಕಲ್…’ನ್ನು ‘ಧರ್ಮಪುರಿಯ ಶ್ವೇತವೃತ್ತ…’ವನ್ನಾಗಿ ಕನ್ನಡಿಗರೆದುರು ನಿಲ್ಲಿಸುವ ಪ್ರಕ್ರಿಯೆ.

ಅಲ್ಲಿಯ ಗ್ರೂಷಾ ಇಲ್ಲಿ ‘ಮಲ್ಲಿ’ಯಾದಳು, ಆ ಸೈಮನ್ ಇಲ್ಲಿಯ ‘ಚೆನ್ನ’ನಾದ, ಮತ್ತು ಮಹಾನುಭಾವ ಅಜ್ದಕ್ ಇಲ್ಲಿ ‘ಅಜ್ಜಪ್ಪ’ನಾದ …

ಇದೆಲ್ಲವನ್ನೂ ಅರಿತ ಜೋಶಿಗೆ ಅದೆಷ್ಟು ಆನಂದವಾಯಿತೆಂದರೆ ನನ್ನನ್ನಾತ ಅನಾಮತ್ತಾಗಿ ಎತ್ತಿಕೊಂಡು ಕುಣಿದಾಡಿಬಿಟ್ಟರು.

ಅವತ್ತು ರಾತ್ರಿಯೇ ಸಿದ್ಧವಾಯಿತು ‘ಧರ್ಮಪುರಿಯ ಶ್ವೇತವೃತ್ತ…’ದ ಮೊದಲ ಹಾಡು :

ಕುಂತ ಮಂದಿಗೆಲ್ಲಾ ನಮ್ಮ ಶರಣೆಪ್ಪಾ

ನಿಂತ ಮಂದಿಗೆಲ್ಲಾ ನಮ್ಮ ಶರಣು…

ಬಂದ ಬಂದು-ಬಾಂದವ ಜನರೀಗೆ

ಚಂದದಿಂದಲಿ ನಮ್ಮ ಶರಣೆಪ್ಪಾ…

ಕಲತ ಮಂದಿ ಬಂದೀರಿ ತಂದೀ

ನೀವs ನಮಗಿಂದ ಗಣಪsತಿ…

ಕುಲುಕುಲು ನಕ್ಕೊಂತ ಕುಂತ ಅಕ್ಕಗೋಳ್ರ್ಯಾ

ನೀವ ಸೊಂತ ಲಕ್ಷ್ಮಿ-ಸರಸೋತಿ…

ಏ ಮರಿಗೋಳ್ರ್ಯಾ ಕಿರಿಕಿರಿ ಬ್ಯಾಡಾ

ಗಂಬೀರಾಗಿರಿ ಗೊಂಬೀ ಗತಿ

ಮಜಾಶೀರಲೇ ಮಜಕೂರ ಹೇಳತೀವು

ರಾಜಾ-ರಾಣಿ-ಮಂತ್ರಿಗಳ ಕತಿ…

-೦-೦-೦-೦-೦-

ಬೆಳಗಿನ 10.30ರಿಂದ ಸಂಜೆ 5.30 ರ ವರೆಗೆ ಕಚೇರಿ. ಆಮೇಲೆ ಸಂಜೆ 6.00 ರ ಬಸ್ ಹಿಡಿದು ಕಿತ್ತೂರಿಗೆ ಧಾವಿಸಬೇಕು. ಅಲ್ಲಿ ಶಿಬಿರದ ಪಾಠ ಮುಗಿಯುವ ತನಕ ‘ರೂಪಾಂತರ ಕಾರ್ಯ’ದ ಮುಂದುವರಿಸಬೇಕು. ಜಯತೀರ್ಥ ಬಿಡುವಾಗಿ ಬಂದ ಮೇಲೆ ಆ ತನಕ ಬರೆದದ್ದನ್ನು ಓದಿ ಹೇಳಬೇಕು. ಆತ ಸೂಚಿಸುವ ತಿದ್ದುಪಡಿಗಳನ್ನು ಗುರುತು ಹಾಕಿಕೊಂಡು ಮುಂದಿನ ಭಾಗಕ್ಕೆ ದಾಟಬೇಕು… ಬರೆಯುವ ಕೆಲಸ ಒಮ್ಮೊಮ್ಮೆ ಬೆಳಗಿನ ಜಾವ 4.00 ರ ತನಕವೂ ಮುಂದುವರಿಯುತ್ತಿತ್ತು. ಆ ಮೇಲೆ ಎಂಟೊಂಬತ್ತರ ತನಕ ಗಡದ್ದು ನಿದ್ದೆ. ಆಮೇಲೆದ್ದು, ಹುಬ್ಬಳ್ಳಿಗೆ ಬಂದು, ಸ್ನಾನ-ಊಟಗಳ ಶಾಸ್ತ್ರ ಮುಗಿಸಿ ಸೀದಾ ಕಚೇರಿಗೆ… ಮುಂದಿನ ಇಪ್ಪತ್ತು ದಿನ ಹೀಗೇ ಸಾಗಿತು ದಿನಚರಿ.

‘ಧರ್ಮಪುರಿಯ ಶ್ವೇತವೃತ್ತ…’ದ ಬರವಣಿಗೆ ಮುಗಿದ ಮೇಲೆ, ಅಲ್ಲಲ್ಲಿ ಕುಸುರಿಯ ಕೆಲಸ ಮಾಡಿ, ಹಾಡುಗಳನ್ನು ಸೇರಿಸಿ, ಹಸ್ತಪ್ರತಿಯನ್ನು ಜೋಶಿಯ ಕೈಗೊಪ್ಪಿಸಿದೆ.

”ಊಹೂಂ… ಇಷ್ಟಕ್ಕs ಮುಗೀಲಿಲ್ಲಾ ನಿಮ್ಮ ಕೆಲಸಾ…” ಅಂತ ನಕ್ಕರು ಜಯತೀರ್ಥ. ಅರ್ಥವಾಗದೆ ಆತನತ್ತ ನೋಡಿದೆ.

”ಆ ಮಂದಿಗೆಲ್ಲಾ ನೀವು ‘ಧರ್ಮಪುರಿ’ ತೋರಸಬೇಕಲ್ಲಾ… ಅವ್ರು ಪಾಸ್ ಮಾಡ್ಬೇಕಲ್ಲಾ…” ಅಂತ ಮತ್ತೊಂದು ಅರ್ಥಪೂರ್ಣ ನಗೆ ಒಗೆದರು. ಅದರರ್ಥವಾಗಿ ಸಣ್ಣಗೆ ಎದೆ ನಡುಗಿತು. ಅದು ನಿಜಕ್ಕೂ ಪರೀಕ್ಷೆ. ಅಂತಿಂಥ ಪರೀಕ್ಷೆಯಲ್ಲ, ಅಗ್ನಿಪರೀಕ್ಷೆ…!

ಯಾಕಂದರೆ, ಆ ಶಿಬಿರದಲ್ಲಿ ಇದ್ದವರು ನಲವತ್ತಕ್ಕೂ ಹೆಚ್ಚು ಜನ. ಪಾತ್ರೆಗಳಿಗೆ ಕಲಾಯಿ ಮಾಡುವ ಹುಡುಗನಿಂದ ಹಿಡಿದು ಕಾಲೇಜು ಪ್ರಾಧ್ಯಾಪಕರ ವರೆಗೆ ಎಲ್ಲಾ ವರ್ಗದ, ಎಲ್ಲಾ ವಯಸ್ಸಿನ ಮತ್ತು ವೃತ್ತಿಯ ಜನ ಅಲ್ಲಿ ಶಿಬಿರಾರ್ಥಿಗಳಾಗಿದ್ದರು. ಕಿತ್ತೂರಿನವರಷ್ಟೇ ಅಲ್ಲ, ಸುತ್ತಲಿನ ಬೈಲೂರು, ದೇಗಾಂವ (ದೇವಗಾಂವ), ನಿಚ್ಚಣಿಕಿ, ಉಗರಖೋಡ, ದೇಗಳ್ಳಿಗಳಿಂದಲೂ ರಂಗಾಸಕ್ತರು ಬಂದಿದ್ದರು. ಅವರಿಗೆ ಜಾನಪದ ಭಾಷೆ-ಹಾಡುಗಳು ಉಸಿರಾಡಿದಷ್ಟು ಸಲೀಸು. ಅಂಥವರ ಮುಂದೆ ನಾನು ಈ ಹಸ್ತಪ್ರತಿಯನ್ನು ಓದಬೇಕು…

ಕುಂತ ಮಂದಿಗೆಲ್ಲಾ ನಮ್ಮ ಶರಣೆಪ್ಪಾ

ನಿಂತ ಮಂದಿಗೆಲ್ಲಾ ನಮ್ಮ ಶರಣು…

-ಎಂಬಲ್ಲಿಂದ ಆರಂಭಿಸಿ, ಮೊದಲಿನ ಕೆಲವು ಪುಟಗಳನ್ನು ಓದಿ ಮುಗಿಸುವ ತನಕ ಒಳಗೊಳಗೇ ಏನೋ ಅಳುಕು. ನನ್ನ ಪಾಡಿಗೆ ನಾನು ತಲೆತಗ್ಗಿಸಿ ಕೂತು ಹಸ್ತಪ್ರತಿಯಲ್ಲಿ ನೋಟ ನೆಟ್ಟು ಓದುತ್ತಲೇ ಹೋದೆ. ಸಂಘಟಕರೂ ಸೇರಿದಂತೆ ಅಲ್ಲಿದ್ದ 50 ಜನರಲ್ಲಿ ಒಬ್ಬನೇ ಒಬ್ಬನ ಮಿಸುಗಾಟವಾಗಲಿ, ಕೆಮ್ಮು-ಕೇಕರಿಸುವಿಕೆಯಾಗಲಿ, ಬೇಸರದ ಆಕಳಿಕೆಯಾಗಲಿ ಊಹೂಂ… ಕೇಳಬೇಡಿ. ಅಲ್ಲಿ ನಾನೊಬ್ಬನೇ ಕೂತು ನನ್ನ ಪಾಡಿಗೆ ನಾನು ಓದಿಕೊಳ್ಳುತ್ತಿದ್ದೇನೆಯೋ ಅಂತನಿಸಿ ಸುಮ್ಮನೆ ಒಮ್ಮೆ ತಲೆ ಎತ್ತಿದಂತೆ ಮಾಡಿ ಓರೆನೋಟ ಬೀರಿದರೆ… ಅರೆ ! ಅವರೆಲ್ಲ ಕಣ್ಣು ಮುಚ್ಚಿ ಕೂತು ನನ್ನ ಓದನ್ನು ‘ಅನುಭವಿಸು’ತ್ತಿದ್ದಾರೆ, ‘ಆನಂದಿ’ಸುತ್ತಿದ್ದಾರೆ…!

ಅಬ್ಬಾ… ಎಂದುಕೊಂಡು ವಾಚನವನ್ನು ಮುಂದುವರಿಸಿದೆ.

ಕಟಕರ ಕೈಯಾಗ ಗಿಳಿಮರಿ ಕೊಟ್ಟರ

ಲಟಲಟ ಮುರದು ತಿಂತಾರ…

ಕೊಟ್ಟವರ್ಯಾರು ಕೊಡದವರ್ಯಾರು

ಇನ್ನೂ ತರ್ರಿ ಅಂತಾರ…

-ಎಂದು ಅದರಲ್ಲಿಯ ಪುಟ್ಟ ರಾಜಕುಮಾರನ ಬೆನ್ನತ್ತಿದ ಸ್ವಾರ್ಥಿ ಪ್ರಧಾನಿ ಕಡೆಯ ಜನರ ಕುರಿತ ಸನ್ನಿವೇಶದ ದೃಶ್ಯಕ್ಕೆ ಬಂದಾಗ ಅವರೆಲ್ಲ ಅದೆಷ್ಟು ‘ಅಲರ್ಟ್’ ಆಗಿ ಕೂತಿದ್ದರು ಅಂತೀರಿ…! ಅಜ್ಜಪ್ಪನ ನ್ಯಾಯದಾನದ ರೀತಿಗೆ ಅವರೆಲ್ಲ ತಲೆದೂಗಿದರಲ್ಲ… ಆಗ ನನಗೆ ನಿರಾತಂಕ ಭಾವ…

ಪಿರುತಿಲೆ ಸಾಕಿ ಸಲೂವಾಕಿಗೆ

ಕಳ್ಳು-ಕಕಲಾತಿ ಇರೂವಾಕಿಗೆ

ತಾಯಂಬೋ ಹೆಸರs…

-ಎಂಬ ಮುಕ್ತಾಯ ಗೀತೆ ಓದಿ ಮುಗಿಸಿ, ಒಂದು ಲೋಟ ನೀರು ಕುಡಿದು, ಜೋಶಿಯತ್ತ ನೋಡಿದೆ.

ಆತ ಆ ಜನರೆಡೆ ನೋಡಿ, ‘ಹೂಂ… ಏನು…?’ ಎಂಬಂತೆ ಕೈಸನ್ನೆ ಮಾಡಿದರೆ, ಶುರುವಾಯಿತು ಒಂದು ದೀರ್ಘ ಕರತಾಡನ… ಆ ಐವತ್ತೂ ಜನರ ಚಪ್ಪಾಳೆ ನನ್ನ ಅಷ್ಟೂ ದಿನದ ಶ್ರಮವನ್ನು ಕ್ಷಣಾರ್ಧದಲ್ಲಿ ಮರೆಸಿಬಿಟ್ಟಿತು.

-೦-೦-೦-೦-೦-

‘ಧರ್ಮಪುರಿಯ ಶ್ವೇತವೃತ್ತ…’ ಪ್ರಯೋಗ ಸಂದರ್ಭದಲ್ಲಿ. ಜಯತೀರ್ಥ ಜೋಶಿ, ಪುರುಷೋತ್ತಮ ತಲವಾಟ, ‘ಅಜ್ಜಪ್ಪ’ನ ಪಾತ್ರದ ಪ್ರೊ. ಜಮಾದಾರ ಮತ್ತು  ಇಕ್ಬಾಲ್ ಅಹ್ಮದ್ ಅವರೊಂದಿಗೆ…

ಕಿತ್ತೂರಿನ ಪಾಲಿಗೆ ಅದೊಂದು ದೊಡ್ಡ ಹಬ್ಬವೇ. ಊರಿಗೆ ಊರೇ ಸಂಭ್ರಮಿಸಿತು. ಯಾರಿಗೋ ತಮ್ಮ ಮಗ ಈ ನಾಟಕದಲ್ಲಿದ್ದಾನೆಂಬ ಹೆಮ್ಮೆಯಾದರೆ, ಇನ್ನಾರಿಗೋ ತಮ್ಮ ಗಂಡನೋ ತಮ್ಮನೋ ಅಥವಾ ಸೋದರಸಂಬಂಧಿಯೋ ಅದರಲ್ಲಿ ‘ಪಾರ್ಟು ಮಾಡು’ತ್ತಿದ್ದಾನೆ ಎಂಬ ಸಂತೋಷ. ಅಂತೆಯೇ ನಾಟಕವಾಡಲು ವೇದಿಕೆಯೇ ಇರದಿದ್ದ ಕಿತ್ತೂರಿನಂಥ ಊರಿನಲ್ಲಿ ಎಲ್ಲರ ಸಹಕಾರದಿಂದ, ಶ್ರಮದಾನದಿಂದ ಒಂದು ಬಯಲು ರಂಗ ವೇದಿಕೆ ನಿರ್ಮಾಣಗೊಂಡಿತು. ಅದೆಲ್ಲ ಜಯತೀರ್ಥ ಜೋಶಿಯ ಸಂಘಟನಾ ಚಾತುರ್ಯದ ಫಲ ಎಂಬುದು ನಿರ್ವಿವಾದದ ಮಾತುಮಾತು…

‘ಧರ್ಮಪುರಿಯ ಶ್ವೇತವೃತ್ತ…’ ನಾಟಕದ ಮೂಲಕ ಕಿತ್ತೂರಿನ ‘ಗ್ರಾಮೀಣ ರಂಗಚೇತನ ತಂಡ’ ಒಂದು ಅದ್ಭುತ ಆರಂಭ ಕಂಡಿತು. ಅಲ್ಲಿಂದ ಶುರುವಾದ ಆ ತಂಡದ ಯಾತ್ರೆ ಸಮಸ್ತ ಕರ್ನಾಟಕದ ಗಮನ ಸೆಳೆಯಿತು. ಅತ್ತ ಹೆಗ್ಗೋಡು, ಇತ್ತ ಹಗರಿಬೊಮ್ಮನಹಳ್ಳಿ ಅಂತ ತಿರುಗಾಟ ನಡೆಸಿ 25 ಪ್ರದರ್ಶನಗಳನ್ನು ನೀಡಿದ ಆ ತಂಡ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರಿನಲ್ಲಿ ನಡೆಸಿದ ಜಿಲ್ಲಾ ಪ್ರಾತಿನಿಧಿಕ ನಾಟಕೋತ್ಸವಕ್ಕೆ ಅಹ್ವಾನಿಸಲ್ಪಟ್ಟಿತು. ಅಷ್ಟೇ ಅಲ್ಲ, ”ಒಳ್ಳೆಯ ನಾಟಕಗಳನ್ನು ಬೆಂಗಳೂರಿಗರು ಮಾತ್ರ ಕೊಡಬಲ್ಲರೆಂಬ ‘ಅಹಮ್’ನ್ನು ಕಿತ್ತೂರಿಗರು ಕಿತ್ತೊಗೆದರು…” ಎಂದು ಪತ್ರಿಕೆಗಳಿಂದ ಪ್ರಶಂಸೆ ಪಡೆಯಿತು.

ಜೋಶಿ ಈ ನಾಟಕದ ಮೂಲಕ ಎಂಥೆಂಥ ಗ್ರಾಮೀಣ ಪ್ರತಿಭೆಗಳನ್ನು ನಮ್ಮ ರಂಗಭೂಮಿಗೆ ಪರಿಚಯಿಸಿದರು ನೋಡಿ :

ತನ್ನ ಪಾಡಿಗೆ ತಾನು ಬೈಲೂರಿನಲ್ಲಿ ಭಜನೆ, ಬಯಲಾಟ, ಕೃಷ್ಣ ಪಾರಿಜಾತ ಅಂತ ಹಾಡಿಕೊಂಡು ಆಡಿಕೊಂಡು ಇದ್ದ ಬಸವಲಿಂಗಯ್ಯ ಹಿರೇಮಠ ಈ ನಾಟಕದಲ್ಲಿ ಹಿರಿಜೋಗಿಯಾಗಿ ಅಭಿನಯಿಸಿದರು. ‘ಶ್ವೇತವೃತ್ತ…’ದ ನಂತರ ಹೆಗ್ಗೋಡಿಗೂ, ಬೆಂಗಳೂರಿಗೂ, ಮೈಸೂರಿನ ರಂಗಾಯಣಕ್ಕೂ ಬೇಕಾದ ‘ದನಿ’ಯಾದರು. ಆ ಮೇಲೆ ‘ನೀನಾಸಂ’ನಲ್ಲಿ ರಂಗಶಿಕ್ಷಣ ಪಡೆದರು. ಈಗ ನಾಡಿನಲ್ಲೆಡೆ ತನ್ನ ‘ಹೈ ಪಿಚ್’ ಕಾರಣದಿಂದ ಜಾನಪದ ಗಾಯಕರ ಸಾಲಿನ ದೊಡ್ಡ ಹೆಸರೆನಿಸಿದರು ಬಸವಲಿಂಗಯ್ಯ.

‘ಶ್ವೇತವೃತ್ತ…’ದ ‘ಮಲ್ಲಿ’ಯಾಗಿ ಮೊದಲ ಸಲ ಬಣ್ಣ ಹಚ್ಚಿದ ವಿಶ್ವೇಶ್ವರಿ ಮುಂದೆ ‘ನೀನಾಸಂ’ನಲ್ಲಿ ರಂಗಶಿಕ್ಷಣ ಪಡೆದು, ಅಭಿನಯ ಮತ್ತು ನಾಟಕ ನಿರ್ದೇಶನಗಳನ್ನು ವೃತ್ತಿಯಾಗಿ ಮಾಡಿಕೊಂಡರು. ಮುಂದೆ ಬಸವಲಿಂಗಯ್ಯ ಹಿರೇಮಠರ ಬಾಳಸಂಗಾತಿಯಾಗಿ ‘ಜೀವನ-ರಂಗ’ಕ್ಕೆ ರಂಗು ತುಂಬಿಕೊಂಡರು.

ಇನ್ನು, ‘ಶ್ವೇತವೃತ್ತ…’ ನಾಟಕದ ಮರೆಯಲಾರದ ಮಹಾನುಭಾವ ‘ಅಜ್ಜಪ್ಪ’ನ ಪಾತ್ರದಲ್ಲಿ ಅದ್ಭುತ ಅಭಿನಯವನ್ನು ನೀಡಿ ನೆನಪಿನಲ್ಲುಳಿದವರು ಪ್ರೊ. ಎಸ್.ಜಿ. ಜಮಾದಾರ. ಅವರ ‘ಅಜ್ಜಪ್ಪ’ನ ಪಾತ್ರ ಅದೆಂಥ ಮೋಡಿ ಮಾಡಿತೆಂದರೆ, ಮುಂದೆ ಗಿರೀಶ ಕಾಸರವಳ್ಳಿಯವರು ‘ತಬರನ ಕಥೆ’ ಚಿತ್ರದ ಡಾ. ಸಿಲ್ವಾ ಪಾತ್ರವನ್ನು ಜಮಾದಾರರಿಗೆ ನೀಡಿದರು.

ಈ ರೂಪಾಂತರ ಕಾರ್ಯ ನನಗೆ ನೀಡಿದ ತೃಪ್ತಿ ವರ್ಣಿಸಲಸಾಧ್ಯವಾದದ್ದು. ಅದರ ಹಾಡುಗಳು ಜನಮನದಲ್ಲಿ ಇಂದಿಗೂ ಹಸಿರಾಗಿವೆಯಲ್ಲ… ಅದು ಇನ್ನಷ್ಟು ಹೆಮ್ಮೆಗೆ ಕಾರಣ.

ಇದೆಲ್ಲಕ್ಕೂ ಹೆಚ್ಚಿನ ಇನ್ನೊಂದು ಲಾಭವನ್ನು ನಾನು ಆ ನಾಟಕ ಪ್ರಯೋಗದ ಸಂದರ್ಭದಲ್ಲಿ ಪಡೆದಿದ್ದೇನೆ. ಅದೆಂದರೆ ಪ್ರಸಿದ್ಧ ಪ್ರಸಾಧನಪಟು ಪುರುಷೋತ್ತಮ ತಲವಾಟ ಹಾಗೂ ವಿಶಿಷ್ಟ ರಂಗ ನಿರ್ದೇಶಕ ಇಕ್ಬಾಲ್ ಅಹ್ಮದ್ ಅವರ ಸ್ನೇಹ…

‍ಲೇಖಕರು G

December 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

16 ಪ್ರತಿಕ್ರಿಯೆಗಳು

  1. umesh desai

    ಕಿತ್ತೂರಿಗೆ ನನ್ನ ಗೆಳೆಯನ ಲಗ್ನಕ್ಕೆ ಹೋಗಿದ್ದೆ..
    ಇಡೀ ಊರು ಒಂಥರಾ ಪಾಳು ಪಾಳು ಅನಿಸಿತ್ತು..
    ಅಂಥಾ ಊರಾಗ ಅಲ್ಲಿಯ ಜನರನ್ನ ಕಟಗೊಂಡು ಯಶಸ್ವಿ ನಾಟಕ ಮಾಡಿಸೀರೆಲ್ಲ
    ಏನನ್ನೋಣು ಶರಣು ಮತ್ತೊಮ್ಮೆ ಮಗದೊಮ್ಮೆ ಶರಣು…!!

    ಪ್ರತಿಕ್ರಿಯೆ
  2. Atmananada Vasan

    Sir…….. Soooper;-) nimma natakada baduku eshtu adbhutavaada payana!!! naadina hemme neevu!

    ಪ್ರತಿಕ್ರಿಯೆ
  3. Ramesh Gururajarao

    ಸಾರ್… ಬಹುಷಃ ಆಗ ತಾನೇ ನಾನು ಕನ್ನಡ ರಂಗಭೂಮಿಯಲ್ಲಿ ಕಣ್ಣು ಬಿಡುತ್ತಿದ್ದೆ. ಕಕೆಷಿಯನ್ ಚಾಕ್ ಸರ್ಕಲ್ ನಾಟಕದ ಬಗ್ಗೆ ಕೇಳಿದ್ದೆ. ಎಷ್ಟೋ ವರ್ಷಗಳ ನಂತರ ಆ ನಾಟಕದ ಹಾಡುಗಳನ್ನು ನಾನು ರಂಗಭೂಮಿಯ ಗೆಳೆಯರ ಜೊತೆ ಹಾಡಿದ್ದೆ ಕೂಡ. ಇತ್ತೀಚಿಗೆ ಕೂಡ ಯಾವುದೋ ಸಂದರ್ಭದಲ್ಲಿ ಕೂಡ ಈ ನಾಟಕ ನೆನಪಾಯ್ತು. ಬಹುಷಃ ಸಿ ಅಶ್ವಥ್ ಮಾಡಿದ ರಾಗ ಸಂಯೋಜನೆ ಇರಬೇಕು.

    ಜಯತೀರ್ಥ ಜೋಶಿಯ ಬಗ್ಗೆ ಕೂಡ ಮಾತಾಡಲು ನಾನು ಸಣ್ಣವನು. ಅಂಥಾ ಅದ್ಭುತ ನಿರ್ದೇಶಕ. ನಿಮ್ಮ ಲೇಖನ ಕೂಡ ಅಷ್ಟೇ ರೋಚಕವಾಗಿದೆ. ಅನುಭವದ ಸಣ್ಣ ಸಣ್ಣ ಕಣ ಕೂಡ ಸೊಗಸಾಗಿದೆ.

    ಪ್ರತಿಕ್ರಿಯೆ
  4. Santhoshkumar LM

    ಸರ್, ಬರೀ ಒಂದಷ್ಟು ಹಾಳೆಗಳನ್ನು ಗುಡ್ಡೆ ಹಾಕಿಕೊಂಡು ನಾಟಕಗಳನ್ನು ಸೃಷ್ಟಿ ಮಾಡುತಿದ್ದಿರಲ್ಲ!! ನಿಜಕ್ಕೂ ಶಹಬ್ಬಾಶ್!!
    ನಿಮ್ಮ ಅನುಭವ ಅತೀ ರಸವತ್ತಾಗಿದೆ.

    ಪ್ರತಿಕ್ರಿಯೆ
  5. prakash hegde

    ಅಣ್ಣಾ…

    ನಿಮ್ಮ ಹವ್ಯಾಸ..
    ಸಾಹಸಗಳಿಗೆ ನಮ್ಮ ನಮನಗಳು..
    ನಿಮ್ಮ ನಾಟಕಗಳ ಸಾಹಸಗಳು ಸ್ಪೂರ್ತಿದಾಯಕ !

    ನಿಮ್ಮ ಬರವಣಿಗೆಯ ಶೈಲಿ ಕೂಡ ಬಹಳ ಆಪ್ತವಾಗಿರುತ್ತವೆ…
    ನಿಮ್ಮ ಮಾತಿನಂತೆ.. ಪ್ರೀತಿ ತುಂಬಿರುತ್ತದೆ..

    ಪ್ರತಿಕ್ರಿಯೆ
  6. Manjula

    ನಿಮ್ಮ ನೆನಪುಗಳು ನಮ್ಮ ಮುಂದಿನ ಬದುಕಿಗೆ ಒಂಥರ ಸ್ಪೂರ್ಥಿ. ನಿಮ್ಮ ನಾಟಕದ ಹುಚ್ಚು ಮೆಚ್ಚುಗೆಯಾಗ್ತದ. ಪ್ರಕಾಶ್ ಅವರು ಹೇಳಿದಂತೆ “ನಿಮ್ಮ ಬರವಣಿಗೆಯ ಶೈಲಿ ಬಹಳ ಆಪ್ತವಾಗಿರುತ್ತವೆ…
    ನಿಮ್ಮ ಮಾತಿನಂತೆ.. ಪ್ರೀತಿ ತುಂಬಿರುತ್ತದೆ..” 🙂

    ಪ್ರತಿಕ್ರಿಯೆ
  7. Hipparagi Siddaram

    ಸರ್,
    ….ಗಂಬೀರಾಗಿರಿ ಗೊಂಬೀ ಗತಿ
    ಮಜಾಶೀರಲೇ ಮಜಕೂರ ಹೇಳತೀವು….
    ಈ ಸಾಲುಗಳು….ಪ್ರತಿಸಲದ ಬೇಸಿಗೆಯ ಮಕ್ಕಳ ಶಿಬಿರದಲ್ಲಿ ಮಕ್ಕಳು ಗಲಾಟೆ ಮಾಡಿದಾಗ….ಹಾಡುವುದರ ಮುಖಾಂತರ ನಾವು ನಿಮ್ಮ ಸಾಹಿತ್ಯದ ಸಾಲುಗಳನ್ನು ಬಳಸಿಕೊಳ್ಳುತ್ತೇವೆ. ಅಂತಹ ಶಕ್ತಿ/ತಾಕತ್ತು ಆ ಸಾಲುಗಳಿಗಿದೆಯೆಂದರೆ ಅತಿಶಯೋಕ್ತಿಯೇನಲ್ಲ….ಶ್ರೀ ಬಸವಲಿಂಗಯ್ಯನವರ ಕಂಠದಿಂದ ಈ ಹಾಡು ಇಂದಿಗೂ ತನ್ನ ನಿನಾದದಿಂದ ಹೊರಹೊಮ್ಮುತ್ತಲಿದೆ. ಧರ್ಮಪುರಿಯ ಶ್ವೇತವೃತ್ತದ ಹಿನ್ನಲೆಯ ನಿಮ್ಮ ನೆನಪುಗಳು ಅದ್ಭುತ ಸರ್….ಧನ್ಯವಾದಗಳೊಂದಿಗೆ….ಮುಂದಿನ ಅಂಕಣದ ನಿರೀಕ್ಷೆಯಲ್ಲಿದ್ದೇನೆ…ಶುಭದಿನ !

    ಪ್ರತಿಕ್ರಿಯೆ
  8. Sowmya Kalyankar

    ಚೆಂದದ ಬರಹ, ಚಿತ್ರ ಹಾಗೂ ನೆನಹುಗಳು….

    ಪ್ರತಿಕ್ರಿಯೆ
  9. Sunil Rao

    abba entaha nenapina butti nimmadu
    karaaruvakkaada teekshna kushaagri neevu.
    ramesh gururaaj rao kaili ee melina haadugalu haadisikollabeku….
    illavaadre baree nimma ranga geetegaladde ondu kaaryakrama iduve..

    bombaat baraha

    ಪ್ರತಿಕ್ರಿಯೆ
  10. ಮಂಸೋರೆ

    ನಿಮ್ಮ ಅನುಭವಗಳು ಪ್ರತಿಯೊಂದು ಅನನ್ಯ. ವೃತ್ತಿ ಜೀವನದೊಂದಿಗೆ ಪ್ರವೃತ್ತಿಯನ್ನು ಅಷ್ಟೇ ಆಸ್ಥೆಯಿಂದ ಅನುಭವಿಸಿ, ಅನುಭವಗಳ ಹೊರೆಯನ್ನೇ ಹೊತ್ತು ಸಾಗಿರುವ ನಿಮ್ಮ ಜೀವನದ ಪರಿಚಯ ನಿಜಕ್ಕೂ ಸ್ಪೂರ್ತಿದಾಯಕ.
    -ಮಂಸೋರೆ

    ಪ್ರತಿಕ್ರಿಯೆ
  11. ಜ ಬ ಪರೇಶ

    ರವೀಂದ್ರ ಕಲಾಕ್ಷೇತ್ರದಲ್ಲಿ ಆದ ‘ಧರ್ಮಪುರಿಯ ಶ್ವೇತವೃತ್ತ’ದ ಪ್ರದರ್ಶನ ಬೆಂಗಳೂರಿನ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು. ನನಗೆ ತಿಳಿದ ಹಾಗೆ, ಕಿತ್ತೂರಿನ ಈ ತಂಡದ ಉದ್ಭವಕ್ಕೆ೧೯೮೫ರಲ್ಲಿ ಕಿತ್ತೂರಿನಲ್ಲಿ ನಡೆದ ‘ಸೂತ್ರಧಾರ’ದ ‘ದೊಡ್ಡಪ್ಪ’ ನಾಟಕದ ಪ್ರದರ್ಶನವೇ ಕಾರಣ. ಇದು ನಿಜ ಆಗಿಲ್ಲದಿದ್ದಲ್ಲಿ ಸಹ ನಮ್ಮ ‘ಸೂತ್ರಧಾರ’ ಈ ನಾಟಕದ ಯಶಸ್ಸಿನ ಸಂಭ್ರಮದಲ್ಲಿ ಭಾಗಿಯಾಗುತ್ತಾನೆ.

    ಪ್ರತಿಕ್ರಿಯೆ
  12. Beluru Raghunandan

    Anubhavagalu anubhaavagalaadaga maatra anubhavagalannu matte nenapisikondu kattuvaaga gattitana baruvudu….nijakku nimma aanubhavika baraha ondu ghataneya niroopane maatra alla …..adondu abhivyaktige tudiyuva olleya maadyama

    ಪ್ರತಿಕ್ರಿಯೆ
  13. Pushparaj Chauta

    ಸರ್, ಬಿಡುವಿಲ್ಲದೆಯೂ ಬಿಡುವು ಮಾಡಿಕೊಂಡು ಛಲ ಬಿಡದೇ ಈ ಹವ್ಯಾಸಗಳನ್ನು ರೂಢಿಮಾಡಿಕೊಂಡಿರಿ. ನಿಮ್ಮಿಂದ ಕಲಿಯಬೇಕಾದದ್ದು ಬಹಳ ಇದೆ ನನ್ನಂಥ ಯುವಜನತೆ!

    ಪ್ರತಿಕ್ರಿಯೆ
  14. chandrashekhar vastrad

    ಲೇಖನ ತುಂಬಾ ಚೆನ್ನಾಗಿ ಬಂದಿದೆ. ಜ.ಬಿ.ಜೋಷಿ ಅಂದ್ರ ಗುರುನಾಥ ಜೋಷಿ ಅವರು ತುಂಬ ದೊಡ್ಡ ವಿದ್ವಾಂಸರು. ಅವರ ಸ್ಪೋಟವಾದ ಕೃತಿ ಅನನ್ನ. ಅನೇಕ ಪ್ರತಿಭೆಗಳನ್ನು ಹೊರತಂದ ನೀವೂ ಜಯನೂ ಅಭಿನಂದನಾರ್ಹರು.

    ಪ್ರತಿಕ್ರಿಯೆ
  15. Gopaal Wajapeyi

    ಚಂದ್ರಶೇಖರ ವಸ್ತ್ರದ ಅವರೇ… ನಿಮ್ಮ ಅಭಿಪ್ರಾಯಕ್ಕಾಗಿ ಧನ್ಯವಾದಗಳು. ನಿಮ್ಮ ಅಭಿಪ್ರಾಯದಲ್ಲಿ ಕನ್ ಫ್ಯೂಜನಿಂದಾಗಿ ಒಂದು ತಪ್ಪು ನುಸುಳಿದೆ. ನೀವು ಹೇಳಿದ ಜಿ.ಬಿ. ಜೋಶಿಯವರ ಪೂರ್ಣ ಹೆಸರು ಗುರುರಾಜಾಚಾರ್ಯ ಜೋಷಿ. ಇವರು ಪಂ. ಭೀಮಸೇನ ಜೋಶಿಯವರ ತಂದೆ (ಮತ್ತು ಧಾರವಾಡದ ಮನೋಹರ ಗ್ರಂಥಮಾಲೆಯ ಜಿ.ಬಿ. ಜೋಶಿಯವರ ಅಣ್ಣ). ನೀವು ಹೇಳಿರುವ ಗುರುನಾಥ ಜೋಶಿ ಬೇರೆ. ಅವರು ಹಿಂದಿ ಪಂಡಿತರು. ಹಿಂದೀ ಕನ್ನಡ ಶಬ್ದಕೋಶದ ರಚಕರು ಈ ಗುರುನಾಥ ಜೋಶಿಯವರೇ. ಹೆಸರಿನಲ್ಲಷ್ಟೇ ಅಲ್ಲ, ಸೈದ್ಧಾಂತಿಕವಾಗಿಯೂ ಇಬ್ಬರದೂ ಬೇರೆ ಬೇರೆ ‘ದಿಕ್ಕು’.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: