ಗೋಪಾಲ ವಾಜಪೇಯಿ ಕಾಲಂ : 'ಲಿಯರ್, ಸಮ್ರಾಟ್ ಮತ್ತು …ಭೂಪತಿ'

ಸುಮ್ಮನೇ ನೆನಪುಗಳು –  33
ಮೊನ್ನೆ  ಜನೆವರಿ 20, ಆದಿತ್ಯವಾರ ನನ್ನ ‘ನಂದಭೂಪತಿ’ ನಾಟಕ ಬಿಡುಗಡೆ ಆಯಿತಲ್ಲ… ಆ ಸಂದರ್ಭದಲ್ಲಿ ವೃತ್ತಿ-ಪ್ರವೃತ್ತಿ ಮಿತ್ರ ದಿಲಾವರ ರಾಮದುರ್ಗ ಆ ಕೃತಿಯ ಕುರಿತು ಮಾತಾಡಿದರಲ್ಲ…  ಆ ಮಾತಿನ ಸಂದರ್ಭದಲ್ಲಿ ದಿಲಾವರ್, ”1606ರ ಅವಧಿಯೊಳಗ ಬ್ರಿಟನ್ ರಾಜ ‘ಲಿಯರ್’ನ ಕಥೀನ ಇಟಗೊಂಡು  ಶೇಕ್ಸಪಿಯರ್ ‘ಕಿಂಗ್ ಲಿಯರ್’ ನಾಟಕ ಬರದಾ… ಅದು ಕಾಲಕಾಲಕ್ಕ ಪರಿಷ್ಕೃತ ಆಕ್ಕೊಂತನ ಹೊಂಟಿತ್ತು. ಅದರ ಮ್ಯಾಲ ಅನೇಕ ಅನ್ವೇಷಣೆಗಳೂ ನಡದ್ವು. ನನಗ ಈ ಕ್ಷಣಕ್ಕ ತಟ್ಟನ ಹೊಳದದ್ದು ಶಿರವಾಡಕರ್ ಅವರ ಮರಾಠಿ ನಾಟಕ ‘ನಟಸಮ್ರಾಟ್ ‘. ಶಿರವಾಡಕರ್ ಅವರು ‘ಲಿಯರ್’ನ ಹುಡುಕಾಟಾ ಮುಂದುವರಿಸಿ, ಕೊನೀಗೆ ಬಂದು ಮುಟ್ಟಿದ್ದು ಗಣಪತರಾವ್ ಬೆಲವಲಕರ್ ಅನ್ನೋ ಪ್ರಸಿದ್ಧ ನಟನ ಹಂತ್ಯಾಕ…” ಅಂತ ಪ್ರಸ್ತಾಪ ಮಾಡಿದರು.
ಶಿರವಾಡಕರ್ ಮತ್ತು ನಟಸಮ್ರಾಟ್ ಅಂತೆಲ್ಲ ದಿಲಾವರ್ ಮಾತಾಡುತ್ತಿದ್ದ ಹಾಗೆಯೇ ನಾನು ಮಾನಸಿಕವಾಗಿ ಮೂವತ್ತನಾಲ್ಕು ವರ್ಷಗಳಷ್ಟು ಹಿಂದೆ ಹೋಗಿಬಿಟ್ಟೆ… ಸ್ವಲ್ಪ ಹೊತ್ತು ಅಲ್ಲಿಯೇ ಆ ‘ನಟಸಮ್ರಾಟ’ನ ಆಸ್ಥಾನದಲ್ಲಿ ಕೂತು ಬಂದೆ. ಹೌದು… ಅದು 1979. ಮುಂಬಯಿಯ ದಾದರ್ ಪ್ರದೇಶದ ‘ಶಿವಾಜಿ ರಂಗಮಂದಿರ’ವೇ ಆ ಆಸ್ಥಾನ. ಅಲ್ಲಿ ತುಂಬಾ ಕಷ್ಟಪಟ್ಟು ಸೀಟು ‘ಗಿಟ್ಟಿಸಿ’ಕೊಂಡು ಆ ನಾಟಕ ನೋಡಿದ್ದೆ.
ಹೌದು. ತುಂಬಾ ಕಷ್ಟಪಟ್ಟು ಸೀಟು ‘ಗಿಟ್ಟಿಸಿ’ಕೊಂಡು…
ನೀವು ನಾಟಕಪ್ರಿಯರಾಗಿದ್ದರೆ, ಒಂದು ವೇಳೆ ಮುಂಬಯಿಗೆ ಹೋಗುವ ಅವಕಾಶ ಒದಗಿ ಬಂದರೆ ಅಲ್ಲಿಯ ಪತ್ರಿಕೆಗಳ ಮೇಲೊಮ್ಮೆ ಕಣ್ಣು ಹಾಯಿಸಲು ಮರೆಯಬೇಡಿ. ಯಾಕಂದರೆ, ಅಲ್ಲಿಯ ಎಲ್ಲ ಭಾಷಾ ಪತ್ರಿಕೆಗಳಲ್ಲಿಯೂ ಅಂದಂದು ನಡೆಯುವ ನಾಟಕಗಳ ಜಾಹೀರಾತುಗಳು ನಿಮಗೆ ನೋಡಲು ಸಿಗುತ್ತವೆ. ಏನಿಲ್ಲೆಂದರೂ ಒಂದಿಪ್ಪತ್ತಾದರೂ ನಾಟಕಗಳ ಜಾಹೀರಾತುಗಳು. ಮರಾಠಿ, ಹಿಂದಿ, ಗುಜರಾತಿ, ಮತ್ತು ಇಂಗ್ಲಿಷ್ ನಾಟಕ ಪ್ರಯೋಗಗಳ ಜಾಹೀರಾತುಗಳು. ಅದಕ್ಕಾಗಿ ಒಂದು ಪ್ರತ್ಯೇಕ ಪುಟವೇ ಇರುತ್ತದೆ. ಅದರಲ್ಲಿ  ಅದು ಆ ನಾಟಕದ ನಿರ್ದೇಶಕ ಯಾರು, ಸಂಗೀತ ನೀಡಿದವರು ಯಾರು, ಮುಖ್ಯ ಭೂಮಿಕೆಯಲ್ಲಿ ಯಾರಾರು ಇದ್ದಾರೆ, ಎಷ್ಟನೆಯ ಪ್ರಯೋಗ ಇತ್ಯಾದಿ ವಿವರಗಳು.  ಅದೇ ನಾಟಕ ಮುಂಬರುವ ದಿನಗಳಲ್ಲಿ ಮತ್ತೆ ಎಲ್ಲೆಲ್ಲಿ ಪ್ರಯೋಗಿಸಲ್ಪಡುತ್ತದೆ ಎಂಬ ಜಾಹೀರಾತು ಇನ್ನೊಂದೆಡೆ. ಅದೇ ನಿರ್ಮಾಣ ಸಂಸ್ಥೆಯ ಮತ್ತೊಂದು ಹೊಸ ನಾಟಕದ ಜಾಹೀರಾತು ಅದೇ ಪುಟದ ಇನ್ನೊಂದು ಕಡೆ…! ಹೊಸ ನಾಟಕ ನಿರ್ಮಾಣವಾಗುತ್ತಿರುವುದನ್ನು ಅವರು ಪ್ರಚಾರ ಮಾಡುವ ರೀತಿ ಇದೆಯಲ್ಲ, ಅದೇ ಒಂದು ಸಂಭ್ರಮ. ಕನಿಷ್ಠ ಪಕ್ಷ ಕಾಲು ಪುಟದಷ್ಟು ಜಾಗವನ್ನು ವ್ಯಾಪಿಸಿರುತ್ತದೆ ಆ ಜಾಹೀರಾತು…
ಹೌದು. ಮಹಾರಾಷ್ಟ್ರದ ಜನತೆಗೆ ನಾಟಕಗಳೆಂದರೆ ಪ್ರಾಣ. ನಟ-ನಾಟಕಕಾರರೆಂದರೆ ದೇವತಾ ಸಮಾನ. ಅದಕ್ಕೇ ಪುಣೆ, ಮುಂಬಯಿ, ಕೊಲ್ಹಾಪುರಗಳಲ್ಲಿ ನಾಟಕಗಳೆಂದರೆ ಜನ ಹುಚ್ಚೆದ್ದು ಕುಣಿಯುತ್ತಾರೆ. ಅದು ಎಂಥದೇ ಪ್ರಕಾರದ ನಾಟಕವಿರಲಿ ಹೋಗಿ ನೋಡುತ್ತಾರೆ. ಪ್ರಾಯೋಗಿಕ ನಾಟಕಗಳ ಜೊತೆ ಜೊತೆಗೆ ಸಂಗೀತ ನಾಟಕಗಳನ್ನೂ ಅವರು ಪೋಷಿಸುತ್ತ ಬಂದಿದ್ದಾರೆ. ಕೌಟುಂಬಿಕ ಮತ್ತು ಹಾಸ್ಯ ಪ್ರಧಾನ ನಾಟಕಗಳದಂತೂ ಇನ್ನೂ ಒಂದು ಕೈ ಮೇಲು. ನಾಟ್ಯಗೀತೆ ಎಂದರಂತೂ ಮೈಮರೆತುಬಿಡುತ್ತಾರೆ ಆ ಜನ. ಎಪ್ಪತ್ತೆಂಬತ್ತು ವರ್ಷಗಳ ಹಿಂದಿನ ಸಂಗೀತ ನಾಟಕಗಳ ಸುಪ್ರಸಿದ್ಧ ರಂಗಗೀತೆಗಳನ್ನು ಇಂದಿಗೂ ಹಾಡಿ, ಹಾಡಿಸಿ ಆನಂದಿಸುತ್ತಾರೆ. ‘ನಾಟ್ಯಗೀತೆ’ಯ ಅದ್ಭುತ ಕಾರ್ಯಕ್ರಮಗಳು ಆಗೀಗ ಜರಗುತ್ತವೆ. ಆಗಿನ ‘ಮಾನಾಪಮಾನ’ ಇರಲಿ, ‘ಸಂಗೀತ ಸೌಭದ್ರ’ ಇರಲಿ, ಆ ನಂತರದ ‘ಕಟ್ಯಾರ ಕಾಳಜಾsತ ಘುಸಲೀ…’ಯೇ ಆಗಲಿ… ಅವುಗಳ ಹಾಡುಗಳು ಬಂದರೆ ಇಂದಿಗೂ ಅವರು ಕುಣಿಯುತ್ತಾರೆ.
ಅಲ್ಲಿಯ ಸುಪ್ರಸಿದ್ಧ ಶಾಸ್ತ್ರೀಯ ಸಂಗೀತ ಪಟುಗಳೆಲ್ಲ ರಂಗ ಸಂಗೀತಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಕಾಣಿಕೆ ಇತ್ತವರೆ. ಬಾಲ ಗಂಧರ್ವ, ಸವಾಯಿ ಗಂಧರ್ವ, ಕುಮಾರ ಗಂಧರ್ವ ಹೀಗೆ ‘ಗಂಧರ್ವ ಕುಲ’ವೇ ಮರಾಠಿಗರ ಮನೋಸಾಮ್ರಾಜ್ಯದಲ್ಲಿ ರಾರಾಜಿಸುತ್ತಿದೆ.
ಹಾಗೆಯೇ, ಅಲ್ಲಿಯ ಹೆಸರಾಂತ ನಟ ನಟಿಯರೆಲ್ಲ ಹಿಂದಿ-ಮರಾಠಿ ಚಿತ್ರಪಟಗಳ ಶ್ರೇಷ್ಠ  ಕಲಾವಿದರೂ ಹೌದು. ಡಾ. ಶ್ರೀರಾಮ ಲಾಗೂ, ಅಮೋಲ್ ಪಾಲೇಕರ್, ದತ್ತಾ ಭಟ್, ರಮೇಶ್ ದೇವ್, ಸೀಮಾ ದೇವ್, ಹೀಗೆ ಅಸಂಖ್ಯಾತ ಕಲಾವಿದರು ಚಿತ್ರರಂಗಕ್ಕೆ ಹೋದರೂ ರಂಗಭೂಮಿಯನ್ನು ಮರೆಯಲಿಲ್ಲ. ಅವರು ಎರಡೂ ರಂಗಗಳಲ್ಲಿ ಪ್ರೌಢಿಮೆಯನ್ನೂ ವೃತ್ತಿಪರತೆಯನ್ನೂ ಮೆರೆದವರು. ನಮ್ಮಲ್ಲಿಯ ಹಾಗೆ ಚಿತ್ರರಂಗದಲ್ಲಿ ಬೇಡಿಕೆ ಕಡಿಮೆಯಾದಾಗ ಉತ್ತರ ಕರ್ನಾಟಕದ ನಾಟಕ ಕಂಪನಿಗಳನ್ನು ಹುಡುಕಿಕೊಂಡು ಹೋದವರಲ್ಲ.
ಹಾಂ… ಮಹಾರಾಷ್ಟ್ರದ ದಿನಪತ್ರಿಕೆಗಳಲ್ಲಿ ಕಾಣುವ ನಾಟಕಗಳ ಜಾಹೀರಾತಿನ ವಿಚಾರ ಹೇಳುತ್ತಿದ್ದೆ. ಅದೇ, 1979ರ ಆ ದಿನ… ಮದುವೆಯಾದ ಹೊಸತು. ಮೊದಲ ಸಲ ಮುಂಬಯಿಗೆ ಹೋಗಿದ್ದೆ. ಅಲ್ಲಿದ್ದರು ನನ್ನ ಮಾವ. ಬೆಳಗಿನ ಪತ್ರಿಕೆ ಓದುವಾಗ ಕಣ್ಣಿಗೆ ಬಿದ್ದದ್ದು ‘ನಟಸಮ್ರಾಟ್ ‘ ನಾಟಕದ ಜಾಹೀರಾತು. ಆ ಸಂಜೆ ಅದರ ಶೋ. ಸರಿ, ನನ್ನಾಕೆಯೊಂದಿಗೆ ದಾದರಿನ ಆ ರಂಗಮಂದಿರವನ್ನು ತಲಪಿದೆ. ಅಲ್ಲಿ ನೋಡಿದರೆ ಒಂದಲ್ಲ ಎರಡಲ್ಲ ಮೂರು ಮೂರು ಉದ್ದದ ಸರತಿ ಸಾಲುಗಳು… ನನಗೆ ಟಿಕೆಟ್ಟು ಸಿಗೋದಿಲ್ಲ ಅನ್ನೋದು ಗ್ಯಾರಂಟಿಯಾಗಿ ಹೋಯಿತು. ಆ ಜನರತ್ತಲೇ ಅಚ್ಚರಿಯಿಂದ ನೋಡುತ್ತಾ ನಿಂತೆ. ಆಗ ಗೊತ್ತಾದ ಸಂಗತಿ ಎಂದರೆ ಆ ಜನ ಸಾಲಿನಲ್ಲಿ ನಿಂತಿದ್ದು ಅಂದಿನ ಶೋ ಸಲುವಾಗಿ ಅಲ್ಲ, ಮುಂದಿನ ಶೋ ಗೆ ಮುಂಗಡ ಟಿಕೆಟ್ ಕಾದಿರಿಸಲು ಅಂತ…! ನಿಜವಿದ್ದ ಸಂಗತಿ ಎಂದರೆ, ಅಂದಿನ ‘ನಟಸಮ್ರಾಟ್ ‘ ನಾಟಕಕ್ಕೆ ಹಿಂದಿನ ವಾರವೇ ಟಿಕೆಟ್ಟುಗಳು ಪೂರ್ತಿ ಮಾರಾಟವಾಗಿ ಹೋಗಿದ್ದವು…
ಸರಿ, ಬಂದ ದಾರಿಗೆ ಸುಂಕವಿಲ್ಲ ಅಂತ ಅಲ್ಲಿಂದ ಹೆಜ್ಜೆ ಕಿತ್ತುವ ಹೊತ್ತಿನಲ್ಲೇ ಆಪದ್ಬಾಂಧವನಂತೆ ಎದುರು ನಡೆದು ಬಂದಾತ ರಮೇಶ ಜೋಶಿ. ಮೂಲತಃ ನಮ್ಮ ನರಗುಂದದ ಹುಡುಗ ಈ ರಮೇಶ. ಕೊಂಕಣಸ್ಥ. ಮನೆಮಾತು ಮರಾಠಿ. ಮುಂಬಯಿಯಲ್ಲಿ ಆತ ಒಬ್ಬ ರಂಗಕರ್ಮಿ. ಹುಬ್ಬಳ್ಳಿಗೆ ಆಗೀಗ ಬರುತ್ತಿದ್ದ. ಶ್ರೀಮತಿ ಗಂಗೂಬಾಯಿ ಹಾನಗಲ್ಲರ ಮನೆಯಲ್ಲಿ ಸಿಗುತ್ತಿದ್ದ. ಅವರ ಅಣ್ಣನೊಬ್ಬ ಹುಬ್ಬಳ್ಳಿಯಲ್ಲಿ ವಕೀಲ.
‘ನಟಸಮ್ರಾಟ್ ‘ ಮರಾಠಿ ನಾಟಕ ಕೃತಿಯ ಮುಖಪುಟ
ನಾಟಕ ಶುರುವಾಗಲು ಇನ್ನೂ ಕಾಲು ಗಂಟೆ ಇತ್ತು. ರಮೇಶ ಜೋಶಿಯೊಂದಿಗೆ ಆ ಈ ವಿಚಾರ ಮಾತಾಡುತ್ತಲಿದ್ದಾಗ, ಆತ ಆ ನಾಟಕದ ಬೆಳಕಿನ ವ್ಯವಸ್ಥೆಯನ್ನು  ನೋಡಿಕೊಳ್ಳುತ್ತಿದ್ದನೆಂಬುದು ತಿಳಿಯಿತು. ‘ನಟಸಮ್ರಾಟ್ ‘ನನ್ನು ನೋಡುವ ಆಸೆ ನನ್ನಲ್ಲಿ ಮತ್ತೆ  ಚಿಗುರಿತು. ನಾಚಿಕೆ ಬಿಟ್ಟು ಕೇಳಿಯೇ ಬಿಟ್ಟೆ.
”ವೆರಿ ಡಿಫಿಕಲ್ಟ್…” ಅಂತ ಜೋಶಿ.
”ನಿಮ್ಮ ಲೈಟ್ ಕ್ಯಾಬಿನ್ನಿನಲ್ಲಿ ನಿಂತುಕೊಂಡಾದರೂ ಸರಿ, ನೋಡುತ್ತೇವೆ,” ಅಂತ ನಾನು.
”ಊಹೂಂ… ಅಲ್ಲಿ ಬೇರೆ ಯಾರಿಗೂ ಪ್ರವೇಶ ಇಲ್ಲ…” ಅಂದ. ನನ್ನ ಮುಖ ಬಾಡಿದ್ದನ್ನು ಕಂಡವನೇ, ”ಒಂದು ಚಾನ್ಸ್ ಇದೆ… ಬರ್ರಿ,” ಅಂತ ಹೆಜ್ಜೆ ಹಾಕತೊಡಗಿದ. ಯಾವುದೋ ಕ್ಯಾಬಿನ್ನಿನ ಒಳಗೆ ನಮ್ಮನ್ನು ಕರೆದೊಯ್ದ. ಅಲ್ಲಿ ಕೂತಿದ್ದ ಹಿರಿಯರೊಬ್ಬರಿಗೆ ನನ್ನನ್ನು ಕನ್ನಡದ ಪತ್ರಿಕೋದ್ಯಮಿ, ರಂಗಕರ್ಮಿ ಅಂತ ಪರಿಚಯಿಸಿದ. ಆತ ‘ಅದೇನೇನು’ ಹೊಗಳಿದನೋ… ಅಂತೂ ಆ ಹಿರಿಯ ನಮ್ಮನ್ನು ನೋಡಿ, ‘ಓಕೆ’ ಎಂಬಂತೆ ತಲೆಯಾಡಿಸಿದ.
ಜೋಶಿ ನಮ್ಮಿಬ್ಬರನ್ನೂ ಕರೆದೊಯ್ದು ಕೂರಿಸಿದ್ದು, ವೇದಿಕೆಗೆ ತೀರ ಹತ್ತಿರ, ‘ಅಮುವ್ಯ’ರಿಗೆಂದೇ ಇರುವ ಮೊದಲ ಸಾಲಿನ ಸುಖಾಸನಗಳಲ್ಲಿ…
-೦-೦-೦-೦-೦-
ಅವತ್ತು ಸುಮಾರು ಮೂರು ಗಂಟೆ ಕಾಲ ನಮ್ಮನ್ನು ಬೆಲವಲಕರ್ ಅಳಿಸಿಬಿಟ್ಟ. ಅಬ್ಬಾ… ಅದೇನು ಫೋರ್ಸು ಆ ಪುಟಗಟ್ಟಲೆ ಉದ್ದದ ಮಾತುಗಳಲ್ಲಿ… ಅದೇನು ಮೋಡಿ ಆ ಅಭಿನಯದಲ್ಲಿ… ಅದರೊಳಗಿನ ಆ ಬಿಸುಪು, ಆ ಮೌನ, ಆ ನಡೆ… ಎದುರು ನಿಂತು ನಮ್ಮ ಕರುಳು ಹಿಂಡಿಬಿಡುವಂಥ ನಟನೆ… ಛೇ, ನಟನೆ ಅಲ್ಲ ಅದು. ಆತ ಸ್ವತಃ ಅನುಭವಿಸುತ್ತಿದ್ದ… ಆ ಅನುಭವದಲ್ಲಿ ನಮ್ಮನ್ನೂ ‘ಒಂದುಮಾಡಿಕೊ’ಳ್ಳುತ್ತಿದ್ದ.
ನಾಟಕ ಮುಗಿಸಿ ಹೊರಗೆ ಬಂದಾಗ ನಾನು ಅಕ್ಷರಶಃ ಮೂಕನಾಗಿದ್ದೆ. ‘ನಟಸಮ್ರಾಟ್ ‘ ಗಣಪತರಾವ್ ಬೆಲವಲಕರ್ ಉರ್ಫ್ ಅಪ್ಪಾಸಾಹೇಬ್ ನನ್ನ ಮಾತುಗಳನ್ನು ಕಸಿದುಕೊಂಡುಬಿಟ್ಟಿದ್ದ, ತನ್ನ ನಿಟ್ಟುಸಿರುಗಳನ್ನು ನನಗೆ ದಾಟಿಸಿದ್ದ.
ಈ ‘ನಟಸಮ್ರಾಟ್ ‘ ಮರಾಠಿ ರಂಗಭೂಮಿಯ ಇತಿಹಾಸದಲ್ಲಿ ಒಂದು ಮೈಲಿಗಲ್ಲೆನಿಸಿರುವಂಥ ನಾಟಕ. ಕಥಾವಸ್ತುವಿನಿಂದಷ್ಟೇ ಅಲ್ಲ, ಗಣಪತರಾವ್ ಬೆಲವಲಕರ್ ಪಾತ್ರದಲ್ಲಿ ಅಭಿನಯಿಸಿದ ಮಹಾ ಮಹಾ ನಟರಿಂದಾಗಿಯೂ ಈ ನಾಟಕ ಜನರ ಮನವನ್ನು ಗೆದ್ದಿತೆಂದು ಹೇಳುತ್ತಾರೆ.
ನಟ ಶ್ರೀರಾಮ ಲಾಗೂ ಅಭಿನಯದ ‘ನಟಸಮ್ರಾಟ್ ‘ ಮರಾಠಿ ನಾಟಕದ DVD ಕವರ್
ಮೊದಲ ಸಲ ಈ ನಾಟಕ ರಂಗವನ್ನೇರಿದಾಗ ಗಣಪತರಾವ್ ಬೆಲವಲಕರ್ ಆಗಿ ಅದ್ಭುತ ಅಭಿನಯವನ್ನು ನೀಡಿದವರು ಡಾ. ಶ್ರೀರಾಮ್ ಲಾಗೂ.
ಆ ನಂತರ ಕಾಲಕಾಲಕ್ಕೆ ಈ ಪಾತ್ರವನ್ನು ಅಮರವಾಗಿಸುತ್ತಲೇ ಬಂದವರು ಚಂದ್ರಕಾಂತ ಗೋಖಲೆ, ಪ್ರಭಾಕರ ಪಣಶೀಕರ್, ದತ್ತಾ ಭಟ್, ಯಶವಂತ ದತ್, ಸತೀಶ್ ದುಭಾಷಿ, ಮಧುಸೂದನ ಕೊಲ್ಹಟ್ಕರ್, ರಾಜಾ ಗೊಸಾವಿ ಮತ್ತು ಉಪೇಂದ್ರ ದಾತೆಯವರಂಥ ಹತ್ತು ಜನ ಗಣ್ಯ ನಟರು.
1998ರಲ್ಲಿ ಈ ನಾಟಕ ಮರಾಠಿಯಿಂದ ಇಂಗ್ಲಿಷ್ ಭಾಷೆಗೆ ಅನುವಾದಿಸಲ್ಪಟ್ಟಿತು. 120 ಪುಟಗಳ ಈ ಇಂಗ್ಲಿಷ್ ಅನುವಾದದ ಕುರಿತು ಇನ್ನೂ ಒಂದು ಅಚ್ಚರಿಯ ಸಂಗತಿ ಗೊತ್ತಾ?… ಮೊದಲ ಆವೃತ್ತಿಯಲ್ಲೇ ಇದರ ಹತ್ತು ಸಾವಿರ ಪ್ರತಿಗಳು ದೇಶ ವಿದೇಶದ ಸ್ಟಾಲುಗಳಿಗೆ ಕಳಿಸಲ್ಪಟ್ಟದ್ದು…! ಕನ್ನಡದಲ್ಲಿ ಯಾವ ಕೃತಿಗೆ ಇಂಥ ಭಾಗ್ಯ ದೊರಕಿದೆ ಹೇಳಿ?…
ಇದಕ್ಕೆ ಕಾರಣ ಗಣಪತರಾವ್ ಬೆಲವಲಕರ್ ಉರ್ಫ್ ಅಪ್ಪಾಸಾಹೇಬ್ ಪಾತ್ರದ ರೂಪದಲ್ಲಿ ‘ಲಿಯರ್’ನನ್ನು ವಿ.ವಾ. ಶಿರವಾಡಕರ್ ನಮ್ಮೆದುರು ನಿಲ್ಲಿಸಿರುವುದು. ಇಲ್ಲಿ ಶಿರವಾಡಕರ್ ಅವರು ಶೇಕ್ಸಪಿಯರನಿಗಿಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಮೂಲ ನಾಟಕದಲ್ಲಿ ಲಿಯರ್ ಒಬ್ಬ ವಿಧುರ. ಆದರೆ ಇಲ್ಲಿ, ಈ ‘ನಟಸಮ್ರಾಟ್’ ದಲ್ಲಿ ಗಣಪತರಾವ್ ಬೆಲವಲಕರನಿಗೊಬ್ಬ ಹೆಂಡತಿಯನ್ನೂ ಸೃಷ್ಟಿ ಮಾಡುತ್ತಾರೆ ಶಿರವಾಡಕರ್. ಮತ್ತು, ಆತ ತನ್ನ ಹೆಂಡತಿ ಕಾವೇರಿಯನ್ನು ‘ಸರ್ಕಾರ್’ ಎಂದು ಸಂಬೋಧಿಸುತ್ತಾನೆ. ಹಾಗೆ ಸಂಬೋಧಿಸುವಾಗ ಆತನಿಗೆ ಆಕೆಯ ಮೇಲಿರುವ ಅತ್ಯುತ್ಕಟ ಪ್ರೀತಿ ಮತ್ತೆ ಮತ್ತೆ ನಮಗೆ ಗೋಚರಿಸುತ್ತದೆ. ಈ ‘ಸಂಬೋಧನೆ’ಯ ಮೂಲಕ ಆ ಇಬ್ಬರನ್ನೂ ನಮ್ಮವರನ್ನಾಗಿ ಮಾಡಿ, ಗೆಲ್ಲುತ್ತಾರೆ ಶಿರವಾಡಕರ್.
ನಾನು ಈ ನಾಟಕವನ್ನು ನೋಡುವಾಗ ಬೆಲವಲಕರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದವರು ಪ್ರಭಾಕರ ಜೋಗ್, ಮತ್ತು ಬೆಲವಲಕರನ ಹೆಂಡತಿಯ ಪಾತ್ರದಲ್ಲಿ  ನಟಿಸುತ್ತಿದ್ದವರು ಶ್ರೀಮತಿ ಶಾಂತಾ ಜೋಗ್ ಎಂದು ನನ್ನ ನೆನಪು.
‘ದಿ ಗೋವಾ ಹಿಂದೂ ಅಸೋಶಿಯೇಶನ್’ ಎಂಬ ಸಂಸ್ಥೆಯೇ ಈ ನಾಟಕವನ್ನು ಮೊಟ್ಟ ಮೊದಲ ಬಾರಿಗೆ (1970, ಡಿಸೆಂಬರ್ 23) ರಂಗದ ಮೇಲೆ ತಂದದ್ದು. ಮೊದಲ ಪ್ರಯೋಗ ನಡೆದದ್ದು ಮುಂಬಯಿಯ ‘ಬಿರ್ಲಾ ಮಾತೋಶ್ರೀ ಸಭಾಗೃಹ’ದಲ್ಲಿ. ನಿರ್ದೆಶಿಸಿದವರು ಪುರುಷೋತ್ತಮ್ ದಾರ್ವ್ಹೇಕರ್. ಇದಕ್ಕೆ ಸಂಗೀತ ನೀಡಿದವರು ಅರವಿಂದ ಮಯೇಕರ್. ‘ದಿ ಗೋವಾ ಹಿಂದೂ ಅಸೋಶಿಯೇಶನ್’ ಸಂಸ್ಥೆಯೊಂದೇ  ಅದರ 750ಕ್ಕೂ ಹೆಚ್ಚು ಪ್ರಯೋಗಗಳನ್ನು ನೀಡಿತಂತೆ. ಆ ನಂತರ ಇನ್ನೂ ಅನೇಕ ನಾಟಕ ಸಂಸ್ಥೆಗಳು ಈ ನಾಟಕವನ್ನು ಪ್ರಯೋಗಿಸಿದವು.  ಹೀಗೆ ಮರಾಠಿ ರಂಗಭೂಮಿಯಲ್ಲಿ ಸರಿಸುಮಾರು 1500ಕ್ಕೂ ಹೆಚ್ಚು ಪ್ರಯೋಗಗಳನ್ನು ಕಂಡ ನಾಟಕ ಈ ‘ನಟಸಮ್ರಾಟ್ ‘.
ಗಣಪತರಾವ್ ಬೆಲವಲಕರ್ ಪಾತ್ರವನ್ನು ತಾನೇ ತಾನಾಗಿ ಅಭಿನಯಿಸುತ್ತ ಒಂದಷ್ಟು ನಟರು ಹೃದಯಾಘಾತಕ್ಕೆ ಒಳಗಾದದ್ದೂ ಉಂಟಂತೆ.
‘ಕುಸುಮಾಗ್ರಜ’ ಎಂಬ ಕಾವ್ಯನಾಮದಲ್ಲಿ ನಮಗೆ ಕಾವ್ಯ ಗುಚ್ಛಗಳನ್ನು ನೀಡಿರುವವರು ವಿಷ್ಣು ವಾಮನ ಶಿರವಾಡಕರ್. ಕಾವ್ಯಕ್ಕಾಗಿಯೇ ಅವರನ್ನು ಜ್ಞಾನಪೀಠ ಪ್ರಶಸ್ತಿ ಹುಡುಕಿಕೊಂಡು ಬಂತು. ಮಹಾರಾಷ್ಟ್ರದ ನಾಶಿಕ ನಗರವನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಸಾಹಿತ್ಯ ರಚನೆಗೆ ತೊಡಗಿದವರು. ಶೇಕ್ಸಪಿಯರನ ‘ಕಿಂಗ್ ಲಿಯರ್’ ಅಂತೂ ಸರಿಯೇ. ಅದಕ್ಕೂ ಮೊದಲೇ ಅವರು ‘ಮ್ಯಾಕ್ಬೆತ್’ (‘ರಾಜಮುಕುಟ’ ಎಂಬ ಹೆಸರಲ್ಲಿ) ‘ಒಥೆಲ್ಲೋ’ ಮುಂತಾದ ನಾಟಕಗಳನ್ನು ರೂಪಾಂತರಿಸಿದರು… ಅವು ಮೂಲ ಮರಾಠಿಯವೇ ಎಂಬಷ್ಟು ಸಹಜವಾದ ಅಳವಡಿಕೆಗಳು. ಅವರ ರೂಪಾಂತರಣ ಶಕ್ತಿಗೆ ‘ನಟಸಮ್ರಾಟ್ ‘ ಅತ್ಯಂತ ಶ್ರೇಷ್ಠ ಉದಾಹರಣೆ. ಅದು ಸಾರ್ವಕಾಲಿಕ ನಾಟಕ. ಈ ನಾಟಕ ಕೃತಿಗೆ 1974ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು.
ಶಿರವಾಡಕರ್ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಹೊರಬಂದ ‘ಸ್ಮೃತಿ ವಿಶೇಷಾಂಕ’ದಲ್ಲಿ ಡಾ. ಶ್ರೀರಾಮ ಲಾಗೂ ‘ನಟಸಮ್ರಾಟ್ ‘ ನಾಟಕದ ಕುರಿತಂತೆ ಬರೆದ ಎರಡು ಅಮೂಲ್ಯ ಲೇಖನಗಳಿವೆ. ಆ ಪಾತ್ರ ತಮ್ಮ ಮೇಲೆ ಅದೆಷ್ಟು ಮಟ್ಟಿಗಿನ ಪ್ರಭಾವ ಬೀರಿತು ಎಂಬುದರ ಬಗ್ಗೆ ಡಾ. ಲಾಗೂ ಆ ಲೇಖನಗಳಲ್ಲಿ ತಮ್ಮ ಪ್ರಾಮಾಣಿಕ ಅನಿಸಿಕೆಯನ್ನು ದಾಖಲಿಸಿದ್ದಾರೆ.
ಇಂಥ ಒಂದು ಪರಿಪೂರ್ಣ ನಾಟಕವನ್ನು ಕನ್ನಡಕ್ಕೆ ಅನುವಾದಿಸಬೇಕೆಂಬ ಹಂಬಲ ನನಗೆ. ಆಗಿನ್ನೂ ರಂಗಭೂಮಿಯಲ್ಲಿ ಕಣ್ಣು ನೆತ್ತಿಯ ಮೇಲೆ ಮಾಡಿಕೊಂಡು ತಿರುಗುತ್ತಿದ್ದಂಥವ ನಾನು. ಒಂದೆರಡು ಏಕಾಂಕ ನಾಟಕಗಳನ್ನು ಹಿಂದಿಯಿಂದ ಅನುವಾದಿಸಿದ್ದೆ. ‘ನಟಸಮ್ರಾಟ್ ‘ದಂಥ ಒಂದು ಸಶಕ್ತ ನಾಟಕವನ್ನು ಅನುವಾದ ಮಾಡಿದರೆ ಮಾತ್ರ ನಾಲ್ಕು ಜನರ ಕಣ್ಣಲ್ಲಿ ಕಾಣುವಂತಾದೇನು ಎಂಬುದು ಆಗಿನ ನನ್ನ ಭ್ರಮೆ. ‘ನಟಸಮ್ರಾಟ್ ‘ ಪುಸ್ತಕದ ಪ್ರಕಾಶಕರ ಮೂಲಕ (ಬಹುಶಃ  ‘ಪಾಪ್ಯುಲರ್ ಪ್ರಕಾಶನ’ ಇರಬೇಕು) ಶಿರವಾಡಕರರಿಗೊಂದು ಕಾಗದ ಬರೆದು ಅನುಮತಿ ನೀಡಿರೆಂದು ವಿನಂತಿಸಿಕೊಂಡೆ.
ಎರಡು ವಾರಗಳ ನಂತರ ಅವರ ನಾಶಿಕದ ವಿಳಾಸ ಹೊತ್ತ ಒಂದು ಅಂತರ್ದೇಶೀ ಪತ್ರ ನನಗೆ ಬಂತು. ಕುತೂಹಲದಿಂದ ಒಡೆದು ನೋಡಿದೆ. ಅವರು ಎರಡೇ ಎರಡು ಸಾಲು ಬರೆದಿದ್ದರು : ”ಈ ನಾಟಕವನ್ನು ಅನುವಾದಿಸಲು ಒಂದೇ ಭಾಷೆಯ ಇಬ್ಬರಿಗೆ ಹೇಗೆ ಅನುಮತಿ ಕೊಡಲಿ? ಬೇಕಿದ್ದರೆ ನನ್ನ ಬೇರೆ ನಾಟಕದ ಅನುವಾದಕ್ಕೆ ನೀವು ಮುಂದಾಗುವುದಾದರೆ ‘ಸೈ’ ಅಂದೇನು…”
ಒಂದೆರಡು ವರ್ಷಗಳ ನಂತರ ಧಾರವಾಡದಲ್ಲಿ ‘ನಟಸಮ್ರಾಟ್ ‘ ನಾಟಕ ಕನ್ನಡದಲ್ಲಿ ಪ್ರಯೋಗಗೊಂಡಿತು. ನನಗೆ ಸಹಜವಾಗಿಯೇ ಅದನ್ನು ನೋಡಬೇಕೇಂಬ ಕುತೂಹಲ. ಮುಂಬಯಿಯ ಒಂದು ಕನ್ನಡ ನಾಟ್ಯ ಸಂಘ ಅದನ್ನು ನಿರ್ಮಿಸಿತ್ತು. ಕೆ. ಜೆ. ರಾವ್ ಅದನ್ನು ಅನುವಾದಿಸಿ, ನಿರ್ದೇಶಿಸಿ, ಸ್ವತಃ ಬೆಲವಲಕರ್ ಪಾತ್ರದಲ್ಲಿ ಅಭಿನಯಿಸಿದ್ದರೆಂದು ನೆನಪು. ಆದರೆ ಧಾರವಾಡದ ಅನೇಕರಿಗೆ ಅನುವಾದ ಇಷ್ಟವಾಗಲಿಲ್ಲ. ಅದು ಕನ್ನಡತನಕ್ಕೆ ಒಗ್ಗಿರಲಿಲ್ಲ. ಅನುಮತಿ ಸಿಕ್ಕಿದ್ದರೆ ನಾನಿದನ್ನು ಚೆನ್ನಾಗಿಯೇ ಅನುವಾದಿಸುತ್ತಿದ್ದೆ ಅನಿಸಿತು ನನಗೆ.  ಇದು ನನ್ನ ಪ್ರಾಮಾಣಿಕ ಅನಿಸಿಕೆ ಹೊರತು ಸೊಕ್ಕಿನ ಮಾತಲ್ಲ.
‘ನಟಸಮ್ರಾಟ್ ‘ ನಾಟಕದ ಇತ್ತೀಚಿನ ಒಂದು ಪ್ರಯೋಗದ ಚಿತ್ರ
-೦-೦-೦-೦-೦-
ಅಂತೂ ‘ಲಿಯರ್’ ನನ್ನ ಕೈಹಿಡಿದ. ‘ನಟಸಮ್ರಾಟ್ ‘ ಆಗಿ ಅಲ್ಲದಿದ್ದರೂ ‘ನಂದಭೂಪತಿ’ಯಾಗಿ ಅರಳಿದ. ಆದದ್ದೆಲ್ಲ ಒಳಿತೇ ಆಯಿತು. ಅದು ರಂಗವನ್ನೂ ಏರಿತು. ಒಂದು ರಂಗ ತರಬೇತಿ ಶಿಬಿರದ ನಾಟಕವಾಗಿ.
ಈ ಸಂಬಂಧದ ಎರಡು ನೆನಪುಗಳು ಇಲ್ಲಿ ದಾಖಲಿಸಲೇಬೇಕಾದಂಥವು.
‘ನಂದಭೂಪತಿ’ಯನ್ನು ಬರೆದು ಮುಗಿಸಿದೆನಲ್ಲ. ಅದರ ಹಸ್ತಪ್ರತಿಯನ್ನು ಒಬ್ಬ ಸುಪ್ರಸಿದ್ಧ ವಿಮರ್ಶಕರಿಗೆ ನೋಡಲು ಕೊಟ್ಟೆ. ಆ ಶಿಬಿರದ ಸಂದರ್ಭದಲ್ಲಿ ಹೊರ ತರಲು ಉದ್ದೇಶಿಸಿದ್ದ ನೆನಪಿನ ಸಂಚಿಕೆಯಲ್ಲಿ ಈ ಕೃತಿಯ ಕುರಿತು ಅವರ ಅಭಿಪ್ರಾಯವನ್ನು ಹಾಕಿಕೊಳ್ಳಲು ಬಯಸಿದ್ದೆ. ಅವರು ಎರಡು ದಿನ ಬಿಟ್ಟು ನಮ್ಮ ಶಿಬಿರದಲ್ಲಿ ಅವರ ಉಪನ್ಯಾಸವಿತ್ತು. ಅವತ್ತು ಬಂದರಲ್ಲ, ಬಂದವರೇ ಅವರು ಮಾಡಿದ ಮೊದಲ ಕೆಲಸ ಎಂದರೆ ಹಸ್ತಪ್ರತಿಯನ್ನು ನನಗೆ ಮರಳಿಸಿದ್ದು. ಆ ಮೇಲೆ ನನ್ನತ್ತ ಒಂದು  ಓರೆನೋಟ ಬೀರಿ, ”…ಊಹೂಂ… ಇದರ ಬಗ್ಗೆ ನನಗ ಸದಭಿಪ್ರಾಯ ಇಲ್ಲಾ. ಅದಕ್ಕ ಬರೀಲಿಲ್ಲಾ…” ಅಂದರು.
”ಯಾವುದರ ಬಗ್ಗೆ ನಿಮಗ ಸದಭಿಪ್ರಾಯ ಇಲ್ಲ ಸರ್…?” ಅಂತ ನಾನು.
”ಈ ನಿಮ್ಮ ರೂಪಾಂತರದ ಬಗ್ಗೆ… ಅಲ್ಲಾ… ಆ ಒಬ್ಬ ಚಕ್ರವರ್ತಿನ್ನ ಒಯ್ದು ಒಬ್ಬ ಗೌಡನಂಗ ಚಿತ್ರಿಸೀರಿ… ಮ್ಯಾಲೆ ಅವಗ ‘ಭೂಪತಿ’ ಅಂತೀರಿ. ಅಲ್ರೀ… ಯಾವದಾರೆ ರಾಜಾ ಹೀಂಗ ಮಾತಾಡ್ತಾನs…?”
”… ‘ಹೀಂಗ ಮಾತಾಡೂದು’ ಅಂದ್ರ ಹ್ಯಾಂಗ ಅಂತ ನನಗ ಅರ್ಥ ಆಗಲಿಲ್ಲಾ ಸರ್…”
”ಊಹೂಂ… ಇಡೀ ನಾಟಕಕ್ಕ ನೀವು ಬಳಸಿದ ಭಾಷಾ ನಾಟಕಗಳಿಗೆ ಒಗ್ಗೂವಂಥಾದಲ್ಲಾ…”
”ಅಂದ್ರ…?”
”ರಾಜ-ಮಹಾರಾಜರು ಆಡೋ ಭಾಷಾ ಅಲ್ಲಿದು.”
”ರಾಜ-ಮಹಾರಾಜರು ಯಾವ ಭಾಷಾ ಮಾತಾಡ್ತಿದ್ರೋ ನನಗಂತೂ ಗೊತ್ತಿಲ್ಲ. ನಾನು ನನಗ ಬರೋ ಭಾಷಾದಾಗ ಬರೀತೀನಿ ಅಷ್ಟs… ನೀವು ಅಭಿಪ್ರಾಯ ಕೊಡದಿದ್ರೂ ಅಡ್ಡಿ ಇಲ್ಲಾ…” ಅಂದೆ.
ಅಂದು ಹಾಗೆ ಮಾತಾಡಿದ ಆ ಮಹಾಶಯರೇ ಮುಂದೆ ನಾಟಕ ಪ್ರದರ್ಶನದ ನಂತರ ‘ಅದ್ಭುತ… ಅದ್ಭುತ’ ಅಂತ ನಿರ್ದೇಶಕರ ಬೆನ್ನು ಚಪ್ಪರಿಸುತ್ತ ನಿಂತದ್ದು  ನೋಡಿ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ…
ಮುಂದೆ 1986ರಲ್ಲಿ ಹೈದರಾಬಾದ್ ದೂರದರ್ಶನ ಕೇಂದ್ರದಿಂದ ನಿರ್ಮಾಣಗೊಂಡು, ಬೆಂಗಳೂರು ಕೇಂದ್ರದಿಂದ ಆರು ಕಂತುಗಳಲ್ಲಿ ಪ್ರಸಾರವಾಯಿತಲ್ಲ ಈ ‘ನಂದಭೂಪತಿ’… ಆಗ ಮತ್ತೆ ಇಂಥದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಇನ್ನೊಬ್ಬ ಹಿರಿಯ ಲೇಖಕ…
ಅವರು ಗೋವಿಂದಮೂರ್ತಿ ದೇಸಾಯಿ. ಕಾದಂಬರಿ ಸೇರಿದಂತೆ ಕೆಲವು ಸಾಹಿತ್ಯ ಪ್ರಕಾರಗಳಲ್ಲಿ ಕೈ ಆಡಿಸಿದವರು. ನಿವೃತ್ತರಾಗಿ ಬೆಂಗಳೂರಲ್ಲಿಯೇ ವಾಸಿಸುತ್ತಿದ್ದ ಅವರು ನಾನು ಕೆಲಸ ಮಾಡುತ್ತಿದ್ದ ಹುಬ್ಬಳ್ಳಿಯ ‘ಕಸ್ತೂರಿ’ ಡೈಜೆಸ್ಟಿನ ಕಚೇರಿಗೆ ಆಗೀಗ ಬರುತ್ತಿದ್ದರು. ಅವರು ಬಂದರೆ ತಾಸುಗಟ್ಟಲೆ ಹರಟೆ. ಅದರಲ್ಲಿ ನಾಟಕ, ಸಂಗೀತ, ಸಾಹಿತ್ಯ ಎಲ್ಲವೂ ಸಮಾವೇಶಗೊಂಡಿರುತ್ತಿತ್ತು. ನಮ್ಮ ಬಾಸೂ ಹರಟೆಮಲ್ಲರೆ…
ಬೆಂಗಳೂರಿಗೆ ಆಗ ತಾನೇ ದೂರದರ್ಶನ ಕಣ್ಣು ತೆರೆದಿತ್ತಲ್ಲ… ಹಾಗೊಮ್ಮೆ ಅವರು ಬಂದಿದ್ದ ಸಂದರ್ಭದಲ್ಲಿ ಮಾತು ದೂರದರ್ಶನದ ಕಾರ್ಯಕ್ರಮಗಳತ್ತ ಹೊರಳಿತು.
”ಮನ್ನೆ ಒಂದು ನಾಟಕದ ಮದಲನೆ ಕಂತು ನೋಡೀದ್ನೇನ್ರೆಪಾ, ಟೀವಿ ಒಳಗ… ‘ಕಿಂಗ್ ಲಿಯರ್’ದ ಅಡಾಪ್ಟೇಶನ್ ಇದ್ದಂಗಿತ್ತು…” ಅಂದರು.
ನನ್ನ ಕಿವಿ ನಿಮಿರಿತು.
”ಇವರs ಮಾಡಿದ್ದು ಅದು…” ಅಂತ ನಮ್ಮ ಬಾಸು.
”ನೀವು ಮಾಡಿದ್ದs…! ಪ್ಚ್… ಆದ್ರs ನನಗ ಅದರ ಭಾಷಾ ಹಿಡಸಲಿಲ್ರೆಪಾ ಯಾಕೋ…”
”ಹೌದೇನ್ರಿ…” ಅಂದೆ ನಾನು. ಅವರ ವಯಸ್ಸಿಗೆ ಮರ್ಯಾದೆ ಕೊಡಬೇಕಲ್ಲ…
”ಹೂಂ… ದೊಡ್ಡಾಟ ಇದ್ದಂಗಿತ್ತು…”
”ಇದಿನ್ನೂ ಮದಲನೆ ಕಂತು… ಇನ್ನೂ ಐದು ಕಂತು ಬರೂವವ… ಪೂರ್ಣ ನೋಡಿದ ಮ್ಯಾಲೆ ಹೇಳ್ರಿ…” ಅಂತ ನಾನು ಸುಮ್ಮನಾಗಿದ್ದೆ.
ಅದೇ ಗೋವಿಂದಮೂರ್ತಿ ದೇಸಾಯರು ಆ ನಾಟಕದ ಆರೋ ಕಂತುಗಳನ್ನು ನೋಡಿದ ಮೇಲೆ ನನಗೊಂದು ಕಾರ್ಡು ಬರೆದರು :
”ಅಭಿನಂದನೆಗಳು. ಭಾಳ ಚೊಲೊ ಅದ. ನನ್ನ ಅಭಿಪ್ರಾಯ ಬದಲಿಸಿಕೊಂಡೀನಿ. ”
ನಾನು ನಕ್ಕು ಸುಮ್ಮನಾದೆ.
-೦-೦-೦-೦-೦-
ಈಗ ಒಂದು ದಶಕದ ಹಿಂದೆ ಇರಬೇಕು. ಧಾರವಾಡದ ‘ಕರ್ನಾಟಕ ಕಲೋದ್ಧಾರಕ ಸಂಘ’ದವರು ‘ನಟಸಮ್ರಾಟ್ ‘ ನಾಟಕವನ್ನು ರಂಗಕ್ಕೆರಿಸಿದರು. ಇದು ಡಾ. ವಾಮನ ಬೇಂದ್ರೆಯವರು ಮಾಡಿದ ಅನುವಾದ. ಗಣಪತರಾವ್ ಬೆಲವಲಕರ್ ಪಾತ್ರಕ್ಕೆ ಜೀವ ತುಂಬಿದ್ದವರು ಏಣಿಗಿ ನಟರಾಜ. ಆಗ ನಾನು ದೂರದ ಹೈದರಾಬಾದಿನಲ್ಲಿ ಇದ್ದುದರಿಂದ ಈ ಪ್ರಯೋಗವನ್ನು ನೋಡಲು ನನಗೆ ಸಾಧ್ಯವಾಗಲಿಲ್ಲ.
ಹಾಗಿದ್ದರೆ ವಿ. ವಾ. ಶಿರವಾಡಕರ್ ‘ನಟಸಮ್ರಾಟ್ ‘ ನಾಟಕವನ್ನು ಕನ್ನಡಕ್ಕೆ ಅನುವಾದಿಸಲು ಅನುಮತಿ ಕೊಟ್ಟದ್ದು ಯಾರಿಗೆ? ಕೆ. ಜೆ. ರಾವ್ ಅವರಿಗಾ… ಡಾ. ವಾಮನ ಬೇಂದ್ರೆಯವರಿಗಾ…? ಇಬ್ಬರಿಗಂತೂ ಅನುಮತಿ ಕೊಡಲು ಸಾಧ್ಯವಿಲ್ಲವಲ್ಲ…
-೦-೦-೦-೦-೦-
ಜಯತೀರ್ಥ ಜೋಶಿ ಮಾಡಿಸಿದ ‘ನಂದಭೂಪತಿ’ ನಾಟಕದ ಮೊದಲನೆಯ ಪ್ರಯೋಗವನ್ನು ನೋಡಲು ಬಂದವರಲ್ಲಿ ಶಿಗ್ಗಾವಿಯ  ಸ್ನೇಹಿತ ಚಿತ್ರ ಕಲಾವಿದ ಟಿ. ಬಿ. ಸೊಲಬಕ್ಕನವರ ಕೂಡ ಒಬ್ಬರು. ಅವರ ಪರಿಚಯವಾಗಿ ಇಂದಿಗೆ ಸರಿಯಾಗಿ ನಲವತ್ತೊಂದು ವರ್ಷಗಳಾದವು. ದಾವಣಗೆರೆಯ ‘ಸ್ಕೂಲ ಆಫ್ ಆರ್ಟ್’ನಲ್ಲಿ ಕೆಲಸ ಮಾಡಿ ನಂತರ ಸ್ವತಂತ್ರ ಕೆಲಸಕ್ಕೆ ತೊಡಗಿಕೊಂಡ ಗೆಳೆಯ ಸೊಲಬಕ್ಕನವರ ಅವರಿಗೆ ಜಾನಪದ ಕಲೆಗಳ ಬಗ್ಗೆ ಎಲ್ಲಿಲ್ಲದ ಪ್ರೀತಿ. ದೊಡ್ದಾಟದಂಥ ಜಾನಪದ ರಂಗ ಪ್ರಕಾರಗಳ ಪುನರುಜ್ಜೀವನಕ್ಕಾಗಿ ಅವರು ಟೊಂಕ ಕಟ್ಟಿ ನಿಂತವರು. ‘ನಂದಭೂಪತಿ’ಯನ್ನು ಅವರು ದೊಡ್ದಾಟದ ಶೈಲಿಯಲ್ಲಿ ರಂಗಕ್ಕೆ ಏರಿಸಲು ಮುಂದಾಗಿದ್ದರು. ಆಗ ಅದು ಸಾಧ್ಯವಾಗಿರಲಿಲ್ಲ.
ಈಗ ಅದರತ್ತ ಹೊರಳಿದೆ ನಮ್ಮೆಲ್ಲರ ಚಿತ್ತ…

‍ಲೇಖಕರು avadhi-sandhyarani

January 27, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. umesh desai

    ಹೌದು ಮರಾಠಿಮಂದಿಗೆ ನಾಟಕ ಅಂದ್ರ ಪ್ರಾಣ..
    ಅವರ ಧಾರಾವಾಹಿನೂ ಗುಣಮಟ್ಟದ್ದಿರತಾವ..ಆದ್ರ ಕನ್ನಡದಾಗ ನಟಸಾಮ್ರಾಟ್ ಯಾರು
    ಅನುವಾದಿಸಿದ್ರು ಇದು ಸಸ್ಪೆನ್ಸ ಉಳೀತಲ್ರಿ ಗುರೂಜಿ…!

    ಪ್ರತಿಕ್ರಿಯೆ
  2. prakash hegde

    ಅಣ್ಣಾ..
    ನಿಮ್ಮ ನೆನಪಿನ ದೋಣಿಯೊಳಗಿನ ಪಯಣ ಬಲು ಸುಂದರ…
    ಸಾಗಲಿ.. ಸಾಗಲಿ..
    ನಮ್ಮನ್ನು ಬೇರೆ ಭಾವಲೋಕಕ್ಕೆ ಕರೆದೊಯ್ಯಲಿ..

    ಪ್ರತಿಕ್ರಿಯೆ
  3. hipparagi Siddaram

    ವಾಜಪೇಯಿ ಸರ್, ನಿಜವಾಗಿಯೂ ನಾವು ಸುದೈವಿಗಳಲ್ಲ ಎಂದು ಅನಿಸುತ್ತಿದೆ. ಯಾಕಂದರೆ ‘ನಟಸಾಮ್ರಾಟ’ ರಂಗಕೃತಿ ನಿಮ್ಮ ಲೇಖನಿಯ ಮೂಲಕ ಕನ್ನಡದಲ್ಲಿ ಅರಳಬೇಕಾಗಿತ್ತು. ಆ ಸೊಗಸು ಸವಿಯುವ ಅವಕಾಶ ನಮ್ಮಂಥ ಕಿರಿಯರಂಗಪ್ರೇಮಿಗಳಿಗೆ ಇಲ್ಲವಾಯಿತಲ್ಲ….ಎಂಬ ವ್ಯಥೆ ಸರ್….ಇರಲಿ…ನಾನು ಹಲವಾರು ಲೆಕ್ಕವಿಲ್ಲದಷ್ಟು ವೃತ್ತಿರಂಗಭೂಮಿ, ಅರೆವೃತ್ತಿರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿಯ ರಂಗಪ್ರಯೋಗಳನ್ನು ನೋಡಿದ್ದೇನೆ. ನನ್ನ ಮನಕಲಕಿ(vibrate),ನನ್ನಿಂದ ಕಣ್ಣೀರು ಹಾಕಿಸಿಕೊಂಡ ನಾಟಕವೆಂದರೆ ಡಾ.ವಾಮನ ಬೇಂದ್ರೆಯವರ ಅನುವಾದಿತ ಮತ್ತು ನನ್ನ ರಂಗಗುರುಗಳಾದ ದಿ.ಏಣಗಿ ನಟರಾಜ್ ಅವರ ಅದ್ಭುತ ಅಭಿನಯದ ‘ನಟಸಾಮ್ರಾಟ’. ಈ ಪ್ರಯೋಗದಲ್ಲಿ ನಟರಾಜ್ ಅವರು ಈ ಪಾತ್ರಕ್ಕಾಗಿಯೇ ಕಾದಿದ್ದರೋ, ಈ ಪಾತ್ರಕ್ಕಾಗಿಯೇ ಅವರ ಜನನವಾಯಿತೋ ಎಂಬುವಷ್ಟು ಶ್ರೇಷ್ಟ ಅಭಿನಯ. ದೃಶ್ಯವೊಂದರಲ್ಲಿ…ಹರೆಯದಲ್ಲಿ ರಂಗಭೂಮಿಯಲ್ಲಿ ಮೇರೆದಾಡಿದ ಮೇರುನಟನೊಬ್ಬ ಮುಪ್ಪಿನ ಕಾಲದಲ್ಲಿ ಮಕ್ಕಳಿಂದ ಅನಾಧರಕ್ಕೆ ಒಳಗಾದಾಗ…’ಒಂದ ಒಂದು ಮಿರ್ಚಿ ಭಜಿ ತಿಂತಿನವಾ…ಖರೇವಂದ್ರೂ ನಾ ಕಳ್ಳತನ ಮಾಡಿಲ್ಲವಾ…’ ಅಂತ ತನ್ನ ಮಗಳಲ್ಲಿ ದೈನೇಶಿಯಾಗಿ ಬೇಡಿಕೊಳ್ಳುವಾಗ…ಎಂಥ ಕಠಿಣ ಹೃದಯವೂ ಸಹ ಕಂಪಿಸದೇ ಇರದು. ದೇಹದ ನರನಾಡಿಗಳಲ್ಲಿ ರಂಗಭೂಮಿಯ ಅಭಿನಯ ರಕ್ತವನ್ನು ಮೇಳೈಸಿಕೊಂಡಾಗ ಪ್ರಯೋಗವೊಂದು ಹೇಗೆ ಮನಮುಟ್ಟುತ್ತೆಂಬುದಕ್ಕೆ ‘ನಟಸಾಮ್ರಾಟ’ ನಾಟಕ ಪ್ರಯೋಗದ ಅಭಿನಯವೇ ಸಾಕ್ಷಿ. ನಾನು ಧಾರವಾಡದ ಅಂದಿನ ಪ್ರಯೋಗವನ್ನು ನೋಡಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ನೆನಪಿನಿಂದ ಮಾಸಿಲ್ಲ….ಈ ನಾಟಕದ ಯಶಸ್ಸಿನ ನಂತರ ಏಣಗಿ ನಟರಾಜ್ ಸರ್ ‘ನಟಸಾಮ್ರಾಟ’ ಎಂಬ ಬಿರುದು ವಿಶೇಷಣಗಳಿಂದ ಶೋಭಾಯಮಾನರಾದರು….ಶುಭದಿನ

    ಪ್ರತಿಕ್ರಿಯೆ
  4. Gopaal Wajapeyi

    ಅದನ್ನ ಡಾ. ವಾಮನ ಬೇಂದ್ರೆಯವರ ಅನುವಾದಿಸ್ಯಾರ Umesh Desayiಯವರ. ಈ ವಿಷಯಾ ಮೊನ್ನೆ ನನಗ ಅವರಿಂದನ ತಿಳೀತು… 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: