ಗೋಪಾಲ ವಾಜಪೇಯಿ ಕಾಲಂ : ‘ಮೃತ್ಯುದಾನ’ದೊಂದಿಗೆ..

ಸುಮ್ಮನೇ ನೆನಪುಗಳು – 27

‘ಅಭಿನಯ ಭಾರತಿ’ ಎಂಬ ತಂಡದ ಪ್ರಸ್ತಾಪ ಈ ನೆನಪುಗಳಲ್ಲಿ ಆಗಾಗ ಬರುತ್ತಲೇ ಇರುತ್ತದಲ್ಲ… ಅದರ ಬಗ್ಗೆ ಒಂದಿಷ್ಟು ಹೇಳಬೇಕು.

ನಾವು ಮೊದಲು ಒಟ್ಟಾಗಿ ಹುಬ್ಬಳ್ಳಿಯಲ್ಲಿ ರಂಗಚಟುವಟಿಕೆ ನಡೆಸುತ್ತಿದ್ದೆವಲ್ಲ, ಆ ತಂಡದ ‘ತಂಗಾಳಿ’ಗೆ ಯಾರೋ ಪುಣ್ಯಾತ್ಮರು ವಿಷಾನಿಲವನ್ನು ಸೇರಿಸಿಬಿಟ್ಟರು… ಪರಿಣಾಮವಾಗಿ, ನಾವು ಮೂವರು ಗೆಳೆಯರು (ನಾನು, ರಾಘವೇಂದ್ರ ಹುನಗುಂದ ಮತ್ತು ಸೇತುಮಾಧವ ಮಾನ್ವಿ) ಆ ತಂಡದಿಂದ ಹೊರಬೀಳುವ ಸನ್ನಿವೇಶ ನಿರ್ಮಾಣವಾಯಿತು. ಕ್ಷಣಕಾಲವೂ ಅಲ್ಲಿರದೇ ಆ ತಂಡದಿಂದ ಹೊರಗೆ ಬಂದುಬಿಟ್ಟೆವು…

ಹೊರಗೆ ಬಂದ ಮೇಲೆ ಸುಮ್ಮನೆ ಹೇಗೆ ಕೂಡಲಾದೀತು…? ರಂಗಭೂಮಿಯ ಸೆಳೆತವೇ ಅಂಥದು… ಹೀಗಾಗಿ,1981ರಲ್ಲಿ, ಒಂದು ಹೊಸ ತಂಡ ಕಟ್ಟುವ ನಮ್ಮ ಹವಣಿಕೆ ಶುರುವಾಯಿತು. ತಂಡವನ್ನೇನೋ ತುಂಬಾ ಉತ್ಸಾಹದಿಂದ ಕಟ್ಟಿಬಿಡಬಹುದು. ಆದರೆ, ಕಟ್ಟಿದ ಮೇಲೆ ಅದನ್ನು ಹಾಗೆಯೇ ಬಿಟ್ಟುಬಿಡಬಾರದಲ್ಲ… ಅದು ನಿರಂತರವಾಗಿ ರಂಗಭೂಮಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುತ್ತ, ಮುಂದುವರಿಯುವ ಹಾಗೆ ನೋಡಿಕೊಳ್ಳಬೇಕು… ಹಾಗಾಗಬೇಕೆಂದರೆ ಅದರ ‘ಹುಟ್ಟು’ ಗಟ್ಟಿಯಾಗಿರಬೇಕು. ಅದನ್ನು ಕಾಪಿಟ್ಟು ಬೆಳೆಸಿ, ಕೈ ಹಿಡಿದು ಮುನ್ನಡೆಸಿ, ಅದು ತನ್ನಷ್ಟಕ್ಕೆ ತಾನು ನಡೆದುಕೊಂಡು ಹೋಗಲು ಸಮರ್ಥ ಎಂದು ಮನವರಿಕೆಯಾದಾಗ ದೂರ ನಿಲ್ಲಬೇಕು. ಅದರಷ್ಟಕ್ಕೆ ಅದು ಸುಪುಷ್ಟವಾಗಿ ಬೆಳೆದು ನಿಂತದ್ದನ್ನು ನೋಡಿ ಆನಂದಿಸಬೇಕು…

ಇವೆಲ್ಲ ಆಗಿನ ನಮ್ಮ ಕನಸುಗಳು. ಆದರೆ, ಆ ಕನಸುಗಳು ನನಸಾಗುವ ಸುಮುಹೂರ್ತ ಅಷ್ಟು ಬೇಗ ಬರುತ್ತದೆಂದು ನಾವಾರೂ ಅಂದುಕೊಂಡಿರಲಿಲ್ಲ.

ಅದೊಂದು ಸಂಜೆ. ವೈದ್ಯಕೀಯ ವಿದ್ಯಾರ್ಥಿ ಮಿತ್ರನೊಬ್ಬ ಬರಲು ಹೇಳಿದ್ದರಿಂದ ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜು (ಕೆ.ಎಮ್.ಸಿ.) ಆವರಣದಲ್ಲಿ ಓಡಾಡುತ್ತಿದ್ದೆ. ಆಗ ಕೆ.ಎಮ್.ಸಿ. ಸಾಂಸ್ಕೃತಿಕ ಚಟುವಟಿಕೆಗಳ ಆಗರ. ಅಲ್ಲಿದ್ದ ವೈದ್ಯಕೀಯ ಪ್ರೊಫೆಸರುಗಳು, ವಿದ್ಯಾರ್ಥಿಗಳು ಎಲ್ಲ ಕನ್ನಡ ಭಾಷೆ ಮತ್ತು ಸಂಸ್ಕೃತಿಗಳ ಬಗ್ಗೆ ಅಪಾರ ಗೌರವವುಳ್ಳವರು. ಕರ್ನಾಟಕ ರಾಜ್ಯೋತ್ಸವ ಬಂತೆಂದರೆ ‘ಕೆ.ಎಂ. ಸಿ. ಕರ್ನಾಟಕ ಸಂಘ’ದ ವಿವಿಧ ಚಟುವಟಿಕೆಗಳ ಸಂಭ್ರಮದಲ್ಲಿ ಅವರೆಲ್ಲ ಮುಳುಗಿಬಿಡುತ್ತಿದ್ದರು. ಸುಪ್ರಸಿದ್ಧ ಲೇಖಕರ ಉಪನ್ಯಾಸ, ನಾಟಕ ಪ್ರದರ್ಶನ, ರಂಗೋಲಿ ಸ್ಪರ್ಧೆ, ಗಾಯನ ಸ್ಪರ್ಧೆ, ಮುಂತಾದವುಗಳ ಭರಾಟೆ. ಅಲ್ಲಿಯ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಹೆಚ್ಚು ಕಡಿಮೆ ನನ್ನ ಸಮಾನ ವಯಸ್ಕರು. ಸಮಾನ ಮನಸ್ಕರು ಕೂಡ. ಗೆಳೆತನ ಬೆಳೆದಿತ್ತು. ‘ಕೈಲಾಸಂ ದಿನಾಚರಣೆ’ ಮುಂತಾದ ಸಂದರ್ಭದ ಅವರ ನಾಟಕಗಳಿಗೆ ನೇಪಥ್ಯ, ಸಾಹಿತ್ಯ ಅಂತ ನಾನು ನೆರವಾಗುತ್ತಿದ್ದೆ. ಆಗ ಕೆ.ಎಮ್.ಸಿ.ಯ ಕೆಲವು ರಂಗಾಸಕ್ತ ವಿದ್ಯಾರ್ಥಿಗಳು ಹವ್ಯಾಸಿ ತಂಡವೊಂದನ್ನು ಕಟ್ಟಿಕೊಂಡಿದ್ದರು. ತಮ್ಮಲ್ಲೇ ಒಬ್ಬ ಬರೆದ ನಾಟಕವನ್ನು ಅಭಿನಯಿಸುವುದು, ಹುಬ್ಬಳ್ಳಿಯ ಬೇರೆ ಹವ್ಯಾಸಿ ತಂಡಗಳ ನಾಟಕಗಳಲ್ಲಿ ಭಾಗವಹಿಸುವುದು ಹೀಗೆ ಒಟ್ಟು ತಮ್ಮ ರಂಗಪ್ರೇಮವನ್ನು ಮೆರೆಯುತ್ತಿದ್ದರು. ಆಗ ನಾವು ಹತ್ತು ಜನ ಒಂದು ಬೆಳಿಗ್ಗೆ ಹುಬ್ಬಳ್ಳಿಯಿಂದ ಹೊರಟು, ಹೆಗ್ಗೋಡು ಮತ್ತು ಸಿದ್ದಾಪುರ (ಉ.ಕ.)ಗಳಲ್ಲಿ ಮೂರು ಏಕಾಂಕ ನಾಟಕಗಳ ಪ್ರದರ್ಶನ ನೀಡಿ ಅಂದೇ ರಾತ್ರಿ ಹುಬ್ಬಳ್ಳಿಗೆ ಮರಳಿ ಬಂದದ್ದೂ ಉಂಟು.

ಆ ವೈದ್ಯಕೀಯ ವಿದ್ಯಾರ್ಥಿಗಳ ಅಪರಿಮಿತ ರಂಗಪ್ರೇಮವನ್ನು ಕಂಡ ಕಾರಣದಿಂದಾಗಿಯೇ ಗಿರೀಶ ಕಾರ್ನಾಡರು 1977-78ರಲ್ಲಿ ನಾನೀ ಪಾಟೀಲ ಮತ್ತು ಪಾಂಡುರಂಗ ಪಾಟೀಲರನ್ನು ‘ಒಂದಾನೊಂದು ಕಾಲದಲ್ಲಿ’ ಚಿತ್ರದ ವೈದ್ಯಕೀಯ ಸೇವೆಗೆ ನೇಮಿಸಿಕೊಂಡರು. ಆ ಚಿತ್ರದಲ್ಲಿ ಹೊಡೆದಾಟದ ಸನ್ನಿವೇಶಗಳು ಸಾಕಷ್ಟಿದ್ದುವಲ್ಲ… ಆ ಸಂದರ್ಭದಲ್ಲಿ ಯಾರಿಗಾದರೂ ಗಾಯಗಳಾದರೆ ಚಿಕಿತ್ಸೆ ನೀಡಲು ಯಾರಾದರೂ ಒಬ್ಬ ಡಾಕ್ಟರ್ ಬೇಕಲ್ಲ… ಈ ನಾನೀ ಪಾಟೀಲ ಒಬ್ಬ ಅದ್ಭುತ ನಟ. ಪಾಂಡುರಂಗ ಪಾಟೀಲ ಒಬ್ಬ ನಾಟಕಕಾರ. (ಈತ ಮುಂದೆ ರಾಜಕೀಯ ಪ್ರವೇಶಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರಸಭೆಯ ಮೇಯರ್ ಹುದ್ದೆಯನ್ನು ಅಲಂಕರಿಸಿದ್ದೂ ಉಂಟು.)

ಆ ಸಂಜೆ ನನ್ನನ್ನಲ್ಲಿ ಬರಲು ಹೇಳಿದ್ದಾತ ಡಾ. ರಮೇಶ ಧಾನವಾಡಕರ. ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ. ಆತ ಒಬ್ಬ ಕವಿ, ನಾಟಕಕಾರ, ಚಿಂತಕ. ಅಷ್ಟೇ ಅಲ್ಲ, ನೀರಿನ ಮೇಲೆ ರಂಗೋಲಿ ಹಾಕುವುದರ ಮೂಲಕ ನಿಸರ್ಗ ಸುಂದರ ಚಿತ್ರಗಳನ್ನು ಬಿಡಿಸುತ್ತಿದ್ದ ಜಾಣ ಕಲಾವಿದ… ಮರಾಠಿಯ ಡಾ. ಸತೀಶ್ ಕರಣಿಕ್ ಎಂಬೊಬ್ಬರು ಬರೆದ ‘ಮೃತ್ಯುದಾನ’ ಎಂಬ ನಾಟಕವನ್ನಾತ ಕನ್ನಡಕ್ಕೆ ಅನುವಾದಿಸಿದ್ದ. ಕೆ.ಎಮ್.ಸಿ. ಆವರಣದ ‘ಸುಶ್ರುತ’ ಹಾಸ್ಟೆಲ್ಲಿನ ಆತನ ಕೋಣೆಯಲ್ಲಿ ಅದರ ವಾಚನ.

ಆ ಸಂದರ್ಭದಲ್ಲಿ (1981) ‘ದಯಾಮರಣ’ (Euthanasia ಅಥವಾ Mercy Killing) ಜಗತ್ತಿನಾದ್ಯಂತ ಚರ್ಚೆಗೀಡಾಗಿದ್ದ ವಿಚಾರ. ಮರಣ ಶಯ್ಯೆಯಲ್ಲಿ ಮಲಗಿ ನರಳುವ ವ್ಯಕ್ತಿಯ ತೊಳಲಾಟ ಮತ್ತು ಅನುಭವಿಸುವ ಚಿತ್ರಹಿಂಸೆಗಳಿಗೆ ಒಂದು ಶಾಶ್ವತ ಪರಿಹಾರವೆಂದರೆ ಕೇವಲ ‘ದಯಾಮರಣ.’ ಆದ್ದರಿಂದ ಅದಕ್ಕೆ ಅವಕಾಶ ನೀಡಬೇಕೆಂದು ಕೋರಿ (ಬಹುಶಃ) ಹಾಲಂಡಿನ ನ್ಯಾಯಾಲಯದೆದುರು ಬಂದಿದ್ದ ಒಂದು ಅರ್ಜಿ ತುಂಬ ಸುದ್ದಿ ಮಾಡಿತ್ತು. ‘ದಯಾಮರಣ’ದ ಪರ ಮತ್ತು ವಿರೋಧವಾದ ಅಭಿಪ್ರಾಯಗಳು ಎಲ್ಲೆಡೆ ಕೇಳಿಬರತೊಡಗಿದ್ದವು. ಇಂದಿಗೂ ಮುಂದುವರಿದಿರುವ ಈ ಚರ್ಚೆ ಗ್ರೀಸ್ ಮತ್ತು ರೋಮ್ ಸಾಮ್ರಾಜ್ಯ ಕಾಲದಷ್ಟು ಪ್ರಾಚೀನ.

ಮನೆಯಲ್ಲಿ ಅತಿ ಹತ್ತಿರದ ವ್ಯಕ್ತಿ ವರ್ಷಗಟ್ಟಲೆ ಮಲಗಿದಲ್ಲಿಯೇ ಮಲಗಿಬಿಟ್ಟಾಗಿನ ಮಾನಸಿಕ ತೊಳಲಾಟ ಅನುಭವಿಸಿದವರಿಗೇ ಗೊತ್ತು. ಹೀಗೆ ಮಲಗಿದ ಅಪ್ಪನನ್ನು ಕಂಡು ಸ್ವತಃ ಮಗ ಕೂಡ ‘ಈತ ಒಮ್ಮೆ ಸತ್ತು ಹೋಗಬಾರದೇ…?’ ಎಂದುಕೊಳ್ಳುವುದೂ ಉಂಟು. ಒಮ್ಮೊಮ್ಮೆ ಹೆಂಡತಿಯೂ ಅಂಥ ನಿಲುವು ತಾಳುವುದುಂಟು. ಇತ್ತೀಚೆಗಷ್ಟೇ ಹೈದರಾಬಾದಿನಲ್ಲಿ ಒಬ್ಬ ತಾಯಿ ತನ್ನ ಮಗನ ಸಂಬಂಧದಲ್ಲಿ ‘ದಯಾಮರಣ’ಕ್ಕೆ ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋದದ್ದನ್ನು ಸ್ಮರಿಸಬಹುದು…

ಪ್ರಸ್ತುತ ‘ಮೃತ್ಯುದಾನ’ ನಾಟಕದಲ್ಲಿ ‘ದಯಾಮರಣ’ದ ಪರ ಮತ್ತು ವಿರುದ್ಧವಾದ ಅಭಿಪ್ರಾಯಗಳನ್ನು ನಮ್ಮೆದುರು ಬಿಚ್ಚಿಟ್ಟಿದ್ದಾನೆ ನಾಟಕಕಾರ. ಮೂಲ ಮರಾಠಿ ನಾಟಕವಾದ್ದರಿಂದ ಇದು ಸ್ವಲ್ಪ ಮಟ್ಟಿಗೆ ‘ಅತಿಭಾವುಕ’ವೆನ್ನಿಸುವುದುಂಟು. ಆದರೂ ಇಲ್ಲಿ ಕೆಲವೆಡೆ ನಡೆಯುವ ಚರ್ಚೆ, ಜಿಜ್ಞಾಸೆ ಹಾಗೂ ಅನಿರೀಕ್ಷಿತ ತಿರುವುಗಳು ಈ ನಾಟಕವನ್ನು ಕುತೂಹಲದ ಘಟ್ಟಕ್ಕೆ ಕೊಂಡೊಯ್ಯುತ್ತವೆ.

ಶ್ರೀಧರ ಒಬ್ಬ ಡಾಕ್ಟರ್. ವಿಧುರ. ಆತನಿಗೊಬ್ಬ ತಮ್ಮ ರಮೇಶ. ಆತನೂ ವೈದ್ಯಕೀಯ ಪರೀಕ್ಷೆ ಪಾಸು ಮಾಡಿ, ಇನ್ನೇನು ರಾಷ್ಟ್ರದ ರಕ್ಷಣಾ ಸೇವೆಗೆ ವೈದ್ಯಕೀಯ ಸಿಬ್ಬಂದಿಯಾಗಿ ಹೋಗುವ ಹಂತದಲ್ಲಿರುವಾತ. ಆತನಿಗೊಬ್ಬಳು ಜೀವದ ಗೆಳತಿ. ಶ್ರೀಧರ ಮತ್ತು ರಮೇಶರ ಅಮ್ಮ ಎಂದೋ ಕಣ್ಮುಚ್ಚಿದ್ದಾಳೆ. ಅಪ್ಪ ಎಂದಿನಿಂದಲೋ ಈ ಲೋಕದ ಪರಿವೆಯಿಲ್ಲದೆ ಮಲಗಿಬಿಟ್ಟಿದ್ದಾನೆ. ಆತನ ಸೇವೆಯಲ್ಲಿ, ಶುಶ್ರೂಷೆಯಲ್ಲಿ ತೊಡಗಿರುವ ಶ್ರೀಧರನಿಗೆ ಒಂದು ಹಂತದಲ್ಲಿ ‘ಅಪ್ಪನನ್ನು ಒಂದೇ ಒಂದು ಇಂಜೆಕ್ಷನ್ ಕೊಟ್ಟು ಯಾಕೆ ಈ ಯಾತನೆಯಿಂದ ಮುಕ್ತಗೊಳಿಸಬಾರದು?’ ಎಂದೆನಿಸಿಬಿಡುತ್ತದೆ… ಅಷ್ಟೇ ಅಲ್ಲ, ಆ ಭಾವನೆ ಒಳಗೊಳಗೇ ಬಲಿಯತೊಡಗುತ್ತದೆ.

ವಿವೇಕ ಅವನನ್ನು ಜಾಗೃತಗೊಳಿಸುವ ಯತ್ನಕ್ಕೆ ತೊಡಗಿದರೂ ಆತ ಅದರತ್ತ ದಿವ್ಯ ನಿರ್ಲಕ್ಷ್ಯ ತೋರುತ್ತಾನೆ.

ರಮೇಶ ಇನ್ನೇನು ರಕ್ಷಣಾ ಪಡೆಯನ್ನು ಸೇರುವ ದಿನ ಹತ್ತಿರ ಬರುತ್ತಿದೆ. ಗೆಳತಿಯೊಂದಿಗೆ ಒಂದಷ್ಟು ಹೊತ್ತು ಕಾಲ ಕಳೆದು ಆತ ಮನೆಗೆ ಬಂದರೆ ಅಣ್ಣ ಮಂಕಾಗಿ ಕೂತಿದ್ದಾನೆ… ಏನಾಯಿತೆಂದು ವಿಚಾರಿಸಿದರೆ ಬಂದ ಉತ್ತರದಿಂದ ರಮೇಶನಿಗೆ ಆಘಾತವಾಗುತ್ತದೆ… ಜೊತೆಗೆ, ತನ್ನ ಅಣ್ಣ ಎಂಥ ಘೋರ ಪಾಪದ ಕೆಲಸ ಮಾಡಿಬಿಟ್ಟನಲ್ಲ, ಜೀವ ಕೊಟ್ಟ ತಂದೆಯನ್ನೇ ಕೊಂದುಬಿಟ್ಟನಲ್ಲ ಎಂದೆಲ್ಲ ದುಃಖ, ಕೋಪ, ಅಸಹ್ಯಭಾವಗಳೆಲ್ಲ ಒಟ್ಟಿಗೆ ಒತ್ತರಿಸಿಬರುತ್ತವೆ… ಅಣ್ಣನೊಡನೆ ಜಗಳವಾಡುತ್ತಾನೆ. ಶ್ರೀಧರ ತಾನು ಮಾಡಿದ್ದೆ ಸರಿ ಎಂದು ವಾದಿಸುತ್ತಾನೆ. ಕೋಪದಿಂದ ಮನೆ ಬಿಟ್ಟು, ಬೈಕ್ ಏರಿ ಹೊರಡುತ್ತಾನೆ. ಸ್ತಿಮಿತದಲ್ಲಿರದ ಮನಸ್ಸು. ತೋಲ ತಪ್ಪುತ್ತದೆ. ಅಪಘಾತವಾಗುತ್ತದೆ. ರಮೇಶ ಕಾಲು ಊನ ಮಾಡಿಕೊಂಡು ಆಸ್ಪತ್ರೆ ಸೇರುತ್ತಾನೆ.

ಆತನ ಸ್ಥಿತಿಗೆ ತಾನೇ ಕಾರಣ ಎಂಬ ಅಪರಾಧಿ ಭಾವ ಶ್ರೀಧರನದು. ತಮ್ಮನನ್ನು ಮನೆಗೆ ಕರೆದುತರುತ್ತಾನೆ. ತಾನೇ ಆತನ ಶುಶ್ರೂಷೆಗೆ ನಿಲ್ಲುತ್ತಾನೆ. ರಮೇಶನ ಗೆಳತಿಯೂ ಸಾಥ್ ನೀಡುತ್ತಾಳೆ.

ರಮೇಶನಿಗೆ ಅಪ್ಪನನ್ನು ಕಳೆದುಕೊಂಡ ದುಃಖ ಒಂದೆಡೆ. ತಾನು ಅಪಾಂಗನಾದೆನಲ್ಲ, ಗಾಲಿ ಕುರ್ಚಿಯೇ ತನಗೀಗ ಗತಿಯಾಯಿತಲ್ಲ ಎಂಬ ನೋವು ಇನ್ನೊಂದೆಡೆ. ಜೀವದ ಗೆಳತಿ ಜತೆಗೆ ಇದ್ದಾಳೆಂಬ ಕಾರಣಕ್ಕೆ ಸ್ವಲ್ಪ ನೆಮ್ಮದಿ ಇದ್ದರೂ, ಅಪ್ಪನನ್ನು ಕೊಂದ ಅಣ್ಣ ನಾಳೆ ತನ್ನನ್ನೂ ಮುಗಿಸಿಬಿಡಬಹುದೆಂಬ ಭಯ. ಶ್ರೀಧರನಿಗೋ ಅಪ್ಪನನ್ನು ತಾನು ‘ಯಾತನೆಯಿಂದ ದೂರ ಮಾಡಿಬಿಟ್ಟೆ’ ಎಂಬ ಭಾವ. ನೋವಿನಿಂದ ನರಳುವವರನ್ನೆಲ್ಲ ಹೀಗೆಯೇ ಮುಕ್ತಗೊಳಿಸಬೇಕು ಎಂಬುದು ಆತನ ದೃಢವಾದ ನಂಬಿಕೆ.

ದಿನಗಳೆದಂತೆ ರಮೇಶನ ಸ್ಥಿತಿಯೂ ಬಿಗಡಾಯಿಸುತ್ತದೆ. ಅದಕ್ಕೆ ಆತನ ದೈಹಿಕ ಕಾರಣದಷ್ಟೇ ಮಾನಸಿಕ ಕಾರಣವೂ ಪಾಲು ನೀಡಿದೆ. ಬದುಕು ಆತನಿಗೆ ಬಲು ಭಾರ ಎನಿಸುತ್ತದೆ. ಆತ ತೀರ ಕುಸಿದು ಹೋಗಿ, ಯಾವುದೇ ಚಿಕಿತ್ಸೆಗೆ ಸ್ಪಂದಿಸದ ಸ್ಥಿತಿ ತಲಪಿದಾಗ ಶ್ರೀಧರ ತಮ್ಮನನ್ನು ಮುಕ್ತಗೊಳಿಸಲು ನಿರ್ಧರಿಸುತ್ತಾನೆ. ಹಾಗೆ ಮಾಡಿಯೂ ಬಿಡುತ್ತಾನೆ. ರಮೇಶನ ಗೆಳತಿ ಸಿಡಿದು ನಿಲ್ಲುತ್ತಾಳೆ… ”ಡಾಕ್ಟರ್ ಎಂದರೆ ಸಾಯುವವನನ್ನು ಬದುಕಿಸಬೇಕು, ‘ಜೀವದಾನ’ ಮಾಡಬೇಕು… ಹೊರತು ಈ ರೀತಿ ಜೀವ ತೆಗೆಯುವ ಹೇಯ ಕಾರ್ಯಕ್ಕೆ ನಿಲ್ಲಬಾರದು. ನೀನು ಕೊಲೆಗಡುಕ. ಎರಡೆರಡು ಕೊಲೆಗಳನ್ನು ಮಾಡಿದ ಹಂತಕ,” ಎಂದೆಲ್ಲ ಜರಿಯುತ್ತಾಳೆ… ಆದರೂ ತಾನು ಜೀವದಾನದ ಬದಲು ‘ಮೃತ್ಯುದಾನ’ ಮಾಡಿ ಒಳ್ಳೆಯ ಕೆಲಸವನ್ನೇ ಮಾಡಿದ್ದೇನೆ ಎಂಬುದು ಶ್ರೀಧರನ ಸಮರ್ಥನೆ…

ಕೊನೆಗೊಮ್ಮೆ ಆತ ವಿವೇಕದ ಮಾತನ್ನು ಆಲಿಸುತ್ತಾನೆ. ತಾನು ಮಾಡಿದ್ದು ಹೇಯ ಕೃತ್ಯ, ಶಿಕ್ಷಾರ್ಹ ಅಪರಾಧ ಎಂಬುದರ ಅರಿವಾಗುತ್ತದೆ. ಶ್ರೀಧರ್ ಪೊಲೀಸರಿಗೆ ಶರಣಾಗುತ್ತಾನೆ.

ಎರಡು ಗಂಟೆಗಳ ಈ ನಾಟಕವನ್ನು ಓದಿ ಮುಗಿಸಿದ ಮೇಲೆ ಡಾ. ರಮೇಶ ಧಾನವಾಡಕರ, ”ಈ ನಾಟಕವನ್ನು ಆದಷ್ಟು ಬೇಗ ರಂಗದ ಮೇಲೆ ತರುವ ಆಸೆ ಇದೆ… ಆದರೆ…” ಎಂದು ರಾಗವೆಳೆದರು.

”ಏನು ಸಮಸ್ಯೆ?” ಎಂದೆ ನಾನು.

”ಒಂದು ತಂಡ ಬೇಕಲ್ಲ ಇದನ್ನು ಅಭಿನಯಿಸಲು…” ಅಂತ ಧಾನವಾಡಕರ.

ನಾನು ಸುಮ್ಮನೆ ನಕ್ಕೆ. ಆಗಲೇ ಒಂದು ‘ಹೊಸ ತಂಡ’ದ ಹುಟ್ಟಿಗೆ ಬೀಜಾರೋಪಣವಾದದ್ದು.

ಮರುದಿನ ಮಿತ್ರ ರಾಘವೇಂದ್ರ ಹುನಗುಂದ ಮತ್ತು ಹಿರಿಯರಾದ ಸೇತುಮಾಧವ ಮಾನ್ವಿ ಅವರಿಗೆ ‘ಮೃತ್ಯುದಾನ’ದ ಕಥೆ ಹೇಳಿದೆ. ಖುಷಿಪಟ್ಟರು.

ಅಂದೇ ರಾತ್ರಿ ಡಾ. ರಮೇಶ ಧಾನವಾಡಕರರನ್ನು ಭೇಟಿಯಾಗಿ ‘ಮೃತ್ಯುದಾನ’ದ ಪ್ರದರ್ಶನಕ್ಕೆ ನಮ್ಮ ತಂಡ ಸಿದ್ಧ ಎಂದು ಹೇಳಿಬಿಟ್ಟೆವು.

”ಯಾವ ತಂಡ?” ಅಂತ ಧಾನವಾಡಕರ.

”ಅಭಿನಯ ಭಾರತಿ” ಅಂತ ರಾಘವೇಂದ್ರ ಹುನಗುಂದ…

ಅಂತೂ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಜನಿಸಿಬಿಟ್ಟಿತು ನಮ್ಮ ಹೊಸ ನಾಟಕ ತಂಡ.

‘ಮೃತ್ಯುದಾನ’ದಲ್ಲಿದ್ದ ಪಾತ್ರಗಳು ಕೇವಲ ನಾಲ್ಕು.

ಆದರೆ ತಂಡದಲ್ಲಿ ಒಲೆಯ ‘ಗುಂಡು’ಗಳ ಹಾಗೆ ಇದ್ದವರು ನಾವೇ ಮೂವರು : ಐವತ್ತು ವರ್ಷದ ತರುಣ ಸೇತುಮಾಧವ ಮಾನ್ವಿ,, ನಲವತ್ತು ವರ್ಷದ ಉತ್ಸಾಹಿ ರಾಘವೇಂದ್ರ ಹುನಗುಂದ ಮತ್ತು ಮೂವತ್ತರ ನಾನು…

ಇನ್ನೊಂದು (ಸ್ತ್ರೀ) ಪಾತ್ರಕ್ಕೆ ಯಾರನ್ನು ಕೇಳುವುದು?

ಡಾ. ರಮೇಶ ಧಾನವಾಡಕರ ಆ ಸಮಸ್ಯೆಯನ್ನು ಬಗೆಹರಿಸಿಬಿಟ್ಟರು. ಅವರ ಸಹಪಾಠಿ ಗೆಳತಿ (ಈಗ ಅವರ ಬಾಳ ಸಂಗಾತಿ) ಡಾ. ಜಲಜಾಕ್ಷಿ ಆ ಪಾತ್ರವನ್ನು ಮಾಡಲು ಮುಂದಾದರು.

ತಾಲೀಮು ಶುರುವಾಗಿಯೇ ಬಿಟ್ಟಿತು. ಸುದ್ದಿ ಎಲ್ಲ ಕಡೆ ಹಬ್ಬಿತು. ನಮ್ಮೀ ಹೊಸ ಸಾಹಸದ ಕುರಿತಂತೆ ಕುತೂಹಲ, ಸಂಶಯ, ಮತ್ತು ಅಸಹನೆಯ ನೋಟಗಳನ್ನು ನಾವು ಎದುರಿಸಬೇಕಾಯಿತು.

ಆದರೆ ಮತ್ತೊಂದು ಸಮಸ್ಯೆ ತಲೆಯೆತ್ತಿತು. ‘ದಯಾಮರಣ’ದಂಥ ಕಥಾವಸ್ತುವಿರುವ ಈ ನಾಟಕವನ್ನು ನೋಡುವವರು ಯಾರು? ಸಾಮಾನ್ಯ ಪ್ರೇಕ್ಷಕನಿಗೆ ಇಂಥ ಕಥಾವಸ್ತುವಿನಲ್ಲಿ ಆಸಕ್ತಿ ಇದ್ದೀತೆ? ಎಂಬೆಲ್ಲ ಅನುಮಾನಗಳು. ಆದರೆ, ನಾಟಕವಂತೂ ಆಗಲೇಬೇಕು. ಏನಾದರೂ ಒಂದು ಪರಿಹಾರ ಸಿಕ್ಕೇ ಸಿಗುತ್ತದೆ ಎಂಬ ವಿಶ್ವ್ವಾಸ ನಮಗೆ. ಆ ವೇಳೆಗಾಗಲೇ ಹುಬ್ಬಳ್ಳಿ-ಧಾರವಾಡದ ಹವ್ಯಾಸಿ ರಂಗಭೂಮಿಯಲ್ಲಿ ನಾವೆಲ್ಲಾ ಸಾಕಷ್ಟು ಪರಿಚಿತರೇ. ಜತೆಗೆ ಮೊದಲಿನಿಂದಲೂ ನಮ್ಮದು ಒಂದು ರೀತಿಯ ಮೊಂಡು ಧೈರ್ಯ. ಹೋದಲ್ಲೆಲ್ಲ ನಾಟಕದ ಬಗ್ಗೆ ಮಾತಾಡದೆ ಇರುತ್ತಿರಲಿಲ್ಲ.

ಅದೊಂದು ಸಂಜೆ ‘ಸವಾಯಿ ಗಂಧರ್ವ ಕಲಾಮಂದಿರ’ದಲ್ಲಿ (ಹುಬ್ಬಳ್ಳಿ) ನಮ್ಮ ತಾಲೀಮು ನಡೆಯುತ್ತಿದ್ದಾಗ ಆಕಸ್ಮಿಕವಾಗಿ ಒಳಗೊಮ್ಮೆ ಇಣುಕಿದರು ಡಾ. ಎಸ್. ಎಸ್. ಗೋರೆ. ಅವರು ಮೂಲತಃ ರಂಗಪ್ರೇಮಿ. ಸಂಗೀತಪ್ರೇಮಿ. ಆಗ ‘ಹುಬ್ಬಳ್ಳಿ ಆರ್ಟ್ಸ್ ಸರ್ಕಲ್’ ಎಂಬ ಸಂಗೀತಪ್ರಿಯರ ಸಂಸ್ಥೆಯ ಅಧ್ಯಕ್ಷರಾಗಿದವರು. ‘ಸವಾಯಿ ಗಂಧರ್ವ ಕಲಾಮಂದಿರ’ದ ಆಗುಹೋಗುಗಳನ್ನೂ ನೋಡಿಕೊಳ್ಳುತ್ತಿದ್ದವರು. ವರ್ಷಕ್ಕೊಮ್ಮೆ ಅವರು ಏರ್ಪಡಿಸುತ್ತಿದ್ದ ಸಂಗೀತ ಸಮ್ಮೇಳನದಲ್ಲಿ ದೇಶದ ಪ್ರಖ್ಯಾತರೆಲ್ಲ ಬಂದು ಪ್ರೀತಿಯಿಂದ ಭಾಗವಹಿಸಿದ್ದಾರೆ. ನಮಗೆ ಮರಾಠಿ ನಾಟಕಗಳ ರುಚಿ ಹಚ್ಚಿದವರು ಇದೇ ಡಾ. ಗೋರೆ. ಆ ನಂತರದಲ್ಲಿ ಅವರು ಸ್ಥಾಪಿಸಿದ ‘ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್’ ಮತ್ತು ‘ಮ್ಯೂಜಿಕ್ ಆರ್ಕೈವ್’ಗಳು ಸಲ್ಲಿಸಿದ ಸೇವೆಯೂ ಗಣನೀಯವಾದದ್ದೇ. ಇಲ್ಲಿ ರಿಸರ್ಚ್ ಮಾಡಿ ಮುಂದೆ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದವರದೊಂದು ದೊಡ್ಡ ಪಟ್ಟಿಯೇ ಇದೆ.

ಅವತ್ತು ಹಾಗೆ ಒಳಗೆ ಇಣುಕಿದ ಡಾ. ಎಸ್. ಎಸ್. ಗೋರೆ ಒಂದೈದು ನಿಮಿಷ ತಾಲೀಮನ್ನು ವೀಕ್ಷಿಸಿದ್ದಾರೆ. ನಾಟಕದ ವಸ್ತು ಅವರ ಕುತೂಹಲ ಕೆರಳಿಸಿದೆ. ಮರುದಿನ ಸಂಜೆ ಅವರು ನಮಗೆ ಗೊತ್ತಿಲ್ಲದಂತೆ ಬಂದು ಲೈಟ್ಸ್ ಕ್ಯಾಬಿನ್ನಿನಲ್ಲಿ ಕೂತು ಅರ್ಧ ತಾಲೀಮು ನೋಡಿ ಎದ್ದು ಹೋಗಿದ್ದಾರೆ. ಅದರ ಮರುದಿನ ತಮ್ಮ ಕ್ಲಿನಿಕ್ಕಿಗೆ ಬರಲು ನನಗೆ ಹೇಳಿ ಕಳಿಸಿದ್ದಾರೆ.

ಹುಬ್ಬಳ್ಳಿಗೆ ಮರಾಠಿಯ ಸುಪ್ರಸಿದ್ಧ ನಾಟಕಕಾರ ವಿಜಯ್ ತೆಂಡೂಲ್ಕರ್ ಬಂದಾಗಿನ ಸಂದರ್ಭ. ನಡುವೆ ನಗುತ್ತಿರುವವರೇ ಡಾ. ಎಸ್. ಎಸ್. ಗೋರೆ

ಅವರನ್ನು ಭೆಟ್ಟಿಯಾಗಿ ಹೊರ ಬಂದಾಗ ನನಗೆ ರೆಕ್ಕೆಗಳು ಮೂಡಿಬಿಟ್ಟಿದ್ದವು…

ಯಾಕಂದರೆ, ಹುಬ್ಬಳ್ಳಿಯ IMA (ಭಾರತೀಯ ವೈದ್ಯ ಸಂಸ್ಥೆ) ನಮ್ಮ ಹೊಸ ನಾಟಕ ‘ಮೃತ್ಯುದಾನ’ದ ಪ್ರದರ್ಶನವನ್ನು ಏರ್ಪಡಿಸಲು ಮುಂದಾಗಿತ್ತು. ಡಾ. ಗೋರೆ ಆ ಸಂಸ್ಥೆಯ ಹಿರಿಯ ಪದಾಧಿಕಾರಿಯಾಗಿದ್ದರು. ಮತ್ತು ಹುಬ್ಬಳ್ಳಿಯಲ್ಲಿ ಆಗ ಸುಮಾರು 500 ಜನ ವೈದ್ಯರಿದ್ದರು. ಪ್ರತಿ ವೈದ್ಯನೂ ಪತ್ನಿಸಮೇತನಾಗಿ ನಾಟಕ ನೋಡಲು ಬಂದರೆ ನಮಗೆ ಸುಲಭವಾಗಿ 1000 ಜನ ಪ್ರೇಕ್ಷಕರು ಸಿಕ್ಕಂತೆ. ಒಂದು ವೇಳೆ ಎಲ್ಲ ಸದಸ್ಯರಿಗೂ ಬರಲು ಸಾಧ್ಯವಾಗದೆ ಹೋದರೂ, ನಮ್ಮ ಶೋ ‘ಹೌಸ್ ಫುಲ್’ ಆಗುವುದರಲ್ಲಿ ಯಾವುದೇ ಸಂದೇಹ ಇರಲಿಲ್ಲ. ಒಂದು ವೇಳೆ ‘ಮೃತ್ಯುದಾನ’ ಅವರಿಗೆ ಹಿಡಿಸಿಬಿಟ್ಟರೆ ಮುಂದೆ ನಾವಾಡುವ ಎಲ್ಲ ನಾಟಕಗಳಿಗೂ ಅವರನ್ನು ಆಮಂತ್ರಿಸಬಹುದು. ನಮ್ಮ ತಂಡಕ್ಕೆ ‘ಪ್ರೇಕ್ಷಕ ಸದಸ್ಯ’ರಾಗಿ ಎಂದು ಕೇಳಿಕೊಳ್ಳಬಹುದು. ಹೀಗೆ ತಂಡದ ಅಡಿಪಾಯವನ್ನು ಗಟ್ಟಿಗೊಳಿಸಿದ ಮೇಲೆ ಸಾಮಾನ್ಯರನ್ನೂ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ಇದು ನನ್ನ ಆಗಿನ ಲೆಕ್ಕಾಚಾರ… ಹಗಲುಗನಸೆನ್ನಿ ಬೇಕಿದ್ದರೆ…

ಮೂವತ್ತು ವರ್ಷದ ಹಿಂದೆ ಈಗಿನಂತೆ ಶೀಘ್ರ ಸಂಪರ್ಕ ಸುಲಭ ಸಾಧ್ಯವಿರಲಿಲ್ಲ. ಫೋನ್ ಮಾಡಿದರೂ ನಮಗೆ ಬೇಕಾದವರು ಅಲ್ಲಿ ಸಿಗುತ್ತಾರೆ ಎಂಬ ಗ್ಯಾರಂಟಿಯೂ ಇರುತ್ತಿರಲಿಲ್ಲ. ಆ ಕಾರಣದಿಂದ, ನಮ್ಮ ತಂಡದ ಇತರರಿಗೆ ಸಂಜೆ ತಾಲೀಮಿನ ಸಂದರ್ಭದಲ್ಲೇ ಈ ಸುದ್ದಿಯನ್ನು ಮುಟ್ಟಿಸುವ ಅನಿವಾರ್ಯತೆ.

ಸಂಜೆ ಈ ಸುದ್ದಿಯನ್ನು ಇತರರಿಗೆ ತಿಳಿಸಿ, ಇನ್ನೇನು ತಾಲೀಮು ಶುರು ಮಾಡಬೇಕು, ಅಷ್ಟರಲ್ಲಿ ಡಾ. ಗೋರೆ ಅಲ್ಲಿಗೆ ಬಂದರು. ಅವರು ಸಂಜೆ ಮತ್ತೆ ತಮ್ಮ ಕ್ಲಿನಿಕ್ಕಿಗೆ ಹೋಗುವ ಹೊತ್ತು ಅದು. ಬಂದವರೇ ನನ್ನನ್ನು ಪಕ್ಕಕ್ಕೆ ಕರೆದು, ”IMA ಸದಸ್ಯರಿಗೆ ರಾತ್ರಿ 9.30ಕ್ಕೆ ಶೋ ಇಟ್ಟುಕೊಳ್ಳಿ. ಸಂಜೆಗೆ ಬೇಕಿದ್ದರೆ ಇನ್ನೊಂದು ಶೋ ನಿಮಗೆ ಅಂತ ಮಾಡಿಕೊಳ್ಳಿ,” ಅಂತ ಹೇಳಿ,”ಸಂಜೆಯ ಶೋಗೂ ನಮಗೆ 100 ಟಿಕೆಟ್ಟುಗಳನ್ನು ತೆಗೆದಿರಿಸಿ,” ಎಂದರು.

ನಾವು ಕೇಕೆ ಹೊಡೆಯುವುದಷ್ಟೇ ಬಾಕಿ… ಒಂದು ಹೊಸ ತಂಡದ ಹೊಸ ನಾಟಕಕ್ಕೆ ಒಂದೇ ದಿನ ಎರಡು ಪ್ರದರ್ಶನಗಳ ಭಾಗ್ಯ…! ಅದೇ ಸಂಭ್ರಮದಲ್ಲಿ ಆ ಸಂಜೆ ಕಳೆದುಹೋಯಿತು.

ನಾಟಕದಲ್ಲಿ ಆಸ್ಪತ್ರೆಯೊಂದರ ಎಲ್ಲ ವಿವರಗಳನ್ನೂ ತೋರಿಸಲಾಗುವುದಿಲ್ಲ. ಕೆಲವನ್ನು ಸಾಂಕೇತಿಕವಾಗಿ ತೋರಿಸಬೇಕಾಗುತ್ತದೆ. ಆದರೆ ಇನ್ನುಳಿದಂತೆ ವಾತಾವರಣ ಸೃಷ್ಟಿಗೆ ಕೆಲವು ಅತ್ಯವಶ್ಯಕ ಉಪಕರಣಗಳು ಬೇಕೇಬೇಕು. ಅವನ್ನೆಲ್ಲ ನಮಗೆ ಖುಷಿಯಿಂದ ಒದಗಿಸಿದರು ಹುಬಳ್ಳಿಯ IMA ಸದಸ್ಯರು.

ಹೀಗೆ, 5 ಸಪ್ಟಂಬರ್ 1981, ಬುಧವಾರ ‘ಮೃತ್ಯುದಾನ’ದ ಎರಡು ಪ್ರದರ್ಶನಗಳೊಂದಿಗೆ ಹುಬ್ಬಳ್ಳಿಯಲ್ಲಿ ‘ಅಭಿನಯ ಭಾರತಿ’ ಎಂಬ ಹವ್ಯಾಸಿ ನಾಟಕ ತಂಡ ಕಣ್ಣು ಬಿಟ್ಟಿತು.

ಆ ನಂತರ ತಂಡ ಬೆಳೆದುಬಂದ ಬಗೆಯದೇ ಒಂದು ಪ್ರತ್ಯೇಕ ಕಥೆ… ಅದರಲ್ಲಿ ಸಂತಸದ ಕ್ಷಣಗಳಷ್ಟೇ ಸಂಕಟದ ಕ್ಷಣಗಳೂ ಸೇರಿಕೊಂಡಿವೆ.

ತಿಂಗಳಿಗೊಂದು ರಂಗಪ್ರಯೋಗ, ವರ್ಷಕ್ಕೆರಡು ಹೊಸ ನಾಟಕಗಳ ನಿರ್ಮಾಣ, ಹೊಸ ನಾಟಕಗಳ ವಾಚನ, ರಂಗಭೂಮಿಗೆ ಸಂಬಂಧಿಸಿದಂತೆ ವಿಚಾರ ಸಂಕಿರಣಗಳು, ಆಸಕ್ತ ಯುವಕ-ಯುವತಿಯರಿಗೆ ರಂಗ ತರಬೇತಿ, ನೇಪಥ್ಯದಲ್ಲಿ ಅವರಿಗೆ ಆಸಕ್ತಿ ಕುದುರಿಸಲು ಪ್ರಸಾಧನ ಶಿಬಿರ ಮುಂತಾದ ತರಬೇತಿಗಳು, ಮಕ್ಕಳಿಗಾಗಿ ರಂಗತರಬೇತಿ ಶಿಬಿರ, ಮತ್ತು ರಂಗಭೂಮಿಯ ಗಣ್ಯರ ಸನ್ಮಾನ… ಇವು ಆಗಿನ ನಮ್ಮ ಉದ್ದೇಶಗಳು.

ಇಂಥದೊಂದು ಕಾರ್ಯಕ್ರಮದಲ್ಲಿ ನಮ್ಮ ಮೇಲಿನ ಪ್ರೀತಿಯಿಂದ ಹುಬ್ಬಳ್ಳಿಗೆ ಆಗಮಿಸಿ, ನಾವಿತ್ತ ಸನ್ಮಾನವನ್ನು ಸ್ವೀಕರಿಸಿ ಕೆಲವು ಹಿತಕಾರಿ ಮಾತುಗಳನ್ನು ಹೇಳಿದರು ಹಿರಿಯ ನಾಟಕಕಾರ ಜಿ. ಬಿ. ಜೋಶಿ.

ಬಹುಶಃ ಬಹಳ ವರ್ಷಗಳ ನಂತರ, ಒಂದು ಸಭೆಯಲ್ಲಿ ಎದ್ದು ನಿಂತು, ಮೈಕಿನೆದುರು ಜಿ. ಬಿ.ಯವರು ಐದು ನಿಮಿಷ ಕಾಲ ಮಾತಾಡಿದ್ದು ಅದೇ ಮೊದಲಿರಬೇಕು…

 

 

‍ಲೇಖಕರು G

December 16, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

19 ಪ್ರತಿಕ್ರಿಯೆಗಳು

  1. pramod

    ಬಣ್ಣದ ಬದುಕೇ ಹೀಗೆ., ವರ್ಣರಂಜಿತ. ” ಅಭಿನಯ ಭಾರತಿ ” ತಂಡ ಉದಿಸಿದ ರೀತಿ ನಿಜಕ್ಕೂ ಚೈತನ್ಯದಾಯಕ., ಯಾವುದೋ ಒಂದು ತಂಡದಲ್ಲಿ ಗುರುತಿಸಿಕೊಂಡು., ಅದರಿಂದ ಬೇರ್ಪಟ್ಟ ನಂತರ., ತಮ್ಮದೇ ತಂಡವನ್ನು ಕಟ್ಟುವುದಕ್ಕೆ ಧೈರ್ಯ., ಶ್ರಮ ಎರಡೂ ಇರಬೇಕು., ಈ ಗುಣಗಳ ಕಾರಣದಿಂದಾಗಿ ನವ ತಂಡವೊಂದು ಸೃಷ್ಠಿಯಾದದ್ದು. ಯುವ ಜನತೆಗೆ ನಿಮ್ಮ ಪ್ರಯತ್ನ., ತಮ್ಮ ತಮ್ಮ ಪ್ರಯತ್ನಗಳಿಗೆ ಇಂಬು ಕೊಡುವುದರಲ್ಲಿ ಎರಡು ಮಾತಿಲ್ಲ. ’ಮೃತ್ಯುದಾನ’ ನಾಟಕ ನಿಜಕ್ಕೂ ಉತ್ಕೃಷ್ಟವಾದದ್ದು.

    ಪ್ರತಿಕ್ರಿಯೆ
  2. ಆಸು ಹೆಗ್ಡೆ

    ಮಾನ್ಯರೇ, ತಮ್ಮ ಬರವಣಿಗೆಯ ಶೈಲಿ ಬಹಳ ಇಷ್ಟವಾಗುತ್ತದೆ.
    ಓದು ಅದೆಷ್ಟೇ ದೀರ್ಘವಾಗಿದ್ದರೂ ನಿರಾಯಾಸವಾಗಿ ಸಾಗುತ್ತಿರುತ್ತದೆ.
    ಕಾಲು ಶತಮಾನ ಕಳೆದು ಹೋಗಿದ್ದರೂ ಅಂದಿನ ದೃಶ್ಯಗಳನ್ನು ಓದುಗನ ಕಣ್ಣುಗಳ ಮುಂದೆ ಇಂದು ಕಟ್ಟಿಕೊಡುವ ಪರಿ ತುಂಬಾ ಖುಷಿ ನೀಡುತ್ತದೆ.

    ಪ್ರತಿಕ್ರಿಯೆ
  3. umesh desai

    ಡಾ. ಗೋರೆ ಅಪರಿಚಿತರೇನಲ್ಲ ಬಿಡ್ರಿ ನಮ್ಮ ಅರ್ಬನ್ ಬ್ಯಾಂಕಿನ ಚೇರಮನ್ನು ಮರಾಠೆ ಅವರ ಅಕ್ಕನ ಗಂಡ..
    ಗೋರೆಮನೆತನ ಹುಬ್ಬಳ್ಳಿಯೊಳಗ ಹೆಸರುವಾಸಿ ನಿಮ್ಮ ಲೇಖನ ಓದುತ್ತಿದ್ದಂತೆ ಅದೆಷ್ಟು ಹುಬ್ಬಳ್ಳಿಯ
    ನೆನಪು ತಾಜಾ ಆಗತಾವ ಗುರುಗಳ ನಿಮಗೊಂದು ಶರಣು…

    ಪ್ರತಿಕ್ರಿಯೆ
  4. Mohan V Kollegal

    ಓದಿಸಿಕೊಂಡು, ಓಡಿಸಿಕೊಂಡು ಹೋದ ಲೇಖನ. ನಿಮ್ಮ ಸುಂದರಾನುಭವದ ಜೊತೆಗೆ, ದಯಾಮರಣ ನಾಟಕದ ಕಥೆಯನ್ನು ತಿಳಿದುಕೊಂಡಂತಾಯಿತು… ಒಳ್ಳೆಯ ಲೇಖನ ಗುರುವರ್ಯ… 🙂

    ಪ್ರತಿಕ್ರಿಯೆ
  5. ಆನಂದ ಯಾದವಾಡ

    ಅಭಿನಯ ಭಾರತಿಯ ಉದಯದ ಬಗ್ಗೆ ಅಲ್ಪ ಸ್ವಲ್ಪ ಕೇಳಿದ್ದೆ, ಆದರೆ ನಿಮ್ಮ ಲೇಖನ ಸವಿವರವಾಗಿ ಪ್ರಸ್ತಾವಿಸಿದೆ. ಮೃತ್ಯುದಾನ ನಾಟಕ ನೋಡಬೇಕು ಎನಿಸುತ್ತಿದೆ. ಉದಾತ್ತ ದ್ಯೇಯಗಳೊಂದಿಗೆ ನೀವು ಪ್ರಾರಂಭಿಸಿದ ಅಭಿನಯ ಭಾರತಿಯ ಭಾಗವಾಗಿ ಹಲವಾರು ನಾಟಕಗಳಲ್ಲಿ ನಟಿಸಿದ ಖುಷಿ ನನ್ನದಾಗಿದೆ.

    ಪ್ರತಿಕ್ರಿಯೆ
  6. samyuktha

    ವಾಹ್! ಸಾರ್, ನೀವು ಈ ಎಲ್ಲ ಮನೋಘ್ನ ಅನುಭವಗಳನ್ನು ಪುಸ್ತಕ ರೂಪದಲ್ಲಿ ತರಲೇಬೇಕು!

    ಪ್ರತಿಕ್ರಿಯೆ
  7. arathi ghatikaar

    ವಾಹ್ ! ಬೆರಗು ಮನದಿಂದ ಓದಿಸಿಕೊಂಡು ಹೋಗುವ ನಿಮ್ಮ ನೆನಪುಗಳು , ಮತ್ತೆ ನೀವು ನಡೆದುಬಂದ ಹಾದಿಯಯಲ್ಲಿ ನಮನ್ನು ಓಡಾಡುವ ಹಾಗೆ ಮಾಡಿದ್ದೀರಿ . “ಅಭಿನಯ ಭಾರತಿ ” ಈ ನಾಟಕದಂಡದ ಹುಟ್ಟು ನಿಜಕ್ಕೂ ಸ್ವಾರಸ್ಯಕರ . ಆಗಲೇ ದಯಮರಣದ ವಿಷಯದ ಬಗ್ಗೆ ನಾಟಕ ಕೂಡ ಆಡಿದ್ದು ನಿಜಕ್ಕೂ ವಿಶೇಷ . ಇನ್ನು ನೀವು ಮೃತ್ಯು ದಾನ ನಾಟಕದಲ್ಲಿ ಯಾವ ಪಾತ್ರ ನಿರವ್ಹಿಸಿದ್ರಿ ಹೇಳಲೇ ಇಲ್ಲಲಾ ಕಾಕಾ 🙂 ಶ್ಶ್ರೀದರನದೋ ಅಥವಾ ರಮೆಶನದೋ ?

    ಪ್ರತಿಕ್ರಿಯೆ
  8. suguna mahesh

    ಕಲೆಗೆ ಏನೆಲ್ಲಾ ಸಲ್ಲಬೇಕೋ ಆ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದೀರಿ. ನಿಮ್ಮ ಯಶಸ್ಸು ಮತ್ತು ಶ್ರದ್ಧೆ ನಿಜಕ್ಕೂ ಖುಷಿಕೊಡುತ್ತದೆ. ಒಳ್ಳೆಯ ಲೇಖನ ಹಾಗೆ ಓದಿಸಿಕೊಂಡೋಗುತ್ತದೆ.

    ಪ್ರತಿಕ್ರಿಯೆ
  9. A Ballal

    ಇಡೀ ಲೇಖನವೇ ಒಂದು ನಾಟಕದ ಹಾಗಿದೆ, ಸರ್!

    ಪ್ರತಿಕ್ರಿಯೆ
  10. ಮಂಜುಳಾ ಬಬಲಾದಿ

    ಈ ಲೇಖನದಲ್ಲಿರುವ ಎಲ್ಲ ವಿವರಗಳಿಗಿಂತ ’ಮೃತ್ಯುದಾನ’ ಎಂಬ ಪರಿಕಲ್ಪನೆ ಅತಿಯಾಗಿ ಕಾಡುತ್ತಿದೆ.. ನಿಮ್ಮ ರಂಗ-ಬದುಕಿನ ಬಗ್ಗೆ ಓದಲು ಅದೇನೋ ಖುಷಿ. ಮುಂದಿನ ವಾರಕ್ಕೆ ಎದಿರು ನೋಡುವೆ..

    ಪ್ರತಿಕ್ರಿಯೆ
  11. Anitha Naresh Manchi

    ಆ ಕಾಲವನ್ನು ಈಗ ನಮ್ಮ ಮುಂದೆ ನೀವು ತಂದು ನಿಲ್ಲಿಸುವ ರೀತಿ ಇಷ್ಟವಾಗುತ್ತದೆ.

    ಪ್ರತಿಕ್ರಿಯೆ
  12. ಈಶ್ವರ ಕಿರಣ

    ನೆನಪುಗಳ ಸರಮಾಲೆ ತುಂಬಾ ಚೆನ್ನಾಗಿದೆ. ಬರಹದ ಶೈಲಿಯೂ ಸೂಪರ್ ಗೋಪಾಲ್ ಸರ್ 🙂 ಮುಂದಿನ ಸಂಚಿಕೆ?

    ಪ್ರತಿಕ್ರಿಯೆ
  13. DIVYA ANJANAPPA

    ನಿಮ್ಮ ಲೇಖನವು ತುಂಬಾ ಇಷ್ಟವಾಯಿತು, ನಿಮ್ಮ ಕಲಾ ಸೇವೆಯ ಹುಮ್ಮಸ್ಸು ಎಲ್ಲರಿಗೂ ಮಾದರಿಯಾಗಿದೆ.ಓದುಗರಲ್ಲಿ ತನ್ಮಯತೆಯನ್ನು ಸಾಧಿಸುವಲ್ಲಿ ನಿಮ್ಮ ಲೇಖನ ಸದಾ ಯಶಸ್ವಿಯಾಗಿದೆ, ಧನ್ಯವಾದಗಳು ಸರ್.

    ಪ್ರತಿಕ್ರಿಯೆ
  14. prakash hegde

    ಅಣ್ಣಾ…

    ಮೃತ್ಯುದಾನ ನಾಟಕ ನೋಡಬೇಕೆನಿಸುತ್ತಿದೆ…
    ನೀವು ಕಟ್ಟಿಕೊಡೊ ಘಟನೆಗಳ ದೃಶ್ಯಾವಳಿ ಅಂಥಾದ್ದು…

    ನಿಮ್ಮನ್ನು ಭೇಟಿ ಆಗಬೇಕು ನೋಡ್ರಿ….

    ಪ್ರತಿಕ್ರಿಯೆ
  15. Swarna

    ಅಭಿನಯ ಭಾರತಿ ಸುಂದರ ಹೆಸರು , ಅದು ಈಗೇನು ಮಾಡುತ್ತಿದೆ ? ಮುಂದಿನ ಭಾಗಕ್ಕೆ ಕಾಯುತ್ತೇವೆ. ನಿಮ್ಮನ್ನು ಭೇಟಿ ಮಾಡಿದ್ದ್ದು ತುಂಬಾ ಖುಷಿ.

    ಪ್ರತಿಕ್ರಿಯೆ
  16. Paresh Saraf

    ಆ ವಿಷಯವೇ ಅಂಥದ್ದು. ಚರ್ಚೆಗೆ ನಿಲುಕದ್ದು. ನಾಟಕ ನೋಡಲು ಮನ ಹಂಬಲಿಸುತ್ತಿದೆ. ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದೀರ ಗುರುಗಳೇ. ಧನ್ಯವಾದಗಳು 🙂

    ಪ್ರತಿಕ್ರಿಯೆ
  17. Gopaal Wajapeyi

    ಸ್ವರ್ಣಾ ಅವರೇ, ನನಗೂ ನಿಮ್ಮನ್ನು ಭೇಟಿಯಾಗಿ ಖುಷಿಯಾಯಿತು. ‘ಅಭಿನಯ ಭಾರತಿ’ ತಂಡ ಧಾರವಾಡದಲ್ಲಿ ಈಗಲೂ ಸಕ್ರಿಯವಾಗಿದೆ. 2006ರಲ್ಲಿ ತನ್ನ ರಜತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡ ‘ಅಭಿನಯ ಭಾರತಿ’ ಈಗ ಮೂವತ್ತೊಂದರ ಜವಾಬ್ದಾರಿಯುತ ತಂಡ… ನನ್ನೊಡನೆ ಆಗ ಇದ್ದ ಸೇತುಮಾಧವ ಮಾನ್ವಿ ಈಗಲೂ ಆ ತಂಡದ ಅಧ್ಯಕ್ಷರು. ಇದೀಗ ಅವರಿಗೆ 81 ವರ್ಷ ವಯಸ್ಸು.

    ಪ್ರತಿಕ್ರಿಯೆ
  18. Gowri Dattu

    ಎ.ಎಸ್.ಮೂರ್ತಿ ನೇತೃತ್ವದ ಅಭಿನಯತರಂಗನಾಟಕಶಾಲೆ ಹುಟ್ಟಿದ ವರ್ಷವೇ (ಆಗಸ್ಟ್ -1981) ಅಭಿನಯ ಭಾರತಿ ಪ್ರಾರಂಭವಾದದ್ದು ತಿಳಿದು ಸಂತಸವಾಯಿತು.ಎರಡೂ ಸಂಸ್ಥೆಗಳಿಗೂ ಈಗ 31 ರ ಹರಯ.:). ಅಭಿನಯ ಭಾರತಿ ಯ ಹುಟ್ಟು ,ಮೊದಲನಾಟಕದ ಬಗ್ಗೆ ತಿಳಿಸಿದ ಮಾಹಿತಿಗಾಗಿ ವಂದನೆಗಳು.

    ಪ್ರತಿಕ್ರಿಯೆ
  19. Sharanabasappa S Gaded

    ಮಾನ್ಯ ಗೋಪಾಲಜೀ,ಡಾ.ಪ್ರಕಾಶ ಖಾಡೆಯವರ(ಫೇಸ್ಬುಕ್) ಸ್ನೇಹದಿಂದ ತಮ್ಮಂತಹವರ ಲೇಖನ ಓದಲು ಸಾಧ್ಯವಾಗಿದೆ. ಎಫ್.ಬಿ.ಯಿಂದ ಗೆಳೆಯರ ಸ್ನೇಹ ಸಿಕ್ಕಿತ್ತು.ಈಗ ತಮ್ಮಂತಹ ಹಿರಿಯರ ಲೇಖನ ಹಾಗೇ ಸುಮ್ಮನೆ ಓದುವ ಭಾಗ್ಯ. ನಿಮಗೆ(ಡಾ.ಖಾಡೆ ಸಹಿತ) ಧನ್ಯವಾದಗಳು.ನಿಮ್ಮ ಆಲೋಚನೆಗಳು, ಅದಕ್ಕೊಂದು ಮೂರ್ತ ಸ್ವರೂಪ ಕೊಡುವ ಹುಮ್ಮಸ್ಸು, ಧೈರ್ಯ ಅದರಿಂದ ಸೃಷ್ಟಿಯಾಗುವ ಕಲಾಲೋಕ ಅದು ಪ್ರಯತ್ನವಿದ್ದಲ್ಲಿ ಫಲವಿದೆ ಎಂಬುದಕ್ಕೆ ಸಾಕ್ಷಿ. ನಿಮ್ಮ ಲೇಖನ ಸಾವಿರ ಸಾವಿರ ಜನತೆಗೆಪ್ರೇರಣೆಯಾಗುತ್ತದೆ. ಲಕ್ಷಾಂತರ ಜನತೆಯ ಮನ ತಟ್ಟುತ್ತದೆ. ದಯಾ ಮರಣ, ಅಗತ್ಯವೋ ಅನಗತ್ಯವೋ ಎಂಬ ವಿಷಯದ ಚರ್ಚೆಗಳು ಹುಟ್ಟು ಹಾಕಿರುವ ಪುಟಗಳು ಬಹುಶ: ಒಂದು ಬೈಬಲ್, ಬಗವದ್ಗೀತೆಯಾಗಬಹುದೇನೋ, ಸ್ವಾರ್ಥವೇ ಪ್ರಧಾನವಾಗಿರುವ ಈ ಜಗತ್ತಿನಲ್ಲಿ ಮಾನವೀಯತೆ, ಅಂತ:ಕರುಣ ಮಮತೆ, ವಾತ್ಸಲ್ಯ, ಶ್ರವಣನಮಾತಾ-ಪಿತೃಭಕ್ತಿ ಕಣ್ಮರೆಯಾಗುತ್ತಿವೆ. ರೋಗಪೀಡಿತರು ಇನ್ನು ಬದುಕಲು ಅಸಾಧ್ಯ ಿರುವಷ್ಟು ಕಾಲ ನರಕಯಾತನೆ ಎಂದು ತೀರ್ಮಾಮಾನಿಸುವವರ ಮನ:ಸ್ಥಿತಿ ಸಾಚಾ ಆಗಿರಲು ಸಾಧ್ಯವೇ ಎಂಬುದೇ ಮನದ ಾತಂಕ. ೀ ಬಗ್ಗೆ ಪರವಾಗಿ ವಿರೊಧವಾಗಿ ಮಾತನಾಡಲು ನಾಲಿಗೆ ತೊಡರುತ್ತದೆ. ನರಕಯಾತನೆಗಿಂತ ಮರಣ ಲೇಸು ಎಂದರೂ, ದೈವ ತಾರದ ಸಾವನ್ನು ನಾವು ನೀಡುವುದು ಆಬರತೀಯ ಮನಸ್ಸುಗಳಿಗೆ ಒಪ್ಪದ, ನಿಲುಕದ ಮಾತೇನೋ. ನಿಮ್ಮ ‘ದಯಾಮರಣ’ ನಾನು ನೋಡಿಲ್ಲ’ ಾದರೆ ಕಥೆ ಓದುವಾಗ ಪ್ರತಿ ಪಾತ್ರಗಳಲ್ಲಿನ ತಳಮಳವನ್ನು ನೀವು ಹೇಗೆ ಅಭಿವ್ಯಕ್ತಿಗೊಳಿಸಿರಬಹುದೆಂದು ಕಲಾವಿದನ ಅಂರತಾತ್ಮದಿಂದ ದಿಂದ ಗ್ರಹಿಸಬಲ್ಲೆ. ಈ ಅಂತರಂಗದ ತೊಳಲಾಟಗಳು ಯಾವುದು ಸರಿ, ಯಾವುದು ತಪ್ಪು ಎಂದು ನಿಧ೵ರಿಸಲಾಗದ ಸ್ಥಿತಿಗೆ ತಲುಪುತ್ತವೆ. ಬಹುಶ: ಇದೇ ಕಾರಣಕ್ಕೆ ಪಾಪಪ್ರಜ್ಞೆಗೆ ಡಾ.ಶ್ರೀಧರ ಅಂತಿಮವಾಗಿ ಪೊಲೀಸ್್ರಿಗೆ ಶರಣಾಗಿರಬೇಕು ಎನ್ನಿಸುತ್ತದೆ.ಗುರುಗಳೇ ನಾನು ಅನುಭವಿಸಿದ್ದು ಕೇವಲ ನಿಮ್ಮ ಬರೆಹದಿಂದ ಇನ್ನು ನಿಮ್ಮ ನಾಟಕವನ್ನು ನೋಡಿದ್ದರೆ…
    ಎಂತಹ ಅನುಭೂತಿ ಸಿಕ್ಕುತ್ತಿತ್ತೋ.. ಆ ಭಾಗ್ಯ ೆಂದಾದರೂ ಸಿಗಲಿ ವಂದನೆಗಳು. ಮತ್ತೆ ಮತ್ತೆ ಭೇಟಿಯಾಗುತ್ತೇನೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: