ಸುಮ್ಮನೇ ನೆನಪುಗಳು – 22
ಅವತ್ತು ಬೆಟಗೇರಿ ಕೃಷ್ಣಶರ್ಮರ ಹಿಂದೆಯೇ ಹೋಗಿ ‘ಜಯಂತಿ’ ಪತ್ರಿಕೆಯ ಫಲಕವಿರುವ ಜಾಗವನ್ನು ನೋಡಿಕೊಂಡು ಬಂದೆ ಎಂದು ಹೇಳಿದೆನಲ್ಲ…
ಹಾಗೆ ಹೋಗುವಾಗ ಗಾಂಧೀ ಚೌಕದಿಂದ ಬಲಕ್ಕೆ ತಿರುಗಿ ಸೀದಾ ನಡೆದರೆ, ಅಲ್ಲೊಂದು ಗೋಪುರ ಗಡಿಯಾರ ಎದುರಾಗುತ್ತದೆ. ಅದನ್ನು ಎಡಕ್ಕಿಟ್ಟುಕೊಂಡು ಸುಭಾಸ ರಸ್ತೆಯ ಮೂಲಕ ಮುಂದೆ ಹೋದರೆ (ಈಗಿನ) ಹಳೆ ಬಸ್ ನಿಲ್ದಾಣ.
ಸುಭಾಸ ರಸ್ತೆ…
ಈ ಹೆಸರನ್ನು ನೀವು ಖಂಡಿತವಾಗಿ ಕೇಳಿರುತ್ತೀರಿ. ಇಲ್ಲವೇ ಒಮ್ಮಿಲ್ಲೊಮ್ಮೆಯಾದರೂ ಓದಿರುತ್ತೀರಿ. ಯಾಕೆಂದರೆ, ಆಧುನಿಕ ಕನ್ನಡ ಸಾಹಿತ್ಯಕ್ಕೆ ‘ಅನನ್ಯವಾದ ಕೊಡುಗೆ’ ನೀಡಿದ ರಸ್ತೆಯಿದು.
ಈ ಮೊದಲೇ ಹೇಳಿದ ಹಾಗೆ, ಈ ರಸ್ತೆಯ ಇನ್ನೊಂದು ಬದಿಗೆ ವಿಶಾಲವಾಗಿ ಹರಡಿಕೊಂಡಿದ್ದ ಹಾಲಗೇರಿ… ಮತ್ತೊಂದು ಬದಿಗೆ ಸಾಲು ಅಂಗಡಿಗಳು. ಈ ಸಾಲು ಅಂಗಡಿಗಳ ಪೈಕಿ ಒಂದು ಜಾಗ ಆ ವಯಸ್ಸಿನಲ್ಲಿ ಹೇಗೋ ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ಕೂತುಬಿಟ್ಟಿತು.
ಅದಕ್ಕೆ ಕಾರಣ ಒಬ್ಬ ಅಜ್ಜ…
ಹೌದು. ಅಜ್ಜಂದಿರೆಂದರೆ ನನಗೆ ತುಂಬಾ ಪ್ರೀತಿ, ಬಹಳ ಗೌರವ. ಯಾಕಂದರೆ, ನನ್ನ ಬಾಳನ್ನು ರೂಪಿಸಿದವರು, ಮುನ್ನಡೆಸಿದವರು, ನನಗೆ ಆದರ್ಶವಾಗಿ ನಿಂತವರು, ಪ್ರೀತಿಯಿಂದ ಬೆನ್ನು ತಟ್ಟಿದವರು, ಇಂದಿಗೂ ಪ್ರೇರಣೆ ನೀಡುತ್ತಿರುವವರು ಎಲ್ಲರೂ ಅಜ್ಜಂದಿರೆ…
ಅವರಲ್ಲಿ ಕೆಲವರೊಂದಿಗೆ ನನ್ನದು ರಕ್ತ ಸಂಬಂಧ, ಇನ್ನು ಕೆಲವರೊಂದಿಗೆ ಭಾವನಾತ್ಮಕ ಸಂಬಂಧ…
ಧಾರವಾಡದಲ್ಲಿ ನಾನಿದ್ದ ಆ ಶಿವಾಜಿ ಬೀದಿಯಿಂದ ಊರೊಳಗೆ ಎಲ್ಲಿಗೆ ಹೋಗಬೇಕಾದರೂ ಗಾಂಧೀ ಚೌಕದ ಮೂಲಕವೇ ಹೋಗಬೇಕು. ಶಿವಾಜಿ ಬೀದಿಗೆ ಸಮಾಂತರವಾಗಿ ಇನ್ನೊಂದು ರಸ್ತೆ ಮಂಗಳವಾರ ಪೇಟೆಯ ಕಡೆಯಿಂದ ಗಾಂಧೀ ಚೌಕಕ್ಕೆ ಬಂದು ಸೇರುತ್ತದೆ. ನಾನು ಒಮ್ಮೊ ಮ್ಮೆ ಗಾಂಧೀ ಚೌಕದ ಬಳಿ ಬರುವ ಹೊತ್ತಿಗೆ ಆ ರಸ್ತೆಯಿಂದ ಒಬ್ಬ ಅಜ್ಜ ಬರುತ್ತಿರುವುದು ಕಾಣಿಸುತ್ತಿತ್ತು. ಕೈಮುಗಿವವರಿಗೆ ಮುಗುಳ್ನಗೆಯ ಉತ್ತರವನ್ನೀಯುತ್ತ, ”ಅರಾಮs…?” ಎಂದು ಕೇಳುವವರಿಗೆ ತಲೆಯಲ್ಲಾಡಿಸಿ ಹೌದೆಂದು ಸೂಚಿಸುತ್ತ, ಸುಭಾಸ ರಸ್ತೆಯ ಕಡೆ ತನ್ನ ಪಾಡಿಗೆ ತಾನು ನಡೆಯುತ್ತಿದ್ದ ಸದ್ದಾಮುದ್ದಾ ಅಜ್ಜ. ಯಾಕೋ ಏನೋ ಅವರು ನನಗೆ ಬಲು ಇಷ್ಟವಾಗಿಬಿಟ್ಟರು. ಗಟ್ಟಿ ಮೈಯ ಆ ಆಜಾನುಬಾಹುವಿನ ದಿರಿಸನ್ನೇ ನೋಡುತ್ತಾ ನಾನು ಹಿಂಬಾಲಿಸುತ್ತಿದ್ದೆ. ದಪ್ಪ ಅಟ್ಟೆಯ ಚರ್ಮದ ಚಪ್ಪಲಿಗಳು, ಕಚ್ಚೆ ಹಾಕಿ ಉಟ್ಟ ಧೋತರ, ‘ವಿಚಿತ್ರ’ವೆನಿಸುವಂಥ ಲಂಡ ತೋಳಿನ ಬಿಳಿ ಅಂಗಿ, ಅದಾಗಲೇ ಬೆಳ್ಳಗಾಗಿದ್ದ ತಲೆಗೂದಲನ್ನು ಇನ್ನಷ್ಟು ಎದ್ದು ಕಾಣುವಂತೆ ಮಾಡುವ ಕರಿಯ ಟೊಪ್ಪಿಗೆ, ಕೈಯಲ್ಲಿ ಒಂದು ದಪ್ಪ ಬಟ್ಟೆಯ ಚೀಲ ಮತ್ತು ಒಂದು ಕರಿ ಛತ್ರಿ. (ಇತ್ತಿತ್ತಲಾಗಿ, ಅವರು ಕೈಚೀಲದ ಬದಲು ಬಗಲುಚೀಲ ಬಳಸುತ್ತಿದ್ದರು.)
ರಸ್ತೆಯ ಎಡ ತುದಿಯಲ್ಲೇ ನಡೆಯುತ್ತಿದ್ದ ಅವರು ಗೋಪುರ ಗಡಿಯಾರವನ್ನು ದಾಟಿದ ಮೇಲೆ, ಆ ಅಂಗಡಿ ಸಾಲುಗಳತ್ತ ತಿರುಗಿ ಅಲ್ಲಿದ್ದ ದೊಡ್ಡ ಬಾಗಿಲಿನ ಒಳಗೆ ಹೋಗಿ, ಮೆಟ್ಟಿಲುಗಳನ್ನೇರಿ ಮೇಲೆ ಮರೆಯಾಗಿಬಿಡುತ್ತಿದ್ದರು. ಅವರು ಏರಿ ಹೋಗುವುದನ್ನೇ ನೋಡುತ್ತಾ ನಿಂತ ನನ್ನತ್ತ, ಆ ಮೆಟ್ಟಿಲುಗಳ ಕೆಳಗೆ ಹೊಲಿಗೆ ಮಶಿನ್ನು ತುಳಿಯುತ್ತ ಕೂತ ವ್ಯಕ್ತಿ, ಹುಬ್ಬು ಹಾರಿಸಿ ‘ಏನು?’ ಎಂಬಂತೆ ಕೇಳಿ, ‘ನಿಲ್ಲಬ್ಯಾಡ ನಡಿ’ ಎಂಬುದನ್ನೂ ಕಣ್ಣಲ್ಲೇ ಹೇಳುತ್ತಿದ್ದ . ನಾನು ನಾಚಿ ಅಲ್ಲಿಂದ ಮುಂದೆ ನಡೆಯುತ್ತಿದ್ದೆ. (ಇಂದಿಗೂ ಆ ಮೆಟ್ಟಿಲುಗಳ ಕೆಳಗೆ ಒಬ್ಬ ವ್ಯಕ್ತಿ ಹೊಲಿಗೆ ಮಶಿನ್ನು ತುಳಿಯುತ್ತ ಕೂತುಕೊಂಡಿರುತ್ತಾನೆ. ಬಹುಶಃ ‘ಆತನ’ ಮಗ ಇರಬೇಕು. ಆದರೆ, ಈತ ಹುಬ್ಬು ಹಾರಿಸುವುದಿಲ್ಲ.)
‘ವಿಚಿತ್ರ’ವೆನಿಸುವಂಥ ಲಂಡ ತೋಳಿನ ಬಿಳಿ ಅಂಗಿ ಎಂದೆನಲ್ಲ… ಅದರ ತೋಳುಗಳು ‘ಅರ್ಧ’ ಎನ್ನಲೂ ಬರದಂಥವು, ಪೂರ್ಣ ಎನ್ನಲೂ ಸಾಧ್ಯವಾಗದಂಥವು. ಮೊಳಕೈ ದಾಟಿ ಮೂರು ಇಂಚು ಇಳಿಬಿದ್ದಂಥ ಅಗಲವಾದ ತೋಳುಗಳು. ಎಡಗಡೆಯ ಎದೆಯ ಮೇಲಿನ ಬಕ್ಕಣದಿಂದ ಇಣುಕುವ ಒಂದು ಇಂಕು ಪೆನ್ನು ಮತ್ತು ಒಂದು ಚಿಕ್ಕ ನೋಟುಬುಕ್ಕು. ಆ ಬಕ್ಕಣದಲ್ಲಿ ಸಣ್ಣ ಪುಟ್ಟ ಸಾಮಾನುಗಳಿಗೆ ಬೇಕಾದಷ್ಟೇ ಒಂದಿಷ್ಟು ಚಿಲ್ಲರೆ ರೊಕ್ಕ…
ಇನ್ನು ಕೈಚೀಲದಲ್ಲಿ ಏನೇನೋ ಕಾಗದದ ಕಟ್ಟುಗಳು, ಒಂದಷ್ಟು ಪುಸ್ತಕಗಳು…
ಹೀಗೊಮ್ಮೆ ಅವರ ಹಿಂದೆ ಹಿಂದೆ ಹೋದವನಿಗೆ ಅಲ್ಲಿ, ಅವರು ಆ ಅಂಗಡಿಸಾಲುಗಳ ಕಡೆ ತಿರುಗಿ ಮೆಟ್ಟಿಲುಗಳನ್ನು ಏರುವ ಸ್ಥಳದಲ್ಲಿ ಎದುರಾದವರು ಯಾರಂತೀರಿ? ಬೇಂದ್ರೆಯವರು. ಈ ಅಜ್ಜ ನಿಂತರು. ಇಬ್ಬರೂ ಕುಶಲೋಪರಿ, ವಿಚಾರ ವಿನಿಮಯ ಮಾಡಿಕೊಂಡರು. ಹಾಗೆಯೇ ಇಬ್ಬರೂ ಅದೇನೋ ಮಾತಾಡಿಕೊಳ್ಳುತ್ತ ಮೆಟ್ಟಿಲುಗಳನ್ನೇರಿ ಮೇಲೆ ಹೋದರು…
ಅತ್ತಲೇ ನೋಡುತ್ತ ಮೋಡಿಗೊಳಗಾದವರಂತೆ, ‘ಆ’ ಎಂದು ಬಾಯಿ ತೆರೆದುಕೊಂಡು ಹಾಗೇ ನಿಂತ ನನ್ನನ್ನು ಎಚ್ಚರಿಸಿದ್ದು ಆ ಹೊಲಿಗೆಯವನ ‘ಶ್…’ ಎಂಬ ದನಿ ಮತ್ತು ‘ನಿಲ್ಲಬ್ಯಾಡ ನಡಿ’ ಎಂಬಂಥ ಕಣ್ಣ ಸನ್ನೆ…
ಆಮೇಲಾsಮೇಲೆ ಅಲ್ಲಿ ನನಗೆ ಕೆಲವೊಮ್ಮೆ ಢಾಳ ಬಣ್ಣದ ಅಂಗಿಗರು, ಇನ್ನು ಕೆಲವೊಮ್ಮೆ ಮಖಾಳ ಬಣ್ಣದ ಚಿತ್ರ ವಿಚಿತ್ರ ಬಟ್ಟೆ ತೊಟ್ಟವರು, ಉದ್ದುದ್ದ ಕೂದಲಿನವರು, ಈಟುದ್ದ ಗಡ್ಡದವರು, ಹೆಗಲಿಗೆ ತೂಗುಚೀಲ ನೇತು ಹಾಕಿಕೊಂಡ ಜುಬ್ಬಿಗರು, ಏನೇನೋ ಹಾಡುತ್ತ ಬರುತ್ತಿದ್ದ ಕಬ್ಬಿಗರು, ನನಗರಿಯದ ಭಾಷೆಯಲ್ಲಿ ಮಾತಾಡುತ್ತ ಜೋರಾಗಿ ನಗುತ್ತ ಮೇಲೆ ಹೋಗುತ್ತಿದ್ದವರು, ಕೆಳಗೆ ಬರುತ್ತಿದ್ದವರು ಕಾಣಿಸತೊಡಗಿದರು…
ಅಂತೂ ನನಗೆ ಸುಭಾಸ ರಸ್ತೆಯ ‘ಆ’ ಜಾಗ ಒಂದು ಕುತೂಹಲದ ಕೇಂದ್ರವಾಗಿಬಿಟ್ಟಿತು.
-0-0-0-
ಧಾರವಾಡದ ನಂಟು ಇನ್ನಷ್ಟು ಗಟ್ಟಿಯಾದದ್ದು ನಾನು ಪತ್ರಿಕೋದ್ಯಮಕ್ಕೆ ಬಂದ ಮೇಲೆಯೇ. ಆಕಾಶವಾಣಿ, ಕಲೋದ್ಧಾರಕ ಸಂಘ, ವಿದ್ಯಾವರ್ಧಕ ಸಂಘ ಅಂತ ‘ವಾರದಾಗ ಮೂರು ಸಾರೆ’ ಬಂದು ಹೋಗುವುದು ವಾಡಿಕೆಯಾಗಿಬಿಟ್ಟಿತು. ಆಗ ಕೆಲವೊಮ್ಮೆ ಹಳೆಯ ಗೆಳೆಯರ ಭೇಟಿಗೆಂದು ಗಾಂಧೀ ಚೌಕದ ಕಡೆಗೆ ಹೋಗುವಾಗ, ಬರುವಾಗ ನನಗೆ ಅಟ್ಟದತ್ತಲೇ ಗಮನ. ಒಮ್ಮೊಮ್ಮೆ ಅಲ್ಲಿಂದ ಜೋರು ಜೋರು ಮಾತು ಕೇಳಬೇಕು, ಇನ್ನೊಮ್ಮೆ ‘ಖೊಳ್’ ಎಂಬ ನಗೆ… ಏನು ನಡೆದಿರಬಹುದೆಂದು ತಲೆಯೆತ್ತಿ ನೋಡಿದರೆ ಯಾರೋ ಒಬ್ಬರು ಅವಸರದಿಂದ ಹೊರಬಂದವರೆ, ಅಲ್ಲಿಯ ಕಟಾಂಜನದಿಂದೀಚೆ ತುಪಕ್ಕನೆ ‘ಕವಳರಸ’ವನ್ನುಗುಳಿ, ಬಾಯೊರೆಸಿಕೊಳ್ಳುತ್ತ , ”ಹಂಗಲ್ಲಾ… ಹಂಗಲ್ಲಾ…” ಎನ್ನುತ್ತಾ ಒಳಗೋಡಬೇಕು. ಅವರ ಮುಖದಲ್ಲಿಯ ನಗೆಯನ್ನು ಗಮನಿಸಿದರೆ ಅಲ್ಲೇನೋ ಸ್ವಾರಸ್ಯಕರ ಮಾತುಕತೆ ನಡೆದಿದೆ ಎಂದು ಯಾರು ಬೇಕಾದರೂ ಊಹಿಸಿಕೊಳ್ಳಬಹುದಿತ್ತು.
ಆಗಷ್ಟೇ ನನ್ನನ್ನು ರಂಗಕರ್ಮಿ ವಿರೂಪಾಕ್ಷ ನಾಯಕರು ‘ಕರ್ನಾಟಕ ಕಲೋದ್ಧಾರಕ ಸಂಘ’ದ ಸದಸ್ಯನನ್ನಾಗಿ ಮಾಡಿಕೊಂಡಿದ್ದರು. ಟ್ಯಾಗೋರ್ ಹಾಲಿನಲ್ಲಿ ಆ ಸಂಘದ ಕಲಾವಿದರಿಂದ ಶ್ರೀರಂಗರ ‘ಹುಟ್ಟಿದ್ದು ಹೊಲೆಯೂರು’ ಎಂಬ ನಾಟಕ. (ಆಗ ಧಾರವಾಡದಲ್ಲಿ ಅದೊಂದೇ ರಂಗಮಂದಿರ. ಬಾಸೆಲ್ ಮಿಶನ್ ಹೈಸ್ಕೂಲಿನ ಆವಾರದಲ್ಲಿತ್ತು. ಗಿರೀಶ ಕಾರ್ನಾಡರಂಥ ಪ್ರತಿಭಾವಂತರು ಅಲ್ಲಿಯೇ ಓದಿದ್ದು.) ನಾನು ಆ-ಈ ಕೆಲಸ ಅಂತ ಟ್ಯಾಗೋರ್ ಹಾಲಿನ ಹೊರಗೆ ತಿರುಗಾಡುತ್ತಿದ್ದಾಗ ಆಚೆ ಕಂಡರು ಆ ಅಜ್ಜ. ವಿರೂಪಾಕ್ಷ ನಾಯಕರು ಓಡಿ ಹೋಗಿ ”ಬರ್ರಿ, ಬರ್ರಿ…” ಎಂದು ಅಜ್ಜನನ್ನು ಗೌರವದಿಂದ ಕರೆದುಕೊಂಡು ಬಾಗಿಲಿನತ್ತ ಬಂದರು. ನಾನಲ್ಲೇ ನಿಂತಿದ್ದೆ. ಇನ್ನೇನು ಅವರನ್ನು ಒಳಗೆ ಕರೆದೊಯ್ಯಬೇಕು, ಟಿಕೆಟ್ ತೊಗೊಳ್ಳಲು ಅಜ್ಜ ಸೀದಾ ಕೌಂಟರಿನತ್ತ ಸಾಗಿದರು.
”ಏ… ಏ… ಬ್ಯಾಡಬ್ಯಾಡಾ… ಟಿಕೀಟ್ಯಾsಕ…? ಬ್ಯಾಡ ಬರ್ರಿ…” ಅಂತ ನಾಯಕರು…
”ಊಹೂಂ… ನಾಟಕಾsನ ಟಿಕೀಟು ತೊಗೊಂಡs ನೋಡಬೇಕು…” ಅಂತ ಅಜ್ಜ…
”ಅಲ್ಲಾ, ನಿಮ್ಮಂಥವರು ಟಿಕೀಟು ತೊಗೊಬಾರ್ದು…”
”ಇಲ್ಲಿಲ್ಲಾ, ಟಿಕೀಟು ತೊಗೊಂಡು ನಾಟಕಾ ನೋಡೀದ್ರ ಟೀಕಾ ಮಾಡೂ ಅಧಿಕಾರ ಇರತsದ…” ಅಂತ ನಕ್ಕ ಅಜ್ಜ ಬಾಗಿಲಲ್ಲಿದ್ದವನಿಗೆ ಟಿಕೆಟ್ ತೋರಿಸಿ ತಮ್ಮ ಪಾಡಿಗೆ ತಾವು ಒಳಗೆ ಹೋದರು.
”ಯಾರವ್ರು…?” ಅಂತ ನಾಯಕರನ್ನು ಕೇಳಿದೆ.
”ಅವ್ರು ಗೊತ್ತಿಲ್ಲೇನ್ನಿನಗ? ಏs…ಭಾರೀ ‘ಧೊಡ್ಡ ಗಡಿ’ ಅದು…” ಎನ್ನುತ್ತ ಅವರು ಗಡಬಡಿಸಿಕೊಂಡು ಒಳಗೆ ಓಡಿದರು.
(ನಮ್ಮ ಕಡೆ ‘ಧೊಡ್ಡ ಗಡಿ’ ಅಂದರೆ ‘ಧೊಡ್ಡ ಮನುಷ್ಯ,’ ‘ಮಹತ್ವದ ವ್ಯಕ್ತಿ’ ಅಂತ ಅರ್ಥ… ಬಹುಶಃ ‘ಪೆರ್ಗಡೆ’ ಎಂಬ ಪದವೂ ಇದೇ ಅರ್ಥದ್ದಿರಬೇಕು.)
-0-0-0-
‘ಧೊಡ್ಡ ಗಡಿಯಾರ’ದ ಪಕ್ಕದ ಕಟ್ಟಡದಲ್ಲಿ, ಅಟ್ಟದ ಮೇಲಿರುವ ಆ ‘ಧೊಡ್ಡ ಗಡಿ’ ಯಾರೆಂಬುದು ನನಗೆ ಗೊತ್ತಾಗುವ ಕಾಲವೂ ಬಂತು.
1970ರ ದಶಕದ ಪೂರ್ವಾರ್ಧದಲ್ಲಿ ‘ರಂಗ ಜಂಗಮ’ ಬಿ. ವಿ. ಕಾರಂತರು ಚುಂಬಕ ಗಾಳಿಯಂತೆ ಸಂಚರಿಸಿದರಲ್ಲ, … ‘ಸತ್ತವರ ನೆರಳು’, ‘ಜೋಕುಮಾರಸ್ವಾಮಿ’, ‘ಹಯವದನ’, ‘ಮುಂದೇನs ಸಖಿ, ಮುಂದೇನs…’ ಮುಂತಾದ ನಾಟಕಗಳೊಂದಿಗೆ… ಹೊಸ ಬಗೆಯ ಹಾಡು, ಹೊಸ ಬಗೆಯ ವೇಷ, ಹೊಸ ಬಗೆಯ ಬೆಳಕು, ಹೊಸ ಬಗೆಯ ನಿರೂಪಣೆ, ಹೊಸ ಬಗೆಯ ಪ್ರಸ್ತುತಿ ತಂತ್ರಗಳೊಂದಿಗೆ ನಮ್ಮೆಲ್ಲರಲ್ಲಿ ಹೊಸ ಆಲೋಚನೆಗಳನ್ನು ಹುಟ್ಟಿಸಿದರಲ್ಲ… ಅವರು ಹುಬ್ಬಳ್ಳಿಗೂ ಬಂದರು. ಅರೆಬರೆ ನಿರ್ಮಾಣವಾಗಿದ್ದ ಹುಬ್ಬಳ್ಳಿಯ ‘ಸವಾಯಿ ಗಂಧರ್ವ ರಂಗಮಂದಿರ’ದಲ್ಲಿ ಈ ಎಲ್ಲ ನಾಟಕಗಳ ಪ್ರದರ್ಶನಗಳನ್ನೂ ನೀಡಿದರು…
ಆಗ ಅಲ್ಲಿ ಮತ್ತೆ ಈ ಅಜ್ಜನ ದರ್ಶನವಾಯಿತು.
ಅವತ್ತು ‘ಸತ್ತವರ ನೆರಳು’ ನಾಟಕ ಮುಗಿದ ಮೇಲೆ, ಕಾರಂತರು ಆ ಅಜ್ಜನ ಕೈ ಹಿಡಿದು ವೇದಿಕೆಗೆ ಕರೆದೊಯ್ದರು. ಒಂದು ಪುಷ್ಪಗುಚ್ಚವನ್ನಿತ್ತು, ”ಈ ನಾಟಕದ ಕರ್ತೃ ‘ಜಡಭರತ’ ಕಾವ್ಯನಾಮದ ಮಹಾ ನಾಟಕಕಾರ ಜಿ.ಬಿ. ಜೋಶಿಯವರೇ… ನಿಮ್ಮ ಆಶೀರ್ವಾದ ಈ ಕಿರಿಯರ ಮೇಲಿರಲಿ,” ಅಂತ ಕೈಮುಗಿದರು.
ನಾನು ಆ ‘ಧೊಡ್ಡ ಗಡಿ’ಯನ್ನು ಹಾಗೆ ನೋಡುತ್ತಲೇ ಇದ್ದೆ.
-0-0-0-
ರಂಗಭೂಮಿಯ ಆಸಕ್ತಿ ಒಂದು ಹವ್ಯಾಸವಾಗಿ ಬೆಳೆದು, ಅದರ ಎಲ್ಲ ಅಂಗಗಳಲ್ಲಿ ಕೆಲಸ ಮಾಡುವ ಅವಕಾಶಗಳನ್ನು ಹುಡುಹುಡಿಕಿಕೊಂಡು ಹೋಗುತ್ತಿದ್ದ ಸಮಯ ಅದು. ಧಾರವಾಡದಲ್ಲಿ ಆಗ ‘ಕಲಾದೇಗುಲ’ ಎಂಬೊಂದು ಸಂಸ್ಥೆ. ಅದರ ಮೂಲಕ ನಾಟಕ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದವರು ಪ್ರೊ. ಎಸ್. ಆರ್. ತೋಂಟದಾರ್ಯ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿಂದಿನ ಕುಲಪತಿ ಡಾ. ಎ. ಮುರಿಗೆಪ್ಪ (ತೋಂಟದಾರ್ಯ ಅದ್ಭುತ ರಂಗ ನಿರ್ದೇಶಕ, ಡಾ. ಮುರಿಗೆಪ್ಪ ಒಳ್ಳೆ ಪ್ರಕಾಶ ಸಂಯೋಜಕ.) ಅಂಥ ಒಂದು ನಾಟಕ ಸ್ಪರ್ಧೆಯ ಕೊನೆಯ ದಿನ. ‘ಶ್ರೇಷ್ಠ ಅಭಿನಯ’ಕ್ಕೆ (?!) ಪಡೆದಿದ್ದ ಪ್ರಶಸ್ತಿಫಲಕ ಹಿಡಿದು, ‘ಎನ್ನ ಸಮಾನರಾರಿಹರು,’ ಎಂಬ ಹಮ್ಮಿನಲ್ಲಿ ನಿಂತಿದ್ದ ನನ್ನ ಎಡ ಭುಜವನ್ಯಾರೋ ತಟ್ಟಿದಂತಾಯಿತು. ತಿರುಗಿ ನೋಡಿದರೆ ಅಜ್ಜ…!
ಸುಮ್ಮನೆ ಒಂದು ಮುಗುಳ್ನಗೆ ಬೀರಿದರು. ಕೈ ಕುಲುಕಿದರು. ತಮ್ಮ ಪಾಡಿಗೆ ತಾವು ಹೊರಟು ಹೋದರು…
ಹೀಗೆ ಆ ‘ಧೊಡ್ಡ ಗಡಿ’ ಈ ‘ಚಿಕ್ಕ ಹುಡುಗ’ನ ಮನಸ್ಸಿನಲ್ಲಿ ಗಕ್ಕನೆ ಕೂತುಬಿಟ್ಟರು…
ಈ ಮೊದಲು ಗೋಪುರ ಗಡಿಯಾರ ಎಂದು ಹೇಳಿದ್ದು ನೆನಪಿದೆಯಷ್ಟೇ. ಅದು ಕೆ.ಸಿ.ಸಿ. ಬ್ಯಾಂಕು. ಅದರ ಪಕ್ಕದ ಕಟ್ಟಡದ ಅಟ್ಟವೇ ಈ ‘ಧೊಡ್ಡ ಗಡಿ’ಯ ಕರ್ಮಭೂಮಿ.
ಆಜಾನುಬಾಹು ಅಜ್ಜ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅದೆಷ್ಟು ‘ಎತ್ತರದವರು’ ನನಗೆ ಗೊತ್ತಾದದ್ದು ‘ಶೀನಣ್ಣ’ ನನ್ನನ್ನು ಅಲ್ಲೊಮ್ಮೆ ಕರೆದೊಯ್ದಾಗಲೇ.
ಹಾಂ… ಅಂದಿನ ಹವ್ಯಾಸಿ ರಂಗಭೂಮಿಯಲ್ಲಿ ಎಲ್ಲರಿಗೂ ಗೊತ್ತಿದ್ದ ಹೆಸರು ವಿಜಾಪುರದ ಈ ಶೀನಣ್ಣ ಯಾನೆ ಶ್ರೀನಿವಾಸ ತಾವರಗೇರಿ. ಬೆಂಗಳೂರಿನ ಆಗಿನ ಶ್ರೇಷ್ಠ ರಂಗತಂಡಗಳನ್ನು ವಿಜಾಪುರಕ್ಕೆ ಕರೆಯಿಸಿ, ಅಲ್ಲಿಯ ರಂಗಭೂಮಿ ಹೊಸ ಬೆಳಕು ಕಾಣುವಂತೆ ಮಾಡಿದವರು. ಬೆಂಗಳೂರಿನ ರಂಗಕರ್ಮಿಗಳಿಗೆ ‘ಗೋಳಗುಮ್ಮಟಕ್ಕಿಂತಲೂ ಮಹತ್ವದವರು’ ಈ ತಾವರಗೇರಿ.
ಅವತ್ತು ರಜೆ. ಧಾರವಾಡದಲ್ಲಿ ಒಂದು ನಾಟಕ ಪ್ರದರ್ಶನ. ಬದುಕಿನಲ್ಲೆಂದೂ ‘ಪಥ್ಯ’ ಮಾಡದ ನಾನು, ರಂಗಭೂಮಿಯಲ್ಲಿ ತಪ್ಪದೇ ‘ನೇಪಥ್ಯ’ದಲ್ಲಿ ನಿಂತವನು. ಅವತ್ತು ಆ ತಂಡಕ್ಕೇನಾದರೂ ನೆರವಾದರಾಯಿತು ಎಂದು ಮಧ್ಯಾಹ್ನವೇ ಹೋದರೆ ಎದುರಾದವರು ಈ ಶೀನಣ್ಣ. ಇಬ್ಬರು ಸಮಾನಾಸಕ್ತರಲ್ಲಿ ಬೇಗನೆ ಪರಿಚಯವಾಗಿ, ಆ ಗೆಳೆತನ ನಂಬಿಕೆಯಾಗಿ, ವಿಶ್ವಾಸವಾಗಿ ಕೊನೆತನಕ ಉಳಿಯುವುದು ಬಹುಶಃ ಈ ರಂಗಭೂಮಿಯಲ್ಲಿ ಮಾತ್ರ ಎಂದು ಕಾಣುತ್ತದೆ. ಶೀನಣ್ಣ ತಮ್ಮ ಕೊನೆಯುಸಿರಿನ ತನಕ ನನ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡರು.
ಆ ನಾಟಕದ ಪೂರ್ವ ತಯಾರಿ ಎಲ್ಲ ಮುಗಿದಿತ್ತು. ಇನ್ನೂ ಎರಡು ಗಂಟೆ ಸಮಯವಿತ್ತು. ಶೀನಣ್ಣ, ”ಇಲ್ಲೆ ಕೂತೇನ್ ಮಾಡೋದು? ಬರ್ರಿ, ಅಟ್ಟದ ತನಕಾ ಹೋಗಿ ಬರೂಣಂತ,” ಎಂದು ನನ್ನನ್ನು ಎಬ್ಬಿಸಿಕೊಂಡು ಹೊರಟರು.
ನಾವು ತಲಪಿದ್ದು ಚಿಕ್ಕಂದಿನಿಂದ ನನಗೆ ಪರಿಚಯವಿದ್ದ ಸುಭಾಸ ರಸ್ತೆಯನ್ನು. ಅಂದಿನಿಂದಲೂ ನನ್ನ ಬೆರಗಿಗೆ ಕಾರಣವಾಗಿದ್ದ ಆ ಅಟ್ಟದ ಮೆಟ್ಟಿಲುಗಳ ಮೇಲೆ ಕಾಲಿಡುತ್ತಿರುವಾಗ ಏನೋ ಪುಳಕ… ಅವು ಕಟ್ಟಿಗೆಯ ಮೆಟ್ಟಿಲುಗಳು. ಒಜ್ಜೆಗಾಲನ್ನೂರಿ ಏರುತ್ತ ಹೋದರೆ ಅದೊಂದು ರೀತಿಯ ವಾದ್ಯದ ಸದ್ದು ಕೇಳಿದ ಹಾಗೆ… ಆ ಮೆಟ್ಟಿಲುಗಳ ಪುಣ್ಯ ನೋಡಿ ! ಅದೆಷ್ಟು ಜನ ಕವಿಗಳ, ಕಾದಂಬರಿಕಾರರ, ವಿಮರ್ಶಕರ, ಕಲಾವಿದರ, ನಾಟಕಕಾರರ ಪಾದಧೂಳಿಯನ್ನವು ಅದೆಷ್ಟು ದಶಕಗಳಿಂದ ಹೊತ್ತಿವೆಯೋ… ಅವಕ್ಕೇನಾದರೂ ಬಾಯಿ ಇದ್ದಿದ್ದರೆ ಖಂಡಿತ ಒಳ್ಳೊಳ್ಳೆಯ ಕತೆಗಳನ್ನು, ಪ್ರಸಂಗಗಳನ್ನು ಹೇಳಿರುತ್ತಿದ್ದವು…
ಅದು ‘ಮನೋಹರ ಗ್ರಂಥ ಮಾಲಾ’… ಬೆಟಗೇರಿ, ಬೇಂದ್ರೆ, ಗೋಕಾಕ, ಮುಗಳಿ, ಕೀರ್ತಿನಾಥ ಕುರ್ತಕೋಟಿ (ಮತ್ತು ಈಗ ಗಿರೀಶ ಕಾರ್ನಾಡ) ಮೊದಲಾದ ದಿಗ್ಗಜರನ್ನು ಸಲಹೆಗಾರರಾಗಿ ಪಡೆದ ಹೆಮ್ಮೆಯ ಪ್ರಕಾಶನ ಸಂಸ್ಥೆ. ಕನ್ನಡದ ಬಹುತೇಕ ಖ್ಯಾತನಾಮರ ಕೃತಿಗಳು ಪ್ರಕಟವಾದದ್ದು ಈ ಸಂಸ್ಥೆಯಿಂದಲೇ. ಬೆಟಗೇರಿ, ರಾವಬಹಾದ್ದೂರ, ಶ್ರೀರಂಗ, ಎಂ.ಕೆ. ಇಂದಿರಾ, ಅನಂತಮೂರ್ತಿ, ಎ.ಕೆ. ರಾಮಾನುಜಂ, ಕಾಮರೂಪಿ, ಕುರ್ತಕೋಟಿ, ಕಂಬಾರ, ಎಂ.ಎಸ್.ಕೆ. ಪ್ರಭು ಮುಂತಾದವರಿಂದ ಹಿಡಿದು ಈಗಿನ ಶ್ರೀನಿವಾಸ ವೈದ್ಯ, ಕುಂ. ವೀರಭದ್ರಪ್ಪ, ಸುಧಾ ಮೂರ್ತಿ ಅವರ ತನಕದ ಕಾದಂಬರಿಕಾರರ, ಕವಿಗಳ ಮಹತ್ವದ ಕೃತಿಗಳು ಪ್ರಕಟಗೊಂಡಿರುವುದು ಈ ಗ್ರಂಥಮಾಲೆಯಿಂದಲೇ. ಜಡಭರತ ಹಾಗೂ ಗಿರೀಶ ಕಾರ್ನಾಡರ ಎಲ್ಲಾ ನಾಟಕಗಳೂ ಇಲ್ಲಿಂದಲೇ ಬೆಳಕು ಕಂಡಿರುವುದು. ಹೀಗೆ ಕನ್ನಡದ ವಾಚಕರಿಗೆ ಮತ್ತು ವೀಕ್ಷಕರಿಗೆ (ಸಿನಿಮಾ ಅಥವಾ ನಾಟಕ) ಮೌಲಿಕ ಸಾಹಿತ್ಯವನ್ನು ಉಣಬಡಿಸಿದ ಕೀರ್ತಿ ‘ಮ.ಗ್ರ.ಮಾ.’ದ್ದು. ಇದೀಗ ತನ್ನ ಅಮೃತ ಮಹೋತ್ಸವದ ಹೊಸ್ತಿಲಲ್ಲಿರುವ ಈ ಸಂಸ್ಥೆಯ ಪ್ರಕಟಣೆಗಳು ತಮ್ಮದೇ ಆದ ‘ಸೊಗಡು’ ಮತ್ತು ‘ಸುಗಂಧ’ದೊಂದಿಗೆ ಹೊರಬರುತ್ತಿರುವುದಂತೂ ಖರೆ.
ಅವತ್ತು ಶೀನಣ್ಣನ ಹಿಂದೆ ಹಿಂದೆ ಅಟ್ಟವೇರಿ ಒಳಗೆ ಹೋದೆನಲ್ಲ… ಅಬ್ಬಾ, ಅದೊಂದು ಬೇರೆಯೇ ರೀತಿಯ ‘ಲೋಕ.’ ಗೊಂಬೆಗಳ ಅಂಗಡಿಗೆ ಹೋದ ಪುಟ್ಟ ಮಗುವಿನ ಹಾಗೆ ಬೆರಗುಗಣ್ಣಿನಿಂದ ನೋಡುತ್ತಾ ನಿಂತುಬಿಟ್ಟೆ. ಹೊಸ ಬಗೆಯ ಮುಖಪುಟಗಳು, ಚಿತ್ರ ವಿಚಿತ್ರ ಶೀರ್ಷಿಕೆಗಳು, ‘ನಡೆದು ಬಂದ ದಾರಿ’ಯಂಥ ಮೌಲಿಕ ಸಂಪುಟಗಳು…
”ಹೂಂ… ಏನು… ಗೋಳಗುಮ್ಮಟ ಇಲ್ಲೀತನಕಾ ನಡಕೊಂಡು ಬಂತು…?” ಎಂಬ ದನಿ ಕೇಳಿ ವಾಸ್ತವಕ್ಕೆ ಬಂದ ನನ್ನೆದುರು ಕಂಡವರು ಅದೇ ಅಜ್ಜ.
”ಹೀಂಗs… ಇಲ್ಲೇ ಒಂಚೂರು ಕೆಲಸಿತ್ತು, ಧಾರವಾಡದಾಗ… ಬಂದಿದ್ದೆ. ನಿಮ್ಮ ದರ್ಶನಾನೂ ಮಾಡಿಕೊಂಡು ಹೋದರಾತು ಅಂತ್ಹೇಳಿ…” ಅಂತ ಶೀನಣ್ಣ…
”ಹೊಹೊಹೋ… ದರ್ಶನ…! ಕೂಡ್ರಿ…” ಎಂದು ತಮ್ಮ ಆಸನಕ್ಕೆ ಬಂದರು ಜಿ. ಬಿ.
ಶೀನಣ್ಣ ಅವರೆದುರಿನ ಕುರ್ಚಿಯಲ್ಲಿ ಕೂರುತ್ತ ನನ್ನನ್ನು ಪರಿಚಯಿಸ ಹೋದರೆ,
”ಗೊತ್ತದ… ‘ಪ್ರಶಸ್ತಿ ವಿಜೇತ ನಟ’…” ಅಂತ ನಕ್ಕರು. ನಾನು ಒಳಗೊಳಗೇ ಉಬ್ಬುತ್ತಿರುವುದನ್ನು ಗಮನಿಸಿಯೋ ಏನೋ, ”ಏ ಹುಡಗಾ… ಇನ್ನೊಮ್ಮೆ ಅಷ್ಟು ಮೈಮರತು ಅಭಿನಯಿಸಲಿಕ್ಕೆ ಹೋಗಬ್ಯಾಡಾ… ಅಭಿನಯಿಸೋ ಹೊತ್ತಿನ್ಯಾಗ ನಟ ಆದಾವಗ ಸುತ್ತಮುತ್ತ ಏನು ನಡದದ ಅನ್ನೋದರ ಕಡೆನೂ ಲಕ್ಷ್ಯ ಇರಬೇಕಾಗ್ತದ…” ಎಂಬ ಕಿವಿಮಾತನ್ನೂ ಹೇಳಿದರು. ಆ ನಗೆಯಲ್ಲಿ, ಆ ಕಿವಿಮಾತಿನಲ್ಲಿ ‘ಕಾಕು’ ಇರಲಿಲ್ಲ, ಆತ್ಮೀಯತೆ ಇತ್ತು.
ಆಮೇಲೆ ಮಾತು ಬಾಗಲಕೋಟೆಯಲ್ಲಿ ತಾವು ವಾಸುದೇವ ವಿನೋದಿನಿ ನಾಟ್ಯ ಸಭಾ ಮೂಲಕ ನಾಟಕ ಆಡಿಸಿದ್ದು, ಭೀಮಸೇನ ಜೋಶಿ (ಅವರು ಜಿ.ಬಿ.ಯವರ ಸ್ವಂತ ಅಣ್ಣನ ಮಗ) ಅದರಲ್ಲಿ ಪಾತ್ರ ಮಾಡಿದ್ದು ಎಲ್ಲವನ್ನೂ ಹೇಳುತ್ತಾ ಹೋದರು…
ನಾವು ಹಾಗೆ ಮಂತ್ರಮುಗ್ಧರಾಗಿ ಕೇಳುತ್ತ ಕೂತೆವು…
(ಉಳಿದ ಭಾಗ ಮುಂದಿನ ವಾರ)




ವಾಜಪೇಯಿಯವರೇ, ನಿಮ್ಮದು ತುಂಬ ನವುರಾದ ಹಿತವಾದ ಆಪ್ತ ಭಾಷೆ. ಹಳೆಯ ನೆನಪುಗಳನ್ನು ಹೇಳಲು ಇಂತಹ ಭಾಷೆಯೇ ಬೇಕು. ನೀವು ಹಿರಿಯರಾಗಿರುವುದರಿಂದ ನಿಮ್ಮ ಜೋಳಿಗೆಯಲ್ಲಿ ಇಂತಹ ನೆನಪುಗಳು-ಹಳವಂಡಗಳು ತುಂಬಾ ಇರಬೇಕು..ಧಾರವಾಡ ಅಂತಹ ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆಗಳ ತಾಣವಾಗಿದ್ದುದರಿಂದ ಹಳೆಯ ಜೋಳಿಗೆಯನ್ನು ಬಿಡಿಸುವುದೆಂದರೆ ’ಬಾಗಿಲು ತೆರೆಯೇ ಸೇಸಮ್ಮ’ಎಂದಂತೆ ಮಧುರ ನೆನಪುಗಳ ಖಜಾನೆ ತೆರೆಯುವುದೆಂದೇ ಅರ್ಥ. ಅಂತಹ ನೆನಪುಗಳನ್ನೆಲ್ಲ ಬರೆವಣಿಗೆಗೆ ಇಳಿಸಿ.ಅನಂತರ ಪುಸ್ತಕ ರೂಪದಲ್ಲಿ ಪ್ರಕಟಿಸಬಹುದು.. ನಿಮ್ಮ ಬರೆವಣಿಗೆ ನನಗೆ ಹಿಡಿಸಿತು. ಅಭಿನಂದನೆಗಳು.
ಡಾ. ವಸಂತಕುಮಾರ ಪೆರ್ಲ, ಮಂಗಳೂರು.
ಗುರುಗಳ ಇಷ್ಟದಿನಾ ಅಲ್ಲಿ ಇಲ್ಲಿ ಅಟ್ಟದ ಬಗ್ಗೆ ಓದಿದ್ದೆ ಕೇಳಿದ್ದೆ
ನಿಮ್ಮ ದಯದಿಂದ ಅದನ್ನು “ಹತ್ತುವ” ಭಾಗ್ಯ ಕೂಡಿಬಂತು…
ಜಡಭರತರ ದರ್ಶನಾ ಮಾಡೀರಿ ಅಂದ್ರ ನೀವು ಪುಣ್ಯವಾನ್ರು..
ಅವ್ರ ನಾಟಕ ” ಸತ್ತವರ ನೆರಳು” ಅದರಾಗಿನ ಸಂಭಾಷಣೆ ಎಂದಾದ್ರೂ ಮರೀಲಿಕ್ಕೆ ಸಾಧ್ಯವೆ?
ಜಿಬಿ ಮರೆಯಾದಾಗ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಒಂದು ಕಾರ್ಯಕ್ರಮ ಆಯೋಜಿಸಿದ್ದೆ. ಗಿರೀಶ ಕಾರ್ನಾಡ ಹಾಗೂ ಕೀರ್ತಿನಾಥ ಕುರ್ತಕೋಟಿ ಅವರು ವೇದಿಕೆ ಮೇಲಿದ್ದರು. ಅಂದಿನ ನೆನಪುಗಳೆಲ್ಲಾ ನುಗ್ಗಿ ಬಂದವು.ಲೇಖನ ಸೋಗಸಾಗಿದೆ. ಮುಂದಿನ ಕಂತಿಗಾಗಿ ಕಾತರದಿಂದ ಕಾಯುತ್ತಿರುವೆ.
ಮನೋಹರ ಗ್ರಂಥಮಾಲಾ ಕನ್ನಡ ಸಾರಸ್ವತದ ಮೈದುಂಬಿಕೊಂಡ ತೇರು.ಅಂದಿನ ನೆನಪುಗಳೊಂದಿಗೆ ಜಿ.ಬಿ.ಅವರ ಚಲನಶಿಲತೆ,ಪ್ರಯೋಗಶೀಲತೆ,ಆಕರ್ಷಕ ವ್ಯಕ್ತಿತ್ವವನ್ನು ಬಹಳ ನವಿರಾಗಿ ನಿರೂಪಿಸಿದ್ದೀರಿ,ಧಾರವಾಡದ ‘ಅಟ್ಟ’ರೂಪಿಸಿದ,ಸೃಜಿಸಿದ,ವಿದ್ವತ್ ಲೋಕ ಜಗದಗಲವಾದುದು.ತಮ್ಮ ಸವಿಯಾದ ಬರಹ ನನ್ನ ಧಾರವಾಡದ ದಿನಗಳನ್ನು(1988-90)ನೆನಪಿಸುತ್ತಿದೆ.ಕಲಾಭವನದಲ್ಲಿ ಡಾ.ಸಿದ್ದನಗೌಡ ಪಾಟೀಲರೊಂದಿಗೆ ನಾಟಕವಾಡಿದ್ದು,ಸಮಾಜ ಪುಸ್ತಕಾಲಯದಲ್ಲಿ ತಾಸುಗಟ್ಟಲೆ ಪುಸ್ತಕಗಳನ್ನು ತಡಕಾಡಿದ್ದು,ಅಂದಿನ ಎಂ.ಎ. ಓದಿನ ಸಂದರ್ಭಗಳು..ಈಗ ಸ್ಮರಣೆಯ ಚಿತ್ತಭಿತ್ತಿಯಿಂದ ಹೊರಬಂದು ವಿವಹರಿಸುತ್ತಿವೆ.ಧನ್ಯವಾದಗಳು ಸರ್.ಬಾಗಲಕೋಟೆಯ ವಾಸುದೇವ ವಿನೋದಿನಿ ನಾಟ್ಯ ಸಂಘದ ಕುರಿತ ತಮ್ಮ ಅನುಭವಗಳಿಗಾಗಿ ಕಾಯುತ್ತಿದ್ದೇವೆ.
ನಮಸ್ಕಾರ,
ಮೊದಲ ಬಾರಿಗೆ ನಿಮ್ಮ ಲೇಖನ ಓದಿದೆ..
ಆ ಬದಗಳ ಬಳಕೆ ಇಷ್ಟವಾಯ್ತು..ನನಗೇನೂ ರಂಗಭೂಮಿಯ ಪರಿಚಯವಿಲ್ಲ…ಇವತ್ತು ಒಂದೆರಡು ಹೊಸ ಶಬ್ಧಗಳನ್ನು ಕಲಿತೆ ಅಷ್ಟೇ..
ಇನ್ನು ಮನೋಹರ ಗ್ರಂಥಮಾಲಾ ದ ಬಗ್ಗೆ ಕೇಳಿದ್ದೆ…ಎಲ್ಲೋ ಪುಸ್ತಕಗಳನ್ನು ನೋಡಿದ ನೆನಪೂ ಇದೆ..ಅದರ ಹಿಂದಿನ ಇತಿಹಾಸ ಗೊತ್ತಿರಲಿಲ್ಲ..
ಧನ್ಯವಾದಗಳು…ಮುಂದಿನ ಭಾಗಕ್ಕೆ ಕಾಯುತ್ತೇನೆ ಎಂದು ಸುಳ್ಳು ಹೇಳುವ ಮನಸ್ಸಿಲ್ಲ,ಇವತ್ತಿನದು ಇಷ್ಟ ಆಯ್ತು ,ಬರೆಯುತ್ತಿರಿ,ಜೀವನದ ಪಾಠಗಳನ್ನು ನಮಗೂ ಎರೆಯುತ್ತಿರಿ ಎಂದಷ್ಟೇ ಬೇಡಿಕೊಳ್ಳಬಲ್ಲೆ…
ನಮಸ್ತೆ..
ನೆನಪುಗಳ ಸರಣಿ ಬಿಚ್ಚುತ್ತಾ ನಮ್ಮನ್ನು ಮೆಚ್ಚಿಸುತ್ತಾ ಸಾಗುತ್ತದೆ ನಿಮ್ಮ ಬರಹ. ಮುಂದಿನ ಬರಹಕ್ಕೆ ಕಾಯುತ್ತಿದ್ದೇವೆ ಸರ್.
ನಾ ಕಾಣದ.. ಕಾವ್ಯದ ಮೂಲಕ ಕಾಣಲೆತ್ನಿಸುತ್ತಿರುವ ನನ್ನ ಮೆಚ್ಚಿನ ಬೇಂದ್ರೆಯಜ್ಜನನ್ನು ನೀವು ಕಂಡಿದ್ದೀರೆಂದು ತಿಳಿದು ತುಂಬಾ ಸಂತೋಷವಾಯಿತು ಸರ್! ಮುಂದಿನ ಕಂತು ಬೇಗ ಬರಲಿ.
ಗುರುಗಳೆ, ನಿಮ್ಮ ಲೇಖನ ಹಾಗೂ ನಿಮ್ಮ ಬರವಣಿಗೆಯ ಶೈಲಿಯನ್ನು ಹೊಗಳಲು ಶಬ್ಧಗಳ ಕೊರತೆಯಾಗಿದೆ. ಈ ಸಲ ಕಮೆಂಟು ಬರೆಯಲಾಗುತ್ತಿಲ್ಲ, ಕ್ಷಮಿಸಿ!
ಸರ್, ಅಂದಿನ ಮಧುರ ನೆನಪುಗಳನ್ನು, ಆಗಿನ ಕಾಲಘಟ್ಟದಲ್ಲಿ ನಿಂತು ಈಗಿನ ಕಾಲಮಾನಕ್ಕೆ ತಕ್ಕಂತೆ ಕುತೂಹಲಕಾರಿ ಅಂಶದೊಂದಿಗೆ ಬೆರೆಸಿ ಬಾಯಿ ಚಪ್ಪರಿಸುವಂತೆ ಹೇಳುವ ಆತ್ಮೀಯ ಶೈಲಿ ಮನಕ್ಕೆ ಮುದ ನೀಡಿತು….ಈ ಕಂತಿನಲ್ಲಿ ಅಟ್ಟದ ಪ್ರವೇಶ ಮಾಡಿಸಿದ್ದೀರಿ…ಮುಂದಿನ ಕಂತಿನಲ್ಲಿ ಅಟ್ಟದಲ್ಲಿ ಏನಾಗುವುದೋ, ಅಲ್ಲಿಯ ಘಟಾನುಘಟಿಗಳೋಂದಿಗಿನ ಪ್ರಸಂಗ ಹೇಗಿರುವುದೋ ಎಂದು ಕಾತರದಿಂದ ಕಾಯುವಂತೆ ಮಾಡಿದ ನಿಮಗೆ ನಮಸ್ಕಾರಗಳು….ಮರೆತಿದ್ದೆ….ದೊಡ್ಡಗಡಿ ಅನ್ನೋ ಪದವನ್ನು ಮರೆತಿದ್ದೆ, ನೆನಪಿಸಿದ್ದಕ್ಕೆ ಧನ್ಯವಾದಗಳು….ದೊಡ್ಡಗಡಿ ಶಬ್ದಕ್ಕೆ ಸಮಾನಾಂತರವಾಗಿ ಹಿರಿಗಡಿ ಎನ್ನುವ ಪದವೂ ಆಗ ಚಾಲ್ತಿಯಲ್ಲಿತ್ತು ಎಂದು ನಾನು ಕೇಳಿದ್ದೆ…ಸರ್…ನಿಮ್ಮ ಲೇಖನಕ್ಕೆ ಸೊಗಸಾಗಿದೆ….
ಭಾರೀ ‘ಧೊಡ್ಡ ಗಡಿ’ಕಥೆ ಹೇಳಿದ್ದೀರಿ ಸರ್… ನಿಮ್ಮ ಧಾರವಾಡದ ನೆನಪಿನ್ಯಾಗ ಎಷ್ಟ ಸೊಗಸದ,,, ಧಾರವಾಡದ ರಂಗಭೂಮಿಯ ಕಥನದ ಕೂಡ ಸಾರಸ್ವತ ಲೋಕದ ಕತೀನೂ ಸೇರಕೊಂಡೈತಿ. ಧಾರವಾಡದ ಮ್ಯಾಲ ಒಂದು ಪುಸ್ತಕಾ ಮಾಡ್ರೀ ಸರ್
this write up takes one right in the streets of Dharwad and brings the greatness of G.B.joshi impressively…some of the words make interesting read..thank you sir..
ಆಪ್ತ ಬರಹ….
“ಆ ಮೆಟ್ಟಿಲುಗಳ ಪುಣ್ಯ ನೋಡಿ ! ಅದೆಷ್ಟು ಜನ ಕವಿಗಳ, ಕಾದಂಬರಿಕಾರರ, ವಿಮರ್ಶಕರ, ಕಲಾವಿದರ, ನಾಟಕಕಾರರ ಪಾದಧೂಳಿಯನ್ನವು ಅದೆಷ್ಟು ದಶಕಗಳಿಂದ ಹೊತ್ತಿವೆಯೋ… ಅವಕ್ಕೇನಾದರೂ ಬಾಯಿ ಇದ್ದಿದ್ದರೆ ಖಂಡಿತ ಒಳ್ಳೊಳ್ಳೆಯ ಕತೆಗಳನ್ನು, ಪ್ರಸಂಗಗಳನ್ನು ಹೇಳಿರುತ್ತಿದ್ದವು…”
ನಿಜ! ನಿಮ್ಮ ಮೂಲಕ ಅವರೆಲ್ಲರೂ ಇನ್ನಷ್ಟು ಹತ್ತಿರವಾಗುತ್ತ ಹೋಗುತ್ತಿದ್ದಾರೆ.
So touching!
ಅಣ್ಣಾ…
ಒಮ್ಮೆ ಮಾಲ್ಗುಡಿ ಡೇಯ್ಸ್ ಥರಹದ ಸೀರಿಯಲ್ ನೋಡಿದ ಹಾಗೆ ಆಗುತ್ತದೆ ನಿಮ್ಮ ಕಥನಗಳನ್ನು ಓದುತ್ತಿದ್ದರೆ..
ಬಹಳ ಚಂದವಾಗಿ..
ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡುತ್ತಿರಿ ಅಂದಿನ ದಿನಗಳನ್ನು…
ಸರ್ ನಿಮ್ಮ ಅನುಭವಗಳು ಒಂದಕ್ಕಿಂತ ಒಂದು ಚೆನ್ನ! ನಮ್ಮೊಡನೆ ಹಂಚಿಕೊಳ್ಳುತ್ತಿರುವುದಕ್ಕೆ ಧನ್ಯವಾದಗಳು.
ಹೌದು ಸಿದ್ದರಾಮ… ‘ಹಿರಿಗಡಿ’ ಎಂಬ ಪದವೂ ಇತ್ತು. ಅದುವೇ ‘ಹೆರ್ಗಡೆ’, ‘ಪೆರ್ಗಡೆ’, ‘ಹೆಗ್ಗಡೆ’, ‘ಹೆಗಡೆ’ ಎಂದು ರೂಪಾಂತರಗೊಂಡಿರಬೇಕು.
ಧಾರವಾಡ ಜಿಲ್ಲಾದಾಗ ಐದು ವರ್ಷ ಕಳದ್ರೂ ‘ಮ.ಗ್ರಾ.ಮಾ’ ಬಗ್ಗೆ ತಿಳಕೊಂಡಿದ್ದಿಲ್ಲಾ ನಾ. ನಿಮ್ಮ ನೆನಪಿನ ಗ್ರಂಥದೊಳಗಿಂದ ಆಯ್ದು ನಮಗ ಈ ಲೇಖನ ಕೊಟ್ರೀ ಸರಾ.. ಖರೆ ಖುಷಿ ಪಟ್ಟೇನಿ.
ನಿಮ್ಮ ಬರಹ ಬಹಳ ಆತ್ಮೀಯವಾಗಿದೆ. ಓದಿದಂತೆ ಇಲ್ಲ.ನೋಡಿದಂತೆ ಭಾಸವಾಗುತ್ತದೆ.ಎಈಟೀವಿಯಲ್ಲಿದ್ದಾಗ ನಿಮ್ಮ ಬರವಣಿಗೆ ಓದಿದ ನನಗೆ ಮೋಡಿ ಮಾಡಿತ್ತು,ಈಗಲೂ ಹಾಗೆ.
ಧಾರವಾಡ ನೋಡಿಸಿದಿರಿ.ಧನ್ಯವಾದಗಳು.
ಬಾಲು