ಗೋಪಾಲ ವಾಜಪೇಯಿ ಕಾಲಂ: ಮತ್ತೆ ಮತ್ತೆ ಕಾರಂತ

ಸುಮ್ಮನೇ ನೆನಪುಗಳು –  40

”ಸರಿ. ಮೊದ್ಲು ನಿಮ್ ವರ್ಕಶಾಪ್ ಹುಡುಗರಿಗೆ ಪಾಠ ಮುಗಿಸಿಬಿಡ್ತೀನಿ, ಬನ್ನಿ… ಆಮೇಲೆ ನೋಡಿಕೊಂಡ್ರಾಯ್ತು…” ಅಂತ ಅವತ್ತು ಪ್ರವಾಸಿಮಂದಿರದಿಂದ ಹೊರಟುಬಿಟ್ರಲ್ಲ ಕಾರಂತರು… ಶಿಬಿರ ಸ್ಥಳವನ್ನು ಸೇರಿದ ಕೂಡಲೇ ಎದ್ದು ನಿಂತ ಶಿಬಿರಾರ್ಥಿಗಳನ್ನು ಕೂರಲು ಹೇಳಿ, ತಾವು ತಡವಾಗಿ ಬಂದುದಕ್ಕೆ ಕ್ಷಮೆ ಕೇಳಿದರು. ಹಾಗೂ, ಆ ಎತ್ತರದ ಸ್ಟೂಲಿನ ಮೇಲಿರಿಸಿದ್ದ ಹಾರ್ಮೋನಿಯಂ ನುಡಿಸುತ್ತ ಒಂದು ಕ್ಷಣ ಕಣ್ಣು ಮುಚ್ಚಿ, ಹಿಂದಿನ ದಿನ ಎಲ್ಲಿಗೆ ನಿಲ್ಲಿಸಿದ್ದರೋ ಅಲ್ಲಿಂದಲೇ ಪಾಠ ಮುಂದುವರಿಸಿದರು.

ಆಮೇಲೆ ಅವರು ‘ಧ್ವನಿ’ ಮತ್ತು ‘ನಾದ’ದ ಕುರಿತು ಮಾಡಿದ ಪಾಠ ಇದೆಯಲ್ಲ, ಅದು ಅಲ್ಲಿದ್ದವರನ್ನು ನಿಜಕ್ಕೂ ಮೈಮರೆಯುವಂತೆ ಮಾಡಿತ್ತು. ನಿತ್ಯವೂ ನಮ್ಮ ಕಿವಿಗೆ ಬೀಳುವ ‘ಧ್ವನಿ’ಗಳಲ್ಲಿ ‘ಸದ್ದು’ ಯಾವುದು, ‘ನಾದ’ ಯಾವುದು? ಯಾವುದು ಶ್ರಾವ್ಯ, ಯಾವುದು ಕರ್ಕಶ? ನೂರಾರು ದನಿಗಳಲ್ಲಿ ತಟ್ಟನೆ ನಮ್ಮನ್ನು ಯಾವುದೋ ಒಂದೆರಡು ದನಿಗಳು ಸೆಳೆದುಬಿಡುತ್ತವಲ್ಲ ಯಾಕೆ? ಅವುಗಳ ವೈಶಿಷ್ಟ್ಯವೇನು? ಸಾವಿರಾರು ಸದ್ದುಗಳಲ್ಲಿ ಯಾಕೆ ಕೆಲವನ್ನು ಕೇಳಿದ ಕೂಡಲೇ ನಾವು ತಲ್ಲಣಗೊಳ್ಳುತ್ತೇವೆ? ಇನ್ನು ಕೆಲವು ಯಾಕೆ ನಮಗೆ ಆಪ್ಯಾಯಮಾನವೆನಿಸುತ್ತವೆ? ಎಂದೆಲ್ಲ ಅವರು ಸೋದಾಹರಣವಾಗಿ ವಿವರಿಸುತ್ತಿದ್ದರೆ ಶಿಬಿರಾರ್ಥಿಗಳು ಹಾಗೇ ಬಾಯಿ ತೆರೆದು ಕೂತಿದ್ದರು.ಹಾಗೆ ಹೇಳುತ್ತಾ ಹೇಳುತ್ತಾ ಅವರು ಬೃಹನ್ನಗರದ ಒಂದು ರೇಲ್ವೆ ಪ್ಲಾಟ್ ಫಾರ್ಮನ್ನೇ ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸಿದರು.

”ಎಷ್ಟೊಂದು ಜನಗಳೋ ಅಷ್ಟೊಂದು ದನಿಗಳು… ಎಷ್ಟೊಂದು ವ್ಯಾಪಾರಿಗಳೋ ಅಷ್ಟೊಂದು ಕೂಗುಗಳು… ಜನರದು ದನಿ, ಮತ್ತು ವ್ಯಾಪಾರಿಗಳದು ಸ್ವರ. ಅದರಲ್ಲಿ ನಾದವನ್ನು ಹುಡುಕಬೇಕು…” ಎಂಬ ಅವರ ಮಾತು ಇವತ್ತಿಗೂ ನನಗೆ ನೆನಪಿದೆ.

ಹೌದು… ಸಾವಿರ ಹಕ್ಕಿಗಳು ಅಷ್ಟೇ ವೈವಿಧ್ಯದ ದನಿಗಳು. ಕೆಲವು ಪರಿಚಿತ, ಕೆಲವು ಆಪ್ಯಾಯಮಾನ. ಕೆಲವನ್ನು ‘ಇಂಚರ’ ಎನ್ನುತ್ತೇವೆ. ಕೆಲವನ್ನು ‘ಕರ್ಕಶ’ ಎಂದು ಮುಖ ಸಿಂಡರಿಸುತ್ತೇವೆ…

ಅವತ್ತು ನಮ್ಮನ್ನು ಪ್ಲಾಟ್ ಫಾರ್ಮ್ ಮೇಲೆ ನಿಲ್ಲಿಸಿದರಲ್ಲ ಕಾರಂತರು, ಹಾಗೇ ಬಿಟ್ಟು ಬಿಡಲಿಲ್ಲ. ನಮ್ಮನ್ನೆಲ್ಲ ರೈಲು ಹತ್ತಿಸಿದರು. ಅಷ್ಟೊಂದು ಜನ ಹತ್ತಿದರೆ ‘ಉಸ್ಸಪ್ಪಾ…’ ಅನ್ನದಿದ್ದೀತೇ ರೈಲು? ಆ ‘ಉಸ್ಸಪ್ಪಾ…ಉಸ್ಸಪ್ಪಾ…’ ಎಂಬ ನಿಡುಸುಯ್ಯುವಿಕೆಯನ್ನೇ ರೈಲು ಸಾಗುವ ಸದ್ದನ್ನಾಗಿ ಪರಿವರ್ತಿಸಿಟ್ಟರು ಕಾರಂತರು. ಮೊದಲು ‘ಉಸ್ಸಪ್ಪಾ…ಉಸ್ಸಪ್ಪಾ…’ ಎಂದು ಕೇಳುತ್ತಿದ್ದುದು ನಂತರ ‘ಉಸ್ಸಪುಸಪ್ ಪುಸ್ಸಪ್ಪುಸಪ್’ ಎಂಬಂತೆ ಭಾಸವಾಗಿ, ಗಾಡಿ ಒಂದು ವೇಗವನ್ನು ಪಡೆದಾಗ ‘ಸುಪ್ ಸುಪ್ ಸುಪ್ ಸುಪ್’ ಆಗಿ ಮುಂದುವರೆದು ‘ಸ್ಸುಸ್ಸುಸ್ಸುಸ್ಸು’ ಎಂಬಲ್ಲಿಗೆ ಎಲ್ಲೋ ಕರಗಿ ಹೋಯಿತು. ಅಂದರೆ, ನಾವು ಪ್ರಯಾಣಿಕರು ಅದರಲ್ಲಿ ‘ಒಂದಾಗಿ’ ಹೋಗಿದ್ದೆವು.

‘ರಂಗಜಂಗಮ’ ಕಾರಂತರು ಹೀಗೆ ‘ನಾದಾನ್ವೇಷಿ’ಯಾಗಿ ಸುತ್ತಿದ ಜಾಗಗಳೆಷ್ಟೋ, ಸವೆಸಿದ ಹಾದಿಗಳೆಷ್ಟೋ…!

ಅವತ್ತು ಕಾರಂತರು ಹೇಳಿದ ಇನ್ನೂ ಒಂದು ವಿಚಾರ ನನಗೆ ನೆನಪಿದೆ : ಅದು ನಮ್ಮಲ್ಲಿ ಪ್ರಚಲಿತವಿರುವ ಕೆಲವು ಎರಡು ಅಡ್ಡ ಹೆಸರುಗಳ ಕುರಿತಾದದ್ದು. ಇದನ್ನು ಹೇಗೆ, ಯಾಕೆ, ಯಾವ ಸಂದರ್ಭಕ್ಕೆ ಹೇಳಿದ್ದು ಎಂಬುದು ಮಾತ್ರ ಈಗ ನೆನಪಿಗೆ ಬರುತ್ತಿಲ್ಲ. ಆ ಎರಡು ಎರಡು ಅಡ್ಡ ಹೆಸರುಗಳೆಂದರೆ ‘ಉಪಾಧ್ಯಾಯ’ ಮತ್ತು ‘ಜೋಶಿ’.

”…’ಉಪಾಧ್ಯಾಯ’ ಇದು ಮೂಲ ಪದ. ‘ಉಪಾಧ್ಯ’ ಅಂತಲೂ ಕರೆಯುತ್ತಾರೆ. ಅಂದರೆ ಪುರೋಹಿತ, ಗುರು, ಶಿಕ್ಷಕ, ಉಪದೇಶಕ… ಇದು ರೂಪಾಂತರ ಆಗ್ತಾ, ಅಥವಾ ಹೃಸ್ವಗೊಳ್ತಾ ‘ಉಪಾಧ್ಯ’, ‘ಉಪಾದ್ಯ’, ‘ಉಪಾಧ್ಯೆ’, ‘ಪಾಧ್ಯ’, ‘ಪಾಧ್ಯೇ’, ‘ಪಾಢಿ’ ಎನಿಸಿಕೊಂಡಿತು. ಇನ್ನು ‘ಉಪಾದ್ಯ’ ಎಂಬುದು ‘ಉಪದ್ಯ’ವಾಗಿ, ‘ಉಪಜ್ಜ’ವಾಗಿ, ಕೊನೆಗೆ ‘ಓಝಾ’ ಮತ್ತು ‘ಝಾ’ ಎಂಬೆಲ್ಲ ಅಡ್ಡ ಹೆಸರುಗಳಾಗಿ ನಿಂತಿತು…” ಎಂಬುದನ್ನು ಅವರು ವಿವರಿಸಿದ ಪರಿ ನನಗಿನ್ನೂ ನೆನಪಿದೆ.

”…ಹಾಗೆಯೇ ‘ಜೋಶಿ’ ಎಂಬ ಪದ. ಇದರ ಮೂಲ ರೂಪ ‘ಜ್ಯೋತಿಷಿ’. ಅಲ್ಲಿ ಬದರಿಕಾಶ್ರಮಕ್ಕೆ ಹೋಗುವಾಗ ಬರುತ್ತದಲ್ಲ ‘ಜೋಶಿ ಮಠ’ ಎಂಬ ಸ್ಥಳ. ಅದು ಮೂಲತಃ ‘ಜ್ಯೋತಿರ್ ಮಠ’. ಅದೇ ಮುಂದೆ ‘ಜ್ಯೋತಿಷಿ ಮಠ’ ಅಂತಾಗಿ, ‘ಜೋಶಿ ಮಠ’ ಎಂಬ ರೂಪ ಪಡೆದು ನಿಂತಿತು. ಅಲ್ಲಿಂದ ಹೊರಟವರೇ ಆ ‘ಜ್ಯೋತಿಷಿ’ಗಳು ಅಥವಾ ‘ಜೋಶಿ’ಗಳು. ಪೌರೋಹಿತ್ಯ ಮತ್ತು ಜ್ಯೋತಿಷ್ಯ ಹೇಳುವುದು ಅವರ ವೃತ್ತಿ. ದೇಶದಾದ್ಯಂತ ಅಲ್ಲಲ್ಲಿ ಬೀಡು ಬಿಡುತ್ತ, ಬೇರೂರುತ್ತ ‘ಜ್ಯೋತ್ಸಿ’, ‘ಜ್ಯುತ್ಸಿ’, ‘ಜ್ಯೋಶಿ’, ‘ಜೋಶಿ’, ‘ಜೋಷಿ’, ‘ಜೋಯಿಸ’, ‘ದೋಶಿ’, ‘ದುಶಿ’ ಮುಂತಾಗಿ ಕರೆಯಿಸಿಕೊಳ್ಳುವ ಎಲ್ಲರೂ ಮೂಲದಲ್ಲಿ ಉತ್ತರಭಾರತದವರೇ…”

‘ನಾದ’ದ ಕುರಿತು ಹೇಳುತ್ತ ಅವತ್ತು ಏನೇನೆಲ್ಲವನ್ನೂ ನಮಗೆ ತಿಳಿಸಿಕೊಟ್ಟರಲ್ಲ ಕಾರಂತರು… ಇನ್ನು ಮುಗಿಸೋಣವೆಂಬಂತೆ ಅಭ್ಯಾಸಬಲದಿಂದ ಎಡಗೈ ತೋಳೇರಿಸಿ ನೋಡಿದರೆ ಕಂಡದ್ದು ಖಾಲಿ ಕೈ…

ನನ್ನೆಡೆ ನೋಡಿದರು.

-೦-೦-೦-೦-೦-

ಪ್ರವಾಸಿ ಮಂದಿರಕ್ಕೆ ಮರಳಿದ ಮೇಲೆ ವಾಚು ಹುಡುಕುವುದಕ್ಕಾಗಿ ಕೋಣೆಯನ್ನು ಮತೊಮ್ಮೆ ಜಾಲಾಡಿದ್ದಾಯಿತು. ಊಹೂಂ… ಅಲ್ಲಿದ್ದರೆ ತಾನೇ ಸಿಗಬೇಕು? ಇವರು ಅದನ್ನು ಬೇರೆಲ್ಲೋ ತೆಗೆದಿರಿಸಿದವರು ಮರೆತುಬಿಟ್ಟಿರಬೇಕು. ಎಲ್ಲಿ?

”ಸರ್… ಆ ವಾಚನ್ನ ನೀವು ಕೊನೇ ಸಲ ಕೈಯಿಂದ ಬಿಚ್ಚಿ ತೆಗೆದಿರಿಸಿದ್ದು ಯಾವಾಗ, ಎಲ್ಲಿ? ನೆನಪು ಮಾಡಿಕೊಳ್ಳಿ ಸರ್…”

”ನಿನ್ನೆ ಗದಗಿನ ಕಾರ್ಯಕ್ರಮದ ವೇಳೆ ಅದು ನನ್ನ ಕೈಯಲ್ಲೇ ಇತ್ತು. ನಾನು ಮಾತು ಮುಗಿಸಿದಾಗ ನೋಡಿಕೊಂಡಿದ್ದೆ…”

”ಹಾಗಿದ್ರೆ, ಅಲ್ಲಿ ಊಟಕ್ಕೆ ಹೋಗಿದ್ವಲ್ಲಾ… ಅಲ್ಲೇನಾದ್ರೂ ಮುಖ ತೊಳೆದುಕೊಳ್ಳುವಾಗ…” ಅಂತ ಅನುಮಾನ ವ್ಯಕ್ತಪಡಿಸಿದೆ.

”ಊಹೂಂ… ಅಲ್ಲಿ ಬಿಚ್ಚಿಲ್ಲ…”

”ಊಟದ ಟೇಬಲ್ ಮೇಲೇನಾದರೂ…?”

”ಇಲ್ಲ ವಾಜಪೇಯಿ…”

”ಸರ್, ನಾವು ಅಲ್ಲಿಂದ ಊಟ ಮುಗಿಸಿ ಹೊರಟಾಗ ರಾತ್ರಿ ಹನ್ನೊಂದು. ಇಲ್ಲಿ ಬಂದು ಸೇರಿದ್ದು ಹನ್ನೆರಡುವರೆಗೆ…”

”ಹೌದು. ತುಂಬಾ ಸುಸ್ತಾಗಿತ್ತು ನೋಡಿ, ಬಂದಕೂಡಲೇ ಮಲಗಿಬಿಟ್ಟೆ…”

ಕಾರಿನಿಂದ ಅವರನ್ನು ಇಳಿಸಿ, ರೂಮಿನಲ್ಲಿ ಮಲಗಿಸಿ, ಬಾಗಿಲು ಹಾಕಿ, ಇನ್ನೊಂದು ಬಾಗಿಲಿನ ಮೂಲಕ ಹೊರಬಂದು, ಬೀಗ ಹಾಕಿಕೊಂಡು ಹೋಗಿದ್ದವನು ನಾನೇ. ಅಲ್ಲಿಂದ ಅದೇ ಕಾರಿನಲ್ಲಿ ನನ್ನ ಮನೆತನಕ ಡ್ರಾಪ್ ತೆಗೆದುಕೊಂಡಿದ್ದೆ.

ಹಾಗೆ ಸುಮ್ಮನೇ, ರಾತ್ರಿ ಗದಗಿನಿಂದ ಹೊರಟು ಹುಬ್ಬಳ್ಳಿ ತಲಪುವ ತನಕದ ಕ್ಷಣಗಳನ್ನು ನೆನಪಿಸಿಕೊಂಡೆ.

ಹಾಂ… ಹೌದು. ನಡುವೆ ಅರ್ಧ ದಾರಿಗೆ ಬಂದಾಗ ಜೋಶಿ ‘ಮೂತ್ರಕ್ಕೆ’ ಅಂತ ಕಾರು ನಿಲ್ಲಿಸಲು ಹೇಳಿದ್ದರು. ಕಾರು ನಿಂತಾಗ ಮೂವರೂ ಇಳಿದಿದ್ದೆವು. ಆ ನಂತರ ಕಾರು ನಿಂತದ್ದು ಹುಬ್ಬಳ್ಳಿಗೆ ಬಂದ ಮೇಲೆಯೇ, ಜೋಶಿ ಉಳಿದಿದ್ದ ಲಾಡ್ಜಿನ ಬಳಿ. ಅವರನ್ನಿಳಿಸಿ ತಲಪಿದ್ದು ಪ್ರವಾಸಿ ಮಂದಿರಕ್ಕೇನೇ.

ಹೀಗೆಲ್ಲ ನಾನು ಯೋಚಿಸುತ್ತ ನಿಂತ ಹೊತ್ತಿನಲ್ಲೇ ಕಾರಂತರು ತಟ್ಟನೆ, ”ಹಾಂ… ವಾ… ವಾಜಪೇಯಿ…” ಅಂತ ಅರ್ಧಕ್ಕೆ ನಿಲ್ಲಿಸಿದರು.

”ಸರ್…?!”

”ರಾತ್ರಿ ಸೆಕೆ ನೋಡಿ… ಮಣಿಕಟ್ಟಿನ ಬೆವರು ಒರೆಸಿಕೊಳ್ಳೋಣ ಅಂತ ವಾಚು ಬಿಚ್ಚಿ ನನ್ನ ಎಡಗಡೆ ಇಟ್ಟುಕೊಂಡೆ ಅಂತ ಕಾಣತ್ತೆ…” ಮುಂದೇನು ಹೇಳುತ್ತಾರೋ ಅಂತ ನಾನು ಅವರ ಮುಖವನ್ನೇ ನೋಡುತ್ತಿದ್ದೆ.

”ಹಾಗೆ ವಾಚ್ ಬಿಚ್ಚಿದಾಗೆಲ್ಲಾ ಇಲ್ಲಿ ಎಡಗಡೆ ಜೇಬಲ್ಲಿಟ್ಟುಕೊಳ್ಳೋ ರೂಢಿ…”

”ಹಾಗಿದ್ರೆ ಗದಗಿಗೆ ಹೋಗುವಾಗ ಧರಿಸಿದ್ದ ಜುಬ್ಬದ ಜೇಬಿನಲ್ಲೇನಾದರೂ…”

ಮೂಲೆಗೆಸೆದಿದ್ದ ಆ ಜುಬ್ಬವನ್ನೆತ್ತಿ ಜೇಬನ್ನೆಲ್ಲ ತಡಕಾಡಿದರು. ಊಹೂಂ… ಅಲ್ಲಿಯೂ ಇರಲಿಲ್ಲ.

”ಹಾಗೆ ಬಿಚ್ಚಿಟ್ಟಾಗ ಅದೆಲ್ಲೋ ಬಿದ್ದು ಹೋಗಿದೇರೀ… ಆ ಕಾರಲ್ಲೇನಾದ್ರೂ ಬಿದ್ದಿದೆಯಾ ಸ್ವಲ್ಪ ವಿಚಾರಿಸ್ತೀರಾ…?”

ಅವರ ರೂಮಿನಿಂದ್ಲೇ ಗೆಳೆಯ ಡಾ. ಪಾಂಡುರಂಗ ಪಾಟೀಲರಿಗೆ ಫೋನ್ ಮಾಡಿ ‘ಹೀಗ್ಹೀಗೆ’ ಅಂತ ತಿಳಿಸಿ, ”ನಿಮ್ಮ ಡ್ರೈವರನ್ನ ವಿಚಾರಿಸಿ,” ಅಂದೆ.

”ಬೇಕಿದ್ರೆ ಆ ಡ್ರೈವರನಿಗೆ ದುಡ್ಡು ಕೊಡ್ತೀನಿ… ವಾಚ್ ಸಿಕ್ಕಿದ್ರೆ ತಂದು ಕೊಡೋದಕ್ಕೆ ಹೇಳಿ ಪ್ಲೀಜ್…” ಅಂತ ಕಾರಂತರು. ಗೆಳೆಯ ಪಾಂಡುರಂಗ ಪಾಟೀಲರಿನ್ನೂ ಲೈನಿನಲ್ಲೇ ಇದ್ದರು. ಕಾರಂತರ ಕೈಗೆ ಫೋನ್ ಕೊಟ್ಟೆ. ಅವರಿಬ್ಬರೂ ಒಂದೆರಡು ನಿಮಿಷ ಮಾತಾಡಿದರು.

ನಾವು ಗದಗಿಗೆ ಹೊಗುವಾಗಲೂ, ಅಲ್ಲಿಂದ ವಾಪಸ್ಸಾಗುವಾಗಲೂ ಕಾರಿನಲ್ಲಿ ಅವರು ಎಡಕ್ಕೇ ಕೂತಿದ್ದದ್ದು. ಬೆವರು ಅಂತ ವಾಚು ತೆಗೆದರಲ್ಲ, ಆ ‘ಸ್ಥಿತಿ’ಯಲ್ಲಿ ಅದನ್ನು ಎಡಗಡೆಯ ಜೇಬಿಗೆ ಇಟ್ಟುಕೊಳ್ಳುವ ಭರದಲ್ಲಿ ಬಹುಶಃ ಅದು ಜೇಬಿಗೆ ಬೀಳದೆ ಸೀಟಿನ ಮೇಲೆ ಬಿದ್ದಿರಬೇಕು. ಅಲ್ಲಿ ಮೂತ್ರಕ್ಕೆಂದು ಬಾಗಿಲು ತೆಗೆದು ಹೊರಬರಲು ಎದ್ದಾಗ ಅದು ಕೆಳಗೆ ಬಿದ್ದಿರಬೇಕು…

ಆದರೆ ಬಿದ್ದದ್ದೆಲ್ಲಿ…? ಅಂತ ಕಡೆಗೂ ಗೊತ್ತಾಗಲೇ ಇಲ್ಲ. ಕಾರಂತರಿಗೆ ವಾಚು ಮರಳಿ ಸಿಗಲೇ ಇಲ್ಲ.

-೦-೦-೦-೦-೦-

ಭೋಪಾಲ್ ‘ರಂಗಮಂಡಲ’ದ ಹುಬ್ಬಳ್ಳಿಯ ಪ್ರಯೋಗಗಳು ಮುಗಿದ ಮರುದಿನ ಕಲಾವಿದರು, ತಂತ್ರಜ್ಞರು ಸಾಮಾನು ಸರಂಜಾಮುಗಳೊಂದಿಗೆ ಬೆಂಗಳೂರಿಗೆ ಹೊರಟು ಹೋದರು. ಕಾರಂತರು ಅಂದು ರಾತ್ರಿಯ ಟ್ರೇನಿಗೆ ಹೊರಡುವವರಿದ್ದರು. ನಮ್ಮ ಶಿಬಿರ ಮತ್ತೆ ‘ಸವಾಯಿ ಗಂಧರ್ವ ಕಲಾಮಂದಿರ’ಕ್ಕೆ ಸ್ಥಳಾಂತರಗೊಂಡಿತು. ಕಾರಂತರೊಬ್ಬರೇ ಪ್ರವಾಸಿ ಮಂದಿರದಲ್ಲಿ ಕೂತು ಏನು ಮಾಡಿಯಾರು? ಶಿಬಿರ ಸ್ಥಳಕ್ಕೆ ಬಂದರು.

ಶಿಬಿರಕ್ಕೆ ಸಂಬಂಧಿಸಿದಂತೆ ನಾನೇನೋ ಒಂದಿಷ್ಟು ವಸ್ತುಗಳ ಖರೀದಿಗೆ ಹೋಗಬೇಕಿತ್ತು. ಕಾರಂತರಿಗೂ ಹುಬ್ಬಳ್ಳಿಯಲ್ಲಿ ಒಂದಿಷ್ಟು ತಿರುಗಾಡುವ ಆಸೆ.

”ನಿಮ್ಮೂರಲ್ಲಿ ಏನೇನು ವಿಶೇಷ ಅಂತ ನೋಡಬೇಕು… ನಡೀರಿ ಹೋಗೋಣ…” ಅಂತ ಜತೆಗೂಡಿದರು. ಎಂಟತ್ತು ಜಾಗಗಳು. ನಾಲ್ಕಾರು ಅಂಗಡಿಗಳು. ಒಂದೆರಡು ಆಫೀಸುಗಳು. ಚಿಕ್ಕಪ್ಪನನ್ನು ಹಿಂಬಾಲಿಸುವ ಚಿಕ್ಕ ಹುಡುಗನ ಹಾಗೆ ಅವರು ಎಲ್ಲ ಕಡೆಗೂ ಹೆಜ್ಜೆ ಹಾಕಿದರು.

ದುರ್ಗದ ಬೈಲಿನ ಕೆಲವೆಡೆ ಜನ ಕಾರಂತರನ್ನು ಗುರುತಿಸಿದರು, ಕೈ ಮುಗಿದರು. ಅದಕ್ಕೆ ಇವರದೊಂದು ಮುಗುಳ್ನಗೆ, ಪ್ರತಿ ನಮಸ್ಕಾರ. ಅಷ್ಟೇ. ಉಳಿದಂತೆ ಅವರ ಗಮನ ಬೇರೆ ಕಡೆಯೇ : ಆ ಜನರ ಕಡೆಗೆ, ದೂರದಿಂದ ಕೇಳಿಬರುವ ಜೋಗತಿಯ ಹಾಡಿನ ಕಡೆಗೆ ; ಹಾಡಿನ ಜತೆ ಜತೆಗೇ ತೇಲಿಬರುತ್ತಿದ್ದ ಚೌಡಿಕೆಯ ನಾದದ ಕಡೆಗೆ ; ‘ಅಂಬಾ’ ಎನ್ನುತ್ತಿದ್ದ ಬಿಡಾಡಿ ದನಗಳ ಹಿಂಡಿನ ಕಡೆಗೆ; ಅವುಗಳನ್ನು ಓಡಿಸುತ್ತ ಬೈಯುವವರ ಭಾಷೆಯ ಕಡೆಗೆ; ಅಂತ ರಣಬಿಸಿಲಲ್ಲೂ ‘ಢರ್ ಮರ್, ಢರ್ ಮರ್’ ಅಂತ ಸದ್ದು ಹೊರಡಿಸುತ್ತ ತಲೆಶೂಲೆಗೆ ಕಾರಣನಾಗುತ್ತಿದ್ದ ‘ದುರುಗ ಮುರಿಗಿ’ಯವನ ಕಡೆಗೆ; ಹಾಗೇ ಅಲ್ಲಿ ಕೇಳಿಬರುತ್ತಿದ್ದ ಹಣ್ಣು ವ್ಯಾಪಾರಿಗಳ ಕೂಗಿನ ಕಡೆಗೆ…

”ಬರ್ರಿ ಸರ್… ನಮ್ಮೂರಿನ ವಿಶೇಷ ಒಂದನ್ನ ನಿಮಗೆ ತಿನ್ನಿಸ್ತೀನಿ…” ಅಂತ ಅವರನ್ನು ಅಲ್ಲಿಯೇ ಸಮೀಪದ ‘ಸ್ವರ್ಣ ಮಂದಿರ’ಕ್ಕೆ ಕರೆದುಕೊಂಡು ಹೋದೆ.

ಒಂದು ಕಾಲಕ್ಕೆ ಅದು ಜಗತ್ಪ್ರಸಿದ್ಧ ಚಿತ್ರ ನಿರ್ಮಾಪಕ ನಿರ್ದೇಶಕ ನಟ ವಿ. ಶಾಂತಾರಾಮ್ ಅವರ ಅಜ್ಜಿ ನಡೆಸುತ್ತಿದ್ದ ಹೋಟಲಂತೆ. (ಶಾಂತಾರಾಮರು ತಮ್ಮ ಬಾಲ್ಯದ ಕೆಲವು ದಿನಗಳನ್ನು ಕಳೆದದ್ದು ಹುಬ್ಬಳ್ಳಿಯಲ್ಲೇ.) ಅವರ ಅಜ್ಜಿ ‘ಮಿಸಳ್’ ಎಂಬ ಒಂದು ವಿಶಿಷ್ಟ ತಿನಿಸನ್ನು ಪರಿಚಯಿಸಿದಳಂತೆ. ಅದು ಇಂದಿಗೂ ‘ಸುವರ್ಣ ಮಂದಿರ’ದ ಸ್ಪೆಶಲ್ ತಿಂಡಿಯೇ. ಇಂದಿಗೂ ಎಷ್ಟೋ ಜನರ ಜನಪ್ರಿಯ ಖಾದ್ಯವೇ. ಅದು ಹಚ್ಚಿದ ಅವಲಕ್ಕಿ, ಉಪ್ಪಿಟ್ಟು, ಸೇವು, ಖಾರ, ಚಕ್ಕುಲಿಯ ತುಂಡುಗಳು, ಮುರಿದು ಹಾಕಿದ ‘ಕಾಂದಾ ಬಜ್ಜಿ’ಗಳ ತುಣುಕುಗಳು, ಇವನ್ನೆಲ್ಲ ಸಮಪ್ರಮಾಣದಲ್ಲಿ ಸೇರಿಸಿ ಮೇಲೆ ಬಿಸಿ ಬಿಸಿ ಸಾಂಬಾರ್ ಹಾಕಿ ತಯಾರಿಸುವ ಮಿಶ್ರರುಚಿಯ ಖಾದ್ಯ. ಅದರ ಮೇಲೆ ಮತ್ತೆ ಒಂದಿಷ್ಟು ಸಣ್ಣಗೆ ಹೆಚ್ಚಿದ ಈರುಳ್ಳಿ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ನಾಲ್ಕಾರು ಹನಿ ನಿಂಬೆ ರಸ…! (‘ಮಿಸಳ್’ ಎಂಬುದು ಮರಾಠಿಯ ಪದ. ಅದರ ಅರ್ಥ ‘ಮಿಶ್ರ’ ಇಲ್ಲವೇ ‘ಮಿಶ್ರಿತ’ ಅಂತ. ಆ ಕಾಲಕ್ಕೆ ಹುಬ್ಬಳ್ಳಿಯಲ್ಲಿ ಮರಾಠಿಯ ಪ್ರಭಾವ ಜಾಸ್ತಿ.)

ಕಾರಂತರು ‘ಮಿಸಳ್’ನ್ನು ತುಂಬ ಇಷ್ಟಪಟ್ಟು ತಿಂದರು. ಆಮೇಲೊಂದು ಲಸ್ಸಿ.

ಅಲ್ಲಿಂದ ನಾವು ಗಲ್ಲಿಯೊಂದರಲ್ಲಿ ಹಾಯ್ದು ಮತ್ತೊಂದೆಡೆ ಹೊರಟಿದ್ದಾಗ ಕಾರಂತರ ಕಿವಿಗಳು ನಿಮಿರಿದುವು. ಆಚೀಚೆ ನೋಡುತ್ತ ಬರತೊಡಗಿದ ಅವರು ಗಕ್ಕನೆ ನಿಂತದ್ದು ಒಂದು ಅಂಗಡಿಯ ಮುಂದೆ. ಅದು ಹಾರ್ಮೋನಿಯಂ, ತಂಬೂರಿ ಮುಂತಾದವುಗಳ ರಿಪೇರಿ ಅಂಗಡಿ. ರಿಪೇರಿಗಾಗಿ ಬಂದ ಹತ್ತಿಪ್ಪತ್ತು ಹಾರ್ಮೋನಿಯಮ್ಮುಗಳು. ರಿಪೇರಿಯಾಗಿ ಕೂತ ಎಂಟತ್ತು ಹಾರ್ಮೋನಿಯಮ್ಮುಗಳು. ಒಂದು ಕಡೆ ನಾಲ್ಕಾರು ತಂಬೂರಿಗಳು, ಪಿಟೀಲುಗಳು, ಮತ್ತೊಂದೆರಡು ತಂತಿವಾದ್ಯಗಳು. ಐದಾರು ಜನ ಕೆಲಸಗಾರರು. ಅಲ್ಲಲ್ಲಿ ಹರಡಿ ಬಿದ್ದ ವಾದ್ಯಗಳ ಬಿಡಿಭಾಗಗಳು.

ಬಂದವರು ತನ್ನ ಗಿರಾಕಿ ಅಲ್ಲವೆಂದು ಗೊತ್ತಾಗಿ ‘ಏನು?’ ಎಂಬಂತೆ ನಮ್ಮನ್ನೇ ಮಿಕಿಮಿಕಿ ನೋಡತೊಡಗಿದ ಅಂಗಡಿಯವ.

”ಸುಮ್ಮನೆ ಕುತೂಹಲ. ನೋಡುವುದಕ್ಕೆ ನಿಂತಿದ್ದೀವಿ,” ಅಂತ ನಾನು.

ಆದರೆ ಕಾರಂತರು ಸುಮ್ಮನಿರಬೇಕಲ್ಲ. ಪರೀಕ್ಷಾರ್ಥವಾಗಿ ಒಬ್ಬ ನುಡಿಸುತ್ತಿದ್ದ ಹಾರ್ಮೋನಿಯಂ ಹತ್ತಿರ ಹೋಗಿ ನಿಂತರು. ಅವರ ವಯಸ್ಸು ಮತ್ತು ತೇಜಸ್ಸು ನೋಡಿ ಅಂಗಡಿಯವ ಸುಮ್ಮನಿದ್ದ. ಬದುಕಿಡೀ ಹಾರ್ಮೋನಿಯಂ ಜೊತೆಯೇ ಕಳೆದವರು ನಮ್ಮ ಕಾರಂತರು. ಈಗ ಮತ್ತೆ ಆ ನೆನಪು ಬಂದಿರಬೇಕು. ಇನ್ನು ಸ್ವಲ್ಪ ಕಾಲ ಅಲ್ಲಿಯೇ ನಿಂತಿದ್ದರೆ, ಮುಸುಕನ್ನು ತೆಗೆದುದೊಗೆದು ಕೂತ ಆ ‘ಸ್ವರಮಾಧುರಿ’ಯ ಸಾಂಗತ್ಯದಲ್ಲಿ ಮೈ ಮರೆತು ನಿಂತುಬಿಡುತ್ತಿದ್ದರೋ ಏನೋ…

 

”ಸರ್… ಇನ್ನೂ ಒಂದೆರಡು ಕಡೆ ಹೋಗಬೇಕು…” ಅಂತ ಎಚ್ಚರಿಸಿದೆ.

”ಹಾಂ… ಹಾಂ… ಹೊರಟುಬಿಡುವಾ…” ಅಂತ ಮನಸ್ಸಿಲ್ಲದ ಮನಸ್ಸಿನಿಂದ ಹೆಜ್ಜೆ ಕಿತ್ತಿದರು. ಒಂದಷ್ಟು ದೂರ ಬಂದ ಮೇಲೆ, ”ನಾನು ‘ಕೋಲ್ಹಾಪುರಿ ಚಪ್ಪಲಿ’ ಖರೀದಿಸಬೇಕಿತ್ತು… ಎಲ್ಲಿ ಸಿಗಬಹುದು?” ಅಂತ ನನ್ನತ್ತ ಮುಖ ತಿರುಗಿಸಿದರು.

”ಇಲ್ಲಿ ಒರಿಜಿನಲ್ ಕೋಲ್ಹಾಪುರಿ ಚಪ್ಪಲಿ ಸಿಗೋದಿಲ್ಲ, ಆ ಹೆಸರು ಹೇಳಿ ನಿಮಗೆ ಮಾರ್ತಾರೆ,” ಅಂದೆ ನಾನು.

”ಹೌದಾ… ಹಾಗಿದ್ರೆ ಬೇಡ. ವಾಪಸ್ ಹೊರಡೋಣ ನಡೀರಿ…” ಅಂತ ನಡೆಯತೊಡಗಿದರು.

ಒಂದು ಆಟೋ ನಿಲ್ಲಿಸಿದೆ.

ಅದಕ್ಕೂ ಮುಂಚೆ ನಮ್ಮ ವರ್ಕ್ ಶಾಪ್ ಸಲುವಾಗಿ ಖರೀದಿಸಿದ ವಸ್ತುಗಳನ್ನು ಆಯಾ ಅಂಗಡಿಗಳಲ್ಲಿಯೇ ಇಟ್ಟು ಹೋಗಿದ್ದೆವಲ್ಲ. ಅವನ್ನೆಲ್ಲ ಅಲ್ಲಲ್ಲಿ ನಿಲ್ಲುತ್ತ ಆಟೋಗೆ ಏರಿಸಿಕೊಳ್ಳುತ್ತ ಹೊರಟೆವು.

-೦-೦-೦-೦-೦-

ಸವಾಯಿ ಗಂಧರ್ವ ಕಲಾಮಂದಿರದ ಎದುರು ಬಂದು ನಿಂತುಕೊಂಡಾಗ, ನಾನು ಇಳಿದು ಆಟೋದವನಿಗೆ ಹಣ ಕೊಡಲು ನಿಂತೆ. ಕಾರಂತರು ಇಳಿದು ಪ್ರೇಕ್ಷಾಗೃಹದತ್ತ ಹೆಜ್ಜೆ ಹಾಕತೊಡಗಿದವರು, ಅಲ್ಲಿ ಸವಾಯಿ ಗಂಧರ್ವರ ಪ್ರತಿಮೆಯ ಬಳಿ ನನ್ನನ್ನೇ ನೋಡುತ್ತಾ ನಿಂತರು. ನಾನು ಆಟೋದವನಿಗೆ ದುಡ್ದು ಕೊಟ್ಟು ಅವರ ಬಳಿಗೆ ಓಡಿದೆ.

”ಅದೇನು, ನಿಮ್ಮ ತಕರಾರು ಆಟೋದವನೊಂದಿಗೆ? ಮೊನ್ನೇನೂ ಹಾಗೆ ಮಾಡೀದ್ರಿ. ಇವತ್ತು ಕೂಡ ಅಲ್ಲಿ ಮಾರ್ಕೆಟ್ಟಿನಲ್ಲಿ ಮತ್ತೆ ಅದೇ. ಈಗ ನೋಡೀದ್ರೆ ಮತ್ತೆ ಆಟೋದವನೊಂದಿಗೆ…”

”ಏನಿಲ್ಲ ಸರ್. ಈ ಆಟೋದವರು ಮೊದ್ಲು ಒಂದು ಹೇಳ್ತಾರೆ… ಜಾಗ ತಲಪಿದ ಮೇಲೆ ಅಷ್ಟು ಜಾಸ್ತಿ ಕೊಡಿ, ಇಷ್ಟು ಜಾಸ್ತಿ ಕೊಡಿ ಅಂತ ಕಾಡ್ತಾರೆ…”

”ಯಾಕೆ? ಮೀಟರ್ ಹಾಕೋದಿಲ್ವೇನು?”

”ಊಹೂಂ… ಅವರು ಹೇಳಿದ್ದೆ ರೇಟು ಸರ್.”

”ಆದ್ರೂ… ಈ ಆಟೋದವರ ಜೊತೆ ಹಾಗೆಲ್ಲಾ ತಕರಾರು ಮಾಡಬಾರ್ದು… ದುಡಿಯೋ ಜನ ಅವ್ರು… ಕೊನೆಗೆ ಎಷ್ಟು ಕೊಟ್ರಿ?”

”ನೂರು ರೂಪಾಯಿ ಕೊಟ್ಟೆ ಸರ್…”

”ನೂರು ರೂಪಾಯಿನಾ? ಇಷ್ಟೇ ಡಿಸ್ಟನ್ಸಿಗೆ ನೂರು ರೂಪಾಯಿನಾ? ಬೆಂಗಳೂರಲ್ಲಿ ನಾವು ಮನೆಯಿಂದ ವಿಧಾನ ಸೌಧಕ್ಕೆ ಹೋಗಿ, ಅದೇ ಆಟೋದಲ್ಲೇ ಮತ್ತೆ ಮನೆಗೆ ವಾಪಸ್ಸಾದ್ರೂ ಇಷ್ಟು ಆಗುತ್ತೋ ಇಲ್ವೋ… ಯಾಕಂತೆ ಅಷ್ಟು ಕೇಳಿದ್ದು?”

”ಭಾಳ ಕಡೆ ನಿಲ್ಲಿಸ್ತಾ ಬಂದ್ವಂತೆ… ಲೋಡು ಜಾಸ್ತಿ ಆಯ್ತಂತೆ… ಅದಕ್ಕೆ ಅವನಿಗೆ ಜಾಸ್ತಿ ಕೊಡಬೇಕಂತೆ…”

-ಎಂದು ಹೇಳುತ್ತ ಪ್ರೇಕ್ಷಾಗೃಹದೊಳಗೆ ಕಾಲಿರಿಸುವ ಹೊತ್ತಿಗೆ ಜಯತೀರ್ಥ ಜೋಶಿ ಎದುರಾದರು.

ಗುರುವನ್ನು ಕರೆದುಕೊಂಡು ಶಿಷ್ಯ ಊಟಕ್ಕೆ ಹೊರಟರು.

ನನಗೆ ಒಳಗೆ ಬೇರೆ ಕೆಲಸ ಕಾಯುತ್ತಿತ್ತಲ್ಲ..

-೦-೦-೦-೦-೦-

ಬೆಂಗಳೂರಿನಲ್ಲಿ ಭೋಪಾಲ್ ‘ರಂಗಮಂಡಲ’ದ ಪ್ರಯೋಗಗಳು ಮುಗಿಯುವ ದಿನ ನಾನು ಕಾರಂತರನ್ನು ಕಂಡೆ. ರವೀಂದ್ರ ಕಲಾಕ್ಷೇತ್ರದ ಲೌಂಜಿನಲ್ಲಿ ಕೂತಿದ್ದರು.

ಆವತ್ತಿನ ಪ್ರಯೋಗ ಮುಗಿದ ಮೇಲೆ ಕಾರಂತರು ಕಲಾಕ್ಷೇತ್ರದ ವೇದಿಕೆಗೆ ಬಂದರು. ಎಲ್ಲ ಕಲಾವಿದರನ್ನು ತಂತ್ರಜ್ಞರನ್ನು ವೇದಿಕೆಗೆ ಕರೆದರು. ಜತೆಗೆ ಬೆಂಗಳೂರಿನಲ್ಲಿ ತಮ್ಮ ಪ್ರಯೋಗಗಳ ಯಶಸ್ಸಿಗೆ ಕಾರಣರಾದವರನ್ನೂ ವೇದಿಕೆಗೆ ಬರಮಾಡಿಕೊಂಡರು. ಕರ್ನಾಟಕದ ಯಾತ್ರೆಯ ಬಗ್ಗೆ ಮಾತಾಡುತ್ತಿದ್ದಾಗ ಥಟ್ಟನೆ ನನ್ನ ನೆನಪು ಬಂತೇನೋ… ನನ್ನನ್ನೂ ಕರೆದು ಪಕ್ಕದಲ್ಲಿಯೇ ನಿಲ್ಲಿಸಿಕೊಂಡರು.

ಹತ್ತಾರು ‘ಫ್ಲಾಶ್’ಗಳು ಕಣ್ಣು ಕುಕ್ಕಿದವು.

ಆ ಐತಿಹಾಸಿಕ ಸಂದರ್ಭದ ಫೋಟೋ ಈಗ ಯಾರ ಬಳಿಯಾದರೂ ಸಿಗಬಹುದೇನೋ ಅಂತ ಹುಡುಕುತ್ತಿದ್ದೇನೆ.

(ಇನ್ನಷ್ಟು ವಿವರಗಳು ಮುಂದಿನ ವಾರ)

 

‍ಲೇಖಕರು avadhi

March 24, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

19 ಪ್ರತಿಕ್ರಿಯೆಗಳು

  1. Badarinath Palavalli

    ನನಗೆ ಪ್ರೇಮಾ ಕಾರಂತರನ್ನು ಭೇಟಿಯಾಗುವ ಮತ್ತು ಅವರ ಜೊತೆ ‘ನಕ್ಕಳಾ ರಾಜಕುಮಾರಿ’ ಚಿತ್ರದಲ್ಲಿ ಕೆಲಸಮಾಡುವ ಅವಕಾಶ ಸಿಕ್ಕಿತು. ಆದರೆ, ಸ್ವತಃ ಕಾರಂತರನ್ನು ನೋಡುವ ಅವಕಾಶ ಕೂಡಿ ಬರಲೇ ಇಲ್ಲ. ಅವರ ಜೊತೆ ಕೆಲಸ ಮಾಡಿದ ನಿಮಗೆ ನನ್ನ ನಮಗಳು. ಅವರ ಬಹು ಮುಖ ಪ್ರತಿಭೆ ಮತ್ತು ಸಂಗೀತಕ್ಕೆ ಮಾರುಹೋದವನು ನಾನು.
    ಪ್ರಸ್ತುತ ಬರಹವು ಅವರ ಕಾರ್ಯ ವೈಖರಿಯನ್ನೂ ಗ್ರಹಿಕೆ ಮತ್ತು ಸೃಜನಶೀಲತೆಯನ್ನೂ ಸಮರ್ಥವಾಗಿ ಬಿಂಬಿಸಿದೆ. ಲಗಟ್ಟಿಸಿದ ಚಿತ್ರಗಳು ಕಥೆಯನ್ನು ಹೇಳುತ್ತಿವೆ.
    ಮುಂದುವರೆಯಲಿ, ಜಾತಕ ಪಕ್ಷಿಗಳು ಕಾಯುತ್ತಿದ್ದೇವೆ.

    ಪ್ರತಿಕ್ರಿಯೆ
  2. Atmananda

    Sir…… Ranagaayana Mysore eega eshtondu belavanige kandide.. ondu, intellectual group ide.. idakella kaaraneekartaru Karantaru… B.V. Krantara watch, kolhapuri chappali… harmonium angadi… hale nenapugalanna kannu munde katto haage bardeeri sir!! MISAL tinbeku ansatta!!

    ಪ್ರತಿಕ್ರಿಯೆ
  3. Srikanth Manjunath

    ಸುಮಧುರ ಬರಹ. ಧ್ವನಿಗಳ ವಿಶಿಷ್ಟತೆಯನ್ನು ವಿವರಿಸುವ ಪರಿ ಸೊಗಸಾಗಿದೆ. ಕಳೆದು ಹೋದ ವಾಚಿನ ಪ್ರಸಂಗ, ಆಟೋ ಪ್ರಸಂಗ ಎಲ್ಲವು ಸೊ ಗಸಾಗಿದೆ. ಐತಿಹಾಸಿಕ ಚಿತ್ರ ನಿಮಗೆ ಆದಷ್ಟು ಬೇಗ ಸಿಗಲಿ ಮತ್ತು ಹಂಚಿಕೊಳ್ಳಲಿ ಎಂದು ಪ್ರಾರ್ಥಿಸುವೆ!

    ಪ್ರತಿಕ್ರಿಯೆ
  4. umesh desai

    ಗುರುಗಳ ರಂಗಜಂಗಮರೂ ಸುವರ್ಣಮಂದಿರದ ಉಸಳಿ(ನಿವು ಅಂದಿದ್ದು ಮಿಸಳ್) ಸವಿದಿದ್ರು
    ಕೇಳಿ ಖುಷಿಆತು ಈಗ ಭಟ್ಟರ ಸುವರ್ಣಮಂದಿರಾನೂ ಇಲ್ಲ ಚಪ್ಪರಿಸಿ ಹೊಡೆದ ಅವರೂ ಇಲ್ಲ..
    ಹಿಂಗ ನೋಡ್ರಿ ಈ ವ್ಯಾಳ್ಯೆ ಅನ್ನೂದು ಬರೇ ನೆನಪು ಕೊಟ್ಟು ಎಲ್ಲೋ ಹೋಗತದ….!!

    ಪ್ರತಿಕ್ರಿಯೆ
  5. Ishwara Bhat K

    ನಿಮ್ಮೊಳಗೆ ಅದೆಷ್ಟು ನೆನಪುಗಳು ತುಂಬಿಕೊಂಡಿದ್ದೀರಿ.. ಅಬ್ಬಾ, ಸರಳವಾಗಿ ಸುಂದರ ನಿರೂಪಣೆ. ಘಟನೆಗಳನ್ನೂ ಅತ್ಯಂತ ಸೊಗಸಾಗಿ ಕಟ್ಟಿದ್ದೀರಿ.
    ಮುಂದೆ?

    ಪ್ರತಿಕ್ರಿಯೆ
  6. CHANDRASHEKHAR VASTRAD

    ಸೊಗಸಾದ ಬರಹ. ಕಾರಂತರ ರಂಗಪಾಠ ಕೇಳಿದ ಪುಣ್ಯ ನನಗೂ ಇದೆ. ಉಪಾಧ್ಯಾಯ ಪದ , ನನಗೆ ಗೊತ್ತಿದ್ದಂತೆ ಮೂಲತ: ಪಾಲಿ ಭಾಷೆಯ ಉವಜ್ಜಾಯ ದಿಂದ ಬಂದದ್ದು (ಓಂ ಣಮೋ ಉವಜ್ಜಾಯಾ ನಮ: – ಈಗಲೂ ಜೈನರು ಪಠಿಸುವ ಪಂಚಾಣು ಮಂತ್ರಗಳಲ್ಲಿ ಒಂದು). ಆ ಉವಜ್ಜಾಯದಿಂದಲೆ ಕನ್ನಡದ ಓವಜ ಪದ ನಿಷ್ಪನ್ನವಾಗಿರಬೇಕು. ಅದೆ ಮುಂದೆ ಓಜ ಆಯಿತು. {ನಾಡೋಜ ನೆನಪಿಸಿಕೊಳ್ಳಿ) . ಕಾರಂತರ ಕುರಿತ ಮುಂದಿನ ಕಂತು ನಿರಿಕ್ಷಿಸುವೆ.

    ಪ್ರತಿಕ್ರಿಯೆ
  7. Ahalya Ballal

    ಅಕ್ಷರಶಃ kaleidoscope ಸರ್! ಪ್ರತಿ ವಾರ ಅಂಕ(ಣ)ದ ಪರದೆ ಸರಿದಾಗ ಏನು ಕಾದಿದೋ ಎಂಬ ಪ್ರೇಕ್ಷಕ ಸಹಜ ಕುತೂಹಲ!

    ಪ್ರತಿಕ್ರಿಯೆ
  8. Pushparaj Chauta

    ಅಂದು ನಿಮ್ಮ ಜೊತೆ ಕೂತು ರಾಮಚಂದ್ರರಾಯರು ಪ್ರಸ್ತುತ ಪಡಿಸಿದ ಕಾರಂತರ ಬಗೆಗಿನ ಡಾಕ್ಯುಮೆಂಟರಿ ಚಿತ್ರವನ್ನು ವೀಕ್ಷಿಸಿದ್ದನ್ನು ನೆನಪಿಸಿಕೊಂಡೆ. ಚಿತ್ರಣಗಳು ಮತ್ತೆ ಮೂಡಿದುವು ನಿಮ್ಮ ಈ ಬರಹದೊಂದಿಗೆ.

    ಪ್ರತಿಕ್ರಿಯೆ
  9. mandya ramesh

    KAARANTARE KANNA MUNDE NINTU MAATANNADIDAHAAGAYTU !!ASTU CHENDADA LEKHANA…THANKU GURUGALE…AVRA VISHYA MATTE MATTE BAREERI…

    ಪ್ರತಿಕ್ರಿಯೆ
  10. ಫುರೂರವ ಕೆ.ವಿ

    ಕಾರಂತರ ಜೊತೆಗೆ ನಿಮ್ಮ ಬದಲಿಗೆ ನಾನೇ ಹುಬ್ಬಳ್ಳಿಯ ಪೇಟೆಯಲ್ಲಿ ಸುತ್ತಾಡಿದಷ್ಟು ಅಪ್ಯಾಯಮಾನವಾಗಿತ್ತು ನಿಮ್ಮ ಬರಹ. ಅವರ ಬಗ್ಗೆ ಅಲ್ಲಿ ಇಲ್ಲಿ ಕೇಳಿ ಓದಿದ್ದ ನನಗೆ ನಿಮ್ಮ ಬರಹದಿಂದ ಅವರ ಎದುರು ನಿಂತಂತಹ ಅನುಭವ.

    ಪ್ರತಿಕ್ರಿಯೆ
  11. ಸುಧಾ ಚಿದಾನಂದಗೌಡ

    ಎಷ್ಟು ಚೆನ್ನಾಗಿ ಕಣ್ನೆದುರಿಗೆ ತಂದುನಿಲ್ಲಿಸ್ತಿರಿ ಪ್ರಸಂಗಗಳನ್ನು..!
    ನಾವು ನೋಡಿರದ ಕಾರಂತರನ್ನು ಎದುರೇ ಭೇಟಿ ಮಾಡಿಸಿದಂತಾಯ್ತು.
    ಹ್ಯಾಟ್ಸಾಫ್ ಮತ್ತು ಥ್ಯಾಂಕ್ಸ ಸರ್….

    ಪ್ರತಿಕ್ರಿಯೆ
  12. na.damodara shetty

    chennagi odisitu. kaarantharu innuu naalku kade rangaayana maada bayasiddaru embudannu ellaruu opthaare. eradu kade aagide. allige hogi alli thanda katti, thalaa entu saavira sambala jaasthi kodtheve endu sarakaara helidare hogolla anthaare, kaarantharu thayaarisida kallaavidaru. kaaranthara manassu vilavila oddaadade? ii baggenuu belaku chelli..

    ಪ್ರತಿಕ್ರಿಯೆ
  13. narayan raichur

    kaaranthara odanaatavannoo neneyuvude ondu sogasu ; hubballi auto vichara baradeeri – bengaloorindu kelri –
    rangayaana aarambhika kelasagalannu 1986-88 ralli namma bankina yedurigidda andina kannada sanskruti ilaakheyalli maadu -tiddarau. naanoo hogi-bandu maaduttiiddee ; omme allinda aache bandu karantharige ondu auto kodiside – olage kulitha karaantharu auto driverge ” shrreeram centre ge hogappaa ” yendu bittaru ; aa driver kakkaabikki !! nanagu achchari ! “karanthare vaikuntaraju officege anthidrallave ? – yende ” oh!! haudu haudu ” “shreeramPURA ” anta tiddikondru !! …idu bhaavaloka sanchariya mano-gata !!

    ಪ್ರತಿಕ್ರಿಯೆ
  14. mahantesh

    Hi Vajapayee Kaka,
    Very well written about B.V.Kaarant.
    Do you have B.V. Kaaranth Autoboigraphy “Ille iralaare ,allige hogalaare”

    ಪ್ರತಿಕ್ರಿಯೆ
  15. gururaj purohit

    tumba chhanagide. Hampi vv campnallu hige agittu. camp strart agi erdu dinkka kalavaru bittiddraru.

    ಪ್ರತಿಕ್ರಿಯೆ
  16. arathi ghatikaar

    ಈ ಬರಹದ ಮೂಲಕ ಕಾರಂತರನ್ನು ನಿಮ್ಮ ಜೋತೆ ನಮಗೂ ಪರಿಚಯಿಸಿ ಕೊಂಡ ಅನುಭವವೇ ಆಯಿತು :)ಸುಂದರ ಲೇಖನ .

    ಪ್ರತಿಕ್ರಿಯೆ
  17. shrikant prabhu

    ಈ ಸುವರ್ಣ ಮಂದಿರ ದುರ್ಗದ್ ಬೈಲ್ ಸರ್ಕಲ್ ನ್ಯಾಗಿತ್ತು ಅಂತ ನೆಪ್ಪ್ ರಿ. ಎಲ್ಲ ಬಸ್ ಅಲ್ಲೇ ನಿಂದರ್ತಿದ್ವು.ಅಲ್ಲಿಂದ ನ ಹೊಂಡೋವು. ಒಂದು ಧ್ವಜ ಕಂಬ ಇತ್ತ ಹ್ವಾಟೆಲ್ ಮುಂದ.ಒಳ್ಗ ಹೋಗ್ ಬೇಕಂದ್ರ ಸಣ್ಣ ಓಣಿ ಗತೆ ಸಂದಿ ದಾರಿ.ಮಿಸಳ,ಉಸಳಿ ತಿನ್ನಾಕ್ ಎಂದಾರ ಹೋಗ್ತಿದ್ವಿ.ನಮ್ಮ ಜೇ ಜಿ ಕಾಲೇಜ್ ಮಾಸ್ತರ್ ಗೋಳು ಸಿಗ್ತಿದ್ರು ಅಗಾಗ್ಯೆ.ತಪ್ಪಿಸ್ಗೊಳೋದ್ರಾಗ ಸಾಕಾಗತಿತ್ರೆಪ ಅದ ಇರ್ಬೇಕ ನೀವ್ ಹೇಳೋ “ಮಿಸಳ್” ಹ್ವಾಟೆಲ್.(ಹುಬ್ಬಳ್ಳಿ ಭಾಷಾ ಸ್ವಲ್ಪರ ಉಳ್ದೇತೇನ್ ಅಂತ ನೋಡಾಕ ಹಂಗಾ ಬರಿಯೋ ಪ್ರಯತ್ನ ಮಾಡೀನ್ರಿ)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: