ಗೋಪಾಲ ವಾಜಪೇಯಿ ಕಾಲಂ : ನಮಗೆ ದೊರಕಿದ 'ಜೀವಂತ ಗಣಪತಿ'!

ಸುಮ್ಮನೇ ನೆನಪುಗಳು – 34

‘ಸಣ್ಣ ಹುಡುಗರು ನಾವು ಬಣ್ಣಕ್ಕ ಹೆದರವರು…’ ಅಂತ ನಮ್ಮ ಹಿರಿಯ ನಾಟಕಕಾರ ಕಂಬಾರರದೊಂದು ನಾಂದಿ ಪದ್ಯವಿದೆ.
.
ಹೌದು. ನಾವೆಲ್ಲ ಸಣ್ಣ ಹುಡುಗರು. ನಾಟಕದ ಹುಡುಗರು. ಅದಕ್ಕೇ ನಾಟಕವೆಂದರೆ ಇಂದಿಗೂ ನಮಗೆ ಹುಡುಗರ ಉತ್ಸಾಹ. ಆದರೆ, ನಾಟಕವೆಂದರೆ ‘ಹುಡುಗಾಟ’ವಲ್ಲ, ಅದು ‘ಬಣ್ಣಗೆಡಬಾರದು’ ಎಂಬ ಎಚ್ಚರಿಕೆಯನ್ನಿಟ್ಟುಕೊಂಡೇ ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡವರು ನಾವು. ಇವತ್ತಿಗೂ ಆಟಕ್ಕೆ ಮೊದಲು ಗಣಪತಿಯ ಪೂಜೆ ಮಾಡುವವರು.
ಆದರೆ ನಾವು ಮಾಡುವುದು ಮೂರ್ತಿಪೂಜೆಯಲ್ಲ…
.
ನಮಗೊಬ್ಬ ‘ಜೀವಂತ ಗಜಾನನ’ ದೊರಕಿದ್ದಾನೆ…!
ಹೌದು, ಜೀವಂತ ಗಜಾನನ.
.
”ಆಟ ಸುಸೂತ್ರವಾಗಿ ಆರಂಭವಾಗಿ, ಸುಸಂಬದ್ಧವಾಗಿ ಸಾಗಿ, ಯಶಸ್ವಿಯಾಗಿ ಮುಗಿವಂತೆ ಹರಸು…” ಎಂದು ನಾವೆಲ್ಲಾ ಕೇಳಿಕೊಳ್ಳುವುದು ಈ ‘ಗಜಾನನ’ನನ್ನೇ.
.
ಈತ ಬರದಿದ್ದರೆ, ಬಂದು ಬೆನ್ನ ಹಿಂದೆ ಇರದಿದ್ದರೆ ನಮ್ಮ ‘ಆಟ’ವೇ ಸಾಗದು. ಪರವೂರಿನ ನಮ್ಮ ಪ್ರಯೋಗಗಳ ಸಂದರ್ಭದಲ್ಲಿ ಈತ ನಮ್ಮೊಂದಿಗೆ ನಮ್ಮ ವ್ಯಾನಿನಲ್ಲಿ ಇರದಿದ್ದರೆ ನಮಗೆ ಹೊತ್ತೇ ಹೋಗದು. ಈತ ಕೈ ಹಚ್ಚದಿದ್ದರಂತೂ ನಮ್ಮ ಸೆಟ್ಟಿನ ಕೆಲಸ ಬೇಗ ಆಗದು.
.
ಹೌದು.
.
ನಮಗೆ ಬಣ್ಣಕ್ಕೆ ಈ ಗಜಾನನ ಬೇಕು. ಸಂಗೀತ-ಹಾಡುಗಳಿರುವ ನಾಟಕವಾದರೆ ಪೇಟಿ ಸಾಥಿಗೆ ಈ ಗಜಾನನ ಬೇಕು. ನಾಟಕದಲ್ಲಿ ಮುಖವಾಡ, ಪೇಟ, ಕಿರೀಟ, ವಿಗ್ ಇತ್ಯಾದಿಗಳ ಅವಶ್ಯಕತೆ ಇದ್ದರೆ ಈ ಗಜಾನನ ಬೇಕು. ಸ್ಟೇಜಿನ ಕೆಲಸ ನಡೆದಾಗ ಬೇಸರ ಕಳೆಯಲು ಈ ಗಜಾನನ ಹಾಡಲೇಬೇಕು. ನಾಟಕ ಮುಗಿದ ಮೇಲೆ ಪ್ರಯೋಗದ ಓರೆ-ಕೋರೆಗಳನ್ನು ಅರಿತುಕೊಳ್ಳಲು ಈ ಗಜಾನನ ಬೇಕು. ಅಲ್ಲಿಂದ ಹೊರಟು ಮತ್ತೆ ನಮ್ಮ ಊರಿಗೆ ಮರಳುವಾಗ ದಾರಿಯುದ್ದಕ್ಕೂ ನಮಗೆ ಈತನ ಗಾಯನ ಬೇಕು.
.
ಹುಬ್ಬಳ್ಳಿ-ಧಾರವಾಡ ಸೀಮೆಯ ಹವ್ಯಾಸಿ ತಂಡಗಳಿಗಂತೂ ‘ಮನೆಯ ಹಿರಿಯ ಸದಸ್ಯ’ನ ಹಾಗೆ ಈ ಮಹಾಲೆ. ಆ ತಂಡದ ನಾಟಕವಿರುವ ದಿನ ರಂಗಮಂದಿರದಲ್ಲಿ ಎಲ್ಲರಿಗಿಂತ ಮೊದಲು ಕಾಲಿರಿಸಿ,  ತಮ್ಮ ಪಾಡಿಗೆ ತಯಾರಿ ಮಾಡಿಕೊಂಡು ಕಾದು ಕೂತಿರುತ್ತಾರೆ. ಎಷ್ಟೇ ಪಾತ್ರಗಳಿರಲಿ, ಎಲ್ಲರನ್ನೂ ಸಮಾಧಾನದಿಂದ ‘ರೂಪಾಂತರ’ಗೊಳಿಸಿ, ಆಮೇಲೊಂದು ಪ್ರೀತಿಯ ಹಸ್ತಲಾಘವವನ್ನಿತ್ತು, ”ಗಡಿಬಿಡಿ ಮಾಡಿಕೋಬ್ಯಾಡ್ರಿ. ಚುಲೋ ಮಾಡಬೇಕ ನೋಡ್ರಿ ಪಾರ್ಟು…” ಅಂತ ಹುರುಪು ತುಂಬುತ್ತಾರೆ.
.
ಶುದ್ಧ-ಸಿದ್ಧಹಸ್ತ ಈ ಗಜಾನನ… ನಗುಮುಖದ, ನಯ ನಾಜೂಕಿನ ವ್ಯಕ್ತಿ ಈ ಗಜಾನನ… ನಾಟಕೀಯ ವ್ಯವಹಾರಗಳಿಲ್ಲದ ನಿಗರ್ವಿ ಈ ಗಜಾನನ…
.
ಇದೇನಿದು, ಬರೀ ‘ಸೂಪರ್ ಲೇಟಿವ್’ಗಳೇ ಆಯಿತು ಎಂಬ ಭಾವನೆ ಬೇಡವೇ ಬೇಡ. ಗಜಾನನ ಮಹಾಲೆಯ ಬಗ್ಗೆ ನಾನಲ್ಲ, ಬೇರೆ ಯಾರೇ ಬರೆದರೂ ಅವರು ಬಳಸುವುದೂ ‘ಸೂಪರ್ ಲೇಟಿವ್’ಗಳನ್ನೇ…
.
ಯಾರಾದರೂ ಮಹಾಲೆಯನ್ನು ಬೈದದ್ದನ್ನಾಗಲೀ, ಇಲ್ಲವೇ ಮಹಾಲೆ ಯಾರನ್ನಾದರೂ ಬೈದದ್ದನ್ನಾಗಲೀ ಯಾರ ಮೇಲಾದರೂ ಕೋಪಿಸಿಕೊಂಡದ್ದನ್ನಾಗಲೀ ಈ ತನಕ ಯಾರೂ ನೋಡಿಲ್ಲ, ಯಾರೂ ಕೇಳಿಲ್ಲ…
.
ಗಜಾನನ ನನ್ನ ಪಾಲಿಗಂತೂ ಮರೆಯಲಾಗದ ಮಹಾನುಭಾವ.
.
ಇದೀಗ ತನ್ನ ಎಂಬತ್ತು ಮೀರಿದ ವಯಸ್ಸಿನಲ್ಲಿಯೂ ಯಾರಿಗೋ ಸಂಗೀತದ ಸಾಥಿ ನೀಡಲೆಂದೋ, ಇನ್ನಾರದೋ ಮಗುವಿಗೆ ಮೋಜಿನ ವೇಷದ ಮೇಕಪ್ಪಿಗೆಂದೋ, ಅಥವಾ  ಇನ್ನಾವುದೋ ತಂಡದ ನಾಟಕ ಕಲಾವಿದರ ಪ್ರಸಾಧನಕ್ಕೆಂದೋ ಈ ಗಜಾನನ ಸೈಕಲ್ ಏರಿ ಸಾಗುತ್ತಿರುವುದನ್ನು ಧಾರವಾಡದಲ್ಲಿ ಇಂದಿಗೂ ಕಾಣಬಹುದು.
.
ಆರು ದಶಕಗಳಿಗಿಂತ ಹೆಚ್ಚು ಕಾಲದಿಂದ ‘ಬಣ್ಣದ ಲೋಕ’ದಲ್ಲಿ ಸದ್ದಿಲ್ಲದಂತೆ ವಿಹರಿಸುತ್ತಿರುವ ಸಿದ್ಧಿಪುರುಷ ಈತ. ಇತರರ ಮುಖಕ್ಕೆ ಬಣ್ಣ ಬಳಿದು, ಅವರನ್ನು ‘ಬೆಳಕಿಗೆ ಕಳಿಸು’ತ್ತ, ತಾನು ಮಾತ್ರ ನೇಪಥ್ಯದಲ್ಲೇ ಉಳಿದುಬಿಡುವ ದೊಡ್ಡ ಗುಣ ಆತನದು. ‘ತನ್ನ ಬಣ್ಣಿಸಬೇಡ ಇದಿರು ಹಳಿಯಲಿ ಬೇಡ’ ಎಂಬ ಅಣ್ಣನ ವಾಣಿಯನ್ನು ಅಕ್ಷರಶಃ ಆಚರಣೆಯನ್ನಾಗಿ ಮಾಡಿಕೊಂಡ ಮಹಾಲೆ ನನಗೆ 1975ರಿಂದಲೂ ಬಣ್ಣ ಹಚ್ಚುತ್ತ ಬಂದವರು.
.
ಗಜಾನನ ಮಹಾಲೆ
ಈ ಮೊದಲು ಹೈದರಾಬಾದಿನಲ್ಲಿದ್ದಾಗ ಆಗಲಿ, ಈಗ ಇಲ್ಲಿ ಬೆಂಗಳೂರಲ್ಲಿ ಇರುವಾಗ ಆಗಲಿ, ಆಗೀಗ ಗಜಾನನ ಮಹಾಲೆಯೊಂದಿಗೆ ಒಂದಷ್ಟು ಹೊತ್ತು ಫೋನಿನಲ್ಲಿ ಮಾತಾಡಿದಾಗಲೇ ನನಗೆ ಸಮಾಧಾನ. ಅಷ್ಟೇ ಅಲ್ಲ, ಧಾರವಾಡಕ್ಕೆ ಹೋದಾಗ ನಾನು ತಪ್ಪದೇ ಭೇಟಿಯಾಗುವ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ಮಹಾಲೆ ಖಂಡಿತವಾಗಿಯೂ ಮೊದಲಿನವರು.
-೦-೦-೦-೦-೦-
ಹೇಳಿದೆನಲ್ಲ, ಮಹಾಲೆಯ ‘ಬಣ್ಣದ ಲೋಕ’ದ ನಂಟು ಕಳೆದ ಆರು ದಶಕಗಳಿಗಿಂತ ಹೆಚ್ಚು ಕಾಲದ್ದು ಅಂತ… ಈ ಸುದೀರ್ಘ ಯಾತ್ರೆಯಲ್ಲಿ ಮಹಾಲೆ ‘ಎಂಥೆಂಥ’ ಮುಖಗಳನ್ನು ಕಂಡಿದ್ದಾರೆ…? ಎಂಥೆಂಥವರ ಮುಖಗಳನ್ನು ಕಂಡಿದ್ದಾರೆ…? ಎಂದು ತಿಳಿದುಕೊಳ್ಳುವುದು ಒಂದು ನಿಟ್ಟು. ಪ್ರಸಾಧನವಲ್ಲದೆ ಗಜಾನನ ಮಹಾಲೆ ಮತ್ತೆ ಯಾವ ಯಾವುದರಲ್ಲಿ ಸಿದ್ಧಹಸ್ತ ಎಂದು ಅರಿತುಕೊಳ್ಳುವುದು ಇನ್ನೊಂದು ನಿಟ್ಟು.
.
ಶ್ರೀರಂಗ, ದ.ರಾ. ಬೇಂದ್ರೆ, ಜಿ.ಬಿ., ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಗಿರೀಶ ಕಾರ್ನಾಡ, ಬಿ.ವಿ. ಕಾರಂತ, ವಿ. ರಾಮಮೂರ್ತಿ  ಮೊದಲಾದ ಮಹನೀಯರೆಲ್ಲ ಈ ಹಿರಿಯನ ‘ಕೈ’ಯನ್ನು ಬಲ್ಲವರು. ಅಂಥ ಹಿರಿಯರಿಂದ ಮೊದಲುಗೊಂಡು ಈಚೀಚಿನ ‘ಬಣ್ಣದ ಹುಚ್ಚಿನ’ ಹುಡುಗರ ತನಕವೂ ಗಜಾನನ ಮಹಾಲೆ ಮುಟ್ಟಿ ತಟ್ಟಿದ ಮುಖಗಳೆಷ್ಟೋ…
.
ಈ ಯಾತ್ರೆಯಲ್ಲಿ ಮಹಾಲೆಗೆ ಆದ ಅನುಭವಗಳೂ ಅಷ್ಟೇ ವೈವಿಧ್ಯಮಯ.
.
ಮಹಾಲೆಯೊಂದಿಗೆ ಆಗೀಗ ಮಾತಾಡುತ್ತ, ಅಷ್ಟಿಷ್ಟು ವಿಷಯ ಸಂಗ್ರಹಿಸುತ್ತ, ಒಂದೆಡೆ ಮುಚ್ಚಿಟ್ಟಿದ್ದ ನೆನಪಿನ ಗಂಟನ್ನು ಈಗ ನಿಮ್ಮೆದುರು ಬಿಚ್ಚಿಡುತ್ತಿದ್ದೇನೆ.
-೦-೦-೦-೦-೦-
ಗದಗಿನ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮಿಗಳಿಂದ  ಮಹಾಲೆ ದಂಪತಿಗೆ ಸನ್ಮಾನ
ಹುಟ್ಟಿದ್ದು ಅಂಕೋಲಾದಲ್ಲಿ 1932ರಲ್ಲಿ. ತಿಂಗಳು, ದಿನ ಎರಡೂ ಗೊತ್ತಿಲ್ಲ. ಆದರೆ ಶಾಲೆಗೆ ಹೆಸರು ಹಚ್ಚುವಾಗ ವಯಸ್ಸು ಮೀರಿದ್ದರಿಂದ ನಾಲ್ಕು ವರ್ಷ ಕಿರಿಯನನ್ನಾಗಿ ಮಾಡಿದರಂತೆ. ಹೀಗಾಗಿ ಸರ್ತಿಫಿಕೆಟ್ಟಿನ ಪ್ರಕಾರ ಮಹಾಲೆ ಹುಟ್ಟಿದ್ದು 1936ರಲ್ಲಿ…! ಬಡತನದಲ್ಲೇ ಹುಟ್ಟಿ , ಬಡತನದಲ್ಲೇ ಬೆಳೆದು, ಬಡತನದಲ್ಲೇ ಬಾಳುತ್ತಿರುವ ಈ ‘ಹೃದಯಶ್ರೀಮಂತ’ನ ಮನೆಮಾತು ಕೊಂಕಣಿ. ಅವರದು ಕ್ಷೌರಿಕ ವೃತ್ತಿ. ಅದು ಅವರ ಕುಲಕಸುಬು. ಅಜ್ಜ, ಅಪ್ಪ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲರೂ ಮೇಕಪ್ ಕಲೆಯಲ್ಲಿ ಸಿದ್ಧಹಸ್ತರು. ಪಲ್ಪ್ ಮತ್ತು ಮಣ್ಣುಗಳಿಂದ ಗಣಪತಿ, ಶಾರದಾ ಇತ್ಯಾದಿಗಳನ್ನು ತಯಾರಿಸುತ್ತಿದ್ದ ಮೂರ್ತಿಕಾರರು. ದೊಡ್ಡಪ್ಪ ನಾಗಪ್ಪ ಮಹಾಲೆ ಆಗಿನ ಸುಪ್ರಸಿದ್ಧ ಗರೂಡ ಸದಾಶಿವರಾಯರ ನಾಟಕ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದವರು. ಅಪ್ಪ ಹರಿಕೃಷ್ಣ ಮಹಾಲೆ. ನಾಟಕಗಳಿಗೆ ಮೇಕಪ್ ಅಲ್ಲದೆ ತಬಲಾ ಸಾಥಿಯನ್ನೂ ಮಾಡುತ್ತಿದ್ದರು. ಕೆಲವೊಮ್ಮೆ ಪಾತ್ರಗಳನ್ನೂ ವಹಿಸುತ್ತಿದ್ದರು. ಅದೆಲ್ಲ ಮಗನಲ್ಲಿಳಿಯಿತು. ಗಣಪತಿ ಮಾಡಲೆಂದೇ ಕೆಲವು ಕಾಲ ಚಿಕ್ಕಪ್ಪನೊಂದಿಗೆ ಮುಂಬಯಿಗೆ ಹೋಗಿದ್ದ ಮಹಾಲೆ ಚಿತ್ರಕಲೆಯಲ್ಲೂ ಸಾಧನೆ ಮಾಡಿದ್ದಾರೆ. ಇದರಲ್ಲಿ ಅವರದು ಏಕಲವ್ಯನ ರೀತಿಯ ಕಲಿಕೆ. ಪಲ್ಪಿನಿಂದ ಕಿರೀಟ, ಮುಖವಾಡ ; ನಾರಿನಿಂದ ವಿಗ್  ; ಕಾಗದದಿಂದ ಹೂವು-ಗಿಡಮರಗಳ ಪ್ರತಿಕೃತಿಗಳು ಇತ್ಯಾದಿಗಳ ತಯಾರಿಕೆ ಮಹಾಲೆ ‘ನೋಡಿ ತಿಳಿ’ದು-‘ಮಾಡಿ ಕಲಿ’ತಂಥ ಕಲೆಗಳು.
.
1945ರ ಸುಮಾರಿಗೆ ದೊಡ್ಡಪ್ಪ ನಾಗಪ್ಪ ಮಹಾಲೆ ಧಾರವಾಡದಲ್ಲಿ ಒಂದು ‘ಕೇಶಕರ್ತನಾಲಯ’ವನ್ನು ಆರಂಭಿಸಿ ತಮ್ಮನನ್ನೂ ಇಲ್ಲಿಯೇ ಕರೆಸಿಕೊಂಡರು. ಹೀಗೆ ತಂದೆಯೊಂದಿಗೆ ಧಾರವಾಡಕ್ಕೆ ವಲಸೆ ಬಂದ ಗಜಾನನ ಮಹಾಲೆಗೆ ಅಂದಿನಿಂದ  ಧಾರವಾಡವೇ ಸ್ವಂತ ಊರು. ಆಗ ಧಾರವಾಡದಲ್ಲಿದ್ದ ಪ್ರೊಫೆಸರುಗಳು, ಸಾಹಿತಿಗಳು, ಅಧಿಕಾರಿವರ್ಗದವರು ಇತ್ಯಾದಿ ಎಲ್ಲ ಮಹಾ ಮಹಾ ಪ್ರತಿಭಾವಂತರು.
.
”ಕರ್ನಾಟಕ ಕಾಲೇಜಿನ ಪ್ರಿನ್ಸಿಪಾಲ್ರು, ಎಲ್ಲಾ ಪ್ರೊಫೆಸರು, ಮತ್ತ ಊರಾಗಿನ ದೊಡ್ಡ ದೊಡ್ಡ ಮಂದಿಗೆ ನಮ್ಮ ತಂದಿನs ಫ್ಯಾಮಿಲಿ ಬಾರ್ಬರು. ಅವರೆಲ್ಲಾ ಸೇರಿ ಕರ್ನಾಟಕ ಕಾಲೇಜಿನ ಆವರಣದ ಒಂದು ಖೋಲೀ (ಕೋಣೆ) ಕೊಟ್ರು. ಅಲ್ಲೇ ನಾ ತಂದೀ ಜೊತಿ ಇರ್ತಿದ್ದೆ. ಅವ್ವ ಮೊದ್ಲೇ ಅಂಕೋಲಾದೊಳಗೇ ತೀರಿಕೊಂಡಿದ್ಲು. ನನ್ನ ಅಕ್ಷರಾಭ್ಯಾಸ ಬರೇ ಯೋಳನೆ ಕ್ಲಾಸ್ ತನಕಾ. ಆದ್ರ ಬದುಕು ನನಗ ಭಾಳ ಭಾಳ ಕಲಿಸ್ತ್ಯು ನೋಡ್ರಿ…” ಎಂದು ನಗುತ್ತಾರೆ ವಿನೀತಭಾವದ ಮಹಾಲೆ.
.
ಮಗ ಮದುವೆಯ ವಯಸ್ಸಿಗೆ ಬಂದರೂ ಆತನಿಗೆ ಹೆಣ್ಣು ನೋಡುವ ಬದಲು ಅಪ್ಪ ತಾವೇ ಮತ್ತೊಂದು ಮದುವೆಯಾದರು. ಇಪ್ಪತ್ತೈದರೊಳಗಿನ ಮಗ ಬೇರೆ ಮನೆ ಮಾಡಬೇಕಾಯಿತು. ಹೀಗೆ ಏಕಾಏಕಿ ಹೊರಬಿದ್ದಾಗ ಹೊಟ್ಟೆಪಾಡಿಗೆ ಏನಾದರೂ ಬೇಕಲ್ಲ… ಅದಾಗಲೇ ರೂಢಿಸಿಕೊಂಡಿದ್ದ ಕಲೆ ಕೈಬಿಡಲಿಲ್ಲ.
.
ರಂಗಭೂಮಿಯ ಹಿರಿಯ ಏಣಿಗಿ ಬಾಳಪ್ಪ ಅವರಿಂದ ಮಹಾಲೆಗೆ ಅಭಿನಂದನೆ
ಕ್ರಮೇಣ ಗಜಾನನ ಮಹಾಲೆ ಮೇಕಪ್ಪಿಗೆ ಹೆಸರಾದರು.
”ಅಂದ್ರ… ನಿಮ್ಮ ಈ ಬಣ್ಣದ ನಂಟು ಸುರೂ ಆದದ್ದು 1955ರ ಸುಮಾರಿಗೆ ಅಂತಾತು…”
”ಇಲ್ಲಿಲ್ಲ… 1947ರ ಸುಮಾರಿಗೆ… ನಮ್ಮ ತಂದಿ ಮೇಕಪ್ ಮಾಡ್ತಿದ್ರು ಅಂತ  ಹೇಳೀದ್ನೆಲ್ಲಾ. ಕರ್ನಾಟಕ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನಾ, ಕ್ಲಾಸ್ ಡೇ, ಮತ್ತ  ಊರೊಳಗಿನ ನಾಟಕಾ ಇವೆಲ್ಲಾಕ್ಕೂ ನಮ್ಮ ತಂದಿನs ಮೇಕಪ್ಪಿಗೆ ಹೋಗ್ತಿದ್ರು. ನಾನು ಅವರ ಅಸಿಸ್ಟಂಟ್ ಆಗಿ ಸಣ್ಣ ಪುಟ್ಟ ಪಾರ್ಟಿನ ಮಂದಿಗೆ ಬಣ್ಣಾ ಬಳೀತಿದ್ದೆ. ಆದ್ರ ಅದು ಭಾಳ ರಫ್ ಮೇಕಪ್ ಅಂತ ಅನಸ್ಲಿಕ್ಕೆ ಶುರು ಆತು. ಅದನ್ನ ಹ್ಯಾಂಗ ಸುಧಾರಸಬೇಕು ಅಂತ ವಿಚಾರ ಮಾಡಲಿಕ್ಕೆ ಹತ್ತಿದೆ… ದಿನಗಳಧಂಗ ಅದು ಸಾಧ್ಯಾತು.”
.
ಆಗಿನ್ನೂ ಗಜಾನನ ಹದಿನಾರರಲ್ಲಿ ಕಾಲಿರಿಸಿದ್ದರು. ಆದರೂ ಆ ಕಾಲದಲ್ಲೇ ನಾಟಕಕಾರ ಶ್ರೀರಂಗರಿಗೆ ಮೇಕಪ್ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದರು.
”ಆಗ ಟ್ಯಾಗೋರ್ ಹಾಲ್ ಒಂದೇ ಧಾರವಾಡದಾಗ ಇದ್ದ ರಂಗಮಂದಿರ. ಅದು ಇದ್ದದ್ದು ಬಾಸೆಲ್ ಮಿಶನ್ ಹೈಸ್ಕೂಲಿನ ಆವರಣದಾಗ. ಆ ಹೈಸ್ಕೂಲಿನ್ಯಾಗೂ ನಾಟಕ ಚಟುವಟಿಕಿ ನಡೀತಿದ್ವು. ವರದರಾಜ ಹುಯಿಲಗೋಳ್ ಅಂತ ಮಾಸ್ತರು. ಗಿರೀಶ್ ಕಾರ್ನಾಡರ ಗುರುಗಳು. ಆ ಹುಯಿಲಗೋಳ್ ಮಾಸ್ತರು ನಮ್ಮ ತಂದಿನ್ನ ಮೇಕಪ್ಪಿಗೆ ಕರೀತಿದ್ರು. ನಮ್ಮ ತಂದೀ ಹಿಂದ ನಾನು… ಆಗs ಶ್ರೀರಂಗರನ ಮದಲನೆ ಸರ್ತೆ ನಾನು ನೋಡಿದ್ದು. ಅವರು ಗ್ರೀನ್ ರೂಮಿಗೆ ಬಂದ್ರು. ನಾವು ಮೇಕಪ್ಪು ಮಾಡೂದನ್ನ ನೋಡೀದ್ರು. ಮುಂದ ತಮ್ಮ ಒಂದು ನಾಟಕಕ್ಕ ನಮ್ಮನ್ನ ಮೇಕಪ್ಪಿಗೆ ಕರದ್ರು.”
.
”ಯಾವ ನಾಟಕ ಅದು?”
.
”ನೆನಪಿಲ್ರೀ ಸರ್… ಅಂತೂ ಅವರು ಆಗ ಈಗ ಅಂತ ಒಂದೊಂದು ನಾಟಕಾ ಮಾಡ್ತಿದ್ರು. ಅವರೇನೋ ಫಾರೆನ್ನಕ್ಕ ಹೋಗಿ ಬಂದಿದ್ರಂತ. ಅಂತೂ ಶ್ರೀರಂಗರು ಬಂದು ಧಾರವಾಡದಾಗ ನಾಟಕಾ ಮಾಡೀದ್ರ ಬೇಂದ್ರೆ, ಗೋಕಾಕ, ಜಿ. ಬಿ. ಜೋಶಿ ಹಿಂಗs ಧಾರವಾಡದ ಧೊಡ್ಡ ಧೊಡ್ಡ ಮಂದಿ ನೋಡಲಿಕ್ಕೆ ಬರ್ತಿದ್ರು…”
.
ಶ್ರೀರಂಗರ ಅಂಥ ಒಂದು ನಾಟಕಕ್ಕೆ ಸೀನಿಯರ್ ಮತ್ತು ಜ್ಯೂನಿಯರ್ ಮಹಾಲೆ ಇಬ್ಬರೂ ಮೇಕಪ್ಪಿಗೆ ಹೋಗಿದ್ದಾರೆ. ಅಪ್ಪ ಮಗನನ್ನೇ ಶ್ರೀರಂಗರ ಮೇಕಪ್ಪಿಗೆ ನಿಲ್ಲಿಸಿದ್ದಾರೆ. ಆ ದಿನ ಶ್ರೀರಂಗರನ್ನು ಮಹಾಲೆ ಥೇಟ್ ಬೇಂದ್ರೆಯವರಂತೆ ರೂಪಾಂತರಿಸಿಬಿಟ್ಟಿದ್ದಾರೆ… ನಾಟಕ ನಡೆಯುವಾಗ ಎಷ್ಟೋ ಜನ ಬೇಂದ್ರೆಯವರೇ ಆ ನಾಟಕದಲ್ಲಿ ಪಾತ್ರವಹಿಸಿರಬಹುದು ಅಂದುಕೊಂಡಿದ್ದರಂತೆ. ನಾಟಕ ಮುಗಿದು, ಕಲಾವಿದರೆಲ್ಲ ಬಣ್ಣ ಒರೆಸಿಕೊಳ್ಳುವ ಹೊತ್ತಿಗೆ, ಬೇಂದ್ರೆಯವರು ಗ್ರೀನ್ ರೂಂ  ಪ್ರವೇಶಿಸಿದರಂತೆ. ”ಅರೆ…! ನನ್ನ ಮಾರಿ ಕಿತ್ತಿ  ಶ್ರೀರಂಗಗ ಹಚ್ಚಿದವರು ಯಾರಪಾ ಅವ್ರು?” ಅಂತ ಕೇಳಿದರಂತೆ. ಶ್ರೀರಂಗರು ಗಜಾನನ ಅವರತ್ತ ಕೈತೋರಿಸಿದಾಗ, ಬೇಂದ್ರೆ ಬಂದವರೇ ಜ್ಯೂನಿಯರ್ ಮಹಾಲೆಯ ಬೆನ್ನು ಚಪ್ಪರಿಸುತ್ತ, ”ಶಬಾಶ್ ಹುಡಗಾ… ಈ ಕಲಾದೊಳಗ ನೀ ದೊಡ್ಡ ಹೆಸರು ಮಾಡ್ತಿ…” ಅಂತ ಹರಿಸಿದರಂತೆ. ಜತೆಗೇ, ”ಇನ್ನ ಮುಂದ ನೀ ಎಂದಿಗೂ ‘ಹಿಂಗ್’ ಮಾಡಬ್ಯಾಡಪಾ ಮಾರಾಯಾ… ಈ  ಶ್ರೀರಂಗ ನನ್ನ ವೇಷಾ ಹಾಕ್ಕೊಂಡು ಹೊಂಟ್ ಗಿಂಟಾನ್ ಮತ್ತ…” ಅಂತ ನಕ್ಕರಂತೆ.
.
ನಿಮಗೆ ಉಭಯಗಾನ ವಿಶಾರದ ಪಂ. ಬಸವರಾಜ ರಾಜಗುರು ಅವರು ಗೊತ್ತಲ್ಲ… ರಾಜಗುರುಗಳನ್ನು ಒಬ್ಬ ‘ರಾಜಪುರುಷ’ನನ್ನಾಗಿ ರೂಪಾಂತರಿಸಿ ನಿಲ್ಲಿಸಿದರಂತೆ ನಮ್ಮ ಗಜಾನನ ಮಹಾಲೆ. ನಿಲುವುಗನ್ನಡಿಯಲ್ಲಿ ತಮ್ಮನ್ನು ತಾವು ಮತ್ತೆ ಮತ್ತೆ ನೋಡಿಕೊಂಡ ಪಂ. ರಾಜಗುರು ಅವರು ಕೂಡಲೇ ಒಬ್ಬ ಫೋಟೋಗ್ರಾಫರನನ್ನು ಕರೆಸಿ, ಫೋಟೋ ತೆಗೆಸಿಕೊಂಡರಂತೆ. ಆ ಆರಡಿಯ ನಿಂತ ಭಂಗಿಯ ಚಿತ್ರವಿನ್ನೂ ಧಾರವಾಡದಲ್ಲಿ ರಾಜಗುರು ಅವರ ಮನೆಯ ಅವರ ಖಾಸಾ ಕೋಣೆಯಲ್ಲಿ ಇದೆಯಂತೆ.
.
‘ರಂಗಜಂಗಮ’ ಬಿ.ವಿ. ಕಾರಂತರಿಗೂ ತಾವೊಮ್ಮೆ ಮೇಕಪ್ ಮಾಡಿದ್ದೆ ಎಂಬ ಹೆಮ್ಮೆ ಮಹಾಲೆಗೆ.
.
ಬಿಳಿ ನಾರಿನಿಂದ ವಿಗ್ ತಯಾರಿಸಿ ಒಬ್ಬ ಪ್ರೊಫೆಸರರನ್ನು ಬ್ರಿಟಿಶ್ ಆಫೀಸರ್ ಆಗಿ ಮಾರ್ಪಡಿಸಿದ್ದು ಮಹಾಲೆಯ ಮತ್ತೊಂದು ಸವಿ ನೆನಪು.
.
ಮೇಕಪ್ ಮಾಡಿ ಮುಗಿಸಿದ ಮೇಲೆಯೂ ಕೊನೆಯ ಟಚ್ ನೀಡುವದು ಮಹಾಲೆಯ ಕಾಳಜಿಗೆ ಸಾಕ್ಷಿ
ಮೇಕಪ್ ಆರ್ಟಿಸ್ಟ್ ಆಗಿ ಮಹಾಲೆ ಅವರ ಬದುಕಿನ ಇನ್ನೊಂದು ವಿಶಿಷ್ಟ ರೋಮಾಂಚಕಾರಿ ಅನುಭವವನ್ನು ದಾಖಲಿಸದೇ ಹೋದರೆ ಖಂಡಿತವಾಗಿಯೂ ಈ ಅಂಕಣ ಅಪೂರ್ಣವೆನಿಸುತ್ತದೆ.
ಅದನ್ನು ಅವರ ಬಾಯಿಂದಲೇ ಕೇಳಿ…
.
”ಧಾರವಾಡದ ಕರ್ನಾಟಕ ಕಾಲೇಜಂದ್ರ ಮದಲಿನಿಂದನೂ ಹಂಗsರಿ… ಅಲ್ಲೇ ಭಾರೀ ಭಾರೀ ಶ್ಯಾಣ್ಯಾ ಮಂದಿ ಪ್ರೋಫೆಸರು, ಪ್ರಿನ್ಸಿಪಾಲರು ಆಗಿ ಹೋದ್ರು. ಅಂಥವರ ಪೈಕಿ ಪ್ರೊ. ಮೆನೆಜಿಸ್ ಅವರನ ಮರಿಯಾಕs ಸಾದ್ಧಿಲ್ಲಾ. ಅವರ ಮನೀ ಮಂದೆಲ್ಲಾ ನಮಗ ಆತ್ಮೀಯರು. ಪ್ರೊ. ಮೆನೆಜಿಸ್ ಅವರ ಹಿರೇ ಮಗಾ ಎನಿಕೋ ಅಂತ. ತಮ್ಮನ ಜತೀಗೆ ಇಂಗ್ಲಿಷ್ ನಾಟಕಾ ಮಾಡ್ತಿದ್ರು  ಎನಿಕೋ. ನಂದs ಮೇಕಪ್ ಅವರಿಗೆ. ಭಾಳ ಮೆಚಿಗೋತಿದ್ರು ನನ್ನ ಕೆಲಸಾನ. ಈ ಎನಿಕೋ ಮುಂದ ಗೋವಾ ವಿಮೋಚನಾ ಚಳುವಳಿ ಸೇರಿ ಅದರ ನಾಯಕರಾದ್ರು. ಭೂಗತರಾಗಿ ಕೆಲಸಾ ಮಾಡ್ತಿದ್ರು. ಅವತ್ತೊಂದಿನಾ ಧಾರವಾಡಕ್ಕ ಬಂದ್ರು. ‘ನನ್ನ ಜೋಡಿ ಗೋವಾಕ್ಕ ನಡಿ’ ಅಂದ್ರು. ಯಾಕ ಏನು ಅಂತ ಹೇಳ್ಲೇ ಇಲ್ಲಾ… ನಾ ಗೋವಾಕ್ಕ ಹೋದೆ. ಹದಿನೈದು ದಿನಾ ಅಲ್ಲಿದ್ದೆ. ದಿನಾನೂ ಬ್ಯಾರೆ ಬ್ಯಾರೆ ವೇಷಾ ಹಾಕಬೇಕು ಅವರಿಗೆ. ಬ್ಯಾರೆ ಬ್ಯಾರೆ ಮೇಕಪ್ ಮಾಡಬೇಕು. ನಾನೂ ಮಾಡಿಕೋಬೇಕು… ಹಿಂಗ್ಯಾಕ ಅಂತ ಕೇಳೀದ್ರ ಏನೂ ಹೇಳತಿದ್ದಿಲ್ಲಾ… ಸುಮ್ನ ನಗತಿದ್ರು. ಅವರ ಕೂಡ ತಿರಗಾಡಬೇಕು ನಾ… ಅಂತೂ ಹದಿನಾರನೇ ದಿನಾ ನನ್ನ ಧಾರವಾಡಕ್ಕ ತಿರಗಿ ಕಳಿಸೀದ್ರು… ಆಮ್ಯಾಲ ಒಂದು ದಿನಾ ಪೇಪರಿನ್ಯಾಗ ಎನಿಕೋ ಅವರನ ಬಂಧಿಸಿದ ಸುದ್ದಿ, ಜೇಲಾದ ಸುದ್ದಿ ದೊಡ್ಡ ಅಕ್ಷರದಾಗ ಬಂತು. ಓದಿ ನನ್ನ ಎದೀ ನಡಗಿತ್ಯು… ಒಂದ್ ವ್ಯಾಳ್ಯಾ ನಾನೂ ಪೋಲೀಸರಿಗೆ ಸಿಕ್ಕಿದ್ರ…?”
-೦-೦-೦-೦-೦-
ಮಹಾಲೆ ಮಣ್ಣನ್ನೂ ಮಾತಾಡಿಸಬಲ್ಲರು… ಕಾಗದದಲ್ಲೂ ಕಲೆಯನ್ನು ಅರಳಿಸಬಲ್ಲರು… ತಮ್ಮ ನಡೆ-ನುಡಿಯಿಂದ ನಮ್ಮ ಮನಸ್ಸುಗಳನ್ನಂತೂ ಎಂದಿನಿಂದಲೂ ಅರಳಿಸುತ್ತಲೇ ಬಂದಿದ್ದಾರೆ.
ಅವರ ಬಗ್ಗೆ ಇನ್ನಷ್ಟು ವಿವರಗಳು ಮುಂದಿನ ಕಂತಿನಲ್ಲಿ…

‍ಲೇಖಕರು avadhi-sandhyarani

February 3, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

20 ಪ್ರತಿಕ್ರಿಯೆಗಳು

  1. ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ.

    ಗಜಾನನ ಮಹಾಲೆಯವರು ಈ ನೆಲದ ಪ್ರಸಾಧನ ಕಲೆಯ ಅಪ್ಪಟ ಚಿನ್ನ.ನಾನು ಧಾರವಾಡ ಕ.ವಿ.ವಿ.ಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ ಅವರ ಪ್ರಸಾಧನ ಕಲೆಯ ಕೈಚಳಕವನ್ನು ನಾನೂ ಅನುಭವಿಸಬೇಕಾಯಿತು.ಇಂಥ ಅಪ್ರತಿಮ ರಂಗ ಪ್ರತಿಭೆಗಳ ಬಗೆಗಿನ ತಮ್ಮ ವಿವರಣೆಗಳು ತುಂಬಾ ಆಪ್ತವಾಗಿ ಬರುತ್ತಿವೆ.ಅಭಿನಂದನೆಗಳು.

    ಪ್ರತಿಕ್ರಿಯೆ
  2. Ahalya Ballal

    ಮಹಾಲೆಯವರ ಕೈಚಳಕ ಮತ್ತು ಅನುಭವದ ಹಿನ್ನೆಲೆಯ ಮೇಲೆ ನೀವು ಹಾಕಿರುವ ಈ spotlight ಗಾಗಿ ಧನ್ಯವಾದಗಳು, ಗೋಪಾಲ್ ಸರ್! ನನಗೂ ನಮ್ಮ ತಂಡದವರಿಗೂ ಬೆಳಗಾಂವಿಯಲ್ಲಿ ಅವರು ಬಣ್ಣ ಹಚ್ಚುವಾಗ ಇಷ್ಟೆಲ್ಲಾ ಗೊತ್ತಿರಲಿಲ್ಲ. ಅವರು ಎಂಥೆಂಥವರಿಗೆ ಬಣ್ಣ ಹಾಕಿ ವೇಷ ತೊಡಿಸಿದ್ದಾರೆ ಎನ್ನುವುದನ್ನು ಗಮನಿಸಿದರೆ ಸಾಕು….
    ” ಎಂದರೋ ಮಹಾನುಭಾವುಲು ಅಂದರೀಕಿ ವಂದನಮುಲು…”

    ಪ್ರತಿಕ್ರಿಯೆ
  3. Badarinath Palavalli

    ಗಜಾನನ ಮಹಾಲೆ ಅವರಂತಹ ಅವಿಶ್ರಾಂತ ರಂಗಕರ್ಮಿಗೆ ಇನ್ನೂ ಹೆಚ್ಚಿನ ಗೌರವ ಸಮ್ಮಾನ ಮತ್ತು ಅರ್ಥಿಕ ಭದ್ರತೆ ದೊರೆಯುವಂತಾಗಬೇಕು.

    ಪ್ರತಿಕ್ರಿಯೆ
  4. Santhoshkumar LM

    ಮಹಾಲೆಯಂತಹ ತೆರೆಮರೆಯಲ್ಲಿ ನಿಂತು ಸೇವೆ ಸಲ್ಲಿಸುತ್ತಿರುವ ಅನೇಕರು ದಶಕಗಳ ನಂತರದಲ್ಲೂ ಆರ್ಥಿಕ ಸ್ಥಿತಿಯಲ್ಲಿ ಸಂಕಷ್ಟದಲ್ಲಿದ್ದಾರೆ. ಅವರ ಶ್ರಮ/ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ಇವರನ್ನು ಪರಿಚಯಿಸುತ್ತಿರುವ ನಿಮ್ಮ ಹೃದಯವೂ ದೊಡ್ಡದು.ನಿಮ್ಮ ಲೇಖನವನ್ನೊಮ್ಮೆ ಅವರ ಮುಂದೆ ನಿಂತು ಓದಿಬಿಡಿ ವಾಜಪೇಯಿ ಸರ್. ಮುಗ್ಧ ಜೀವದ ಮುಖದಲ್ಲೊಂದು ನಗೆ ಮೂಡಬಹುದು!!

    ಪ್ರತಿಕ್ರಿಯೆ
  5. umesh desai

    ಮಹಾಲೆ ಅವರ ಬಗ್ಗೆ ಅಲ್ಲಲ್ಲಿ ಕೇಳಿದ್ದೀತ್ತು..ನಿಮ್ಮ ಲೇಖನ ಪೂರ್ತಿ ಪರಿಚಯ ಮಾಡಿಸ್ತು..

    ಪ್ರತಿಕ್ರಿಯೆ
  6. Sanjeev Sirnoorkar

    ನಿಜಕ್ಕೊ ಬಣ್ಣದ ಸೆಳೆತವೇ ಅಂಥದ್ದು. ರಂಗಭೂಮಿಯ ಮಡಿಲಲ್ಲಿ ಗಜಾನನ ಮಹಾಲೆಯವರಂತಹ ಮಹನೀಯರು ಆಗಣ್ಯ. ಇವರ ಬಗ್ಗೆ ಬಹಳ ಸುಂದರವಾಗಿ ಲೇಖನ ಒಡಮೂಡಿದೆ. ಇವರೆಲ್ಲ ತೆರೆಮರೆಯ ಪ್ರತಿಭಾ ದೈತ್ಯರು. ಇವರ ನಿಸ್ವಾರ್ಥ ಬದುಕು ಇಂದಿನ ನಮ್ಮ ಯುವ ಜನಾಂಗಕ್ಕೆ ಮಾದರಿ. ಗುರುಗಳೇ ಲೇಖನ ಭಾಳ್ ಚಂದ್ ಬಂದದ್ರಿ………

    ಪ್ರತಿಕ್ರಿಯೆ
  7. Anitha Naresh

    ಮಹಾಲೆ ಮಣ್ಣನ್ನೂ ಮಾತಾಡಿಸಬಲ್ಲರು… ಕಾಗದದಲ್ಲೂ ಕಲೆಯನ್ನು ಅರಳಿಸಬಲ್ಲರು…ನೀವು ಅಕ್ಷರಗಳಲ್ಲಿ ಅವರನ್ನು ಹಿಡಿದಿರಿಸಿದ್ದೀರಿ.. ಇಷ್ಟ ಆಯ್ತು ಲೇಖನ

    ಪ್ರತಿಕ್ರಿಯೆ
  8. Rekha Nataraj

    ರಂಗಭೂಮಿಯ ತೆರೆಮರೆಯಲ್ಲ್ಲಿ ರಂಗಸೇವೆ ಮಾಡುವ ಇನ್ನೆಷ್ಟು ಮಂದಿ ಹೀಗೆ ಕಾಲಗರ್ಭದಲ್ಲಿ ಸರಿದು ಹೋಗಿದ್ದಾರೋ ! ನಿಮ್ಮಿಂದ ಶ್ರೀ ಗಜಾನನ ಮಹಲೆಯವರ ಬಗ್ಗೆ ತಿಳಿಯುವ ಅವಕಾಶ ಬಂದಿದೆ. ಇಂಥಹ ವ್ಯಕ್ತಿ ನಮ್ಮ ನಡುವೆ ಇದ್ದಾರೆ ಎನ್ನುವುದೇ ಒಂದು ಅದ್ಭುತ . ನಿಮ್ಮ ನಿರೂಪನೆಯಂತೂ ಅತ್ಯಧ್ಬುತ ….

    ಪ್ರತಿಕ್ರಿಯೆ
  9. suguna

    ನಮ್ಮ ಸುತ್ತಲೇ ಎಷ್ಟೋ ಪ್ರತಿಭೆಗಳಿದ್ದರೂ ಗೊತ್ತಾಗುವುದಿಲ್ಲ. ಮಹಾಲೆಯವರ ಬಗ್ಗೆ ಕೇಳಿದ್ದೆ ಈಗ ಹೆಚ್ಚು ಮಾಹಿತಿ ದೊರೆಯಿತು. ಧನ್ಯವಾದಗಳು ರಂಗಭೂಮಿಯ ರಂಗು ನಮಗೆ ನೀಡುತ್ತಲಿದ್ದೀರಿ.

    ಪ್ರತಿಕ್ರಿಯೆ
  10. Mohan V Kollegal

    ಮಹಾಲೆ ಮಣ್ಣನ್ನೂ ಮಾತಾಡಿಸಬಲ್ಲರು… ಕಾಗದದಲ್ಲೂ ಕಲೆಯನ್ನು ಅರಳಿಸಬಲ್ಲರು… ತಮ್ಮ ನಡೆ-ನುಡಿಯಿಂದ ನಮ್ಮ ಮನಸ್ಸುಗಳನ್ನಂತೂ ಎಂದಿನಿಂದಲೂ ಅರಳಿಸುತ್ತಲೇ ಬಂದಿದ್ದಾರೆ.- ಪೂಜ್ಯರಾದ ಮಹಾಲೆಯವರಿಗೂ, ಅವರ ಬಗ್ಗೆ ತಿಳಿಸಿಕೊಟ್ಟ ವಾಜಪೇಯಿ ಗುರುಗಳಿಗೂ ಪ್ರಣಾಮಗಳು.

    ಪ್ರತಿಕ್ರಿಯೆ
  11. prakash hegde

    ಅಣ್ಣಾ..
    ಇಂಥಹ ಅದೆಷ್ಟೋ ಮಂದಿ ಎಲೆಯ ಮರೆಯ ಹೂವಂತೆ ಪರದೆಯ ಹಿಂದೆ ಉಳಿದು ಬಿಡುತ್ತಾರೆ ಅಲ್ಲವೆ?
    ಮಹಾಲೆಯವರಂಥಹ ಪ್ರತಿಭಾವಂತರನ್ನು ಪರಿಚಯ ಮಾಡಿಸಿಕೊಟ್ಟಿಇದ್ದಕ್ಕೆ ಧನ್ಯವಾದಗಳು..
    ಕುಮುಟಾದಲ್ಲಿ ಒಬ್ಬರು ಮಹಾಲೆ ಅಂತ ಇದ್ದರು.. ಹೆಸರು ಮರೆತು ಹೋಗಿದೆ..
    ಅವರು ತುಂಬಾ ಸುಂದರ ಸಾಮಾಜಿಕ ನಾಟಕಗಳನ್ನು ಬರೆಯುತ್ತಿದ್ದರು..
    ಅವರ ನಾಟಕಗಳನ್ನು ಓದುವದು ನಮಗೆಲ್ಲ ಬಹಳ ಇಷ್ಟವಾಗಿತ್ತು…
    ಅವರ ಪರಿಚಯ ನಿಮಗಿದೆಯಾ?
    ಅವರೀಗ ಇದ್ದಾರೋ.. ಇಲ್ಲವೋ ಗೊತ್ತಿಲ್ಲ…

    ಪ್ರತಿಕ್ರಿಯೆ
  12. Pushparaj Chowta

    “ಬಣ್ಣ”ದ ಗಣಪರ ಬಗ್ಗೆ ಚೆನ್ನಾಗಿ ಬಣ್ಣಿಸಿದ್ದೀರಿ! ಮತ್ತೋರ್ವ ‘ರಂಗಕರ್ಮಿಯ’ ಪರಿಚಯ ನಮಗೆ. ಮುಂದುವರಿಯಲಿ ಹೀಗೆ. ಕಾದಿರುತ್ತೇವೆ.

    ಪ್ರತಿಕ್ರಿಯೆ
  13. sumathi

    ಇ೦ತಹವರೂ ಇರ್ತಾರೆ ಅ೦ತ ತಿಳಿದು ಸ೦ತೋಷ, ಸಮಾಧಾನ ಸರ್. ನಮ್ಮ೦ತಹ ಓದುಗರ ನಮಸ್ಕಾರಗಳನ್ನು ತಿಳಿಸಿಬಿಡಿ. ಮತ್ತು, ಇ೦ತಹವರನ್ನ ಗುರುತಿಸಿ ಬರೆಯುವ ನಿಮಗೂ ಪ್ರೀತಿಪೂರ್ವಕ ಅಭಿನ೦ದನೆಗಳು!

    ಪ್ರತಿಕ್ರಿಯೆ
  14. Prasad V Murthy

    ಸುಂದರ ಪರಿಚಯ ಗೋಪಾಲ್ ಸರ್. ಮಹಾಲೆಯವರಂತಹ ಸಹೃದಯಿ ರಂಗ ಕರ್ಮಿಯನ್ನು ನಮ್ಮೆಲ್ಲರಿಗೂ ಪರಿಚಯಿಸಿದ್ದೀರಿ. ಆದರೆ ಈ ನಿಮ್ಮ ಸಂಚಿಕೆಯಲ್ಲಿ ಕಾಡಿಯೇ ಕಾಡಿದ್ದು, ‘ಇಷ್ಟೆಲ್ಲಾ ಪ್ರೀತಿ, ಅಭಿಮಾನಗಳನ್ನು ಗಳಿಸಿಕೊಂಡ ಮೇಲೂ ಆರ್ಥಿಕ ಸಬಲತೆ ಕಂಡುಕೊಳ್ಳದ ‘ಬಣ್ಣ’ದ ಗಣಪತಿಯವರಂತಹ ರಂಗಕರ್ಮಿಗಳ ಆಸಹಾಯಕತೆ!’.

    ಪ್ರತಿಕ್ರಿಯೆ
  15. sumathi shenoy

    You introduced us an exceptionally humble cum noble persona in vivid descriptions, sir…Mahale’s greatness conveyed in such a life like endearing terms… bannagedade, hudugaatavaagade and belakige kaluhisuvudu, such kannada usages are too catchy…

    ಪ್ರತಿಕ್ರಿಯೆ
  16. Roopa Satish

    Gopal Sir,
    Mahaleyavarannu nimma lekhanada moolaka bEti aadaddu khushiyaaytu. Vyaktitva Vyaktitvavannu aritukollaballaddu. You have an eye and heart that can recognise them. Thanks again for sharing about Mahale Sir.

    ಪ್ರತಿಕ್ರಿಯೆ
  17. shobhavenkatesh

    kannadada bhashacharitreya bagge makkala nataka shuddage belaguamnalli nsd natakothavadalli madidaga makkalige preetiyinda makeup madalu bandiddaru anthaha hiriyaru. vajpaye avare nimma lekhana oodida mele innu hemme aiythu.
    avara bagge.

    ಪ್ರತಿಕ್ರಿಯೆ
  18. Anuradha.B.Rao

    ‘ಬಣ್ಣದ ಗಣಪನಿಗೆ ನಮೋ ನಮಃ. ನಿಗರ್ವಿ, ಸರಳಜೀವಿ, ಗಜಾನನ ಮಹಾಲೆಯವರನ್ನು ಅಭಿನಂದಿಸಲೇ ಬೇಕು. ಇಂಥ ಅದ್ಭುತ ಕಲಾವಿದರನ್ನು ಗೌರವಿಸುವ , ಸಹಾಯಧನ ನೀಡುವ ಕೆಲಸ ಸರ್ಕಾರದಿಂದ ಆಗಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: