ಸುಮ್ಮನೇ ನೆನಪುಗಳು – 26
ಜಿ.ಬಿ. ಜೋಶಿಯವರಿಗೆ ನಾಟಕ ಅಂದರೆ ಮುಗಿಯಿತು. ಕೈಲಿದ್ದ ಕೆಲಸವನ್ನು ಬದಿಗಿಟ್ಟು ನಿಲ್ಲುವಷ್ಟು ಆಸಕ್ತಿ. ಅಷ್ಟೇ ಏಕೆ, ‘ಕೀರ್ತಿಶೇಷ’ರಾಗಿ ಹೋದ ಮಹನೀಯರ ‘ಆತ್ಮಗಳನ್ನು ಆಹ್ವಾನಿಸಿ’, ಅವರ ಇಚ್ಚೆಯ ನಾಟಕ ಕೃತಿಗಳನ್ನು ರಂಗಕ್ಕೆ ತರುವಂಥ ಹುಚ್ಚು ಅವರಿಗೆ. ಹೀಗೆ ಅವರು ಕೆರೂರು ವಾಸುದೇವಾಚಾರ್ಯರ ಆತ್ಮವನ್ನು ಪ್ಲಾಂಚೆಟ್ ಮೂಲಕ ಆಹ್ವಾನಿಸಿ, ಅವರ ಅಂತಿಮ ಇಚ್ಚೆಯಂತೆ ‘ನಳದಮಯಂತಿ’ ನಾಟಕವನ್ನು ಬಾಗಲಕೋಟೆಯಲ್ಲಿ ಆಡಿಸಿದರಂತೆ. ಅದು ನಿಜಕ್ಕೂ ಒಂದು ಅಚ್ಚರಿದಾಯಕವೂ ಐತಿಹಾಸಿಕವೂ ಆದ ದಾಖಲೆಯೇ. ಒಂದು ತಿಂಗಳ ಕಾಲ ತಾಲೀಮು ನಡೆಸಿದ ಆ ನಾಟಕದಲ್ಲಿದ್ದವರು ಸುಮಾರು 30 ಜನ ಕಲಾವಿದರಂತೆ. ಸುಮಾರು 40 ಹಾಡುಗಳಿದ್ದ ಆ ನಾಟಕದಲ್ಲಿ ಪಂ. ಭೀಮಸೇನ ಜೋಶಿ ಅವರು ಅಭಿನಯಿಸಿದ್ದರಂತೆ…
ಹೀಗೆ ನಾಟಕಗಳ ಬಗೆಗಿನ ಯಾವುದೇ ಚಟುವಟಿಕೆಯಿದ್ದರೂ ಅವರಿಗೆ ಹುರುಪು. ನಾಟಕಗಳನ್ನ ಆಡಿಸುವುದು, ನಾಟಕ ವಾಚನ ಏರ್ಪಡಿಸುವುದು, ನಾಟಕಗಳನ್ನ ಬರೆಯುವುದು-ಬರೆಯಿಸುವುದು, ಮತ್ತು ನಾಟಕಗಳನ್ನ ‘ಟಿಕೆಟ್ಟು ಖರೀದಿಸಿಯೇ’ ನೋಡುವುದು… ಮತ್ತು, ತಮ್ಮ ಪ್ರಕಾಶನದ ಮೂಲಕ ಪ್ರತಿ ವರುಷವೂ ನಾಟಕಗಳನ್ನು ಪ್ರಕಟಿಸುವುದು ಇವನ್ನು ತಮ್ಮ ಕೊನೆಗಾಲದವರೆಗೂ ಅವರು ಪಾಲಿಸಿಕೊಂಡು ಬಂದರು.
ಧಾರವಾಡದ ‘ಮ.ಗ್ರ.ಮಾ.’ ಕಾರ್ಯಾಲಯದಲ್ಲಿ ಅವರು ಆಗಾಗ ನಾಟಕ ವಾಚನಗಳನ್ನು ಏರ್ಪಡಿಸುತ್ತಿದ್ದರು ಎಂದೆನಲ್ಲ. ಅದರ ಬಗ್ಗೆ ಒಂದಷ್ಟು ಹೇಳಬೇಕು. ವಾಚನ ಸಂದರ್ಭದಲ್ಲಿ ಜಿ.ಬಿ. ಕೇವಲ ಶ್ರೋತೃವಾಗಿ ಕೂತು, ಗಮನವಿಟ್ಟು ಆಲಿಸುತ್ತಿದ್ದರು… ವಾಚನಾನಂತರ ಉಳಿದವರು ಆ ನಾಟಕದ ಕುರಿತು ಚರ್ಚಿಸುತ್ತಿದ್ದರೆ ಜಿ.ಬಿ. ಮಾತ್ರ ತುಟಿ ಪಿಟಕ್ಕೆನ್ನದೆ ಕೂತಿರುತ್ತಿದ್ದರು… ಇನ್ನೇನು ಚರ್ಚೆ ಮುಗಿಯಿತು ಎನ್ನುವ ಹೊತ್ತಿಗೆ ಒಂದೇ ಒಂದು ಚಿನ್ನದಂಥ ಮಾತು ಅವರ ಬಾಯಿಂದ ಬರುತ್ತಿತ್ತು.
ಅಂಥದೊಂದು ಮಾತನ್ನು ‘ಕೇಳುವ’ ಭಾಗ್ಯ ನನಗೂ ಒದಗಿತು.
ಅದು 1982-83ರಲ್ಲಿ. ಬೆಂಗಳೂರಿನ ‘ರಂಗಸಂಪದ’ ತಂಡ ಆ ವರ್ಷ ಏರ್ಪಡಿಸಿದ್ದ ‘ನಾಟಕ ರಚನಾ ಸ್ಪರ್ಧೆ’ಯಲ್ಲಿ ನನಗೆ ಎರಡನೆಯ ಬಹುಮಾನ ಬಂತು. ಅದು ದಕ್ಷಿಣ ಕನ್ನಡದ ‘ಗಂಗಾ’ ಪಾದೇಕಲ್ (ಶ್ರೀಮತಿ ರತ್ನಾ ಜಿ. ಭಟ್ ) ಬರೆದ ‘ಪುಲಪೇಡಿ’ ಎಂಬ ಕಥೆ. ಕೇರಳದ ಶಾಸನವೊಂದರ ಆಧಾರದ ಮೇಲೆ ಬರೆಯಲ್ಪಟ್ಟಂಥದು. ಸೌಲಭ್ಯ ನೀಡುವ ನೆಪದಲ್ಲಿ ಆಳುವ ದೊರೆಗಳು ಹೇಗೆ ಕೆಳವರ್ಗದವರನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡುತ್ತಾರೆ, ಮತ್ತು ಆ ಸೌಲಭ್ಯದ ನೆಪವೇ ತಮಗೆ ತಿರುಗುಬಾಣವಾದಾಗ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತುಂಬಾ ಪರಿಣಾಮಕಾರಿಯಾಗಿ ಹೇಳುವ ಕಥೆ ಅದು. ಆ ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ ಆ ಕಥೆಯಲ್ಲಿ ಲಲಿತೆ ಎಂಬ ಯುವತಿಯನ್ನು ಸಂಕಷ್ಟಕ್ಕೆ ದೂಡುವವರೆಗಿನ ಚಿತ್ರಣ ಮಾತ್ರವಿತ್ತು. ನಾನು ಲೇಖಕಿಯ ಅನುಮತಿ ಪಡೆದು, ಉಳಿದ ಅರ್ಧವನ್ನು ತಾರ್ಕಿಕವಾಗಿ ಬೆಳೆಸಿ ಎರಡು ಗಂಟೆಗಳ ನಾಟಕವನ್ನಾಗಿ ರೂಪಿಸಿದೆ. (‘ರಂಗಸಂಪದ’ದ ಆ ಸ್ಪರ್ಧೆಯ ನಿರ್ಣಾಯಕರಾಗಿದ್ದವರು ‘ಸಿರಿ ಬೆಳಕಿನ ಕವಿ’ ಡಾ. ಕೆ. ಎಸ್. ನಿಸಾರ್ ಅಹ್ಮದ್, ನಾಟಕಕಾರ ಚಿ. ಶ್ರೀನಿವಾಸ ರಾಜು ಹಾಗೂ ನಟ ನಿರ್ದೇಶಕ ಶ್ರೀನಿವಾಸ ಪ್ರಭು.)
‘ರಂಗಸಂಪದ’ದ ನಿರ್ಣಯ ಪ್ರಕಟವಾಗುವ ಹೊತ್ತಿಗೆ ಗೆಳೆಯ ಪಿ. ಗಂಗಾಧರಸ್ವಾಮಿ ಇಳಕಲ್ಲಿನಲ್ಲಿ ಒಂದು ರಂಗ ತರಬೇತಿ ಶಿಬಿರ ನಡೆಸುತ್ತಿದ್ದರು. ಸುದ್ದಿ ಓದಿ ಹುಬ್ಬಳ್ಳಿಗೆ ಧಾವಿಸಿದ ಅವರು ನನ್ನಲ್ಲಿದ್ದ ಏಕಮಾತ್ರ ಹಸ್ತಪ್ರತಿಯನ್ನು ತೆಗೆದುಕೊಂಡು ನಡೆದೇಬಿಟ್ಟರು.
ಅಲ್ಲಿಯ ‘ಸ್ನೇಹರಂಗ’ದ ಕಲಾವಿದರು ಈ ನಾಟಕವನ್ನು ‘ಹಾವ ತುಳಿದೇನೇ ಮಾನಿನಿ…’ ಎಂಬ ಹೆಸರಿನಲ್ಲಿ ತುಂಬಾ ಯಶಸ್ವಿಯಾಗಿ ಪ್ರಯೋಗಿಸಿದರು. ಆ ಪ್ರಯೋಗಕ್ಕೆ ಸಾಕ್ಷಿಯಾಗಿದ್ದವರು ಹಿರಿಯ ರಂಗಕರ್ಮಿ ವಿಜಾಪುರದ ಶ್ರೀನಿವಾಸ ತಾವರಗೇರಿ, ಹಿರಿಯ ನಾಟಕಕಾರ ಆರ್. ಡಿ. ಕಾಮತರು ಮತ್ತು ಕವಿ-ನಾಟಕಕಾರ ಪ್ರೊ. ಜಿ.ಎಚ್. ಹನ್ನೆರಡುಮಠರು…
ಅದೇ ಸಂದರ್ಭದಲ್ಲಿ ವಿಶ್ವನಾಥ ಕೋಳಿವಾಡ ಮುಂತಾದ ಧಾರವಾಡದ ಮಿತ್ರರು ‘ಪುಲಪೇಡಿ’ ನಾಟಕದ ವಾಚನವನ್ನು ಜಿ.ಬಿ.ಯವರ ಸಮ್ಮುಖದಲ್ಲಿ ಅಟ್ಟದ ಮೇಲೆ ಏರ್ಪಡಿಸಿದ್ದು. ಓದುವ ಕಾರ್ಯಕ್ರಮ ಮುಗಿದು, ಚರ್ಚೆಯೂ ಮುಕ್ತಾಯ ಹಂತಕ್ಕೆ ಬರುವವರೆಗೂ ಸುಮ್ಮನೆ ಆಲಿಸುತ್ತಿದ್ದ ಅಜ್ಜ, ಎಲ್ಲರ ಮಾತೂ ಮುಗಿದ ಮೇಲೆ ಒಮ್ಮೆ ನಕ್ಕರು. ನಾನು ಆತಂಕಗೊಂಡೆ. ”ಊಹೂಂ… ನಿನ್ನ ನಾಟಕದಾಗ ಆ ಬಸರ ಹೆಣಮಗಳನ ಆನಿ ಬೆನ್ನು ಹತ್ತಿಧಂಗs, ನಾ ಬರದ ಒಂದು ನಾಟಕದಾಗ ಗೂಳಿ ಒಬ್ಬ ಬಸರ ಹೆಣಮಗಳನ ಅಟ್ಟಿಸಿಕೊಂಡು ಬರತದ… ನಿನ್ನ ನಾಟಕದಾಗ ಆಧಂಗs ಅಲ್ಲ್ಯೂ ಆ ಬಸರ ಹೆಣಮಗಳು ಘಾಬರಿಯಿಂದ ತನ್ನ ‘ಗಂಡ’ನ ಕಡೆ ಓಡತಾಳ… ಅಂವಾ ಅಕಿನ್ನ ಉಳಸೋ ಬದಲಿಗೆ ತನ್ನ ಜೀವಾ ಉಳಿಸಿಗೋಳಿಕ್ಕೆ ಓಡತಾನ…” ಅಂತೆಲ್ಲ ಒಂದೆರಡು ಮಾತಿನಲ್ಲೇ ಹೇಳಿ, ನನ್ನ ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನನಗೆ ‘ಸ್ವರ್ಗಕ್ಕೆ ಮೂರೇ ಗೇಣು’…!
ಆದರೆ, ಈ ನಾಟಕಕ್ಕೆ ಬಹುಮಾನ ನೀಡಿದ್ದರಲ್ಲ ‘ರಂಗಸಂಪದ’ ತಂಡದವರು… ಅವರು ಬಹುಮಾನಿತ ಹಸ್ತಪ್ರತಿಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದಾಗಿ ಮೊದಲೇ ತಿಳಿಸಿದ್ದರಾದರೂ, ಅದು ಕಾರ್ಯಗತವಾಗಲೇ ಇಲ್ಲ. ”ಮುದ್ರಕ ಹೇಳದೆ ಕೇಳದೆ ಎಲ್ಲೋ ಓಡಿ ಹೋದ ಸಾರ್…” ಅಂದರು ಸಂಘಟಕ ಜೆ. ಲೋಕೇಶ್. ಹೀಗಾಗಿ ಆ ನಾಟಕ ಪ್ರಕಟವಾಗದೆ ಉಳಿಯಿತು.
ಆಗ ನನ್ನಲ್ಲಿದ್ದುದು (ಗಂಗಾಧರಸ್ವಾಮಿಯವರನ್ನು ಕೇಳಿ ವಾಪಸು ಪಡೆದ) ಈ ನಾಟಕದ ಒಂದೇ ಒಂದು ಹಸ್ತಪ್ರತಿ. ಕೊಂಡಜ್ಜಿಯ ನಾಟಕ ರಚನಾ ಶಿಬಿರದ ಸಂದರ್ಭದಲ್ಲಿ ಹಿರಿಯರಾದ ಮುದೇನೂರ ಸಂಗಣ್ಣ ಅವರು ಅದನ್ನು ಓದಲೆಂದು ಚಿಗಟೇರಿಗೆ ತಕ್ಕೊಂಡು ಹೋದರು. ನಾಟಕವನ್ನು ಓದಿ, ಮೆಚ್ಚುಗೆ ಪತ್ರದ ಜೊತೆ ಹಸ್ತಪ್ರತಿಯನ್ನು ಮರಳಿಸಿದರು. ಮುಂದೆ ನನ್ನ ವರ್ಗಾವಣೆ, ಮನೆ ಬದಲಾವಣೆ ಇತ್ಯಾದಿ ಗಲಾಟೆಯಲ್ಲಿ ಆ ಹಸ್ತಪ್ರತಿಯೂ ನನ್ನ ಕೈತಪ್ಪಿ ಹೋಯಿತು.
ನನಗೆ ನಾಟಕದ ಇಡೀ ಕಥೆ ಗೊತ್ತಿತ್ತಲ್ಲ… ಅದನ್ನು ಅಪ್ಪಟ ಉತ್ತರ ಕರ್ನಾಟಕದ ಕಥೆಯಾಗಿಸಿ ಆಕಾಶವಾಣಿಗೆ ಅಳವಡಿಸಿದೆ. ‘ನಿಮಗಾದರೆ ಇರಲಿ, ನಮಗಾದರೆ ಬೇಡ…’ ಎಂಬ ಆ ಬಾನುಲಿ ನಾಟಕವನ್ನು ಖ್ಯಾತ ಲೇಖಕ, ಬಂಗಾಳಿ ಕೃತಿಗಳ ಅನುವಾದಕ, ಹಾಗೂ ಪತ್ರಕರ್ತ ಅಹೋಬಲ ಶಂಕರ ಅವರು ಮೆಚ್ಚಿಕೊಂಡು, ಆ ಕುರಿತು ಒಂದು ಲೇಖನವನ್ನೂ ಬರೆದರು. ನಂತರದ ದಿನಗಳಲ್ಲಿ ಸಾಗರೋತ್ತರ ಶ್ರೋತೃಗಳಿಗಾಗಿ ಈ ನಾಟಕವನ್ನು ಆಕಾಶವಾಣಿಯವರು ಇಂಗ್ಲಿಷಿನಲ್ಲಿ ‘If for u, YES… If for us, NO…’ ಎಂಬ ಹೆಸರಿನಲ್ಲಿ ಪ್ರಸಾರ ಮಾಡಿದರು. ಖ್ಯಾತ ಲಲಿತ ಪ್ರಬಂಧಕಾರ, ಶಿಕ್ಷಣ ತಜ್ಞ ಡಾ. ಆರ್. ವೈ. ಧಾರವಾಡಕರರು ಈ ನಾಟಕದ ಇಂಗ್ಲಿಷ್ ತರ್ಜುಮೆಕಾರರು…
ಆಕಾಶವಾಣಿಯ ಆ ದಿನಗಳ ಬಗ್ಗೆಯೇ ಪ್ರತ್ಯೇಕವಾಗಿ ಬರೆಯಬೇಕು…
ಆಹಾ…! ಎಂಥ ಮನೋಲ್ಲಾಸಕಾರಿ ದಿನಗಳವು…!
-೦-೦-೦-೦-೦-
ಆಗಷ್ಟೇ ನಾವು ಮೂವರು ಗೆಳೆಯರು ಸೇರಿ ‘ಅಭಿನಯ ಭಾರತಿ’ ಎಂಬ ತಂಡವನ್ನು ಕಟ್ಟಿದ್ದೆವು. ಆ ತನಕ ನಮ್ಮ ಹೊಸ ತಂಡ ಎರಡೇ ನಾಟಕಗಳನ್ನು ಪ್ರದರ್ಶಿಸಿತ್ತು. ಯಾವುದಾದರೂ ಒಂದು ಒಳ್ಳೆಯ ವಿಚಾರಪೂರ್ಣ ನಾಟಕ ಕೈಗೆತ್ತಿಕೊಳ್ಳಬೇಕು… ಸ್ವಲ್ಪ ಹೆಚ್ಚು ಖರ್ಚಾದರೂ ಸರಿ, ಹೇಗಾದರೂ ನಿಭಾಯಿಸಬೇಕು… ಎಂಬುದು ನಮ್ಮೆಲ್ಲರ ಆಗಿನ ತುಡಿತ.
ಅಂದ ಹಾಗೆ, ಫೋರ್ಡ್ ಫೌಂಡೇಶನ್ನಿನ ಧನಸಹಾಯದಿಂದ ಹೆಗ್ಗೋಡಿನ ‘ನೀನಾಸಂ’ ಏರ್ಪಡಿಸಿದ್ದ ನಾಟಕ ರಚನಾ ಶಿಬಿರದ ಬಗ್ಗೆ ಈ ಮೊದಲು ಹೇಳಿದೆನಲ್ಲ… ಅದನ್ನು ಮುಗಿಸಿಕೊಂಡು ಹುಬ್ಬಳ್ಳಿಗೆ ಮರಳುತ್ತಿದ್ದಾಗ ನನ್ನ ಜತೆಯಾದವರು ಖ್ಯಾತ ರಂಗ ನಿರ್ದೇಶಕ ಜಯತೀರ್ಥ ಜೋಶಿ.
ಜಯತೀರ್ಥ ಜೋಶಿ
ಸಾಗರದಿಂದ ಹೊರಟು, ಸಿದ್ದಾಪುರ ದಾಟಿ, ಶಿರಸಿ ತಲಪುವ ವರೆಗೂ ನಾವಿಬ್ಬರೂ ಮೈಮರೆತು ಕೂತಿದ್ದೆವು, ಸುತ್ತಲಿನ ಹಸಿರು ಸಿರಿಯನ್ನು ನೋಡುತ್ತ… ಶಿರಸಿಯಲ್ಲಿ ಚಹಕ್ಕೆಂದು ಇಳಿದಾಗ, ನಾನೇ ಮೌನ ಮುರಿದು, ”ನಮ್ಮ ತಂಡಕ್ಕ ಒಂದು ನಾಟಕ ಮಾಡಸ್ರಿ,” ಎಂದೆ.
”ಆಂ…? ನಾಟಕs…? ಯಾವ ನಾಟಕ ಮಾಡಸ್ಲಿ…?” ಅಂದರು ಜೋಶಿ.
”…’ನಿಮಗ ಯಾವ್ದು ಇಷ್ಟನೋ ಅದನ್ನ ಮಾಡಸ್ರಿ’ ಅಂತ ಹೇಳಲಿಕ್ಕೆ ನನಗ ಹೆದರಿಕಿ ಬರತದ… ಯಾಕಂದ್ರ, ನೀವು ಎನ್. ಎಸ್. ಡಿ.ಯಿಂದ ಬಂದ ಮಂದಿ… ನಾವು ನಾಲ್ಕು ನಾಟಕಕ್ಕ ಮಾಡೋ ಖರ್ಚನ್ನ ನೀವು ಒಂದs ನಾಟಕಕ್ಕ ಮಾಡಸ್ತೀರಿ… ಅದಕ್ಕs ಹಿಂಜರಿಕಿ…” ಅಂತ ನಕ್ಕೆ. ಅವರೂ ನಕ್ಕರು.
ಚಹಾ ಕುಡಿದು ಮತ್ತೆ ಬಸ್ಸು ಏರಿ ಕೂತೆವು…
ಅವರಿಗೆ ನಮ್ಮ ತಂಡದ ಬಗ್ಗೆ ಗೊತ್ತಿತ್ತು. ಅದರ ಸ್ಥಿತಿಗತಿಯ ಬಗ್ಗೆ ಗೊತ್ತಿತ್ತು. ತಂಡದ ಕಲಾವಿದರ ಬಗ್ಗೆ ಗೊತ್ತಿತ್ತು. ಮತ್ತು ಹುಬ್ಬಳ್ಳಿಯಲ್ಲಿ ಒಂದು ನಾಟಕ ನಿರ್ದೇಶಿಸಿ ತಮ್ಮ ಆಸೆ ತೀರಿಸಿಕೊಳ್ಳಬೇಕಿತ್ತು.
”ನೋಡ್ರೀ… ನೀವು ಯಾವದs ನಾಟ್ಕಾ ಮಾಡಸ್ರಿ, ಆದ್ರ ಅದರ ಕನಿಷ್ಠ 25 ಪ್ರಯೋಗಗಳಂತೂ ಆಗಬೇಕು. ಒಂದು ಟೆಂಪೋದಾಗ ನಾವು ಕಲಾವಿದರು, ತಂತ್ರಜ್ಞರು ಸಾಮಗ್ರಿ ಸಮೇತ ಹೋಗಿ ಶೋ ಕೊಟ್ಟು ಬರೂ ಹಾಂಗಿರಬೇಕು…” ಅಂತ ಮತ್ತೆ ಮಾತು ಮುಂದುವರಿಸಿದೆ. ಸ್ವಲ್ಪ ಕಾಲ ಯೋಚಿಸಿದರು.
”ನಾನು ಒಂದು ನಾಟಕದ ಹೆಸರು ಹೇಳ್ತೀನಿ… ನಿಮಗ ಒಪ್ಪಿಗ್ಯಾದ್ರ ಮುಂದುವರಿಯೂಣು,” ಅಂದರು.
”ಹೇಳ್ರಿ…” ಅಂದೆ.
ಅವರು ಯಾವ ನಾಟಕದ ಹೆಸರನ್ನು ಹೇಳಿದರೋ ನನ್ನ ಮನಸ್ಸಿನಲ್ಲೂ ಅದೇ ನಾಟಕವಿತ್ತು.
ಅದೇ ‘ತಾಮ್ರಪತ್ರ’…
ಮೂಲ ಬಂಗಾಳಿ ಭಾಷೆಯ ‘ಅಮಿತಾಕ್ಷರ’ ಎಂಬ ಹೆಸರಿನ ಆ ನಾಟಕವನ್ನು ಬರೆದವರು ದೇಬಾಶಿಶ ಮುಜುಮದಾರ ಎಂಬವರು. ಆಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿದ್ದ ನಾಟಕಕಾರ, ಲೇಖಕ ಶಾ. ಬಾಲುರಾವ್ ಆ ನಾಟಕವನ್ನು ‘ತಾಮ್ರಪತ್ರ’ವೆಂಬುದಾಗಿ ಕನ್ನಡಕ್ಕೆ ಅನುವಾದಿಸಿದ್ದರು. ಬೆಂಗಳೂರಲ್ಲಿ ಗೋಪಾಲಕೃಷ್ಣ ನಾಯಿರಿ ಮೊಟ್ಟಮೊದಲು ‘ತಾಮ್ರಪತ್ರ’ವನ್ನು ನಿರ್ದೇಶಿಸಿದಾಗ ಖ್ಯಾತ ರಂಗನಿರ್ದೇಶಕ ನಟ ಆರ್. ನಾಗೇಶ್ ಮುಖ್ಯ ಪಾತ್ರವಹಿಸಿದ್ದರು. ಬೆಂಗಳೂರಲ್ಲಿ ‘ತಾಮ್ರಪತ್ರ’ದ ಆ ಪ್ರಯೋಗವನ್ನು ನೋಡಿದ್ದ ನಮ್ಮ ತಂಡದ ರಾಘವೇಂದ್ರ ಹುನಗುಂದ ಆ ನಾಟಕದ ಬಗ್ಗೆ ಸಾಕಷ್ಟು ಒಳ್ಳೆಯ ಅಭಿಪ್ರಾಯವನ್ನು ಕೊಟ್ಟಿದ್ದರು. ಹೆಗ್ಗೋಡಿನ ‘ನೀನಾಸಂ’ನಲ್ಲಿ ಚಿದಂಬರರಾವ್ ಜಂಬೆ ಈ ನಾಟಕವನ್ನು ನಿರ್ದೇಶಿಸಿದಾಗ ಅಲ್ಲಿಯ ಖ್ಯಾತ ನೇಪಥ್ಯ ನಿಪುಣ ಪಿ. ನಾಗೇಶರಾಯರು (ನಾಗೇಶಣ್ಣ) ಮುಖ್ಯ ಪಾತ್ರ ವಹಿಸಿದ್ದರು. ಆಗ ಅಲ್ಲಿ ಓದುತ್ತಿದ್ದ ನಮ್ಮೂರಿನ ಹುಡುಗ ವಿಶ್ವನಾಥ ಕುಲಕರ್ಣಿ ನಾಟಕದ ವಸ್ತುವನ್ನು ತುಂಬಾ ಇಷ್ಟಪಟ್ಟಿದ್ದ.
ಹುಬ್ಬಳ್ಳಿ ತಲಪುವ ಹೊತ್ತಿಗೆ ತಮ್ಮ ‘ಹಸಿಬಿ’ (ದೊಗಳೆ ಬಗಲು ಚೀಲ) ಬಿಡಿಸಿ ‘ತಾಮ್ರಪತ್ರ’ದ ಒಂದು ಪ್ರತಿಯನ್ನು ಹೊರತೆಗೆದ ಜೋಶಿ ಅದನ್ನು ನನ್ನ ಕೈಗಿಟ್ಟು, ”ಓದಿ ನೋಡ್ರಿ. ಸ್ಕ್ರಿಪ್ಟು ಜ್ವಾsಕಿ… ಬ್ಯಾರೆ ಯಾರಿಗೂ ಕೊಡಬ್ಯಾಡ್ರಿ. ನಾನು ನಾಳೆ ಸಂಜಿಗೆ ನಿಮ್ಮ ಹತ್ರ ಬರ್ತೀನಿ,” ಎಂದವರೇ ಬಸ್ಸು ಇಳಿದು ತಮ್ಮ ಊರಿನ ಬಸ್ಸು ಏರಿದರು.
ನಮಗೆ, ನಾಟಕದವರಿಗೆ ಹಾಗೆಯೇ. ಅಪ್ರಕಟಿತ ನಾಟಕದ ಹಸ್ತಪ್ರತಿ ಎಂದರೆ ಬಹು ಅಮೂಲ್ಯವಾದುದು. ನೂರು ರೂಪಾಯಿ ಕಳೆದರೆ ನಮಗೆ ನೋವಾಗುವುದಿಲ್ಲ, ಅದೇ ಒಂದು ಹಸ್ತಪ್ರತಿ ಕಳೆದರೆ ತುಂಬಾ ಪೇಚಾಡಿಕೊಂಡುಬಿಡುತ್ತೇವೆ. (ಇದು ಪುಸ್ತಕದ ವಿಷಯದಲ್ಲೂ ಅನ್ವಯಿಸುವಂಥ ಮಾತು.) ಅದಕ್ಕೆ ಜೋಶಿ ‘ಸ್ಕ್ರಿಪ್ಟು ಜ್ವಾsಕಿ’ ಅಂತ ಒತ್ತಿ ಒತ್ತಿ ಹೇಳಿದ್ದು.
ಅಂದು ಸಂಜೆ ನಾನು ‘ತಾಮ್ರಪತ್ರ’ವನ್ನು ಓದಿದೆ. ರಾತ್ರಿ ಹುನಗುಂದ ಸಿಕ್ಕರು.
”ಓದೀದ್ರೆನು…? ಏನನಿಸ್ತ್ಯು…?”
”ವಸ್ತು ಚೊಲೋ ಅದ… ಆದ್ರs, ಇದನ್ನ ಇದರಾಗಿದ್ದಂಗs ಮಾಡೀದ್ರ, ಯಾರಿಗೂ ಅರ್ಥಾಗೂದುಲ್ಲಾ…”
”ಅಂದ್ರ…?!”
”ಇಲ್ಲಿರೂದೆಲ್ಲಾ ಬಂಗಾಳದ ಹಿನ್ನೆಲೆ, ಬಂಗಾಳದ ಪರಿಸರ, ಬಂಗಾಳದ ಪಾತ್ರಗಳು.
”ಅದಕ್ಕ…?”
”ಅದಕ್ಕs ಇದನ್ನ ನಮ್ಮ ಕಥಿ ಅನ್ನೋ ರೀತಿಯೊಳಗ ನಿರೂಪಿಸೀದ್ರ ಜನಕ್ಕ ಹಿಡಸಬಹುದು…”
”ಬರೋಬ್ಬರಿ. ನನ್ನ ಮನಸಿನ್ಯಾಗಿನ ಮಾತನs ಹೇಳೀದ್ರಿ…”
”ನಾಳೆ ಜಯತೀರ್ಥ ಜೋಶಿ ಬರತಾರಲ್ಲಾ… ನೋಡೋಣು, ಅವರ ಮನಸಿನ್ಯಾಗೇನದ ಅಂತ…”
ಮರುದಿನ ಬೆಳಿಗ್ಗೆ…
ನಾನಿನ್ನೂ ಮೂರನೆಯ ಚಹ ಕುಡಿದಿರಲಿಲ್ಲ. ಕುದುರೆ ಏರಿ ಬಂದವರಂತೆ, ತುರುತುರು ಬಂದರು ಜಯತೀರ್ಥ…
”ಹೂಂ… ಓದೀದ್ರೇನು… ?”
” ಓದಿದೆ… ಈ ನಾಟಕಾನ ನಾವು ಈಗ ಇರೂ ಸ್ವರೂಪದಾಗs ಮಾಡೀದ್ರ ಉಪಯೋಗಿಲ್ಲಾ… ಧಾರವಾಡದ ಹಿನ್ನೆಲೆ ಇಟಗೊಂಡು, ಇದರಾಗಿನ ಪಾತ್ರಗಳು ನಮ್ಮ ಆಜೂ ಬಾಜೂ ಮನೀವs ಅನಸೂವಂಗ ರೂಪಾಂತರಾ ಮಾಡಬೇಕು ಅನಸ್ತದ…”
”ಶಬಾಶ್…! ನನ್ನ ಮನಸಿನ್ಯಾಗೂ ಇದs ಇತ್ತು… ನೀವು ಒಂದು ಕೆಲಸಾ ಮಾಡ್ರಿ. ನೀವು ಅಂದುಕೊಂಡಂಗs ರೂಪಾಂತರಾ ಮಾಡಿಬಿಡ್ರಿ… ನಾನು ಗುಲಬರ್ಗಾ ಜಿಲ್ಲಾದಾಗ ಒಂದು ನಾಟ್ಕಾ ಮುಗಿಸಿ ಬರ್ತೀನಿ…”
ತುರು ತುರು ಬಂದವರು ತುರು ತುರು ಹೋಗಿಬಿಟ್ಟರು.
ಅದು ಜಯತೀರ್ಥ ಜೋಶಿಯ ರೀತಿ.
-೦-೦-೦-೦-೦-
ಅವತ್ತು ಶನಿವಾರ… 31-12-1983. ‘ತಾಮ್ರಪತ್ರ’ ನಾಟಕದ ಮೊದಲ ಪ್ರದರ್ಶನ ಮುಗಿದು ನಾನು ಗ್ರೀನ್ ರೂಮಿನಲ್ಲಿ ಬಣ್ಣ ಒರೆಸಿಕೊಳ್ಳಲು ಕೈಗೆ ಕೊಬ್ಬರಿ ಎಣ್ಣೆ ಲೇಪಿಸಿಕೊಳ್ಳುವ ಹೊತ್ತಿಗೆ ಹಿರಿಯರದೊಂದು ದಂಡೇ ಒಳನುಗ್ಗಿತು… ಜಿ.ಬಿ. ಜೋಶಿ, ಗಂಗೂಬಾಯಿ ಹಾನಗಲ್ಲ, ಪಾಟೀಲ ಪುಟ್ಟಪ್ಪ, ಕೀರ್ತಿನಾಥ ಕುರ್ತಕೋಟಿ, ಮುದೇನೂರ ಸಂಗಣ್ಣ… ಹೀಗೇ ಹಲವು ಹಿರಿಯರ ದಂಡು…
ಅಜ್ಜ ಬೆನ್ನು ತಟ್ಟಿದರು. ಗಂಗೂಬಾಯರು ‘ಅದ್ಭುತ’ ಎಂಬಂತೆ ಕಣ್ಣರಳಿಸಿ, ತಲೆತೂಗಿದರು. ಮುದೇನೂರ ಸಂಗಣ್ಣನವರು ಚಂದದ ನಗೆಯಲ್ಲೆ ಎಲ್ಲವನ್ನೂ ಹೇಳಿಬಿಟ್ಟರು. ಆದರೆ ಕೀರ್ತಿನಾಥ ಕುರ್ತಕೋಟಿಯವರು, ”ಕೈ ಕೊಡ್ರಿ ಮದ್ಲs…” ಎಂದು ಕೈ ಮುಂದೆ ಚಾಚಿದರು.
”ಕೈ ಎಣ್ಣಿ…” ಅಂತ ನಾನು ಹಿಂದೆ ಸರಿದರೆ, ಅವರು ಕೈ ಹಿಡಿದೆಳೆದು, ”ಸಂತೋಷದ ಮುಂದ ಇದೆಲ್ಲಾ ಏನ್ರೀ…?” ಎಂದು ಹಿಡಿದ ಕೈಯನ್ನು ಮತ್ತೆ ಮತ್ತೆ ಕುಲುಕಿಯೇ ಕುಲುಕಿದರು…
ಹೀಗೆ ಮೊದಲ ಪ್ರಯೋಗದಲ್ಲೇ ಜನಮನ ಗೆದ್ದ ‘ತಾಮ್ರಪತ್ರ’ ಮುಂದೆ ಸತತ ಮೂವತ್ತು ಪ್ರಯೋಗಗಳನ್ನು ಕಂಡಿತು.
ಎಲ್ಲೂ ಅಬ್ಬರವಿಲ್ಲದೇ, ಮಧ್ಯಂತರ ಬಿಡುವೂ ಇಲ್ಲದೇ, ಸತತ 90 ನಿಮಿಷಗಳ ಕಾಲ ಪ್ರೇಕ್ಷಕರನ್ನು ಕಟ್ಟಿ ಹಾಕುವ ಕಥೆ ಈ ನಾಟಕದ್ದು.
ಹೆಂಡತಿ, ಮಗ ಮತ್ತು ಮಗಳೊಂದಿಗೆ, ಶಿಥಿಲ ಮನೆಯಲ್ಲಿ ಶಿಥಿಲ ಬದುಕನ್ನು ನಡೆಸುತ್ತಿರುವಾತ ತಿರುಮಲರಾಯ. ಮೈಯಲ್ಲಿ ಕಸುವಿದ್ದಾಗ ಶೆಟ್ಟರ ಅಂಗಡಿಯಲ್ಲಿ ಕಾರಕೂನನಾಗಿದ್ದ. ಸಂಸಾರ ನಿರ್ವಹಣೆಗೆ ನಂತರ ಆತ ನಂಬಿದ್ದು ಬುಕ್ ಬೈಂಡಿಂಗ್. ಬೆಳೆದು ನಿಂತ ಮಗನಿಗೊಂದು ನೌಕರಿ ಸಿಕ್ಕುಬಿಟ್ಟರೆ ಅಷ್ಟೇ ತನ್ನ ಭಾರ ಕಡಿಮೆಯಾಗುತ್ತದೆ ; ಒಂದು ಹೊತ್ತಿನ ಊಟದ ಬದಲು ಎರಡೂ ಹೊತ್ತು ಉಣ್ಣಬಹುದೆಂಬ ಯೋಚನೆ. ಅವನದೇ ಊರಿನ ರಾಮರಾಯರು M.P. ಆಗಿದ್ದಾರೆಂಬ ಸುದ್ದಿ ತರುವ ಹೆಂಡತಿ ಲಕ್ಷ್ಮಿ, ”ಮಗ ವಾಸುವಿಗೋಸ್ಕರ ಅವರಲ್ಲಿ ಕೇಳಿಕೊಂಡರೆ ಏನಾದರೂ ಆದೀತು. ಹೋಗಿಬನ್ನಿ,” ಎಂದು ಒತ್ತಾಯಿಸಿ ಕಳಿಸುತ್ತಾಳೆ.
ಮಗನಿಗೆ ಕೆಲಸ ಕೊಡಿಸುವುದಕ್ಕೆ ನೆರವಾಗುವ ಬದಲು M.P. ಸಾಹೇಬರು ತಿರುಮಲರಾಯನಿಗೆ, ತಾನೊಬ್ಬ ಮಾಜಿ ಸ್ವಾತಂತ್ರ್ಯ ಯೋಧ ಎಂದೂ, ಸೆರೆಮನೆಯಲ್ಲಿದ್ದೆನೆಂದೂ ಸರ್ಟಿಫಿಕೆಟ್ಟು ಹಾಜರುಪಡಿಸಿದರೆ, ‘ತಾಮ್ರಪತ್ರ’ದ ಜೊತೆಗೆ ತಿಂಗಳೂ ಒಂದಷ್ಟು ಪೆನ್ಶನ್ ಕೊಡಿಸುವ ವಿಚಾರ ಹೇಳುತ್ತಾರೆ. ತಿರುಮಲರಾಯನಿಗೆ ಎಲ್ಲಿಲ್ಲದ ಖುಷಿ. ಮಗ ವಾಸುವಿಗೆ ಆ ಪಕ್ಷದ ಹುಡುಗರೊಂದಿಗೆ ಸಖ್ಯ ಬೆಳೆಯುತ್ತದೆ. ಅಪ್ಪನಿಗೆ ಖೊಟ್ಟಿ ಸರ್ಟಿಫಿಕೆಟ್ಟು ಕೊಡಿಸುವಲ್ಲಿ ಮಗ ಯಶಸ್ವಿಯಾಗುತ್ತಾನೆ. ತಿರುಮಲರಾಯನೋ ಮುಗ್ಧ. ಸ್ವಾತಂತ್ರ್ಯ ಹೋರಾಟ, ಹೋರಾಟಗಾರರು ಇತ್ಯಾದಿಗಳ ಬಗ್ಗೆ ಏನೂ ಅರಿವಿಲ್ಲದವ. ಮಗನೇ ಅಪ್ಪನಿಗೆ ಅದೆಲ್ಲವನ್ನೂ ತಿಳಿಸಿಕೊಡುವ ಕೆಲಸಕ್ಕೆ ನಿಲ್ಲುತ್ತಾನೆ. ಈಗ ತಿರುಮಲರಾಯನಿಗೆ ಮತ್ತೊಂದು ಸಂಕಷ್ಟ. ತಾನು ಸ್ವಾತಂತ್ರ್ಯ ಹೋರಾಟಗಾರ ಎಂದು ಜನರಿಗೆ ಬಿಂಬಿಸಬೇಕು. ಬಿಂಬಿಸುತ್ತಾನೆ. ಅವನಿಗೆ ಅದ್ದೂರಿ ಸಮಾರಂಭದಲ್ಲಿ ‘ತಾಮ್ರಪತ್ರ’ ಪ್ರದಾನವಾಗುತ್ತದೆ. ಸಮಾಜದಲ್ಲಿ ಇದ್ದಕಿದ್ದಂತೆ ಗೌರವದ ಸ್ಥಾನ ದೊರೆತು ಪುಳಕಗೊಳ್ಳುತ್ತಾನೆ. ಇದೀಗ, ತಾನು ಏನು ‘ಆಗಿರಲಿಲ್ಲವೋ’ ಅದು ‘ಆಗಿ’ ನಟಿಸಬೇಕಾದ ದುರ್ಧರ ಪ್ರಸಂಗ ಆತನಿಗೆ. ಅದಕ್ಕಾಗಿ ಇತಿಹಾಸದ ಪುಟಗಳಲ್ಲಿ ಮುಳುಗತೊಡಗುತ್ತಾನೆ. ಇದರ ಪರಿಣಾಮವಾಗಿ ಕ್ರಮೇಣ ಆತನೊಳಗೊಬ್ಬ ಸ್ವಾತಂತ್ರ್ಯ ಹೋರಾಟಗಾರ ಬೆಳೆಯತೊಡಗುತ್ತಾನೆ. ಗಾಂಧಿಯ ಬಗ್ಗೆ ಗೌರವ ಬೆಳೆಯುತ್ತದೆ. ಆ ಮಾರ್ಗದಲ್ಲಿ ನಡೆಯಲು ನಿರ್ಧರಿಸುವ ತಿರುಮಲರಾಯ ಹೋದಲ್ಲಿ ಬಂದಲ್ಲಿ ಸದ್ಯದ ರಾಜಕಾರಣ-ರಾಜಕಾರಣಿಗಳನ್ನು, ಗಾಂಧೀ ಜಯಂತಿ ಆಚರಿಸುವ ಹೆಂಡದ ದೊರೆಗಳನ್ನು, ಸುಭಾಷ ಜಯಂತಿ ಆಚರಿಸುವ ‘ಪಥಭ್ರಷ್ಟ’ ಯುವಜನಾಂಗವನ್ನು ಟೀಕಿಸತೊಡಗುತ್ತಾನೆ. ಆತನ ಮೇಲೆ ಹಲ್ಲೆಯಾಗುತ್ತದೆ. M.P. ಸಾಹೇಬರು ಕರೆಸಿ ಬುದ್ಧಿ ಹೇಳಲು ಯತ್ನಿಸಿದರೆ ಅವರನ್ನೇ ವಾಚಾಮಗೋಚರ ಬೈದು ಮನೆಗೆ ಮರಳುತ್ತಾನೆ.
ಯಾವ ‘ತಾಮ್ರಪತ್ರ’ ತನ್ನನ್ನು ಸುಳ್ಳು ಹೇಳಲು ಹಚ್ಚಿತೋ, ಯಾವ ‘ತಾಮ್ರಪತ್ರ’ದ ಕಾರಣದಿಂದ ತನ್ನನ್ನು ಪೊಳ್ಳು ಗೌರವಗಳು ಅರಸಿಕೊಂಡು ಬಂದವೋ, ಯಾವ ‘ತಾಮ್ರಪತ್ರ’ ತನ್ನನ್ನು ಒಬ್ಬ ನಿಜವಾದ ಸ್ವಾತಂತ್ರ್ಯ ಹೋರಾಟಗಾರನಾಗಲು ಪ್ರೇರೇಪಿಸಿತೋ, ಅದೇ ‘ತಾಮ್ರಪತ್ರ’ದ ಕಾರಣದಿಂದ ತಾನು ನೆಮ್ಮದಿ ಕೆಡಿಸಿಕೊಳ್ಳಬೇಕಾಯಿತಲ್ಲ… ಅದೇ ‘ತಾಮ್ರಪತ್ರ’ದ ಕಾರಣದಿಂದ ತಾನು ಭರ್ತ್ಸನೆಗೆ ಈಡಾಗಬೇಕಾಯಿತಲ್ಲ… ಹಲ್ಲೆಗೊಳಗಾಗಬೇಕಾಯಿತಲ್ಲ… ಇದು ಇಲ್ಲದೆಯೂ ತಾನು ಬದುಕಬಲ್ಲೆನಲ್ಲ ಎಂಬ ಅರಿವು ಮೂಡುತ್ತದೆ. ತಾನಿನ್ನು ಯಾರೆದುರೂ ತಲೆಬಾಗದೆ, ಯಾರಿಗೂ ಅಂಜದೆ, ಸ್ವತಂತ್ರವಾಗಿ ಬದುಕಬೇಕೆಂಬ ಛಲ ಹುಟ್ಟುತ್ತದೆ. ನಿಜ ಸಂಗತಿಯನ್ನು ತಿಳಿಸಿ, ಸರಕಾರಕ್ಕೆ ‘ತಾಮ್ರಪತ್ರ’ ಮತ್ತು ಪೆನ್ಶನ್ನನ್ನು ವಾಪಸು ಮಾಡುತ್ತಾನೆ… ಮತ್ತೆ ಬುಕ್ ಬೈಂಡಿಂಗಿಗೆ ತೊಡಗುತ್ತಾನೆ…
ಇದು ‘ತಾಮ್ರಪತ್ರ’ದ ಕಥೆ.
ನಾನು ತುಂಬಾ ಖುಷಿಯಿಂದಲೇ ರೂಪಾಂತರ ಕಾರ್ಯ ಮುಗಿಸಿ, ನಾಟಕದಿಂದ ‘ದೂರ’ ಉಳಿಯಬೇಕೆಂದುಕೊಂಡಿದ್ದೆ. ಆದ್ರೆ ಜೋಶಿ ಬಿಡಬೇಕಲ್ಲ… ಗುಲ್ಬರ್ಗದ ರಂಗ ತರಬೇತಿ ಶಿಬಿರ ಮುಗಿಸಿಕೊಂಡು ಬಂದ ಆತ ಕಲಾವಿದರ ಸಮ್ಮುಖದಲ್ಲಿ ನಾಟಕ ವಾಚನ ಏರ್ಪಡಿಸಿದರು. ಅದು ಮುಗಿದ ಮೇಲೆ ಯಾರಿಗೆ ಯಾವ ಪಾತ್ರದಲ್ಲಿ ಆಸಕ್ತಿ ಎಂಬುದನ್ನು ಚೀಟಿಯಲ್ಲಿ ಬರೆದುಕೊಡಲು ಕೇಳಿದರು. ನನಗೆ ನೇಪಥ್ಯ ಕಾರ್ಯದಲ್ಲಿ ಮೊದಲಿನಿಂದಲೂ ಆಸಕ್ತಿ. ಹೀಗಾಗಿ ಚೀಟಿಯಲ್ಲಿ ನಾನು ಬರೆದದ್ದು ‘ತೆರೆಯ ಮರೆಯ ಪಾತ್ರವೇ ಇರಲಿ’ ಎಂದು.
”ಇಲ್ಲಿಲ್ಲ… ನೀವs ಮುಖ್ಯ ಪಾತ್ರ ಮಾಡಬೇಕು…” ಅಂತ ಜೋಶಿ.
”ಊಹೂಂ… ನನಗ ಹೊಂದೂದಿಲ್ಲಾ…” ಅಂತ ನಾನು.
”ಆ ಬಡವನ ಪಾತ್ರಕ್ಕ ನಿಮ್ಮನ್ನ ಬಿಟ್ರ ಬ್ಯಾರೆ ಯಾರೂ ಕಾಣವಲ್ರು ನನ್ನ ಕಣ್ಣಾಗ. ನಿಮ್ಮ ಡೂಗು (ಗೂನು) ಬೆನ್ನು ಭಾಳ ಸೂಟಾಗತದ ಆ ಪಾತ್ರಕ್ಕ. ಬಡತನದಿಂದ ಬಾಗಿ ಹೋಗಿರೋ ತಿರುಮಲರಾಯ… ಸುಮ್ಮನ ‘ಹೂಂ’ ಅನ್ರಿ…” ಜಬರಿಸಿದರು.
ನಾನು 15 ದಿನ ಮೆಡಿಕಲ್ ಲೀವ್ ಹಾಕಿದೆ. ತಂಡದ ಖರ್ಚಿಗೆಂದು ಹಗಲಿಡೀ ‘ಜೋಳಿಗೆ ಭಿಕ್ಷೆ’ಗೆ ಓಡಾಟ. ಸಂಜೆ ‘ತಾಮ್ರಪತ್ರ’ದ ತಾಲೀಮು… ಸರಿಯಾಗಿ ಹದಿನಾರನೆಯ ದಿನ ಕೆಲಸಕ್ಕೆ ಹಾಜರಾಗಿ, ಆಫೀಸು ಮುಗಿಸಿಕೊಂಡು ನೇರ ಬಂದವನೇ ಬಣ್ಣ ಹಚ್ಚಿಕೊಂಡೆ.
ಅಷ್ಟೆಲ್ಲ ಹಿರಿಯರ ‘ಶಬಾಶಗಿರಿ’ಗೆ ಪಾತ್ರನಾದೆ…
ಆ ತೊಂಬತ್ತು ನಿಮಿಷಗಳ ನಾಟಕದಲ್ಲಿ ಉಳಿದೆಲ್ಲ ಪಾತ್ರಗಳು ಹೊರಗೆ ಹೋಗಿ ಬಂದು ಮಾಡುತ್ತವೆ. ತಿರುಮಲರಾಯ ಮಾತ್ರ ಆರಂಭದಿಂದ ಅಂತ್ಯದವರೆಗೂ ರಂಗದ ಮೇಲೆಯೇ ಇರಬೇಕು ಮತ್ತು ಎಲ್ಲ ಪಾತ್ರಗಳೊಂದಿಗೆ ವ್ಯವಹರಿಸಬೇಕು…
ಮುಂದೆ, ಜಯತೀರ್ಥ ಜೋಶಿ ಕಲ್ಪಿಸಿ ಸಂಘಟಿಸಿದ ‘ಸಪ್ತಮಂಡಲ ನಾಟಕೋತ್ಸವ’ದ ಹೊತ್ತಿಗೆ ‘ತಾಮ್ರಪತ್ರ’ದ ಕೀರ್ತಿ ಇನ್ನಷ್ಟು ಹೆಚ್ಚಿತ್ತು. ಹುಬ್ಬಳ್ಳಿಯಲ್ಲಿ ಆವತ್ತು ನಡೆದದ್ದು ಎರಡು ಪ್ರದರ್ಶನಗಳು. ‘ಸವಾಯಿ ಗಂಧರ್ವ ಕಲಾಮಂದಿರ’ ಅಕ್ಷರಶಃ ಪ್ರೇಕ್ಷಕರಿಂದ ತುಂಬಿ ತುಳುಕಿತು. ”ಸೀಟಿಲ್ಲ,” ಎಂದು ಹೇಳಿದರೂ ಜನ ಟಿಕೆಟ್ಟು ಖರೀದಿಸಿ ನಿಂತು ನೋಡಿದರು. ಹಾಗೆ ನಿಂತು ನೋಡಿದ ಅನೇಕರು ಅಷ್ಟಕ್ಕೇ ಸಮಾಧಾನಗೊಳ್ಳದೆ, ಕೆಲವೇ ದಿನಗಳಲ್ಲಿ ಮತ್ತೊಂದು ಪ್ರದರ್ಶನ ಏರ್ಪಡಿಸುವಂತೆ ಒತ್ತಾಯಿಸಿದರು. ಅವರ ಆಗ್ರಹಕ್ಕೆ ನಾವು ತಲೆಬಾಗಲೇಬೇಕಾಯಿತು.
ಅಬ್ಬಾ… ಆ ದಿನಗಳು… ‘ತಾಮ್ರಪತ್ರ’ ನಾಟಕ ಪ್ರದರ್ಶನ ಇದ್ದಾಗ, ಕೊನೆಯ ಕ್ಷಣದವರೆಗೂ ನಾನು ಸಿದ್ಧತೆಗಳ ಕಡೆ ಗಮನ ಹರಿಸುತ್ತಿದ್ದೆ. ನಂತರವೇ ಹಿರಿಯ ಪ್ರಸಾಧನ ಪಟು ಗಜಾನನ ಮಹಾಲೆಯ ಎದುರಿಗೆ ಮುಖವೊಡ್ಡಿ ಕಣ್ಣು ಮುಚ್ಚಿ ಕೂಡುತ್ತಿದ್ದೆ.
ಐದೇ ಐದು ನಿಮಿಷ… ಮಹಾಲೆ ನನ್ನನ್ನು ರೂಪಾಂತರಿಸಿಬಿಡುತ್ತಿದ್ದ.
-೦-೦-೦-೦-೦-
ನಾನು ಈಟೀವಿ ಸೇರಿದ ಮೇಲೆ ಗಣರಾಜ್ಯೋತ್ಸವ (ಜನವರಿ 26) ಸಂದರ್ಭಕ್ಕೆ ಒಂದು ಟೆಲೆ ಫಿಲ್ಮ್ ಮಾಡೋಣ ಎಂಬ ನಿರ್ಧಾರಕ್ಕೆ ಮನರಂಜನಾ ವಿಭಾಗದವರು ಬಂದಾಗ ‘ತಾಮ್ರಪತ್ರ’ವನ್ನು ಸೂಚಿಸಿದೆ. ಒಪ್ಪಿತವಾಯಿತು. ನಟ ಶ್ರೀನಿವಾಸ ಪ್ರಭು ಅದನ್ನು ನಿರ್ದೇಶಿಸುವುದು ಎಂದಾಯಿತು. ದೃಶ್ಯ ಮಾಧ್ಯಮದ ಸಾಧ್ಯತೆಗಳಿಗೆ ತಕ್ಕಂತೆ ಮತ್ತೆ ಮೂರು ಸನ್ನಿವೇಶಗಳನ್ನು ಬರೆದು ಸೇರಿಸಿದೆ. ಎಚ್.ಜಿ. ದತ್ತಾತ್ರೇಯ (ದತ್ತಣ್ಣ), ನಳಿನಾ ಮೂರ್ತಿ ಮುಖ್ಯ ಪಾತ್ರಗಳಲ್ಲಿದ್ದರು. ಅನುವಾದ-ಅಳವಡಿಕೆ ಮತ್ತು ಹೆಚ್ಚಿನ ಸನ್ನಿವೇಶಗಳ ಸೇರಿಸುವಿಕೆ ಇವುಗಳಿಗೆಲ್ಲ ಮೂಲ ಲೇಖಕ ದೇಬಾಶಿಶ ಮುಜಮದಾರ ಅವರ ಅನುಮತಿ ಪಡೆಯಲಾಗಿತ್ತು. ಶ್ರೀನಿವಾಸ ಪ್ರಭು ಈ ಟೆಲೆ ಫಿಲ್ಮಿಗೆ ಕೊಟ್ಟ ಹೆಸರು ‘ಮುಕ್ತ’…
ವೀಕ್ಷಕರಿಂದ ಅಪಾರ ಪ್ರಶಂಸೆಯನ್ನು ಪಡೆದ ಈ ಟೆಲೆ ಫಿಲ್ಮಿನ ಕಥಾ ವಸ್ತುವನ್ನು ಚಿತ್ರ ನಟ ಜೆ.ಕೆ. ಶ್ರೀನಿವಾಸ ಮೂರ್ತಿ, ಶ್ರೀಧರ್ ಮುಂತಾದವರು ಇನ್ನೆಲ್ಲಿಲ್ಲದಂತೆ ಮೆಚ್ಚಿಕೊಂಡರು. ತಿರುಮಲರಾಯನ ಪಾತ್ರವಹಿಸಿದ್ದ ದತ್ತಣ್ಣ (ಎಚ್.ಜಿ. ದತ್ತಾತ್ರೇಯ) ಮುಂದೊಮ್ಮೆ ಆ ಕಥೆಯ ಬಗ್ಗೆ ಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಅವರೆದುರು ಒಳ್ಳೆಯ ನುಡಿಗಳನ್ನಾಡಿದರಂತೆ. ಕೂಡಲೇ ಶೇಷಾದ್ರಿ ಅದನ್ನು ಚಿತ್ರವನ್ನಾಗಿ ಮಾಡಲು ನಿರ್ಧರಿಸಿ, ಮೂಲ ನಾಟಕಕಾರ ದೇಬಾಶಿಶ ಮುಜಮದಾರರ ಅನುಮತಿಯನ್ನೂ ಪಡೆದುಬಿಟ್ಟರು.
ಆದರೆ ಅದೇನು ಕಾರಣವೋ ಶೇಷಾದ್ರಿ ಆ ಚಿತ್ರವನ್ನು ಮಾಡಲಿಲ್ಲ…
-೦-೦-೦-೦-೦-
‘ಅಭಿನಯ ತರಂಗ’ದ ವಿದ್ಯಾರ್ಥಿಗಳ ‘ತಾಮ್ರಪತ್ರ’ ನಾಟಕದ ಒಂದು ದೃಶ್ಯ
ತೀರ ಮೊನ್ನೆ ಮೊನ್ನೆ, ನಾನು ಹೈದರಾಬಾದಿನಿಂದ ಬೆಂಗಳೂರಿಗೆ ಬಂದು ನೆಲೆಸತೊಡಗಿದ ಮೇಲೆ, ನನ್ನ ಪ್ರೀತಿಯ ಹುಡುಗ ಪ್ರಮೋದ್ ಶಿಗ್ಗಾಂವ್ ಮನೆಗೆ ಬಂದ. ಆತ ಹಾಗೆಯೇ… ಯಾವ ಹೊತ್ತಿಗೆ ಧುತ್ತಂತ ಬಂದು ನಿಲ್ಲುತ್ತಾನೋ, ಯಾವ ಹೊತ್ತಿಗೆ ಯಾವ ನಾಟಕದ ಹಸ್ತಪ್ರತಿ ಬೇಕೆನ್ನುತ್ತಾನೋ, ಯಾವ ನಾಟಕಕ್ಕೆ ಹಾಡು ಬರೆಯಲು ಹೇಳುತ್ತಾನೋ ಎಂದು ಊಹಿಸುವುದು ಕಷ್ಟ. (ಬಹುಶಃ ಇದು ಎಲ್ಲ ರಂಗ ನಿರ್ದೇಶಕರಿಗೆ ಅಂಟಿಕೊಂಡ ದೋಷ ಎನಿಸುತ್ತದೆ… ಬಟನ್ ಒತ್ತಿದ ಕೂಡಲೇ ಲೈಟು ಬೆಳಗಬೇಕು… ಆದರೆ ನನ್ನಂಥ ‘ಟ್ಯೂಬ್ ಲೈಟು’ಗಳೂ ಇರುತ್ತವಲ್ಲ…!)
ಪ್ರಮೋದ ಬಂದವನೇ ನನ್ನ ಫೈಲುಗಳನ್ನು ಹುಡುಕತೊಡಗಿದ. ಆತನಿಗೆ ಬೇಕಾಗಿದ್ದದ್ದು ‘ತಾಮ್ರಪತ್ರ’ದ ಸ್ಕ್ರಿಪ್ಟು. ಜಯತೀರ್ಥ ಜೋಶಿ ಹೇಳಿದ್ದ ”ಸ್ಕ್ರಿಪ್ಟು ಜ್ವಾsಕಿ,” ಎಂಬ ಮಾತನ್ನೇ ಪ್ರಮೋದನಿಗೂ ಹೇಳಿ, ನಾನು ‘ಜ್ವಾsಕಿ’ಯಿಂದ ತೆಗೆದಿರಿಸಿದ್ದ ಹಸ್ತಪ್ರತಿಯನ್ನು ಕೊಟ್ಟೆ. ಅದನ್ನಾತ ಎ.ಎಸ್. ಮೂರ್ತಿಯವರ ‘ಅಭಿನಯ ತರಂಗ’ದ ವಿದ್ಯಾರ್ಥಿಗಳಿಗಾಗಿ ತಾಲೀಮು ಮಾಡಿಸಿದ. 2012 ರ ಜೂನ್ ತಿಂಗಳಲ್ಲಿ ಅದರ ಎರಡು ಪ್ರದರ್ಶನಗಳಾದವು.
ಎರಡನೆಯ ದಿನದ ಪ್ರದರ್ಶನವನ್ನು ನಮ್ಮೆಲ್ಲರ ಹೆಮ್ಮೆಯ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಅವರು ನೋಡಿ ನಾಟಕದ ವಸ್ತು ಮತ್ತು ಪ್ರದರ್ಶನ ಮಟ್ಟದ ಬಗ್ಗೆ ಮುಕ್ತಕಂಠದಿಂದ ಹೊಗಳಿದರು.
ಅಗಸ್ಟ್ ತಿಂಗಳಲ್ಲಿ ಆ ವಿದ್ಯಾರ್ಥಿಗಳು ಸುಚಿತ್ರಾ ಫಿಲಂ ಸೊಸೈಟಿಯ ರಂಗಮಂದಿರದಲ್ಲಿ ‘ತಾಮ್ರಪತ್ರ’ದ ಇನ್ನೊಂದು ಪ್ರದರ್ಶನ ನೀಡಿದರು. ಆಗ ಹಾಜರಿದ್ದ ಡಾ. ವಿಜಯಮ್ಮ ನನ್ನನ್ನು ಅಭಿನಂದಿಸಿದರು.
-೦-೦-೦-೦-೦-
ಇದೀಗ ನನಗೆ ಯಾಕೋ ಮತ್ತೆ ಹಿರಿಯ ಪ್ರಸಾಧನ ಪಟು ಗಜಾನನ ಮಹಾಲೆಯ ಮುಂದೆ ಮುಖವೊಡ್ಡಿ ಕೂಡುವ ಆಸೆಯಾಗುತ್ತಿದೆ… ಮತ್ತೊಮ್ಮೆ ‘ತಿರುಮಲರಾಯ’ನಾಗುವ ಇಚ್ಚೆ ಬಲವಾಗುತ್ತಿದೆ…





Rangabhoomige Neevu neediruva Koduge apaara … Shubhavaagali Sir.
ಜಿ.ಬಿ. ಜೋಶಿಯವರ ಬಗೆಗೆ ನಮ್ಮ ಧಾರವಾಡದ ಮಂದಿ ಬಹಳ ಒಲುಮೆ ಇಂದ ಮಾತು ಶುರು ಮಾಡುತ್ತಾರೆ. ಅಂತಹ ಸಾಧನೆ ಅವರದು.
ತಾಮ್ರ ಪತ್ರದಿಂದ ನಾಟಕ ರಚನೆ ಮೆಚ್ಚುಗೆಯಾಯ್ತು.
ಚಿತ್ರಗಳು ನೆನಪನ್ನು ಕೆದಕುತ್ತವೆ ಸಾರ್.
ಅಭಿನಯತರಂಗ ಮಾಡಿದ ಪ್ರಯೋಗವನ್ನು ನಾನು ನೋಡಿದ್ದೇನೆ. ಅವರ ಆ ಪ್ರಯೋಗಶಾಲೆಯೇ ನಾಟಕದ ನಿಜವಾದ ಸೆಟ್ನಂತೆ ಇದೆ. ವಿದ್ಯಾರ್ಥಿಗಳಿಂದಲೂ ಉತ್ತಮ ಕೆಲಸ ತೆಗೆದುಕೊಂಡ ನಿರ್ದೇಶಕರು ನಾಟಕದ ಓಘವನ್ನು ಸಮರ್ಥವಾಗಿ ಕಡೆದು ನಿಲ್ಲಿಸಿದ್ದಾರೆ. ನಾಟಕದ ಕಥೆಯಂತೂ ಎಂದಿಗೂ ನೋಡಿದವನನ್ನು ಒಳಗೊಳಗೇ ಕುದಿಯುವಂತೆ ಮಾಡಬಲ್ಲುದು. ಗೋಪಾಲ ವಾಜಪೇಯಿ ಅವರ ರೂಪಾಂತರ ಎಷ್ಟು ಕ್ಷೇತ್ರಸಹಜವಾಗಿದೆ ಎಂದರೆ ಇದು ಬಂಗಾಳಿಯದ್ದು ಎಂಬುದೇ ಕಾಣೆಯಾಗುತ್ತದೆ. ಇತ್ತೀಚೆಗೆ ನಾನು ಭಾವಿಸಿ ನೋಡಿದ ನಾಟಕಗಳಲ್ಲೊಂದು ಇದು.
ತುಂಬಾ ಒಳ್ಳೆಯ ನೆನಪಿನ ಸರಣಿ. ನಾಟಕವನ್ನು ನೋಡಬೇಕು, ಯಾವತ್ತಾದರೂ ಇದ್ದರೆ ಖಂಡಿತಾ ಹೇಳಿ ಗುರುಗಳೇ. ಮುಂದೆ?
ನನಗೂ ಈಗ ತಾಮ್ರಪತ್ರದ ಪ್ರಯೋಗ ನೋಡಬೇಕು ಅನಿಸ್ತಿದೆ, ಸರ್ B)
ನಿಮ್ಮ ನೆನಪುಗಳಿಗೆ ಎಂಥಾ ವಿಸ್ತಾರ! ಬರೆಯುವ ಶೈಲಿಯೂ ನನಗೆ ತುಂಬ ಮೆಚ್ಚಿಗೆಯಾಗುತ್ತದೆ. ಬರೆಯುತ್ತಿರಿ …
ನಿಮ್ಮ ಲೇಖನ ಸರಣಿ ಕನ್ನಡ ರಂಗಪ್ರಪಂಚದಲ್ಲಿ ನನ್ನನ್ನು ಸುತ್ತಾಡಿಸುತ್ತಿದೆ. ಸಚಿತ್ರ ಲೇಖನ ಬಹಳ ಖುಷಿ ಕೊಟ್ಟಿತು ಗುರುಗಳೇ!
ತಾಮ್ರಪತ್ರ.. ಆ ಕಥಾ ವಸ್ತುವಿನ ಸಂಕ್ಷಿಪ್ತ ವಿವರಣೆಯನ್ನ ಇಲ್ಲಿ ಓದುವಾಗ ಸಿಗುತ್ತಿರುವ ಅನುಭೂತಿಯೇ ಇಷ್ಟು ಸೋಗಸಾಗಿರುವಾಗ.. ಅದನ್ನ ನಾಟಕದ ದೃಶ್ಯ ರೂಪದಲ್ಲಿ ನೋಡಬಹುದಾಗಿದ್ದರೆ ಅದರ ಮಜವೇ ಬೇರೆ ಇರುತ್ತಿತ್ತು..
ಆ ಕಾಲದೆಲ್ಲೆ ಆ ನಾಟಕ ಹುಟ್ಟಿ.. ಕಟ್ಟಿ.. ಮೊನ್ನೆ ಮೊನ್ನೆ ಜೂನ್ ನಲ್ಲಿ ಅಭಿನಯ ತರಂಗದ ತಂಡದ ಮೂಲಕ ಅದರ ಜೀವಂತಿಕೆ ಮತ್ತೆ ಮುಂದುವರೆಯಿತೆಂದರೆ ಆ ನಾಟಕದ ಜೀವ & ಭಾವ ಅದೆಷ್ಟು ಸೋಗಸಾಕಿರಬೇಕು ಎಂಬುದಕೆ ಉದಾಹರಣೆಯಾಗುತ್ತದೆ..
ಆ ಕಾಲದಿಂದ ಈ ಕಾಲದವರೆಗೂ ಅದೆಷ್ಟೋ ಘನತೆವಿತ್ತ ವ್ಯಕ್ತಿತ್ವಗಳ ಜೊತೆ ನಿಮ್ಮ ಜಾಳು.. ಒಡನಾಟ & ಸಖ್ಯವನ್ನ ಕೊಂಡಾಗ ಒಂದೆರಡು ಬಾರಿ ನಿಮ್ಮನ್ನು ಪ್ರತ್ಯಕ್ಷ ಕಂಡಿರುವ ನಮಗೆ ಧನ್ಯತೆ ಎನಿಸುತ್ತದೆ.
ತುಂಬಾ ಇಷ್ಟವಾಯ್ತು ಸಾರ್.. 🙂 🙂
ನಮ್ಮ ನಾಟಕಾರರ ಹುಚ್ಚೆ ಇದು!! ಈ ಕೆಳಗಿನ ಎರಡು ವಾಕ್ಯಗಳು ನಾಟಕದ ಹುಚ್ಚು ಹಚ್ಕೊಂಡೊರ ಬಗ್ಗೆ ಹೇಳುತ್ತದೆ.
“ನಮಗೆ, ನಾಟಕದವರಿಗೆ ಹಾಗೆಯೇ. ಅಪ್ರಕಟಿತ ನಾಟಕದ ಹಸ್ತಪ್ರತಿ ಎಂದರೆ ಬಹು ಅಮೂಲ್ಯವಾದುದು. ನೂರು ರೂಪಾಯಿ ಕಳೆದರೆ ನಮಗೆ ನೋವಾಗುವುದಿಲ್ಲ, ಅದೇ ಒಂದು ಹಸ್ತಪ್ರತಿ ಕಳೆದರೆ ತುಂಬಾ ಪೇಚಾಡಿಕೊಂಡುಬಿಡುತ್ತೇವೆ. (ಇದು ಪುಸ್ತಕದ ವಿಷಯದಲ್ಲೂ ಅನ್ವಯಿಸುವಂಥ ಮಾತು.) ಅದಕ್ಕೆ ಜೋಶಿ ‘ಸ್ಕ್ರಿಪ್ಟು ಜ್ವಾsಕಿ’ ಅಂತ ಒತ್ತಿ ಒತ್ತಿ ಹೇಳಿದ್ದು…”
“ನಾನು 15 ದಿನ ಮೆಡಿಕಲ್ ಲೀವ್ ಹಾಕಿದೆ. ತಂಡದ ಖರ್ಚಿಗೆಂದು ಹಗಲಿಡೀ ‘ಜೋಳಿಗೆ ಭಿಕ್ಷೆ’ಗೆ ಓಡಾಟ. ಸಂಜೆ ‘ತಾಮ್ರಪತ್ರ’ದ ತಾಲೀಮು… ಸರಿಯಾಗಿ ಹದಿನಾರನೆಯ ದಿನ ಕೆಲಸಕ್ಕೆ ಹಾಜರಾಗಿ, ಆಫೀಸು ಮುಗಿಸಿಕೊಂಡು ನೇರ ಬಂದವನೇ ಬಣ್ಣ ಹಚ್ಚಿಕೊಂಡೆ….”
ನಾಟಕ ಶಿಸ್ತು, ಸಮಯ ಪ್ರಜ್ಞೆ, ವಿದ್ಯೆ.. ಎಲ್ಲವನ್ನೂ ಕಲಿಸಿಕೊಡುತ್ತದೆ… ಎಂಥ ಅದ್ಭುತ ದಿನಗಳು ನಿಮ್ಮೂವು! ನಾನು ನಿಮ್ಮ ವಾರಗಿಯೊಳಗ ಹುಟ್ಟಿರಬೇಕು ಅಂತ ಅನಸ್ತದ… ನಿಮ್ಮ ಅದ್ಭುತ ಲೇಖನದಲ್ಲಿ ಇದೊಂದು!!
Necessary modification and addition done in the play ‘thaamra patra’ are so interestingly described..hats off to your passion and drama spirit, which, also include backstage activities.thanks a lot for introducing us towards the background matters of a drama with excellent plot..concluding wish is lovely..
ನಿಮ್ಮ ನೆನಪುಗಳಿಗೆ ನಾವು ಶರಣು… ಎಲ್ಲಾ ಘಟನೆಗಳನ್ನು ಕರಾರುವಕ್ಕಾಗಿ ನೆನಪಿಟ್ಟಿದ್ದೀರಿ ಸರ್. ನಾಟಕ ಲೋಕದ ಪಯಣ ಮತ್ತಷ್ಟು ಬರಲಿ… ಧನ್ಯವಾದಗಳು
ಹುಬ್ಬಳ್ಳಿಯೊಳಗ ನೋಡಿದ್ದೆ “ತಾಮ್ರಪತ್ರ” ಮತ್ತೊಮ್ಮೆ ನೆನಪುಗಳು
ತಾಜಾ ಆದವು.
DODDAPPA NODIDDE TAAMRAPATRA KALEDUKONDE, TIRUMALARAAYARANNA BHETI MAADISI ANNA
ಅನುಭವಗಳ ಕಣಜದಲ್ಲಿ ಇನ್ನೂ ಏನೇನು ‘ಅಮೂಲ್ಯ’ಗಳಿವೆಯೋ?!
tumbA sundara nenapina lOka. adu, namageSTO mandige aparichitvE AguLidiruva sAmskrutika lOkada anAvaranavU houdu. nimma nenapina kaNajadinda hIgE A viSishTa lOka teredukoLLuttirali.
ನಿಜಕ್ಕೂ ನಾಟಕದೆಡೆಗೆ ನಿಮ್ಮ ಆಸಕ್ತಿ ಅಪರಿಮಿತವಾದದ್ದು., ನಿಮ್ಮ ಆ ಆಸಕ್ತಿಯಿಂದಲೇ ನಿಮಗೆ ದೊರೆತದ್ದು ಆ ಶಹಬ್ಬಾಸ್ ಗಿರಿ. ನಿಮ್ಮ ಬರಹಗಳು ಯುವ ಜನತೆಗೆ ಆಸಕ್ತಿ ಮೂಡಿಸಲು ಯಶವಾಗುತ್ತಿದೆ. ಶುಭವಾಗಲಿ ಸರ್.
mattondu sundara anubhavada (chitragala sahita) chitrana!
ಸರ್ ಜೀ…..
ನಿಮ್ಮ ಲೇಖನ ಓದುವದು ಬಹಳ ಖುಷಿ ಕೊಡುತ್ತದೆ….
ನಿಮ್ಮ …
ಸಿರ್ಸಿ ಮಲೆನಾಡಿನ ಅನುಭವಗಳ ಬಗೆಗೆ ಬರಿರಿ ಪ್ಲೀಸ್….
nimma anubhavadashtu nanna vayassu savedilla
dheergavaada niyyusiru…………………..
ತಾಮ್ರಪಟದ ಹಿಂದಿನ ಘಟನಾವಳಿಗಳನ್ನು ವಿವರವಾಗಿ ತಿಳಿಸಿದ ನಿಮಗೆ ಧನ್ಯವಾದಗಳು…ಶುಭದಿನ ಸರ್…