ಗೋಪಾಲ ವಾಜಪೇಯಿ ಕಾಲಂ : ಕಾರಂತ ಎಂಬ 'ಮಾಯಕಾರ'!

ಸುಮ್ಮನೇ ನೆನಪುಗಳು – 39

1970ರ ದಶಕದ ಆರಂಭಿಕ ವರ್ಷಗಳು. ಬಣ್ಣದ ಹುಚ್ಚು ಹಚ್ಚಿಸಿಕೊಂಡಿದ್ದ ನಾವು ಒಂದಷ್ಟು ತರುಣರು ಹುಬ್ಬಳ್ಳಿಯಲ್ಲಿ ತಂಡವೊಂದನ್ನು ಕಟ್ಟಿಕೊಂಡಿದ್ದೆವು. ಗಣೇಶ ಚವತಿಗೆ ಕೆ. ಗುಂಡಣ್ಣ, ದಾಶರಥಿ ದೀಕ್ಷಿತ, ಎ.ಎಸ್. ಮೂರ್ತಿ, ಪರ್ವತವಾಣಿ, ಎನ್. ಎಸ್. ರಾವ್ ಮತ್ತು ಲಕ್ಷ್ಮಣರಾವ್ ಬೇಂದ್ರೆ ಮುಂತಾದವರ ಏಕಾಂಕಗಳನ್ನು ಪ್ರದರ್ಶಿಸುತ್ತ ಸಂತೋಷಪಟ್ಟುಕೊಳ್ಳುತ್ತಿದ್ದೆವು. ಆಗೆಲ್ಲ ಹುಬ್ಬಳ್ಳಿಯ ವರ್ತಕರು ನಮ್ಮಂಥ ತಂಡಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಒಂದೇ ದಿನದಲ್ಲಿ, ಅದೇ ಮೇಕಪ್ಪಿನಲ್ಲಿ ನಾಲ್ಕಾರು ಕಡೆ ಹೋಗಿ ಅದೇ ನಾಟಕವನ್ನು ಅಭಿನಯಿಸಿ ಬರುತ್ತಿದ್ದೆವು. ಹೆಚ್ಚೆಂದರೆ ಅರ್ಧ ಗಂಟೆ ಅವಧಿಯ ಏಕಾಂಕಗಳವು. ಜನ ನಮಗಾಗಿ ಕಾದು ಕೂತಿರುತ್ತಿದ್ದರು. ಅದು ಏನೋ ಒಂದು ಹುಕಿ. ಸೇರಿದ ಸಾವಿರಾರು ಜನರ ಕಣ್ಣಲ್ಲಿ ನಾವಾಗ ಹೀರೋಗಳು…!
ಇದಕ್ಕೂ ಮುಂದಿನ ಹೆಜ್ಜೆ ಹುಬ್ಬಳ್ಳಿ-ಧಾರವಾಡ ಮಹಾನಗರಸಭೆಯ ‘ರಾಜ್ಯೋತ್ಸವ ಏಕಾಂಕ ನಾಟಕ ಸ್ಪರ್ಧೆ’ಗೋ, ‘ಲಯನ್ಸ್ ಕ್ಲಬ್ ಏಕಾಂಕ ನಾಟಕ ಸ್ಪರ್ಧೆ’ಗೋ ಹೋಗುವುದು. ಅಲ್ಲಿ ‘ಸಮಾಧಾನಕರ ಬಹುಮಾನ’ ಪಡೆದುಕೊಂಡರೆ ಅದೇ ದೊಡ್ಡದು. ಆಗೆಲ್ಲ ನಮ್ಮ ಗುರಿ ‘ಮೊದಲ ಬಹುಮಾನ’ ಪಡೆಯುವುದು. ಸರಿ, ಮತ್ತೆ ತಾಲೀಮಿಗೆ ಶುರುವಿಟ್ಟುಕೊಳ್ಳುತ್ತಿದ್ದೆವು. ಎ.ಎಸ್. ಮೂರ್ತಿಯವರ ‘ಹುಚ್ಚ’ ಆಗ ನನ್ನ ಮೆಚ್ಚಿನ ನಾಟಕ. ಅದರಲ್ಲಿ ನಾನೇ ಹುಚ್ಚ. ನನಗೆ ಅನೇಕ ಬಹುಮಾನಗಳನ್ನು ತಂದುಕೊಟ್ಟ ಪಾತ್ರ ಅದು.
ಸಹೋದ್ಯೋಗಿ ಮಿತ್ರ ಜಿ.ಎಚ್. ರಾಘವೇಂದ್ರರೊಂದಿಗೆ ನಾಟಕವೊಂದನ್ನು ಕೈಗೆತ್ತಿಕೊಂಡರೆ ಜೆ. ಜಿ. ಕಾಮರ್ಸ್ ಕಾಲೇಜಿನ ಒಂದಷ್ಟು ವಿದ್ಯಾರ್ಥಿಗಳು ಬಂದು ನಮ್ಮನ್ನು ಸೇರಿಕೊಳ್ಳುತಿದ್ದರು. ಅವರ NSS ಶಿಬಿರಗಳಿಗೆ ಹೋಗಿ ನಾವು ನಾಟಕ ‘ಕೂಡಿಸಿಕೊಟ್ಟು’ ಬರುತ್ತಿದ್ದೆವು. ಸದ್ಯದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆಗ ನಮ್ಮೊಂದಿಗೆ ಒಂದೆರಡು ನಾಟಕಗಳಲ್ಲಿ ಭಾಗವಹಿಸಿದ್ದಿದೆ.
ಹೀಗೆಯೇ, ಕರ್ನಾಟಕ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳೂ ನಮ್ಮನ್ನು ‘ನಾಟಕ ಕೂಡಿಸಲು ಬರ್ರಿ’ ಅಂತ ಕರೆಯುತ್ತಿದ್ದರು. ಅವರಲ್ಲಿ ಕೆಲವರು ನಟರು, ಕೆಲವರು ನಾಟಕಕಾರರು, ಕೆಲವರು ಅವುಗಳ ಸಂಗೀತ ಸಂಯೋಜಕರು… ಹುಬ್ಬಳ್ಳಿ-ಧಾರವಾಡ ಮಹಾನಗರ ಸಭೆಯ ಮೇಯರ್ ಆಗಿದ್ದ ಡಾ. ಪಾಂಡುರಂಗ ಪಾಟೀಲ ಅಂಥ ರಂಗಾಸಕ್ತರಲ್ಲೊಬ್ಬರು. ಅವರೇ ಬರೆದ ನಾಟಕಗಳೊಂದಿಗೆ ನಾವು ಹೆಗ್ಗೋಡು ಮುಂತಾದೆಡೆ ತಿರುಗಾಟವನ್ನೂ ಮಾಡಿಬಂದದ್ದಿದೆ.
‘ನಾಟಕ ಕೂಡಿಸು’ವುದೆಂದರೆ ನಾಟಕ ಕಲಿಸುವುದು. ನಿರ್ದೇಶನ, ನಿರ್ದೇಶಕ ಎಂಬ ಪದಗಳೇ ಆಗ ನಮಗೆ ಗೊತ್ತಿರಲಿಲ್ಲ. ಇಂದಿಗೂ ಹಳ್ಳಿಗಳ ಕಡೆ ನಾಟಕದ ಮಾಸ್ತರರು ವರ್ಷಕ್ಕೊಮ್ಮೆ ಬಂದು ‘ನಾಟಕ ಕೂಡಿಸಿಕೊಡು’ತ್ತಾರೆ. ಅವರೇ ಅದಕ್ಕೆ ಸಂಗೀತ ನಿರ್ದೇಶಕರು. ಒಮ್ಮೊಮ್ಮೆ ಅವರೇ ಹೀರೋಯಿನ್ನನ್ನೂ ಕರೆದು ತರುವವರು. ನಾಟಕ ಮುಗಿಯುವವರೆಗೆ ಅವರಿಗೆ ಅಲ್ಲಿ ರಾಜಮರ್ಯಾದೆ.
ಹಾಂ… ಮೇಲೆ ಹೇಳಿದ ಮಹನೀಯರ ಏಕಾಂಕಗಳನ್ನು ಕೈಗೆತ್ತಿಕೊಳ್ಳುತ್ತಿದ್ದೆವಲ್ಲ… ಆಗ ನಮಗೆ ‘ನಟನೆಯ ಪಾಠ’ಗಳನ್ನು ಹೇಳುತ್ತಿದ್ದವರು ವೃತ್ತಿ ರಂಗಭೂಮಿಯ ನಟರು. ಹುಬ್ಬಳ್ಳಿ ಆಗ ವೃತ್ತಿ ರಂಗಭೂಮಿಯ ಪಾಲಿನ ಸ್ವರ್ಗ. ಕನಿಷ್ಠ ಎರಡು ಕಂಪನಿಗಳಾದರೂ ಅಲ್ಲಿ ಬೀಡು ಬಿಟ್ಟಿರುತ್ತಿದ್ದವು. ವರ್ಷಗಟ್ಟಲೇ ಒಂದೇ ನಾಟಕದ ಮುನ್ನೂರು ನಾನ್ನೂರು ಪ್ರಯೋಗಗಳನ್ನು ಆ ಕಂಪನಿಗಳು ನೀಡುತ್ತಿದ್ದವು. ಹುಬ್ಬಳ್ಳಿ ಪಕ್ಕಾ ವಾಣಿಜ್ಯ ಕೇಂದ್ರ. ಆಧುನಿಕ ರಂಗಭೂಮಿ ಇನ್ನೂ ಈ ವ್ಯಾಪಾರೀ ಜನರನ್ನು ಸೆಳೆದಿರಲಿಲ್ಲ.
ಆದರೆ, ಧಾರವಾಡದಲ್ಲಿ ಪ್ರಾಯೋಗಿಕ ನಾಟಕಗಳು ಶ್ರೀರಂಗರ ಕಾಲದಿಂದಲೇ ಅಂದರೆ 1945-1955ರ ಅವಧಿಯಲ್ಲಿಯೇ ಅಲ್ಲಿಯ ಬುದ್ಧಿಜೀವಿಗಳನ್ನು ಆಕರ್ಷಿಸಿದ್ದವು. 1973-74ರಲ್ಲಿಯೂ ಅಂಥ ಪ್ರಯೋಗಗಳು ಧಾರವಾಡದಲ್ಲಿ ನಡೆಯುತ್ತಿದ್ದವಾದರೂ, ಅಲ್ಲಿಗೆ ಹೋಗಿ ನೋಡುವಂಥ ಸೆಳೆತಕ್ಕೆ ನಾವಿನ್ನೂ ಸಿಕ್ಕಿರಲಿಲ್ಲ. ಚಂಪಾ-ಪಟ್ಟಣಶೆಟ್ಟಿ ಮುಂತಾದವರು ಸೇರಿ ಕಟ್ಟಿಕೊಂಡಿದ್ದ ‘ಅಂತರಂಗ’ ನಾಟಕ ಕೂಟ ಅದಾಗಲೇ ಕೆಲವು ಪ್ರಯೋಗಗಳನ್ನು ನೀಡಿತ್ತು. ‘ಅಂತರಂಗ’ದವರು ಪ್ರಯೋಗಿಸಿದ ಚಂದ್ರಶೇಖರ ಪಾಟೀಲರ ‘ಗೋಕರ್ಣದ ಗೌಡಶಾನಿ’ ಅಲ್ಲಿ ದೊಡ್ಡ ಸುದ್ದಿಯನ್ನೇ ಮಾಡಿತ್ತು. ನನ್ನ ಬಾಲ್ಯಕಾಲ ಸಖ ಪುಂಡಲೀಕ ಶೇಟನದು ಅದರಲ್ಲಿ ರಾವಣನ ಪಾತ್ರ.
ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೇನಲ್ಲ, ಹೀಗಾಗಿ ವೃತ್ತಿ ರಂಗಭೂಮಿಯ ಅನೇಕರ ಪರಿಚಯ ನನಗಾಗಿತ್ತು. ಆ ಪೈಕಿ ಗುಡಗೇರಿ ಕಂಪನಿಯ ಮಾಲೀಕ ಎನ್. ಬಸವರಾಜ್ ಹಾಗೂ ನಮ್ಮ ರಂಗಭೂಮಿ ಕಂಡ ಅದ್ಭುತ ನಟ ನಾಟಕಕಾರ ಎಚ್. ಕೆ. ಯೋಗಾನಾರಸಿಂಹ (ಯೋಗಣ್ಣ) ಅವರು ನನಗೆ ಆತ್ಮೀಯರಾಗಿದ್ದರು. ಬಸವರಾಜ ನಮ್ಮ ಊರಿನ ಪಕ್ಕದ ಊರವರೇ. ಗುಡಗೇರಿ ನಮಗೆ ಸಮೀಪದ ರೈಲು ನಿಲ್ದಾಣ. ಅಲ್ಲಿಗೆ ಹೋಗಿಯೇ ನಾವು ಹುಬ್ಬಳ್ಳಿಗೋ ಹಾವೇರಿಗೋ ಗಾಡಿ ಹತ್ತಬೇಕು.
ಆ ಕಂಪನಿಯ ನಟರಲ್ಲಿ ಒಬ್ಬ ದತ್ತಾತ್ರೇಯ ಕುರಹಟ್ಟಿ. ಸ್ಫುರದ್ರೂಪಿ. ಗಾಯನ ಮತ್ತು ಅಭಿನಯ ಎರಡರಲ್ಲೂ ಪಳಗಿದ್ದವ. ಬಿ.ಎ. ಪರೀಕ್ಷೆ ಪಾಸಾಗಿ, ಸರಕಾರೀ ನೌಕರಿಗಾಗಿ ಪ್ರಯತ್ನಿಸುತ್ತಲಿದ್ದ. ನನಗಿಂತ ಒಂದೆರಡು ವರ್ಷ ಹಿರಿಯನಿರಬೇಕು. ಮುಂದೆ ಕರ್ನಾಟಕ ಸರಕಾರದ ಗ್ರಾಮೀಣ ಆರೋಗ್ಯ ಇಲಾಖೆ ಸೇರಿದ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಕಾಲ ನೌಕರಿ ಮಾಡಿದ. ‘ಕಸದಾಯೆ ಕಂಡನೆ’, ‘ಯೇರ್ ಮಲ್ತಿನ ತಪ್ಪು?’ ಮುಂತಾದ ಕೆಲವು ತುಳು ಚಿತ್ರಗಳಲ್ಲಿಯೂ ನಟಿಸಿದ. ಈಗ ಈ ದತ್ತಾತ್ರೇಯ ಕುರಹಟ್ಟಿ ಕಿರುತೆರೆಯ ಅನೇಕ ಧಾರಾವಾಹಿಗಳ ಪೋಷಕ ನಟ. ನಮ್ಮ ಮನೆಗೆ ಆಗಾಗ ಬರುತ್ತಿದ್ದ ಆತ ನಮ್ಮವನೇ ಆಗಿಬಿಟ್ಟಿದ್ದ. ಮಂಗಳೂರ ವೀರಣ್ಣ ಅಂತ ಇನ್ನೊಬ್ಬರು. ರಾಯಚೂರು ಜಿಲ್ಲೆಯ ಮಂಗಳೂರ ಎಂಬ ಊರಿನವರು. ಐವತ್ತು ವರ್ಷಗಳ ಹಿಂದೆ ತೆರೆಕಂಡ ‘ಭೂಕೈಲಾಸ’ ಮುಂತಾದ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದ ವೀರಣ್ಣ ನಮಗೆ ಮೇಕಪ್ ಮಾಡಲು ಬರುತ್ತಿದ್ದರು.
ಹೀಗಾಗಿ, ನಮಗೆ ಆಗ ನಾಟಕಗಳೆಂದರೆ ಢಾಳಾದ ಮೇಕಪ್ಪು, ರಾಸ್ತಾ ಸೀನುಗಳು, ಕಣ್ಣು ಕುಕ್ಕುವಂಥ ಫ್ಲಡ್ ಲೈಟುಗಳು ಹಾಗೂ ಸ್ಟಾಂಡ್ ಹಾಕಿ ನಿಲ್ಲಿಸಿದ್ದ ಮೈಕುಗಳು ಇರಲೇಬೇಕು. ನಮ್ಮ ಮಾತು ಬಂದಾಗೊಮ್ಮೆ ಮೈಕಿನ ಹತ್ತಿರ ಹೋಗಬೇಕು, ಜೋರಾಗಿ ನಮ್ಮ ಮಾತನ್ನು ಹೇಳಬೇಕು, ಹೇಳಿ ಹಿಂದೆ ಸರಿಯಬೇಕು.

-೦-೦-೦-೦-೦-


ಇಂಥ ಸಂದರ್ಭದಲ್ಲಿಯೇ ತಮ್ಮ ಕೆಲವು ಪ್ರಯೋಗಗಳೊಂದಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಬಂದರು ಕಾರಂತ ಎಂಬ ಮಾಯಕಾರ.
ಅದಾಗಲೇ ಉತ್ತರ ಭಾರತದಲ್ಲಿ ಹೆಸರು ಮಾಡಿ, ಕರ್ನಾಟಕಕ್ಕೆ ಕಾಲಿರಿಸಿದ್ದ ಬಿ.ವಿ. ಕಾರಂತರು…
ಮೊತ್ತ ಮೊದಲ ಬಾರಿಗೆ ನಾಟಕವನ್ನು ಕಲಾಕ್ಷೇತ್ರದ ವೇದಿಕೆಯಿಂದ ಇಳಿಸಿದ ಕಾರಂತರು… ಬಯಲಿಗೆ ತಂದು ನಿಲ್ಲಿಸಿದ ಕಾರಂತರು…
ಅವರ ನಾಟಕಗಳ ಬಗ್ಗೆ ಅಲ್ಲಿಲ್ಲಿ ಓದಿ, ಕೇಳಿ ಅಷ್ಟೇ ಗೊತ್ತಿತ್ತು ನನ್ನ ವಯಸ್ಸಿನ ಜನಕ್ಕೆ. ಆ ವಿಷಯದಲ್ಲಿ ನಾನು ಸುದೈವಿ. ಅವರು ನಿರ್ದೇಶಿಸಿದ್ದ ಶ್ರೀರಂಗರ ‘ಸ್ವರ್ಗಕ್ಕೆ ಮೂರೇ ಬಾಗಿಲು’ ಪ್ರಯೋಗವನ್ನು ನಾನು 1971ರಲ್ಲಿ ಬೆಂಗಳೂರಿನಲ್ಲಿ ನೋಡಿದ್ದೆ. ಅದರ ವಸ್ತು ನೆನಪಿರದಿದ್ದರೂ ನನ್ನ ಕಣ್ಣೆದುರು ಇನ್ನೂ ನಿಂತಿರುವುದೆಂದರೆ ಅದರ ರಂಗ ಸಜ್ಜಿಕೆ. ರಂಗದ ನಟ್ಟ ನಡುವೆ ಕೆಲವು ಮೆಟ್ಟಿಲುಗಳು. ಅವು ಕೊನೆಗೊಳ್ಳುವಲ್ಲಿ ಒಂದು ಶಿಥಿಲಗೊಂಡ ಕೋಟೆಯ ಪಾಳುತನವನ್ನು ಸಾರುವಂಥ ಎರಡು ಎತ್ತರದ ಸ್ತಂಭಗಳು. ನಾಟಕ ಮುಂದುವರೆದಿರುವಂತೆ ಕಾಲಕ್ಕೆ ತಕ್ಕ ಹಾಗೆ ಆ ಸ್ತಂಭಗಳು ಕುಸಿಯುತ್ತ ಬರುತ್ತವೆ. ಅದು ನಮ್ಮ ದೇಶದ ಸ್ಥಿತಿಯನ್ನು ಬಿಂಬಿಸುವಂತಿತ್ತು ಎಂಬುದಷ್ಟೇ ಆಗಿನ ನನ್ನ ತಿಳುವಳಿಕೆಗೆ ನಿಲುಕಿದ್ದು.
1971ರಲ್ಲಿ ‘ರವೀಂದ್ರ ಕಲಾಕ್ಷೇತ್ರ’ದಲ್ಲಿ ಒಂದು ಬಹುಭಾಷಾ ರಾಷ್ಟ್ರೀಯ ನಾಟಕೋತ್ಸವ. ಭಾರತದ ಎಲ್ಲ ಭಾಷೆಗಳ ಎರಡೆರಡು ನಾಟಕಗಳು ಆಗ ಪ್ರದರ್ಶನಗೊಂಡವೆಂದು ನೆನಪು. ಅದರಲ್ಲಿ ನಾನು ನೋಡಿದ್ದು ‘ಸ್ವರ್ಗಕ್ಕೆ ಮೂರೇ ಬಾಗಿಲು’,’ಯಯಾತಿ’, ಒಂದು ಅಸ್ಸಾಮಿ ನಾಟಕ ಹಾಗೂ ಮರಾಠಿಯ ‘ಮಲಾ ಕಾಹೀ ಸಾಂಗಾಯ್ಚ ಆಹೇ…’ ಮರಾಠಿಯ ಅದ್ಭುತ ನಟರಾದ ಕಾಶೀನಾಥ ಘಾಣೇಕರ್ ಮತ್ತು ವಿಕ್ರಮ್ ಗೋಖಲೆ ಅದರಲ್ಲಿ ಪಾತ್ರ ವಹಿಸಿದ್ದರು. (ವಸಂತ ಕಾನೀಟ್ಕರರ ಈ ನಾಟಕ ಕೆಲವು ವರ್ಷಗಳ ನಂತರ ಕನ್ನಡದಲ್ಲಿ ‘ನಾನೇನೋ ಹೇಳಬೇಕು…’ ಎಂಬ ಹೆಸರಿನಲ್ಲಿ ಅನುವಾದಗೊಂಡು ರಂಗಕ್ಕೇರಿತು.)
‘ಸ್ವರ್ಗಕ್ಕೆ ಮೂರೇ ಬಾಗಿಲು’ ನಾಟಕದ ಮೂಲಕ ಕಾರಂತರು ಎಪಿಕ್ ಥಿಯೇಟರನ್ನು ಕನ್ನಡಕ್ಕೆ ಪರಿಚಯಿಸಿದರು ಎಂದು ರಂಗಭೂಮಿ ಇತಿಹಾಸ ಸಾರುತ್ತದೆ. ಅಂಥದೊಂದು ಐತಿಹಾಸಿಕ ಪ್ರಯೋಗದ ಬಗ್ಗೆ ನಾನು ಶ್ರೀನಿವಾಸ ಜಿ. ಕಪ್ಪಣ್ಣ ಅವರನ್ನು ಕೇಳಿದೆ. ಅವರು ‘ಆ’ ದಿನಗಳಿಗೆ ಜಾರಿದರು. ತುಂಬ ಉತ್ಸಾಹದಿಂದಲೇ, ”ನಾನೇ ಆ ನಾಟಕಕ್ಕೆ ಲೈಟಿಂಗ್ ಮಾಡಿದ್ದೆ… ಆರ್. ನಾಗೇಶ್ ಸೆಟ್ ಮಾಡಿದ್ದರು. ‘ಕನ್ನಡ ಸಾಹಿತ್ಯ ಕಲಾ ಸಂಘ’ ಆ ನಾಟಕವನ್ನ ಎತ್ತಿಕೊಂಡಿತ್ತು… ಅದ್ಭುತ ಪ್ರಯೋಗ ಅದು…” ಎಂದೆಲ್ಲ ಅವರು ಹೇಳುತ್ತಿದ್ದಾಗ ಮೆಲ್ಲನೆ ಮತ್ತೆ ನನ್ನ ನೆನಪು ನಿಚ್ಚಳವಾಯಿತು. ನಮ್ಮ ಪ್ರೀತಿಯ ಆರ್. ನಾಗೇಶ್ ಅದರಲ್ಲಿ ಕಾಲಪುರುಷನ ಪಾತ್ರದಲ್ಲಿ ಅಭಿನಯಿಸಿದ್ದರು.
ಆ ದಿನಗಳಲ್ಲಿ ಕನ್ನಡದ ಪ್ರಾಯೋಗಿಕ ರಂಗಭೂಮಿಯಲ್ಲಿ ಲವ-ಕುಶರಂತೆ ಮಿಂಚಿದವರು ಈ ಕಪ್ಪಣ್ಣ ಮತ್ತು ನಾಗೇಶ್.

-೦-೦-೦-೦-೦-

ಹಾಂ… ಕಾರಂತರು ಹುಬ್ಬಳ್ಳಿ-ಧಾರವಾಡಗಳಿಗೆ ತಮ್ಮ ಪ್ರಯೋಗಗಳೊಂದಿಗೆ ಬಂದ ಸಂದರ್ಭದ ಕುರಿತು ಹೇಳುತ್ತಿದ್ದೆ. ಆಗ ಅವರು ‘ಬೆನಕ’ ತಂಡದ ತಮ್ಮ ಪ್ರಯೋಗಗಳೊಂದಿಗೆ ಬೆಂಗಳೂರಿನಿಂದ ಮುಂಬಯಿ ತನಕ ರಂಗಯಾತ್ರೆ ಹೊರಟಿದ್ದರು. ನಡುವಿನ ಎಲ್ಲ ಮುಖ್ಯ ನಗರಗಳಲ್ಲಿ ಅವರ ಪ್ರಯೋಗಗಗಳು. ಹುಬ್ಬಳ್ಳಿಯಲ್ಲಿನ್ನೂ ಅರೆಬರೆ ಸಿದ್ಧಗೊಂಡಿದ್ದ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ‘ಜೋಕುಮಾರ ಸ್ವಾಮಿ’, ‘ಹಯವದನ’, ‘ಮುಂದೇನ ಸಖಿ ಮುಂದೇನ…?’ ಹಾಗೂ ‘ಸತ್ತವರ ನೆರಳು’ ನೋಡಿ ದಂಗಾಗಿ ಹೋಗಿದ್ದೆವು. ನಾವು ಅಂದುಕೊಂಡದ್ದಕ್ಕಿಂತ ಸಂಪೂರ್ಣ ಭಿನ್ನವೆನಿಸಿದ್ದ ಈ ನಾಟಕಗಳು ‘ಮತ್ತೆ’ ನೋಡಬೇಕೆಂಬ ಹಂಬಲವನ್ನು ಹುಟ್ಟಿಸಿದ್ದಂತೂ ನಿಜ. ಅಷ್ಟೇ ಅಲ್ಲ, ನಾವು ಅಂಥ ನಾಟಕಗಳತ್ತ, ಅಂಥ ಪ್ರಯೋಗಗಳತ್ತ ತಿರುಗಿದ್ದೂ ನಿಜ.
ಧಾರವಾಡದ ‘ಜೋಕುಮಾರಸ್ವಾಮಿ’ ಪ್ರಯೋಗ ನೋಡಲು ಹೋಗಬೇಕೆಂದು ಸಿದ್ಧನಾಗಿದ್ದ ನನಗೆ ಆಫೀಸಿನ ಕೆಲಸವೊಂದು ಬೆಕ್ಕಿನಂತೆ ಅಡ್ಡ ಬಂದಿತ್ತು. ಕೈ ಕೈ ಹಿಸುಕಿಕೊಂಡೆ. ಆ ಪ್ರಯೋಗ ವಿಶೇಷವಾದದ್ದೇ. ಗಿರೀಶ ಕಾರ್ನಾಡರು ಅಲ್ಲಿ ಗೌಡನ ಪಾತ್ರದಲ್ಲಿ ಅಭಿನಯಿಸಲಿದ್ದರು. (ಹುಬ್ಬಳ್ಳಿಯ ಪ್ರಯೋಗದಲ್ಲಿ ಆ ಪಾತ್ರ ಮಾಡಿದ್ದವರು ಜಿ. ವಿ. ಶಿವಾನಂದ.)
ಆದರೆ, ಯಾವುದೇ ಕಾರಣಕ್ಕೂ ಧಾರವಾಡದಲ್ಲಿಯ ‘ಸತ್ತವರ ನೆರಳು’ ಪ್ರಯೋಗವನ್ನು ತಪ್ಪಿಸಿಕೊಳ್ಳಲು ನಾನು ಸಿದ್ಧನಿರಲಿಲ್ಲ. ನಮ್ಮ ಸಾಹೇಬರನ್ನು ಹುರಿದುಂಬಿಸಿ, ಅವರನ್ನು ಮುಂದುಮಾಡಿಕೊಂಡು ಬೇಗನೇ ಹೊರಟುಬಿಟ್ಟೆ.
ಆಗ ಧಾರವಾಡದಲ್ಲಿ ನಾಟಕಗಳಿಗೆ ‘ಟ್ಯಾಗೋರ್ ಹಾಲ್’ ಒಂದೇ ಪ್ರಯೋಗಮಂದಿರ. ಅದು ಇದ್ದದ್ದು ಕಾರ್ನಾಡರು ಓದಿದ ಬಾಸೆಲ್ ಮಿಶನ್ ಹೈಸ್ಕೂಲಿನ ಕಾಂಪೋಂಡಿನಲ್ಲಿ. ನಾಟಕಪ್ರಯೋಗಗಳಿಗಂತ ಹೇಳಿ ಮಾಡಿಸಿದ ಕಟ್ಟಡವೇನೂ ಅಲ್ಲ. ಆದರೆ ಅದನ್ನು ಬಿಟ್ಟರೆ ಬೇರೆ ಜಾಗವೇ ಇರಲಿಲ್ಲ. ‘ಸವಾಯಿ ಗಂಧರ್ವ ಕಲಾಮಂದಿರ’ ತಲೆ ಎತ್ತುವುದಕ್ಕಿಂತ ಮೊದಲು ಹುಬ್ಬಳ್ಳಿಯಲ್ಲೂ ಅದೇ ಸ್ಥಿತಿ. ಆಗ ಮರಾಠಿ ನಾಟಕಗಳು ದೇಶಪಾಂಡೆ ನಗರದ ನ್ಯೂ ಇಂಗ್ಲಿಷ್ ಗರ್ಲ್ಸ್ ಹೈಸ್ಕೂಲಿನ ಒಳಾಂಗಣದಲ್ಲಿ ನಡೆಯುತ್ತಿದ್ದವು.
‘ಸತ್ತವರ ನೆರಳು’ ಪ್ರಯೋಗ ಅದಾಗಲೇ ‘ಸಾಕಷ್ಟು’ ಹೆಸರು ಮಾಡಿತ್ತಾದ್ದರಿಂದ ಟ್ಯಾಗೋರ್ ಹಾಲ್ ತುಂಬಿ ಹೋಗಿತ್ತು. ನಾವು ಅದು ಹೇಗೋ ಎರಡು ಟಿಕೆಟ್ ದೊರಕಿಸಿಕೊಂಡು ಅನಿವಾರ್ಯವಾಗಿ, ತೀರ ಹಿಂದೆ ಕೂತುಕೊಂಡೆವು.
ಕಾರಂತರು ಅದರಲ್ಲಿ ಬಳಸಿಕೊಂಡಿದ್ದ ದಾಸರ ಪದಗಳ ಸಲುವಾಗಿಯೇ ನಾಟಕವನ್ನು ನೋಡಲು ಬಂದವರು ಕೆಲವರು. ಗುಂಪನ್ನು ಬೇರೆ ಬೇರೆ ರೀತಿ ಬಳಸಿಕೊಂಡು ಆ ಮೂಲಕ ನಾಟಕದ ಮುಂದುವರಿಕೆಯನ್ನು ಚಮತ್ಕಾರಿಕವಾಗಿ ನಿರ್ವಹಿಸಿದ ಕಾರಂತರ ಕೌಶಲಕ್ಕೆ ಸಾಕ್ಷಿಯಾಗಲು ಬಂದವರು ಇನ್ನು ಕೆಲವರು. ಶುರುವಾಯಿತು ಕಾರಂತರ ಮೋಡಿ. ಕಣ್ಣಲ್ಲೇ ಉಳಿದವರಿಗೆ ಸೂಚನೆ ಕೊಡುತ್ತ, ಆ ಗುಂಪಿನ ಹರಿದಾಸರಲ್ಲೊಬ್ಬರಾಗಿ ಮೇಳವನ್ನು ಮುನ್ನಡೆಸುತ್ತಿದ್ದವರು ಸ್ವತಃ ಕಾರಂತರೇ.
ಮೊದಲ ಪದ ಮುಗಿಯಿತು. ನಾಟಕ ಮುಂದುವರಿಯಿತು. ಜನ ಗಪ್ಪುಗಡದ್ದಾಗಿ ಕೂತು ನೋಡುತ್ತಿದ್ದ ಹೊತ್ತಿನಲ್ಲೇ ಎರಡನೆಯ ಹಾಡು ಶುರುವಾಯಿತು.
ಜೈ ಹರಿ ವಿಠಲ ಶ್ರೀ ಹರಿ ವಿಠಲ…
ಶ್ರೀ ಹರಿ ವಿಠಲ ಜೈ ಹರಿ ವಿಠಲ…
ವಿಠಲ ವಿಠಲ ಜೈ ಹರಿ ವಿಠಲ…
ಆ ಹಾಡಿನೊಂದಿಗೆ ಗುಂಪು ಮುಂದುವರಿಯಬೇಕು, ದೃಶ್ಯ ಬದಲಾಗಬೇಕು. ಅಷ್ಟರಲ್ಲೇ ಮೈಕು ಕೈ ಕೊಟ್ಟಿತು. ಇದ್ದಕ್ಕಿದ್ದ ಹಾಗೆಯೇ ಪ್ರೇಕ್ಷಾಗೃಹದಲ್ಲಿ ಗಡಿಬಿಡಿ. ”ಸೌಂಡೂ…” ಅಂತ ಕೆಲವರು, ”ಮೈಕೂ…” ಅಂತ ಇನ್ನು ಕೆಲವರು.
ಜನ ಅಷ್ಟು ಗದ್ದಲ ಮಾಡುತ್ತಿದ್ದರೂ ಕಾರಂತರು ವಿಚಲಿತಗೊಳ್ಳಲಿಲ್ಲ. ಹಾಡನ್ನು ಹೇಳುತ್ತ ನಾಟಕವನ್ನು ಮುಂದುವರಿಸೇಬಿಟ್ಟರು. ಅಷ್ಟೇ ಅಲ್ಲ, ಆಗ ಹಾಡುತ್ತಿದ್ದ ಹಾಡನ್ನೇ ಜನರನ್ನು ಸುಮ್ಮನಾಗಿಸುವ ಉಪಾಯವನ್ನಾಗಿ ಮಾಡಿಕೊಂಡರು.
ಮೈಕಿಲ್ಲ ವಿಠಲ ಶ್ರೀಹರಿ ವಿಠಲ
ಶ್ರೀಹರಿ ವಿಠಲ ಮೈಕಿಲ್ಲ ವಿಠಲ
ಮೈಕಿಲ್ಲ ವಿಠಲ ಮೈಕಿಲ್ಲ ವಿಠಲ
ಶ್ರೀಹರಿ ವಿಠಲ ಮೈಕಿಲ್ಲ ವಿಠಲ
ಕೂಡಲೇ ಜನ ವಸ್ತುಸ್ಥಿತಿಯನ್ನು ಅರಿತುಕೊಂಡು ಸುಮ್ಮನಾದರು. ಇಡೀ ನಾಟಕವನ್ನು ಆಸ್ವಾದಿಸಿದರು. ಎಲ್ಲೂ ಯಾರೂ ‘ಕುಂಯ್’ ಅನ್ನಲಿಲ್ಲ. ಮೈಕಿಲ್ಲ ಎಂಬುದನ್ನೇ ಮರೆತಂತಿತ್ತು ಜನ. ನಾವು ಕೊನೆಯ ಸಾಲಿನಲ್ಲಿ ಕೂತಿದ್ದವರು ಪ್ರತಿ ಮಾತಿನ ಪ್ರತಿ ಭಾವವನ್ನೂ ಗ್ರಹಿಸುವಷ್ಟು ಸ್ಪಷ್ಟವಾಗಿ ಕೇಳುತ್ತಿತ್ತು ಕಲಾವಿದರ ದನಿ.
ಮುಂದೊಮ್ಮೆ NSD ರೆಪರ್ಟರಿಯ ‘ಬೇಗಂ ಕಿ ತಕಿಯಾ’ ಮುಂತಾದ ನಾಟಕಗಳೊಂದಿಗೆ ಕಾರಂತರು ಹುಬ್ಬಳ್ಳಿ-ಧಾರವಾಡಗಳಿಗೆ ಬಂದಾಗಲೂ ಅಷ್ಟೇ. ಮೈಕುಗಳನ್ನೇ ಬಳಸಿರಲಿಲ್ಲ. ಅಂಥ ಕಂಠತ್ರಾಣ ಆ ಕಲಾವಿದರದು. ಹಾಗಂದ ಮಾತ್ರಕ್ಕೆ ಅವರು ಜೋರಾಗಿ ಕಿರುಚಿ ಕಿರುಚಿ ಸಂಭಾಷಣೆಗಳನ್ನು ಹೇಳುತ್ತಿದ್ದರು ಎಂದಲ್ಲ… ಅವರು ನಮ್ಮೆದುರು ಕೂತು ಮಾತಾಡಿದ ಹಾಗೆ ಸಹಜವಾಗಿಯೇ ಸಂಭಾಷಣೆಗಳನ್ನು ಹೇಳುತ್ತಿದ್ದರು. ಸೂಜಿ ಬಿದ್ದ ಸದ್ದೂ ಕೇಳುವಷ್ಟು ಶಾಂತತೆ ಅಲ್ಲಿ ನೆಲೆಸಿತ್ತು. ಪ್ರೇಕ್ಷಕ ತಂತಾನೇ ಆ ಸ್ಥಿತಿಗೆ ಹೊಂದಿಕೊಳ್ಳುವಂತೆ ಜಾಣ್ಮೆಯಿಂದ ಕಾರಂತರು ನೋಡಿಕೊಂಡಿದ್ದರು.

-೦-೦-೦-೦-೦-

ಆ ಪ್ರಯೋಗಗಳ ನಂತರ ಕಾರಂತ ಎಂಬ ಸೂಜಿಗಲ್ಲಿನ ಸೆಳೆತಕ್ಕೆ ನಮ್ಮಂಥ ಹುಡುಗರು ಸಿಲುಕಿಬಿಟ್ಟೆವೆಂಬುದು ಐತಿಹಾಸಿಕ ಸತ್ಯ. ಕ್ರಮೇಣ, ನಾವು ನಾವೇ ಏಕಲವ್ಯರಂತೆ ನಮ್ಮ ನಾಟಕ ಪ್ರಯೋಗಗಳಲ್ಲಿಯ ಕುಂದು ಕೊರತೆಗಳು ಏನು, ಅವನ್ನು ಹೇಗೆ ಸುಧಾರಿಸಬಹುದು ಇತ್ಯಾದಿ ವಿಷಯದತ್ತ ಗಂಭೀರ ಚಿಂತನೆಗೆ ತೊಡಗಿದೆವು. ರಂಗಭೂಮಿ ಮತ್ತು ನಾಟಕ ಪ್ರಯೋಗಗಳ ಕುರಿತು ಯಾವುದೇ ಲೇಖನ, ಪುಸ್ತಕ ಸಿಕ್ಕರೂ ಓದಿ, ಚರ್ಚಿಸಿ ನಮ್ಮ ಜ್ಞಾನಸೀಮೆಯನ್ನು ವಿಸ್ತರಿಸಿಕೊಳ್ಳುವ ಯತ್ನಕ್ಕೆ ಕೈಹಾಕಿದೆವು. ಆ ಪ್ರಕ್ರಿಯೆಯಲ್ಲಿ ನಮಗೆ ಸಿಕ್ಕವರು ಅನೇಕ ಸಮಾನಾಸಕ್ತ ಗೆಳೆಯರು ಮತ್ತು ಹಿರಿಯರು. ತಪ್ಪೋ ಒಪ್ಪೋ… ನಾವಂತೂ ಪ್ರಯೋಗನಿರತರಾದೆವು. ಆ ದಿನ ‘ಸತ್ತವರ ನೆರಳು’ ಸಂದರ್ಭದಲ್ಲಿ ಮೈಕು ಕೈಕೊಟ್ಟಾಗ ಕಾರಂತರು ಪ್ರೇಕ್ಷಕರನ್ನು ಹೇಗೆ ಸಂಬಾಳಿಸಿದರು, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದರು ಎಂಬುದೇ ನಮಗೊಂದು ದೊಡ್ಡ ಪಾಠವಾಗಿ ಬಿಟ್ಟಿತು.
ಹೌದು. ದೊಡ್ಡ ಪಾಠ. ಯಾಕಂದರೆ, ಅದಕ್ಕೂ ಮುಂಚೆ ಇಂಥದೇ ಕೆಲವು ಸಂದರ್ಭಗಳಲ್ಲಿ ಜನ ಗಲಾಟೆ ಮಾಡಿ, ನಾಟಕಕ್ಕೆ ಅಡ್ಡಿ ತಂದ ಉದಾಹರಣೆಗಳನ್ನು ನಾವು ಮರೆತಿರಲಿಲ್ಲ. ಇನ್ನು ಕೆಲವು ಸಂದರ್ಭಗಳಲ್ಲಿ ಹೀಗೆ ಗಲಾಟೆ ಮಾಡುತ್ತಿದ್ದ ಪ್ರೇಕ್ಷಕರನ್ನು ನಾಟಕದ ಮುಖ್ಯ ಪಾತ್ರಧಾರಿ ವಾಚಾಮಗೋಚರವಾಗಿ ಬೈದದ್ದೂ ನಮ್ಮ ನೆನಪಿನಲ್ಲಿತ್ತು. ಇದೆಲ್ಲದರ ಹಿನ್ನೆಲೆಯಲ್ಲಿ, ಆ ದಿನ ಕಾರಂತರು ತೋರಿದ ಪ್ರಸಂಗಾವಧಾನ ನಮ್ಮ ಕಣ್ಣು ತೆರೆಸಿತ್ತು.
”ನಾಟಕ ಇರುವುದೇ ಪ್ರೇಕ್ಷಕನಿಗಾಗಿ. ಎಂಥ ಅಡ್ಡಿಯೇ ಎದುರಾಗಲಿ, ‘ದಿ ಶೋ ಮಸ್ಟ್ ಗೋ ಆನ್…’ ಆತನಿಗೆ ಕಿರಿಕಿರಿಯಾಗದ ಹಾಗೆ ಪ್ರಯೋಗಿಸುವುದರಲ್ಲೇ ನಾಟಕದ ಯಶಸ್ಸು ಅಡಗಿದೆ…” ಎಂಬುದನ್ನು ಆ ದಿನ ಕಾರಂತರು ನಮಗೆಲ್ಲ ಮನದಟ್ಟು ಮಾಡಿದ್ದರು.
ಕಲಿಕೆಯ ಪ್ರಕ್ರಿಯೆಯಲ್ಲಿ ನಾವು ರೂಢಿಸಿಕೊಳ್ಳತೊಡಗಿದ್ದು ಹಲವಾರು ಸಂಗತಿಗಳನ್ನು. ಧ್ವನಿ ಮತ್ತು ಚಲನೆ ಅವುಗಳಲ್ಲಿ ಮುಖ್ಯವಾದ ಎರಡು ಸಂಗತಿಗಳು. ”ನಟರಿಗೆ ‘ಪೈಪು’ ಸರಿಯಾಗಿರಬೇಕು,” ಅನ್ನುತ್ತಿದ್ದರಂತೆ ಗುಬ್ಬಿ ವೀರಣ್ಣನವರು. ಪೈಪು ಅಂದರೆ ಧ್ವನಿ. ಕಂಠ. ನಟ ಆಡುವ ಮಾತು, ಹೇಳುವ ಹಾಡು ಅಲ್ಲಿ ದೂರದಲ್ಲಿ (ಚಾಪೆಯ ಮೇಲೆ) ಕೂತ ಪ್ರೇಕ್ಷಕ ಪ್ರಭುವಿಗೆ ಕೇಳಿಸಬೇಕು. ಹಾಗೆ ಧ್ವನಿಯನ್ನು ತರಬೇತುಗೊಳಿಸಿಕೊಳ್ಳಬೇಕು, ಎಂಬುದು ವೀರಣ್ಣನವರ ನಂಬಿಕೆ. ಅಂದರೆ ನಾಟಕ ಪ್ರೇಕ್ಷಕನನ್ನು ತಲಪಬೇಕು, ತಟ್ಟಬೇಕು. ಆಗಲೇ ಅದು ಯಶಸ್ವಿಯಾದ ಲೆಕ್ಕ. ಪ್ರೇಕ್ಷಕ ಪ್ರಭು ಒಪ್ಪಿದರೆ ನಾಟಕ ಗೆದ್ದ ಹಾಗೆ.
ಮೈಕಿನ ಎದುರು ಬಂದು ಮಾತಾಡಿ, ಬದಿಗೆ ಸರಿಯುವ ವೃತ್ತಿ ರಂಗಭೂಮಿಯ ಆ ಕ್ರಮವನ್ನು ಕೈಬಿಟ್ಟವರು ಕಾರಂತರು. ನಟ ತಾನು ನಿಂತಲ್ಲಿಂದಲೇ ಅಥವಾ ಓಡಾಡುತ್ತಲೇ ಆಡುವ ಮಾತು ಪ್ರೇಕ್ಷಕರಿಗೆ ತಲಪಿಸುವುದು ಹೇಗೆ ಎಂಬುದನ್ನು ಅವರು ತೋರಿಸಿಕೊಟ್ಟಿದ್ದರು. ಮಾತು ಮತ್ತು ಚಲನೆ ಎರಡೂ ಎದುರಿಗಿರುವ ಜನಕ್ಕೆ ಮುಟ್ಟಿದಾಗಲೇ ನಾಟಕ ಸಲೀಸಾಗಿ ಮುಂದುವರಿಯುವುದು. ಅದಕ್ಕೆ ಧ್ವನಿಯನ್ನು ತರಬೇತುಗೊಳಿಸಬೇಕು.
ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡ ನಾವು ನಾವೇ ಧ್ವನಿ ವ್ಯಾಯಾಮ ಇತ್ಯಾದಿಗಳತ್ತ ಗಮನ ಹರಿಸಿದೆವು.
ಈ ಸಂಬಂಧದಲ್ಲಿ ನನ್ನ ನೆರವಿಗೆ ಬಂದದ್ದು ಆಕಾಶವಾಣಿ. ಅಲ್ಲಿ ಪ್ರಸಾರವಾಗುತ್ತಿದ್ದ ನಾಟಕಗಳಲ್ಲಿ ಎಲ್ಲವೂ ‘ಧ್ವನಿ’ ಮತ್ತು ‘ಧ್ವನಿ ಪರಿಣಾಮ’ಗಳ (Voice & Sound effects) ಮೂಲಕ ಕೇಳುಗನನ್ನು ತಲಪಬೇಕು. ಆ ಕಾರಣದಿಂದಲೇ ನಾನು ಆಕಾಶವಾಣಿ ನಾಟಕಗಳ ಆಡಿಶನ್ನಿಗೆ ಹೋದದ್ದು. ಕಲಾವಿದನಾಗಿ ಆಯ್ಕೆಯಾದದ್ದು. ಅದೆಲ್ಲ 1974ರ ಸುಮಾರಿನ ಮಾತು. ಆಗ ಧಾರವಾಡ ಕೇಂದ್ರದಲ್ಲಿ ಎಂಥೆಂಥ ಘಟಾನುಘಟಿ ಕಲಾವಿದರಿದ್ದರು. ಒಬ್ಬೊಬ್ಬರದೂ ಒಂದೊಂದು ‘ವಿಶಿಷ್ಟ’ ದನಿ. ಕೇಳುಗನ ಮನದಲ್ಲಿ ಮನೆಮಾಡಿ ಕೂತಂಥ ದನಿಗಳವು. ನಮ್ಮ ಸಿನಿಮಾ ರಂಗದ ಸಂಭಾವಿತ ನಟ ಕೆ. ಎಸ್. ಅಶ್ವಥ್ ಅವರಿಗೆ ನಾಟಕದ ರುಚಿ ಹಚ್ಚಿಸಿದವರು ಎನ್. ಎಸ್. ವಾಮನ್ ಅವರು ಅಲ್ಲಿದ್ದವರೇ. ಅವರ ನಿರ್ದೇಶನದ ಒಂದೆರಡು ಆಕಾಶವಾಣಿ ನಾಟಕಗಳಲ್ಲಿ ಪಾತ್ರವಹಿಸುವ ಅವಕಾಶ ನನಗೆ ಒದಗಿತ್ತು. ಹಾಗೆಯೇ, ನನ್ನ ದನಿಯನ್ನು ಗುರುತಿಸಿ, ಪ್ರೋತ್ಸಾಹಿಸಿ, ಕಲಾವಿದನಾಗಿ ಅಷ್ಟೇ ಅಲ್ಲ, ಬಾನುಲಿಯ ನಾಟಕಕರನಾಗಿಯೂ ನನ್ನನ್ನು ಬೆಳೆಸಿದವರು ಶ್ರೀಮತಿ ಯಮುನಾ ಮೂರ್ತಿ. ಇಂದಿಗೂ ಅವರು ಆ ದಿನಗಳನ್ನು ನೆನೆದು ಭಾವುಕರಾಗುತ್ತಾರೆ.

-೦-೦-೦-೦-೦-

ರಂಗಭೂಮಿಯಲ್ಲಿ ನಮ್ಮ ‘ಪ್ರಯೋಗ’ಗಳು ಹೀಗೆಯೇ ಸಾಗಿದವು.

ಯಾರು ನಮಗೆ ಆದರ್ಶವಾಗಿ, ಪ್ರೇರಣೆಯಾಗಿ, ನಾಟಕ ರಂಗದಲ್ಲಿ ಪ್ರಯೋಗಶೀಲರಾಗಿ ಮುಂದೆ ಸಾಗಲು ಕಾರಣರಾದರೋ ಅಂಥ ಕಾರಂತರನ್ನು ಹತ್ತಿರದಿಂದ ನೋಡುವ, ಅವರ ಉಪನ್ಯಾಸಗಳನ್ನು ಆಲಿಸುವ, ಅವರೊಡನೆ ಒಂದಷ್ಟು ದಿನ ತಿರುಗಾಡುವ, ಅವರ ಮೆಚ್ಚುಗೆಗೆ ಪಾತ್ರವಾಗುವ ಸದವಕಾಶ ಅಯಾಚಿತವಾಗಿ ನನಗೆ ಒದಗಿ ಬಂತು.
ಅದು 1985ರ ಎಪ್ರಿಲ್ ತಿಂಗಳು. ಕಾರಂತರ ಶಿಷ್ಯ ಜಯತೀರ್ಥ ಜೋಶಿ ಹುಬ್ಬಳ್ಳಿಯ ನಮ್ಮ ‘ಅಭಿನಯ ಭಾರತಿ’ ತಂಡಕ್ಕೆ ಐದು ವಾರಗಳ ಒಂದು ಸಮಗ್ರ ರಂಗ ತರಬೇತಿ ಶಿಬಿರ ಮಾಡಿಸುತ್ತಿದ್ದ ಸಂದರ್ಭ. ಶಿಬಿರದ ವರ್ಗಗಳು ನಡೆಯುತ್ತಿದ್ದದ್ದು ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ. ಆಗ ಕಾರಂತರು ‘ಭೋಪಾಲ್ ರಂಗಮಂಡಲ’ದ ಒಂದಷ್ಟು ನಾಟಕಗಳೊಂದಿಗೆ ಕರ್ನಾಟಕ ಪ್ರವಾಸಕ್ಕೆ ಬಂದರು. ಐದು ದಿನ ಹುಬ್ಬಳ್ಳಿಯಲ್ಲಿ ಅವರ ರಂಗಪ್ರಯೋಗಗಳು. ಆಗ ನಮ್ಮ ಶಿಬಿರದ ವರ್ಗಗಳನ್ನು ಸಮೀಪದ ರೋಟರಿ ಸ್ಕೂಲಿಗೆ ಸ್ಥಳಾಂತರಗೊಳಿಸಬೇಕಾಯಿತು.
‘ರಂಗಮಂಡಲ’ದ ಕಲಾವಿದರನ್ನೆಲ್ಲ ಒಮ್ಮೆ ನಮ್ಮ ಶಿಬಿರಕ್ಕೆ ಆಹ್ವಾನಿಸಿದೆವು. ಆ ಕಲಾವಿದರೆದುರು ನಮ್ಮ ಹುಡುಗರು ಕೆಲವು ಸ್ಕಿಟ್ಟುಗಳನ್ನು ಮಾಡಿ ತೋರಿಸಿದರು. ವಿಭಾ ಮಿಶ್ರಾ ಮುಂತಾದ ಕೆಲವರು ನಮ್ಮ ಹುಡುಗರಿಗೆ ವಿವಿಧ ವಿಷಯಗಳ ಕುರಿತು ಬೆಳಗಿನ ಅವಧಿಯಲ್ಲಿ ಪಾಠ ಮಾಡಿದರು. ಎಲ್ಲಕ್ಕಿಂತ ಹೆಮ್ಮೆಯ ಸಂಗತಿ ಎಂದರೆ ಬಿ.ವಿ. ಕಾರಂತರು ಮೂರು ದಿನ ಬೆಳಿಗ್ಗೆ ನಮ್ಮ ಶಿಬಿರಾರ್ಥಿಗಳಿಗೆ ‘ನಾಟಕ ಮತ್ತು ಸಂಗೀತ’ ಎಂಬ ವಿಷಯದ ಮೇಲೆ ಪ್ರಾತ್ಯಕ್ಷಿಕೆ ಸಹಿತದ ಉಪನ್ಯಾಸ ನೀಡಿದ್ದು. ಆ ಸಂದರ್ಭದಲ್ಲಿ ಹಾಜರಿದ್ದವರು ಕೇವಲ ಶಿಬಿರಾರ್ಥಿಗಳಲ್ಲ; ಸಂಗೀತದಲ್ಲಿ ಆಸಕ್ತಿ ಇದ್ದ ಮಹಾನಗರದ ಅನೇಕ ಮಹನೀಯರು.
ಸಂಚಾಲಕನಾಗಿ ನಾನು ಆಗ ನಿರ್ವಹಿಸಬೇಕಾಗಿದ್ದ ಕೆಲಸ ಎಂದರೆ ಪ್ರತಿ ಮುಂಜಾವದಲ್ಲಿ ಹುಬ್ಬಳ್ಳಿಯ ಪ್ರವಾಸಿ ಮಂದಿರಕ್ಕೆ ಹೋಗುವುದು ; ಕಾಫಿ ಕುಡಿದು ತಯಾರಾಗಿ ಕೂತ ಕಾರಂತರನ್ನು ಆಟೋದಲ್ಲಿ ಶಿಬಿರ ಸ್ಥಳಕ್ಕೆ ಕರೆದೊಯ್ಯುವುದು; ಮತ್ತು ಉಪನ್ಯಾಸ ಮುಗಿದ ಮೇಲೆ ಅವರನ್ನು ಮರಳಿ ಪ್ರವಾಸಿ ಮಂದಿರಕ್ಕೆ ಬಿಡುವುದು. ಮೊದಲನೇ ದಿನ ಅವರ ಉಪನ್ಯಾಸ ಮುಗಿಯಿತು. ವಾಪಸ್ ಪ್ರವಾಸಿ ಮಂದಿರಕ್ಕೆ ಬಿಡಲೆಂದು ಆಟೋದವನನ್ನು ಕರೆಯಲು ಯಾರಿಗೋ ಹೇಳಿದೆ. ಅದನ್ನು ಕೇಳಿಸಿಕೊಂಡ ಕಾರಂತರು, ”ಬೆಳಿಗ್ಗೆ ಕ್ಲಾಸಿಗೆ ತಡ ಆಗಬಾರದು ಅಂತ ಆಟೋ ಹಿಡಿಯೋದು… ಈಗ ನಡೀತಾ ಹೋಗೋಣ ಬನ್ರೀ…” ಅಂತ ಹೆಜ್ಜೆ ಹಾಕತೊಡಗಿದರು. ನಡೆದು ಹೋದರೆ ಶಿಬಿರ ಸ್ಥಳದಿಂದ ಪ್ರವಾಸಿ ಮಂದಿರ ಕೇವಲ ಐದಾರು ನಿಮಿಷದ ಹಾದಿ.
ಹಾಗೆ ನಡೆದು ಹೊರಟಿರುವಾಗ ಎದುರಾದವರು ನಮ್ಮ ಹೆಮ್ಮೆಯ ಸಂಗೀತ ವಿದುಷಿ ಶ್ರೀಮತಿ ಗಂಗೂಬಾಯಿ ಹಾನಗಲ್ಲರು. ದೇಶಪಾಂಡೆ ನಗರದಲ್ಲಿಯೇ ಅವರ ಮನೆ. ಅವರು ಆಗೀಗ ಆ ರಸ್ತೆಯಲ್ಲಿ ಕಾಣುತ್ತಿದ್ದದ್ದು ನಮಗೆಲ್ಲ ಸಾಮಾನ್ಯವೇ. ಆದರೆ ಕಾರಂತರಿಗೆ ಅದು ಅಚ್ಚರಿಯ ಸಂಗತಿ. ತಕ್ಷಣವೆ ಕೈಮುಗಿದು ನಿಂತುಬಿಟ್ಟರು. ಗಂಗೂಬಾಯರೂ ಅಷ್ಟೇ. ಇಬ್ಬರೂ ಪರಸ್ಪರರನ್ನು ನೋಡುತ್ತ ಒಂದು ನಿಮಿಷ ಹಾಗೆಯೇ ನಿಂತಿದ್ದರು. ಕೊನೆಗೆ ಗಂಗೂಬಾಯರೇ, ”ಬರ್ರಿ… ಇಲ್ಲೇ ಅದ ನನ್ನ ಮನಿ. ಒಂದು ಕಪ್ಪು ಛಾ ಕುಡದು ಹೋಗೀರಂತ…” ಅಂತ ಮೌನ ಮುರಿದರು. ”ಈಗ…?” ಅಂತ ಕಾರಂತರು ರಾಗವೆಳೆಯುವ ಹೊತ್ತಿಗೆ ಗಂಗೂಬಾಯರೇ, ”ಆತು… ನಿಮಗ ಯಾವಾಗ ಟಾಯಿಮ್ಮಿರತದೊ ಆವಾಗ ಬರ್ರಿ…” ಅಂದವರೇ, ”ವಾಜಪೇಯಿಯವರ… ಇವರನ ಕರಕೊಂಡು ಬರೋ ಜವಾಬ್ದಾರಿ ನಿಮ್ದು…” ಅಂತ ನಕ್ಕರು.
ಮರುದಿನ ಬೆಳಿಗ್ಗೆ ಶಿಬಿರದ ಪಾಠಕ್ಕೆ ಆಟೋದಲ್ಲಿ ಹೊರಟಿದ್ದಾಗ ”ಕ್ಲಾಸ್ ಮುಗಿದ ಮೇಲೆ ಗಂಗೂಬಾಯರ ಮನೆಗೆ ಹೋಗೋಣ ವಾಜಪೇಯಿ,” ಅಂತ ಕೇಳಿದರು ಕಾರಂತರು.

-೦-೦-೦-೦-೦-

ದೇಶಪಾಂಡೆ ನಗರದ ‘ಗಂಗಾ ಲಹರಿ’ಯಲ್ಲಿ ಅವರಿಬ್ಬರೂ ಸುಮಾರು ಒಂದೂವರೆ ಗಂಟೆ ಕಾಲ ಮಾತಾಡುತ್ತಲೇ ಇದ್ದರು. ಆ ಮೇರು ವ್ಯಕ್ತಿತ್ವಗಳ ನಡುವಿನ ಆ ಸಂವಾದ ಸಂಗೀತ ಮತ್ತು ನಾಟಕಗಳ ಕುರಿತ ಹಲವು ಸಂಗತಿಗಳನ್ನು ಅನಾವರಣಗೊಳಿಸುವಂಥದು. ಓಂಕಾರನಾಥ ಠಾಕೂರರು, ಸವಾಯಿ ಗಂಧರ್ವರು, ಬಾಲ ಗಂಧರ್ವರು, ಕುಮಾರ ಗಂಧರ್ವರು, ಕನ್ನಡ ನಾಟಕಗಳು, ಮರಾಠಿ ನಾಟಕಗಳು… ಅಬ್ಬಾ… ಏನೆಲ್ಲಾ ಹರಹು ಎಷ್ಟೆಲ್ಲಾ ವಿಚಾರಗಳು…! ನಾನು ಸುಮ್ಮನೆ ಕಿವಿದೆರೆದು ಕೂತಿದ್ದೆ. ಸಿಕ್ಕುವುದನ್ನು ನನ್ನ ‘ಮಾಹಿತಿ ಕೋಶ’ದ ಒಳಗೆ ಸೇರಿಸಿಕೊಳ್ಳುತ್ತ ಹೋಗುವುದಷ್ಟೇ ನನ್ನ ಕೆಲಸ. ನನ್ನ ಕೆಲಸವನ್ನು ಇನ್ನಷ್ಟು ಹಗುರಾಗಿಸಿದವರು ಗಂಗೂಬಾಯಿಯವರ ಮಗ ಬಾಬಣ್ಣ. ಆ ‘ಮಾತುಕತೆ’ಯನ್ನು ಅವರು ಇಡಿಯಾಗಿ ಮತ್ತು ರಹಸ್ಯವಾಗಿ ರೆಕಾರ್ಡ್ ಮಾಡಿಟ್ಟಿದ್ದರು. ಆ ವಿಷಯ ನನಗೆ ತಿಳಿದದ್ದು ಮುಂದೆ ಆರು ತಿಂಗಳಿನ ನಂತರ. ಒಂದೆರಡು ದಿನ ಗಟ್ಟಿಯಾಗಿ ಕೂತು ಆ ಕ್ಯಾಸೆಟ್ಟನ್ನು ತಿರುಗಿಸಿ ತಿರುಗಿಸಿ ಆಲಿಸಿ, ಅವರಿಬ್ಬರ ಮಾತನ್ನು ಅಕ್ಷರರೂಪಕ್ಕಿಳಿಸಿ ಹೆಮ್ಮೆಪಟ್ಟುಕೊಂಡೆ.
ಅಂಥದೇ ಇನ್ನೊಂದು ‘ಮಾತುಕತೆ’ಯ ಧ್ವನಿಸುರುಳಿ ಮೊನ್ನೆ ಮೊನ್ನೆಯ ತನಕ ನನ್ನ ಸಂಗ್ರಹದಲ್ಲಿತ್ತು. ‘ಭೋಪಾಲ ರಂಗಮಂಡಲ’ದ ಆ ಎಲ್ಲ ನಾಟಕಗಳನ್ನು ನೋಡಲೆಂದು ಹೆಗ್ಗೋಡಿನಿಂದ ಹುಬ್ಬಳ್ಳಿಗೆ ಬಂದಿದ್ದರು ವಿಮರ್ಶಕ ಟಿ.ಪಿ. ಅಶೋಕ್. ಆ ಮಧ್ಯಾಹ್ನ ನಮ್ಮ ಕಚೇರಿಗೂ ಬಂದರು. ನಮ್ಮ ಸಂಪಾದಕರು ‘ಕಾರಂತರ ಸಂದರ್ಶನ’ ನಡೆಸಿ ಕೂಡಲೆ ಬರೆದುಕೊಡಲು ಅಶೋಕ್ ಅವರನ್ನು ಕೇಳಿಕೊಂಡರು.
ಅಶೋಕರಿಗೆ ಎರಡು ಕ್ಯಾಸೆಟ್ಟುಗಳ ಜತೆ ನಮ್ಮದೇ ತಂಡದ ರೆಕಾರ್ಡ್ ಪ್ಲೇಯರ್ ಬಳಸಿಕೊಳ್ಳಲು ಕೊಟ್ಟೆ. ಅಶೋಕ್ ತಡಮಾಡಲಿಲ್ಲ. ‘ಕಸ್ತೂರಿ’ಯ ವಸಂತ ವಿಶೇಷಾಂಕದಲ್ಲಿ (ಮೇ 1985) ಅವರು ಬರೆದುಕೊಟ್ಟಿದ್ದ ಆ ಅದ್ಭುತ ಸಂದರ್ಶನ ಲೇಖನ ಪ್ರಕಟವಾಯಿತು.

-೦-೦-೦-೦-೦-

ಗಂಗೂಬಾಯರ ಮನೆಗೆ ಹೋಗಿ ಬಂದೆವಲ್ಲ, ಆ ನಂತರ ಒಂದು ಪ್ರಸಂಗ ನಡೆಯಿತು. ಗದಗಿನ ರೋಟರಿ ಕ್ಲಬ್ಬಿನಲ್ಲಿ ರಂಗಭೂಮಿಯ ಕುರಿತು ಉಪನ್ಯಾಸ ನೀಡಲು ಕಾರಂತರನ್ನು ವಿನಂತಿಸಿಕೊಂಡಿದ್ದರು ಶಿಷ್ಯ ಜಯತೀರ್ಥ ಜೋಶಿ. ಗದಗು ಜೋಶಿಯ ಊರು. ಅಲ್ಲಿಯ ಬಹುತೇಕ ರೋಟರಿ ಸದಸ್ಯರು ಜೋಶಿಯ ನಾಟಕಗಳ ಜತೆ ಒಂದಿಲ್ಲೊಂದು ರೀತಿಯಲ್ಲಿ ಸಂಬಂಧವಿದ್ದವರು. ಗರುಡ ಸದಾಶಿವರಾಯರ ಊರಿಗೆ ಹೋಗುತ್ತಿದ್ದೆನಲ್ಲ ಎಂದು ಕಾರಂತರಿಗೆ ಖುಷಿ. ರಂಗಕರ್ಮಿ ರಾಜಕಾರಣಿ ಮಿತ್ರ ಡಾ. ಪಾಂಡುರಂಗ ಪಾಟೀಲರನ್ನು ವಿನಂತಿಸಿಕೊಂಡು ಒಂದು ಕಾರಿನ ವ್ಯವಸ್ಥೆ ಮಾಡಿದೆ.
ಗದಗಿನ ರಂಗಕರ್ಮಿಗಳ ಪಾಲಿಗೆ ಅದು ಅವಿಸ್ಮರಣೀಯ ಸಂಜೆ. ಕಾರಂತರು ನಾಟಕ, ನಾಟಕಕಾರ, ನಟ, ನಿರ್ದೇಶಕ ಇವೆಲ್ಲವುಗಳ ಮೇಲೆ ‘ಹೊಸ ಬೆಳಕು’ ಚೆಲ್ಲಿದ ಸಂಜೆ. ಮಾತು, ಹಾಡುಗಳ ಸಹಿತದ ‘ರಂಗಜಂಗಮ’ನ ಅಂದಿನ ಉಪನ್ಯಾಸ ಒಂದೂವರೆ ಗಂಟೆ ಓತಪ್ರೋತವಾಗಿ ಸಾಗಿತು. ಆ ನಂತರ ಪ್ರಶ್ನೋತ್ತರ. ಜನ ಫುಲ್ ಖುಶ್. ಜೋಶಿಗೆ ದಿಲ್ ಖುಶ್. ಆತನ ಕಾಲರು ಮೇಲೇರಿತ್ತು. ಆಮೇಲೆ ಒಂದು ರಸಭರಿತ ‘ಭೋಜನ ಕೂಟ’. ಅದನ್ನು ಮುಗಿಸಿಕೊಂಡು ಹುಬ್ಬಳ್ಳಿಗೆ ವಾಪಸು…
ಮರುದಿನ ಬೆಳಿಗ್ಗೆ ಎಂದಿನಂತೆ ಕಾರಂತರನ್ನು ಕರೆಯಲು ಪ್ರವಾಸಿ ಮಂದಿರಕ್ಕೆ ಹೋದೆ.
ಯಾಕೋ ಅವರ ಮೂಡು ಸರಿ ಇದ್ದಂತೆ ಕಾಣಲಿಲ್ಲ. ಮತ್ತೆ ಮತ್ತೆ ಟೇಬಲ್ಲು, ಕಾಟು, ಸೂಟ್ ಕೇಸುಗಳನ್ನು ತಡತಡವಿ ನೋಡುತ್ತಿದ್ದರು. ಪುಸ್ತಕಗಳನ್ನು ಎತ್ತೆತ್ತಿ ನೋಡುತ್ತಿದ್ದರು. ಬಾತ್ ರೂಮಿಗೆ ಹೋಗಿ ಸಿಂಕು ಇತ್ಯಾದಿ ನೋಡಿ ಬರುತ್ತಿದ್ದರು. ಬಂದವರು ‘ಪ್ಚ್ ಊಂs… ಛೇ’ ಎಂದುಕೊಳ್ಳುತ್ತಿದ್ದರು. ಅವರು ಏನನ್ನೋ ಹುಡುಕುತ್ತಿದ್ದಾರೆ ಎಂದು ನನಗೆ ಸ್ಪಷ್ಟವಾಗಿ ಹೋಯಿತು. ಏನು ಅಂತ ಕೇಳುವ ಅಧಿಕಪ್ರಸಂಗಕ್ಕೆ ನಾನು ಇಳಿಯಲಿಲ್ಲ.
ಅವರೇ ನನ್ನತ್ತ ನೋಡಿ, ”ವಾಜಪೇಯಿ… ನಿನ್ನೆ… ನನ್ನ ವಾಚು ಎಲ್ಲೋ ಕಳಕೊಂಡಿದ್ದೀನಿ. ಪ್ಚ್… ಎಲ್ಲಿ ಅಂತ ಗೊತ್ತಾಗ್ತಾ ಇಲ್ಲ…” ಅಂದರು.
”ರಾತ್ರಿ ಬಂದ ಮೇಲೆ ಎಲ್ಲಿ ತೆಗೆದಿಟ್ರೀ ಸರ್…?”
”ಅದೇ ನೆನಪಾಗ್ತಿಲ್ಲ… ಊಂ… ನಾನು ರೂಮಿಗೆ ಬಂದ ಮೇಲೆ ತೆಗೆದೇ ಇಲ್ಲ ಅದನ್ನ…”
ಅದಕ್ಕೇನು ಹೇಳಬೇಕೋ ನನಗೆ ಹೊಳೆಯಲಿಲ್ಲ.
”ಅದೂ… ಪ್ಚ್… ಆರ್ಡಿನರಿ ವಾಚ್ ಆಗಿದ್ರೆ ಯೋಚ್ನೇನೇ ಇರ್ತಿರ್ಲಿಲ್ಲ… ನನಗೆ ಬೇಕಾದವರೊಬ್ರು ಪ್ರೀತಿಯಿಂದ ಪ್ರೆಸೆಂಟ್ ಮಾಡಿದ ಅಮೇರಿಕನ್ ವಾಚು ಅದು… ಪ್ಚ್… ಎಲ್ಲಿಟ್ಟುಬಿಟ್ನೋ ಏನೋ…” ಎಂದವರೇ, ”ಸರಿ. ಮೊದ್ಲು ನಿಮ್ ವರ್ಕಶಾಪ್ ಹುಡುಗರಿಗೆ ಪಾಠ ಮುಗಿಸಿಬಿಡ್ತೀನಿ, ಬನ್ನಿ… ಆಮೇಲೆ ನೋಡಿಕೊಂಡ್ರಾಯ್ತು…” ಅಂತ ಹೊರಟೇಬಿಟ್ರು.
ಅಂತ ಮನಃಸ್ಥಿತಿಯಲ್ಲೂ ರಂಗಭೂಮಿಯದೇ ಯೋಚನೆ… ಶಿಬಿರಾರ್ಥಿಗಳು ಕಾಯುತ್ತಿರುತ್ತಾರೆ ಎಂಬ ಕರ್ತವ್ಯಪ್ರಜ್ಞೆ…
(ಮುಂದಿನ ಕಂತಿನಲ್ಲಿ ಇನ್ನಷ್ಟು ‘ಕಾರಂತ…’)

‍ಲೇಖಕರು avadhi

March 17, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

19 ಪ್ರತಿಕ್ರಿಯೆಗಳು

  1. prakash hegde

    ರಂಗ ಭೂಮಿಗಾಗಿಯೇ ಹುಟ್ಟಿದವರು ಕಾರಂತರು…
    ಯಾವಾಗಲೂ ರಂಗಭೂಮಿಯದೆ ಚಿಂತೆ.. ಚಿಂತನೆ..
    ನಿಮ್ಮ ಮಾತು ಅಕ್ಷರಸಹ ಸತ್ಯ…
    ನಿಮ್ಮ ಅನುಭವಗಳು ಬುತ್ತಿ ಬಲು ರುಚಿ…..

    ಪ್ರತಿಕ್ರಿಯೆ
  2. Dr. Azad Ismail Saheb

    ಬಿವಿ ಕಾರಂತರ ಚೋಮನ ದುಡಿ ನೋಡಿದವರಿಗೆ ನಾಟಕ ರಂಗ ಕಲೆಯಲ್ಲಿ ಪಳಗಿದವರು ತೋರೋ ಸಾಗರೋಪಾದಿಯ ಕಲಾಪ್ರತಿಭೆ ನಿಲುಕಿಗೆ ಬರುತ್ತದೆ. ಅವರ ಆ ಚಿತ್ರದ ಪ್ರತಿಯೊಂದು ದೃಶ್ಯ ಅಳೆದು ತೂಗಿ ಚಿತ್ರೀಕರಿಸಿದಂತಿತ್ತು. ಬಹಳ ಸುಂದರ “ನಾಟಕ ಇರುವುದೇ ಪ್ರೇಕ್ಷಕನಿಗಾಗಿ. ಎಂಥ ಅಡ್ಡಿಯೇ ಎದುರಾಗಲಿ, ‘ದಿ ಶೋ ಮಸ್ಟ್ ಗೋ ಆನ್…’ ಆತನಿಗೆ ಕಿರಿಕಿರಿಯಾಗದ ಹಾಗೆ ಪ್ರಯೋಗಿಸುವುದರಲ್ಲೇ ನಾಟಕದ ಯಶಸ್ಸು ಅಡಗಿದೆ…ಈ ಮಾತುಗಳು ಈ ಕಲೆಯ ಆಯಾಮಗಳನ್ನು ಹತ್ತಿರದಿಂದ ನೋಡಿರುವ ನೀವು ಹೀಗೆ ಸುಂದರವಾಗಿ ಬಣ್ಣಿಸಲು ಸಾಧ್ಯ ’ಜೈ ಹೋ ಗೋಪಾಲ್ ಸರ್’

    ಪ್ರತಿಕ್ರಿಯೆ
  3. umesh desai

    ಕಾರಂತರ ಜೊತೆಗಿನ ನಿಮ್ಮ ಒಡನಾಟದ ಸವಿ ಉಣ್ಣಿಸಿ
    ನಮ್ಮನ್ನೆಲ್ಲ ಕೃತಾರ್ಥ ಮಾಡೀರಿ..ಧನ್ಯೋಸ್ಮಿ..!

    ಪ್ರತಿಕ್ರಿಯೆ
  4. sumathi shenoy

    Nice presentation of the evolution of drama and the artistic life of writer..

    ಪ್ರತಿಕ್ರಿಯೆ
  5. laxminarasimha

    ಗೋ ವಾ ರಿಗೆ ಮತ್ತೆ ಧನ್ಯವಾದ. ಬಿ ವಿ ಕಾರಂತ ಮತ್ತು ಗಂಗಜ್ಜಿ ಸಂವಾದ ಅಕ್ಷರ ರೂಪಕ್ಕಿಳಿದಿದ್ದರೆ ಅದರ ರಸಪಾಕ ನಮಗೂ ಉಣಬಡಿಸಿರಲ್ಲ.

    ಪ್ರತಿಕ್ರಿಯೆ
    • Jayalaxmi Patil

      ನಾನೂ ಲಕ್ಷ್ಮೀನರಸಿಂಹ ಅವರ ಮಾತನ್ನ ಬೆಂಬಲಿಸ್ತೀನಿ ಕಾಕಾ, ನೀವು ಬರ್ದಿರೊ ಕಾರಂತ-ಗಂಗೂಬಾಯಿ ಹಾನಗಲ್ ಅವರ ಮಾತುಕತೆನ ನಮ್ಮೆಲ್ಲರ ಜೊತೆ ಮತ್ತೊಮ್ಮೆ ಹಂಚಿಕೊಳ್ಳಿ ಪ್ಲೀಸ್.

      ಪ್ರತಿಕ್ರಿಯೆ
  6. CHANDRASHEKHAR VASTRAD

    ಕಾರಂತರು ಭೂಪಾಲದಿಂದ ಬಂದ ಮೇಲೆ ರಂಗಾಯಣ ಪ್ರಾರಂಭವಾಯಿತಷ್ಟೆ. ಆಗ ಕಾಲೇಜು ಅಧ್ಯಾಪಕರಿಗಾಗಿ ರಂಗ ತರಬೇತಿ ಶಿಬಿರ ಆಯೋಜಿಸಿದ್ದರು. ನಾನೂ ಶಿಬಿರಾರ್ಥಿಯಾಗಿದ್ದೆ. ಈಗಿನ ವನರಂಗದಲ್ಲಿ ಮೊಟ್ಟ ಮೊದಲ ಪ್ರದರ್ಶನವಾಗಿ ಕಿಂಗ್ ಲೀಯರ್ ಅಭನಯಿಸಿದೆವು. ಆ ದಿನಗಳ ಕಾರಂತರ ಮನಸ್ಥಿತಿಯ ಬಗ್ಗೆ ಬರೆದರೆ ಅದೇ ಒಂದು ಲೇಖನ ವಾಗ್ತದೆ. ವಾಜಪೇಯಿ ಅವರ ಲೇಖನ ಹಳೆಯ ನೆನಪುಗಳನ್ನು ಕೆದಕಿತು. ಹೃದ್ಯ ಬರವಣಿಗೆ. ಮುಂದಿನ ಕಂತಿಗಾಗಿ ಕಾಯುತ್ತಿರುವೆ.

    ಪ್ರತಿಕ್ರಿಯೆ
  7. Krish Joshi

    naaninnu huttirada time na kathi idu……nimma jotige naanu iddhanga anastu…..rasadoutana aatu sir..mundina part ge eegindana kkaytirtini…..

    ಪ್ರತಿಕ್ರಿಯೆ
  8. ವಿಶ್ವನಾಥ ಕುಲಕರ್ಣಿ

    ಹುಬ್ಬಳ್ಳಿಗೆ ರಂಗಮಂಡಲದ ನಾಟಕಗಳ ಆಗಮನವಾದಾಗ ನಾನು ನವನಾಡು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ. ಹಾಗಾಗಿ ಜಯತೀರ್ಥ ಜೋಶಿಯವರ ರಂಗಶಿಬಿರದಲ್ಲಿ ಪೂರ್ಣವಾಗಿ ಭಾಗವಹಿಸುವುದು ಆಗಲಿಲ್ಲ. ಆದರೆ ನಾನು ತಪ್ಪದೇ ಮುಂಜಾನೆ ಕ್ಲಾಸಿಗೆ ಹಾಜರಾಗುತ್ತಿದ್ದೆ. ಕಲಾಕ್ಷೇತ್ರದ ಸದಸ್ಯರ ಮಕ್ಕಳಿಗಾಗಿ ಮುಂಜಾನೆ ಹೊತ್ತು ಮಕ್ಕಳ ನಾಟಕ ಶಿಬಿರವನ್ನೂ ನಿರ್ದೇಶಿಸಲು ಜೋಶಿ ಒಪ್ಪಿಕೊಂಡರು. ಸಹಜವಾಗಿಯೇ ನಾನು ಅವರ ಸಹಾಯಕನಾದೆ. ಶಿಬಿರದ ಎಲ್ಲ ಜವಾಬ್ದಾರಿಗಳನ್ನು ಹೊತ್ತೆ. ಬಹುಶ: ಬಿ.ವಿ.ಕಾರಂತರನ್ನು ನಾನು ಮೊದಲು ಅಲ್ಲಿಯೇ ನೋಡಿದ್ದು ಸ್ಪಷ್ಟವಾಗಿ. ಹಿಂದೊಮ್ಮೆ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಸತ್ತವರ ನೆರಳು ನಾಟಕದ ನೂರನೇ ಪ್ರಯೋಗ ನಡೆದಿತ್ತು. ಗದ್ದಲವಿದ್ದರೂ ನಾನು ಟಿಕೆಟ್ ತೆಗೆಸಿ ನನ್ನ ತಾಯಿ ಜತೆ ನಾಟಕ ನೋಡಿ ಖುಷಿಪಟ್ಟಿದ್ದೆ. ಅಲ್ಲಿ ಕಾರಂತರನ್ನು ದೂರದಿಂದ ನೋಡಿದೆ ಎಂಬುದು ನೆನಪು.
    ರವೀಂದ್ರನಾಥ ಠಾಕೂರರ ಕತೆಯೊಂದನ್ನು ಆಧರಿಸಿ ಕಾರಂತರೇ ರಚಿಸಿದ ಪಂಜರಶಾಲೆ ನಾಟಕವನ್ನು ಮಕ್ಕಳಿಗಾಗಿ ಕಲಿಸಲು ಜೋಶಿ ಆಯ್ಕೆಮಾಡಿಕೊಂಡಿದ್ದರು. ಗೋಪಾಲ ವಾಜಪೇಯಿ ಅನುವಾದಿಸಿದ ಶೇಕ್ಸಪಿಯರನ ಕಿಂಗ್ ಲಿಯರ್ ನಂದಭೂಪತಿಯಾಗಿ ಜೋಶಿ ನಿರ್ದೇಶನದಲ್ಲಿ ಪ್ರದರ್ಶಿಸಲ್ಪಟ್ಟಿತು. ಜತೆಗೆ ಪಂಜರಶಾಲೆ ಕೂಡ. ಅದು ಹುಬ್ಬಳ್ಳಿಯ ರಂಗಕ್ಷೇತ್ರದಲ್ಲಿ ರಿನೇಸಾನ್ಸ್. ಅಂಥ ಕಾಲ ಮತ್ತೆ ಅಲ್ಲಿಗೆ ಕಾಲಿಟ್ಟಿಲ್ಲ. ನೆನಪುಗಳನ್ನು ಹಸಿರಾಗಿಸಿದ ವಾಜಪೇಯಿ ಅವರಿಗೆ ವಂದನೆಗಳು. ಬರೆಯಲು ಬಹಳಷ್ಠಿದೆಯಲ್ಲ? ವಾಜಪೇಯಿ ಸರ್ ಒಂದು ಕೆಲಸ ಮಾಡಿ, ಗೋಕಾಕ್ ಚಳವಳಿಯಲ್ಲಿ ನಾವೆಲ್ಲ ನೃಪತುಂಗ ಬೆಟ್ಟದ ಮೇಲಿನ ಕಾರಾಗೃಹದಲ್ಲಿ ಕಳೆದ ಸಮಯವನ್ನು ನೆನಪು ಮಾಡಿಕೊಂಡು ಬರೆಯಿರಿ. ಈಗಲೂ ನನಗೆ ಅದನ್ನು ನೆನೆಸಿಕೊಂಡು ನಗು ಬರುತ್ತಿರುತ್ತದೆ. ಯಾಕೆಂದರೆ ವಿಮರ್ಶಕರೊಬ್ಬರು ರಾತ್ರಿ ಮಲಗದೇ ನಿಮ್ಮನ್ನೂ ಎಬ್ಬಿಸಿ ಹಿಂದೆ ಕೈ ಕಟ್ಟಿಕೊಂಡು ಸಾಹಿತ್ಯದ ಬಗ್ಗೆ ಹಗಲು ಆಗುವವರೆಗೂ ಅತ್ತಿಂದಿತ್ತ ವಾಕ್ ಮಾಡುತ್ತ ಸಾಹಿತ್ಯವನ್ನು ಚರ್ಚಿಸಿದ್ದನ್ನು ನೆನಪಿಸಿಕೊಂಡು.

    ಪ್ರತಿಕ್ರಿಯೆ
  9. Ramesh Gururjarao

    ಲೇಖನವಂತೂ ಸೂಪರ್ ಸೂಪರ್… ಮೇಷ್ಟ್ರನ್ನು ಕಂಡ, ಮಾತಾಡಿಸಿದ, ಅವರ ಪ್ರತಿಭೆಯನ್ನು ಪ್ರತ್ಯಕ್ಷ ಕಂಡು ಪುಳಕಗೊಂಡ ನಮ್ಮ ತಲೆಮಾರೇ ಅದೃಷ್ಟವಂತರು… :):)

    ಪ್ರತಿಕ್ರಿಯೆ
  10. ಪ್ರಸನ್ನ ರೇವನ್

    ಮನೀಷಿಯಂತೆ ಬದುಕಿದ ಕಾರಂತರನ್ನು ಅರಿಯುವುದೇ ಒಂದು ಭಾಗ್ಯ… ಧನ್ಯವಾದ.

    ಪ್ರತಿಕ್ರಿಯೆ
  11. Anitha Naresh manchi

    ನಮ್ಮೂರ ಕಾರಂತರನ್ನು ನಿಮ್ಮ ನೆನಪುಗಳಲ್ಲಿ ಓದುವುದೇ ಖುಶಿ ಕೊಡುವ ಸಂಗತಿ… ಮುಂದಿನ ಓದಿನ ನಿರೀಕ್ಷೆಯಲ್ಲಿ… 🙂

    ಪ್ರತಿಕ್ರಿಯೆ
  12. Anil Talikoti

    ಬಿ.ವಿ.ಕಾರಂತರ ಜೊತೆಗೆ ನಿಮ್ಮ ಒಡನಾಟ ಅತೀ ಆಪ್ತವಾಗಿ ಮೂಡಿಬಂದಿದೆ ಅದರೊಂದಿಗೆ ‘ನಾಟಕ ಕೂಡಿಸು’ ಕಲೆಯ ಬೆಳವಣಿಗೆ – ಸುಂದರ ಬರಹ.
    ಧನ್ಯವಾದಗಳು.
    -ಅನಿಲ

    ಪ್ರತಿಕ್ರಿಯೆ
  13. ರಾಮಚಂದ್ರ ಪಿ. ಎನ್.

    ’ಸೆಕೆಂಡ್ ಕಂತು ವಿಠಲ ಶ್ರೀಹರಿ ವಿಠಲ, ಶ್ರೀಹರಿ ವಿಠಲ ಸೆಕೆಂಡ್ ಕಂತು ವಿಠಲ, ಸೆಕೆಂಡ್ ಕಂತು ವಿಠಲ ಸೆಕೆಂಡ್ ಕಂತು ವಿಠಲ, ಶ್ರೀಹರಿ ವಿಠಲ ಸೆಕೆಂಡ್ ಕಂತು ವಿಠಲ’ … ಎರಡನೆಯ ಕಂತಿಗೆ ವೈಟಿಂಗ್ ಸಾರ್.

    ಪ್ರತಿಕ್ರಿಯೆ
  14. ಸುಧಾ ಚಿದಾನಂದಗೌಡ

    ಮೈಕಿಲ್ಲ ವಿಠಲಾ…
    ಸಾಟಿಯಿಲ್ಲ ವಿಠಲಾ…
    ಆ ಕಾಲದ ಮಾತುಗಳು, ವ್ಯಕ್ತಿಗಳ ಕುರಿತು ಕೇಳೋದು, ಮಾತಾಡೋದೇ ಒಂದು ಚೆಂದ..
    ನಿಮ್ಮ ಕಂತು ಮಿಸ್ಸಾದ ದಿನ ಸಿಟ್ಟೇ ಬರುತ್ತೆ ಗೋವಾ ಸರ್.
    ಮುಂದ..?!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: