ಸುಮ್ಮನೇ ನೆನಪುಗಳು – 23
ರಂಗಭೂಮಿಯ ನಂಟು ಗಟ್ಟಿಯಾಗುತ್ತ ಹೋದಷ್ಟೂ ನನಗೆ ಜಿ.ಬಿ.ಯವರನ್ನು ಹೆಚ್ಹೆಚ್ಚು ಅರಿತುಕೊಳ್ಳಬೇಕೆಂಬ ಆಸೆ ಬೆಳೆಯತೊಡಗಿತು. ಒಬ್ಬ ಸೃಜನಶೀಲ ಲೇಖಕನನ್ನು, ನಾಟಕಕಾರನನ್ನು ಅರಿತುಕೊಳ್ಳಬೇಕೆಂದರೆ ಆತನ ಕೃತಿಗಳನ್ನು ಅವಲೋಕಿಸಬೇಕು; ಅವುಗಳ ಒಳಹೊಕ್ಕು ನೋಡಬೇಕು. ಅದರಲ್ಲೂ ‘ಜಡಭರತ’ ನಾಮಾಂಕಿತದಲ್ಲಿ ಬರೆಯುವ ಜಿ. ಬಿ. ಅಂಥ ಹಿರಿಯರ ಬಗ್ಗೆ ಅರಿತುಕೊಳ್ಳುವುದು ಕೇವಲ ಅವರ ಕೃತಿಗಳ ಅವಲೋಕನದಿಂದಷ್ಟೇ ಸಾಧ್ಯವಾಗುವುದಿಲ್ಲ. ಅವರ ಬದುಕು, ಬೆಳೆದ ಪರಿಸರ, ವೃತ್ತಿ ಎಲ್ಲವನ್ನೂ ಗಮನಿಸಬೇಕಾಗುತ್ತದೆ. ‘ಮನೋಹರ ಗ್ರಂಥ ಮಾಲಾ’ ಎಂಬ ಮಹಾ ಸಂಸ್ಥೆಯ ಮೂಲಕ ಇನ್ನೂರಕ್ಕಿಂತಲೂ ಹೆಚ್ಚು ಲೇಖಕರನ್ನು ಬೆಳಕಿಗೆ ತಂದ ಹಿರಿಯ ಪ್ರಕಾಶಕ ಇವರು. ಆದ್ದರಿಂದ, ಆ ಪ್ರಕಾಶನ ಸಂಸ್ಥೆಯ ಬಗೆಗೂ ತಿಳಿದುಕೊಳ್ಳಲೇಬೇಕಾಗುತ್ತದೆ. ಇದೆಲ್ಲವನ್ನು ತಿಳಿದುಕೊಳ್ಳುವ ಪ್ರಕ್ರಿಯೆ ಒಂದು ರೀತಿಯಲ್ಲಿ ಕನ್ನಡದ, ಕರ್ನಾಟಕದ ಒಂದು ಕಾಲಘಟ್ಟದ ಇತಿಹಾಸವನ್ನೇ ಅವಲೋಕಿಸಿದಂತೆ. ಯಾಕಂದರೆ, ಜಿ.ಬಿ. ಹುಟ್ಟಿದ್ದು, ಬೆಳೆದದ್ದು, ಬದುಕಿದ್ದು, ದುಡಿದದ್ದು ಎಲ್ಲವೂ ಏಕೀಕರಣ ಚಳವಳಿಯ ವಾತಾವರಣದಲ್ಲಿ.
-0-0-0-
ಜಿ.ಬಿ.ಯವರ ಜನ್ಮಸ್ಥಳ ಗದಗ ಜಿಲ್ಲೆಯ ಹೊಂಬಳ. (‘ನಾಡೋಜ’ ಕವಿ ಚೆನ್ನವೀರ ಕಣವಿಯವರ ಊರೂ ಇದೇ.) ಏಳರ ಎಳೆ ವಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಗೋವಿಂದಾಚಾರ್ಯ ಭೀಮಾಚಾರ್ಯ ಜೋಶಿಯವರು ತುಂಬ ಕಷ್ಟದಲ್ಲಿಯೇ ಇಂಟರ್ ವರೆಗೂ ಓದಿದರು. ಮುಂದೆಲ್ಲ ಅವರಿಗೆ ಜೀವನವೇ ಮಹಾವಿದ್ಯಾಲಯ, ವಿಶ್ವವಿದ್ಯಾಲಯ…
ಅವರನ್ನು ಆಗ ಸೆಳೆದದ್ದು ಧಾರವಾಡ. ‘ಧಾರಾನಗರಿ’ ಎಂದು ಪ್ರಸಿದ್ಧವಾದ ಧಾರವಾಡ. ‘ಸಂಸ್ಕೃತಿ ಸರಸ್ವತಿ’ಯ ತವರೆನಿಸಿದ ಧಾರವಾಡ. ವಿದ್ಯೆಗೆ ಧಾರಾಳವಾದ ಅವಕಾಶಗಳಿರುವ ಈ ‘ಧಾರಾನಗರಿ’ಯಲ್ಲಿದ್ದರು ಬೇಂದ್ರೆ. ‘ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೇ…’ ಎಂದು ಹಾಡಿದ ಅಂಬಿಕಾತನಯದತ್ತ. ಅವರ ‘ಗೆಳೆಯರ ಗುಂಪು’ ಜಿ.ಬಿ.ಯವರನ್ನು ಕೈಬೀಸಿ ಕರೆಯಿತು.
”…’ಕನ್ನಡಿಗರು ಹೇಡಿಗಳು, ಹಿಂದುಳಿದವರು, ಅಭಿಮಾನಶೂನ್ಯರು’ ಎಂದು ಮೊದಲಾದ ಕರ್ಣಕಟುವಾದ ನುಡಿಗಳಿಂದ ನಮ್ಮನ್ನು ಚುಚ್ಚುವವರಿಗೆ ನಾವು ನಮ್ಮ ಕ್ರಿಯಾಶಕ್ತಿಯಿಂದ ಉತ್ತರ ಕೊಡೋಣ…” ಎಂಬ ಸಿಂಹ ಗರ್ಜನೆಯ ಮೂಲಕ ಜಿ.ಬಿ.ಯವರಂಥ ತರುಣರನ್ನು ಆಕರ್ಷಿಸಿದವರು ಆಲೂರರು. ಅವರು ‘ಕರ್ನಾಟಕದ ಕುಲಪುರೋಹಿತ’ರು. ಗೆಳೆಯರ ಗುಂಪಿಗೆ ಅವರು ‘ವಿದ್ಯಾರಣ್ಯ ಸಮಾನ’ರು. ಇವರೆಲ್ಲ ಕರ್ನಾಟಕ ಏಕೀಕರಣವನ್ನೇ ತಮ್ಮ ಜೀವಿತದ ಏಕಮೇವ ಧ್ಯೇಯವನ್ನಾಗಿ ಮಾಡಿಕೊಂಡರು. ‘ಜಯ ಕರ್ನಾಟಕ’ ಆಲೂರರು ಆರಂಭಿಸಿದ ಪತ್ರಿಕೆ. ಆ ಮೂಲಕ ‘ಗೆಳೆಯರ ಗುಂಪು’ ಸತ್ತಂತಿಹರನು ಬಡಿದೆಚ್ಚರಿಸುವ ಕೆಲಸಕ್ಕೆ ನಿಂತಿತು ‘ಜಯ ಕರ್ನಾಟಕ’. ಆ ಹೆಸರನ್ನೇ ತಮ್ಮ ಧ್ಯೇಯವಾಕ್ಯವನ್ನಾಗಿ ಮಾಡಿಕೊಂಡ ಗುಂಪಿನ ಗೆಳೆಯರು ದಸರೆಯನ್ನು ‘ನಾಡಹಬ್ಬ’ವನ್ನಾಗಿ ಆಚರಿಸಲು ಶುರುಮಾಡಿದರು. ಈ ಗುಂಪಿನ ಕೆಲ ಗೆಳೆಯರು ತಮ್ಮ ಮಕ್ಕಳಿಗೆ ಕನ್ನಡ ವೀರರ, ಕವಿಗಳ ಹೆಸರನ್ನು ಇಟ್ಟು ಸಂಭ್ರಮಿಸಿದರು. ಜಿ.ಬಿ. ಜೋಶಿ ಆ ಗುಂಪಿನ ‘ಜಯ ಕರ್ನಾಟಕ’ದ ವ್ಯವಸ್ಥಾಪನೆಯ ಕೆಲಸಕ್ಕೆ ಟೊಂಕ ಕಟ್ಟಿ ದುಡಿಯತೊಡಗಿದರು.
1930ರ ದಶಕದ ಆರಂಭದಲ್ಲಿಯೇ ‘ಗೆಳೆಯರ ಗುಂಪು’ ವಿಸರ್ಜನಗೊಂಡಿತು. ‘ಜಯ ಕರ್ನಾಟಕ’ ಪತ್ರಿಕೆ, ಪ್ರಕಾಶನ ಮತ್ತು ಮುದ್ರಣಾಲಯವನ್ನು ಮುನ್ನಡೆಸುವವರು ಯಾರು ಎಂಬುದೆ ಆಗಿನ ಪ್ರಶ್ನೆ. ಗುಂಪಿನ ಹಿರಿಯರಲ್ಲೊಬ್ಬರಾಗಿದ್ದ ಶಂ.ಬಾ. ಜೋಶಿಯವರ ಸಲಹೆಯ ಮೇರೆಗೆ ಪ್ರಹ್ಲಾದ ನರೆಗಲ್ಲ, ಬೆಟಗೇರಿ ಕೃಷ್ಣ ಶರ್ಮ, ಗೋವಿಂದ ಚುಳಕಿ ಮೊದಲಾದವರು ಆ ಪ್ರಕಾಶನವನ್ನು ಪುನಾರಂಭಿಸುವ ಯತ್ನ ನಡೆಸಿದರು. ಈ ಹೊಸ ಪ್ರಕಾಶನ ಸಂಸ್ಥೆಯ ಹೆಸರೇ ‘ಮನೋಹರ ಗ್ರಂಥ ಮಾಲಾ’. ಬೆಟಗೇರಿ ಕೃಷ್ಣ ಶರ್ಮ (‘ಆನಂದಕಂದ’) ಅವರ ಮೊತ್ತ ಮೊದಲ ಕಾದಂಬರಿ ‘ಸುದರ್ಶನ’ವೇ ಈ ಗ್ರಂಥಮಾಲೆಯ ಮೊದಲ ಕುಸುಮ. ಅದು ಪ್ರಕಟವಾಗಿ ಗ್ರಂಥ ಮಾಲೆ ವಿಧ್ಯುಕ್ತವಾಗಿ ಕಾರ್ಯಾರಂಭ ಮಾಡಿದ್ದು 1933ರ ಅಗಸ್ಟ್ 15ರಂದು. ಆ ವರ್ಷ ಅವರಿವರ ಮರ್ಜಿ ಹಿಡಿದು, ಉದ್ದರಿ ಹೇಳಿ ಕಾಗದ ತಂದು, ಮುದ್ರಣವೆಚ್ಚವನ್ನು ಮುಂದೆ ತೀರಿಸುತ್ತೇವೆಂದು ಹೇಳಿ, ಅಂತೂ ಇಂತೂ ಆರು ಪುಸ್ತಕಗಳನ್ನು ಪ್ರಕಟಿಸಲಾಯಿತು. ಆದರೆ, ಈ ವ್ಯವಸ್ಥೆ ಅಷ್ಟು ಲಾಭಕರವೆಂದು ತೋರಿ ಬರಲಿಲ್ಲ. ಅದೇ ಪರಿಸ್ಥಿತಿಯಲ್ಲಿ ಮುಂದುವರಿಯುವುದೂ ಸಾಧ್ಯವಿರಲಿಲ್ಲ. ಯಾರಾದರೂ ಒಬ್ಬರು ಈ ಹೊಸ ಸಂಸ್ಥೆಯ ಭಾರ ಹೊರಲು ಸಿದ್ಧರಾಗಬೇಕಿತ್ತು. ಜಿ.ಬಿ. ಜೋಶಿ ಹೆಗಲು ಗಟ್ಟಿಮಾಡಿಕೊಂಡು ನಿಂತರು.
ಅಂದು ಪುಸ್ತಕೋದ್ಯಮದ ಮೂಲಕ ನಾಡ ಸೇವೆ ಮಾಡಲು ನಿರ್ಧರಿಸಿ, ಎದೆಗೆಡದೆ ಮುನ್ನಡೆದ ಜಿ.ಬಿ. ಇನ್ನೂರಕ್ಕೂ ಹೆಚ್ಚು ಲೇಖಕರನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದ್ದಾರೆ. ಕನ್ನಡ ಸಾಹಿತ್ಯದ ಅನೇಕ ಮಹಾನ್ ಲೇಖಕರ ಮಹತ್ವದ ಕೃತಿಗಳು ಹೊರಬಂದದ್ದು ‘ಮನೋಹರ ಗ್ರಂಥ ಮಾಲಾ’ ಮೂಲಕವೇ.
(ಆಲೂರ ವೆಂಕಟರಾಯರು ಮತ್ತು ಕೆ.ವಿ.ಅಯ್ಯರ್ ಅವರ ಜೊತೆ ಜಿ.ಬಿ. ಜೋಶಿ)
ಜಿ. ಬಿ. ಗ್ರಂಥ ಮಾಲೆಯ ಭಾರ ಹೊತ್ತಾಗ ಕರ್ನಾಟಕದ ಪ್ರದೇಶಗಳು ಹಲವು ಆಡಳಿತಗಳಲ್ಲಿ ಹರಿದುಹಂಚಿಹೋಗಿದ್ದವು. ಈಚೆ ಮುಂಬಯಿ ಕರ್ನಾಟಕ ಪ್ರಾಂತ್ಯ ; ಆಚೆ ನಿಜಾಮನ ಆಡಳಿತದ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳು ; ಅತ್ತ ಮದ್ರಾಸು ಪ್ರಾಂತ್ಯದ ಆಡಳಿತಕ್ಕೊಳಪಟ್ಟ ಮಂಗಳೂರು, ಬಳ್ಳಾರಿ ಮುಂತಾದವುಗಳು ; ಮತ್ತು ಮೈಸೂರು ಒಡೆಯರ ಆಡಳಿತದ ಹಳೇ ಮೈಸೂರು ಪ್ರದೇಶಗಳು. ಹೀಗೆ ಎಲ್ಲ ಕಡೆಗೂ ಇರುವ ಕನ್ನಡಿಗರಿಗೆ ಒಳ್ಳೆಯ ಓದಿನ ಅಭಿರುಚಿ ಹುಟ್ಟಿಸಬೇಕು. ಇದು ಯಾವತ್ಕಾಲದಿಂದಲೂ ಕನ್ನಡದ ಗ್ರಂಥಕಾರರು-ಪ್ರಕಾಶಕರ ಉದ್ದೇಶ. ಜಿ.ಬಿ. ಅವರದೂ ಅದೇ ಧ್ಯೇಯ. ಅವರಿಗೆ ಆದರ್ಶರಾಗಿ ನಿಂತಿದ್ದವರು ಗಳಗನಾಥರು. ಕನ್ನಡಿಗರಿರುವಲ್ಲಿಯೇ ಹೋಗಿ, ಊರೆಲ್ಲ ತಿರುಗಿ, ರಾತ್ರಿಯಾದರೆ ಅವರ ಮನೆಗಳ ಜಗುಲಿಯ ಮೇಲೆಯೇ ಮಲಗಿ ಓದಿನ ಹುಚ್ಚು ಹಚ್ಚಿಸಿದವರು ಅವರು.
ಸರಿ ಅವರ ದಾರಿಯನ್ನೇ ತುಳಿಯಲು ನಿರ್ಧರಿಸಿದರು ಜಿ.ಬಿ. ಜೋಶಿ. ವರ್ಷಕ್ಕಿಷ್ಟು ಅಂತ ಒಳ್ಳೊಳ್ಳೆಯ ಪುಸ್ತಕಗಳನ್ನು ಪ್ರಕಟಿಸುತ್ತ, ಅವುಗಳ ಗಂಟುಗಳನ್ನು ಹೆಗಲ ಮೇಲೆ ಹೊತ್ತು ಊರೂರು ಅಲೆಯತೊಡಗಿದರು. ಆ ಅಲೆತ ವ್ಯರ್ಥವಾಗಲಿಲ್ಲ. ಎಲ್ಲೆಡೆಯ ಕನ್ನಡಿಗರಲ್ಲಿ ಸದಭಿರುಚಿಯ ಅಲೆಯನ್ನೇ ಎಬ್ಬಿಸಿತು.
(ನಾನು ನೋಡುವ ಹೊತ್ತಿಗೆ ಜಿ.ಬಿ.ಯವರ ಎರಡನೆಯ ಮಗ ಗೋಪಾಲ ಜೋಶಿ ಪುಸ್ತಕಗಳನ್ನು ಹೊತ್ತು ಊರೂರು ತಿರುಗಿ, ಚಂದಾದಾರರ ಮನೆ ಬಾಗಿಲಿಗೆ ಒಳ್ಳೆಯ ಪುಸ್ತಕಗಳನ್ನು ಮುಟ್ಟಿಸುವ ಕೈಂಕರ್ಯಕ್ಕೆ ತೊಡಗಿದ್ದರು.)
ಶ್ರೀರಂಗರ ‘ವಿಶ್ವಾಮಿತ್ರ ಸೃಷ್ಟಿ’, ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’, ವಿ. ಕೃ. ಗೋಕಾಕರ ‘ಸಮರಸವೇ ಜೀವನ’, ಮಿರ್ಜಿ ಅಣ್ಣಾರಾಯರ ‘ನಿಸರ್ಗ’, ಅ.ನ. ಕೃಷ್ಣರಾಯರ ‘ಸಂಧ್ಯಾ ರಾಗ’, ಶಂಕರ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾಮಾಯಿ’, ರಾವ್ ಬಹಾದ್ದೂರರ ‘ಗ್ರಾಮಾಯಣ’, ಯು.ಆರ್. ಅನಂತಮೂರ್ತಿಯವರ ‘ಸಂಸ್ಕಾರ’, ಎ.ಕೆ. ರಾಮಾನುಜನ್ನರ ‘ಹೊಕ್ಕುಳಲಿ ಹೂವಿಲ್ಲ’, ಶ್ರೀಕೃಷ್ಣ ಆಲನಹಳ್ಳಿಯವರ ‘ಕಾಡು’, ರಂ.ಶಾ. ಲೋಕಾಪುರರ ‘ತಾಯೀ ಸಾಹೇಬ’, ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’, ಕುಂ.ವೀರಭದ್ರಪ್ಪ ಅವರ ‘ಭಳಾರೆ ವಿಚಿತ್ರಂ’, ಒಟ್ಟಿನಲ್ಲಿ ಕನ್ನಡದ ಬಹುತೇಕ ಪ್ರಮುಖ ಲೇಖಕರ ಕೃತಿಗಳು ‘ಮ.ಗ್ರ.ಮಾ.’ದಿಂದಲೇ ಬೆಳಕಿಗೆ ಬಂದವು. ಹೀಗೇ ಸಾಗುತ್ತದೆ ‘ಮ.ಗ್ರ.ಮಾ.’ದ ಕೊಡುಗೆಯ ಕಥೆ.
ಜಿ.ಬಿ. ಒಬ್ಬ ಅದ್ಭುತ ಕನಸುಗಾರ. ಅಪ್ರತಿಮ ನಾಟಕಕಾರ. ಅನನ್ಯ ಸಂಘಟಕ. ಏನೇ ಮಾಡಿದರೂ ಅದು ವಿನೂತನವೆನಿಸುವಂತಿರಬೇಕು, ಅವಿಸ್ಮರಣೀಯವೆನಿಸಬೇಕು, ಅಲ್ಲಿ ಉತ್ಸವದ ವಾತಾವರಣವಿರಬೇಕು ಎಂಬ ಹಂಬಲದವರು. 1942ರಲ್ಲಿ ಗದಗಿನಲ್ಲಿ ಅವರು ‘ವಸಂತ ಸಾಹಿತ್ಯೋತ್ಸವ’ವನ್ನು ಹಮ್ಮಿಕೊಂಡರು. ಕನ್ನಡದ ಆಗಿನ 150 ಜನ ಲೇಖಕರನ್ನು ಆ ಸಾಹಿತ್ಯೋತ್ಸವಕ್ಕೆ ಆಮಂತ್ರಿಸಿದರು. ಅದು ಬೇಸಗೆ ತಾನೇ… ಬಂದ ಲೇಖಕರ ಕೊರಳಿಗೆ ಮಲ್ಲಿಗೆಯ ಮಾಲೆ, ಹೊಟ್ಟೆ ತಂಪಾಗಿರಲೆಂದು ಪಾನಕ-ಕೋಸಂಬರಿ ಮತ್ತು ತಿಂದಷ್ಟು ಮೊಸರವಲಕ್ಕಿ. ಹೌದು, ಯಾವುದೇ ಕಾರ್ಯಕ್ರಮವಿದ್ದರೂ ”ಮನಸ್ಸು ಮತ್ತು ಹೊಟ್ಟೆ ಎರಡೂ ತೃಪ್ತಿಗೊಳ್ಳಬೇಕು,” ಎನ್ನುತ್ತಿದ್ದರು ಜಿ.ಬಿ. ಅವರಿರುವ ತನಕ ಅಟ್ಟದ ಮೇಲೆ ಇಂಥ ‘ದಾಸೋಹ’ಗಳು ನಿತ್ಯದ ಮಾತಾಗಿದ್ದುವಂತೆ.
ಹೌದು, ಜಿ.ಬಿ. ಜೋಶಿ ಲೇಖಕರನ್ನು ಮತ್ತು ಓದುಗರನ್ನು ತುಂಬಾ ಆತ್ಮೀಯತೆಯಿಂದಲೂ ಗೌರವದಿಂದಲೂ ನಡೆಸಿಕೊಂಡವರು. ಕನ್ನಡದ ಓದುಗರ ಕೈಗೆ ‘ಗ್ರಂಥಗಳ ಮಾಲೆ’ ನೀಡಿದ ಹಾಗೆಯೇ, ಲೇಖಕರ ಕೊರಳಿಗೆ ‘ಮಲ್ಲಿಗೆಯ ಮಾಲೆ’ಯನ್ನು ತೊಡಿಸಿ ನಲಿದವರು. ಈ ಹುಮ್ಮಸ್ಸಿನಲ್ಲಿ ಕೆಲವೊಮ್ಮೆ ತಮ್ಮ ಕೊರಳಿಗೆ ‘ಸಾಲದ ಮಾಲೆ’ ಸುತ್ತಿಕೊಂಡದ್ದನ್ನೂ ಗಮನಿಸದಂತಿದ್ದವರು.
ಅವರದು ಪ್ರಯೋಗಶೀಲ ಮನಸ್ಸು. ಕಾದಂಬರಿಯೊಂದರ ಮೊದಲ ಕಂತನ್ನು ಒಬ್ಬ ಖ್ಯಾತ ಲೇಖಕನಿಂದ ಬರೆಯಿಸಿ, ಉಳಿದವನ್ನು ಆಸಕ್ತ ಓದುಗ-ಲೇಖಕರು ಬರೆಯಬರೆದು ಮುಂದುವರಿಸುತ್ತ ಹೋಗುವ ಕ್ರಮ ಒಂದೆರಡು ದಶಕಗಳ ಹಿಂದೆ ಕನ್ನಡ ನಿಯತಕಾಲಿಕಗಳಲ್ಲಿ ಚಾಲ್ತಿಯಲ್ಲಿತ್ತು. ಆದರೆ, ಈ ಪರಿಕಲ್ಪನೆಯ ಬೀಜಾರೋಪಣವಾದದ್ದು ಜಿ.ಬಿ.ಯವರಿಂದಲೇ ಎಂಬುದು ಐತಿಹಾಸಿಕ ಸತ್ಯ. ಅವರು ಸರಿಸುಮಾರು ಅರ್ಧ ಶತಮಾನದ ಹಿಂದೆ ಹಲವು ಲೇಖಕರು ಬರೆದ ‘ಖೋ…’ ಎಂಬ ಇಂಥದೊಂದು ಕಾದಂಬರಿಯನ್ನು ಪ್ರಕಟಿಸಿದರು. ಖೋ… ಬಲು ಅರ್ಥಪೂರ್ಣ ಶೀರ್ಷಿಕೆ. ಒಬ್ಬ ಲೇಖಕ ಇನ್ನೊಬ್ಬನಿಗೆ ಖೋ ಕೊಡುವುದು… ಇನ್ನು ‘ಮ.ಗ್ರ.ಮಾ.’ ಪ್ರಕಟಿಸಿದ ‘ನಡೆದು ಬಂದ ದಾರಿ’ ಮತ್ತು ‘ಪುಟ ಬಂಗಾರ’ಗಳು ಒಂದು ರೀತಿಯಲ್ಲಿ ಕನ್ನಡ ಸಾಹಿತ್ಯದ ಚರಿತ್ರೆಯ ಸಂಪುಟಗಳೇ ಎನ್ನಬೇಕು.
-0-0-0-
ಜಿ.ಬಿ.ಯವರ ಭೇಟಿಗೂ ಮೊದಲೇ ‘ಕಸ್ತೂರಿ’ಯಲ್ಲಿ ಒಂದು ಬಾರಿ ಅವರ ರಸವತ್ತಾದ ಅನುಭವಗಳನ್ನು ಓದಿ ಮೆಚ್ಚಿಕೊಂಡವನು ನಾನು. ಬಹುಶಃ ಅದೊಂದು ಹೆಣ ಹೊರುವ ಪ್ರಸಂಗ ಎಂದು ತೋರುತ್ತದೆ. ಹೊರುವವರ ಆ ಸಂಕಷ್ಟಗಳನ್ನು, ಫಜೀತಿಗಳನ್ನು ಅವರು ವಿವರಿಸಿದ ರೀತಿಯೇ ಬಲು ಮೋಜಿನದು. ಎದುರಿಗೆ ಕೂತು ಬಣ್ಣಿಸುತ್ತಿದ್ದಾರೇನೋ ಎಂಬಂಥ ಶೈಲಿ. ಅಥವಾ ನಾವೇ ಅವರೊಂದಿಗೆ ಹೆಗಲು ಕೊಡುತ್ತಿದ್ದೇವೇನೋ ಎಂಬಂಥ ಅನುಭವ. ಆ ಲೇಖನ ಒಂದು ಮಾಸಲೆ ಅಷ್ಟೇ. ಇನ್ನು ಅವರ ಕೃತಿಗಳಲ್ಲಿ ಇನ್ನೆಂಥ ಸೊಗಸು ಸಿಗಬೇಡ…?
ಆ ಸೊಗಸಿಗಾಗಿಯೇ ಅವರ ನಾಟಕಗಳನ್ನು ಓದಲು ಶುರುವಿಟ್ಟುಕೊಂಡೆ. ಮೊದಲಿಗೆ ‘ಅನಾಮಧೇಯ’ ಕಾವ್ಯನಾಮದಲ್ಲಿ ಜಿ.ಬಿ. ಬರೆದ ‘ಕದಡಿದ ನೀರು’. ಅಬ್ಬಾ… ಆ ಭಾಷೆ, ಆ ಸಂಭಾಷಣಾ ಶೈಲಿ, ಆ ನಾಟಕದ ಬಂಧ, ಆ ಪಾತ್ರಗಳು… ಒಮ್ಮೆ ಶಿವಪ್ಪನಾಗಿ ನನ್ನನ್ನು ನಾನು ಊಹಿಸಿಕೊಂಡರೆ ಮತ್ತೊಮ್ಮೆ ರಾಚ್ಯಾನನ್ನು ಆಹ್ವಾನಿಸಿಕೊಳ್ಳುತ್ತಿದ್ದೆ. ಗೂಳಪ್ಪನ ಪಾತ್ರವನ್ನು ಮೆಚ್ಚಿದೆನಾದರೂ ನನ್ನ ಎತ್ತರಕ್ಕೆ ಸರಿಹೋಗದ್ದು ಎಂಬ ಕಾರಣದಿಂದ ಸುಮ್ಮನಿದ್ದೆ. ಮುಂದೆ ಕೆಲವೇ ದಿನಗಳಲ್ಲಿ ಧಾರವಾಡದ ಕರ್ನಾಟಕ ಕಲೋದ್ಧಾರಕ ಸಂಘದವರು ಈ ನಾಟಕವನ್ನು ಅಭಿನಯಿಸಿದರು. ಆಗ, ನನಗೆ ಆ ನಾಟಕವನ್ನು ಓದಿ ಅನುಭವಿಸಿದ್ದಕ್ಕಿಂತಲೂ ಬೇರೆಯದೇ ರೀತಿಯ ಅನುಭವ. ಜಿ.ಬಿ. ಬಳಸುವ ಭಾಷೆ, ನುಡಿಕಟ್ಟುಗಳಿಗೆ ರಂಗದ ಮೇಲೆ ಬೇರೆಯದೇ ಅರ್ಥ ಬೇರೆಯದೇ ಆಯಾಮ ದೊರೆತದ್ದನ್ನು ಕಂಡು ನಾನು ಹುಚ್ಚಾಗಿಹೋದೆ. ‘ಮೂಕಬಲಿ’, ‘ಆ ಊರು ಈ ಊರು’ಗಳ ಹಂದರ ಮತ್ತು ಭಾಷಾ ಛಂದಗಳು ನನಗೆ ಬರೆಯಲು ಪ್ರೇರಣೆ ನೀಡಿದ್ದಂತೂ ಒಪ್ಪಿಕೊಳ್ಳಲೇಬೇಕಾದ ವಿಷಯ. ಅವರ ‘ಜಡಭರತನ ಕನಸುಗಳು’ ಎಂಥ ಅದ್ಭುತ ಕೃತಿ! ಅದು ಇಂದಿಗೂ ನನ್ನನ್ನು ಕಾಡುತ್ತಿರುವಂಥ ಫ್ಯಾಂಟಸಿ. ಅದನ್ನು ಒಂದು ನಾಟಕವನ್ನಾಗಿ ರೂಪಾಂತರಿಸುವ ಆಸೆ ಇನ್ನೂ ಕಮರಿಲ್ಲ.
ಜಿ.ಬಿ. ಜೋಶಿಯವರ ‘ಧರ್ಮ ಸೆರೆ’ ಕಾದಂಬರಿಯನ್ನು ಪುಟ್ಟಣ್ಣ ಕಣಗಾಲ್ ಚಿತ್ರವನ್ನಾಗಿ ತೆರೆಗೆ ತಂದಿತ್ತಾಗ ಅದಕ್ಕೆ ಜಿ.ಬಿ.ಯವರೇ ಸಂಭಾಷಣೆ ಬರೆದಿದ್ದರೆ ಚೆನ್ನಾಗಿತ್ತು ಎನ್ನಿಸದೇ ಇರಲಿಲ್ಲ. ಆದರೆ ಮುಂದೆ ಕೆಲವೇ ದಿನಗಳಲ್ಲಿ ಆ ಅನಿಸಿಕೆಯೂ ನಿಜವಾಯಿತು. ಗಿರೀಶ ಕಾರ್ನಾಡರು ‘ಒಂದಾನೊಂದು ಕಾಲದಲ್ಲಿ’ ಚಿತ್ರ ನಿರ್ದೇಶನಕ್ಕೆ ನಿಂತಾಗ, ಆ ಗಂಡುಭಾಷೆಯ ಸಂಭಾಷಣೆಯನ್ನು ಜಿ.ಬಿ.ಯವರಿಂದಲೇ ಬರೆಸಿದರು.
ಅಬ್ಬಾ… ‘ಒಂದಾನೊಂದು ಕಾಲದಲ್ಲಿ’… ಎಂಥ ಚಿತ್ರ ಅದು…!! ಏನು ಸಂಭಾಷಣೆಗಳವು!!!
ಆಗ ನನಗೆ ನಮ್ಮ ಉತ್ತರ ಕರ್ನಾಟಕದ ಕನ್ನಡದ ಸತ್ವ ಏನು ಎಂಬುದು ಅನುಭವಕ್ಕೆ ಬಂತು.
ಈ ಚಿತ್ರದಲ್ಲೊಂದು ಸನ್ನಿವೇಶ :
ಪೆರ್ಮಾಡಿ, ಗಂಡುಗಲಿ ಇಬ್ಬರ ನಡುವೆಯೂ ಘಮಾಸಾನ್ ಲಡಾಯಿ ಆಗುತ್ತದೆ. ಇಬ್ಬರೂ ಬಹದ್ದೂರರೇ. ಸೋಲೊಪ್ಪಿಕೊಳ್ಳಲು ಸಿದ್ಧವಿರದ ವೀರರು. ಹೊಡೆದಾಡಿ ಹೊಡೆದಾಡಿ ದಣಿದು ನಿಂತ ಜಾಗದಲ್ಲಿಯೇ ಕೂತುಕೊಳ್ಳುತ್ತಾರೆ. ಇಬ್ಬರೂ ಏದುಸಿರು ಬಿಡುತ್ತಲೇ ಒಬ್ಬನನ್ನೊಬ್ಬ ನೋಡುತ್ತಾರೆ. ಪರಸ್ಪರರ ಬಗೆಗಿನ ಮೆಚ್ಚುಗೆ ಅವರ ಕಣ್ಣಲ್ಲೇ ವ್ಯಕ್ತವಾಗುತ್ತದೆ. ತನ್ನ ಎದುರಾಳಿಯ ಬಲವನ್ನು ಪ್ರಶಂಶಿಸುವವನೇ ನಿಜವಾದ ವೀರನಲ್ಲವೆ?
”ನಾ ಇನ್ನೊಂದ್ ಹತ್ತ ವರ್ಸ ಸಣ್ಣಾವಿದ್ದಿದ್ರ… ನಿನ್ನ ಮುರದು ಮುಟಿಗಿ ಮಾಡಿ ಮುಕ್ಕತಿದ್ದೆ…” ಎನ್ನುತ್ತಾನೆ ಪೆರ್ಮಾಡಿ…
”ಒಪ್ಪಿದೆ… ಆದರೂ ಇನ್ನೂ ನೀ ಗಟ್ಟೇ ಅದಿ…” ಎಂದು ಆ ಹಿರಿಯನ ಬಗ್ಗೆ ಪ್ರಶಂಸೆಯ ನುಡಿಗಳನ್ನಾಡುತ್ತಾನೆ ಗಂಡುಗಲಿ.
ಎರಡೇ ಎರಡು ಮಾತುಗಳು…! ಆದರೆ ಅವು ಉಂಟು ಮಾಡುವ ಪರಿಣಾಮ…! ಅಬ್ಬಾ… ಭಾಷೆಯ ಸತ್ವ ಏನು ಎಂಬುದಕ್ಕೆ ಆ ಎರಡೇ ಮಾತುಗಳು ಸಾಕು.
ದಾಂಡೇಲಿ ಬಳಿಯ ಕಾಡಿನಲ್ಲಿ ನಡೆದ ಈ ಚಿತ್ರೀಕರಣದಲ್ಲಿ ಸುಂದರಕೃಷ್ಣ ಅರಸ್ (ಪೆರ್ಮಾಡಿ) ಮತ್ತು ಶಂಕರ ನಾಗ್ (ಗಂಡುಗಲಿ) ಇಬ್ಬರದೂ ಅಮೋಘವಾದ ಅಭಿನಯ.
ಜಿ.ಬಿ. ಬರೆದ ಮಾತುಗಳಿಗೆ ಜೀವ ತುಂಬಿದ್ದರು ಆ ಇಬ್ಬರೂ ಅಭಿನಯಪಟುಗಳು.
ಅದೇ ಚಿತ್ರದಲ್ಲಿ ಒಂದು ಜಾತ್ರೆಯ ಸನ್ನಿವೇಶ ಬರುತ್ತದೆ. ಬಹುಶಃ ಆ ಪಾಳೆಗಾರರ ಕುಲದೈವದ ಜಾತ್ರೆಯಿರಬೇಕು. ಜಾತ್ರೆಯೆಂದ ಮೇಲೆ ಎಲ್ಲ ಬಗೆಯ ಕಸುಬುದಾರರೂ ಸೇರುತ್ತಾರೆ. ಅವತ್ತು ನಾನು ಆ ಜಾತ್ರೆಯ ಚಿತ್ರೀಕರಣ ನೋಡಲು ಹೋಗಿದ್ದೆ.
ಗಂಡುಗಲಿ ಜಾತ್ರೆಯಲ್ಲಿ ತಿರುಗಾಡುತ್ತ ಬಂದು ಒಂದೆಡೆ ಕೂತರೆ ಅವನೆದುರು ಕಾಣುತ್ತಾನೆ ಒಬ್ಬ ಹಸ್ತರೇಖಾ ನಿಪುಣ.
ಆ ಹಸ್ತರೇಖಾ ನಿಪುಣನ ಪಾತ್ರ ಧರಿಸಿ ಬಂದು ಕೂತವರು ಯಾರು ಗೊತ್ತೆ?
ಸ್ವತಃ ಜಿ.ಬಿ. ಜೋಶಿ…!
(ಮುಂದುವರೆಯುವುದು….)




ಛೇ…. ಮುಂದಿನ ವಾರದವರೆಗೆ ಕಾಯಬೇಕಾ? ಕೊನೆ ಸಾಲಿಗೆ ಇನ್ನೊಂದು ಸಾಲು ಉತ್ತರ ಬರೆದಿದ್ರೆ ಛಲೋ ಇತ್ತು !
ಸರ್, ಜೀಬಿಯವರ ಪರಿಚಯ ಸರಣಿ ಹಿಡಿಸಿತು. ಲೇಖನದ ಕೊನೆಯಲ್ಲಿ ನಿಪುಣನ ಪಾತ್ರಧಾರಿ ಯಾರೆಂಬುದನು ಅರಿಯುವ ಕುತೂಹಲವಿದೆ. ಒಂದು ವಾರ ಕಾಯಬೇಕಲ್ಲ ಅನ್ನುವ ನಿರಾಶೆ!
ಪ್ರತಿಭಾ ಮೇರು ಶಿಖರ ಜಡಭರತರ ಬಗೆಗೆ ಅತ್ಯುತ್ತಮ ಲೇಖನ. ಬಹುಮುಖ ಪ್ರತಿಭೆಯಾಗಿದ್ದ ಅವರ ಕೃತಿಗಳನ್ನು ನಾನೂ ಓದಬೇಕಿದೆ. ಮರೆತ ಮಹಾ ಸಾಹಿತ್ಯ ಚೇತನವನ್ನು ಮತ್ತೆ ಪರಿಚಯಿಸಿದ ನಿಮ್ಮ ಪ್ರೀತಿಗೆ ಶರಣು.
‘ವಸಂತ ಸಾಹಿತ್ಯೋತ್ಸವ’ದಂತಹ ಸಾಹಿತ್ಯೋತ್ಸವಗಳು ಈಗ ಯಾರೂ ಆಯೋಜಿಸರೇನೋ!
ಆ ಪಾತ್ರಧಾರಿ ಸ್ವತಃ ಜೀಬಿಯವರೆಂಬುದು ಗಮನಕ್ಕೆ ಬಂದಿರಲಿಲ್ಲ.
ಧಾರಾನಗರಿಯ ನೆನಪುಗಳಲ್ಲಿ ಎಷ್ಟೊಂದು ಕ್ರಿಯಾಶೀಲ ಮನಸುಗಳಿವೆ… ಏನೆಲ್ಲ ಸಾಂಸ್ಕೃತಿಕ ನಡೆಗಳು ಘಟಿಸಿವೆ! ಇದೊಂದು ಅದ್ಭುತವಾದ ಅಂಕಣ. ಗೋಪಾಲ ವಾಜಪೇಯಿ ಅವರಿಂದ ಈ ಅಂಕಣ ಬರೆಸುತ್ತಿರುವ ಅವಧಿಗೆ ಧನ್ಯವಾದಗಳು ಮತ್ತು ಮೋಹನ ಸಾರ್… ಅವರಿಗೂ
ಅಹಾ.. ತುಂಬಾ ಚೆನ್ನಾಗಿದೆ ನೆನಪಿನ ಸರಣಿ. ಮುಂದೇನು?
‘ಜಡಭರತ’ನ ಬಗೆಗೆ ಗೊತ್ತೇ ಇರಲಿಲ್ಲ. ಚೆಂದ ಲೇಖನಕ್ಕೆ ಧನ್ಯವಾದಗಳು.
ಅದ್ಯಾಕೋ ಗೊತ್ತಿಲ್ಲ, ನನಗಿವತ್ತಿಗೂ ಪುಸ್ತಕ ಪ್ರಕಾಶನ ಎಂದರೆ ಮೊದಲು ಮನದಲ್ಲಿ ಬರುವುದೇ”ಮನೋಹರ ಗ್ರಂಥ ಮಾಲೆ’ಎಂಬ ಅಕ್ಷರಗಳು. ನಿಮ್ಮಿಂದಾಗಿ ಇನ್ನಷ್ಟು ಜಿ.ಬಿ.ಜೋಶಿಯವರ ಪರಿಚಯ ಆಯ್ತು.
avadhiyallina nimma lekhana tumba chennagi muudibndide. lekhadlli prastapisida kannadada mahaan chetanagala hesruglannu oduttiddnte mai romanchanagonditu. ee hesarugalu maretehodaveno annisuvshtu mattige eegina piligeyayavaralli kannada ulidukondide annisi vishaadavaaguttade.Niivu kekhanad muulaka nanna nenapugalannu tajaagolisuvudarondige bereyuva nanna masina sasige niirunisiddiiri. Tamage mattomme dhanyavaadagalu.
ಇಂದಿಗೂ ಧಾರಾನಗರಿಯ ಶೂರ ಸುಭಾಸ ರಸ್ತೆಯಲ್ಲಿ ಅಡ್ಡಾಡುವಾಗ ನನಗರಿಯದಂತೆಯೇ ನನ್ನ ಕಣ್ಣುಗಳು ಕುತೂಹಲದಿಂದ ಅಟ್ಟದ ಕಡೆಗೆ ನೋಡದೆ ಹಿಂದಿರುಗುವುದಿಲ್ಲ….ಅಂತಹ ಸ್ಥಳವದು….ಅನುಭವದ ನೆನಪಿನಂಗಳದಿಂದ ನೀವು ನೆನಪುಗಳನ್ನು ಮೊಗೆಮೊಗೆದು ನಮಗೆ ಬಡಿಸುತ್ತಿರುವುದು…ಅದನ್ನು ಸವಿಯುತ್ತಿರುವುದು…ನಮ್ಮ ಭಾಗ್ಯವೆಂದೇ ನಾನು ಭಾವಿಸಿದ್ದೇನೆ…ಧನ್ಯವಾದಗಳು ಸರ್…..
ನಿಮ್ಮ ಮಾತು ಖರೆ ಅದ ಮಗ್ರಂಮಾ ತಂದ ಲೇಖಕರ ಅವರ ಕೃತಿಗಳ ಒಂದು ದೊಡ್ಡ ಪಟ್ಟಿಯೇ ಅದ
ಅದೊಂಥರಾ ಆಲದ ಗಿಡಾ..