ಸುಮ್ಮನೇ ನೆನಪುಗಳು – 19
ನಮ್ಮ ಊರಿನ ಕಿಲ್ಲೆಯ ದಕ್ಷಿಣ ದ್ವಾರದ ಕುರಿತು ನಿಮಗೆ ಈ ಹಿಂದೊಮ್ಮೆ ಹೇಳಿದ್ದೆ.
1968ರ ಸುಮಾರಿಗೆ ಒಮ್ಮೆ ನಮ್ಮ ಅವ್ವ ದಕ್ಷಿಣ ದ್ವಾರದಿಂದ ಕಿಲ್ಲೆಯ ಒಳಗಡೆ ನನ್ನನ್ನು ಕರೆದುಕೊಂಡು ಹೋಗಿದ್ದಳು. ದ್ವಾರ ಇನ್ನೂ ದೂರವಿದ್ದಾಗಲೇ ನನಗೆ ವಾಂತಿ ಬಂದ ಹಾಗಾಯಿತು. ಅದರ ಆಸುಪಾಸಿನಲ್ಲಿಯೇ ಆಡುತ್ತಿದ್ದರೂ ನಮಗೆ ಇಂಥ ಅನುಭವ ಹಿಂದೆಂದೂ ಆಗಿರಲಿಲ್ಲ. ನಮ್ಮ ಅವ್ವನೂ ‘ವೈಕ್ ‘ ಎಂದು ಮೂಗು-ಬಾಯಿಗಳಿಗೆ ಸೆರಗು ಗಟ್ಟಿ ಹಿಡಿದುಕೊಂಡೇ ನಡೆಯತೊಡಗಿದಳು.
ಸರಿಸುಮಾರು 15 ಅಡಿ ದಪ್ಪದ ಮಣ್ಣಿನ ಕೋಟೆಯ ಹಿಂದಿನ ಬಾಗಿಲು ಅದು. ಅಷ್ಟು ಅಂತರವನ್ನು ಕ್ರಮಿಸುವುದರೊಳಗೆ, ಹೊಟ್ಟೆಯೊಳಗೆ ಇದ್ದುದೆಲ್ಲ ಮೇಲೆ ಬಂದು, ಬಾಯಿಗೆ ಒತ್ತಿ ಹಿಡಿದುಕೊಂಡಿದ್ದ ಬಟ್ಟೆಯೊಳಗೆ ಕೂತೇಬಿಟ್ಟಿದೆ ಏನೋ ಎನಿಸಿಬಿಟ್ಟಿತ್ತು.
ಅದೊಂದು ರೀತಿಯ ಸುರಂಗ ಮಾರ್ಗವೇ ಸೈ. ಮಬ್ಬುಗತ್ತಲು, ಗಬ್ಬು ನಾತ, ಏನೋ ‘ಗಂವ್’ ಅನ್ನುತ್ತಿದೆ ಎಂಬ ಅನಿಸಿಕೆ… ಮುಂದೆ ಹೆಜ್ಜೆಯಿಟ್ಟರೆ ಎದೆಗೆ ಕೈಕೊಟ್ಟು ಹಿಂದೂಡುತ್ತಿದೆ ಎಂಬ ಅನುಭವ. ಅಂಥದರಲ್ಲಿಯೇ ಅವ್ವ ನನ್ನ ಹಿಡಿದೆಳೆಯುತ್ತ ಆಚೆ ಬಯಲಿಗೆ ತಂದುಬಿಟ್ಟಳು. ಅಲ್ಲಿ ಕಾಲಿಟ್ಟ ಮೇಲೆಯೇ ನಾವಿಬ್ಬರೂ ದೀರ್ಘವಾಗಿ ಉಸಿರೆಳೆದುಕೊಂಡದ್ದು. ಅಲ್ಲಿಯೇ ಪಕ್ಕದಲ್ಲಿ ಒಂದು ಚಿಕ್ಕ ಪೋಲಿಸ್ ಚೌಕಿ. ಅಲ್ಲಿರಿಸಿದ್ದ ಮಣ್ಣಿನ ಮಡಕೆಯಿಂದ ನನಗಷ್ಟು ನೀರು ಕುಡಿಸಿದ ಅವ್ವ, ”ನಡಿ… ಹೊತ್ತಾಗ್ತದ…” ಎಂದು ಮುಂದೆ ದೂಡಿಕೊಂಡು ಹೊರಟಳು.
ಆಕೆ ಟೆನೆನ್ಸಿ ಸಂಬಂಧದ ಒಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆಕೆ ಎರಡು ಸಲ ಗೈರು ಹಾಜರಾಗಿದ್ದರಿಂದ ವಕೀಲರು, ”ಈ ಸಲ ಬರಲಿಕ್ಕೇಬೇಕು,” ಅಂತ ತಾಕೀತು ಮಾಡಿದ್ದರು. ಕಿಲ್ಲೆಯ ಅಂಗಣದಲ್ಲಿ ಹಾಗೇ ಮುಂದೆ ನಡೆದರೆ ಸಿಗುತ್ತಿತ್ತು ಮುನ್ಸಿಫ್ ಕೋರ್ಟು. ಈ ಹಿಂದೆ ಸಂಸ್ಥಾನಿಕರು ‘ದರ್ಬಾರ್ ಹಾಲ್’ ಎಂದು ಯಾವುದನ್ನು ಬಳಸುತ್ತಿದ್ದರೋ ಅಲ್ಲಿಯೇ ನಂತರದ ವರ್ಷಗಳಲ್ಲಿ ಮುನ್ಸಿಫ್ ಕೋರ್ಟು ಕೆಲಸ ಮಾಡಲಾರಂಭಿಸಿತ್ತು. ಆಗ ನಾನು ಇನ್ನೂ ‘ಅಜ್ಞಾನಿ’ಯಾಗಿದ್ದುದರಿಂದ (ಆಗ ಕಾಯಿದೆಯ ಪ್ರಕಾರ 18 ವರ್ಷಗಳ ಕೆಳಗಿನವರು ‘ಅಜ್ಞಾನಿಗಳು.’ ಮೈನರ್ ಅಂತಾರಲ್ಲ… ಆದ್ದರಿಂದ, ಅವರ ಹೆಸರಿನಲ್ಲಿ ಆಸ್ತಿ ಏನಾದರೂ ಇದ್ದರೆ ಆ ಹುಡುಗನ ವಿಧವೆ ತಾಯಿ ಅಥವಾ ಹತ್ತಿರದ ಸಂಬಂಧಿಯನ್ನು ‘ಅ.ಸ.ದಾರ’ (= ಅಜ್ಞಾನಿಯ ಸಂರಕ್ಷಣದಾರ) ಎಂದು ಗುರುತಿಸಲಾಗುತ್ತಿತ್ತು.
-0-0-0-
ಅಂದು ರಾತ್ರಿಯಾದರೂ ನನಗೆ ಆ ವಾಸನೆ ಮೂಗಿನಲ್ಲಿ ಕೂತುಬಿಟ್ಟಿದೆ ಅನಿಸಿತ್ತು. ಅವ್ವನನ್ನು ಕೇಳಿದ್ದೆ – ”ಅಲ್ಲಾ… ಆ ಬಾಳಾ ಸಾಹೇಬರು, ಮತ್ತವರ ರಾಣೀ ಸಾಹೇಬರು ಅಲ್ಲೆ ಆ ಗಬ್ಬು ನಾರೋ ಕ್ವಾಟೀ ಒಳಗ, ‘ಗಂವ್’ ಅನ್ನೋ ಕಿಲ್ಲೇದಾಗ ಹ್ಯಾಂಗ ಇರ್ತಿದ್ರು…? ಮೂಗು ಇತ್ತೋ ಇಲ್ಲೋ ಅವರಿಗೆ…?”
”ಅವರ ಕಾಲಕ್ಕ ಹೀಂಗಿರಲಿಲ್ಲಪಾ ಅದು…” ಅಂದಳು ಅವ್ವ.
”ಮತ್ತ ಹ್ಯಾಂಗಿತ್ತು…?”
”ಆಗ ಇಡೀ ಕಿಲ್ಲೇನ ಒಂದು ಹೂವಿನ ತ್ವಾಟಾಗಿತ್ತು…. ಅಲ್ಲೆ ಬರೇ ಸಂಪಿಗಿ ಗಿಡಗೋಳು ತುಂಬಿದ್ವು ನಾ ಒಂದೆರಡ ಸರ್ತೆ ಕಿಲ್ಲೇದ ಗೌರಿ ಪೂಜಿ ವ್ಯಾಳ್ಯಾಕ್ಕ ಉಡಿ ತುಂಬಿಸಿಗೋಳಿಕ್ಕೆ ಅಂತ ಹೋಗಿದ್ನೆಲಾ… ಅಲ್ಲಿಂದ ಬರೂ ಹೊತ್ತಿಗೆ ಮೂರೂಸಂಜಿ ಆಗಿ ಹೋಗಿರತಿತ್ತು. ರಾತ್ರಿ ರಾಣಿ ಹೂವಿನ ಗಂಧ ಗಾಳೀ ಜೋಡಿ ಬಂದು ನಮ್ಮ ಮೂಗಿಗೆ ಅಡರತಿತ್ತು…” ಅಂತ ಮುಖ ಅರಳಿಸಿಕೊಂಡಿದ್ದಳು ಅವ್ವ
”ಈ ಹಿಂದಿನ ಬಾಗಲದಿಂದನ ಹೋಗತಿದ್ರೇನು…?”
”ಹೌದು… ಹೋಗೋದೂ ಅದ ದಾರಿಯಿಂದ… ಬರೋದೂ ಅದ ದಾರಿಯಿಂದ…” ಇನ್ನೂ ಆಕೆ ಅದೇ ಗುಂಗಿನಲ್ಲಿಯೇ ಇದ್ದಳು.
”ಮತ್ತ, ಇವತ್ತ ಮಧ್ಯಾನ ಯಾಕ ಅಷ್ಟು ಕೆಟ್ ವಾಸ್ನಿ ಬಂತು? ಯಾವ್ದರದದು ಆ ವಾಸ್ನಿ?” ಎಂಬ ನನ್ನ ಮಾತಿಗೆ ಥಟ್ಟನೆ ಮುಖ ಸಿಂಡರಿಸಿದ ಅವ್ವ,
”ನನಗೂ ಗೊತ್ತಿಲ್ಲಪಾ… ನಾನೂ ಇವತ್ತ ಮದಲನೆ ಸರ್ತೆ ಅಲ್ಲೇ ಹೋದದ್ದು…”
”ಅಲ್ಲವಾ… ಮತ್ತ, ‘ಕಿಲ್ಲೇದ ಗೌರಿ ಪೂಜಿ ವ್ಯಾಳ್ಯಾಕ್ಕ ಉಡಿ ತುಂಬಿಸಿಗೋಳಿಕ್ಕೆ ಹೋಗತಿದ್ದೆ,’ ಅಂತ ಈಗಷ್ಟ ಹೇಳಿದಿ…”
”ಹೋಗ್ಲಿ ಬಿಡು… ಅದನ್ನ ತೊಗೊಂಡು ಏನ್ ಮಾಡ್ತಿ?” ಎಂದು ಮಾತು ಮರೆಸಲು ನೋಡಿದ್ದ ಅವ್ವನಿಗೆ ನಾನು ಹೇಳಲೇಬೇಕೆಂದು ಒತ್ತಾಯಿಸಿದೆ. ಅಂತೂ ಕೊನೆಗೊಮ್ಮೆ ಅವ್ವ, ”ಅದು… ಅದು… ಭಟ್ಟಿ ಸೆರೇದ ವಾಸ್ನಿ…” ಅಂದಳು.
”ಭಟ್ಟಿ ಸೆರೆ ಅಂದ್ರ…?”
”ಪ್ರಶ್ನಿ ಮ್ಯಾಲ ಪ್ರಶ್ನಿ, ಪ್ರಶ್ನಿ ಮ್ಯಾಲ ಪ್ರಶ್ನಿ… ಹೋಗು, ನೀ ಇನ್ನೂ ಸಂಣಾವಾ… ಅದನೆಲ್ಲಾ ತಲೀಗೆ ಹಚಿಗೋಬ್ಯಾಡಾ… ಪರೀಕ್ಷಾ ಹತ್ರ ಬಂದ್ವು . ಓದಿಕೋ ಹೋಗು…” ಎಂದು ಜಬರಿಸಿ ಕಳಿಸಿದ್ದಳು.
ಆ ಗಬ್ಬು ನಾತ ಜಪ್ತು ಮಾಡಿ ತಂದ ಕಳ್ಳ ಭಟ್ಟಿ ಸೆರೆ ಅಥವಾ ಸಾರಾಯಿ ತುಂಬಿದ್ದ ಚರ್ಮದ ಚೀಲಗಳು, ಟಾಯರುಗಳಿಂದ ಬರುತ್ತಿದ್ದಂಥದು ಎಂಬುದು ನನಗೆ ಆ ಮೇಲೆ ಗೊತ್ತಾಯಿತು. ಕೋರ್ಟಿನ ಭಾಷೆಯಲ್ಲಿ ಅದನ್ನು ‘ಮುದ್ದೇ ಮಾಲು’ ಅನ್ನುತ್ತಿದ್ದರು. ಜಪ್ತು ಮಾಡಿ ತಂದ ಆ ಚರ್ಮದ ಚೀಲಗಳು, ಟಾಯರುಗಳನ್ನು ಕೇಸು ನಿಕಾಲಾಗುವ ತನಕ ಅಲ್ಲಿಯೇ ಒಟ್ಟಿರುತ್ತಿದ್ದರು. ದಿನವೂ ಅಲ್ಲಿಂದ ಹಾದು ಹೋಗುವ ವಕೀಲರು ಮುಂತಾದ ಜನಕ್ಕೆ ಅದು ‘ದುರ್ವಾಸನೆ’ ಅಲ್ಲವೇ ಅಲ್ಲ…!
ಒಂದು ಕಾಲಕ್ಕೆ ‘ಪರಿಮಳದ ಪಾತ್ರೆ’ಯಂತಿದ್ದ ಆ ದ್ವಾರ ಕಾಲಾಂತರದಲ್ಲಿ ‘ದುರ್ವಾಸನೆಯ ದ್ವಾರ’ವಾಗಿ ನಿಂತಿತು…!
ಉಪ್ಪರಿಗೆ ತಿಪ್ಪೆಯಾಗುವುದೇನೂ ಹೊಸ ವಿದ್ಯಮಾನವಲ್ಲವಲ್ಲ.
-0-0-0-
ಅಸಲಿ ಮಾತೆಂದರೆ, ಆ ಕೋಟೆಯ ದಕ್ಷಿಣಭಾಗಕ್ಕೆ ಅಂಟಿಕೊಂಡೇ ಇತ್ತು ನಮ್ಮ ಕನ್ನಡ ಸಾಲೆ. ಆದರೂ ನಾವು ಒಮ್ಮೆಯೂ ಆ ದಕ್ಷಿಣ ದ್ವಾರದ ಬಳಿ ಸುಳಿದಿರಲಿಲ್ಲ. ಅದಕ್ಕೆ ಕಾರಣ ನಮ್ಮನ್ನು ಹಿರಿಯರು ‘ಅಲ್ಲೇ ಯೋಳು ಮಕ್ಕಳ ಚೌಡಿ ಅದ. ಒಳಗ ಕಾಲಿಟ್ರ ಹಿಡದು ಕೊಂದು ತನ್ನ ಮಕ್ಕಳಿಗೆ ತಿನಿಸಿಬಿಡತದ…’ ಎಂದು ಹೆದರಿಸಿದ್ದು. ಹೀಗಾಗಿ ಆ ದ್ವಾರದತ್ತ ನೋಡುವ ಧೈರ್ಯವನ್ನೂ ನಾವು ಮಾಡುತ್ತಿರಲಿಲ್ಲ. ಆದರೂ ಅಕಸ್ಮಾತ್ತಾಗಿ ಒಮ್ಮೊಮ್ಮೆ ಅದು ಚವತಿಯ ಚಂದ್ರನ ಹಾಗೆ ಕಣ್ಣಿಗೆ ಬಿದ್ದು ಬಿಡುತ್ತಿತ್ತು. ಆಮೇಲೆ ಮರುದಿನದವರೆಗೂ ಏನೋ ಹಳಹಳಿ, ಏನೋ ಭಯ, ಏನೋ ಆತಂಕ.
ಹಾಂ… ನಮ್ಮ ಕನ್ನಡ ಸಾಲೆಯ ಬಗ್ಗೆ ಒಂದಿಷ್ಟು ಹೇಳಲೇಬೇಕು. ಬೆಂಗಳೂರಿನ ನ್ಯಾಶನಲ್ ಕಾಲೇಜು ಮೈದಾನವಿದೆಯಲ್ಲ, ಅದರ ನಾಲ್ಕನೆಯ ಒಂದು ಭಾಗದಷ್ಟು ವಿಶಾಲ ಜಾಗದಲ್ಲಿ ತಲೆಯೆತ್ತಿ ನಿಂತಂಥದು ಈ ನಮ್ಮ ‘ಸರಕಾರಿ ಮಾದರಿ ಪ್ರಾಥಮಿಕ ಶಾಲೆ ನಂ. ಒಂದು.’ ಅದನ್ನು ನಾವೆಲ್ಲಾ ‘ಒನ್ನೇ ನಂಬರ್ ಸಾಲಿ’ ಎಂದು ಕರೆಯುತ್ತಿದ್ದೆವು. ನಾವೇನಾದರೂ ತಪ್ಪು ಮಾಡಿದರೆ, ಕೊಟ್ಟ ಮನೆ ಓದನ್ನು ಮುಗಿಸದೆಯೇ ಹೋದರೆ, ನಮ್ಮ ಮಾಸ್ತರು, ”ಓಡುತ್ತ ಆ ಮೈದಾನವನ್ನು ನಾಲ್ಕು ಸಲ ಸುತ್ತು”ವ ಶಿಕ್ಷೆ ಕೊಡುತ್ತಿದ್ದರು. ಅವರು ಹಾಗೆ ಮಾಡಿ ಕಲಿಸಿದ್ದರಿಂದಲೇ ನಮ್ಮ ಮೈ ಸ್ವಲ್ಪ ಗಟ್ಟಿಯಾಯಿತು, ಕಲಿಸಿದ್ದು ತಲೆಯಲ್ಲಿ ಉಳಿಯಿತು. ಬುದ್ಧಿ ಚುರುಕಾಯಿತು, ಕನ್ನಡ ನರ-ನಾಡಿಗಳಲ್ಲಿ ಹರಿದಾಡತೊಡಗಿತು.
ಹಾಂ… ಈ ನಮ್ಮ ಸಾಲೆಗೆ ಐತಿಹಾಸಿಕ ಮಹತ್ವವಿದೆ. ಯಾಕೆಂದರೆ ಈ ಸಾಲೆ ಸುರುವಾಗಿ ಸರಿಯಾಗಿ 140 ವರ್ಷಗಳು ತುಂಬಿದವು. ಹೌದು. 1872ರಲ್ಲಿ ಪ್ರಾರಂಭವಾದ ಸಾಲೆ ಇದು. ಹಿಂದಿನ ಸಂಚಿಕೆಯಲ್ಲಿ ನಿಮಗೆ ಪರಿಚಯವಾದ ನನ್ನ ಅಜ್ಜ (‘ಅಣ್ಣಾ…’) ಇದೇ ಸಾಲೆಯಲ್ಲಿ ಮುಲ್ಕಿ ವರೆಗೆ ಓದಿದ. ಮುಲ್ಕಿ ಅಂದರೆ ಆಗಿನ ಏಳನೆಯ ಇಯತ್ತೆ. ಆಗ ಇದು ‘ಸರಕಾರೀ ಕನ್ನಡ ಗಂಡು ಮಕ್ಕಳ ಶಾಲೆ’. (ಇತ್ತೀಚಿಗೆ ಇದು ‘ಮಾದರಿ ಪ್ರಾಥಮಿಕ ಶಾಲೆ’ಯಾಗಿದ್ದು ಇದೀಗ ಇಲ್ಲಿ ‘ಸಹಶಿಕ್ಷಣ’ ಆರಂಭವಾಗಿದೆ.)
ನಮ್ಮ ಮನೆಯ ಎದುರಿಗೇ ಎರಡು ಫರ್ಲಾಂಗಿನ ಮೇಲೆ ಈ ಸಾಲೆಯ ಕಟ್ಟಡ. ನನ್ನ ಅಜ್ಜ ಸಾಲೆಗೆ ಹೋಗುವಾಗ-ಬರುವಾಗ ಒಂದು ಮನೆಯ ಹಿರಿಯರು ಪ್ರೀತಿಯಿಂದ ಕರೆದು, ಮುತ್ತಿಟ್ಟು ಕೈಯಲ್ಲಿ ‘ಬೆಲ್ಲಾಹಿಟ್ಟಿನ ಮುದ್ದೆ’ಯನ್ನು ಕೊಡುತ್ತಿದ್ದರಂತೆ. ಹೌದು. ‘ಬೆಲ್ಲಾಹಿಟ್ಟಿನ ಮುದ್ದೆ’… ನಿಮಗೆ ಜೋಳದ ಅರಳಿನ ಪರಿಚಯವಿದ್ದರೆ ಇದರ ರುಚಿ ಗೊತ್ತಿದ್ದೇ ಇರುತ್ತದೆ. ಜೋಳದ ಅರಳನ್ನು ಬೀಸಿ ಮಾಡಿದ ತರಿತರಿಯಾದ ಹಿಟ್ಟಿಗೆ ಬೆಲ್ಲ ಕರಗಿದ ಹಾಲು ಹಾಕಿ ಕಲೆಸಿ ಉಂಡೆಯ ಥರ ಮಾಡುತ್ತಾರೆ (ಕೆಲವರು ಸಕ್ಕರೆಯನ್ನೂ ಹಾಕುವುದುಂಟು, ಆದರೆ ಬೆಲ್ಲದ ರುಚಿಯೇ ರುಚಿ). ಅದರ ಮೇಲೆ ಒಂದಿಷ್ಟು ‘ಹೆತ್ತುಪ್ಪ’ (ಗಟ್ಟಿಯಾದ ತುಪ್ಪ). ಅಬ್ಬ… ಅದನ್ನು ತಿಂದರೆ ಸ್ವರ್ಗಕ್ಕೆ ಮೂರೇ ಗೇಣು. ವಯಸ್ಸಾದವರು ಅರಳಿಟ್ಟಿಗೆ ಮಜ್ಜಿಗೆ ಉಪ್ಪು ಬೆರೆಸಿ ಕಲೆಸಿ ತಿನ್ನುವುದೂ ಇದೆ. ಇದು ‘ಮಜ್ಜಿಗಿ ಹಿಟ್ಟು.’ ಇನ್ನೊಂದು ರೀತಿಯದಿದೆ. ಹುಣಿಸೆ ಹಣ್ಣಿನ ನೀರಿನಲ್ಲಿ ಈ ಹಿಟ್ಟು ಕಲೆಸಿ, ಹಸಿ ಕೊತಂಬರಿ ಸಣ್ಣಗೆ ಹೆಚ್ಚಿ ಹಾಕಿ, ಮೆಂತ್ಯ ಮೆಣಸಿನಕಾಯಿಯ ಒಗ್ಗರಣೆ ಕೊಟ್ಟರಂತೂ ‘ಪ್ಚ್ ‘ ಆಹಾ… ! ಈ ಮೂರೂ ರೀತಿಯ ಹಿಟ್ಟು ಕಲೆಸುವುದೂ ಒಂದು ಹದ. ನಮ್ಮ ಕಡೆಯ ಹಿರಿಯ ಹೆಂಗಸರು ಇದರಲ್ಲಿ ಪಳಗಿರುತ್ತಾರೆ.
ಹಾಂ… ನಮ್ಮ ಅಜ್ಜನ ವಿಚಾರ ಹೇಳುತ್ತಿದ್ದೆ… ಯಾವ ಮನೆಯವರು ಆತನನ್ನು ಪ್ರೀತಿಯಿಂದ ಕರೆಕರೆದು ‘ಬೆಲ್ಲಾ ಹಿಟ್ಟು’ ಕೊಡುತ್ತಿದ್ದರೋ ಅವರ ಮಗಳೇ (ಲಕ್ಷ್ಮೇಶ್ವರದ ಜೋಯಿಸರ ಮಗಳು ವೆಂಕವ್ವ) ನಮ್ಮ ಅಜ್ಜಿ.
ಆಕೆಯ ಮಗ ಅಂದರೆ ನಮ್ಮ ಅಪ್ಪನೂ ಮುಂದೆ ಆ ಸಾಲೆಗೇ ಹೋಗತೊಡಗಿದನಂತೆ. ಒಳ್ಳೆಯ ಅಭಿನಯಪಟುವೂ ಕ್ರೀಡಾಪಟುವೂ ಆಗಿದ್ದ ಆತನ ಬಗ್ಗೆ ಅವರಿವರು ಹೇಳುವ ಸಾಕಷ್ಟು ಕತೆಗಳನ್ನು ಕೇಳಿ ಗೊತ್ತೇ ಹೊರತು ನನಗೆ ಆತನನ್ನು ನೋಡಿ ಗೊತ್ತೇ ಇಲ್ಲ. ಬದುಕಿನಲ್ಲಿ ಸಾಕಷ್ಟು ರೀತಿಯ ಆಟಗಳನ್ನು ಆಡಿದವನಂತೆ ನಮ್ಮಪ್ಪ. ನಾನಿನ್ನೂ ನಾಲ್ಕು ವರ್ಷದವನಿದ್ದಾಗಲೇ ‘ಆಟ ಮುಗಿಸಿ’ ಎದ್ದು ಹೋದನಂತೆ. ಆತನ ಆಟ ಮುಗಿದದ್ದು ಈ ದಸರೆಗೆ ಸರಿಯಾಗಿ 56 ವರ್ಷಗಳ ಹಿಂದೆ…
ಆಮೇಲೆ ಆ ಸಾಲೆಯಲ್ಲಿ ನಾನು ಆರನೆಯ ಇಯತ್ತೆಯ ತನಕ ಓದಿದೆ. ಮನೆಯ ಪರಿಸ್ಥಿತಿ ಸರಿಯಾಗಿರದ ಕಾರಣ ಊರು ಬಿಡಬೇಕಾಯಿತು. ಎತ್ತಿಕೊಂಡವರ ಕೂಸಾಗಿ, ಒಂದೊಂದು ವರ್ಷ ಒಬ್ಬೊಬ್ಬ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಓದು ಮುಂದುವರಿಸಬೇಕಾಯಿತು.
ಎಷ್ಟು ಊರುಗಳು, ಎಷ್ಟು ಮನೆಗಳು…! ಎಷ್ಟು ಊರುಗಳ ಎಷ್ಟು ನೀರುಗಳು…! ಎಷ್ಟೆಲ್ಲಾ ರೀತಿಯ ‘ಅನುಭವ’ಗಳು…!
ಆದದ್ದೆಲ್ಲಾ ಒಳಿತೇ ಆಯಿತು…
ಇರಲಿ… ನನ್ನ ಸಾಲೆಯ ಬಗ್ಗೆ ಹೇಳುತ್ತಿದ್ದೆ. ನಾನು ಈ ‘ಒನ್ನೇ ನಂಬರ್ ಸಾಲಿ’ಯಲ್ಲಿ ಓದುತ್ತಿದ್ದಾಗ ಅಲ್ಲಿಗೆ ವಿನೋಬಾ ಭಾವೆ ಬಂದಿದ್ದ ನೆನಪು. ನಮ್ಮ ಸಾಲೆಯ ದೊಡ್ಡ ಜಗಲಿಯ ಮೇಲೆ ಅವರು ಕೂತಿದ್ದ ಚಿತ್ರ ಇನ್ನೂ ನನ್ನ ಕಣ್ಣ ಮುಂದೆ ಇದೆ. ಬಿಳಿ ಬಟ್ಟೆಯ, ಬಿಳಿ ಗಡ್ಡ-ಮೀಸೆಯ, ದಪ್ಪ ಚಾಳೀಸಿನ ಅಜ್ಜ… ಮೈದಾನದಲ್ಲಿ ಅವರ ಮಾತು ಕೇಳಲು ನೆರೆದಿದ್ದವರು ಕನಿಷ್ಠ ಐದಾರು ನೂರು ಜನರಾದರೂ ಇದ್ದಿರಬೇಕು. ಇನ್ನೊಮ್ಮೆ -ಬಹುಶಃ 1959-60ರಲ್ಲಿ ಇರಬೇಕು- ಪಂ. ಭೀಮಸೇನ ಜೋಶಿ ಬಂದು ಹಾಡಿದ್ದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಹಾಡು ಇನ್ನೂ ನನ್ನ ಕಿವಿಯಲ್ಲಿದೆ. ರಾವ್ ಅಂತ ಒಬ್ಬ ಜಾದೂಗಾರ. ನಮ್ಮ ಸಾಲೆಯಲ್ಲಿ ನೀಡಿದ ತನ್ನ ಪ್ರದರ್ಶನದಲ್ಲಿ ಬೇಕಾದ ಸಾಮಾನು ಎತ್ತಿಕೊಡುವ ಸಹಾಯಕನ ಕೆಲಸಕ್ಕೆ ನನ್ನನ್ನೇ ಕರೆದಿದ್ದ.
ನಮ್ಮ ಸಾಲೆಗೆ ಆಗಿನ ಕೇಂದ್ರ ಮಂತ್ರಿ ದ.ಪ. ಕರಮರಕರ್, ರಂಗನಾಥ ದಿವಾಕರ್ ಅವರು ಕೂಡ ಭೆಟ್ಟಿ ನೀಡಿದ್ದನ್ನು ನಾನು ಮರೆತಿಲ್ಲ. ಮಜಾ ಎಂದರೆ ಈಗಿನಂತೆ ಆಗ ‘ಸೆಕ್ಯುರಿಟಿ’ಯವರ ಧಾಂಧಲೆ ಇರುತ್ತಿರಲೇ ಇಲ್ಲ. ಆ ಮಂತ್ರಿ ಮಹೋದಯರು ಯಾವುದೇ ತೋರಿಕೆ-ಗೀರಿಕೆಯಿರದೆ ತುಂಬ ಸರಳವಾಗಿದ್ದು ‘ಆಪ್ತ’ರೆನಿಸಿಬಿಡುತ್ತಿದ್ದರು.
1961ರಲ್ಲಿ ನಮ್ಮ ಸಾಲೆಯ ಬಲಕ್ಕಿರುವ ದೊಡ್ಡ ಜಾಗದಲ್ಲಿ (ಇದರ ಎದುರೇ ನಾನು ಮೇಲೆ ಹೇಳಿದ ಕಿಲ್ಲೆಯ ದಕ್ಷಿಣ ದ್ವಾರ.) ನಮ್ಮ ಊರಿನ ಪುರಸಭೆಯವರು ಒಂದು ‘ಮಕ್ಕಳ ಪಾರ್ಕ್’ ನಿರ್ಮಿಸಿದರು. ವೃತ್ತಾಕಾರದ ಆ ಪಾರ್ಕಿಗೆ ಸುತ್ತಲೂ ಕಬ್ಬಿಣದ ಕಟಾಂಜನ. ಎರಡು ಕಡೆಯಿಂದ ಪ್ರವೇಶದ್ವಾರ. ಒಳಗೆ ಜಾರುಬಂಡಿ, ತಿರುಗು ಚಕ್ರ, ಜೀಕ-ಮೂಕ ಇವೆ ಮುಂತಾದ ಅನೇಕ ಬಗೆಯ ಆಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಎಲ್ಲವೂ ಲೋಹದವು. ಎಲ್ಲವೂ ಹೊಸ ರೀತಿಯದಾಗಿರಬೇಕೆಂಬುದು ಆಗಿನ ಪುರಸಭಾಧ್ಯಕ್ಷರ ಮನಿಷೆ. ಎಲ್ಲವೂ ಅವರ ಇಷ್ಟಾನುಸಾರವೇ ಆಯಿತು.
ಆ ‘ಮಕ್ಕಳ ಪಾರ್ಕ್’ ಉದ್ಘಾಟನೆಗೆ ಆಗಿನ ಮೈಸೂರು ರಾಜ್ಯದ ಸನ್ಮಾನ್ಯ ರಾಜ್ಯಪಾಲರೂ, ಮೈಸೂರು ಸಂಸ್ಥಾನದ ಹಿಂದಿನ ಮಹಾರಾಜರೂ ಆಗಿದ್ದ ಶ್ರೀ ಜಯಚಾಮರಾಜ ಒಡೆಯರರು ಆಗಮಿಸಿದ್ದರು. ನಾವೆಲ್ಲ ಸಮವಸ್ತ್ರ ಧರಿಸಿ, ಅವರು ಬರುವ ದಾರಿಯಲ್ಲಿ ಸಾಲಿನಲ್ಲಿ ನಿಂತು, ಅವರು ಬಂದ ಕೂಡಲೇ ನೇತಾಜಿ ಸುಭಾಷರ ಹಾಗೆ ಸೆಲ್ಯೂಟ್ ಮಾಡಿದ್ದೆವು. ಮತ್ತು ಅವರ ದೇಹದ ಗಾತ್ರವನ್ನು ನೋಡಿ ಬಂದಂಥ ನಗೆಯನ್ನು ಮಾಸ್ತರರ ‘ಮಲ್ಲಾಡ ಸುಂಟಿ’ಯ ಹೆದರಿಕೆಯಿಂದ ಅದು ಹೇಗೋ ತಡೆಹಿಡಿದುಕೊಂಡಿದ್ದೆವು. (ಹಾಫ್ಯಾಂಟ್ ಹಾಕಿಕೊಳ್ಳುತ್ತಿದ್ದ ನಮ್ಮ ತೊಡೆಯನ್ನು ಮಾಸ್ತರು ತಮ್ಮ ಬಲಗೈಯ್ಯ ಹೆಬ್ಬೆರಳು ಮತ್ತು ತೋರ್ಬೆರಳುಗಳಿಂದ ಗಟ್ಟಿಯಾಗಿ ಹಿಡಿದು, ಚಿವುಟಿದರೆ ಅಲ್ಲಿ ಶುಂಠಿಯ ಹಾಗೆ ಕೆಂಪಗೆ ಒಂದು ಗಡ್ಡೆ ಏಳುತ್ತಿತ್ತು. ಅದು ಇಡೀ ರಾತ್ರಿ ನಮ್ಮ ನಿದ್ದೆಗೆಡಿಸುತ್ತಿತ್ತು. ಅಷ್ಟು ನೋವು… ಅದಕ್ಕೆ ನಮ್ಮ ಮಾಸ್ತರು ‘ಮಲ್ಲಾಡ ಸುಂಟಿ’ ಎಂದು ಹೆಸರು ಕೊಟ್ಟಿದ್ದರು.)
ಅವತ್ತು ಎರಡು ತಾಸುಗಳ ವರೆಗೆ ಭಾಷಣಗಳ ಸುರಿಮಳೆ. ಮಾಲಾರ್ಪಣೆಯ ಭರಾಟೆ. ಯಾರು ಏನು ಮಾತಾಡಿದರೆಂಬುದು ನಮಗೆ ತಿಳಿಯಲೇ ಇಲ್ಲ. ಕೊನೆಗೂ ಮಹಾರಾಜರು ‘ಮಕ್ಕಳ ಪಾರ್ಕ್’ ಉದ್ಘಾಟಿಸಿದರು. ಅವರು ಉದ್ಘಾಟಿಸುವುದೊಂದೇ ತಡ, ಅಲ್ಲಿ ಸೇರಿದ್ದ ಊರ ಗಣ್ಯರು ಪ್ರೀತಿಯಿಂದ, ಸಂಭ್ರಮದಿಂದ ಆ ಪಾರ್ಕನ್ನು ಮುತ್ತಿಬಿಟ್ಟರು. ಮಕ್ಕಳಿಗಿಂತ ಮಕ್ಕಳಾಗಿ ಜಾರುಬಂಡಿ, ತಿರುಗು ಚಕ್ರ, ಜೀಕ-ಮೂಕಗಳನ್ನು ಏರಿ ನಿಂತು ಆಡತೊಡಗಿದರು. ಅದೇನು ವೇಗ… ಅದೇನು ಆವೇಗ… ಅದೇನು ಆವೇಶ… ಇಬ್ಬರು ಮಕ್ಕಳು ಕೂಡಬೇಕಾದ ಜಾಗದಲ್ಲಿ ಐದೈದು ಜನ…! ಆ ಭಾರಕ್ಕೆ ಜಾರುಬಂಡಿ ಕುಸಿಯಿತು. ಜೀಕ-ಮೂಕ ಮುರಿಯಿತು. ತಿರುಗುಚಕ್ರದ ಓಟ ನಿಂತಿತು. ಇನ್ನುಳಿದ ಸಾಧನಗಳ ಸ್ಥಿತಿಯೂ ಅದೇ ಆಗಿತ್ತು. ಕೆಲವರು ಗಾಯ ಮಾಡಿಕೊಂಡರು. ಕೆಲವರು ಬಟ್ಟೆ ಹರಿದುಕೊಂಡರು. ಇಷ್ಟಾದ ಮೇಲೆ ‘ಆ’ ಮಕ್ಕಳೆಲ್ಲ ಸಪ್ಪೆ ಮುಖ ಮಾಡಿಕೊಂಡು ಅಲ್ಲಿಂದ ಹೊರಟು ಹೋದರು. ಮಹಾರಾಜರ ಸ್ವಾಗತಕ್ಕೆ ನಿಂತಿದ್ದ ನಮಗೆಲ್ಲ ತಿಂಡಿಯ ವ್ಯವಸ್ಥೆಯಾಗಿದೆ ಎಂದು ಮಾಸ್ತರರು ಮೊದಲೇ ಹೇಳಿದ್ದರಿಂದ, ಈಗ ಕೊಡಬಹುದು, ಆಗ ಕೊಡಬಹುದು ಎಂದು ಕಾದು ಕಾದು ಕೊನೆಗೆ ನಾವೂ ಸಪ್ಪೆ ಮುಖದೊಂದಿಗೆ ಮನೆಗೆ ಮರಳಿದೆವು.
ಅಂತೂ ಮಹಾರಾಜರು ಬೆಂಗಳೂರು ತಲಪುವುದರೊಳಗಾಗಿ, ಅವರು ಇಲ್ಲಿ ಉದ್ಘಾಟಿಸಿ ಹೋಗಿದ್ದ ‘ಮಕ್ಕಳ ಪಾರ್ಕ್’ ದುರವಸ್ಥೆಗೀಡಾಗಿತ್ತು.
ಆ ನಂತರ ಅಲ್ಲಿಯ ಒಂದೊಂದೇ ಸಾಧನ ಕಣ್ಮರೆಯಾಗತೊಡಗಿದವು. ವೃತ್ತಾಕಾರದ ಆ ಪಾರ್ಕಿಗೆ ಹಾಕಿದ್ದ ಕಬ್ಬಿಣದ ಕಟಾಂಜನವನ್ನೂ ಯಾರೋ ಅಷ್ಟಷ್ಟೇ ಸ್ವಾಹಾ ಮಾಡತೊಡಗಿದರು. ಒಂದು ವರ್ಷ ಕಳೆಯುವುದರೊಳಗಾಗಿ ಅಲ್ಲಿ ಉಳಿದದ್ದು ಬರೀ ಕಲ್ಲಿನಿಂದ ಕಟ್ಟಿದ್ದ ವೃತ್ತಾಕಾರದ ಗೋಡೆ. ಅದು ಒಳಗೆ ಹಂದಿ, ಕತ್ತೆ, ನಾಯಿಗಳ ವಿರಾಮಸ್ಥಳವಾಗಿ ಪರಿವರ್ತನಗೊಂಡಿತು.
-0-0-0-
ಆ ಸಾಲೆಯಲ್ಲಿ ನಾನು ಆರನೆಯ ಇಯತ್ತೆಯವರೆಗೆ ಓದಿದೆ ಎಂದು ಹೇಳಿದೆನಲ್ಲ… ಎಂಥೆಂಥ ಗುರುಗಳು ನಮಗೆ! ಅಕ್ಷರಶಃ ಅವರೆಲ್ಲ ಮಮತೆಯ ಮೂರ್ತಿಗಳೇ. ಒಂದೊಂದು ವರ್ಗದಲ್ಲಿ ನಲವತ್ತು ಐವತ್ತು ಹುಡುಗರಿದ್ದರೂ ಅವರಿಗೆ ಎಲ್ಲರ ಮೇಲೆಯೂ ಪ್ರೀತಿ, ಎಲ್ಲರ ಮೇಲೆಯೂ ಗಮನ, ಎಲ್ಲರ ಬಗ್ಗೆಯೂ ಕಾಳಜಿ. ಸಾಲೆಯ ಅವಧಿ ಮುಗಿದ ಮೇಲೂ, ನಮಗೇನಾದರೂ ಪಾಠದಲ್ಲಿ ಸಮಸ್ಯೆ ಎದುರಾದರೆ ಗುರುಗಳ ಮನೆಗೆ ಹೋಗಬಹುದಾಗಿತ್ತು. ತಮ್ಮ ಮಗನಿಗೆ ತೋರುವಷ್ಟೇ ಪ್ರೀತಿ ತೋರಿ ನಮ್ಮ ಸಮಸ್ಯೆಯನ್ನು ಪರಿಹರಿಸುತ್ತಿದ್ದರು.
ಆ ಮಠಪತಿ ಮಾಸ್ತರು, ಆ ಲೋಹಾರ ಗುರುಗಳು, ಮುಖ್ಯೋಪಾಧ್ಯಾಯರಾಗಿದ್ದ ಮುಲ್ಲಾ ಅವರು ಪ್ರಾತಃಸ್ಮರಣೀಯರು.
ನಮ್ಮ ಅಜ್ಜನ ಕಾಲದಿಂದಲೂ ಈ ‘ಒನ್ನೇ ನಂಬರ್ ಸಾಲಿ’ ಪುಸ್ತಕದ ಓದಿಗಷ್ಟೇ ಮೀಸಲಾಗಿರಲಿಲ್ಲ. ಬದುಕಿಗೆ ಬೇಕಾದ ಇನ್ನಿತರ ಎಲ್ಲ ಕ್ಷೇತ್ರಗಳ ಪ್ರಾಥಮಿಕ ಶಿಕ್ಷಣವೂ ಅಲ್ಲಿ ದೊರೆಯುತ್ತಿತ್ತು. ಅದನ್ನು ‘ಜೀವನ ಶಿಕ್ಷಣ ಶಾಲೆ’ ಎಂದೇ ಕರೆಯಲಾಗುತ್ತಿತ್ತು. ನೂಲುವುದು, ನೂಲನ್ನು ನೇಯುವುದು, ಬಡಿಗತನ, ತೋಟಗಾರಿಕೆ, ತರಕಾರಿ ಮತ್ತು ಸೊಪ್ಪುಗಳನ್ನು ಬೆಳೆಯುವುದು. ಮತ್ತು ಬೆಳೆದದ್ದನ್ನು ಪೇಟೆಗೆ ಒಯ್ದು ಮಾರಾಟ ಮಾಡಿ ಬರುವುದು. ದಿನ ನಿತ್ಯದ ಸ್ವಚ್ಛತೆ, ಪರಿಸರ ನೈರ್ಮಲ್ಯ ಅಷ್ಟೇ ಅಲ್ಲ, ದಿನವೂ ಬೆಳಿಗ್ಗೆ ಒಬ್ಬೊಬ್ಬ ವಿದ್ಯಾರ್ಥಿಯೂ ವಾರ್ತೆಗಳನ್ನು ಓದಬೇಕು. ಭಾಷಾ ಶುದ್ಧಿ, ಉಚ್ಚಾರ ಶುದ್ಧಿಗಳೇ ಇದರ ಹಿಂದಿನ ಉದ್ದೇಶ… ಸಂತೆಯ ದಿನ ಒಮ್ಮೊಮ್ಮೆ ಗುರುಗಳು ನಮ್ಮನ್ನೆಲ್ಲ ಪೇಟೆಗೆ ಕರೆದೊಯ್ದು ಕಾಳು-ಕಡಿಗಳ ಧಾರಣೆ ಹೇಗೆ ತಿಳಿದುಕೊಳ್ಳುವುದು ಎಂಬುದರ ಪ್ರಾತ್ಯಕ್ಷಿಕೆ ತೋರಿಸುತ್ತಿದ್ದರು. ಎಲ್ಲ ಬಗೆಯ ಎಣ್ಣೆ ಕಾಳುಗಳು, ಅಕ್ಕಡಿ ಕಾಳುಗಳು (ದ್ವಿದಳ ಧಾನ್ಯಗಳು) ಮುಂತಾದವುಗಳನ್ನು ನಮಗೆ ಪರಿಚಯಿಸಿದ್ದೇ ಮಠಪತಿ ಮಾಸ್ತರರು.
ಬದುಕಿನ ಮಾರ್ಗ ಪದೇ ಪದೇ ಬದಲಾದ ಕಾರಣದಿಂದ ಅದು ಕರೆದೊಯ್ದಲ್ಲಿಗೆ ಹೋದವನು ನಾನು. ಆದರೆ ಎಲ್ಲಿಯೇ ಹೋದರೂ ನಮ್ಮ ಗುರುಗಳು ಹಾಕಿಕೊಟ್ಟ ಮಾರ್ಗದರ್ಶೀ ಸೂತ್ರಗಳನ್ನು ಮರೆಯದೆ ಪಾಲಿಸುತ್ತಿರುವುದರಿಂದ ಯಾವುದೇ ಬಾಧೆಯಿಲ್ಲದೆ ಸಾಗಿದೆ ಬಾಳು.
ತೀರ ಮೊನ್ನೆ ಮೊನ್ನೆ ನನ್ನ ಕುಟುಂಬ ಸಮೇತ ನಮ್ಮ ಊರಿಗೆ ಹೋಗಿದ್ದೆ. ಅಲ್ಲಿಗೆ ಹೋಗಿ ಇಳಿದ ಕೂಡಲೇ ನಾನು ಮಾಡಿದ ಮೊದಲ ಕೆಲಸವೆಂದರೆ ‘ಒನ್ನೇ ನಂಬರ್ ಸಾಲಿ’ಗೆ ಓಡಿದ್ದು. ನನ್ನ ಮಕ್ಕಳಿಗೆ ”ನಮ್ಮಜ್ಜ-ಅಪ್ಪ ಮತ್ತು ನಾನು ಓದಿದ ಸಾಲೆ,” ಎಂದು ಹೆಮ್ಮೆಯಿಂದ ತೋರಿಸಿದೆ.
ಈಗಲೂ ಹಾಗೆಯೇ ಇರುವ ನನ್ನ ಹೆಮ್ಮೆಯ ‘ಒನ್ನೇ ನಂಬರ್ ಸಾಲಿ’ಯ ಎದುರು ನಿಂತು ಅಂದಿನದೆಲ್ಲವನ್ನೂ ಧೇನಿಸಿಕೊಳ್ಳುತ್ತಿದ್ದ ಹಾಗೆಯೇ ನನ್ನ ಮಗ ಕ್ಯಾಮರಾ ಕ್ಲಿಕ್ ಅನ್ನಿಸಿದ.
ನನ್ನ ಅಜ್ಜ, ನನ್ನ ಅಪ್ಪ ಮತ್ತು ನಾನು ಓದಿದ ‘ಒನ್ನೇ ನಂಬರ್ ಸಾಲಿ.’
ಇಲ್ಲಿ ಜೊತೆಗಿದೆಯಲ್ಲ ಈ ಚಿತ್ರ… ಇದರಲ್ಲಿ ಕಾಣುವ ಧ್ವಜಸ್ತಂಭವನ್ನು ನಾನು ಎರಡು ಬಾರಿ ಏರಿ ‘ತಿರಂಗಾ ನಿಶಾನೆ’ಯನ್ನು ಕಟ್ಟಿ ಬಂದಿದ್ದೂ ಇದೆ. ಆಮೇಲೆ ಆ ‘ತಿರಂಗಾ’ಕ್ಕೆ ಸೆಲ್ಯೂಟ್ ಮಾಡಿದ್ದೂ ಇದೆ.
ಈಗ ಮತ್ತೊಮ್ಮೆ ನನ್ನ ಪ್ರೀತಿಯ ‘ಒನ್ನೇ ನಂಬರ್ ಸಾಲಿ’ಗೆ ಗೌರವದ ಸೆಲ್ಯೂಟು.



ಕಣ್ಣಿಗೆ ಕಟ್ಟೂ ಹಂಗ ಬರೀತೀರಿ, ಪ್ರತಿ ಸಲ. ನಾವೇ ನೀವಾಗಿರಬೇಕು ಹಂಗ. ನಿಮ್ಮಂಥ ಹಿರಿಯರು ನಿಮ್ಮ ಬಾಲ್ಯವನ್ನು ಸಣ್ಣ ಹುಡುಗನ ಕಣ್ಣುಗಳಲ್ಲೇ ಕಟ್ಟಿ ಕೊಟ್ಟದ್ದು ಬಹಳ ಹಿಡಿಸಿತು.. ಅಳ್ಳಿಟ್ಟು ನೆನೆಪಿಸಿ ಬಾಯಾಗ ನೀರು ಬರೂ ಹಂಗ ಮಾಡಿದ್ರಿ :-).. ಹಾಂ, ನಮ್ಮ ಪ್ರೌಢಶಾಲಾ ದಿನಗಳಲ್ಲಿ ನಾ ಮೊದಲ ಬಾರಿ ಕೇಳಿದ್ದು ’ಒನ್ನೇ ನಂಬರ್ ಸಾಲಿ’, ’ಎರಡನೇ ನಂಬರ್ ಸಾಲಿ’ ಇತ್ಯಾದಿ. ನಾ ಕಲಿತ ಊರಲ್ಲೂ ಇದ್ವು ಇಂಥಾ ಸಾಲಿಗಳು. ಅವುಗಳ ಇತಿಹಾಸವೂ ಇಷ್ಟು ಶ್ರೀಮಂತವಾಗಿರಬಹುದೇನೋ ಅಂತ ಇವತ್ತ ಅನಿಸ್ತು!
Sir, its wonderful journey of sweetest GOLDEN memories of experience……
ನಿಮ್ಮೊಂದಿಗೆ ನಮ್ಮದೂ ಒಂದು ಸೆಲ್ಯೂಟ್. ಮಾನವನ ವ್ಯಕ್ತಿತ್ವದ ನಿರ್ಮಾಣಕ್ಕೆ ಒತ್ತು ಕೊಡುತ್ತಿದ್ದ ಮೇಷ್ಟ್ರುಗಳಿಗೆ ನಮಸ್ಕಾರ. ನಿಮ್ಮ ನೆನಪು, ಬರಹ ತುಂಬಾ ಚೆನ್ನಾಗಿದೆ ವಾಜಪೇಯಿ ಸರ್. ಮುಂದೆಯೂ ಓದಲು ಕಾತರರಾಗಿದ್ದೇವೆ.
Sara…nimdu onne number saali..nandu ‘yaadne number saali’. 😉
ನನ್ನ ಹೃದಯಕ್ಕೆ ಬಹು ಹತ್ತಿರವಾದ ಲಕ್ಷ್ಮೇಶ್ವರದ ಬಗ್ಗೆ ನಿಮಗಿಂತ ಚೆನ್ನಾಗಿ ಯಾರೂ ಬರೆಯಲಾರರು! ನಾನೂ ಕೂಡ ಚಿಕ್ಕವನಿದ್ದಾಗ ಯೋಳು ಮಕ್ಕಳ ಚೌಡಿಯ ಅಸ್ತಿತ್ವದ ಭಯವನ್ನು ಅನುಭವಿಸಿದವನು. ನೀವು ಕಲಿತ ಅದೇ ಒನ್ನೇ ನಂಬರ್ ಸಾಲೆಯಲ್ಲಿ ನಾನೂ ಎರಡು ವರ್ಷ ಕಲಿತಿದ್ದೇನೆ. ಅದು ನನ್ನ ಭಾಗ್ಯ! ಮುಂದಿನ ಕಂತಿಗೆ ಕಾತುರದಿಂದ ಕಾಯುತ್ತಿದ್ದೇನೆ.
ಸಾರ್, ಎಲ್ಲವನ್ನೂ ಕಣ್ಣ ಮುಂದೆ ತರುತ್ತೀರಿ, ಈ ಲೇಖನ ಓದುತ್ತಲೇ ನಮ್ಮ ಗಚ್ಚಿನ ಮಠ ಶಾಲೆ ನೆನಪಾಯ್ತು……. ನಮ್ಮನು ಇನ್ನಷ್ಟು ಓದಿಸಿ
ಮತ್ತೆ ಮರಳಿ ಬಾಲ್ಯಕ್ಕೆ ಮುಗುಚಿದಂತಾಯ್ತು. ತಂಬ ಖುಷಿಪಟ್ಟೆ. ಅಭಿನಂದನೆಗಳು.
ಓದುತ್ತ ಹೋದಹಾಗೆ ನನ್ನೊಳಗಿನ ಬಾಲ್ಯವೂ ಮಾತಾಡಲು ಸುರು ಮಾಡಿತು.. ನಿಮ್ಮ ಬರೆಹಕ್ಕೆ ಪ್ರಭಾವಿಸುವ ಗುಣವಿದೆ
ನಿಮ್ಮ ಹಾಗೆ ಅಜ್ಜ , ಅಪ್ಪ ಓದಿದ ಶಾಲೆಯಲ್ಲಿ ಓದೋದೂಂದ್ರೆ ನಮಗೆಲ್ಲ ಬಹಳ ಅಚ್ಚರಿಯ ವಿಷಯ . ನೀವಂತೂ ನನ್ನನ್ನು ನಿಮ್ಮ ಕಾಲಕ್ಕೆ ಕರೆದುಕೊಂಡು ಹೋಗ್ಬಿಡ್ತ್ಹೀರ …ತುಂಬಾ ಚೆನ್ನಾಗಿತ್ತು ನಿಮ್ಮ ಶಾಲೆ ಸುತ್ತಾಟ .
jeevanada putavanna pattane nenapu madistade nimma baravanige sir… nimma mundina saligagi kaitiddene.
adbhuta lekhana
ನಿಮ್ಮ ಜೀವನದ ಪ್ರತಿ ಹೆಜ್ಜೆಯೂ ಒಂದೊಂದು ಸವಿ ಅನುಭವ…‘ಒನ್ನೇ ನಂಬರ್ ಸಾಲಿ’ ಬಹಳ ವಿಶೇಷವಾಗಿ ಪರಿಚಯಿಸಿದ್ದೀರಿ. ಬೆಲ್ಲಾಹಿಟ್ಟಿನ ಮುದ್ದೆಯನ್ನು ನಾವು ಹುರಿಟ್ಟು ಎಂದು ಕರೆಯುತ್ತಿದ್ದೆವು. ನಿಮ್ಮ ಜೀವನದ ಪಯಣದ ಚಿತ್ರಣ ಸೊಗಸಾಗಿ ಮೂಡಿಬಂದಿದೆ
ಸಾರ್ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.
“ಆಗ ಇಡೀ ಕಿಲ್ಲೇನ ಹೂವಿನ ತ್ವಾಟ ಆಗಿತ್ತು…….” ಹೌದು ಈಗಂತೂ ಹೊಸ ಆಧುನಿಕತೆಯ ಆಕರ್ಷಣೆ ಮತ್ತು ಪ್ರಭಾವಕ್ಕೊಳಗಾಗಿ ನಮ್ಮ ಪರಂಪರೆಯ ಕೋಟೆ,ಕೊತ್ತಲ,ಕಿಲ್ಲೆಗಳು ವಾಸನೆ ಮತ್ತು ಬಣ್ಣ ಬದಲಿಸಿಕೊಂಡಿವೆ.ತಮ್ಮ ನೆನಪುಗಳ ಮೂಲಕ ಗತಕಾಲವನ್ನು ನೆನೆಸಿಕೊಳ್ಳುವುದೇ ಒಂದು ಸಾರ್ಥಕತೆಯಾಗಿದೆ. ಒಂದು ಆಪ್ತವಾದ ಬರವಣಿಗೆ..ಅಭಿನಂದನೆಗಳು.
ಶಿಕ್ಷಣ ವ್ಯಾಪರೀಕರಣದ ದಿನಗಳಲ್ಲಿ ‘ಜೀವನ ಶಿಕ್ಷಣ ಶಾಲೆ’ ಅತ್ಯಗತ್ಯವಾಗಿದೆ.
ಹೂತೋಟಗಳ ಕಿಲ್ಲೆಯನ್ನು ಭಟ್ಟಿ ಸೆರೆಯ ಗೋದಾಮು ಮಾಡಿರುವುದು, ಐತಿಹಾಸಕ ಸ್ಥಳಗಳ ಸಂರಕ್ಷಣೆಯಲ್ಲಿ ವಿಫಲತೆಯ ಒಂದು ಉದಾಹರಣೆಯಾಗಿದೆ. ಭೂಗಳ್ಳರಿಂದಾಗಿ ಅನೇಕ ಊರುಗಳಲ್ಲಿರುವ ಕಿಲ್ಲೆಗಳು, ಗೋಮಾಳಗಳು, ಕೆರೆ-ಭಾವಿಗಳು ಕೂಡಾ ಅತಿಕ್ರಮಣಗೊಳ್ಳುತ್ತಿವೆ ಮತ್ತು ಮರೆಯಾಗುತ್ತಿವೆ. ಐತಿಹಾಸಿಕ ಸ್ಥಳಗಳ ಸಂರಕ್ಷಣೆಯನ್ನು ನಾವು ಮತ್ತೆ ಕಲಿಯಬೇಕಾಗಿದೆ ಮತ್ತು ಕಲಿಸಬೇಕಾಗಿದೆ.
” ಒನ್ನೇ ನಂಬರ್ ಸಾಲಿ ” ನಿಮ್ಮ ನೆನಪಿನಂಗಳದಿಂದ ಮೂಡಿಬಂದ ಒಂದು ನುಡಿ ಚಿತ್ರವಾದರೂ, ಅನೇಕ ಗಂಭೀರ ಸಮಸ್ಯೆಗಳನ್ನು ಕುರಿತು ಓದುಗರ ಗಮನ ಸೆಳೆಯುತ್ತದೆ. ನಿಮಗೆ ಧನ್ಯವಾದಗಳು ಸರ್.
“ondane number saali” tumba chennagide sir! nanagoo nodbekantide! 🙂
Sirji…..ನೀವು ಪದ್ಯ ದಲ್ಲಿ ಈ ಹಿಂದೆ ಈಗಾಗಲೆ ಜಯಶಾಲಿಯಾಗಿರುವಿರಿ….ಈಗ ಗದ್ಯದಲ್ಲೂ ಸೈ….congrats
ಹಳೆಯ ನೆನಪುಗಳು ಸಾರ್. ನಾನೂ ಕಲಿತದ್ದು ಹಳ್ಳೀ ಶಾಲೆ. ಈಗ ಬಾಗಿಲು ಮುಚ್ಚಿದೆ ಹುಡುಗರ ಸಂಖ್ಯೆ ಕ್ಷೀಣವಾಗಿ. ನನ್ನಪ್ಪನೂ ಕೂಡ ಕೆಲವು ತಿಂಗಳುಗಳ ಕಾಲ ಸ್ವಇಚ್ಚೆಯಿಂದ ಮೇಷ್ಟ್ರಾಗಿ ಕೆಲಸ ಮಾಡಿದ್ದರಿಂದ ಅದು ನಮ್ಮದೇ ಶಾಲೆಯಂತಾಗಿತ್ತು ನಾನು ಐದನೇ ತರಗತಿ ಕಲಿಯುವಾಗ. ಮುಂಜಾನೆ ಬಾಗಿಲು ತೆಗೆಯುವವನು ನಾನಾಗಿದ್ದೆ ಆವಾಗ.
ಈಗ ಅವೆಲ್ಲ ನೆನಪುಗಳು! ಅದರ ಜೊತೆಗೆ ನಾನಿನ್ನೂ ಮರೆತಿಲ್ಲವೆಂದರೆ ಅದು ನನ್ನ ಪ್ರೀತಿಯ ಇಬ್ಬರು ಟೀಚರುಗಳು – ಅಂತು, ಲಿಲ್ಲಿ (ಅನುಸೂಯ, ಲಿಲ್ಲಿ ಕೋರ್ಡಾ) ಈಗಲೂ ನನ್ನ ಬಾಳ ದಾರಿಯ ಟೀಚರುಗಳು!
ಮರೆಯಲಾದೀತೆ ದಾರಿ ತೋರಿದ ಶಾಲೆಯ! ಚೆನ್ನಾಗಿದೆ ಸರ್ ನೆನಪಿನಂಗಳದ ಬರಹ!
ವಾಹ್ ಸರ್ ನಿಮಗೂ, ಸಾಲಿಗು ಜೊತಿಜೊತಿಗೇ ಶರಣ್ರೀ
savi savi nenapu
ನೀವು ವರ್ಷಾ ವರ್ಷಾ, ಒಬ್ಬಬ್ಬ ಸಂಬಂಧಿಕರ ಮನ್ಯಾಗ್ ಇದ್ದು ಓದಿದ್ದು ಓದಿ, ನಮ್ಮಜ್ಜ ವಾರನ್ನ ಉಂಡು ಸಾಲಿ ಕಲ್ತಿದ್ರಂತ ಅವ್ವ ಹೇಳಿದ್ದು ನೆನಪಾತು.
ಘಮ್ಮೆನು ವಾಸ್ನಿ ಇದ್ದ ಜಾಗ ಆಮ್ಯಾಲೆ ವಾಯಿಕ್ ಅನ್ನೊ ವಾಸ್ನಿ ಬರೂವಂಗಾದ್ರ ಹೆಂಗ್ ಉಸರ್ ಗಟ್ಟತ್ತಲ್ರಿ!!
ಅಂತು ಈ ೧೪೦ ವರ್ಷದ ಇತಿಹಾಸ ಇರೋ ಒನ್ನೇ ನಂಬರ್ ಸಾಲಿ ಬಗ್ಗೆ ನಿಮ್ಮ ಕಣ್ಣಿಗೆ ಕಟ್ಟಿ ಹಾಕಿದಂತಹ ಬರಹ ಹಾಂಗ ಗುಂಗಿನೋಳಗ ಓದಿಸಿಕೊಂಡು ಹೂತು .ಹಳೆ ನೆನಪುಗಳು . ಅದೇ ಖಜಾನೆಯಿಂದ ನಮಗೆ ರಸದೌತಣ ಉಣ ಬಡಿಸಿದ್ದೀರಿ . ಅಳ್ಳಿಟ್ಟ ನನಗೂ ನೆನಪಾಗಿ ಬಾಯಲ್ಲಿ ನೀರು ಬರ್ತಾ ಇದೆ :)ಮತ್ತೆ ನೀವು ಕಲಿತ ಸಾಲಿ ಗೆ ಭೇಟಿ ನೀಡಿ ಆನಂದ ಪಟ್ಟಿದ್ದು ನಮಗೂ ಖುಷಿ . ನಿಮ್ಮ ನೆನಪಿನ ಶಕ್ತಿ ಅಬ್ಬಬ್ಬ ಅದ್ಭುತ 🙂
ಗುರುಗಳ ನಿಮ್ಮದು ನಶಾ ಏರಿಸುವ ಬರಹ..
ಅದರಾಗ ಅರಳಿಟ್ಟಿನ ಉಲ್ಲೇಖ ಮಾಡಿ ನನಗೆಲ್ಲೋ ಹಿಂದ ಕರಕೊಂಡು ಹೋಗೀರಿ..
Namaste Sir
Adbhutavaada desi shabdagala prayoga nanage tumba ishta aytu…..and…..saali bagge bardeeri bhal chand ada…..nimma smrutipataladalli innoo aa nenapugalu kaaduttiveyalla…..entaha dhannyateya bhava adu……… “Jeevana Shikshana Shale” annuva padaprayoga tumba chennagide
Vande
ಸರ್,ನಿಮ್ಮ ನೆನಪುಗಳ ಸವಿಬುತ್ತಿಯನ್ನು ಸವಿದು ಬಹಳ ಸಂತೋಷವಾಯಿತು. ಲಕ್ಶ್ಮೇಶ್ವರದ ಬಗ್ಗೆ ನಿಮ್ಮ ಬರಹ ನನ್ನನ್ನೂ ಸುಮಾರು ನಲವತ್ತು ವರ್ಷಗಳ ಹಿಂದೆ ಕರೆದುಕೊಂಡು ಹೋಯಿತು. ಅಲ್ಲಿನ ಕೃಷ್ಣಾ ಟೂರಿಂಗ್ ಟಾಕೀಜಿನಲ್ಲಿ “ಸಂಪತ್ತಿಗೆ ಸವಾಲ್” ಸಿನಿಮಾ ಹಾಗೂ ರವಿ ಚಿತ್ರಮಂದಿರದಲ್ಲಿ “ಗಂಧದ ಗುಡಿ” ಸಿನಿಮಾ ನೋಡಿದ್ದು ನೆನಪಿಗೆ ಬಂತು. ನಿಮ್ಮ ಮುಂದಿನ ಲೇಖನಕ್ಕಾಗಿ ಕಾದು ಕುಳಿತಿದ್ದೇನೆ.
ಲೇಖನ ತುಂಬಾ ಚೆನ್ನಾಗಿ ಇದೆ ಸಾರ್. ನಿಮ್ಮ ಲೇಖನದಲ್ಲಿ ಅರಳಿಟ್ಟನ್ನು ನೆನಪಿಸಿದ್ದು ನಿಜಕ್ಕೂ ನನಗೆ ಬಾಯೂರಿಸಿತು. ನನ್ನ ಅಚ್ಚುಮೆಚ್ಚಿನ ತಿಂಡಿ ಅದು. ಈ ಹಬ್ಬ ಹರಿ ದಿನಗಳಲ್ಲಿ ನಮ್ಮ ಮನೆಯಲ್ಲಿ ಪೂಜೆ ಹಾಗೂ ಮಡೀಲೆ ಅಡಿಗೆ ಇರುತ್ತದೆ ಹಾಗಾಗಿ ಟಿಫಿನ್ ಮಡ್ಲಿಕ್ಕೆ ಆಗೋದಿಲ್ಲ ಯಾಕಂದ್ರ ಒಲಿ/ಗ್ಯಾಸ್ ಖಾಲಿ ಇರೋಲ್ಲ ಅದಕ್ಕ ನನ್ನ ತಾಯಿ ನ್ನನ್ನ ಬೆಳಗಿನ ನಾಷ್ಠಾಕ್ಕ ಅದನ್ನ ಮಾಡಿಕೊಡ್ತಾಳ. ಒಂದು ಸಲ ಹಾಲು, ತುಪ್ಪ, ಬೆಲ್ಲ ಹಾಕಿ ಮತ್ತೊಂದು ಸಲ ಮಜ್ಜಿಗೆ, ಉಪ್ಪು ಬೆರಸಿ ಅದಕ್ಕೆ ಉಳ್ಳಾಗಡ್ಡಿ ಒಗ್ಗರಣಿ ಹಾಕಿ ಕೊಡ್ತಾಳ