ಸುಮ್ಮನೇ ನೆನಪುಗಳು- 24
1978ರ ಎಪ್ರಿಲ್ (ಅಥವಾ ಮೇ) ತಿಂಗಳು. ಬೆಂಗಳೂರಿನಲ್ಲಿ ರಾಜ್ಯ ಯುವಜನ ಸೇವಾ ಇಲಾಖೆಯ ನಾಟಕ ಸ್ಪರ್ಧೆ. ಅದಾಗಲೇ ವಿಭಾಗಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ನಾವು ‘ರಕ್ತದಾಹ’ ಎಂಬ (ಬಂಗಾಲಿಯಿಂದ ಅನುವಾದಿತ) ನಾಟಕ ಪ್ರದರ್ಶಿಸಿ, ‘ಸರ್ವಪ್ರಥಮ’ರೆನಿಸಿದ್ದೆವು. ರಾಜ್ಯಮಟ್ಟದ ಸ್ಪರ್ಧೆಗೆಂದು ಬೆಂಗಳೂರಿಗೆ ಹೋಗಬೇಕು. ರೈಲು ಹಿಡಿಯಲು ಹುಬ್ಬಳ್ಳಿಯ ಜಂಕ್ಷನ್ನಿನಲ್ಲಿ ಪ್ರವೇಶಿಸಿದರೆ, ಅಲ್ಲಿ ಅಜ್ಜ ಜಿ.ಬಿ. ಜೋಶಿ…! ಅಪರೂಪಕ್ಕೆಂಬಂತೆ ಕೋಟು ಧರಿಸಿ, ಕತ್ತು ಮುಚ್ಚುವ ಹಾಗೆ ಮಫ್ಲರ್ ಸುತ್ತಿಕೊಂಡು ನಿಂತಿದ್ದ ಅಜ್ಜ…! ಜತೆಗೆ ಗಿರೀಶ ಕಾರ್ನಾಡ, ಕೃಷ್ಣ ಬಸರೂರ, ಅನಿಲ ಠಕ್ಕರ್ ಮುಂತಾದವರು…
ನಾವು ತಂಡದ ಆರೇಳು ಜನ ಅವರ ಬಳಿ ಹೋಗಿ ನಿಂತೆವು. ಕಾರ್ನಾಡರು ಸ್ನೇಹದಿಂದ ನಮ್ಮೆಲ್ಲರ ಕೈ ಕುಲುಕುತ್ತ ಬಂದು, ನನ್ನ ಕೈ ಹಿಡಿದರಲ್ಲ, ಅವರ ಹುಬ್ಬುಗಳು ಗಂಟಿಕ್ಕಿದವು.
”ಏನ್ರೀ… ಕಾದ ಹಂಚಾಗೇದಲಾ ನಿಮ್ಮ ಕೈ… ಯಾsಕ, ಅರಾಮಿಲ್ಲೇನು?” ಎಂದು ಕಾಳಜಿ ವ್ಯಕ್ತಪಡಿಸಿದರು.
ಕೂಡಲೇ ಜಿ.ಬಿ. ನನ್ನತ್ತ ನೋಡಿದರು. ”ಯಾsಕಲೇ… ಏನಾಗೇದ ನಿನಗ…?” ಎಂದು ಕೇಳಿದರು.
ಅವರು ಹಾಗೆಯೇ. ನಮ್ಮಂಥ ಹುಡುಗರನ್ನು ಅವರು ಪ್ರೀತಿಯಿಂದ ಮಾತಾಡಿಸುತ್ತಿದ್ದುದೆ ‘ಹಾಗೆ’. ಆ ‘ಲೇ’ಯಲ್ಲಿ ಆತ್ಮೀಯತೆ ಅಲೆಯಲೆಯಾಗಿ ನಮ್ಮನ್ನು ತಾಕುತ್ತಿತ್ತು…
ಅಸಲಿ ಮಾತೆಂದರೆ, ಆಗ ನನಗೆ 101ಡಿಗ್ರೀ ಜ್ವರವಿತ್ತು. ಅವರೆದುರು ಅದನ್ನೇ ಹೇಳಿದೆ.
”ಇಂಥಾ ಜ್ವರದಾಗ ಊರಿಗೆ ಹೊಂಟೀರೀ…?” ಎಂಬ ಕಾರ್ನಾಡರ ಪ್ರಶ್ನೆಗೆ,
”ನಾಳೆ ನಮ್ಮ ಶೋ ಸರ್…” ಅಂತ ಉತ್ತರಿಸಿದರು ನಮ್ಮ ನಾಟಕದ ಡೈರೆಕ್ಟರ್ ಚಿತ್ತರಂಜನ ಚಟರ್ಜೀ.
ತೊಗೋ…
”ಅವರಿಗೆ ತಲಿ ಇಲ್ಲಾ, ನಿಮಗ ಬುದ್ಧಿ ಇಲ್ಲಾ…” ಅಂತ ಕಾರ್ನಾಡರು ಬೈದರೆ,
”ನಿನಗ ಜೀವದಕಿಂತಾ ನಾಟಕಾನs ಮುಖ್ಯೇನಲೇ…?” ಅಂತ ಜಿ.ಬಿ.
ಅಷ್ಟೊತ್ತಿಗೆ ರೈಲು ಪ್ಲಾಟ್ ಫಾರ್ಮನ್ನು ಪ್ರವೇಶಿಸಿದ್ದರಿಂದ ಅವರೆಲ್ಲ ತಮ್ಮ ಬೋಗಿಯತ್ತ ಧಾವಿಸಿದರು.
ಅವರೆಲ್ಲ ಹೊರಟದ್ದು, ಮರುದಿನದಿಂದಲೇ ಶುರುವಾಗಲಿದ್ದ ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಡಬ್ಬಿಂಗ್ ಕಾರ್ಯಕ್ಕೆ.
-0-0-0-0-0-
ನಮ್ಮ ಡಾಕ್ಟರು ಜ್ವರಕ್ಕೆ ಅಂತ ಕೊಟ್ಟಿದ್ದ ಮಾತ್ರೆ ತೊಗೊಂಡು ರೈಲಿನಲ್ಲಿ ಮಲಗಿದ ನನಗೆ ಎಚ್ಚರವಾದದ್ದು ಬೆಂಗಳೂರಿನ ವಸತಿಗೃಹದ ಕೋಣೆಯಲ್ಲಿಯೇ.
ಎಚ್ಚರವಾಯಿತೇನೋ ನಿಜ. ಆದರೆ ಜ್ವರ ಇಳಿದಿರಲಿಲ್ಲ. ಚಟರ್ಜಿಗೆ ಭಯವಾಯಿತು. ಸಮೀಪದ ಒಬ್ಬ ಡಾಕ್ಟರನ್ನು ಕರೆತಂದು ತೋರಿಸಿದರು.
ಅವರು ಅದೇನು ಕೊಟ್ಟರೋ, ಜ್ವರ ಸ್ವಲ್ಪ ಇಳಿಯಿತು.
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಆ ಸ್ಪರ್ಧೆಯಲ್ಲಿ ದಿನಕ್ಕೆ ಎರಡೇ ನಾಟಕಗಳು. ಮಧ್ಯಾಹ್ನ ಎರಡು ಗಂಟೆಗೆ ಒಂದು, ಸಂಜೆ ಆರೂವರೆಗೆ ಇನ್ನೊಂದು. ಎರಡನೆಯ ನಾಟಕದ ತಯಾರಿಗಾಗಿ ನಡುವೆ ಎರಡು ಗಂಟೆ ಅವಕಾಶ.
ಅವತ್ತು ಮೊದಲು ‘ಸಮುದಾಯ’ದವರ ನಾಟಕ ‘ಗೆಲೀಲಿಯೋ’ (ನಿರ್ದೆಶನ : ಪ್ರಸನ್ನ). ನಾಟಕವನ್ನು ಕೂತು ನೋಡುವಷ್ಟು ಗೆಲುವಾಗಿದ್ದೆ. ನಮಗೆ, ಅಂದರೆ, ಉತ್ತರ ಕರ್ನಾಟಕದ ಹವ್ಯಾಸಿ ರಂಗ ತಂಡಗಳವರಿಗೆ, ಕಲಾವಿದರಿಗೆ ನಿಜಕ್ಕೂ ಅದೊಂದು ಅಲಭ್ಯ ಅವಕಾಶ. ‘ಗೆಲೀಲಿಯೋ’ನ ಪಾತ್ರದಲ್ಲಿ ಅಂಕಲ್ ಲೋಕನಾಥ್ ಅವರದು ಅಮೋಘ ಅಭಿನಯ. ಸಿನೆಮಾಗಳಲ್ಲಿನ ಲೋಕನಾಥರೇ ಬೇರೆ, ರಂಗ ನಟ ಲೋಕನಾಥರೇ ಬೇರೆ… ಇಂದಿಗೂ ನನ್ನ ಕಣ್ಣ ಮುಂದೆ ನಿಂತಿದೆ ಲೋಕನಾಥರು ಮಾಡಿದ ಆ ಪಾತ್ರ.
ಉಳಿದ ಸಮಯದಲ್ಲಾದರೆ, ರಂಗವನ್ನು ಪ್ರವೇಶಿಸುವವರೆಗೂ ನೇಪಥ್ಯದ ಕೆಲಸದಲ್ಲಿ ಮೈಮರೆಯುತ್ತಿದ್ದವ ನಾನು. ಅವತ್ತು ಹಾಗೆ ಮಾಡಲು ಸಾಧ್ಯವಿರಲಿಲ್ಲ. ಹೇಗಾದರೂ ಆ ಪಾತ್ರವನ್ನು ಮಾಡಿ ಮುಗಿಸುವುದೇ ದೊಡ್ಡ ಮಾತೆನಿಸಿತ್ತು. ಅಷ್ಟಕ್ಕೂ ನಮ್ಮ ನಾಟಕದ ರಂಗ ಸಜ್ಜಿಕೆ ತುಂಬಾ ಸರಳವಾಗಿತ್ತು. ಪ್ರಕಾಶ ಸಂಯೋಜನೆಯಷ್ಟೇ ಆಗಬೇಕಾಗಿದ್ದ ಕೆಲಸ. ಅದನ್ನು ಮತ್ತೊಬ್ಬ ನೋಡಿಕೊಳ್ಳುತ್ತಿದ್ದ. ನಾಟಕ ಆರಂಭಕ್ಕೆ ಕಾಲುಗಂಟೆ ಮೊದಲು ಗ್ರೀನ್ ರೂಂ ಪ್ರವೇಶಿಸಿದೆ. ನನಗೆ ತೆಳುವಾದ ಮೇಕ್ ಅಪ್.
ಅದು ಎರಡು ಗಂಟೆಗಳ ನಾಟಕ. ಯುವಜನಾಂಗವನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು, ತಮಗೆ ಬೇಕಾದಂತೆ ಬಳಸಿಕೊಳ್ಳುವ ‘ಸರ್ವಾಧಿಕಾರೀ ಮನೋಭಾವ’ದ ಆ ಕಥೆಯಲ್ಲಿ ನಾಲ್ಕೇ ಪಾತ್ರಗಳು. ನಾನು angry young man… ಮಧ್ಯಂತರದ ಐದು ನಿಮಿಷ ಬಿಟ್ಟರೆ ನಾನು ರಂಗದಿಂದ ಸರಿಯುವ ಹಾಗೆಯೇ ಇಲ್ಲ. ನನ್ನೆದುರು ಯುವತಿಯಾಗಿ ನಟಿಸುತ್ತಿದ್ದಾಕೆ ಕುಮಾರಿ ಶ್ರೀಮತಿ ದಾಸ್ ಅಂತ, ಹುಬ್ಬಳ್ಳಿಯಲ್ಲೇ ಇದ್ದ ಒಬ್ಬ ಬಂಗಾಲಿ ಹುಡುಗಿ. ನಾಟಕದ ಸಂಭಾಷಣೆಗಳನ್ನು ಬಂಗಾಲಿಯಲ್ಲಿ ಬರೆದುಕೊಂಡು ಕಂಠಪಾಠ ಮಾಡಿ, ಅಪ್ಪಟ ಕನ್ನಡ ಹುಡುಗಿಯಂತೆಯೇ ಅಭಿನಯಿಸುತ್ತಿದ್ದಳು. (ಆಕೆ ಟಿ. ಎಸ್. ರಂಗಾ ಅವರ ‘ಸಾವಿತ್ರಿ’ ಚಿತ್ರದಲ್ಲಿ ನಾಯಕಿಯ ಗೆಳತಿಯಾಗಿ ನಟಿಸಿದಳು.)
ಅವಳದೊಂದು ಕರಾರು. ಸಂಭಾಷಣೆಯನ್ನು ಸರಿಯಾಗಿ ಹೇಳಬೇಕು. ಸಂಭಾಷಣೆಯ ಕೊನೆಯಲ್ಲಿ ಬರುವ ಪದವನ್ನು ಆಚೀಚೆ ಮಾಡಬಾರದು… ಅಂದರೆ ಮಾತ್ರ ಮುಂದಿನ ಮಾತು ಅವಳ ಬಾಯಿಂದ ಸಲೀಸಾಗಿ ಹೊರಬರುತ್ತಿತ್ತು.
ಅವತ್ತು, ಅಂಥ ಜ್ವರದಲ್ಲೂ, ನಾನೇನು ಮಾತಾಡುತ್ತಿದ್ದೇನೆ ಎಂಬುದು ಕೂಡ ಗಮನವಿಲ್ಲದ ನಾನು, ಅಂತೂ ಎಲ್ಲವನ್ನೂ ‘ಸರಿ’ಯಾಗಿ ಮಾಡಿ ಮುಗಿಸಿದೆ. ಗ್ರೀನ್ ರೂಮಿಗೆ ವಾಪಸಾದ ಕೂಡಲೇ ಕಣ್ಣಿಗೆ ಕತ್ತಲೆ ಬಂತು.
ಬಿದ್ದುಬಿಟ್ಟೆ.
ಆ ಸ್ಥಿತಿಯಲ್ಲೇ ಹುಬ್ಬಳ್ಳಿಗೆ ಕರೆದು ತಂದರು ತಂಡದ ಇತರರು. ಮುಂದೆ ಒಂದು ತಿಂಗಳು ಕಾಲ ನಾನು ಜ್ವರದಿಂದ ನರಳಿದೆ. ಡಾಕ್ಟರು ‘ಟೈಫಾಯ್ಡ್’ ಎಂದರು.
ಗುಣಮುಖನಾದಾಗ ತಲೆಗೂದಲೆಲ್ಲ ಉದುರಿ ಬೋಳಾಗಿತ್ತು. ಇನ್ನಷ್ಟು ತೆಳ್ಳಗಾಗಿದ್ದೆ.
ಮುಂದೆ ಎಷ್ಟೋ ದಿನಗಳ ತನಕ, ನಾನು ಅಕಸ್ಮಾತ್ ಎದುರಾದರೆ ಗಿರೀಶರು ಕೇಳುತ್ತಿದ್ದ ಪ್ರಶ್ನೆ ಒಂದೇ… ” ಈಗ ಹ್ಯಾಂಗಿದ್ದೀರಿ…? ಅರಾಮ್ ಅದs ಅಲ್ಲs…?”
-0-0-0-0-0-
1979ರಲ್ಲಿ ಚಿತ್ತರಂಜನ ಚಟರ್ಜೀ, ”ಒಂದು ಬಂಗಾಳಿ ನಾಟಕವನ್ನು ಅನುವಾದಿಸೋಣ ಬಾ…” ಅಂತ ಕರೆದರು. ಅದು ಮೋಹಿತ್ ಚಟರ್ಜೀ ಎಂಬವರು ಬರೆದ ‘ಸ್ವಪ್ನೋ ನಿಯೇ’…
ಅದೊಂದು ವೃದ್ಧ ದಂಪತಿಯ ಕಥೆ. ಅವರಿಬ್ಬರೂ ದೂರದ ಊರಲ್ಲಿರುವ ತಮ್ಮ ಮಗನ ಬಗ್ಗೆ ಕನಸು ಕಾಣುತ್ತ, ಆತನ ವ್ಯಕ್ತಿತ್ವವನ್ನು ತಮಗೆ ಬೇಕಾದಂತೆ ರೂಪಿಸುವ ಮಾತಾಡುತ್ತ, ಆತನ ಬರುವಿಕೆಯನ್ನೇ ಎದುರು ನೋಡುತ್ತಾ ಕೂತಿದ್ದಾರೆ. ಮುದುಕ ಒಬ್ಬ ಮೂರ್ತಿಕಾರ. ಮಗ ಈಗ ಹೇಗೆ ಕಾಣುತ್ತಿರಬಹುದು ಎಂಬುದನ್ನು ಊಹಿಸಿಕೊಂಡು ಒಂದು ಮಣ್ಣಿನ ಮೂರ್ತಿಯನ್ನು ಮಾಡಿಟ್ಟುಕೊಂಡಿದ್ದಾನೆ. ಅದಕ್ಕೆ ಬಣ್ಣ ಕೊಡುವ ಕೆಲಸದಲ್ಲಿ ನಿರತನಾಗಿದ್ದಾನೆ. ತಾಯಿ, ಮಗ ಈಗ ಎಷ್ಟು ದೊಡ್ದವನಾಗಿರಬಹುದು ಎಂಬುದನ್ನು ಕಲ್ಪಿಸಿಕೊಂಡು ಆತನಿಗಾಗಿ ಸ್ವೆಟರ್ ಹೆಣೆಯುತ್ತಿದ್ದಾಳೆ… ಆದರೆ, ಬಂದ ಮಗನ ಖಯಾಲಿಯೆ ಬೇರೆ… ಅವರಿಗೆ ಆಶಾಭಂಗವಾಗುತ್ತದೆ. ಆದರೂ ಕನಸು ಕಾಣುವುದನ್ನು ಬಿಡದೇ, ಬಾಳತೊಡಗುತ್ತಾರೆ…
ಚಿತ್ತರಂಜನ ಚಟರ್ಜೀ ದಿನವೂ ಸಂಜೆ ನಮ್ಮ ಮನೆಗೆ ಬರಬೇಕು… ಬಂಗಾಲಿಯಿಂದ ಒಂದೊಂದೇ ಸಂಭಾಷಣೆಯನ್ನು ತಮಗೆ ಗೊತ್ತಿದ್ದ ಹಿಂದಿಯಲ್ಲಿ ನನಗೆ ಹೇಳಬೇಕು… ನಾನು ಅದನ್ನು ಕೂಡಲೇ ಕನ್ನಡಕ್ಕೆ ತರ್ಜುಮೆ ಮಾಡಿ ಬರೆಯಬೇಕು. ಬರೆದದ್ದನ್ನು ಅವರಿಗೆ ಓದಿ ಹೇಳಬೇಕು…
ಹೀಗೆ ಸಿದ್ಧವಾಯಿತು ನಾಟಕದ ಹಸ್ತಪ್ರತಿ. ಕೆಲವು ಕಡೆ ಅವರ ಉಚ್ಚಾರದ ಕಾರಣದಿಂದ ಹೇಳಿದ್ದು ತಿಳಿಯುತ್ತಿರಲಿಲ್ಲ. ಮತೊಮ್ಮೆ ಅದು ಬೇರೆ ಏನೋ ಆಗಿ ಕೇಳಿರುತ್ತಿತ್ತು. (ಹಿಂದಿಯಿಂದ ತರ್ಜುಮೆ ಅಂದರೆ – ”ಏ ಕ್ಯಾ ಹೈ = ಇದೇನು ಇರುತ್ತದೆ?” ಎಂಬಂತೆ, ಮಕ್ಕೀಕಾ ಮಕ್ಕಿ ಆಗಬಾರದಲ್ಲ…) ಅಂಥ ದೋಷಗಳನ್ನೆಲ್ಲ ತಿದ್ದಿ, ಸರಿಪಡಿಸಿ, ಅದನ್ನು ಕನ್ನಡದ ಕಥೆಯಾಗಿ ರೂಪಾಂತರಿಸುವ ಕಾರ್ಯಕ್ಕೆ ಮತ್ತೊಂದು ವಾರ ಕಳೆಯಿತು.
ಅಂತೂ ಒಂದು ಪಕ್ಕಾ ಸ್ಕ್ರಿಪ್ಟು ಸಿದ್ಧಗೊಂಡಿತು. ಅದೇ ‘ಕನಸಿನೊಂದಿಗೆ…’
ಹುಬ್ಬಳ್ಳಿಯಲ್ಲಿ ಅದರ ಮೊದಲ ಪ್ರಯೋಗ.
ಧಾರವಾಡಕ್ಕೆ ಹೋಗಿ ಅಜ್ಜ ಜಿ.ಬಿ. ಜೋಶಿಯವರನ್ನು ನಾಟಕ ನೋಡಲು ಆಮಂತ್ರಿಸಿ ಬಂದೆವು.
ಅಜ್ಜ ಬಂದರು. ನಾಟಕ ನೋಡಿದರು. ಆ ಮೇಲೆ ಭುಜದ ಮೇಲೆ ಕೈ ಹಾಕಿ, ಸುಮ್ಮನೆ ಒಂದು ಸಲ ನಕ್ಕು, ”ನಿನಗ ಸೌಡಾದಾಗ ಅಟ್ಟಕ್ಕ ಬಾ… ಮಾತಾಡೂಣು…” ಎಂದರು. ಒಬ್ಬ ಹಿರಿಯ ನಾಟಕಕಾರ ‘ಬಾ… ಮಾತಾಡೂಣು…’ ಎನ್ನುವುದಿದೆಯಲ್ಲ, ಅದೇ ಒಂದು ಭಾಗ್ಯ.
ಒಮ್ಮೆ ಸೌಡು (ಬಿಡುವು) ಮಾಡಿಕೊಂಡು ಚಟರ್ಜೀಯೊಂದಿಗೆ ಧಾರವಾಡಕ್ಕೆ ಹೋದೆ. ನಾಟಕದ ಕಥಾವಸ್ತು, ಅದನ್ನು ಕನ್ನಡಕ್ಕೆ ರೂಪಾಂತರಿಸಿದ ಬಗೆ, ಬಳಸಿದ ಭಾಷೆ ಎಲ್ಲದರ ಬಗ್ಗೆಯೂ ಅಜ್ಜ ಮೆಚ್ಚಿಕೊಂಡರು.
ಅದು ನನ್ನ ಮೊಟ್ಟ ಮೊದಲ ರೂಪಾಂತರ ಯತ್ನ.
”ಒಳ್ಳೇ ಪ್ರಯತ್ನ… ಆದ್ರs…” ಎಂದು ಅರ್ಧಕ್ಕೆ ನಿಲ್ಲಿಸಿದರು. ನಮ್ಮಿಬ್ಬರ ಮುಖ ನೋಡಿದರು. ನಮಗೆ ದಿಗಿಲು…
ಅವರ ಮುಖವನ್ನೇ ನೋಡತೊಡಗಿದೆವು.
”ಸ್ಟೇಜ್ ಮ್ಯಾಲೆ ‘ಏನು’ ತೋರಸಬೇಕು, ಏನು ತೋರಸಬಾರದು, ತೋರಿಸೀದ್ರೂ ಯಾವುದನ್ನ ‘ಎಷ್ಟು’ ತೋರಸಬೇಕು ಅನ್ನೋದರ ಬಗ್ಗೆ ‘ನಾಟ್ಯಶಾಸ್ತ್ರ’ದೊಳಗ ನಿಶ್ಚಿತವಾಗಿ ಹೇಳ್ಯಾರ. ಅದು ಇವತ್ತಿಗಷ್ಟs ಅಲ್ಲಾ, ಯಾವತ್ತಿಗೂ ಅನ್ವಯಿಸೋ ಮಾತು…” ಅಂತ ಮತ್ತೆ ನಮ್ಮಿಬ್ಬರ ಮುಖ ನೋಡಿದರು.
ಆ ನಾಟಕದಲ್ಲಿ ಒಂದು ದೀರ್ಘವಾದ ಊಟದ ಸನ್ನಿವೇಶ ಬರುತ್ತದೆ :
ತಡರಾತ್ರಿಯಲ್ಲಿ ಮನೆಗೆ ಬಂದ ಮಗ ಜತೆಗೆ ಇಬ್ಬರು ಗೆಳೆಯರನ್ನೂ ಕರೆತಂದಿದ್ದಾನೆ.
”ಲಗೂ ಊಟಕ್ಕ ಹಾಕು… ಭಾsಳ ಕೆಲಸವ… ಓದಬೇಕು ನಾವು ಮತ್ತ, ಬೆಳಗಾಗೂದ್ರಾಗs…” ಎಂದು ಅವಸರಿಸುತ್ತಾನೆ ಮಗ.
ಮಗನಿಗಾಗಿ ಅವ್ವ ಪ್ರೀತಿಯಿಂದ ಅಡಿಗೆ ಮಾಡಿಟ್ಟು, ಅವನಿಗೆ ಬಡಿಸುತ್ತ, ಒಂದಷ್ಟು ಹೊತ್ತು ತೃಪ್ತಿಯಿಂದ ಮಾತಾಡಬಹುದು ಎಂದುಕೊಂಡಿದ್ದ ತಾಯಿಗೆ ಅಸಮಾಧಾನ… ಅಲ್ಲದೆ, ಮಾಡಿಟ್ಟ ಅಡಿಗೆ ಮೂವರಿಗೆ ಸಾಲದು… ಅದನ್ನೇ ಮಗನೆದುರು ಹೇಳುತ್ತಾಳೆ.
”ನೀ ಬ್ಯಾರೆ ಅಡಿಗಿ ಮಾಡಿ ಬಡಸೂತನಕಾ ನಾವಿಲ್ಲೇ ಕೂಡಲಿಕ್ಕಾಗೂದಿಲ್ಲಾ… ಏನ್ ಮಾಡೀಯೋ ಅದನ್ನs ಹಾಕು…” ಎಂದು ಗೆಳೆಯರೊಂದಿಗೆ ಅದೇನೋ ರಹಸ್ಯ ಮಾತುಕತೆಯಲ್ಲಿ ತೊಡಗುತ್ತಾನೆ. ಅವ್ವ ಬಡಿಸಲು ಬಂದಾಗೆಲ್ಲ, ಮಾತು ನಿಲ್ಲಿಸಿ, ಈಕೆ ಯಾಕಾದರೂ ಬಂದಳೋ ಎಂಬಂತೆ ಅವಳನ್ನು ನೋಡುತ್ತಾನೆ… ಅವ್ವ ಮತ್ತೊಮ್ಮೆ ಬಡಿಸಲು ಹೋದಾಗ,
”ಮತ್ ಮತ್ ಇಲ್ಲಿಗೆ ಬರಬ್ಯಾಡಾ… ಅದೇನ್ ಮಾಡೀಯೋ ಅದನ್ನೆಲ್ಲಾ ಇಲ್ಲೇ ತಂದು ಬಡಿ…” ಎಂದು ಕಟುವಾಗಿ ಹೇಳುತ್ತಾನೆ.
ಜಿ.ಬಿ.ಯವರು ಹೇಳಿದ್ದು ಈ ಊಟದ ಸನ್ನಿವೇಶದ ಬಗ್ಗೆ… ಅದನ್ನು ಹಾಗೆಲ್ಲ ತೋರಿಸಬಾರದು ಎಂಬ ಬಗ್ಗೆ…
ಅಂಥ ಸನ್ನಿವೇಶಗಳು ಜನರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ, ಪ್ರೇಕ್ಷಕ ಬೇರೆ ರೀತಿ ಪ್ರತಿಕ್ರಿಯಿಸಲು ಕಾರಣವಾಗುತ್ತದೆ ಎಂಬುದು ಅಜ್ಜನ ಅಂಬೋಣ. ಅದರಿಂದ ನಟರಿಗೆ ಕಿರಿಕಿರಿಯಾಗುತ್ತದೆ. ರಸಭಂಗವಾಗುತ್ತದೆ. ಅಪಹಾಸ್ಯಕ್ಕೀಡಾಗುವಂತೆ ಆಗುತ್ತದೆ…
ಅಂದಿನ ಪ್ರಯೋಗ ನಡೆದ ಸಂದರ್ಭದಲ್ಲಿ ಕೆಲವರು ಹಾಗೆ ಪ್ರತಿಕ್ರಿಯಿಸಿದ್ದರು…
ಅಜ್ಜನ ಮಾತು ಖರೆ ಅನಿಸಿತು.
ಅಷ್ಟೆಲ್ಲ ಹೇಳಿದ ಮೇಲೆ ಅಜ್ಜ, ”ನಾ ಹಿಂಗ ಹೇಳಿದೆ ಅಂತ ಬರಿಯೂದನ್ನ ಬಿಡಬ್ಯಾಡಾ…” ಅಂತ ಆಶೀರ್ವದಿಸಿದರು.
‘ರಕ್ತದಾಹ’ ನಾಟಕಕ್ಕೆ ನಾವು ಪಡೆದ ಪ್ರಶಸ್ತಿ, ಫಲಕಗಳೊಂದಿಗೆ.
ನಿಂತವರಲ್ಲಿ ನಡುವಿನವರೇ ಚಿತ್ತರಂಜನ ಚಟರ್ಜೀ.
-0-0-0-0-0-
ಕೆಲವು ತಿಂಗಳುಗಳ ನಂತರ ಚಟರ್ಜೀ ಮತ್ತೊಂದು ಬಂಗಾಳಿ ನಾಟಕ ಹಿಡಿದುಕೊಂಡು ಬಂದರು. ಶಂಭು ಮಿತ್ರರ ಗರಡಿಯಲ್ಲಿ ಪಳಗಿದ ಹುಲಿ ಈ ಚಿತ್ತರಂಜನ ಚಟರ್ಜೀ. ಈಗ ಸರಿಯಾಗಿ 50 ವರ್ಷಗಳ ಹಿಂದೆ ಕೆಲಸ ಹುಡುಕುತ್ತ ಹುಬ್ಬಳ್ಳಿಗೆ ಬಂದು, ಒಂದು ಫ್ಯಾಕ್ಟರಿಯಲ್ಲಿ ಸೂಪರ್ವೈಜರ್ ಅಂತ ಕೆಲಸಕ್ಕೆ ನಿಂತವರು. ಮೊದಮೊದಲು ಬಂಗಾಳಿ ಸಮಾಜಕ್ಕೆ ಮಾತ್ರ ನಾಟಕಗಳನ್ನು ನಿರ್ದೇಶಿಸುತ್ತಿದ್ದ ಅವರು ನಂತರದ ದಿನಗಳಲ್ಲಿ ಕನ್ನಡ ನಾಟಕಗಳನ್ನೂ ಕೈಗೆತ್ತಿಕೊಳ್ಳತೊಡಗಿದರು. (ಅವರು ನಿರ್ದೇಶಿಸಿದ ಕಂಬಾರರ ‘ಜೈ ಸಿದನಾಯಕ’ ನಾಟಕದಲ್ಲಿ ನಾನು ಉರಿಲಿಂಗನ ಪಾತ್ರ ವಹಿಸಿದ್ದೆ.)
ಈ ಚಟರ್ಜೀ ಪ್ರತಿಸಲ ತಮ್ಮ ನಾಡಿಗೆ (ಪಶ್ಚಿಮ ಬಂಗಾಳ) ಹೋದಾಗಲೂ ಕೆಲವು ಹೊಸ ಬಂಗಾಲಿ ನಾಟಕಗಳನ್ನೋ ಕಾದಂಬರಿಗಳನ್ನೋ ತರುವುದು ವಾಡಿಕೆ. ಈ ಸಲ ಅವರು ಹಿಡಿದುಕೊಂಡು ಬಂದದ್ದು ‘ಏ ಬಾರ್ ರಾಜಾರ್ ಪಾಲಾ…’ ಉತ್ಪಲ್ ದತ್ ಬರೆದದ್ದು.
ನಿಮಗೆ ಗೊತ್ತಲ್ಲ ಉತ್ಪಲ್ ದತ್. ಗಂಭೀರ ನಾಟಕಗಳಿಗೆ ಹೇಗೋ ಹಾಗೆ ವಿಡಂಬನಾತ್ಮಕ ನಾಟಕಗಳಿಗೂ ಸೈ ಎನಿಸಿಕೊಂಡ ಉತ್ಪಲ್ ದತ್. ವಿಶಿಷ್ಟ ಮ್ಯಾನರಿಸಂಗಳ ಮೂಲಕ ಹಾಸ್ಯ ನಟನಾಗಿ, ಖಳ ನಟನಾಗಿ ನಮ್ಮನ್ನು ಸೆಳೆದ ಉತ್ಪಲ್ ದತ್…
ಈ ನಾಟಕವನ್ನು ರೂಪಾಂತರಿಸಿದ ಮೇಲೆ ಎಲ್ಲವನ್ನೂ ವಿವರಿಸಿ ಉತ್ಪಲ್ ದಾ ಅವರಿಗೊಂದು ಪತ್ರ ಬರೆದೆ. ರಂಗಕ್ಕೆ ತರಲು ಅನುಮತಿ ಕೇಳಿದೆ. ಉತ್ಪಲ್ ಜಿ ಎಲ್ಲೋ ದೂರ ಚಿತ್ರೀಕರಣದಲ್ಲಿ ತೊಡಗಿದ್ದ ಕಾರಣ, ಅವರ ಪತ್ನಿ ಸೋವಾ ದತ್ ತುಂಬಾ ಸಂತಸದಿಂದ ಅನುಮತಿ ನೀಡಿ ಪತ್ರ ಬರೆದರು.
ಉತ್ಪಲ್ ದತ್ ಅವರ ಮತ್ತೊಂದು ವೈಚಾರಿಕ ನಾಟಕ ‘ಸೂರ್ಯ ಶಿಕಾರಿ.’ ನಮ್ಮೆಲ್ಲರ ಹೆಮ್ಮೆಯ ರಂಗಕರ್ಮಿ-ರಾಜಕಾರಣಿ ಎಂ.ಪಿ. ಪ್ರಕಾಶ್ ಈ ನಾಟಕವನ್ನು ಸೊಗಸಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
‘ಏ ಬಾರ್ ರಾಜಾರ್ ಪಾಲಾ…’ ತುರ್ತು ಪರಿಸ್ಥಿತಿಯನ್ನು ವಿಡಂಬಿಸುವ ನಾಟಕ. ಒಬ್ಬ ರಾಜ. ಪೋಲೊ ಆಡುವಾಗ ಕುದುರೆಯ ಮೇಲಿಂದ ಬಿದ್ದು ಮಾರಣಾಂತಿಕವಾಗಿ ಗಾಯಗೊಳ್ಳುತ್ತಾನೆ. ಆತ ಬದುಕುವುದು ಕಷ್ಟ, ಬದುಕಿದರೂ ಓಡಾಡುವುದು ಕಷ್ಟ ಎಂದು ವೈದ್ಯರ ಅಭಿಪ್ರಾಯ. ಉತ್ತರಾಧಿಕಾರಿಯನ್ನು ಸೂಚಿಸುವಂತೆ ಪ್ರಧಾನಿಗಳು ರಾಜನಿಗೆ ಕೇಳುತ್ತಾರೆ. ಔರಸ ಪುತ್ರರಿದ್ದರೆ ತಾನೇ ಆತ ಸೂಚಿಸುವುದು?
”ರಾಜ್ಯದ ತುಂಬಾ ನನಗೆ ಮಕ್ಕಳಿದ್ದಾರೆ, ಅನೌರಸ ಪುತ್ರರು. ಅವರಲ್ಲಿ ಯಾವನೋ ಒಬ್ಬನ ಬಳಿ ಪದಕವೊಂದಿದೆ. ರಾಜಲಾಂಛನವಿರುವ ಪದಕ. ಅದು ಇರುವ ತರುಣನನ್ನು ಹುಡುಕಿ ತಂದು ಪಟ್ಟಗಟ್ಟಿ,” ಎಂದು ಹೇಳಿ ರಾಜ ಕೊನೆಯುಸಿರೆಳೆಯುತ್ತಾನೆ.
ರಾಜಾಜ್ಞೆಯಂತೆ ಹುಡುಕಾಟ ನಡೆಯುತ್ತದೆ. ನಾಟಕ ಕಂಪನಿಯೊಂದರ ನಿರಕ್ಷರಿ ನಟ ವೆಂಕು ಎಂಬವನ ಹತ್ತಿರ ಆ ಪದಕ ಸಿಗುತ್ತದೆ. ಆತನನ್ನು ಕರೆತಂದು ಪಟ್ಟಕ್ಕೆ ಕೂರಿಸುತ್ತಾರೆ. ಕಂಪನಿಯಲ್ಲಿ ರಾಜನ ಪಾರ್ಟು ಮಾಡುತ್ತಿದ್ದವ ವೆಂಕು. ಆ ರಾಜ್ಯದ ರಾಜನಾದ ಆತ ಕ್ರಮೇಣ ಒಬ್ಬ ಸರ್ವಾಧಿಕಾರಿಯಾಗಿ ಬೆಳೆದು ನಿಲ್ಲುವ ಕಥೆ ಇದು.
ಈ ‘ರೂಪಾಂತರಣ’ಕ್ಕಿನ್ನೂ ನಾಮಕರಣವಾಗಿರಲಿಲ್ಲ…
ವಾಚನ ಸಂದರ್ಭದಲ್ಲಿ ಹಾಜರಿದ್ದ ಮಿತ್ರ ರವೀಂದ್ರ ಡಂಬಳ (ವೇಣು ವಿಶಾರದ ಪಂ. ಪ್ರವೀಣ ಗೋಡಖಿಂಡಿಯವರ ಮಾವ ಇವರು) ಅವರು ಇದಕ್ಕೆ ಕೊಟ್ಟ ಹೆಸರು ‘ಹೀಂಗೊಂದೂರಾಗೊಬ್ಬ ರಾಜಾ…’
ಮುಖ್ಯ ಪಾತ್ರಕ್ಕೆ ‘ಹುಬ್ಬಳ್ಳಿಯಾಂವಾ’ ಅಂಕಣದ ಖ್ಯಾತಿಯ ಪುಂಡಲೀಕ ಶೇಟ್ ಅವರನ್ನು ಆಯ್ಕೆ ಮಾಡಿದೆವು. (ಆತ ನನ್ನ ಬಾಲ್ಯಕಾಲ ಸಖ, ಸಹಪಾಠಿ.) ಆದರೆ, ಕೆಲವು ದಿನ ರಿಹರ್ಸಲ್ ಮಾಡಿ ಆತ ”ಆಗೋದಿಲ್ಲ,” ಅಂದುಬಿಟ್ಟ. ಬೇರೊಬ್ಬ ನಟನನ್ನು ಆಯ್ಕೆ ಮಾಡಿ ನಾಟಕವನ್ನು ಪ್ರಯೋಗಿಸಿ ಯಶಸ್ವಿಯಾದೆವು.
ಈ ಸಲ ಜಿ.ಬಿ. ಅಜ್ಜ ನಾಟಕದ ಭಾಷೆಯ ಬಗ್ಗೆ ಒಂದೆರಡು ‘ಬೀಜಮಾತು’ ಹೇಳಿದರು.
-0-0-0-0-0-
ಅಜ್ಜನ ಮಾತನ್ನೇ ಧೇನಿಸುತ್ತಿದ್ದ ನನಗೆ ಅದೊಂದು ದಿನ,’ಈ ರೂಪಾಂತರ-ಗೀಪಾಂತರ ಅಂತ ಕಾಲವನ್ನು ವ್ಯಯಿಸುವುದರ ಬದಲು ಒಂದು ಸ್ವತಂತ್ರ ನಾಟಕ ಬರೆಯುವ ಪ್ರಯತ್ನ ಯಾಕೆ ಮಾಡಬಾರದು?’ ಅಂತನ್ನಿಸಿತು.
ವಸ್ತುವನ್ನು ಹುಡುಕತೊಡಗಿದೆ.
ತಟ್ಟನೆ ನೆನಪಾಯಿತು. ಅದಕ್ಕೂ ನಾಲ್ಕೈದು ವರ್ಷ ಮೊದಲು ಒಮ್ಮೆ ನಮ್ಮ ಪತ್ರಿಕಾಲಯಕ್ಕೆ ನಮ್ಮ ಹಿಂದಿನ ಸಂಪಾದಕ ಪಾ.ವೆಂ. ಆಚಾರ್ಯ ಅವರು ಸಂಶೋಧಕ ಡಾ. ಪಿ. ಗುರುರಾಜಭಟ್ಟರನ್ನು ಕರೆತಂದಿದ್ದರು. ಸುತ್ತಲಿನ ಕೆಲವು ಊರುಗಳಲ್ಲಿ ‘ಅಧ್ಯಯನ ಪ್ರವಾಸ’ಕ್ಕೆಂದು ಬಂದಿದ್ದರಂತೆ ಭಟ್ಟರು.
ಅವತ್ತಷ್ಟೇ ಅವರು ಸಮೀಪದ ಒಂದು ಹಳ್ಳಿಯ ಒಂದು ದೇವಸ್ಥಾನವನ್ನು ನೋಡಿ ಬಂದಿದ್ದರು. ಆ ದೇವಸ್ಥಾನ, ಆ ‘ದೇವರ’ ಕುರಿತು ಚಾಲ್ತಿಯಲ್ಲಿದ್ದ ಸ್ಥಳಪುರಾಣ ಹಾಗೂ ಅಲ್ಲಿಯವರ ನಂಬಿಕೆ-ಆಚರಣೆಗಳ ಕುರಿತು ತುಂಬಾ ಸೊಗಸಾಗಿ ವಿವರಿಸಿದ್ದರು.
ಅದು ನನ್ನ ಮನಸ್ಸಿನಲ್ಲಿ ಕೂತುಬಿಟ್ಟಿತ್ತಲ್ಲ, ಅದೇ ಯಾಕಾಗಬಾರದು? ಅಂತ ಯೋಚನೆ ಬಂತು.
ತಡಮಾಡದೇ, ಆ ಕುರಿತಂತೆ ಇನ್ನಷ್ಟು ಮತ್ತಷ್ಟು ವಿವರಗಳನ್ನು ಕಲೆಹಾಕತೊಡಗಿದೆ. ಹೀಗೆ ಹುಡುಕುತ್ತಿದ್ದಾಗ, ಗೆಜೆಟಿಯರಿನಲ್ಲಿ ಬಂಕಾಪುರ ಎಂಬ ಊರಿನ ವಿವರ ಸಿಕ್ಕಿತು. ಅಲ್ಲಿ ಕೊಡಲ್ಪಟ್ಟಿದ್ದ ದಂತ ಕತೆಯಾ ಎಳೆ ನನ್ನ ನೆರವಿಗೆ ಬಂತು. ಹಾಗೆ ಹೊಳಹು ಹಾಕುತ್ತಲೇ ಇದ್ದ ಸಂದರ್ಭದಲ್ಲೇ ಹುಬ್ಬಳ್ಳಿಗೆ ಬಂದಿದ್ದ ಡಾ. ಚಂದ್ರಶೇಖರ ಕಂಬಾರರಿಗೂ ಈ ಕಥೆಯನ್ನು ಹೇಳಿದೆ.
”ನೀವೇ ಬರೀರಿ…” ಅಂತ ಹುರಿದುಂಬಿಸಿದರು ಆ ಪುಣ್ಯಾತ್ಮ.
ಹುರುಪಿನಿಂದ ನಾಟಕವನ್ನು ಬರೆಯತೊಡಗಿದೆ. ಆ ಸಮಯದಲ್ಲಿ ನಾನು ಕಂಬಾರರ ಕಥನ ತಂತ್ರವನ್ನೂ, ಜಿ.ಬಿ.ಯವರ ಭಾಷೆಯನ್ನೂ ಅನುಕರಣೆ ಮಾಡಿದ್ದು ನಿಜ.
ಅಂತೂ ಹಾಡು-ಹಸೆಗಳೊಂದಿಗೆ ನನ್ನ ನಾಟಕ ಸಿದ್ಧವಾಯಿತು.
ಅದೇ ‘ದೊಡ್ಡಪ್ಪ’…
(ಉಳಿದದ್ದು ಮುಂದಿನ ವಾರ)



ಗುರುಗಳ ಜಡಭರತರು ಹೇಳಿದ ಬೀಜಮಾತು ನಿಮ್ಮ ಮ್ಯಾಲ ಹೆಂಗ
ಪ್ರಭಾವ ಮಾಡತು ಅನ್ನೂದು ತಿಳಕೊಳ್ಳಲಿಕ್ಕ್ರ ಮುಂದಿನ ರವಿವಾರದ ತನಾ ಕಾಯಬೇಕು..
ಎಂದಿನಂತೆ ನಿಮ್ಮದು ಅದ್ಭುತ ಅನಸುವ ಲೇಖನ,,
ನಿಮ್ಮ ರಂಗಪಯಣ ಬಹಳ ರಸವತ್ತಾಗಿ, ಅರ್ಥವತ್ತಾಗಿ, ಮೂಡಿ ಬಂದಿದೆ, ನಿಮ್ಮ ಹಾಗೆ ರಂಗಮಂಚದ , ಸಾಹಿತ್ಯದ ಮೇಲಿನ ಅಮಿತ ಪ್ರೇಮವನ್ನು ನೋಡಿ ನಿಮ್ಮ ಬಗ್ಗೆ ಗೌರವ ಇನ್ನೂ ಹೆಚ್ಚಿದೆ, ಎಂತೆಂತಾ ಮಹಾನುಭಾವರ ಸಖ್ಯ ನಿಮ್ಮನ್ನು ಇನ್ನೂ ಸ್ವಾರಸ್ಯವಾಗಿರಿಸಿದೆ.
ಬರೆವಣಿಗೆ ಆಪ್ತವಾಗಿದೆ; ಹಳೆಯ ನೆನಪುಗಳಲ್ಲಿ ಆರ್ದ್ರಘಟನೆಗಳು ಹೃದಯಂಗಮವಾಗಿ ಮೂಡಿಬಂದಿದೆ. ಈಗಿನ ಹುಡುಗರಿಗೆ ಹಳೆಯ ಇಂತಹ ವಿಷಯಗಳು ಮಧುರವಾಗಿರುತ್ತವೆ. ಬೆಳವಣೆಗೆಗೂ ಪೂರಕ. ಅಭಿನಂದನೆಗಳು.
‘ಹಾಗೇ ಸುಮ್ಮನೆ’ ನೆನಪಿನ ಕಣಜದಿಂದ ಮಹಾನುಭಾವರುಗಳ ಪರಿಚಯದ ಜೊತೆ ತಮ್ಮ ಅನುಭವ, ತಾವು ನಡೆದು ಬಂದ ಹಾದಿಯ ಸ್ಥೂಲ ಚಿತ್ರಣವೂ ನಮ್ಮ ಪಾಲಿಗೆ.
ಹಾ..!! ನಿಮ್ಮ ಜೀವನದ ರಂಗತಾಲೀಮು ಬಹಳಷ್ಟು ಖುಷಿ ನೀಡಿದೆ ಎಂದೆನಿಸುತ್ತೆ ಅಲ್ಲವೇ…!! ಭಲೇ ಸರ್ ನಿಮ್ಮಲ್ಲಿರುವ ಕಲೆಗೆ ನಾವು ಶರಣು, ಖಾಯಿಲೆಯಲ್ಲಿಯೂ ನಾಟಕದ ಪಾತ್ರ ನಿರ್ವಹಿಸಿದ್ದೀರಿ. ನಿಮ್ಮ ರಂಗಪಯಣದ ಪ್ರತಿ ಹೆಜ್ಜೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದೀರಿ ಧನ್ಯವಾದಗಳು.. ಓದುತ್ತಲಿದ್ದರೇ ಓಹೋ ಮುಗಿದುಹೋಯಿತಾ ಮುಂದೇನು ಎಂದು ಕಾದುನೋಡುವಂತಾಗಿದೆ… ನಿಮ್ಮ ಆ ದೊಡ್ಡಪ್ಪನ ಪರಿಗಾಗಿ ಕಾಯುವೆವು…
ಹಳೆಯ ನೆನಪುಗಳ ಮೆಲುಕು ನಮಗೂ ಉಣಬಡಿಸಿದ್ದಕ್ಕೆ ಧನ್ಯವಾದಗಳು….
Tumba aptavenisitu nimma baraha…..nimma anubhavagala lokada jagattina parichaya maadikottadakkagi dhanyavaadagalu….. 🙂
ವಿಷಯ, ನಿರೂಪಣೆ ಎರಡೂ ಎಂದಿನಂತೆ ಅಲ್ಟ್ರಾ ಸೂಪರ್! ಈ ಸಲಿ ಬೋನಸ್ ಅಂತ ಫೋಟೋ ಇನ್ನೂ ಸೂಪರ್ರು! 🙂
ಸರ..ದೃಶ್ಯಗಳು ನಮ್ಮೆದುರಿಗೇ ನಡೆದಂತಿವೆ! ಇಷ್ಟ ಆಯ್ತು .
”ನಿನಗ ಸೌಡಾದಾಗ ಅಟ್ಟಕ್ಕ ಬಾ… ಮಾತಾಡೂಣು…” ಎಂಬ ಮಾತು ಎಲ್ಲರಿಗೂ ಸಿಗುವಂಥದ್ದಲ್ಲವೆಂದೇ ನನ್ನ ಭಾವನೆ. ಅಂತಹ ಭಾಗ್ಯಶಾಲಿಗಳಾದ ನೀವು…ನಿಮ್ಮ ಅನುಭವಾಮೃತಗಳ ಸವಿಯನ್ನು ಸವಿಯುತ್ತಿರುವುದು ನನ್ನ ಭಾಗ್ಯವೆಂದು ನಾನು ಭಾವಿಸುತ್ತೇನೆ. ನಿಮ್ಮ ‘ದೊಡ್ಡಪ್ಪ’ ಯಶಸ್ವಿ ರಂಗಕೃತಿಯನ್ನು ಓದಿದ್ದೇನೆ (ಬಹುಷಃ ಅಕ್ಷರ ಪ್ರಕಾಶನ, ಹೆಗ್ಗೋಡು ಇರಬಹುದು!)ಮತ್ತು ನಾಟಕ ಪ್ರಯೋಗವನ್ನೂ ಸಹ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನೋಡಿ ಆನಂದಿಸಿದ್ದೇನೆ. ವಿಜಾಪೂರದಿಂದ ಹಾವೇರಿ ಸೀಮೆಯವರೆಗಿನ ಪ್ರೇಮಕಥಾನಕ ಚೆನ್ನಾಗಿದೆ. ದೊಡ್ಡಪ್ಪನ ಜನನದ ಹಿಂದೆ ಇಷ್ಟೇಲ್ಲಾ ಇದೆಯೆಂದು ಇಂದು ತಿಳಿಯಿತು. ಧನ್ಯವಾದಗಳು…
ಗುರುಗಳೆ..
ನಿಮ್ಮ ಅನುಭವದ ಕಣಜಕ್ಕೆ ನಮ್ಮೆಲ್ಲರ ನಮನಗಳು…
ಒಂದು ಕಾಲದಲ್ಲಿ ಪ್ರತಿ ಭಾನುವಾರ “ಸಾಹಿತ್ಯ ಪುರವಣಿಗೆಗಾಗಿ” ಕಾಯುತ್ತಿದ್ದೆವು….
ಈಗ ನಿಮ್ಮ ಲೇಖನಕ್ಕಾಗಿ ಕಾಯುತ್ತಿದ್ದೇವೆ…
ಇಷ್ಟವಾಗುವದು ಯಾವುದು ಗೊತ್ತಾ?
ಆಗಿನ ಜನರ ಪ್ರಾಮಾಣಿಕತೆ… ಮತ್ತು ಅವರ ಸತ್ಯನಿಷ್ಟ ಮಾತುಗಳು…
ಇದನ್ನು ಪುಸ್ತಕ ಮಾಡಿ… ದಯವಿಟ್ಟು
ಬೇಸರವಾದಾಗಲೆಲ್ಲ ಓದಲು ದಾರಿ ದೀಪವಿದ್ದಂತೆ….
ಹಳೆಯ ನೆನಪುಗಳನ್ನು ಎಷ್ಟು ಸುಂದರವಾಗಿ ಕಟ್ಟಿ ಕೊಟ್ಟಿದ್ದೀರಿ.. ಇಷ್ಟ ಆಯ್ತು.. ನಮ್ಮನ್ನು ಹೀಗೆ ಆ ಕಾಲಕ್ಕೆ ಕರೆದುಕೊಂಡು ಹೋಗುತ್ತಾ ಇರಿ..