ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋಪಾಲ ತ್ರಾಸಿ ಓದಿದ ‘ಆರೋಹಿ’

ಗೋಪಾಲ ತ್ರಾಸಿ

*

ಆರೋಹಿ (ಪೌರಾಣಿಕ ನಾಟಕ)

ಲೇಖಕಿ : ಮಂಗಳ ಟಿ.ಎಸ್.

ಪ್ರಕಾಶನ : ಕಥನ, ತುಮರಿ

ಪ್ರತಿಗಳಿಗೆ : 9448904982

*

ಆರೋಹಿ, ಮಹಾಭಾರತದಲ್ಲಿ ಬರುವ ಪುಟ್ಟ ಉಪಕಥೆಯೊಂದರ ಎಳೆಯಿಂದ ಆಯ್ದು  ಬರೆದ ನಾಟಕ.  ಮೂಲದಲ್ಲಿ ಉಲ್ಲೇಖವಿರದ ಆದರೆ ಲೇಖಕಿ  ನಾಟಕದ ಚಲನೆಗೆ ಪೂರಕವಾಗಿ  ಕೆಲವು ಅಗತ್ಯ ಪಾತ್ರಗಳನ್ನು ಸೃಷ್ಟಿಸಿ  ಸೃಜನಾತ್ಮಕ ಸ್ವಾತಂತ್ರ್ಯ ವಹಿಸಿದ್ದು ಪ್ರಶಂಶನೀಯವಾದುದು.

ಪೌರಾಣಿಕ ಕಥಾ ವಸ್ತುಗಳನ್ನು ಆಯ್ದು ಸಮಕಾಲೀನಕ್ಕೆ ಮುಖಾಮುಖಿಯಾಗಿಸುವ ಪ್ರಕ್ರಿಯೆ  ಹೊಸತೇನಲ್ಲ. ಇಲ್ಲಿ ನಾಟಕಕಾರರು ಕಥಾ ವಸ್ತುವಿನಲ್ಲಿ ಬದಲಾವಣೆ ಮಾಡದಿದ್ದರೂ ಪ್ರಸ್ತುತಿಯ ಆಶಯದಲ್ಲಿ ಭರಪೂರ ಜೀವನ್ಮುಖಿ ಭಾವಸಂಚಾರದ ಹರಿವಿದೆ.

ಋಷಿ ಜರತ್ಕಾರು  ಸಂಸಾರ ಚಕ್ರದೊಳಗೆ ಸಿಲುಕಲು ಬಯಸದ, ಲೌಕಿಕ ಬದುಕನ್ನು ಮೀರಲು ಹೊರಟವ. ಒಂದು ಹಂತದಲ್ಲಿ ತನ್ನ ತಾನೇ ಹುಡುಕುತ್ತ ಹೊರಟ ಲೋಕಸಂಚಾರಿ! ಇದ್ದಲ್ಲೇ ಬರಬಹುದಾದ ಬೆಳಕಿಗೆ ಕಾಯಲಾರದೆ  ಇನ್ನೆಲ್ಲೋ ಅದನ್ನು ಹುಡುಕ ಹೊರಟವನು.

ಇತ್ತ ಮಾನಸಾದೇವಿ  ಶಾಪ ನಿಮಿತ್ತ ಸರ್ಪಕುಲ ವಿನಾಶವನ್ನು ತಡೆಗಟ್ಟಲು ಜರತ್ಕಾರುವಿನ ಅಸಂಬದ್ಧ ಶರತ್ತಿಗೆ ಒಪ್ಪಿ ವರಿಸಲು ಮುಂದಾದವಳು.  ಇಬ್ಬರದ್ದೂ ತದ್ವಿರುದ್ಧ ಮನಸ್ಥಿತಿ, ಗುಣ, ಗುರಿ. ಆದರೆ ಇಬ್ಬರೂ ಪರಿಸ್ಥಿತಿಗೆ ಕಟ್ಟು ಬಿದ್ದು ಮಾತು ಕೊಟ್ಟು ಸಂಸಾರ ಬಂಧಿಯಾದವರು.  ಮಾನಸಾದೇವಿಯ ಆಲೋಚನೆ, ಆಶಯ, ಆಸೆ ಆಕಾಂಕ್ಷೆಗಳು ಉದಾತ್ತವಾದುದು; ಸಮಕಾಲೀನವಾಗಿ ಮಾನವೀಯವಾದುದು. ಹಾಗಾಗಿ ಎಲ್ಲಾ ಆತಂಕ, ತಲ್ಲಣ, ದುಗುಡಗಳನ್ನು ಸೈರಿಸುವ ಅಂತ:ಶಕ್ತಿವುಳ್ಳವಳು. ಶರತ್ತಿನಂತೆ  ಜರತ್ಕಾರು, ಮಾನಸಾದೇವಿ ಗರ್ಭಿಣಿ ಎಂಬುದನ್ನೂ ಲಕ್ಷಿಸದೆ ತ್ಯಜಿಸಿ ಹೊರಡುತ್ತಾನೆ. ಆಕೆ ಮಗುವಿನ ನೆಪದಲ್ಲಿ ಅವನನ್ನು ತನ್ನ ಬಳಿ ಉಳಿಸಿಕೊಳ್ಳುವ ಸಣ್ಣ ಪ್ರಯತ್ನದಲ್ಲಿ ಸೋಲುತ್ತಾಳೆ, ಅಥವಾ ಮಾತು ಕೊಟ್ಟಂತೆ ನಡೆದುಕೊಂಡು ಸೋತೂ ಗೆಲ್ಲುತ್ತಾಳೆ.

ಕೊನೆಯಲ್ಲಿ ಆಕೆ ಗಂಡನಿಗೆ ಹೇಳುವ ಮಾತು, “ ಪತಿಯೆಂದರೆ ಜೀವದ ಆಸರೆ, ಜೀವನದ ಆಸರೆ ಎಂಬ ಭಾವದಿಂದ ಹೊರಬಂದು ಆ ಮಗುವನ್ನು ಸಾಕಬಲ್ಲೆ, ನೀವಿನ್ನು ಹೊರಡಬಹುದು” ಎಂಬ ಗಟ್ಟಿಗಿತ್ತಿ ಹೆಣ್ಣಾಗುತ್ತಾಳೆ.   ಕೃತಿಯಲ್ಲಿ ಅಲ್ಲಲ್ಲಿ ಇಂತಹ ಪ್ರೌಢ ನಿಲುವು, ಸಮಕಾಲೀನ ಆಶಯಗಳಿಗೆ ಧ್ವನಿಯಾಗಿ  ನಾಟಕಕಾರರು ಸಾಮಯಕವಾಗಿ ಗೆಲ್ಲುತ್ತಾರೆ.

ಆದರೂ ಗಂಡ ಜರತ್ಕಾರುವಿನ ಕುರಿತು ಮಗ ಆಸ್ತಿಕ ಕೋಪದಿಂದ ಆಡುವ ನಿಂದನೀಯ ಮಾತುಗಳನ್ನು ಸಹಿಸಲಾರಳು! ‘ಈಗ ನಿನಗೆ ಅರ್ಥ ಆಗದು ಮಗು, ಸಮಯ ಸಂದರ್ಭ ಬಂದಾಗ ಅರ್ಥ ಆಗುತ್ತದೆ’ ಅಂತ ಬುದ್ದಿ ಹೇಳುವವಳು. ನಾಟಕದಲ್ಲಿ ಮಾನಸಾದೇವಿ ಪ್ರಬುದ್ಧ ಪಾತ್ರ ಚಿತ್ರಣ.  ಸಂಸಾರ ಬಂಧನದಿಂದ ಸ್ವಇಚ್ಛೆಯಂತೆ ಬಿಡುಗಡೆ ಪಡೆದು ಅಲೌಕಿಕವಾದುದನ್ನು ಸಾಧಿಸಲು ಹೊರಟ ಜರತ್ಕಾರುವಿನ ಸ್ವಹಿತಾಸಕ್ತಿಯ ಎದರು, ಭಾವೋದ್ರೇಕಗೊಳ್ಳದೆ ವಸ್ತುನಿಷ್ಟವಾದ  ಮನೋಭಾವದಿಂದ ಮಾನಸದೇವಿಯೇ ಆರೋಹಿಯಂತೆ ಪ್ರಭಾವಳಿ ಬೀರುವುದು ಈ ನಾಟಕ ಕೃತಿಯ ಒಳ ತಿರುಳು,  ಯಶಸ್ಸೂ ಸಹ ಹೌದು.

ಜರತ್ಕಾರು ಮತ್ತು ಬೇಟೆಗಾರ,  ಹಾಗೆಯೇ ಜರತ್ಕಾರು ಮತ್ತವನ ಗೆಳೆಯ,  ಮುಖಾಮುಖಿಯಾಗುವ ಪುಟ್ಟಪುಟ್ಟ ದ್ರಶ್ಯಗಳು ಲವಲವಿಕೆಯಿಂದ ಕೂಡಿವೆ. ಇಲ್ಲಿ ಬರುವ ಮಾತೊಂದು ಹೀಗಿದೆ; “ ಅಲ್ಲಿ ನೋಡು ಆ ಹಣ್ಣೆಲೆಯನ್ನು. ತನ್ನ ಇಂದನ್ನು ಮುಗಿಸಿ ತೊಟ್ಟು ಕಳಚಿ ಬೀಳುತ್ತಿರುವ ಎಲೆ, ಇನ್ನೇನು ಮುಳುಗಿ ಹೋಗಲಿದ್ದ ಇರುವೆಗೆ ಆಸರೆಯಾಗಿ ಅದರ ನಾಳೆಗಳಿಗೆ ನಾಂದಿಯಾಯಿತಲ್ಲಾ! “  ಇಂತಹ ಪ್ರಕೃತಿಯ  ಸೋಜಿಗವನ್ನು ಆಧ್ಯಾತ್ಮಿಕವೆಂಬಂತೆ ಅವಲೋಕಿಸುವ ಲೇಖಕಿಯು ಬದುಕಿನ ಬಗೆಗೆ ಧನಾತ್ಮಕವಾಗಿ ಚಿಂತಿಸುವ  ಪ್ರಬುದ್ಧತೆಗೂ ಸಾಕ್ಷಿಯಾಗಿದೆ.

ಗರ್ಭಿಣಿ ತಾಯಿಯನ್ನು, ಆ ಮೂಲಕ ಹುಟ್ಟಲಿರುವ ತನ್ನನ್ನೂ ತ್ಯಜಿಸಿ ಹೊರಟ ತಂದೆಯ  ಕುರಿತು ಮಗನಿಗೆ (ಆಸ್ತಿಕ) ಸಹಜ ಕೋಪತಾಪ. ದ್ರಶ್ಯವೊಂದರಲ್ಲಿ ಮಗ ತಂದೆ ಬಗ್ಗೆ ರೊಚ್ಚಿಗೊಂಡು ತಾಯಿಗೆ ಆಡುವ ಕೆಲವೇ ಕೆಲವು ಮಾತುಗಳಿವೆ. ಈ ದ್ರಶ್ಯವನ್ನು ಮೊಟಕುಗೊಳಿಸಿ, ನಾಟಕದ ಓಘಕ್ಕೆ ಪೂರಕವಾಗಿ ಬೇಕಾಗಿದ್ದ  ಸಂಭವನೀಯ ಘರ್ಷಣೆಯ ಅವಕಾಶವನ್ನು ಲೇಖಕರು ಕೈಚೆಲ್ಲಿದಂತೆ ಭಾಸವಾಗುತ್ತದೆ.

ಮೊದಲಿಗೆ ಮಾನಸಾದೇವಿ ಮಕ್ಕಳಿಗೆ ಹಂಸದ ಕಥೆ ಹೇಳುವ ಮೂಲಕ ಆರಂಭವಾಗುವ ನಾಟಕ, ಮಕ್ಕಳು ಆಕೆಗೆ ಮತ್ತೆ ಹಂಸದ ಕಥೆ ಹೇಳಲು ಗೋಗರೆಯುವ ಮೂಲಕ ಲವಲವಿಕೆಯಲ್ಲಿ ಕೊನೆಗೊಳ್ಳಿಸುವ ತಂತ್ರ ರಂಜನೀಯವಾಗಿದೆ.

ದೃಶ್ಯ, ಸನ್ನಿವೇಶ ಕಟ್ಟುವಿಕೆ, ಅವುಗಳ ಜೋಡಣೆ, ಸೊಗಸಾದ ಭಾಷೆ, ಅಲ್ಲಲ್ಲಿ ಹಾಡುಗಳು ನಾಟಕದ ಧನಾತ್ಮಕ ಅಂಶಗಳು. ಕೆಲವು ದ್ರಶ್ಯಗಳನ್ನು ತೀರಾ ಚುಟುಕುಗೊಳಿಸಿ ಪಾತ್ರಪೋಷಣೆ (ಉದಾ. ಮಗ ಆಸ್ತಿಕ,  ಜರತ್ಕಾರುವಿನ ಗೆಳೆಯ ) ಸೊರಗುವಂತಾಗಿದೆ.

ನಾಟಕಕಾರರು ಪ್ರತಿ ದ್ರಶ್ಯದಲ್ಲಿ ಪಾತ್ರಗಳ ಚಲನವಲನಗಳ ಕುರಿತು  ಬ್ರಾಕೆಟಲ್ಲಿ ನಮೂದಿಸಿ ನಿರ್ದೇಶಿಸುವುದು ಹಳೇ ಮಾದರಿಯಾದರೂ, ಲೇಖಕಿ ನಾಟಕವನ್ನು ಬರೆಯುವಾಗಲೇ ರಂಗದ ಮೇಲೆ ಆಯಾ ಪಾತ್ರಗಳನ್ನು ತಾನು ವಿಜುವಲೈಸ್ ಮಾಡುವ ಪರಿಯದು.  ಸಂಭಾಷಣೆಗಳು ಪುನರಾವರ್ತನೆಯಾಗದ, ಅನಾವಶ್ಯಕವಾಗಿ ಧೀರ್ಘವಾಗದಿರುವ  ಎಚ್ಚರಬೇಕು. 

ಸ್ವತ: ಕೀರ್ತನಾಕಾರರಾಗಿ ಪ್ರಸಿದ್ಧರಾಗಿರುವ ಮಂಗಳ ಅವರ ಪೌರಾಣಿಕ ಕಥಾ ಪ್ರಪಂಚದ ಅರಿವಿನ ಹರಿವು ವಿಶಾಲವಾದುದೇ. ಮಾತು, ಹಾಡುಗಳ ಮೂಲಕವೇ ಪ್ರೇಕ್ಷರ ಮನೋಲೋಕದಲ್ಲಿ ದ್ರಶ್ಯಗಳನ್ನು ಬಿತ್ತರಿಸುವ ಅನುಪಮ ಸಾಮರ್ಥ್ಯ ಕೀರ್ತನಕಾರರದ್ದು. ಈ ಸಾಮರ್ಥ್ಯದ ಝಲಕನ್ನು ಈ ಸೊಗಸಾದ ನಾಟಕ ರಚನೆಯಲ್ಲೂ ಗಮನಿಸಬಹುದು.

ಆರೋಹಿ ಪೌರಾಣಿಕ ಹಿನ್ನೆಲೆಯದ್ದಾದರೂ ಸಮಕಾಲೀನವಾಗಿಯೂ ಒಂದೊಳ್ಳೆ  ನಾಟಕ. ಸೃಜನಶೀಲ ನಿರ್ದೇಶಕರ ಕೈಯಲ್ಲಿ ಇದರ ರಂಗ ಪ್ರಯೋಗವಾದರೆ ಪ್ರೇಕ್ಷಕರಿಗೆ ದ್ರಶ್ಯಕಾವ್ಯದ ಅನುಭವ ನೀಡುವುದರಲ್ಲಿ ಸಂಶಯವಿಲ್ಲ.

‍ಲೇಖಕರು Admin R

6 March, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading