
ಮೂಲ – ವಿನೋದ್ ಕುಮಾರ್ ಶುಕ್ಲಾ
ವಿನೋದ್ ಕುಮಾರ್ ಶುಕ್ಲಾ ಅವರು ಸಮಕಾಲೀನ ಹಿಂದಿ ಸಾಹಿತ್ಯದ ಪ್ರಸಿದ್ಧ ಬರಹಗಾರ ಮತ್ತು ಕವಿ. ಶುಕ್ಲಾ ಅವರು ತಮ್ಮ ಕಾವ್ಯ, ಕಾದಂಬರಿಗಳು ಮತ್ತು ಸಣ್ಣ ಕಥೆಗಳ ಮೂಲಕ ಹಿಂದಿ ಸಾಹಿತ್ಯ ಜಗತ್ತಿನಲ್ಲಿ ತಮ್ಮದೆ ಸ್ವಂತ ಅಸ್ಮಿತೆಯನ್ನು ಸ್ಥಾಪಿಸಿದ್ದಾರೆ. ಅವರು ತಮ್ಮ ವಿಶಿಷ್ಟ ಬರವಣಿಗೆಯ ಶೈಲಿ, ಆಳವಾದ ಸಂವೇದನೆ ಮತ್ತು ಸರಳ ಭಾಷೆಯಲ್ಲಿ ಗೂಢ ಭಾವನೆಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯಕ್ಕೆ ಖ್ಯಾತಿಪಡೆದಿದ್ದಾರೆ.
ವಿನೋದ್ ಕುಮಾರ್ ಶುಕ್ಲಾ ಜನವರಿ 1, 1937 ರಂದು ಛತ್ತೀಸ್‌ಗಢದ ರಾಜನಂದಗಾಂವ್‌ನಲ್ಲಿ ಜನಿಸಿದರು. ಪ್ರಾರಂಭೀಕ ಶಿಕ್ಷಣವನ್ನು ಅಲ್ಲಿಯೇ ಪಡೆದರು ಮತ್ತು ನಂತರ ನಾಗ್ಪುರ್ ವಿಶ್ವವಿದ್ಯಾಲಯದಿಂದ ಎಂ.ಎ. (ಹಿಂದಿ) ಪದವಿ ಪಡೆದರು. ಅವರ ಆರಂಭಿಕ ಜೀವನವನ್ನು ಸರಳ ಗ್ರಾಮೀಣ ಪರಿಸರದಲ್ಲಿ ಕಳೆದರು, ಇದು ಅವರ ಬರವಣಿಗೆಗೆ ಆಳ ಮತ್ತು ಸ್ವಂತಿಕೆಯನ್ನು ನೀಡಿತು. ಕಾವ್ಯ ಮತ್ತು ಕಾದಂಬರಿಗಳನ್ನು ಮಿಶ್ರಣ ಮಾಡುವ ಮೂಲಕ, ಅವರು ಓದುವಿಕೆಗೆ ಧಕ್ಕೆಯಾಗದಂತೆ ಅದ್ಭುತ, ಆನಂದ ಮತ್ತು ಕಾಳಜಿಗಳು ಸಹಬಾಳ್ವೆ ನಡೆಸುವ ವಿಶಿಷ್ಟ ಭಾಷೆಯನ್ನು ರಚಿಸಿದರು. ಅವರು ಹತ್ತು ಕವನ ಸಂಕಲನಗಳು, ಆರು ಸಣ್ಣ ಕಥೆಗಳ ಸಂಗ್ರಗಳು ಮತ್ತು ಆರು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಅವರು ಮಕ್ಕಳ ಮತ್ತು ಯುವ ಸಾಹಿತ್ಯದಲ್ಲಿ ಕೃತಿಗಳನ್ನು ಸಹ ರಚಿಸಿದ್ದಾರೆ. ಅವರ ಕೃತಿಗಳನ್ನು ಪ್ರಪಂಚದ ಬಹುತೇಕ ಎಲ್ಲಾ ಪ್ರಮುಖ ಭಾಷೆಗಳಿಗೆ ಅನುವಾದಿಸಲಾಗಿದೆ. ಗಜಾನನ್ ಮಾಧವ್ ಮುಕ್ತಿಬೋಧ್ ಫೆಲೋಶಿಪ್, ರಾಷ್ಟ್ರೀಯ ಮೈಥಿಲಿಶರಣ್ ಗುಪ್ತ ಪ್ರಶಸ್ತಿ, ಶಿಖರ್ ಸಮ್ಮಾನ್ (ಮಧ್ಯಪ್ರದೇಶ ಸರ್ಕಾರ), ಹಿಂದಿ ಗೌರವ್ ಸಮ್ಮಾನ್ (ಉತ್ತರ ಪ್ರದೇಶ ಹಿಂದಿ ಸಂಸ್ಥಾನ), ರಜಾ ಪ್ರಶಸ್ತಿ, ದಯಾವತಿ ಮೋದಿ ಕವಿ ಶೇಖರ್ ಪ್ರಶಸ್ತಿ, ರಘುವೀರ್ ಸಹಾಯ್ ಸ್ಮಾರಕ ಪ್ರಶಸ್ತಿ ಮತ್ತು “ದೀವಾರ್ ಮೆಂ ಎಕ್ ಖಿಡ್ಕಿ ರಹ್ತಿ ಥಿ”-ಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. 2024 ಸಾಲಿನ ಭಾರತೀಯ ಸಾಹಿತ್ಯದ ಸರ್ವೋಚ್ಛ ಸನ್ಮಾನವಾದ ಜ್ಞಾನಪೀಠ ಪ್ರಶಸ್ತಿಗಾಗಿ ಅವರ ಹೆಸರನ್ನು ಘೋಷಿಸಲಾಗಿದೆ. ವಿನೋದ್ ಕುಮಾರ್ ಶುಕ್ಲಾ ಅವರಿಗೆ ಅಂತರರಾಷ್ಟ್ರೀಯ ಸಾಹಿತ್ಯದಲ್ಲಿನ ಸಾಧನೆಗಳಿಗಾಗಿ 2023 ರ ಪ್ರತಿಷ್ಠಿತ ಪೆನ್/ನಬೋಕೋವ್ ಪ್ರಶಸ್ತಿಯನ್ನು ನೀಡಲಾಗಿದೆ. “ಕೇವಲ್ ಜಡೇಂ ಹೈ” (ಬೇರುಗಳು ಮಾತ್ರ ಉಳಿದಿವೆ) ಹೆಸರಿನ ಕವನ ಸಂಕಲನ ಅವರ ಇತ್ತೀಚಿನ ಪ್ರಕಟನೆ.
ವಿನೋದ್ ಕುಮಾರ್ ಶುಕ್ಲಾ ಹಿಂದಿ ಸಾಹಿತ್ಯದಲ್ಲಿ ಸಾಧಾರಣ ವಿಷಯಗಳಲ್ಲಿ ಅಸಾಧಾರಣತೆಯನ್ನು ಹುಡುಕುವ ಕೆಲವೇ ಬರಹಗಾರರಲ್ಲಿ ಒಬ್ಬರು. ಅವರ ಬರಹಗಳು ಜೀವನದ ಸೂಕ್ಷ್ಮ ಅಂಶಗಳನ್ನು ಸೆರೆಹಿಡಿಯುತ್ತವೆ ಮತ್ತು ಓದುಗರನ್ನು ವಿಶಿಷ್ಟ ಸಾಹಿತ್ಯಿಕ ಅನುಭವದಲ್ಲಿ ತೊಡಗಿಸುತ್ತವೆ. ಅವರ ಅಭಿವ್ಯಕ್ತಿಯ ಸರಳತೆ ಮತ್ತು ಆಳವಾದ ಸೂಕ್ಷ್ಮತೆಯು ಹಿಂದಿ ಸಾಹಿತ್ಯದಲ್ಲಿ ಅವರಿಗೆ ವಿಶೇಷ ಸ್ಥಾನವನ್ನು ನೀಡುತ್ತದೆ.
ಕನ್ನಡಕ್ಕೆ – ಎಸ್ ಜಯಶ್ರೀನಿವಾಸ ರಾವ್
ಎಸ್. ಜಯಶ್ರೀನಿವಾಸ ರಾವ್ ಅವರು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ ಪದ್ಯಗಳನ್ನು ಅನುವಾದ ಮಾಡುತ್ತಾರೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿಗಳಲ್ಲಿ ಒಂದಾದ ರೊದ್ದ ವ್ಯಾಸರಾವ್ ವೆಂಕಟರಾವ್ ವಿರಚಿತ ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು ಹಾಗೂ ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನಕ್ಕಾಗಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.
ಕೇರೂರ ವಾಸುದೇವಾಚಾರ್ಯರ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಸ್ವರಚಿತ ಶರ್ಲಾಕ್ ಹೋಮ್ಸ್ ಕತೆಯನ್ನು ಹಾಗೂ ದೀಪಾ ಹಿರೇಗುತ್ತಿಯವರ ತಪ್ತ ಎಂಬ ಕತೆಯನ್ನು ಸಹ ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಕನ್ನಡದ ಮೇರು ಕವಿ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ,’ ‘ಮ್ಯೂಜ಼್ ಇಂಡಿಯ,’ ಹಾಗೂ ‘ಮೈದಾನಂ’-ನಲ್ಲಿ ಪ್ರಕಟವಾಗಿವೆ.
ಜಯಶ್ರೀನಿವಾಸರು ಕನ್ನಡಕ್ಕೆ ಅನುವಾದ ಮಾಡಿದ ಖ್ಯಾತ ವಿದೇಶಿ ಕವಿಗಳ ಕವನಗಳು ಕನ್ನಡ ಸಾಹಿತ್ಯ ಪತ್ರಿಕೆಗಳಾದ ಭಾಷಾ ಭಾರತಿ, ಅವಧಿ, ಕೆಂಡಸಂಪಿಗೆ, ಋತುಮಾನ, ಅಕ್ಷರ ಸಂಗಾತ, ಹಾಗೂ ಮಿಂಚುಳ್ಳಿ-ಯಲ್ಲಿ ಪ್ರಕಟವಾಗಿವೆ.
ಜಯಶ್ರೀನಿವಾಸರು ಕನ್ನಡಕ್ಕೆ ಅನುವಾದಿಸಿದ ಪೋಲಂಡ್ ದೇಶದ ಕವನಗಳ ಸಂಕಲನ, “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು’,” ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗವು ಏಪ್ರಿಲ್ 2022-ರಲ್ಲಿ ಪ್ರಕಟಿಸಿತು. “ಬಾಲ್ಟಿಕ್ ಕಡಲ ಗಾಳಿ” ಎಂಬ ಹೆಸರಿನಲ್ಲಿ ಇವರು ಕನ್ನಡಕ್ಕೆ ಅನುವಾದ ಮಾಡಿದ ಎಸ್ಟೋನಿಯಾ, ಲ್ಯಾಟ್ವಿಯಾ, ಹಾಗೂ ಲಿಥುವೇನಿಯಾ ದೇಶದ ಕವನಗಳ ಸಂಕಲನವನ್ನು ಮಸ್ಕಿಯ ಬಂಡಾರ ಪ್ರಕಾಶನವು ಡಿಸೆಂಬರ್ 2024-ರಲ್ಲಿ ಪ್ರಕಟಿಸಿತು.
‘ದ ಹಿಂದು’ ದಿನಪತ್ರಿಕೆಯು ಇವರು ಇಂಗ್ಲಿಷಿನಲ್ಲಿ ಬರೆದ ಕನ್ನಡ ಅರುಣೋದಯ ಸಾಹಿತ್ಯದ ಮೇಲಿನ 15 ಲೇಖನಗಳ ಸರಣಿಯನ್ನು ಜನವರಿ-ಡಿಸೆಂಬರ್ 2020-ರ ಅವಧಿಯಲ್ಲಿ ಪ್ರಕಟಿಸಿತ್ತು. ಜಯಶ್ರೀನಿವಾಸ ರಾವ್ ಅವರು ಕನ್ನಡ ಅರುಣೋದಯ ಸಾಹಿತ್ಯ ಹಾಗೂ ಅನುವಾದ ವಿಷಯಗಳ ಬಗ್ಗೆ ಬರೆದ ಪ್ರಬಂಧಗಳು ದೇಶದ ಹೆಸರಾಂತ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಹೈದರಾಬಾದಿನ CIEFL-ನಲ್ಲಿ (ಈಗ The EFL University) PGDES ಹಾಗೂ M.Phil. ಪದವಿಗಳನ್ನು ಪಡೆದು, ಅದೇ ವಿಶ್ವವಿದ್ಯಾಲಯದಲ್ಲಿ ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003-ರಲ್ಲಿ PhD ಪದವಿ ಪಡೆದವರು.
—
1.ಗೋಡೆಯಲ್ಲೊಂದು ಕಿಟಕಿ ಇರುತ್ತಿತ್ತು (ಹಿಂದಿ ಮೂಲ: ದೀವಾರ್ ಮೆ ಎಕ್ ಖಿಡ್ಕಿ ರಹತಿ ಥಿ)
ಗೋಡೆಯಲ್ಲೊಂದು ಕಿಟಕಿ ಇರುತ್ತಿತ್ತು,
ಒಂದು ಗುಡಿಸಲು, ಎರಡು ಕಾಲುದಾರಿ, ಒಂದು ನದಿ,
ಮತ್ತೆ ಒಂದೆರಡು ಕೊಳಗಳು ಇರುತ್ತಿದ್ದವು.
ಒಂದು ಆಕಾಶದ ಜತೆಯಲ್ಲಿ ಎಲ್ಲರ ಇರುವು.
ಜನರ ಬರೋಣ-ಹೋಗೋಣ ಆಗಾಗ ಇರುತ್ತಿತ್ತು,
ಮರಗಳು, ಹಕ್ಕಿಗಳು ಇರುತ್ತಿದ್ದವು,
ಕಿಟಕಿಯಿಂದಾಗಿ ಎಲ್ಲವೂ ಇರುತ್ತಿದ್ದವು,
ಇಲ್ಲದೆ ಇದ್ದಿದ್ದರೆ ಕಿಟಕಿ ತೆರೆದಿರಲಾರದು,
ಇರುವುದರಿಂದ ಕಿಟಕಿ ತೆರೆದಿರುತ್ತದೆ.
ಕಿಟಕಿಯಿಂದಾಚೆಗೆ ಗೋಡೆಯಲ್ಲಿ ಮನುಷ್ಯನೊಬ್ಬ ಇರುತ್ತಿದ್ದ.
2.ಅದು ನನ್ನದೇ ವಿಳಾಸವಾಗಿರುತ್ತೆ (ಹಿಂದಿ ಮೂಲ: ವೊ ಮೇರಾ ಹಿ ಪತಾ ಹೋತಾ ಹೈ)
ಕವಿತೆ ಬರೆಯುವಾಗ
ನನ್ನ ಧ್ಯಾನ ಇಹದಲ್ಲೇ ಇರುತ್ತೆ.
ಬರೆಯುವಾಗ ಯಾರೋ ಮನೆಯ
ಮುಚ್ಚಿದ ಬಾಗಿಲನ್ನು ತಟ್ಟಿದರೆ
ನನಗೆ ಕೇಳಿಸುತ್ತೆ,
ಹೋಗಿ ಬಾಗಿಲು ತೆರೆಯುತ್ತೇನೆ.
ಇದು ನಿಜ ವಿಷಯ,
ಯಾರೋ ಒಬ್ಬರು ಬಂದಿರುವರು,
ಯಾರದೋ ಮನೆಯ ವಿಳಾಸ
ಕೇಳಲು ಬಂದಿರಬಹುದು,
ನನ್ನ ಮನೆಯೇ ಎದುರಿಗೆ ಕಂಡಿರಬಹುದು,
ಬಂದು ನನ್ನ ಬಾಗಿಲು ತಟ್ಟಿರುವರು.
ಮತ್ತೆ ಈ ವಿಷಯವೂ ನಿಜ,
ನಾನು ಬಾಗಿಲು ತೆರೆದಾಗ
ಕವಿತೆಯು ಇದೇ ಹುಷಾರಿನಿಂದ ಬರುತ್ತೆ,
ಮತ್ತೆ ನಾನು ವಿಳಾಸ ಹೇಳಿದಾಗ
ಅದು ನನ್ನದೇ ವಿಳಾಸವಾಗಿರುತ್ತೆ.
3.ಬೆಳಗಾಗಿದೆ (ಹಿಂದಿ ಮೂಲ: ಸುಬಹ್ ಹೈ)
ಬೆಳಗಾಗಿದೆ
ಜೀವಮಾನದ ಬೆಳಗ್ಗೆ ಇದು
ಈ ಆಜೀವನ ಬೆಳಗ್ಗಿನ ಬೆಳ್ಳಂಬೆಳಗೆ ನಾನು
ಆ ಮುದುಕಿಯಿಂದ ಕಾಯಿಪಲ್ಲೆಯಾದರೂ ಕೊಳ್ಳೋಣವೆಂದು ಹೊರಟೆ
ಅವಳ ಜತೆ ಚೌಕಾಸಿ ಮಾಡಲ್ಲ ನಾನು
ಪಾಲಕ್ ಸೊಪ್ಪು ರೂಪಾಯಿಗೆ ಹತ್ತು ಕಟ್ಟು ಅಂತಾಳೆ
ಆದರೆ ಎಣಿಸಿ ಕೊಡುವಾಗ ಹನ್ನೆರಡು ಕೊಟ್ಟುಬಿಡುತ್ತಾಳೆ
ನಾನು ಆ ಎರಡು ಕಟ್ಟುಗಳನ್ನು ಸ್ವೀಕರಿಸಲು ನಿರಾಕರಿಸುವೆ
ಅಜ್ಜಿ, ನೀನು ಹೆಚ್ಚು ಕೊಟ್ಟಿದ್ದಿ
ಕೋಪ ಬರುತ್ತೆ ಅವಳಿಗೆ ಆಗ
ಮಾರಲ್ಲ ನಿನಗೆ ನಾನು ಎಂದು
ಎಲ್ಲ ಪಾಲಕ್ ಕಟ್ಟುಗಳನ್ನು ವಾಪಸ್ ಕೊಡಲು ಹೇಳುತ್ತಾಳೆ
ಸೋತು ಮೋಸ ಹೋದ ನಾನು
ಹತ್ತರ ಬದಲು ಹನ್ನೆರಡು ಕಟ್ಟುಗಳನ್ನು ತೆಗೆದುಕೊಂಡು ಹೋಗುವೆ
ಎರಡು ದಿನಗಳ ಎರಡು ಬೆಳಗ್ಗೆಗಳನ್ನು ಹೆಚ್ಚಾಗಿ ಪಡೆಯುತ್ತೇನೆ
ಇದೇ ಜನ್ಮದಲ್ಲಿ ಎರಡು ಜನ್ಮಗಳ ಜೀವನ ಪಡೆಯುತ್ತೇನೆ.
4.ಧವಳಗಿರಿಯನ್ನು ನೋಡಿ (ಹಿಂದಿ ಮೂಲ: ಧೌಲಾಗಿರಿ ಕೊ ದೇಖ್‌ಕರ್)
ಧವಳಗಿರಿಯನ್ನು ನೋಡಿ
ನೆನಪಾಯಿತು ನನಗೆ
ಧವಳಗಿರಿಯ ಚಿತ್ರ,
ಎಕೆಂದರೆ ಚಿತ್ರವನ್ನು ಮೊದಲು ನೋಡಿದ್ದೆ ನಾನು.
ಪಿತಾಮಹ ಪೂರ್ವಜರ ಚಿತ್ರಗಳು ಸಹ ಮನೆಯಲ್ಲಿವೆ,
ಪುರ್ವಜರನ್ನು ನಾನು ಎಂದೂ ನೋಡಿದ್ದಿಲ್ಲ,
ಪೂರ್ವಜರನ್ನಲ್ಲ, ಪುರ್ವಜರ ಚಿತ್ರಗಳನ್ನು ನೆನಪಿಸಿಕೊಳ್ಳುವೆ ನಾನು.
ಆದರೆ, ಧವಳಗಿರಿಯನ್ನು ನೋಡಿದ ನಂತರ
ನನ್ನ ಪೂರ್ವಜರ ಚಿತ್ರಗಳನ್ನಲ್ಲ,
ಪೂರ್ವಜರನ್ನು ನೆನಪಿಸಿಕೊಳ್ಳುವೆ ನಾನು.
ಧವಳಗಿರಿ ಪರ್ವತವು (Dhaulagiri Mountain) 8167 ಮೀ. (26,795 ಅಡಿ) ಎತ್ತರವಿದ್ದು ವಿಶ್ವದ ಏಳನೆಯ
ಅತ್ಯುನ್ನತ ಶಿಖರವಾಗಿದೆ. ಹಿಮಾಲಯ ಪರ್ವತಶ್ರೇಣಿಯ ಉಪಸರಣಿಯಾದ ಧವಳಗಿರಿ ಹಿಮಾಲ್-ನ
ಪೂರ್ವದಂಚಿನಲ್ಲಿ ನೇಪಾಳದ ಉತ್ತರಮಧ್ಯಭಾಗದಲ್ಲಿ ಈ ಪರ್ವತವಿದೆ. ಕಾಳಿ ಗಂಡಕಿಯ ಆಳವಾದ ಕೊಳ್ಳದ
ಒಂದು ಮಗ್ಗುಲಲ್ಲಿರುವ ಧವಳಗಿರಿಯು ಕೊಳ್ಳದ ಇನ್ನೊಂದು ಮಗ್ಗುಲಲ್ಲಿರುವ ಅನ್ನಪೂರ್ಣಾ ಪರ್ವತಕ್ಕೆ
ಹೊಂದಿರುವಂತೆ ಕಾಣುತ್ತದೆ. ಹೀಗೆ 8000 ಮೀಟರಗಳಿಗೂ ಎತ್ತರವಾಗಿರುವ ಎರಡು ಪರ್ವತಗಳು
ಒಂದಕ್ಕೊಂದು ಅಂಟಿದಂತೆ ಕಾಣುವ ನೋಟ ಜಗತ್ತಿನಲ್ಲಿಯೇ ಅದ್ವಿತೀಯ ಮತ್ತು ಅದ್ಭುತ. ಧವಳಗಿರಿ ಎಂಬ
ಹೆಸರಿನ ಅರ್ಥ ‘ಶ್ವೇತಪರ್ವತ’ ಎಂಬುದಾಗಿದೆ.
5.ಯಾರು ಎಂದೂ ಬರುವುದಿಲ್ಲವೋ ನನ್ನ ಮನೆಗೆ (ಹಿಂದಿ ಮೂಲ: ಜೊ ಮೆರೆ ಘರ್ ಕಭೀ ನಹೀಂ ಆಯೇಂಗೆ)
ಯಾರು ಎಂದೂ ಬರುವುದಿಲ್ಲವೋ ನನ್ನ ಮನೆಗೆ,
ಅವರನ್ನು ಭೇಟಿಯಾಗಲು
ಅವರ ಬಳಿ ಹೋಗುವೆ ನಾನು.
ಉಬ್ಬಿಹರಿಯುವ ನದಿಯೊಂದು
ಎಂದೂ ಬರುವುದಿಲ್ಲ ನನ್ನ ಮನೆಗೆ,
ನದಿಯಂತಹ ಮಂದಿಯನ್ನು ಭೇಟಿಯಾಗಲು
ನದಿತೀರಕ್ಕೆ ಹೋಗುವೆ ನಾನು,
ತುಸು ಈಜುವೆ ನಂತರ ಮುಳುಗುವೆ.
ಬೆಟ್ಟ ಗುಡ್ಡಗಳು, ಬಂಡೆ ಕೆರೆಗಳು,
ಅಸಂಖ್ಯಾತ ಮರಗಳು, ಹೊಲಗಳು
ಎಂದೂ ಬರುವುದಿಲ್ಲ ನನ್ನ ಮನೆಗೆ.
ಹೊಲಗದ್ದೆಗಳಂತಹ ಮಂದಿಯನ್ನು ಭೇಟಿಯಾಗಲು
ಹಳ್ಳಿ ಹಳ್ಳಿಗೆ, ಅಡವಿ ಓಣಿಗಳೊಳಗೆ ಹೋಗುವೆ ನಾನು.
ಯಾರು ನಿರಂತರ ಕೆಲಸದಲ್ಲಿರುವರೋ,
ಅವರನ್ನು ಬಿಡುವಿದ್ದಾಗ ಅಲ್ಲ
ಒಂದು ಅಗತ್ಯದ ಕೆಲಸದ ಹಾಗೆ
ಭೇಟಿಯಾಗುತ್ತಲಿರುವೆ ನಾನು –
ಇದನ್ನು ನನ್ನ ಏಕೈಕ ಕೊನೆಯ ಅಸೆಯಂತೆ
ಎಲ್ಲಕ್ಕಿಂತ ಮೊದಲ ಅಸೆಯನ್ನಾಗಿ ಮಾಡಲು ಬಯಸುವೆ.
6.ನಾನೊಬ್ಬನೇ ಮಾನುಷನಿಲ್ಲಿ (ಹಿಂದಿ ಮೂಲ: ಮಾನುಷ್ ಮೈ ಹೀ ಹೂಂ)
ನಾನೊಬ್ಬನೇ ಮಾನುಷನಿಲ್ಲಿ
ಈ ಏಕಾಂತ ಕಣಿವೆಯಲ್ಲಿ.
ಇಲ್ಲಿ ನಾನು ಮನುಷ್ಯನ
ಆದಿಮ ಅನುಭೂತಿಯಲ್ಲಿ
ಉಸಿರಾಡುವೆನು.
ಒಂದು ಕಲ್ಲನ್ನು ಹುಡುಕಿ ಎತ್ತಿಕೊಳ್ಳುತ್ತಾ
ಶಿಲಾಯುಗದ ಕಲ್ಲೊಂದನ್ನು ಎತ್ತಿಕೊಳ್ಳುವೆ.
ಜುಳುಜುಳು ಹರಿಯುವ ನದಿಯ ತಣ್ಣನೆಯ ನೀರನ್ನು
ಅಂಗೈಯಲ್ಲಿ ಹಿಡಿದು ಕುಡಿದು
ನೀರಿನ ಪ್ರಾಕ್ತನ ಸ್ವಾದವ ಪಡೆಯುವೆ.
ನದಿಯ ದಡದಲ್ಲಿ ನಡೆಯುತ್ತಾ
ಇತಿಹಾಸವನ್ನು ನೆನೆದುಕೊಳ್ಳುತ್ತಾ
ಭೂಗೋಲದ ಕಾಲುದಾರಿಯೊಂದನ್ನು ಕಾಣುವೆ.
ಸಂಜೆಯ ಮೊದಲ ನಕ್ಷತ್ರವನ್ನು
ನಾನೊಬ್ಬ ಮಾತ್ರ ನೋಡುವೆ.
ಸುತ್ತಲೂ ನಿಸರ್ಗ ಹಾಗೂ ನಿಸರ್ಗದ ಧ್ವನಿಗಳು.
ನಾನು ಏನನ್ನಾದರೂ ಹೇಳುವುದಾದರೆ
ನನ್ನ ಭಾಷೆಯೆಂದು ಹೇಳಲ್ಲ
ಮನುಜ ದನಿಯೆಂದು ಹೇಳುವೆ.
7.ಕಾಡಿನ ಹಗಲುದ್ದ ಚಾಚಿದ ನಿಶ್ಶಬ್ದತೆಯಲ್ಲಿ (ಹಿಂದಿ ಮೂಲ: ಜಂಗಲ್ ಕೆ ದಿನಭರ್ ಕೆ ಸನ್ನಾಟೆ ಮೆ)
ಕಾಡಿನ ಹಗಲುದ್ದ ಚಾಚಿದ ನಿಶ್ಶಬ್ದತೆಯಲ್ಲಿ
ಮಹುವಾ ಹೂಗಳು ಹನಿಯುವ ಶಬ್ದ ಕೇಳಿಬರುತ್ತೆ.
ಸಂಜೆಯ ಪ್ರತಿಯೊಂದು ಹನಿಸದ್ದಿನ ಜತೆಗೆ
ಇನ್ನೊಂದು ನಕ್ಷತ್ರ ಕಾಣಿಸತೊಡಗುತ್ತೆ,
ಆಕಾಶದಲ್ಲಿ ನಕ್ಷತ್ರಗಳು ಹನಿದ ಹಾಗೆ,
ಹೀಗೆ ಆಕಾಶ ತುಂಬಿಬಿಡುತ್ತೆ,
ಕಾಡು ತುಂಬಿಬಿಟ್ಟಂತೆ.
ಆದಿವಾಸಿ ಹುಡುಗಿಯರು, ಹುಡುಗರು, ಹೆಂಗಸರು,
ಅವರವರ ಬುಟ್ಟಿಗಳೊಂದಿಗೆ ಮಹುವಾ ಹೂಗಳ ಹೆಕ್ಕಲು
ಹೊತ್ತಾರೆ ಎದ್ದು ಬೆಳಕಿನ ಜತೆಗೆ
ಕಾಡಿನಲ್ಲಿ ಹರಡುತ್ತಾರೆ.
ಆದಿವಾಸಿ ಹುಡುಗಿಯೊಬ್ಬಳು
ಮಹುವಾ ಹೂಗಳ ಹೆಕ್ಕುತ್ತಾ ಹೆಕ್ಕುತ್ತಾ
ಒಂದು ಹುಲಿಯನ್ನು ನೋಡುತ್ತಾಳೆ,
ಕಾಡಿನಲ್ಲಿ ಒಂದು ಹುಲಿ ಕಂಡ ಹಾಗೆ.
ಹುಲಿಯು ಆದಿವಾಸಿ ಹುಡುಗಿಯನ್ನು
ಅದೇ ತರಹ ನೋಡುತ್ತೆ,
ಕಾಡಿನಲ್ಲಿ ಒಬ್ಬ ಆದಿವಾಸಿ ಹುಡುಗಿ ಕಂಡ ಹಾಗೆ,
ಕಾಡಿನಲ್ಲಿ ಹಕ್ಕಿಗಳು ಕಂಡ ಹಾಗೆ,
ಚಿಟ್ಟೆಗಳು ಕಂಡ ಹಾಗೆ.
ಮತ್ತೆ, ಹುಲಿಯು ಎಂದಿನಂತೆಯೆ
ಆಕಳಿಸುತ್ತಾ ಒಣಗಿದ ಎಲೆಗಳ
ಮೇಲೆ ಹರವಿಕೊಳ್ಳುತ್ತೆ.
ಒಬ್ಬಂಟಿ ಆದಿವಾಸಿ ಹುಡುಗಿಯೊಬ್ಬಳು
ದಟ್ಟವಾದ ಕಾಡಿನೊಳಗೆ ಹೋಗುವುದಕ್ಕೆ ಹೆದರುವುದಿಲ್ಲ,
ಹುಲಿ ಸಿಂಹಗಳಿಗೆ ಹೆದರುವುದಿಲ್ಲ.
ಆದರೆ, ಮಹುವಾ ಹೂಗಳನ್ನು ಹೊತ್ತು
ಗೀದಮ್ ಊರಿನ ಸಂತೆಗೆ ಹೋಗುವುದಕ್ಕೆ ಹೆದರುತ್ತಾಳೆ.
ಸಂತೆಯ ದಿನವಿದು,
ಮಹುವಾ ಬುಟ್ಟಿಗಳನ್ನು ತಲೆಯ ಮೇಲೆ
ಅಥವಾ ಕಾವಡಿಯಲ್ಲಿ ಹೊತ್ತುಕೊಂಡು
ಕಾಡಿನ ಅಕಡೆ ಈಕಡೆಯಿಂದ,
ಬೆಟ್ಟದ ಮೇಲಿಂದ ಇಳಿದು
ಸರಳ ಸಹಜ ವನವಾಸಿ ಜನರು
ಮರದ ಕೆಳಗೆ ಸೇರುತ್ತಾರೆ,
ಒಟ್ಟಾಗಿ ಸಂತೆಗೆ ಹೋಗುತ್ತಾರೆ.






0 Comments