– ಎಚ್ ಕೆ ಶರತ್
ಸಂಜೆ ಜೊತೆ ಎಷ್ಟು ಹರಟುವುದು? ಭಾವ ಲೋಕದ ಕದ ತೆರೆದುಕೊಂಡು ಎಷ್ಟೊತ್ತು ಕೂರುವುದು? ನೆನಪುಗಳ ಬುತ್ತಿ ಬಿಚ್ಚಿಟ್ಟುಕೊಂಡು ಉಂಡದ್ದನ್ನೇ ಎಲ್ಲಿವರೆಗೂ ಮೆಲುಕು ಹಾಕುವುದು?
ಒಳಗಿಳಿಯದೇ ಹೋದರೆ ಬದುಕೇ ಕ್ಷುಲ್ಲಕವೆನಿಸುವುದು ಭಾವುಕತೆಯ ದೌರ್ಬಲ್ಯವೋ ಅಥವಾ ಬದುಕಿನ ಕಹಿ ವಾಸ್ತವವೋ?
ಈ ಕ್ಷಣ ಇರುವ ನಿಟ್ಟುಸಿರು ಹೀಗೆ ಕಣ್ತೆರೆದುಕೊಂಡು ಕುಳಿತಿರುವುದೆಂದು ಹೇಗೆ ನಂಬುವುದು? ಸಂತಸ ಕಣ್ಮುಚ್ಚಲು, ಶೋಕ ಕಣ್ತೆರೆಯಲು ಬೇಕಾಗುವ ಕಾಲವಾದರೂ ಎಷ್ಟು?
‘ಬದುಕು ಹಾದಿ ತಪ್ಪಬೇಕು. ಹಾದರದ ಅಡ್ಡೆಗಳಲ್ಲೂ ಅಲೆಯಬೇಕು. ಮಗುವಾಗಿ ಅರಳುವ ಮನಸ್ಸು ಮೃಗವಾಗಿ ಬೆಳೆದು ನಿಲ್ಲಬೇಕು. ಎಲ್ಲರನ್ನೂ ಆಳಬೇಕು. ಎಲ್ಲವನ್ನೂ ನೋಡಬೇಕು. ಜೀವನ ಸಂಕ್ಷಿಪ್ತವಾದರೂ ವಿಕ್ಷಿಪ್ತವಾಗಿರಬೇಕು…’
ಇದು ಆಧುನಿಕತೆ ನಮಗೆ ಬೋಧಿಸುತ್ತಿರುವ ಬದುಕಿನ ಪಾಠವಾ? ಬದುಕಿನ ಕ್ಷಣಿಕತೆಗೆ ಬೆಚ್ಚಿ ಬೀಳುವುದರಿಂದ ಪಾರಾಗಲು ನಾವು ಕಂಡುಕೊಂಡ ಉಪಾಯವೇ ಸ್ವೇಚ್ಛಾಚಾರವಾ?

ಆಚಾರ-ಅನಾಚಾರ ಎನ್ನುವುದೆಲ್ಲ ನಮ್ಮ ಗ್ರಹಿಕೆಗೆ ತಕ್ಕಂತೆ ಪಥ ಬದಲಿಸುವ ವಿಚಾರವಲ್ಲವೇ? ಜಾತಿ ಮೀರಿ ನಿಲ್ಲುವುದು, ಪರಸ್ಪರ ಒಪ್ಪಿಗೆಯ ಮೇಲೆ ದೈಹಿಕ ಕಾಮನೆಗಳನ್ನು ಹೊತ್ತು ಮೆರೆಸುವುದು ಅನಾಚಾರವೇ?
ಹುಟ್ಟು-ಸಾವೆಂಬ ಎರಡು ಅನಿರೀಕ್ಷಿತ ವಿದ್ಯಮಾನಗಳ ನಡುವಲ್ಲಿ ಘಟಿಸುವ ಬದುಕಿಗೆ ಆಚಾರ-ಅನಾಚಾರಗಳ ಕಟ್ಟುಪಾಡಾದರೂ ಏಕೆ ಬೇಕು?
ನಾವು ಒಂಟಿಯಾದಾಗ ನಮ್ಮನ್ನು ಸಲಹಬೇಕಿರುವುದು ನಮ್ಮೊಳಗಿನ ನಮ್ಮತನವೇ ಅಲ್ಲವೇ? ಇಷ್ಟವಾದುದನ್ನು ಯಾರಿಗೂ ಕಷ್ಟ ನೀಡದೇ ಮಾಡಿಕೊಂಡು ಹೋಗುವುದರಲ್ಲಿ ಬದುಕಿನ ಸಾರ್ಥಕತೆ ಅಡಗಿಲ್ಲವೇ? ತನಗಿಷ್ಟವಾದ ಹುಡುಗಿಯನ್ನು ಮದುವೆಯಾದರೆ… ಅದನ್ನೊಪ್ಪದ ಅವನ ತಂದೆ-ತಾಯಿ ಗೋಳಿಟ್ಟರೆ ತಪ್ಪು ಯಾರದು?
ನಮ್ಮ ಬದುಕು ಹೀಗೆಲ್ಲ ಹೊಸ ದಾರಿ ಹಿಡಿಯಲು ಕಾರಣವಾದರೂ ಏನು? ತಿರುವುಗಳಿಲ್ಲದ ರಸ್ತೆಯಲ್ಲಿ ನಡೆಯುತ್ತಿದ್ದರೆ ಗುರಿ ಮುಟ್ಟುವ ಹಂಬಲವಾದರೂ ಎಲ್ಲಿ ಹುಟ್ಟುತ್ತದೆ?
ನಾವು ಅಡ್ವೆಂಚರ್ ಅಂದುಕೊಂಡು ಬೆಟ್ಟ ಗುಡ್ಡ ಹತ್ತಿ ಇಳಿಯುತ್ತೇವೆ. ಅದೇ ನಮ್ಮ ಸಾಹಸಗಾಥೆ ಮನುಷ್ಯತ್ವದ ಎದೆಗೆ ಚೂರಿ ಇರಿಯುವ ಅನಿಷ್ಟ ಆಚಾರಗಳನ್ನು ತೊಲಗಿಸುವುದರೆಡೆಗೆ ವಿಸ್ತರಣೆಗೊಂಡರೆ ಅರ್ಥಪೂರ್ಣವಲ್ಲವೇ?
ಚಿಂತನೆಗಳು ಚದುರಿ ಹೋದಂತೆ ಬದುಕು ವಿಸ್ತಾರವಾಗುತ್ತ ಹೋಗುವುದು ಸುಳ್ಳೇ? ಎಲ್ಲವೂ ಇದ್ದಂತೆಯೇ ಇದ್ದುಬಿಟ್ಟರೆ ನಮ್ಮನ್ನು ತಟ್ಟುವುದಾದರೂ ಏನು?
ನೆಲೆ ಕಾಣದ ಪ್ರಶ್ನೆಗಳಿಗೆ ನೆಲೆ ಕಲ್ಪಿಸಲು ಹೊರಡುವುದು ಕೇವಲ ಹುಚ್ಚುತನವಷ್ಟೇ ಅಲ್ಲ. ಅದಕ್ಕೂ ಮೀರಿದ ಮತ್ತಿನ್ನೇನೊ ಇರಬಹುದೇನೋ?
ಗೊಂದಲದ ನೆಲದ ಮೇಲೆ ಅಗೆದಷ್ಟೂ ಅರ್ಥಗಳು…






0 Comments