ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ವಾಹನಗಳಿಗೆ ಬೇಕಾದ ತೈಲ ಮಾರುತ್ತಿರುವ ಸಿದ್ದು ದೇವರಮನಿ ಕವಿತೆ ಬರೆಯುವ ಹುಡುಗ. ಬಿ ಕಾಂ ಓದಿ ಅದೇಗೋ ಕಾವ್ಯದ ಸ್ನೇಹಕ್ಕೆ ಕೈ ಚಾಚಿದ ಈ ಹುಡುಗ ಬೆರಗಾಗುವಂತೆ ಬರೆಯುತ್ತಿದ್ದಾನೆ. ಯುದ್ಧ ಬೇಕು ಎನ್ನುವವರಿಗೆ ಅವನ ಉತ್ತರ ಇಷ್ಟೇ ಅಂತಹವರನ್ನು ನನ್ನ ಅಂಗಡಿಗೆ ಕಳಿಸಿಕೊಡಿ-ಇಲ್ಲಿ ಕೆಲಸಗಳಿವೆ ಅಂತ. ಸಿದ್ದು ಕೊಟ್ಟೂರಿನ ಗೆಳೆಯರ ಮಧ್ಯೆಯೇ ಅರಳುತ್ತಾ ಕಾವ್ಯ ಬರವಣಿಗೆ ರೂಪಿಸಿಕೊಂಡವನು. ಸಿದ್ದು ಬ್ಲಾಗ್ ಅಂಗಳಕ್ಕೂ ಬಂದಿದ್ದಾರೆ. ಆಯುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ ..
ಗೆಳೆತನ ಮನುಷ್ಯರನ್ನಾಗಿಸಲಿ.. ಕವಿತೆಯನ್ನು ಬರೆದ ಅವರನ್ನು ಸ್ವಾಗತಿಸುತ್ತಾ ಅವರ ಒಂದು ಕವಿತೆ ನಿಮಗಾಗಿ-
– ಸಿದ್ದು ದೇವರಮನಿ
ಯುದ್ದವೆ೦ದರೆ ಅಜ್ಞಾನ
ಯುದ್ದವೆ೦ದರೆ ಅಸಹ್ಯ
ಅದು ಕತ್ತಲ ಸೃಷ್ಟಿಸುವ ಬರೋಬ್ಬರಿ ಬೆಳಕು !
ಕದನಗಳು ಕಲಹಗಳನ್ನಲ್ಲದೆ ಕನಸುಗಳನ್ನು
ಹುಟ್ಟುಹಾಕಿದ್ದು ನನಗೆ ಈವರೆಗೂ ನೆನಪಿಲ್ಲ.
ಯುದ್ದದಲ್ಲಿ ಏನಾದರೂ ಪಾತ್ರಗಳು ಸಿಕ್ಕರೆ
ಅದು ನನ್ನ ಪ್ರತಿರೋಧ ಮಾತ್ರ.
ಕನಸುಗಳನ್ನು ಹೊತ್ತು
ಕಣ್ ಬಿಟ್ಟ ಕೂಸು ನಾನು..
ಇಲ್ಲಿ ನನಗೆ ಮನುಷ್ಯರೊ೦ದಿಗೆ ಮಾತ್ರ ಗೆಳೆತನವಿದೆ.
ಹೆಚ್ಚೇನು ಹೇಳಲಾರೆ
ಯುದ್ದವೇ ಕೊನೆಯ ನಿಧಾ೯ರ
ಎ೦ದೆನ್ನುವ ಎಲ್ಲರನ್ನು ಕಳಿಸಿಕೊಡಿ
ನಮ್ಮ೦ಗಡಿಯಲ್ಲಿ ಕೆಲಸಗಳು ಖಾಲಿ ಇವೆ.
ಹಗೆತನಗಳನ್ನು ಮರೆತು ಮನುಷ್ಯರಾಗಲಿ.
ಚಿತ್ರ : Anti-war painting by Keith Haring in Berlin






ಈ ತರದ ಮೀಡಿಯಗೆ ನನ್ನ ಕರೆತ೦ದ, ಕ್ಯೂಬ ಆಸಕ್ತಿ ಹಚ್ಚಿಸಿದ ನಿಮ್ಮ ಋಣ ದೊಡ್ಡದಿದೆ..
ಥ್ಯಾ೦ಕ್ಸ್ ಸರ್..