-ನಿರ್ಮಲಾ ನಿಶೆ
ಗೆಳೆತನ
ನಾನು ನಿರ್ಮಲ ನೀನು ಆರೀಫಾ
ಆಡಿಕೊಳ್ಳುವರು ನಮ್ಮನು ನೋಡುತಾ
ಅವರ ನಡುವೆಯೇ ನಾವಿರುವುದು
ಗೆಳೆತನ ನಡೆಯಿತು ಎಲ್ಲವ ಮರೆತು
ನಿನ್ನ ಬಟ್ಟೆಯ ಉಟ್ಟೆನು ನಾನು
ತೊಟ್ಟೆ ನೀ ನನ್ನಯ ಕಾಲ್ಮರಿಯನು
ಅವರಿವರೆಲ್ಲಾ ಮೂಗು ಮುರಿದರು
ಮೂಗಿನಬೊಟ್ಟು ಹೊಳೆದವು ನಕ್ಕು
ಉರ್ದು ಕಲಿತೆ ನಿನ್ನಲಿ ನಾನು
ಮೊಳೆಯಿತು ಕನ್ನಡ ನಿನ್ನೊಳು ತಾನೇ
ಗೆಳತಿಯರೆಲ್ಲ ಇಟ್ಟರು ದೂರಕೆ
ಹತ್ತಿರವಾದೆವು ಇನ್ನೂ ನಾವು
ಇಷ್ಟಪಡುವೆ ನೀ ಎಣಗಾಯಿ ರೊಟ್ಟಿ
ಜೊಲ್ಸುರಿಸುವೆ ನಾ ಬಿರಿಯಾನಿ ಅನ್ನಕೆ
ಗದರಿಕೆ ಖಾಯಂ ಇಬ್ಬರ ಮನೆಯಲಿ
ಗರಿಗೆದರಿತು ಸ್ವಯಂ ಬಂಧವು ನಮ್ಮಲಿ
ಎಲ್ಲೆಲ್ಲಿಯೂ ಇಂದು ಮುಸ್ಲಿಂ ಹಿಂದೂ
ಕೇಳುತ ಧರ್ಮವ ಹೊಡೆವರು ಗುಂಡು
ಜಗದಲಿ ತುಂಬಿದೆ ಜಾತಿಯ ಹೆಸರು
ನಮ್ಮೊಳಗಿರುವುದು ಒಂದೇ ಉಸಿರು






0 Comments