ಗೆರೆಗಳಲ್ಲಿ ಸಂಗೀತ ಹಾಡುವ ನಂಜುಂಡ ಸ್ವಾಮಿ!

ಸಂಕೇತದತ್ತ

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್ ಆವರಣದ ಕಲಾ ಗ್ಯಾಲರಿಯ ಗೋಡೆ ಗೋಡೆಗಳಿಂದ ಸಂಗೀತವು ಮೊಳಗಲಿವೆ. ಇಲ್ಲಿಯ ಭಿತ್ತಿಗಳು ವೈ ಎಸ್ ನಂಜುಂಡಸ್ವಾಮಿ ಅವರು ರಚಿಸಿರುವ ಖ್ಯಾತ ಸಂಗೀತಗಾರರ ವ್ಯಂಗ್ಯಭಾವಚಿತ್ರಗಳನ್ನು ತಗುಲಿಸಿಕೊಂಡಿವೆ. ಸಂಗೀತಗಾರರ ವಿಭಿನ್ನ ಭಂಗಿಗಳ ಎಪ್ಪತ್ತು ಕ್ಯಾರಿಕೇಚರ್‍ಗಳ ಪ್ರದರ್ಶನವು ಇದೇ ಜುಲೈ 3ರ ಬೆಳಗ್ಗೆ 10-30ಕ್ಕೆ ಖ್ಯಾತ ಸಂಗೀತತಜ್ಞೆ ಟಿ ಎಸ್ ಸತ್ಯವತಿ ಅವರಿಂದ ಉದ್ಘಾಟನೆಯಾಗಲಿದೆ. ನಾಡಿನ ಖ್ಯಾತ ಹಾಸ್ಯ ವಾಗ್ಪಟು ವೈ ವಿ ಗುಂಡುರಾವ್, ಖ್ಯಾತ ವ್ಯಂಗ್ಯಚಿತ್ರಕಾರ ಬಿ ಜಿ ಗುಜ್ಜಾರಪ್ಪ, ಪಂಡಿತ್ ಪ್ರವೀಣ್ ಗೋಡ್ಕಿಂಡಿ ಹಾಗೂ ವಿದ್ವಾನ್ ಆನೂರು ಅನಂತಶರ್ಮಾ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ.

ಉದ್ಘಾಟನೆಯ ನಂತರ ಗ್ಯಾಲರಿಯ ಪಕ್ಕದಲ್ಲಿರುವ ವಾಡಿಯಾ ಸಭಾಂಗಣದಲ್ಲಿ ಖ್ಯಾತ ಕೊಳಲು ವಾದಕ ಪಂಡಿತ್ ಪ್ರವೀಣ್ ಗೋಡ್ಕಿಂಡಿ, ಮೃದಂಗ ವಿದ್ವಾನ್ ಆನೂರು ಅನಂತ ಶರ್ಮಾ ಹಾಗೂ ತಬಲ ವಿದ್ವಾನ್ ಪಂಡಿತ್ ಕಿರಣ್ ಗೋಡ್ಕಿಂಡಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ವ್ಯಂಗ್ಯಭಾವಚಿತ್ರ ಪ್ರದರ್ಶನದೊಂದಿಗೆ ಸಂಗೀತ ಕಾರ್ಯಕ್ರಮವೂ ಇದ್ದು ಚಿತ್ರ-ಸಂಗೀತಗಳ ಸಮ್ಮಿಲನವಾಗಲಿದೆ. ಈ ಕ್ಯಾರಿಕೇಚರ್‍ಗಳ ಪ್ರದರ್ಶನವು ಜುಲೈ 10 ರವರೆಗೆ ನಡೆಯಲಿದ್ದು ವರ್ರ್ಡ್ ಕಲ್ಚರ್ ಸಂಸ್ಥೆಯವರು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಕನ್ನಡನಾಡಿನ ವ್ಯಂಗ್ಯಚಿತ್ರ ಲೋಕದಲ್ಲಿ ಹೊಸ ಪ್ರಯೋಗಗಳನ್ನು ಮಾಡುವ ಹುರುಪಿನ ವ್ಯಕ್ತಿಯ ಆಗಮನವಾಗಿದೆ. ರಾಗ-ತಾಳ-ಭಾವಗಳಲ್ಲಿ ಹಾಡು ಹೊರಹೊಮ್ಮಿಸಿ ಕಿವಿಗೆ ಇಂಪು ನೀಡುವುದು ಸಂಗೀತವಾದರೇ, ವೈ ಎಸ್ ನಂಜುಂಡಸ್ವಾಮಿ ಅವರು ಇದೇ ರಾಗ-ತಾಳ-ಭಾವಗಳನ್ನು ತಮ್ಮ ಲಾಲಿತ್ಯ ರೇಖೆಗಳಿಂದ ಹೊರ ಹೊಮ್ಮಿಸಿದ್ದಾರೆ. ಈ ಮೂಲಕ ಗೆರೆಗಳಲ್ಲಿ ಸಂಗೀತದ ನಿನಾದ ಹೊಮ್ಮಿಸುತ್ತಿದ್ದಾರೆ!

ವ್ಯಂಗ್ಯಭಾವಚಿತ್ರ ಎಂಬ ಶೈಲಿಗೆ ನೈಜ ಚಿತ್ರದ ಟಚ್ ನೀಡುವ ಮೂಲಕ ಭಾರತದ ಸುಪ್ರಸಿದ್ಧ ಸಂಗೀತಕಾರರ ಎಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳನ್ನು ರಚಿಸಿದ್ದಲ್ಲದೇ ಪಟ್ಟಿ ಇನ್ನೂ ಬೆಳೆಯುತ್ತಿದೆ. ಇವು ಯಥಾವತ್ತಾದ ಚಿತ್ರದಂತೆಯೇ ಕಾಣುತ್ತಿದ್ದು ವ್ಯಂಗ್ಯಭಾವಚಿತ್ರದ ಗುಣಗಳನ್ನು ಹೊಂದಿವೆ. ವಿಭಿನ್ನ ಬಣ್ಣಗಳಲ್ಲಿ ಹೊರ ಹೊಮ್ಮಿರುವ ಈ ಚಿತ್ರಗಳನ್ನು ನೋಡುವುದೇ ಒಂದು ಸೊಗಸು!

ಆಯಾಯ ಸಂಗೀತರಕಾರರ ವೈಶಿಷ್ಟ್ಯತೆ ಹಾಗೂ ಅವರ ಪ್ರತಿಭೆಯನ್ನು ಬಲ್ಲವರಿಗೆ ಸ್ವಾಮಿ ಅವರ ಚಿತ್ರಗಳು ಅವರವರದೇ ಸಂಗೀತವನ್ನು ಕಿವಿಗೆ ಕೇಳಿಸುತ್ತೆ. ಚಿತ್ರಗಳನ್ನು ಕಣ್ಣಲ್ಲಿ ನೋಡುತ್ತಿದ್ದರೂ ಕಿವಿಗೆ ಆನಂದವನ್ನು ಉಂಟು ಮಾಡುತ್ತದೆ. ಉದಾಹರಣೆಗೆ ಕುನ್ನುಕುಡಿ ವೈದ್ಯನಾಥನ್ ಅವರ ಚಿತ್ರವನ್ನು ನೋಡುತ್ತಿದ್ದರೆ ಅವರದೇ ಪಿಟೀಲಿನಿಂದ ಹೊರಹೊಮ್ಮುವ ನಿನಾದ ನಮ್ಮ ಕಿವಿಗಳಿಗೆ ಕೇಳುತ್ತಿರುತ್ತದೆ. ಅಷ್ಟು ಲಾಲಿತ್ಯಭರಿತವಾದ ರೇಖೆ ಹಾಗೂ ಪಿಟೀಲು ನುಡಿಸುವ ವೈಖರಿಯು ನೋಡುಗನ ಕಣ್ಣಿಗೆ ಕಟ್ಟಿ, ಮನಕೆ ಮುದ ನೀಡುತ್ತದೆ. ಹೀಗೆ ಒಬ್ಬರೇ ನೂರಾರು ಸಂಗೀತಗಾರರ ವ್ಯಂಗ್ಯಭಾವಚಿತ್ರಗಳನ್ನು ರಚಿಸಿರುವುದು ಬಹುಶಃ ಇದೇ ಮೊದಲಿರಬೇಕು. ಇವರ ಕುಂಚದಿಂದ ಹೊರ ಹೊಮ್ಮಿರುವ ಎಲ್ಲವೂ ಒಂದೊಂದು ರತ್ನಗಳಂತಿದ್ದು `ಮಾಸ್ಟರ್ ಪೀಸ್’ಗಳೇ ಆಗಿವೆ! ಇವರ ಈ ಸಾಧನೆಯು ಗಿನ್ನೇಸ್ ದಾಖಲೆಗೂ ಸೇರಬಹುದು!

ಈ ಪ್ರದರ್ಶನದ ಕುರಿತು ನಂಜುಂಡಸ್ವಾಮಿ ಅವರನ್ನು ಮಾತಾಡಿಸಿದಾಗ….

ಯಾರ್ಯಾರ ವ್ಯಂಗ್ಯಭಾವಚಿತ್ರಗಳನ್ನು ರಚಿದ್ದೀರಿ?
– ಚೆಂಬೈ ವೈದ್ಯನಾಥನ್, ವೀಣೆ ಶೇಷಣ್ಣ ಹಾಗೂ ಇತ್ತೀಚಿನ ಸಂಜಯ್ ಸುಬ್ರಹ್ಮಣ್ಯನ್‍ವರೆಗೆ ಮೂರು ತಲೆಮಾರಿನ ಸಂಗೀತಗಾರರ ಚಿತ್ರಗಳನ್ನು ರಚಿಸಿದ್ದೀನಿ. ಪ್ರಮುಖವಾಗಿ ವೀಣೆ ಶೇಷಣ್ಣ, ಎಮ್ಮೆಸ್ ಸುಬ್ಬಲಕ್ಷ್ಮೀ, ಭೀಮಸೇನ್ ಜೋಷಿ, ಬಾಲಮುರಳಿ, ಗಂಗೂಬಾಯಿ ಹಾನಗಲ್, ಲಾಲ್ ಗುಡಿ ಬಿ ಜಯರಾಮನ್, ಯೇಸುದಾಸ್, ಸಂಗೀತಾಕಟ್ಟಿ ಹೀಗೆ ಹಲವು ಸಂಗೀತ ವಿದ್ವಾಂಸರ ಪಟ್ಟಿಯೇ ಇದೆ. ಇನ್ನೂ ಹಲವರ ಚಿತ್ರಗಳನ್ನು ನಿರಂತರವಾಗಿ ರಚಿಸುತ್ತಿದ್ದೇನೆ.

ಸಂಗೀತಕಾರರನ್ನೇ ಹೆಚ್ಚು ಬರೆಯಲು ಕಾರಣವೇನು?
ಕಲಾವಿದರೂ ಹಾಗೂ ವಾಗ್ಗೇಯಕಾರರೂ ಆಗಿದ್ದ ತಂದೆ ವೈ ಕೆ ಶ್ರೀಕಂಠಯ್ಯ ಅವರೇ ನನಗೆ ಸ್ಫೂರ್ತಿ. ಅಲ್ಲದೆ ಈಗ ಬರೆದಿರುವ ಸಂಗೀತಗಾರರಲ್ಲಿ ಹಲವಾರು ಕಲಾವಿದರು ನಮ್ಮ ಮನೆಗೇ ಬರುತ್ತಿದ್ದರು. ಅವರನ್ನು ಹತ್ತಿರದಿಂದ ನೋಡಿ ಬಲ್ಲವನಾಗಿದ್ದೀನಿ. ಅಲ್ಲದೇ ಕೆಲವರು ನಿಕಟ ಸಂಪರ್ಕದಲ್ಲಿಯೂ ಇದ್ದಾರೆ. ಅಂತಹ ಸಂಗೀತದ ವಾತಾವರಣವೇ ಹೀಗೆ ಸಂಗೀತಗಾರರನ್ನು ಇಷ್ಟ ಪಟ್ಟು ಬರೆಯಲು ಸಾಧ್ಯವಾಗಿದೆ.

ಈ ಕ್ಯಾರಿಕೇಚರ್‍ಗಳನ್ನು ಪ್ರದರ್ಶನದ ವಿಶೇಷತೆ ಏನು?
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್ ಸಂಸ್ಥೆಯವರಿಗೆ ದೊಡ್ಡ ಹೆಸರಿದೆ. ಎಪ್ಪತ್ತೈದು ವರ್ಷಗಳ ಇತಿಹಾಸವಿದೆ. ಸಾಹಿತ್ಯ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ ಈ ಸಂಸ್ಥೆಯವರು ಇತ್ತೀಚಿಗೆ ಚಿತ್ರ ಹಾಗೂ ವ್ಯಂಗ್ಯಚಿತ್ರಗಳ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದಾರೆ. ನಾಡಿ ಸಾಂಸ್ಕøತಿಕ ಕ್ಷೇತ್ರಕ್ಕೆ ಈ ಸಂಸ್ಥೆಯ ಕೊಡುಗೆ ಸಾಕಷ್ಟಿದೆ. ಹೀಗೆ ನೇರಾನೇರ ಸಂಗೀತಾಸಕ್ತರಲ್ಲಿಗೇ ಇವುಗಳನ್ನು ಪ್ರದರ್ಶಿಸುವುದು ಖುಷಿಯ ಸಂಗತಿ. ಇಂತಹ ಸಂಗೀತಪ್ರೇಮಿಗಳ ಸಮ್ಮುಖದಲ್ಲಿ ಸಂಗೀತಗಾರರ ವ್ಯಂಗ್ಯಭಾವಚಿತ್ರ ಪ್ರದರ್ಶನಗೊಂಡಿದ್ದು ವಿಭಿನ್ನ ಪ್ರಯೋಗವಾಗಿದೆ. ಇಲ್ಲಿನ ಕಲಾಪ್ರೇಮಿಗಳಿಗೆ ಈ ಪ್ರದರ್ಶನವು ಆನಂದ ತಂದರೆ ನನ್ನ ಶ್ರಮ ಸಾರ್ಥಕವಾಗುತ್ತದೆ.

ಈ ಕ್ಯಾರಿಕೇಚರ್ ರಚನೆಗೆ ಎಷ್ಟು ದಿನಗಳು ಬೇಕು?
ಕ್ಯಾರಿಕೇಚರ್ ರಚನೆಗೆ ಕೂತರೆ ಅದನ್ನು ಒಂದೇ ಸಿಟಿಂಗ್‍ನಲ್ಲಿ ಮಾಡಿ ಮುಗಿಸುತ್ತೇನೆ. ಆಗಷ್ಟೇ ಅದಕ್ಕೇ ಒಂದು ಸುಂದರ ರೂಪ ಸಿಗುತ್ತದೆ. ಏಕಾಗ್ರತೆ ಮುಖ್ಯವಷ್ಟೇ!

ಸಂಗೀತಗಾರರಲ್ಲದೇ ಮತ್ತಿನ್ಯಾವ ರಂಗದವರ ಚಿತ್ರಗಳನ್ನು ರಚಿಸಿದ್ದೀರಿ?
ಸಂಗೀತ ಕ್ಷೇತ್ರಕ್ಕಷ್ಟೇ ಸೀಮಿತವಾಗಿಲ್ಲ. ಎಲ್ಲಾ ರಂಗದವರ ಚಿತ್ರಗಳನ್ನು ರಚಿಸುತ್ತಿದ್ದೀನಿ. ಖ್ಯಾತರಾಗಿದ್ದರೆ ಸಾಕು ಯಾವ ಕ್ಷೇತ್ರವಾದರೂ ಚಿಂತೆಯಿಲ್ಲ. ಬರೆಯುವುದಷ್ಟೇ ನನ್ನ ಕೆಲಸ.

ಯಾವುದಾದರೂ ಕ್ಯಾರಿಕೇಚರ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೀರಾ? ಪ್ರಶಸ್ತಿಗಳೇನಾದರೂ ಬಂದಿದೆಯಾ?
ಹೌದು, ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ಯಾರಿಕೇಚರ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೀನಿ. ಹಲವಾರು ಪ್ರಶಸ್ತಿಗಳೂ ಲಭಿಸಿವೆ. ಪಿ ವಿ ನರಸಿಂಹ ರಾವ್ ಜನ್ಮಶತಮಾನೋತ್ಸವದ ಸ್ಮರಣಾರ್ಥ ನಡೆದ ಅಂತಾರಾಷ್ಟ್ರೀಯ ಕ್ಯಾರಿಕೇಚರ್ ಸ್ಪರ್ಧೆಯಲ್ಲಿ ಭಾರತೀಯರಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದು ನನಗೆ ಹೆಚ್ಚು ಖುಷಿ ಕೊಟ್ಟಿದೆ. ಅಲ್ಲದೇ ಅಂತಾರಾಷ್ಟ್ರೀಯ ಕ್ಯಾರಿಕೇಚರ್ ಸ್ಪರ್ಧೆಯಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದೀನಿ. ಅಲ್ಲಿಯೂ ಸಾಕಷ್ಟು ಬಾರಿ ಆಯ್ಕೆಗಳಾಗಿವೆ. ಪುರಸ್ಕಾರಗಳು ಲಭಿಸಿವೆ. ನೋಡುಗ ಮೆಚ್ಚಿ `ವಾವ್’ ಎಂದರೆ ಸಾಕು, ಅದೇ ಅದ್ಭುತ ಪ್ರಶಸ್ತಿ-ಪುರಸ್ಕಾರ!

ತಮ್ಮ ಹುಟ್ಟೂರಿಗೂ ಈ ಕಲೆಗೂ ನಂಟಿದೆಯಾ? ಯಾರ ಪ್ರಭಾವ ತಮ್ಮ ಮೇಲಾಗಿದೆ?
ಹುಟ್ಟೂರು ಶಿವಮೊಗ್ಗ, ಸಾಂಸ್ಕøತಿಕ ಹಿನ್ನೆಲೆಯ ಊರು. ಅಲ್ಲದೇ ನನ್ನ ತಂದೆಯೇ ನನಗೆ ಸ್ಪೂರ್ತಿ. ನನ್ನ ತಂದೆಯವರು ವಾಗ್ಗೇಯಕಾರರಲ್ಲದೇ ಚಿತ್ರಕಾರರೂ ಆಗಿದ್ದರು. ನನಗೆ ಗೊತ್ತಿಲ್ಲದೇ ಅವರ ಪ್ರಭಾವ ನನ್ನ ಮೇಲೆ ಆಗಿರಬಹುದು. ಅವರಿಗೆ ನಮ್ಮ ನಾಡಿನ ಹೊರಗೂ ದೊಡ್ಡ ಹೆಸರಿತ್ತು. ಮನೆಗೆ ಬರುತ್ತಿದ್ದವರೆಲ್ಲಾ ಸಂಗೀತ ಹಾಗೂ ಕಲಾಲೋಕದ ದಿಗ್ಗಜರುಗಳೇ ಆಗಿರುತ್ತಿದ್ದರು. ಹಾಗಾಗಿ ಬಾಲ್ಯದಲ್ಲಿಯೇ ಸಂಗೀತ ಹಾಗೂ ಚಿತ್ರಕಲೆಗಳೆರಡೂ ಒಗ್ಗಿ ಹೋಗಿತ್ತ್ತು. ತಂದೆಯೇ ನನ್ನ ಕಲಾಭ್ಯಾಸದ ಮೊದಲ ಗುರು. ಹಾಗಾಗಿ ತಂದೆಯವರಲ್ಲಿದ್ದ ಎರಡೂ ಕಲೆಗಳು ಮಿಳಿತಗೊಂಡು ಈ ಮಟ್ಟಕ್ಕೆ ಬರಲು ಕಾರಣವಾಗಿದೆ.

ಕಲಾಭ್ಯಾಸಗಳೇನಾದರು ಆಗಿದೆಯಾ?
ತಂದೆಯವರು ಸ್ಫೂರ್ತಿಯಾಗಿದ್ದರು. ಆದರೆ ಶಿಲ್ಪಿ ಕೆ ಜ್ಞಾನೇಶ್ವರ್ ಅವರ ಬಳಿ ಶಾಸ್ತ್ರಬದ್ಧವಾಗಿ ಹಾಗೂ ಕ್ರಮಬದ್ಧವಾಗಿ ಕಲೆಯನ್ನು ಕಲಿತೆ. ಕಲಾಮಾಧ್ಯಮದಲ್ಲಿ ತೊಡಗಿಕೊಂಡು ವಾಣಿಜ್ಯಕಲೆಯನ್ನು ರೂಢಿಸಿಕೊಂಡಿದ್ದೆ. ಹಲವು ಪ್ರಕಾರಗಳಲ್ಲಿ ಕಲಾ ರಚನೆಗಳನ್ನು ಮಾಡುವ ಸಂದರ್ಭಗಳಲ್ಲಿ ಶಿವಮೊಗ್ಗದ ಖ್ಯಾತ ಕಲಾವಿದರಾದ ಮೇಗವರಳ್ಳಿ ಸುಬ್ರಹ್ಮಣ್ಯ, ಜೇಮ್ಸ್‍ವಾಜ್ ಹಾಗೂ ರಾಮಧ್ಯಾನಿ ಮತ್ತಿತರರೊಂದಿಗೆ ನಿಕಟ ಸಂಪರ್ಕವು ನನ್ನ ಏಳಿಗೆಗೆ ಕಾರಣವಾಯಿತು.

ಬೆಂಗಳೂರಿಗೆ ಬಂದು ಖ್ಯಾತರಾಗಿದ್ದು ಹೇಗೆ?
ನನ್ನ ಐವತ್ತನೇ ವರ್ಷದಲ್ಲಿ ಪ್ರಿಂಟ್‍ಮೀಡಿಯಾದಲ್ಲಿ ವೃತ್ತಿ ಮಾಡುವ ಸಲುವಾಗಿ ಬೆಂಗಳೂರಿಗೆ ಬಂದೆ. ಪ್ರವೃತ್ತಿಗಾಗಿಯಷ್ಟೇ ಕಾರ್ಟೂನ್ ಅನ್ನು ಆಯ್ಕೆ ಮಾಡಿಕೊಂಡೆ. `ಹಾಗೇ ಸುಮ್ಮನೆ’ ಎಂಬಂತೆ ಆರಂಭಿಸಿದ ಈ ಕಾರ್ಟೂನ್ ಹಾಗೂ ಕ್ಯಾರಿಕೇಚರ್‍ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾ ಬಂದೆ. ನನಗೇ ಗೊತ್ತಿರದೇ ನನ್ನಲ್ಲಿ ಅಡಗಿದ್ದ ಹೊಸ ಶೈಲಿಯನ್ನು ಮೊದಲು ಗುರುತಿಸಿ ಪ್ರೋತ್ಸಾಹಿಸಿದವರು ಮೇಗರವಳ್ಳಿ ಸುಬ್ರಹ್ಮಣ್ಯ ಅವರು. ಆನಂತರದಲ್ಲಿ ಗುಜ್ಜಾರ್ ಅವರ ನಿಟಕ ಸಂಪರ್ಕವಾಯ್ತು. ಚಿತ್ರ ರಚನೆಯ ಸಮಯದಲ್ಲಿ ಅವರಿಂದ ಕರಾರುವಕ್ಕಾದ ಮಾಹಿತಿಗಳನ್ನು ಪಡೆಯುತ್ತಿದ್ದೇನೆ. ಇಂತಹ ಅವಕಾಶವು ಸಿಕ್ಕಿದ್ದು ನನ್ನ ಅದೃಷ್ಟ. ಗುಜ್ಜಾರ್ ಅವರಲ್ಲದೇ ನಾಡಿನ ಖ್ಯಾತ ವ್ಯಂಗ್ಯಚಿತ್ರಕಲಾವಿದರಾದ ವಿಆರ್‍ಸಿ ಶೇಖರ್, ಪ್ರಕಾಶ್ ಶೆಟ್ಟಿ ಹಾಗೂ ನಾಗನಾಥ್ ಹಾಗೂ ಹಲವಾರು ಹಿರಿ-ಕಿರಿಯ ವ್ಯಂಗ್ಯಚಿತ್ರಕಾರರು ನನ್ನನ್ನು ಬೆಳೆಸುತ್ತಿದ್ದಾರೆ.

ಸಾಮಾಜಿಕ ಜಾಲದೊಂದಿಗೆ ಪತ್ರಿಕೆಗಳಿಗೂ ಎಂಟ್ರಿ ಕೊಟ್ಟಿದ್ದು ಹೇಗೆ?
ಹಿರಿಯ ಕಲಾವಿದ ಜೇಮ್ಸ್‍ವಾಜ್ ಅವರು ನನ್ನ ವ್ಯಂಗ್ಯಚಿತ್ರಗಳನ್ನು ತರಿಸಿಕೊಂಡು `ತರಂಗ’ ಪತ್ರಿಕೆಯಲ್ಲಿ ಪ್ರಕಟಿಸಿದರು. ಅಲ್ಲದೇ ನಿರಂತರ ಉತ್ತೇಜಿಸುತ್ತಲ್ಲೇ ಬಂದಿದ್ದಾರೆ. `ವೈಎಸ್‍ಎನ್’ ಎಂಬ ಪೆನ್‍ನೇಮ್‍ನಿಂದ `ನಂಜುಂಡ ಸ್ವಾಮಿ’ಗೆ ಬಡ್ತಿ ಕೊಟ್ಟಿದ್ದು ಈ ಜೇಮ್ಸ್‍ವಾಜ್ ಅವರೇ!

ಏಕವ್ಯಕ್ತಿ ವ್ಯಂಗ್ಯಚಿತ್ರ ಪ್ರದರ್ಶನದ ಆರಂಭ ಹೇಗೆ?
ಹಿರಿಯ ವ್ಯಂಗ್ಯಚಿತ್ರಕಾರರಾದ ನರೇಂದ್ರ ಅವರ ಮಾರ್ಗದರ್ಶನದಿಂದ ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ನನ್ನದೊಂದು ವ್ಯಂಗ್ಯ ಭಾವಚಿತ್ರ ಪ್ರದರ್ಶನ ಏರ್ಪಡಿಸಲು ಸಹಕಾರಿಯಾಯ್ತು. ನರೇಂದ್ರ ಅವರೇ ಇದಕ್ಕೆಲ್ಲಾ ಕಾರಣ. ದೇಶ-ವಿದೇಶಗಳ ಖ್ಯಾತ ವ್ಯಂಗ್ಯಚಿತ್ರಕಾರರ ಕಾರ್ಟೂನ್‍ಗಳನ್ನು ಪ್ರದರ್ಶಿಸುವ ಈ  ಪ್ರತಿಷ್ಠಿತ ಗ್ಯಾಲರಿಯಲ್ಲಿ ನನ್ನ ಕಾರ್ಟೂನ್‍ಗಳೂ ಪ್ರದರ್ಶನವಾಯ್ತು. ನನ್ನ ಸುಯೋಗವಷ್ಟೇ!

ಇಂತಹ ವಿಭಿನ್ನ ಕ್ಯಾರಿಕೇಚರ್‍ಗಳ ರಚನೆಗೆ ಪ್ರೋತ್ಸಾಹ ಹೇಗಿದೆ?
ಆರು ವರ್ಷಗಳಲ್ಲಿಯೇ ಸಾವಿರಾರು ಕಾರ್ಟೂನ್‍ಗಳನ್ನೂ, ಕ್ಯಾರಿಕೇಚರ್‍ಗಳನ್ನೂ ರಚಿಸಲು ನನಗೆ ಸಿಕ್ಕಿರುವ ಪ್ರೋತ್ಸಾಹವು ಅಷ್ಟಿಷ್ಟಿಲ್ಲ. ಮಡದಿ ಮಂಜುಳಾ ಹಾಗೂ ಮಗ ಪ್ರಣವ್ ಅವರೇ ನೇರ ವಿಮರ್ಶಕರಾಗಿದ್ದು ತಿದ್ದುವ ಕಾರ್ಯ ಮನೆಯಿಂದಲೇ ಆರಂಭಗೊಂಡಿದೆ. ವ್ಯಂಗ್ಯಚಿತ್ರ ಕ್ಷೇತ್ರದ ಎಲ್ಲಾ ಸಹೃದಯರು ನನ್ನ ವ್ಯಂಗ್ಯ ಚಿತ್ರಗಳನ್ನು ಮೆಚ್ಚಿ ಪೂರಕ ಪ್ರತಿಕ್ರಿಯೆ ಹಾಗೂ ಸೂಕ್ತ ಸಲಹೆ-ಸೂಚನೆಗಳನ್ನು ನೀಡುತ್ತಾ ಬೆಳೆಸುತ್ತಿದ್ದಾರೆ. ಅವರ ಪ್ರೋತ್ಸಾಹವೇ ನನಗೆ ಶ್ರೀರಕ್ಷೆ. ಇನ್ನೂ ಹೆಚ್ಚೆಚ್ಚು ಪ್ರಯೋಗಾತ್ಮಕ ಪ್ರಯತ್ನಗಳನ್ನು ಮಾಡಬೇಕಿದೆ.

‍ಲೇಖಕರು Admin

July 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: