ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಲಾಮಗಿರಿಯ ದಿನಗಳು

ಗೊರೂರು ಶಿವೇಶ್

(ಅಮೆರಿಕಾದಲ್ಲಿ ಗುಲಾಮಿಜನರ ಉದ್ಧಾರಕ್ಕಾಗಿ ಶ್ರಮಿಸಿದ ಫ್ರೆಡ್ರಿಕ್ ಡೊಗ್ಲಾಸ್ನ ಆತ್ಮಚರಿತ್ರೆಯ ಪುಟಗಳಿಂದ )


ನಾನು ಹುಟ್ಟಿದ್ದು ಮೇರಿಲ್ಯಾಂಡ್ನ ಚಾಲ್ಬಾಟ್ ಪ್ರಾಂತ್ಯದ ಈಸ್ಟನ್ ನಿಂದ ಹನ್ನೆರಡು ಮೈಲು ದೂರದ ಹಿಲ್ತ್ಬೋರ್ನ ಸಮೀಪದ ಟ್ಯುಕಾ ಹೊನಲ್ಲಿ. ನನ್ನ ವಯಸ್ಸಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದಾಖಲೆಗಳಿಲ್ಲದ ಕಾರಣ ನನ್ನ ಸರಿಯಾದ ವಯಸ್ಸಿನ ಅರಿವು ನನಗಿಲ್ಲ. ಬಹುತೇಕ ಅಲ್ಲಿನ ಗುಲಾಮರಿಗೆ ಅವರ ವಯಸ್ಸಿನ ಅರಿವು ಕುದುರೆಗಳಿಗೆ ತಮ್ಮ ವಯಸ್ಸಿನ ಅರಿವಿರುವಷ್ಟೆ. ನನಗೆ ಅನಿಸುತ್ತಿದ್ದದ್ದು ಬಹುತೇಕ ಯಜಮಾನರಿಗೆ ತಮ್ಮ ಗುಲಾಮರು ತಮ್ಮ ವಯಸ್ಸಿನ ಬಗ್ಗೆ ಕಡಿಮೆ ತಿಳಿದಿದ್ದಷ್ಟು ಅನುಕೂಲವೆಂದು. ನಾನು ಭೇಟಿ ಮಾಡಿದ ಯಾವುದೇ ಗುಲಾಮನು ತನ್ನ ಹುಟ್ಟಿದ ದಿನವನ್ನು ಹೇಳಿದ್ದ ಕಾಣೆ. ಅವರು ಬೀಜಬಿತ್ತುವ ಸಮಯ, ಕೊಯ್ಲಿನ ಸಮಯ, ಹಣ್ಣು ಬಿಡುವ ಕಾಲ, ಬೇಸಿಗೆ ಇಲ್ಲವೆ ಹಿಮ ಬೀಳಲು ಆರಂಭವಾದ ದಿನ, ಅದರ ಹಿಂದೆ ಮುಂದೆ, ಸಮೀಪದಲ್ಲಿ ಹುಟ್ಟಿದವೆಂದು ಹೇಳುತ್ತಿದ್ದರು. ನಾನು ನನ್ನ ವಯಸ್ಸಿನ ಬಗ್ಗೆ ಮಾಹಿತಿಯನ್ನು ತಿಳಿಯಲೆತ್ನಿಸಿದ್ದು ನನ್ನ ಬಾಲ್ಯದ ಅಸಂತೋಷದ ಮೂಲವಾಗಿರುತ್ತಿತ್ತು. ಬಿಳಿಯ ಮಕ್ಕಳು ತಮ್ಮ ವಯಸ್ಸು ಹೇಳುತ್ತಿದ್ದರು. ನನಗೆ ಇಂಥ ಅವಕಾಶ ಏಕೆ ವಂಚಿತವಾಯಿತು.? ಇದನ್ನು ಯಜಮಾನನಿಗೆ ಕೇಳುವ ಹಾಗೂ ಇರಲಿಲ್ಲ. ಇಂಥ ವಿಚಾರಣೆಗಳೆಲ್ಲ ಅನಾವಶ್ಯಕವೆಂದು ಅವರು ಭಾವಿಸಿದ್ದರು
ನನ್ನ ಹತ್ತಿರದ ಲೆಕ್ಕಾಚಾರ ಬಹುತೇಕ ನನಗೆ ಇಪ್ಪತ್ತೇಳು-ಇಪ್ಪತ್ತೆಂಟೋ ವರ್ಷ ಇರಬಹುದು. 1835ರ ಸುಮಾರಿನಲ್ಲಿ ನನ್ನ ಯಜಮಾನ ನನಗೆ 17 ಹದಿನೇಳು ವರ್ಷ ಇರಬಹುದು ಎಂದೂ ಹೇಳಿದ ಊಹೆಯ ಮೇಲೆ ಲೆಕ್ಕಾಚಾರ ಮಾಡಿದ್ದೇನೆ.
ನನ್ನ ತಾಯಿಯ ಹೆಸರು ಹೆರಿಯಟ್ ಬೈಲಿ. ಆಕೆ ನೀಗ್ರೋ ದಂಪತಿಗಳಾದ ಇಸಾಕ್ ಮತ್ತು ಬೆಟ್ಟಿ ಬೈಲಿಯ ಮಗಳು. ನನ್ನ ತಾಯಿ, ಅಜ್ಜ-ಅಜ್ಜಿಯರಿಗಿಂತ ಕಪ್ಪುಛಾಯೆ ಹೊಂದಿದ್ದಳು.
ನನ್ನ ತಂದೆ ಒಬ್ಬ ಬಿಳಿಯ. ಇದನ್ನು ಎಲ್ಲರೂ ಒಪ್ಪಿಕೊಂಡಿದ್ದರೂ ನನ್ನ ಪೋಷಕತ್ವದ ಬಗ್ಗೆ ಯಾರು ಮಾತಾಡಿದ್ದೂ ನಾನು ಕೇಳಿಲ್ಲ. ನನ್ನ ಯಜಮಾನನೆ ನನ್ನ ತಂದೆಯೆಂದು ನನ್ನ ಕಿವಿಯಲ್ಲಿ ಪಿಸುಗುಟ್ಟುತ್ತಿದ್ದರಾದರೂ ಅದರ ಸತ್ಯಾಸತ್ಯತೆಯ ಬಗ್ಗೆ ನನಗೇನೂ ಗೊತ್ತಿಲ್ಲ. ಅದರ ಅರ್ಥ ನನಗೆ ತಿಳಿಯದಂತೆ ಆ ವಿಷಯವನ್ನು ತಡೆಹಿಡಿದಿದ್ದರು ನಾನು ಹಸುಳೆಯಾಗಿದ್ದಾಗಲೇ ನಾನು ಆಕೆಯನ್ನು ನನ್ನ ತಾಯಿಯೆಂದು ತಿಳಿಯುವಷ್ಟರಲ್ಲಿ ಬೇರ್ಪಟ್ಟಿದ್ದೆ. ಚಿಕ್ಕವಯಸ್ಸಿನಲ್ಲಿ ತಾಯಿಯಿಂದ ಬೇರ್ಪಡುವ ಸಂಗತಿ ಮೇರಿಲ್ಯಾಂಡ್ನ ಸಾಧಾರಣ ಸಂಪ್ರದಾಯವಾಗಿತ್ತು. ಮಗುವಿಗೆ ಹನ್ನೆರಡು ತಿಂಗಳು ಆಗುವಷ್ಟರಲ್ಲಿ ತಾಯಿಯಿಂದ ಬೇರ್ಪಡಿಸಿ ಆ ಮಗುವನ್ನು ಸಾಕಷ್ಟು ದೂರದ ಸ್ಥಳದಲ್ಲಿ ಜಮೀನಿನ ಯಾವ ಕೆಲಸ ಮಾಡಲಾಗದ ಮುದುಕಿಯ ವಶಕ್ಕೆ ನೀಡಲಾಗುತ್ತಿತ್ತು. ಇದನ್ನು ಏಕೆ ಮಾಡುತ್ತಿದ್ದರೋ ಗೊತ್ತಿಲ್ಲ. ಮಗುವಿಗೆ ತಾಯಿಯೆಡೆಗೆ ಬೆಳೆಯುವ ಮಮತೆಯನ್ನು ಕುಗ್ಗಿಸುವುದರ ಜೊತೆಗೆ ತಾಯಿಗೆ ಮಗುವಿನೊಂದಿಗೆ ಸ್ವಾಭಾವಿಕವಾಗಿ ಇರುವ ಪ್ರೀತಿಯನ್ನು ಹಾಳುಮಾಡುವ ಫಲಿತಾಂಶವನ್ನಂತೂ ಅದು ನೀಡುತ್ತಿತ್ತು.
ನನ್ನ ತಾಯಿಯನ್ನು ಸಾಮಿಪ್ಯದಲ್ಲಿ ನೋಡಿ ಅರ್ಥಮಾಡಿಕೊಳ್ಳಲಾಗಲೇ ಇಲ್ಲ. ಆಕೆಯನ್ನು ನಾನು ನಾಲ್ಕೈದು ಬಾರಿ ಅದು ಕಡಿಮೆ ಕಾಲಾವಧಿಯಲ್ಲಿ ರಾತ್ರಿಯ ಸಮಯದಲ್ಲಿ ಸಂಧಿಸಿದ್ದೆ. ಆಕೆ ಸ್ಟುವಟರ್್ ಬಳಿ ಸೇವಕಿಯಾಗಿದ್ದು ಹನ್ನೆರಡು ಮೈಲಿ ದೂರದಲ್ಲಿದ್ದಳು. ಅವಳು ತನ್ನ ದಿನದ ಕೆಲಸ ಮುಗಿಸಿ ಇಡೀ ರಾತ್ರಿ ಬರಿಗಾಲಲ್ಲಿ ನಡೆದು ಬರುತ್ತಿದ್ದಳು. ಅವಳು ಜಮೀನಿನಲ್ಲಿ ಕೆಲಸ ಮಾಡಬೇಕಾದವಳಾದ್ದರಿಂದ ಸೂರ್ಯ ಹುಟ್ಟಿದ ಮೊದಲೆ ಅಲ್ಲಿರಬೇಕಾಗಿತ್ತು. ಕೊಂಚ ತಡವಾಗಿ ಹಿಂತಿರುಗಿ ಹೋಗಬೇಕಾದರೂ ಯಜಮಾನನ ಅನುಮತಿ ಬೇಕಾಗಿತ್ತು.ಆ ರೀತಿ ಅನುಮತಿಸಿದ ಯಜಮಾನನ ಕರುಣೆಯನ್ನು ಕೊಂಡಾಡಲಾಗುತ್ತಿತ್ತು. ಹಗಲು ಹೊತ್ತಿನಲ್ಲಿ ನನ್ನ ತಾಯಿಯನ್ನು ನೋಡಿದ ನೆನಪೇ ನನಗೆ ಇಲ್ಲ. ಅವಳು ರಾತ್ರಿಯಲ್ಲಿ ನನ್ನೊಂದಿಗೆ ಮಲಗುತ್ತಿದ್ದಳು. ಬೆಳಿಗ್ಗೆ ನಾನು ಏಳುವಷ್ಟರಲ್ಲಿ ಹೊರಟುಹೋಗಿರುತ್ತಿದ್ದಳು. ನಮ್ಮಿಬ್ಬರ ನಡುವೆ ಅತಿ ಕಡಿಮೆ ಸಂಪರ್ಕವಷ್ಟೆ ಇತ್ತು. ಈ ಕನಿಷ್ಟ ಸಂಪರ್ಕವನ್ನು ಅವಳಿಗಾದ ಸಾವು ಬೇರ್ಪಡಿಸಿತು. ಜೊತೆಗೆ ಅವಳ ಎಲ್ಲ ಕಷ್ಟ ಮತ್ತು ದುಃಖಗಳಿಂದ. ನಾನು ಏಳು ವರ್ಷದವನಾದಾಗ ಆಕೆ ಯಜಮಾನನ ಫಾರಂ ಒಂದರಲ್ಲಿ ಅಸುನೀಗಿದ್ದಳು. ನನಗೆ ಅವಳ ಖಾಯಿಲೆ, ಸಾವು ಮತ್ತು ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಇರಲು ಅವಕಾಶ ನೀಡಲಿಲ್ಲ. ನನಗೆ ಎಲ್ಲಾ ತಿಳಿಯುವಷ್ಟರಲ್ಲಿ ಆಕೆ ತೀರಿಕೊಂಡಿದ್ದಳು. ಅವಳ ಆತ್ಮೀಯ ಸಾನಿಧ್ಯ, ಮಮತೆ ಮತ್ತು ಕಾಳಜಿ ಇದಾವುದನ್ನು ಪಡೆಯಲಾಗಲಿಲ್ಲ. ಬಹುಶಃ ಆಗ ಅವಳ ಸಾವಿನ ಸುದ್ದಿ ಕೂಡ ಅಪರಿಚಿತರ ಸಾವಿನ ಸುದ್ದಿಯಂತೆ ಅನಿಸಿರಬಹುದು.
ಅನಿರೀಕ್ಷಿತವಾಗಿ ಅಗಲಿದ ಅವಳು ನನ್ನ ತಂದೆ ಯಾರು ಎಂಬ ಸಣ್ಣ ಸೂಚನೆಯನ್ನು ಬಿಡದೆ ಹೋಗಿದ್ದಳು. ನನ್ನ ಮಾಲೀಕನೆ ನನ್ನ ತಂದೆ ಎಂಬ ಪಿಸುಮಾತು ಎಷ್ಟು ನಿಜವೋ? ಸುಳ್ಳೋ?. ಜಿಗುಪ್ಸೆ ಹುಟ್ಟಿಸುವ ತಾವೇ ರೂಪಿಸಿದ ಗುಲಾಮಿಮಾಲೀಕರ ಪರವಾದ ಕಾನೂನುಗಳಿಂದಾಗಿ ನನ್ನ ಸ್ಥಿತಿ ಹಾಗೇ ಉಳಿಯಿತು. ಗುಲಾಮಿ ಹೆಣ್ಣಿನ ಸ್ಥಾನಮಾನಗಳು ಅವಳ ತಾಯಿಯನ್ನೆ ಅನುಸರಿಸಬೇಕು ಎಂದಿದ್ದ ಕಾರಣಕ್ಕಾಗಿ ಯಜಮಾನರ ಸ್ವಂತ ಕಾಮಕ್ಕಾಗಿ, ಕ್ರೂರ ಆಸೆಗಳಿಗಾಗಿ ತಮ್ಮನ್ನೆ ತ್ಯಾಗ ಮಾಡಬೇಕಾದ ಸ್ಥಿತಿ. ಇಂಥ ಕುಯುಕ್ತಿಯ ವ್ಯವಸ್ಥೆಯಿಂದಾಗಿ ಗುಲಾಮಿಒಡೆಯ ಬಹುತೇಕ ಸಂದರ್ಭಗಳಲ್ಲಿ ಇತ್ತ ತಂದೆಯಾಗಿಯೂ ಅತ್ತ ಒಡೆಯನಾಗಿಯೂ ಉಳಿದುಕೊಳ್ಳುತ್ತಿದ್ದ.
ಇಂಥ ಅನೇಕ ಪ್ರಕರಣಗಳನ್ನು ನಾನು ಬಲ್ಲೆ. ಆದರೆ ಇಂಥ ಕಾರಣದಿಂದಾಗಿ ಇತರೆ ಗುಲಾಮರಿಗಿಂತ ಹೆಚ್ಚಿನ ಕಷ್ಟಗಳನ್ನು ಅವರೆ ಅನುಭವಿಸಬೇಕಾಗುತ್ತಿತ್ತು. ಮೊದಲನೆಯರಾಗಿ ಇವರು ಅವರ ಒಡತಿಯರಿಗೆ ಬಹುದೊಡ್ಡ ಅಪರಾಧವಾಗಿ ಕಾಣುತ್ತಿದ್ದರು. ಅವರಂತೂ ತಪ್ಪುಗಳನ್ನು ಹುಡುಕುವಲ್ಲಿ ಸದಾ ನಿರತರಾಗಿರುತ್ತಿದ್ದರು. ಇದರಿಂದಾಗಿ ಆ ಒಡತಿಯರನ್ನು ಖುಷಿಪಡಿಸಲು ಏನನ್ನಾದರೂ ಮಾಡಲು ತಯಾರಿರಬೇಕಾಗಿತ್ತು. ಆ ಮಾಲೀಕರಲ್ಲಿ ಉಳಿದುಕೊಂಡಿರುತ್ತಿದ್ದ ಆ ಮಲಮಕ್ಕಳಿಗೆ ಬೀಳುತ್ತಿದ್ದ ಛಡಿ ಹೊಡೆತಗಳು ಆ ಒಡತಿಯರಿಗೆ ಹೆಚ್ಚು ಖುಷಿಯನ್ನುಂಟು ಮಾಡುತ್ತಿತ್ತು. ಇದನ್ನು ನೋಡಲಾಗದ ಆ ಮಾಲೀಕರು ತಮ್ಮ ಬಿಳಿ ಹೆಂಡತಿಯರ ಕಾರಣದಿಂದಾಗಿ ಸ್ವಂತ ಮಕ್ಕಳನ್ನು ಮಾನವ ಮಾಂಸ ಖರೀದಿಗಾರರಿಗೆ ಮಾರಾಟ ಮಾಡುತ್ತಿದ್ದರು. ಇಲ್ಲದಿದ್ದರೆ ತನ್ನ ಬಿಳಿಯ ಮಗ ತನಗಿಂತ ಕೊಂಚ ಕಪ್ಪಾದ ಸಹೋದರನನ್ನು ಬೆತ್ತಲೆ ಬೆನ್ನಿನ ಮೇಲೆ ಕ್ರೂರ ಛಡಿ ಹೊಡೆತಗಳನ್ನು ಬಾರಿಸುವುದನ್ನು ಕಾಣಬೇಕಾಗಿತ್ತು. ಕೊಂಚ ಅಸಮ್ಮತಿ ಸೂಚಿಸಿದರೆ ನತದೃಷ್ಟ ಹುಡುಗನ ಮತ್ತು ಯಜಮಾನರ ಸ್ಥಿತಿ ಇನ್ನೂ ಕೆಟ್ಟದಾಗುವ ಪರಿಸ್ಥಿತಿ ಏರ್ಪಡುತ್ತಿತ್ತು.
ನನಗೆ ಇಬ್ಬರು ಯಜಮಾನರು. ನನ್ನ ಮೊದಲನೆ ಯಜಮಾನನ ಹೆಸರು ಆಂಥೊಣಿ. ಎಲ್ಲರೂ ಅವನನ್ನು ಕ್ಯಾಫ್ಟನ್ ಆಂಥೊಣಿ ಎನ್ನುತ್ತಿದ್ದರು. ನನಗನ್ನಿಸುವಂತೆ ಅದು ಆತ ಚೆಸಪೆಕೆ ಕೊಲ್ಲಿಯಲ್ಲಿ ನಾವೆಯನ್ನು ನಡೆಸದ್ದಕ್ಕೆ ನೀಡಿದ ಬಿರುದಾಗಿರಬಹುದು. ಆತ ಅತ್ಯಂತ ಶ್ರೀಮಂತ ಗುಲಾಮಿ ಮಾಲೀಕನಾಗಿದ್ದ. ಆತನಿಗೆ ಎರಡು ಮೂರು ಫಾಮರ್್ಗಳಿದ್ದು ಮೂವತ್ತರಷ್ಟು ಗುಲಾಮರಿದ್ದರು. ಆತನ ಫಾಮರ್್ಗಳು ಮತ್ತು ಗುಲಾಮರು ಒಬ್ಬ ಮೇಲ್ವಿಚಾರಕನ ಅಡಿಯಿದ್ದರು. ಆ ಮೇಲ್ವಿಚಾರಕನ ಹೆಸರು ಪೂಮರ್. ಆತ ತನ್ನೊಂದಿಗೆ ದನದ ಚರ್ಮ ಮತ್ತು ಬೆತ್ತವೊಂದನ್ನು ಒಯ್ಯುತ್ತಿದ್ದ. ಅವನು ಹೆಂಗಸರ ತಲೆಗೆ ಹೇಗೆ ತೂತಾಗುವವರೆವಿಗೂ ಹೊಡೆಯುತ್ತಿದ್ದನೆಂದರೆ ಒಮ್ಮೊಮ್ಮೆ ಯಜಮಾನನೇ ನೀನು ಇದೇ ರೀತಿ ವತರ್ಿಸಿದರೆ ನಿನ್ನ ಬೆನ್ನಿಗೆ ಬಾರಿಸುತ್ತೇನೆಂದು ಹೇಳುತ್ತಿದ್ದ. ಆದರೂ ಯಜಮಾನನೂ ಕೂಡ ಮಾನವೀಯ ಗುಲಾಮಿ ಒಡೆಯನಾಗಿರಲಿಲ್ಲ. ಆ ಮೇಲ್ವಿಚಾರಕನ ಅಸಾಧಾರಣ ಕ್ರೂರತ್ವ ಆತನನ್ನು ಕೂಡ ಎದೆಗುಂದಿಸುತ್ತಿತ್ತು. ಸುಧೀರ್ಘ ಗುಲಾಮಗಿರಿಯ ಮೇಲ್ವಿಚಾರಕತ್ವದಿಂದಾಗಿ ಆತ ಕ್ರೂರಿಯಾಗಿ ಬದಲಾಗಿದ್ದ. ಆತನಿಗೆ ಗುಲಾಮರಿಗೆ ಹೊಡೆಯುವುದರಿಂದ ಅತೀವ ತೃಪ್ತಿಯಗುತ್ತಿತ್ತು. ನನಗೆ ಪದೇ ಪದೇ ಮುಂಜಾವಿನಲ್ಲಿ ಸ್ವಂತ ಚಿಕ್ಕಮಂದಿರು ವಿಕಾರವಾಗಿ ಕೂಗುತ್ತಿದ್ದರಿಂದ ಎಚ್ಚರವಾಗುತ್ತಿತ್ತು. ಅವರನ್ನು ಕಂಬಕ್ಕೆ ಕಟ್ಟಿ ಅವರ ಬೆನ್ನಿಗೆ ಬಡಿಯುತ್ತಿದ್ದ ಪರಿಣಾಮವಾಗಿ ರಕ್ತದಿಂದ ತೊಯ್ದಿರುತ್ತಿದ್ದರು. ಯಾವ ಪದಗಳು, ಕಣ್ಣೀರು, ಪ್ರಾರ್ಥನೆಗಳು ಅ ಕಬ್ಬಿಣದ ಹೃದಯವನ್ನು ಆ ರಕ್ತ ಉದ್ದೇಶದಿಂಧ ಹೊರತರುತ್ತಿಲಿಲ್ಲ. ಅವರು ಹೆಚ್ಚು ಹೆಚ್ಚು ಕಿರುಚಿದಂತೆ ಹೆಚ್ಚು ಹೆಚ್ಚು ಛಡಿಗಳು. ಹೆಚ್ಚು ರಕ್ತ ಹರಿದಷ್ಟು ಛಡಿಯ ಉದ್ದ ಹೆಚ್ಚುತ್ತಿತ್ತು. ಕಿರುಚವಂತೆ, ರೋದಿಸುವಂತೆ ಹೊಡೆದು ಆಯಾಸ ಹೆಚ್ಚಾದಾಗ, ತನ್ನ ರಕ್ತದಿಂದ ಹೆಪ್ಪುಗಟ್ಟಿದ ರಕ್ತದ ದನದ ಚರ್ಮವನ್ನು ಹಿಡಿದು ಹೊರಡುತ್ತಿದ್ದ. ಇದು ನೋಡಲು ಅಸಾಧ್ಯವಾದ ದೃಶ್ಯವಾಗಿರುತ್ತಿತ್ತು.
ನಾನು ಜೀವನದ ಆರಂಭಿಕ ನೆನಪುಗಳನ್ನು ಮೊಗೆದಾಗ ಗುಲಾಮಿತನದಿಂದಾಗಲಿ ಅದರ ಕೆಡುಕಿನ ಅಪ್ಪುಗೆಯಾಗಲಿ, ಗುಲಾಮಿತನದ ಕಪ್ಪು ಗಳಿಗೆಗಳಾಗಲಿ, ನನ್ನಲ್ಲಿದ್ದ ನಂಬಿಕೆ ಮತ್ತು ಭರವಸೆಯನ್ನು ದೂರ ಮಾಡಲಿಲ್ಲ. ಬದಲಿಗೆ ಅಂಧಕಾರದಲ್ಲಿ ಬೆಳಗುವ ದೇವತೆಗಳಂತೆ, ಆ ದೇವತೆಗಳು ಅದನ್ನು ಎದುರಿಸಲು ನೀಡಿದ ಚೈತನ್ಯವನ್ನು ನಾನು ಅಭಿನಂದಿಸುತ್ತ ಹೊಗಳುತ್ತೇನೆ.

‍ಲೇಖಕರು G

10 August, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading