ಮನೋರಮಾ ಬಿ.ಎನ್
ರಸ-ಭಾವಾಶ್ರಯವಾದ ಕಲೆಗೆ ನೃತ್ಯ ರಂಗಪ್ರವೇಶಗಳು ನೀಡುವ ಕೊಡುಗೆ ಗೌಣವಾಗುತ್ತಾ ವೈಭವೀಕರಣವೇ ಪ್ರಧಾನವಾಗುತ್ತಾ ಸಾಗಿರುವ ಇಂದಿನ ದಿನಗಳಲ್ಲಿ ಕಲೆಯ ಕುರಿತ ಸ್ಪಂದನಕ್ಕೆ ಆಸ್ಥೆಯನ್ನು ನೀಡುವ ಪ್ರವೇಶವಾಗಿ ಕಂಡಿದ್ದು ಜೂನ್ 2ರಂದು ನಗರದ ಎಡಿಎ ರಂಗಮಂದಿರದಲ್ಲಿ ನಡೆದ ಆರತಿ ಎಸ್ ಅವರ ಭರತನಾಟ್ಯ ರಂಗಪ್ರವೇಶ. ಕೇವಲ ಗಿಣಿಪಾಠವೆಂಬಂತೆ ಭಾಸವಾಗುತ್ತಿರುವ ರಂಗಪ್ರವೇಶಗಳ ಮಧ್ಯೆ ಕಲಾವಿದೆಯ ವ್ಯಕ್ತಿತ್ವದ ಸಹಜ ನಡೆಗಳಿಗೆ ಸ್ವಾತಂತ್ರ್ಯವನ್ನು ಇತ್ತದ್ದು ಇಲ್ಲಿನ ಪ್ರಧಾನ ಅಂಶ. ಒಂದರ್ಥದಲ್ಲಿ ಅದು ಕೇವಲ ರಂಗಪ್ರವೇಶವೆಂಬಷ್ಟೇ ಭಾಸವಾಗದೆ ಪ್ರೌಢಿಮೆಯ ಹಂತದಲ್ಲಿ ಸಾಗುತ್ತಿರುವ ಕಲಾವಿದೆಯ ಗುಣಮಟ್ಟದ ಕಾರ್ಯಕ್ರಮವೆನಿಸಿದ್ದು ವಿಶೇಷ. ಈ ಹಿನ್ನೆಲೆಯಲ್ಲಿ ಆಕೆಯ ಗುರು ಮಯೂರಿ ನಾಟ್ಯಶಾಲೆಯ (ಅರೆಕೆರೆ ಲೇಔಟ್) ನಿರ್ದೇಶಕಿ ಡಾ. ಶೋಭಾ ಶಶಿಕುಮಾರ್ ಅಭಿನಂದನಾರ್ಹರು.
ಗುರು ಡಾ. ಶೋಭಾಶಶಿಕುಮಾರ್ ಭರತನಾಟ್ಯದ ಸಾತ್ತ್ವಿಕ, ಆಂಗಿಕ ವಿಷಯದ ರಸತತ್ತ್ವದ ಕುರಿತು ಪಿಎಚ್ಡಿ ಪದವೀಧರರು. ಕರ್ನಾಟಕದಲ್ಲಿ ನಾಟ್ಯಶಾಸ್ತ್ರ ಪ್ರಯುಕ್ತ ಕರಣಪ್ರಕರಣಗಳನ್ನು ನಿಷ್ಠೆಯಿಂದ ಕಲಿತು ಅದನ್ನು ಆಧರಿಸಿ ಭರತನಾಟ್ಯದ ರಸದೃಷ್ಟಿಯನ್ನು ಅಭ್ಯಸಿಸಿ ಪಿಎಚ್ಡಿ ಪದವಿಯನ್ನು ಪಡೆದವರ ಪೈಕಿ ಶೋಭಾ ಶಶಿಕುಮಾರ್ ಪ್ರಪ್ರಥಮರು. ಪ್ರಸ್ತುತ ಜೈನ್ ವಿಶ್ವವಿದ್ಯಾನಿಲಯದ ಪ್ರದರ್ಶಕ ಕಲೆಗಳ ವಿಭಾಗದಲ್ಲಿ ಡಾ.ಶೋಭಾ ಕರಣ ಪ್ರಕರಣಗಳ ಕುರಿತ ತರಗತಿಗೆ ಉಪನ್ಯಾಸಕಿಯಾಗಿದ್ದಾರೆ. ಹಲವಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸುವುದರೊಂದಿಗೆ ಸಂಶೋಧನೆಗಳಿಗೆ ಮಾರ್ಗದರ್ಶಕಿಯೂ ಆಗಿರುವ ಇವರು ನೃತ್ಯ ಸಂಶೋಧಕರ ಒಕ್ಕೂಟದ ಪ್ರದರ್ಶಕ ವಿಭಾಗದ ಮುಖ್ಯಸ್ಥೆಯೂ ಕೂಡಾ. ಅವರ ರಸದೃಷ್ಟಿಯುಳ್ಳ ನಡೆಗೆ ಹೊಂದಿಕೊಳ್ಳುವ ಹಾದಿಯಲ್ಲಿರುವ ಶಿಷ್ಯೆ ಆರತಿ ಎಸ್. ಭರತನಾಟ್ಯದಲ್ಲಿ ಜೂನಿಯರ್ ಪರೀಕ್ಷೆಯಷ್ಟೇ ತೇರ್ಗಡೆಯಾಗಿದ್ದರೂ ವಿದ್ವತ್ ಹೊಂದಿರುವ ಇಂದಿನ ಯಾವ ಕಲಾವಿದೆಗೂ ಸರಿಸಾಟಿಯೆಂಬಂತೆ ನಿರಾಯಾಸವಾಗಿ ತಮ್ಮ ಕಲಾಸಂವೇದನೆಯನ್ನು ಬಿಚ್ಚಿಟ್ಟಿದ್ದಾರೆ. ಪ್ರಸ್ತುತ ಆರತಿ ಆರ್. ವಿ. ಆರ್ಕಿಟೆಕ್ಚರ್ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ಪದವಿ ವಿದ್ಯಾರ್ಥಿನಿ.
ಪುಷ್ಪಾಂಜಲಿಯೊಂದಿಗೆ ಅಡಿಯಿಟ್ಟ ಆರತಿ ಚತುರಶ್ರ ಅಲರಿಪ್ಪುವಿನಲ್ಲಿ ನೃತ್ತದ ಸೊಬಗನ್ನು ನೃತ್ತ ಹಸ್ತ, ಚಾರಿ ಕರಣಗಳ ಒನಪಿನಲ್ಲಿ ಮನೋಹರವಾಗಿ ಅರಳಿಸಿದರು. ಆದರೆ ಆರತಿಯೊಡಲಲ್ಲಿದ್ದ ಭಾವಪ್ರಕಾಶವು ಸೊಗಸಾಗಿ ಪ್ರಕಾಶಗೊಂಡದ್ದು ತಿಲ್ಲಾಂಗ್ ರಾಗಕ್ಕೆ ಹೆಣೆದ ಪುರಂದರದಾಸರ `ಗುಮ್ಮನ ಕರೆಯದಿರೆ’ ಎಂಬ ಪ್ರಸಿದ್ಧವಾದ ದೇವರನಾಮದಲ್ಲಿ. ತಾಯಿ ಯಶೋದೆಯನ್ನು ಪರಿಪರಿಯಾಗಿ ಬೇಡಿಕೊಳ್ಳುವ ಕೃಷ್ಣನ ಪ್ರತೀ ಭಾವಗಳೂ ಪ್ರೇಕ್ಷಕರ ಮನವನ್ನು ಸಮರ್ಥವಾಗಿ ಹಿಡಿದಿಡುವಲ್ಲಿ ಪೂರ್ಣ ಸಫಲವಾಯಿತು..
ಧನ್ಯಾಸಿ ರಾಗದ ಪ್ರಸಿದ್ಧ ಪದವರ್ಣ `ನೀ ಇಂದ ಮಾಯಂ’- ಗುರು ಮತ್ತು ಶಿಷ್ಯರೀರ್ವರ ಪ್ರತಿಭಾವ್ಯುತ್ಪತ್ತಿಯ ಪೂರ್ಣದರ್ಶನ ಮಡಿಸಿತ್ತು. ನೃತ್ತ-ನೃತ್ಯದ ಪರಸ್ಪರ ಸಾಹಚರ್ಯವನ್ನು ರಸಾನುಗ್ರಹಣದ ದೃಷ್ಟಿಯಿಂದ ಅರ್ಥೈಸಿಕೊಂಡು ವರ್ಣದ ಎಂದಿನ ಅಪಸವ್ಯಗಳಿಲ್ಲದ ನೃತ್ಯ ಸಂಯೋಜನೆ ಮಾಡಿದ ಗುರು ಡಾ. ಶೋಭಾ ಅವರ ಪರಿಶ್ರಮ, ಕಲಾದೃಷ್ಟಿ ಅನನ್ಯ. ವರ್ಣದ ಯಾವ ಭಾಗವೂ ಸ್ಥಾಯಿಭಾವವನ್ನು ಬಿಟ್ಟುಕೊಡದಂತೆ ವಿನ್ಯಾಸಗೊಂಡದ್ದು ಇಲ್ಲಿನ ವಿಶೇಷತೆ. ಕರಣ, ಚಾರಿಗಳೊಂದಿಗೆ ಅಡವುಗಳ ಸೂಕ್ತ ಹೊಂದಾಣಿಕೆ, ವಿರಹ ಶೃಂಗಾರದ ನಾಜೂಕಿಗೆ ಒಪ್ಪುವ ಸುಲಲಿತ ಜತಿವಿನ್ಯಾಸ, ಔಚಿತ್ಯವರಿತ ಅಭಿನಯವೆಲ್ಲವೂ ಪದವರ್ಣವೊಂದು ಮಾಡಬೇಕಾದ ಕಾರ್ಯಕ್ಕೆ ಸ್ಪಷ್ಟತೆಯನ್ನಿತ್ತಿತ್ತು. ಅದರಲ್ಲೂ ವರ್ಣದ ಜತಿಗಳು ನಾಯಿಕೆಯ ಮನೋಭಾವದ ಪ್ರಕಾಶಕ್ಕೆ ಅನುಕೂಲಕರವಾಗಿದ್ದು; ನಟುವಾಂಗದ ಹರಿವು ಮುಗ್ಧಮನೋಹರವೆನಿಸಿತ್ತು. ಅದಕ್ಕೆ ತಕ್ಕಂತೆ ಹಿಮ್ಮೇಳದ ಕೈವಾರಿಕೆಗಳು ಸೂಕ್ಷ್ಮ ನಾದವೈವಿಧ್ಯವನ್ನು ಒದಗಿಸಿ ವರ್ಣದ ಒಟ್ಟು ಸೌಂದರ್ಯಕ್ಕೆ ಜೊತೆಯಾದವು. ವಿರಹೋತ್ಕಂಠಿತಾ ನಾಯಿಕೆಗಿಂತಲೂ ಮಧುರಭಕ್ತಿಯ ವರ್ಣದ ಆಯ್ಕೆಯಿದ್ದಿದ್ದರೆ ಅಭಿವ್ಯಕ್ತಿ ಮತ್ತಷ್ಟು ಬೆಳಗಿಬರುತ್ತಿತ್ತೇನೋ !
ನಂತರದಲ್ಲಿ ಪಂತುವರಾಳಿ ರಾಗದ `ಶಂಭೋ ಮಹಾದೇವ’ ಕೃತಿ, ಅಠಾಣ ರಾಗದ ಖಂಡಿತಾ ನಾಯಿಕೆ ಪದಂ, ಭಾಗೇಶ್ರಿರಾಗದ ತಿಲ್ಲಾನವೂ ನೃತ್ಯದ ಓಘವನ್ನು, ಭಾವ ಸಾಂಗತ್ಯವನ್ನು ಕಾಪಿಟ್ಟುಕೊಂಡಿತು. ಆದಾಗ್ಯೂ ಕಾರ್ಯಕ್ರಮದ ಉತ್ತರಾರ್ಧ ಭಾಗವನ್ನು ಆರತಿ ಇನ್ನೂ ಸಮರ್ಥವಾಗಿ, ಅನಾಯಾಸದಿಂದ ಹಿಡಿದಿರಿಸಿಕೊಳ್ಳಬಹುದಾಗಿತ್ತು. ನೃತ್ಯದ ಒನಪು, ಗಾಂಭೀರ್ಯಕ್ಕೆ ಹದವಾಗಿ ನಟುವಾಂಗದಲ್ಲಿ ಡಾ. ಶೋಭಾ ಶಶಿಕುಮಾರ್ ಮೇಳೈಸಿದರೆ, ಹಾಡುಗಾರಿಕೆಯಲ್ಲಿ ವಿದುಷಿ ಕಾಂಚನ ಶ್ರೀರಂಜಿನಿ; ಖಂಜೀರ-ಡ್ರಮ್ ಪ್ಯಾಡ್ನಲ್ಲಿ ಪ್ರಸನ್ನ, ಮೃದಂಗದಲ್ಲಿ ಸಿ.ಲಿಂಗರಾಜು, ಕೊಳಲಿನಲ್ಲಿ ಜಯರಾಂ, ವೀಣೆಯಲ್ಲಿ ಶಂಕರ ರಾಮನ್ ಅವರದ್ದು ಪೂರಕವೆನಿಸುವ ಅನುಸರಣೀಯ ಅಭಿವ್ಯಕ್ತಿ.
ಆದರೆ ಎಂದಿನ ಭರತನಾಟ್ಯ ರಂಗಪ್ರವೇಶಗಳಿಗೆ ಹೋಲಿಸುವುದಾದರೆ ಎಷ್ಟೋ ಮೇಲ್ಮಟ್ಟದ ಪ್ರೌಢತೆ ಆರತಿಯ ನಡೆಗಳಲ್ಲಿತ್ತು ಎಂಬುದು ನಿರ್ವಿವಾದ ಸತ್ಯ. ಇದರ ಹೊರತಾಗಿಯೂ ಹೇಳುವುದಿದ್ದಲ್ಲಿ ರಂಗದೆಡೆಗಿನ ಪೂರ್ಣ ಧ್ಯಾನಸ್ಥ ಸ್ಥಿತಿಯನ್ನು ಆರತಿ ರೂಢಿಸಿಕೊಳ್ಳಬೇಕು. ಭರತನೃತ್ಯವೆಂಬ ವಿಭಾಗಕ್ರಮಕ್ಕೆ ಆಕೆಯ ಹಾದಿ ಸ್ಪಷ್ಟವಾಗಬೇಕಾದರೆ ಹೆಜ್ಜೆಗಳಲ್ಲಿ ಸ್ಪಷ್ಟತೆ, ಚಲನಾವಿಶೇಷಗಳಲ್ಲಿ ದೃಢತೆ, ಲಯಗಾಂಭೀರ್ಯ, ಅಡವು ಮತ್ತು ಕರಣಗಳ ಸೂಕ್ಷ್ಮ ವಿನ್ಯಾಸವನ್ನು ಹೊಂದಿಸಿಕೊಳ್ಳಬಲ್ಲ ಜಾಣ್ಮೆ, ಅಭಿನಯವನ್ನು ಅಂತರ್ಗತ ಮಾಡಿಕೊಳ್ಳುವ ರಸವಿಶೇಷತೆಯತ್ತ ಹೆಚ್ಚಿನ ಗಮನ ಹರಿಸಿದರೆ ಆಕೆಯ ನೃತ್ಯ ಹೆಚ್ಚಿನ ಅಂದವನ್ನು ಪಡೆಯಬಲ್ಲುದು. ಭವಿಷ್ಯದಲ್ಲಿಯೂ ಕಲೆಯ ಕುರಿತಾಗಿ ಆರತಿಯ ಆಸಕ್ತಿ, ಶ್ರದ್ಧೆ, ಅಭ್ಯಾಸ, ಅಧ್ಯಯನಗಳು ನಿರಂತರವಾಗಿ ಹೊರಹೊಮ್ಮಿದರೆ ಒಳ್ಳೆಯ ಕಲಾವಿದೆಯಾಗಿ ಪ್ರಬುದ್ಧವಾಗಿ ಬೆಳಗಬಲ್ಲಳು.








0 Comments