ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಗುಬ್ಬಚ್ಚಿಗಳಿಗಾಗಿ ಒಂದು ದಿನ…’ – ಸುಜಾತಾ ವಿಶ್ವನಾಥ್

ನಮ್ಮನ್ನು ಬಂಧಮುಕ್ತಗೊಳಿಸಿ

ಸುಜಾತಾ ವಿಶ್ವನಾಥ್

ರಣರಣ ಬಿಸಿಲು ಜನರ ಒಡಲನ್ನು ಸುಡುತ್ತಿತ್ತು. ಬೇಸಿಗೆ ಆರಂಭದಲ್ಲಿಯೇ ಇಡೀ ಮನುಕುಲವನ್ನೇ ಸುಡತೊಡಗಿದ್ದ ಸೂರ್ಯ. ಈ ಬೇಸಿಗೆಯ ಮೂರು ತಿಂಗಳು ಈ ಭೂಮಿಯ ಮೇಲೆ ನನ್ನದೇ ದರ್ಬಾರು ಎಂಬಂತೆ ಆ ಸೂರ್ಯ ಬೀಗುತ್ತಿದ್ದ. ಇವನ ಪ್ರತಾಪವನ್ನು ಎದುರಿಸಿಲಾಗಲಾರದ ಮನುಕುಲ, ಸಸ್ಯಕುಲ, ಪ್ರಾಣಿ-ಪಕ್ಷಿ ಕುಲಗಳೆಲ್ಲ ಕುಂದತೊಡಗಿದ್ದವು. ಮನುಕುಲವಂತು ಯಾನಾಡಿ ಬಿಸಿಲಪ್ಪೋ? ಇದು ಇಂಥ ಬಿಸಿಲನ್ನ ಹಿಂದೆಂದೂ ಕಂಡಿಲ್ಲವೆಂದು ಮಾತನಾಡತೊಡಗಿದ್ದರು. ಏನಪ್ಪಾ ಸೂರ್ಯ ಈ ರೀತಿ ಉಗ್ರವಾಗಿರುವೆ? ಅಗ್ನಿ ಪರ್ವತ ಉಕ್ಕಿದಂತಾಗುತ್ತಿದೆ ಬಿಸಿ, ಪ್ರಳಯಕಾಲದ ಅಗ್ನಿಯೋ?, ಬ್ರಹ್ಮರಕ್ಷಸನೋ? ಎಂಬ ಕಲ್ಪನೆಯಲ್ಲಿಯೇ, ಮರದನೆರೆಳೋ, ಮನೆಯನ್ನೋ ಆಶ್ರಯಿಸುವ ಮನುಕುಲವನ್ನು ಸೂರ್ಯ ತನ್ನ ಕೆಂಡದ ಕಣ್ಣುಗಳಿಂದ ನುಂಗುವಂತೆ ನೋಡುವಂತ್ತಿತ್ತು ಆ ಸುಡು ಬಿಸಿಲಿನ ಭೀಕರ ದೃಶ್ಯ. ಮಾನವರೆಲ್ಲ ಸ್ವಾರ್ಥಿಗಳಾಗಿದ್ದಾರೆ ಅದಕ್ಕಾಗಿಯೇ ಸೂರ್ಯ ಭಯಂಕರ ಕೋಪಗೊಂಡು ಸಿಟ್ಟಾಗಿರುವಂತೆ ದಿನದಿಂದ ದಿನಕ್ಕೆ ತೀರ ಈ ಭೂಮಿಗೆ ಹತ್ತಿರವಾಗಿ, ಇಡೀ ಭೂಮಂಡಲವನ್ನೇ ಸುಟ್ಟು ಬೂದಿ ಮಾಡುತ್ತಾನೆಂಬಂತೆ ಕಾಣುತ್ತಿದ್ದ ಆ ಸೂರ್ಯ.

ಅಲ್ಲದೆ ಸಂಕ್ರಾತಿಯ ನಂತರ ಬಿಸಿಲು ಹೆಚ್ಚಾಗುತ್ತದೆ. ಮತ್ತು ಶಿವರಾತ್ರಿಯ ಮುಗಿಯಿತೆಂದರೆ ಬಿಸಿಲಿನ ಹಬ್ಬರ ಇನ್ನೂ ಹೆಚ್ಚುತ್ತದೆ. ಜನ ಯುಗಾದಿ ಹಬ್ಬಕ್ಕಾಗಿ ಮತ್ತು ರಾಮ ನವಮಿಯ ನೀರು ಮಜ್ಜಿಗೆ, ಪಾನಕ, ಕೋಸಂಬರಿಗಳನ್ನು ತಿಂದು ದೇಹವನ್ನು ತಂಪಾಗಿಸಲೆಂದು ದಿನಗಳನ್ನು ಎಣಿಸತೊಡಗುತ್ತಾರೆ. ಪರಿಸರದಲ್ಲಿರುವ ಮರ-ಗಿಡಗಳು ಹಳೆಯ ಸೀರೆಯನ್ನು ಕಳಚಿಟ್ಟು ಹೊಚ್ಚ ಹೊಸ ಚಿಗುರಿನ ಹಸಿರು ಸೀರೆಯನ್ನುಟ್ಟು ಕಂಗೊಳಿಸುತ್ತಿರುತ್ತವೆೆ. ಈ ಪ್ರಕೃತಿಯಲ್ಲಾಗುವ ಈ ಸೋಜಿಗವನ್ನು ಕಂಡು ಜನರು ಬೆರಗಾಗುತ್ತಾರೆ.

ಮಳೆ ಇರಲಿ ಇಲ್ಲದಿರಲಿ ಈ ಕ್ರಿಯೆ ಮಾತ್ರ ನಡೆಯುತ್ತಿರುತ್ತದೆ.ರಜೆ ಇದ್ದ ಕಾರಣ ಊರಿಗೆ ಬಂದಿದ್ದ ಗೌರಿಗೆ ಮದ್ಯಾಹ್ನ ಬಿಸಿಲಿನ ಝಳವನ್ನು ತಡೆಯಲಾರದೆ ಮನೆಯ ಮುಂದಿನ ಮರದ ಕೆಳಗೆ ಕುಳಿತಿದ್ದಳು. ಅಲ್ಲಿ ಬೀಸುವ ಬಿಸಿಲು ಮಿಶ್ರಿತ ಗಾಳಿಗೆ ಅವಳಲ್ಲಿ ಮನ ಹೀಗೆಲ್ಲ ಯೋಚಿಸಿತ್ತು. ಆಗ ತಕ್ಷಣ ಕಣ್ಣಿಗೆ ಬಿದ್ದದ್ದು, ಆ ಮನೆಯ ಮಕ್ಕಳು ಒಂದು ಪುಟಾಣಿ ಪಂಜರದಲ್ಲಿ ಎರಡು ಲವ್ ಬಡ್ಸ್ಗಳನ್ನು ಕೊಡಿ ಹಾಕಿ ಮನೆಯ ಮುಂದೆ ನೇತುಹಾಕಿದ್ದರು. ಆ ಬಿಸಿಲಿನ ಝಳಕ್ಕೆ ಆ ಪಕ್ಷ್ಷಿಗಳು ತಲ್ಲಣಗೊಂಡು ಜೋರಾಗಿ ಸದ್ದು ಮಾಡಿತ್ತಿದ್ದವು. ಈ ಪ್ರಕೃತಿಯಲ್ಲಿ ಪ್ರಾಣಿ-ಪಕ್ಷಿಗಳಿಗೂ ತನ್ನಿಂಚ್ಛೆಯಂತೆ ಬದುಕುವ ಹಕ್ಕಿದೆಯಲ್ಲವೆ? ಆದರೆ ಈ ಪುಟಾಣಿ ಪಕ್ಷಿಗಳನ್ನು ಪಂಜರದಲ್ಲಿಟ್ಟು ಅವುಗಳ ಸ್ವಚ್ಛಂದ ಬದುಕನ್ನು ಹೀಗೆ ಕಟ್ಟಿಹಾಕಿದ್ದಾರಲ್ಲ. ತಕ್ಷಣ ಮನೆಯ ಮಕ್ಕಳನ್ನು ಕರೆದು ಆ ಪಕ್ಷಿಗಳನ್ನು ಬಂಧನದಿಂದ ಬಿಡುವಂತೆ ಹೇಳಿದಳು. ಆದರೆ ಮಕ್ಕಳು ಒಪ್ಪಲಿಲ್ಲ. ಅಕ್ಕ ಮೊದಲು ನಮ್ಮ ಮನೆಯ ಪಡಸಾಲೆಯಲ್ಲಿ ಗುಬ್ಬಚ್ಚಿಗಳು ಬರುತ್ತಿದ್ದವು. ಅದರೆ ಈಗ ಬರುವುದಿಲ್ಲ ಅದಕ್ಕೆ ಕಾರಣವೂ ತಿಳಿದಿಲ್ಲ ಅದಕ್ಕೆ ನಾವು ಪಕ್ಷಿಗಳನ್ನು ನೋಡದೆ ಇರಲಾರವು ಅದಕ್ಕಾಗಿ ಈ ಪಕ್ಷಿಗಳನ್ನು ಹೀಗೆ ಇಟ್ಟಿದ್ದೇವೆ ಎಂದರು. ಇದನ್ನು ಕೇಳಿದ ಗೌರಿಯ ಮನಸ್ಸು ನೆನಪಿನಾಳಕ್ಕೆ ಇಳಿಯಿತು.ಅದೊಂದು ದೊಡ್ಡದಾದ ಊರ ಮಧ್ಯೆದಲ್ಲಿರುವ ಒಂದು ಹಳ್ಳಿಯಲ್ಲಿನ ದೊಡ್ಡ ಮನೆ. ಗುಡಿಸಲಿದ್ದ ಆ ಜಾಗದಲ್ಲಿ ದೊಡ್ಡ ಅರಮೆನೆಯಂತಹ ಮನೆ ಅಲ್ಲಿ ನಿರ್ಮಾಣವಾಗಿತ್ತು. ಅದು ತುಂಬಿದ ಮನೆ. ಯಾವಾಗಲೂ ಮಕ್ಕಳು ಮರಿಗಳಿಂದ ತುಂಬಿ ಗಿಜಿಗಿಜಿ ಎನ್ನುತ್ತಿತ್ತು.

ಆ ಮನೆಯ ಮುಂದಿನ ಚಪ್ಪರದಲ್ಲಿ ಪುಟಾಣಿ ಗೂಡಗಳನ್ನು ಕಟ್ಟಿಕೊಂಡು ಗುಬ್ಬಚ್ಚಿಗಳು ಸದಾ ಚಿಂವ್ ಚಿಂವ್ ಎಂದು ಸದ್ದನ್ನು ಮಾಡುತ್ತಾ ಆ ಮನೆಯ ಪಡಸಾಲೆಯಲ್ಲಿನ ಉಯ್ಯಾಲೆಗೆಂದು ಹಾಕಿದ್ದ ಕೊಕ್ಕೆಗಳ ಮೇಲೆ ಕುಳಿತು, ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆಗೆ ಚಿಲಿಪಿಲಿಗುಟ್ಟುತ್ತಲೆ ಹಾರುತ್ತಿದ್ದವು ಗುಬ್ಬಚ್ಚಿಗಳು. ಅಲ್ಲಿ ಮೊಟ್ಟೆಗಳನ್ನು ಇಟ್ಟು ಮರಿಗಳನ್ನೂ ಮಾಡುತ್ತಿದ್ದವು. ಈ ಗುಬ್ಬಿಚ್ಚಿಗಳಿಗೆ ಆ ಮನೆಯ ಹಿರಿಯ ಜೀವ ದಿನಾಲು ಅಕ್ಕಿಯ ನುಚ್ಚನ್ನು ಹಾಕುತ್ತಿತ್ತು. ಈ ಅಕ್ಕಿಯ ನುಚ್ಚನ್ನು ತಿನ್ನಲು ಗುಬ್ಬಚ್ಚಿಯ ದಂಡೇ ಬರುತ್ತಿತ್ತು. ಆ ದಂಡನ್ನು ನೋಡಲು ಮನೆಯ ಮಕ್ಕಳೆಲ್ಲ ಕಾದು ಕುಳಿತುಕೊಳ್ಳುತ್ತಿದ್ದರು. ಆ ಮನೆಯವರಿಗೆಲ್ಲ ಬೆಳಗಿನ ಸುಪ್ರಭಾತ ಈ ಗುಬ್ಬಚ್ಚಿಗಳ ಚಿಲಿಪಿಲಿ ಸದ್ದೇ. ಈ ನೋಟವಂತೂ ಕಣ್ಣಿಗೆ ತಂಪು, ಮನಸ್ಸಿಗೆ ಹಿತ ನೀಡುತ್ತಿತ್ತು.ಮೊಟ್ಟೆಗಳನ್ನಿಟ್ಟು ಮರಿಗಳನ್ನು ಮಾಡಿ, ಅವುಗಳನ್ನು ಕಾಪಾಡಲು ತಾಯಿ ಗುಬ್ಬಚ್ಚಿ, ಗೂಡಿನಿಂದ ಪುರ್ ಎಂದು ಹಾರಿ ಹೋಗಿ, ಆಹಾರವನ್ನು ಹುಡುಕಿ ತಂದು ಅವುಗಳ ಬಾಯಿಗೆ ಗುಟುಕಾಗಿ ನೀಡುತ್ತಿತ್ತು. ಈ ದೃಶ್ಯವಂತೂ ಬಹಳ ಅದ್ಭುತ. ಹೀಗೆ ತಾಯಿ ಕೊಟ್ಟ ಗುಟುಕನ್ನು ತಿಂದು, ರೆಕ್ಕೆ ಬಲಿತ ಆ ಮರಿ ಗುಬ್ಬಚ್ಚಿಗಳು ಹಾರಲು ಪ್ರಯತ್ನಿಸುವುದು, ತಮ್ಮ ಊಟವನ್ನು ತಾವೇ ಹುಡುಕಿಕೊಳ್ಳುವ ಪ್ರಯತ್ನದಲ್ಲಿ ಒಮ್ಮೊಮ್ಮೆ ಕೆಳಗೆ ಬೀಳುತ್ತಿದ್ದವು. ಆ ಕ್ಷಣ ಆ ಮನೆಯ ಮಕ್ಕಳ ಗುಂಪು ಆ ಪುಟ್ಟ ಹಕ್ಕಿಯನ್ನು ಹಿಡಿಯಲು ಓಡಿದಾಗ, ಆ ಮನೆಯ ಹಿರಿಯ ಜೀವ ಕೋಲಿನಿಂದ ಮಕ್ಕಳನ್ನು ಹೊಡೆಯಲು ಬರುತ್ತಿತ್ತು, ಗದರಿಸುತ್ತಿತ್ತು.

ಅಲ್ಲದೆ ತಾಯಿ ಮಕ್ಕಳನ್ನು ಹಾಗೆಲ್ಲ ಬೇರೆ ಮಾಡಬಾರದು ಎಂಬ ನೀತಿಯನ್ನು ಹೇಳಿಕೊಡುತ್ತಿತ್ತು. ಅಜ್ಜಿ ನೀನು ನಮ್ಮನ್ನೇನೋ ಕಾಯ್ತೀಯ ಆದರೆ ಆ ಕಳ್ಳಬೆಕ್ಕನ್ನೂ ಮಾತ್ರ ಕಾಯುವುದಿಲ್ಲ. ಯಾಕೆ ಅದು ಬಂದು ಮರಿಗಳನ್ನು ತಿನ್ನುತ್ತದೆ ಗೊತ್ತಾ. ’ಏನ್ ಮಾಡೋದು ಮಕ್ಕಳ ನನ್ನ ಕಣ್ಣನ್ನು ತಪ್ಪಿಸಿ ಅದರ ಹೊಟ್ಟೆ ಹಸಿವನ್ನು ಅದು ನೀಗಿಸಿಕೊಳ್ಳುತ್ತದೆ’ ಎಂದರು ಅಜ್ಜಿ. ಒಮ್ಮೆ ಒಂದು ಗುಬ್ಬಚ್ಚಿ ಎರಡು ಮರಿಗಳನ್ನು ಮಾಡಿತ್ತು. ಅದನ್ನು ತುಂಬಾ ಜಾಗ್ರತಿಯಿಂದ ಕಾಪಾಡುತ್ತಿತ್ತು. ಆಹಾರಕ್ಕೆಂದು ಹೊರಗೆ ಹೋದರೆ ತಕ್ಷಣ ಹಿಂತಿರುಗಿ ಬರುತ್ತಿತ್ತು. ತಾಯಿ ಎಂಬ ಪದಕ್ಕೆ ಯಾವುದೇ ಬೇಧಭಾವಿಲ್ಲ. ಎಲ್ಲಾ ಪ್ರಾಣಿ-ಪಕ್ಷಿ ಸಂಕುಲದಲ್ಲೂ ಅಮ್ಮನೆಂದರೆ ಮಾನವರಲ್ಲಿರುವಷ್ಟೇ ಪ್ರೀತಿ, ವಾತ್ಸಲ್ಯ ಇರುತ್ತದೆ. ಆ ಗುಬ್ಬಚ್ಚಿ ತನ್ನ ಮಕ್ಕಳನ್ನು ಆ ಬೆಕ್ಕಿನಿಂದ ಕಾಪಾಡುವುದು, ಅಲ್ಲದೆ ಹಸಿದ ಹೊಟ್ಟೆಗೆ ಗುಟುಕು ನೀಡಿ ಉಣಬಡಿಸುತ್ತಿತ್ತು. ಆ ಎದೆಯಾಳದ ಪ್ರೀತಿಗೆ ಬೆಲೆ ಕಟ್ಟಲು ಸಾದ್ಯವಿರಲ್ಲಿಲ್ಲ. ಹೀಗೆ ಒಮ್ಮೆ ತಾಯಿ ಗುಬ್ಬಿ ಆಹಾರ ಹುಡುಕಲು ಹೊರಗೆ ಹೋದಾಗ ಹೊಂಚು ಹಾಕಿದ್ದ ಬೆಕ್ಕು ಒಂದು ಮರಿಯನ್ನು ಎತ್ತಿಕೊಂಡು ಹೋಗಿಯೇ ಬಿಟ್ಟಿತು. ಮಕ್ಕಳು ಎಷ್ಟೇ ಪ್ರಯತ್ನಿಸಿದರೂ ಬಿಡಿಸಲು ಆಗಲಿಲ್ಲ. ಎಲ್ಲಿ ಕಾದಿತ್ತೋ ಈ ಯಮಗಾತುಕ ಬೆಕ್ಕು ಛೆ… ಎಂದು ಮಕ್ಕಳು, ಅಜ್ಜಿ ಪೇಚಾಡುತ್ತಿದ್ದರು.

ಆ ಗುಬ್ಬಿ ಮರಿ ಚಿಂವ್ ಚಿಂವ್ ಎಂದು ಕೂಗಿಕೊಳ್ಳುತ್ತಿತ್ತು ಆ ನರಕ ಸದೃಶ… ಅಮ್ಮಾ ಎಲ್ಲಿರುವೆ ಬೇಗ ಬಾ, ನನ್ನನ್ನು ಬಿಡಿಸಿ ಎಂಬ ಮೂಕವೇದನೆಯಲ್ಲಿ ಕಿರುಚುವಂತ್ತಿತ್ತು. ಅಮ್ಮ ಈ ಸಾವಿನಿಂದ ಪಾರು ಮಾಡಲಾರೆಯ ಎಲ್ಲಿ ಹೋದೆಯಮ್ಮ. ಈ ಸಾವಿನ ಗಾಳಕ್ಕೆ ನನ್ನ ಒಪ್ಪಿಸಿಬಿಟ್ಟೆಯ? ತುಡುಕಾಡುತಿದೆ ನನ್ನ ಜೀವ. ಎನ್ನುವಂತಿತ್ತು ಆ ಕೊಗು. ಸ್ವಲ್ಪ ಹೊತ್ತಿನಲ್ಲಿ ಬೆಕ್ಕಿನ ಬಾಯಿಯೆಲ್ಲಾ ಕೆಂಪಾದ ಓಕುಳಿಯಾಗಿತ್ತು. ಆ ರಕ್ಕಸಿ ಬೇಕ್ಕು ಮುದ್ದಾದ ಗುಬ್ಬಿ ಮರಿಯನ್ನು ತಿಂದು ಮುಗಿಸಿತ್ತು. ಸ್ವಲ್ಪ ಹೊತ್ತಿನಲ್ಲಿಯೇ ಎಲ್ಲವೂ ಸ್ತಬ್ದವಾಗಿತ್ತು. ಅದೇ ಮನುಷ್ಯರಾಗಿದ್ದರೆ ಎಷ್ಟು ಜನ ಸೇರುತ್ತಿದ್ದರೂ, ಎಷ್ಟು ಕೊಗಾಟ, ಕಿರುಚಾಟ, ಹೊಡೆದಾಟಗಳಾಗುತ್ತಿತ್ತೋ ಒಂದು ಕ್ಷಣ ಊಹೆ ಮಾಡಿಕೊಳ್ಳಲು ಅಸಾಧ್ಯ. ಆದರೆ ಈ ಪ್ರಪಂಚದಲ್ಲಿ ಪ್ರಾಣಿ-ಪಕ್ಷ್ಷಿಗಳ ಜೀವಕ್ಕೆ ಬೇಲೆಯೇ ಇಲ್ಲವೇ?. ಇತ್ತ ಆಹಾರಕ್ಕೆಂದು ಹೋದ ತಾಯಿ ಗುಬ್ಬಿ ಬಂದು, ಒಂದು ಮರಿ ಇಲ್ಲದ್ದನ್ನು ಕಂಡು, ಕೂತಲ್ಲಿ ಕೂರದೆ, ಗೂಡಿನಲ್ಲೂ ಇರದೆ ಅತ್ತಿಂದ ಇತ್ತ ಇತ್ತಿಂದ ಅತ್ತ ಚಿಂವ್ ಚಿಂವ್ ಎಂದು ಏರು ಧ್ವನಿಯಲ್ಲಿ ಕೂಗುತ್ತಾ ಹಾರಾಡುತ್ತಿತ್ತು. ಆ ಹತ್ತ ಕರುಳಿನ ಸಂಕಟ ಹೇಳತೀರದಾಗಿತ್ತು. ಅದರ ವೇದನೆಯನ್ನು ಕೇಳುವವರಾದರೂ ಯಾರು?, ಹೀಗೆ ಎರಡು ತಾಸು ಹಾರಾಡಿದ ತಾಯಿ ಗುಬ್ಬಿ ತನ್ನ ಅಂತರಾಳದ ಮೂಖ ವೇದನೆಯನ್ನ ನಿಲ್ಲಿಸಿತು. ಅದರ ಗೂಡನ್ನು ಸೇರಿತು. ಈಗ ಆ ಗೂಡಲ್ಲಿ ಸ್ಮಶಾನ ಮೌನ. ಸ್ವಲ್ಪ ದಿನಗಳ ನಂತರ ಮನೆಯ ಎದುರಿನಲ್ಲಿಯೇ ಒಂದು ದೈತ್ಯಾಕಾರದ ಮೊಬೈಲ್ ಟವರನ್ನು ನಿರ್ಮಿಸಿಬಿಟ್ಟರು.

ಒಂದು ಕಡೆ ಬೆಕ್ಕಿನ ಉಪಟಳ, ಮತ್ತೊಂದು ಆ ಟವರ್ನ ನೋವನ್ನು ತಾಳಲಾರದೆ, ದಿನದಿಂದ ದಿನಕ್ಕೆ ಗುಬ್ಬಿಗಳ ಗುಂಪು ಹಾಗು ಚಿಲಿಪಿಲಿ ಗಾಯನ ಕಡಿಮೆಯಾಗಿತ್ತು. ಒಮ್ಮೆ ಅಜ್ಜಿ ಮೊಮ್ಮಕ್ಕಳೆಲ್ಲರೂ ಸೇರಿ ಒಂದು ಸಭೆ ನಡೆಸಿದರು. ಯಾಕಜ್ಜಿ ಈಗ ಗುಬ್ಬಚ್ಚಿಗಳ ಗುಂಪು ಬರುತ್ತಿಲ್ಲ, ನೀನು ಹಾಕಿದ ಅಕ್ಕಿಯ ನುಚ್ಚು ಹಾಗೆಯೇ ಇರುತ್ತದೆ. ಎಲ್ಲಿ ಹೋದವು ಈ ಗುಬ್ಬಚ್ಚಿಗಳು ಹೇಳಿ ಅಜ್ಜಿ. ಏನೋ ನನಗೂ ಗೊತ್ತಿಲ್ಲ ಮಕ್ಕಳೆ ಎಂದಿತು ಆ ಹಿರಿಯ ಜೀವ. ಈ ಬೆಕ್ಕು ಮರಿಗಳನ್ನು ತಿನ್ನುತ್ತಲ್ಲ ಅದಕ್ಕೆ ಎಲ್ಲೋ ಹೋಗಿಬಿಟ್ಟಿವೆ ಮಕ್ಕಳೆ, ಏನೊ ಮಾಡೋದು ಅವು ಬದುಕಬೇಕಲ್ಲ ಎಂದು ಅಜ್ಜಿ ಹೇಳುತ್ತಿದ್ದಳು. ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಗ್ಷರಿ, ಇವರ ಮಾತನ್ನು ಮೊಟುಕುಗೊಳಿಸಿ, ಮಾತಿಗೆ ಬಂದಳು. ಅದು ಹಾಗಲ್ಲ ಅಜ್ಜಿ ನಾನು ಹೇಳುತ್ತೇನೆ ಕೇಳಿ, ಇದು ಬೆಕ್ಕಿನ ಉಪಟಳ ಒಂದೆ ಅಲ್ಲ. ನೋಡಿ ಅಲ್ಲಿ ಎಂದು ಎದುರಿಗಿದ್ದ ಆ ದೈತ್ಯಕಾರದ ಮೊಬೈಲ್ ಟವರ್ ಅನ್ನು ತೋರಿಸಿದಳು. ಗುಬ್ಬಚ್ಚಿ ದಂಡು ಬರದಿರಲು ಮುಖ್ಯ ಕಾರಣ ಅದು, ’ಅದು ಹೇಗೆ ಅಕ್ಕ ಅದು ಅಲ್ಲಿದೆ, ಈ ಗುಬ್ಬಚ್ಚಿಗಳು ಇಲ್ಲಿ ಬರದಿರಲು ಹೇಗೆ ಸಾಧ್ಯವೆಂದರು’ ಮಕ್ಕಳು. ನಾವು ಬೇರೆಯವರಿಗೆ ಕಾಲ್ ಮಾಡಿದಾಗ, ಅಥವ ನಮ್ಮ ಮೊಬೈಲ್ಗೆ ಬೇರೆಯವರು ಕಾಲ್ ಮಾಡಿದಾಗ, ಮೊಬೈಲ್ ರಿಂಗ್ ಆಗುತ್ತಲ್ಲ, ಆ ರಿಂಗ್ ಆಗುವ ಶಬ್ದದಿಂದ ಹೊರ ಬರುವ ತರಂಗಗಳು, ಈ ಪುಟ್ಟ ಗುಬ್ಬಚ್ಚಿಗಳ ಮೇಲೆ ಬಹಳ ದೊಡ್ಡ ಮಟ್ಟದ ಕೆಟ್ಟ ಪರಿಣಾಮವನ್ನು ಬೀರುತ್ತವೆ. ಯಾರಾದರೂ ಒಬ್ಬರು ಬನ್ನಿ ನಿಮಗೆ ನಾನು ತೋರಿಸುವೆ ಎಂದು ಕರೆದಳು. ಒಂದು ಮಗು ಬಂದು ಏನಕ್ಕ? ಎಂದು ಮುಂದೆ ಬಂತು ನಿಂತಿತು.

ಆ ಮಗುವಿಗೆ ಚಿಕ್ಕದಾಗಿ ಬಟ್ಟೆಯ ಪಿನ್ನಿನಿಂದ ಚುಚ್ಚುತ್ತಾಳೆ, ಆಗ ತಕ್ಷಣ ಆ ಮಗು ಕೋಪಗೊಂಡು ’ಯಾಕಕ್ಕ? ಹೀಗೆ ಚುಚ್ಚುವೆ ಎಷ್ಟು ನೋವಾಯಿತು ಗೊತ್ತಾ’ ಎಂದು ಅಳಲು ಆರಂಭಿಸಿತು. ಆಗ ಅವಳು ಇಲ್ಲ ಮಗು ಬಾ ಇಲ್ಲಿ ಈ ರೀತಿಯ ನೋವು ಆ ಗುಬ್ಬಿಗಳಿಗೂ ಆಗುತ್ತದೆ. ಆದ ಕಾರಣ ಅವು ಇದರ ಹತ್ತಿರವೂ ಸುಳಿಯುವುದಿಲ್ಲ ಎಂದು ಸಮಾಧಾನ ಮಾಡಿದಳು. ಇದನ್ನು ಕೇಳಿದ ಮಕ್ಕಳಿಗೆ ಅಯ್ಯೋ ಪಾಪ ಅಲ್ವ ಎಂದು ಎದುಸಿರುಬಿಟ್ಟರು. ಆದರೆ ಪಟ್ಟಣದಲ್ಲಿರುವ ಇಂದಿನ ಪೀಳಿಗೆಯ ಮಕ್ಕಳು ಈ ಗುಬ್ಬಚ್ಚಿಗಳನ್ನು ನೋಡೆ ಇಲ್ಲ. ಇವುಗಳ ಪರಿಚಯವೂ ಅವರಿಗೆ ಇರುವುದಿಲ್ಲ. ಈ ಗುಬ್ಬಚ್ಚಿಗಳು ನಿಧಾನವಾಗಿ ಕಣ್ಮರೆಯಾಗುತ್ತಿರುವುದು ಬಹಳ ದುಃಖಕರ ವಿಷಯ. ನಿಮಗೆ ಇದರ ಪರಿಚಯ ಅದರ ಚಿಲಿಪಿಲಿ ಸದ್ದು ಎಲ್ಲವೂ ತಿಳಿದೆ. ಆದರೆ ಪಟ್ಟಣದ ಮಕ್ಕಳು ಇದರಿಂದ ಬಹಳ ದೂರ ಉಳಿದ್ದಿದ್ದಾರೆ ಎಂದಳು ಗೌರಿ. ಅಷ್ಟೇ ಅಲ್ಲ ಮಕ್ಕಳೇ ಇದು ಮಾರ್ಚ್ ತಿಂಗಳಲ್ಲವೆ, ಇದೇ 20 ರಂದು ಅಂತರರಾಷ್ಟ್ರೀಯ ಗುಬ್ಬಿ ದಿನಾಚರಣೆಯನ್ನು ಆಚರಿಸುತ್ತಾರೆ. ಈ ಪಕ್ಷಿ ಸಂಕುಲ ಮರೆಯಾಗುತ್ತಿರುವುದರಿಂದ , ಆ ಸಂತತಿಯನ್ನು ಉಳಿಸಲು ಈ ದಿನಾಚರಣೆಯನ್ನು ಆಚರಿಸುತ್ತಾರೆ. ಹಾಳಾಗುತ್ತಿರುವ ಗುಬ್ಬಚ್ಚಿಗಳನ್ನು ಉಳಿಸಲು ಅರಿವು ಮೂಡುಸುವ ಉದ್ದೇಶದಿಂದ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದಳು. ಅದಕ್ಕೆ ಆಶ್ಚರ್ಯ ವ್ಯಕ್ತ ಪಡಿಸಿದ ಮಕ್ಕಳು. ಅಕ್ಕ ಮಕ್ಕಳ ದಿನಾಚರಣೆ, ಶಿಕ್ಷಕರ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆಗಳನ್ನು ಕೇಳಿದ್ದೆವೂ, ಆದರೆ ಈ ಗುಬ್ಬಿ ದಿನಾಚರಣೆಯನ್ನು ಕೇಳಿರಲಿಲ್ಲ ಎಂದರು ಆಶ್ಚರ್ಯ ಚಕಿತರಾಗಿ.

ಆಗ ಗೌರಿ ಆ ಮಕ್ಕಳಿಗೆ ಅರ್ಥವಾಗುವಂತೆ ಹೇಳಿದಳು. ಈ ದಿನಾಚರಣೆಗಳಂದು ಎಲ್ಲರೂ ಅವರವರ ಇಚ್ಛೆಯಂತೆ ಸ್ವಾತಂತ್ರ್ಯವಾಗಿ ಬದುಕುವ ಹಕ್ಕಿದೆಯಲ್ಲವೇ ಮಕ್ಕಳೇ? ಎಚಿದಾಗ, ಮಕ್ಕಳೆಲ್ಲ ಒಮ್ಮತದಿಂದ ಹೌದಕ್ಕ ಎಂದರು. ಹಾಗಿದ್ದರೆ ಇಂದು ಈ ಪಕ್ಷಿಗಳನ್ನು ಬಿಟ್ಟು ನೀವು ಸಹ ಈ ದಿನಾಚರಣೆಯನ್ನು ಆಚರಿಸಬಾರದು ಎಂದಳು. ಆಗ ಮಕ್ಕಳೆಲ್ಲ ಆ ಪಂಜರದಿಂದ ಆ ಎರಡು ಮುದ್ದಾದ ಲವ್ ಬಡ್ಸ್ಗಳನ್ನು ಬಂಧಮುಕ್ತಗೊಳಿಸಿದರು. ಎಲ್ಲರೂ ಕೈ ತಟ್ಟಿ ಕುಣಿದರು ಗೌರಿಯಂತೂ ಏನೋ ಸಾಧಿಸಿದಂತೆ ಹೆಮ್ಮೆಯಿಂದ ಬೀಗುತ್ತಿದ್ದಳು. ಹಾಗಾದರೆ ಮತ್ತೆ ಈ ಗುಬ್ಬಚ್ಚಿಗಳು ನಮ್ಮ ಮನೆಗೆ ಬರುತ್ತವೆಯಾ ಅಕ್ಕ ಎಂದರು ಆ ಮುಗ್ದ ಪುಟಾಣಿಗಳು. ಅದು ಈ ಟವರ್ ಇರೋವರೆಗೂ ಸಾಧ್ಯವಿಲ್ಲ ಮಕ್ಕಳೇ. ನಾವು ಇವುಗಳನ್ನು ನೋಡಬೇಕೆಂದರೆ ನಮ್ಮ ಜಮೀನಿಗೆ ಹೋಗೋಣ ಸರಿನಾ ಎಂದುಳು. ಈಗ ಹಳ್ಳಿಗಳಲ್ಲಿಯೂ ಈ ಗುಬ್ಬಚ್ಚಿಗಳ ಸಂತತಿ ಕಾಣ ಸಿಗುತ್ತಿಲ್ಲ. ಮಾನವನ ನಾಗರೀಕತೆಯ ಅಬ್ಬರ ಹಳ್ಳಿಗಳನ್ನು ಬಿಟ್ಟಿಲ್ಲ… ಏನಾದರಾಗಲಿ ಪಕ್ಷಿಗಳನ್ನು ಪಂಜರದಲ್ಲಿಟ್ಟು ಮನುಜರೇ, ನೀವು ಖುಷಿ ಪಡಬೇಡಿ. ಈ ಪ್ರಕೃತಿಯಲ್ಲಿ ಸ್ವಾತಂತ್ರ್ಯವಾಗಿ ಬದುಕುವ ಹಕ್ಕು ಪ್ರಾಣಿ-ಪಕ್ಷಿ ಎಲ್ಲರಿಗೂ ಇದೆ. ನಿಮ್ಮ ಮನೆಗಳಲ್ಲೇನಾದರೂ ಪಕ್ಷಿಗಳನ್ನು ಬಂಧನದಲ್ಲಿಟ್ಟಿದ್ದರೆ, ಅವುಗಳನ್ನು ಬಂಧನದಿಂದ ಮುಕ್ತಗೊಳಿಸಿ, ನಾವು ಒಮ್ಮೆ ಈ ಗುಬ್ಬಚ್ಚಿಗಳಿಗೂ ಶುಭಾಶಯ ಹೇಳಿಬಿಡೋಣ.

‍ಲೇಖಕರು avadhi

21 March, 2014

1 Comment

  1. Anonymous

    nanna lekhana prakatisiddakke dhanyavaadagalu sir….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading