ವಟ ವ್ಯಾಖ್ಯಾನ
ಹಾಲುಗಲ್ಲದ ನಿತ್ಯ ಧ್ಯಾನದ ಬುದ್ಧನಿಗೊಂದು
ಗುಟ್ಟು ಹೇಳುವುದಿದೆ,
ಹಾಗೆಯೇ
ಗುಟ್ಟು ರಟ್ಟಾಗಿಸೆಂದು ಕೇಳುವುದಿದೆ.
ಹುಟ್ಟು ನಿಜವೇ…
ಸಾವೂ ಸಹ ಸಹಜವೇ.
ನಿನ್ನದೆಂಥಾ ಧ್ಯಾನ,
ಅರೆಮುಚ್ಚಿದ ವಿಶಾಲ ನೇತ್ರಗಳಲ್ಲಿಲ್ಲದ ವಾಸನೆಯ ಹುಡುಕಾಟ.
ಬರೇ ಹುಚ್ಚು
ನೀನೆನ್ನ ಭವದ ಗಂಟು ಬಿಚ್ಚು,
ಹೆಮ್ಮರವಾಗಿರುವ ಅಹಂಕಾರವ ಕೊಚ್ಚು,
ದೇಹದ ಬೀಳಲುಗಳಿಗಂಟಿರುವ
ಮೋಹದ ಬಲೆಯೊಳಗಿಹ ಆತ್ಮವ
ಸ್ನೇಹವೆಸಗಿ ಕಾಪಾಡು.
ನಿರ್ಜನ, ನಿರ್ಮಲ ನಿನ್ನ ಸನ್ನಿಧಾನ
ಮಂದಿರ ಮಠಗಳೊಳಗೆ ಅಡಗದೆ
ಹಸಿ ಮರದ ಕೆಳಗಿರುವ ಅಜ್ನಾನ ಗೆಳೆಯನೇ
ನಿನ್ನ ಹುಡುಕುತಿಹೆ,
ಒಳಗೊಳಗೆ,
ಹೊರಗೆ ಇಣುಕಗೊಡುತಿಲ್ಲ
ವೇದನೆ.
ಅಪ್ಪುವಾಸೆ, ಕಾಮವಾಸನೆಗಳಿಗೆ
ಅದ್ದುವಾಸೆ,
ಬಿದ್ದೇಳುವಾಸೆ ಮತ್ತೆ
ಎದ್ದೆಳೆಂದು ಅನುಗ್ರಹಿಸು.
ನಾನೊಬ್ಬ ಪ್ರವಾಸಿ ಆತ್ಮ,
ಬದಲಿಸಿರುತ್ತೇನೆ ದೇಹ,
ಆದರೇನೋ
ಅಂಟಿಕೊಂಡು ಅಂಟದಿರುವ ನಿನ್ನ ಪ್ರಭೆ,
ಅಂಟದಿರಲು ಬಯಸುಹಿದೆ, ಅಂಟಿಕೊಂಡೇ ಇರುವೆ.
ವಟ ವಟನೇ ವದರುತಿಹೆ ಇದೇ ಕಥೆಯ,
ನೀನೇಕೆ ಎದ್ದು ನೋಡದೆ ಸುಮ್ಮನಿರುವೆ.





0 Comments