ಪಿಚಕ್
ಪ್ರಜ್ಞಾ ಮತ್ತಿಹಳ್ಳಿ
ಶೀರ್ಷಿಕೆಯನ್ನೋದಿ ಹಸಿರು ರೆಂಬೆಯ ಮೇಲಿಂದ ಕರಿಕಾಗೆ ನೆಲಕ್ಕಿಳಿಸುವ ಬಿಳಿಪಿಷ್ಟಿಯನ್ನು ಸ್ಮರಿಸಿಕೊಂಡಿರಾ? ಅಥವಾ ಎಂದೋ ಸುಟ್ಟು ಬೂದಿಯಾದನೆಂದು ಹೇಳುವ ಕಾಮನ ಹೆಸರಲ್ಲಿ ಬಿಸಿಯಾಗಿ ಬೀದಿಕಾಮಣ್ಣರು ಹಸಿಹಸಿ ಕಾಮನೆಗಳನ್ನು ಪಿಚಕಾರಿಗಳಲ್ಲಿ ತುಂಬಿಸಿ ಎರಚಾಡುವಬಣ್ಣವನ್ನು ನೆನೆಸಿಕೊಂಡಿರಾ? ಆದರೆ ನಾನು ಹೇಳಹೊರಟಿದ್ದು ಇವೆರಡರ ಬಗ್ಗೆಯೂ ಅಲ್ಲ. ಉತ್ತರಕರ್ನಾಟಕದ ವಿಶಾಲ ಭೂಭಾಗದಲ್ಲಿ ಅಡಿಯಿಟ್ಟಲ್ಲೆಲ್ಲ ಅಡಿಗಡಿಗೆ ಕಾಲಡಿಗಡರುವ, ಗಂಡುಮೆಟ್ಟಿನ ನೆಲದ ಗಂಡುಗಳ ಬಾಯೆಂಬೋ ಬಾಯಿಂದ ಕಾರಂಜಿಯೋಪಾದಿಯಲ್ಲಿ ಹಾರಿ ಬಂದು, ಸುತ್ತಲಿನವರ ಬಿಳಿವಸ್ತ್ರಗಳನ್ನು ಚಿತ್ತಾರಗೊಳಿಸುವ ಕೆಂಪುವರ್ಣದ ಜಲಸೇಚನದ ಬಗ್ಗೆ. ಈ ತಾಂಬೂಲ ಚರ್ವಣಕ್ಕೆ ಭಾರತದ ಇತಿಹಾಸದಲ್ಲೇ ಮಹತ್ವದ ಸ್ಥಾನವಿದೆ. ಹಿಂದಿನ ರಾಜಮಹಾರಾಜರೂ, ಬಾದಶಾಗಳೂ ಸಹ ಇದರ ವ್ಯಸನಿಗಳಾಗಿದ್ದರು. ಆದರೆ ಅವರು ಪಿಚಕ್ ಎನ್ನುವಲ್ಲೆಲ್ಲ ಬಡನಡುವಿನ ಬಡದಾಸಿಯರು ಬಡಬಡನೆ ಕಲಾತ್ಮಕ ಪೀಕದಾನಿಗಳೊಡನೆ ವಕ್ರದೇಹಿಗಳಾಗಿ ವಕ್ಕರಿಸುತ್ತಿದ್ದರು. ಹೀಗೆ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಈ ಅಪೂರ್ವ ಕಲಾವಂತಿಕೆಯನ್ನು ಭಕ್ತಿಯಿಂದ ಕಾಪಿಟ್ಟುಕೊಂಡು ಬಂದವರಲ್ಲಿ ಕರ್ನಾಟಕದ ಅದರಲ್ಲೂ ಉತ್ತರ ಭಾಗದವರು ಉಗ್ರಭಕ್ತರು.
ಕೆಲವು ವರ್ಷಗಳ ಹಿಂದೆ ಗ್ರಾಮೀಣ ಭಾಗದ ಜನರಷ್ಟೇ ಹಸಿರೆಲೆ, ಬಿಳಿ ಸುಣ್ಣ, ಕಂದು ಅಡಿಕೆ, ಕಪ್ಪು ತಂಬಾಕುಗಳಿಗೆ ತಮ್ಮ ಲಾಲಾರಸ ಬೆರೆಸಿ ಕ್ಷಣಮಾತ್ರದಲ್ಲಿ ಲಾವಾರಸದಂತಹ ರಸನಿರ್ಮಾಣ ಮಾಡುವುದರಲ್ಲಿ ಪರಿಣಿತರೂ, ಆಸಕ್ತರೂ ಆಗಿದ್ದರು. ನಾಗರೀಕರೆಂದು ಕರೆದುಕೊಳ್ಳುವ ಪಟ್ಟಣಿಗರು ಇಷ್ಟೆಲ್ಲ ವಸ್ತುಗಳನ್ನು ಬೇರೆಬೇರೆಯಾಗಿ ಖರೀದಿಸಿ ಒಟ್ಟಾಗಿ ಬೆರೆಸಿ ಸೇವಿಸುವ ಕ್ಲಿಷ್ಟವೂ, ಸಂಕೀರ್ಣವೂ ಆದ ಕಾಯಕದತ್ತ ಅನಾಸಕ್ತ ಚಪಲಿಗರಾಗಿದ್ದರು. ಆದರೆ ವ್ಯಾಪಾರ ಚತುರಮತಿಗಳು ಅವರ ಸಂಕೀರ್ಣ ಸಮಸ್ಯೆಯನ್ನು ಸುಲಭಗೊಳಿಸಿಬಿಟ್ಟಿದ್ದಾರೆ. ಫಳಫಳ ಹೊಳೆಯುವ ಬಣ್ಣಬಣ್ಣದ ಚಿತ್ತಾಕರ್ಷಕ ಪುಟಾಣಿ ಪಾಕೀಟುಗಳನ್ನು ಚಿಲ್ಲರೆ ಕೊಟ್ಟು ಕೊಂಡು ಜೇಬಲ್ಲಿ ಇಟ್ಟುಕೊಳ್ಳುವುದು, ಬಾಯಿ ತಹತಹ ಎಂದಾಗ ನಾಜೂಕಾಗಿ ಸ್ಯಾಶೆಯ ತುದಿಯನ್ನು ಬಾಯಿಗೆ ಹಿಡಿದು ಹಲ್ಲಿನಿಂದಲೇ ಕಚ್ಚಿ ಕತ್ತರಿಸಿಕೊಳ್ಳುವುದು ನಂತರ ಒಳಗಿನ ಪುಡಿಯನ್ನು ಎಸೆದುಕೊಂಡರೆ ಮುಗಿಯಿತು, ನಿಮ್ಮ ಲಾವಾರಸದ ಬೆರಕೆಯಿಂದ ರಸವಂತರಾಗುತ್ತೀರಷ್ಟೇ ಅಲ್ಲ ಉಷ್ಣವಂತರೂ ಆಗುತ್ತೀರಿ. ತಾಜಾ ಎಲೆ ಖರೀದಿಸಿ, ನಾರು ತೆಗೆದು, ಸುಣ್ಣ ಸವರಿ, ಅಡಿಕೆ ಹೋಳು ಹಲ್ಲಿಂದ ಪುಡಿ ಮಾಡಿಕೊಂಡು- – – ಓಹ್ ಎಷ್ಟೊಂದು ಕ್ಲಿಷ್ಟವಾದ ಕ್ರಿಯಾ ಸರಪಳಿಯಿಂದ ನಮ್ಮನ್ನು ಮುಕ್ತರನ್ನಾಗಿಸಿದ್ದಾರೆ ಈ ಕಂಪನಿಗಳು! ಯಾವ ಸಣ್ಣ ಗೂಡಂಗಡಿಯಲ್ಲಿ ಕೇಳಿದರೂ ಸಿಗುವ ಸುಲಭ ಸೌಲಭ್ಯ. ಅದರಲ್ಲೂ ಹತ್ತಾರು ಕಂಪನಿಗಳು, ಬೇರೆಬೇರೆ ಹೆಸರು, ಬಣ್ಣ, ವಾಸನೆ ಆದರೆ ಕಿಕ್ ಒಂದೇ. ದೇವನೊಬ್ಬ ನಾಮ ಹಲವು ಎಂಬಂತೆ.
ಮಲೆನಾಡಿನ ನಾನು ಬಯಲುಸೀಮೆಯ ಬಗ್ಗೆ ಪುಸ್ತಕದಲ್ಲಿ ಇಲ್ಲಿನ ಮಣ್ಣು ಕಪ್ಪಾಗಿದ್ದು ಫಲವತ್ತಾಗಿರುತ್ತದೆ ಎಂದು ಓದಿಕೊಂಡಿದ್ದೆ. ಆದರೆ ಇಲ್ಲಿ ಎಲ್ಲೆಲ್ಲೂ ಕೆಂಪು ಜಲ ಸಿಂಪಡಿಸಿದ ನೆಲವೇ ಕಂಡಾಗ ಭೂಗೋಳ ಮಾಸ್ತರನ್ನು ವಿಚಾರಿಸಿದೆ. ಅವರು ಬಾಯಲ್ಲಿದ್ದದ್ದನ್ನು ಪಿಚಕ್ ಎಂದು ಉಗುಳಿ ಗಟ್ಟಿಯಾಗಿ ನಕ್ಕು ನೀ ನೋಡಾಕ ಹತ್ತಿದ್ದು ನೆಲದ ಮೈ ಅಲ್ಲವ್ವಾ ತಂಗೀ, ಮಂದಿ ನೆಲಕ್ಕ ತೊಡಿಸಿರೋ ಕೆಂಪುಗುಳಿನ ಅಂಗೀ ಎಂದು ನುಡಿದಾಗ ನವ್ಯ ಕವನದ ಸಾಲು ಕೇಳಿದಂತಾಗಿ ರೋಮಾಂಚನವೇ ಆಯಿತು. ಭೂ ರಮೆಗೆ ಶಾರಾವಣ ತೊಡಿಸುವ ಹಸಿರು ಅಂಗಿಯ ಬಗ್ಗೆಯಷ್ಟೇ ಬರೆದ ಬೇಂದ್ರೆ ಮಾಸ್ತರ ಊರಿನಲ್ಲಿ ಕೆಂಪಂಗಿ ಕಲ್ಪನೆ ಖುಷಿ ಕೊಟ್ಟಿತು. ಇಲ್ಲಿನ ಜನರ ಕುರಿತು ನಾನು ಕೇಳಿದ ಇನ್ನೊಂದು ಮೆಚ್ಚುಗೆ ಹದಪೆಟ್ಟಿಗೆ ಉದುರದ, ಗಟ್ಟಿಮುಟ್ಟಾದ, ಕತ್ತಲಲ್ಲೂ ಮಿಂಚುವ ದಂತಪಂಕ್ತಿ. ತೆಳ್ಳೇವು ಬೆಲ್ಲ, ಸಿಹಿ ಕಜ್ಜಾಯ ತಿಂದು ತಿಂದು ಹುಳುಕು ದಂತಮಾಲಿಗಳಾದ ನನ್ನ ತೌರ ಜನ ಬಾಯಿ ತೆರೆದರೆ ಹೆದರುತ್ತಿದ್ದ ನಾನು ಇಲ್ಲಿಯ ಸಹೋದ್ಯೋಗಿಗಳನ್ನು ಕರೆಕರೆದು ಮಾತಾಡಿಸಿ ಬಾಯಲ್ಲಿಣುಕಲು ತಿಣುಕುತ್ತಿದ್ದೆ. ಆದರೆ ಇವರೋ ನಿಂತಲ್ಲಿಂದ ಬದಿಗೆ ಹೋಗಿ ಪಿಚಕ್ ಎಂದು ಉಗಿದು ಕೆಮ್ಮಿ ಕ್ಯಾಕರಿಸಿ ಅತ್ತಿತ್ತ ನೀರಿಗಾಗಿ ಕಣ್ಣಾಡಿಸಿ ಕೆಂಪು-ಕಪ್ಪು ದಂತದರ್ಶನ ಮಾಡಿಸಿ ಭ್ರಮನಿರಸನಗೊಳಿಸುತ್ತಾರೆ. ಸಹಪಾಠಿಯೆಂಬ ಸಲುಗೆಯಿಂದ ಒಬ್ಬನನ್ನು ತರಾಟೆಗೆ ತೆಗೆದುಕೊಂಡೇ ಬಿಟ್ಟೆ. ಈ ಹೊಲಸು ಎದಕ ತಿಂತೀಯೋ ಬಾಯಿ ರುಚಿ ತಿಳಿಯಂಗಿಲ್ಲ, ಹಸಿವಾಗಂಗಿಲ್ಲ, ರೊಕ್ಕನೂ ಹಾಳು, ಕ್ಯಾನ್ಸರ್ ಬ್ಯಾರೆ ಪುಕ್ಕಟ್ ಬರ್ತೈತಿ ಭಯ ಭೀತ ಭಾವನೆ ಹುಟ್ಟಿಸುವ ಭಯಂಕರ ಭಾಷಣವನ್ನು ಎಡೆಬಿಡದೇ ಉಸಿರುಗಟ್ಟಿ ಬಿಗಿದು ಬೆವರೊರೆಸಿಕೊಂಡೆ. ನೀ ಹೇಳೂದೂ ಖರೆ ಐತಿ ಬಿಡು, ಇದರ ಬಗ್ಗೆ ವಿಚಾರ ಮಾಡಾಕ ಬೇಕು ಎಂದು ಮುಖ ಸಪ್ಪಗೆ ಮಾಡಿದ. ನರಹಂತಕ ಅಂಗುಲಿಮಾಲ ಬೌದ್ಧ ಭಿಕ್ಷುವಾಗುತ್ತಿದ್ದಾನೆ ಎಂದು ಖುಷಿಯಾತಿರೇಕದಿಂದ ಕಿರುಚಿದೆ ಖರೇನ ಬಿಡ್ತಿ ಕಿಸೆಯಲ್ಲಿ ಕೈ ಹಾಕಿ ಸಾವಿರ-ಐನೂರರ ನೋಟುಗಳ ಪಿಂಡಿ ಹಿಡಿದು ತಿರುಗಿಸಿ ಮತ್ತೆ ಒಳ ಸೇರಿಸುತ್ತ ಚೊಲೊತ್ನಾಗಿ ಏನಾರೆ ವಿಚಾರ ಮಾಡಬೇಕಂದ್ರ ತಲಿ ಖಾಲಿ ಆಗೈತೆ ನಮ್ಮವ್ವಾ. ಚಿಲ್ಲರ ಏನರ ಇಟ್ಟಿದ್ರ ಕೊಡಿತ್ಲಾಗಿ ಎಂದ. ಯಾಕೆ ಅಂತಲೂ ಕೇಳದೇ ಸಂಭ್ರಮದಿಂದ ಒಂದಿಷ್ಟು ನಾಣ್ಯ ಕೊಟ್ಟೆ. ಗಬಕ್ಕನೆ ಕಸಿದುಕೊಂಡು ಒಂದು ಸ್ಟಾರು ಕೊಡಪಾ ಎಂದು ಪಕ್ಕದ ಅಂಗಡಿಗೆ ನುಗ್ಗಿಬಿಟ್ಟ.
ತಮ್ಮದೇ ಕಿಸೆಯ ರೊಕ್ಕದಿಂದ ಖರೀದಿಸಿ, ತಮ್ಮದೇ ಬಾಯಲ್ಲಿ ಜಗಿದು, ಸ್ವರ್ತ ತಾವೇ ಉಗಿದು, ತಮ್ಮದ್ದಾದ ಸುಖ ಶಾಂತಿ ಪಡೆಯುವ, ತಮಗಾಗಿ- ತಮ್ಮಿಂದ- ತಮ್ಮಲ್ಲಿ ಇರುವ ಈ ಬಾಯ್ ಹವ್ಯಾಸದ ಬಗ್ಗೆ ನೀವೇಕೆ ಬಾಯಿ ಹಾಕುತ್ತೀರಿ? ಎಂದು ಒಬ್ಬ ರಸಪ್ರಿಯರು ಕೇಳಿದರು. ನಿಮ್ಮ ಹೇಳಿಕೆಯಲ್ಲಿರು ಖರೀದಿಸಿ, ಜಗಿದು ಇವುಗಳ ಬಗ್ಗೆ ನನ್ನ ತಕರಾರು ಕಡಿಮೆ. ಆದರೆ ಕೊನೆಯ ಉಗಿದು ಎಂಬ ನೆಲ ಕೆಂಪಾಗಿಸುವ ಕ್ರಿಯೆಯ ಬಗ್ಗೆ ನನ್ನ ಕಣ್ಣು ಕೆಂಪು ಎಂದೆ. ಬಸ್ಸು ಸ್ಟ್ಯಾಂಡು, ರಸತೆಗಳನ್ನು ಬಿಡಿ, ಹೊಟೆಲಿನ ವಾಷ್ ಬೇಸಿನ್ನು, ಮೂತ್ರಾಲಯದ ಗೋಡೆಗಳು, ಥಿಯೇಟರಿನ ಮೂಲೆಗಳಂತೂ ಅಘೋಷಿತ ಫುಲ್ ಟೈಮು, ಪರ್ಮನೆಂಟು ಪೀಕದಾನಿಗಳು. ಇವಿಷ್ಟೇ ಅಲ್ಲದೇ ಕಾಂಪ್ಲೆಕ್ಸುಗಳ ಮಹಡಿ ಹತ್ತುವ ಮೆಟ್ಟಿಲುಗಳ ಅಷ್ಟೂ ತಿರುವುಗಳು ಕೂಡ ರಾಗ ರಂಜಿತವಾಗಿರುತ್ತವೆ. ಮಿನಿ ವಿಧಾನ ಸೌಧದಂತಹ ಸರ್ಕಾರಿ ಕಟ್ಟಡದ ವಿಶಾಲ ಪ್ರಾಂಗಣಗಳಲ್ಲಿ ಮಹಡಿ ಏರುವಲ್ಲೆಲ್ಲ ಅಲ್ಲಲ್ಲಿ ಗೋಡೆಗೆ ಉಗುಳಬಾರದೆಂದು ಬಗೆಬಗೆಯ ದೇವರ ಟೈಲ್ಸುಗಳನ್ನು ಜೋಡಿಸಿದ್ದಾರೆ. ಆದರೆ ರಸಪ್ರಿಯರು ಈ ಟೈಲ್ಸುಗಳ ನಡುವಿನ ಅಂತರಗಳಲ್ಲಿ ಪಿಚಕಾರಿ ಚಿಮ್ಮಿಸಿ ತಾವು ಉತ್ತಮ ಗುರಿಕಾರರೆಂದು ನಿರೂಪಿಸಿದ್ದಾರೆ. ವರಕವಿ ಸಂಜೆಯ ಆಕಾಶದ ಬಗ್ಗೆ ಬರೆದ ಪದ್ಯ ಇಡೀ ಊರಿನ ನೆಲ-ಗೋಡೆಗಳಿಗೂ ಅನ್ವಯಿಸುತ್ತದೆ. ನೆಲದ ಮಾರಿಗೆ ರಾಗ ರತಿಯ ನಂಜ ಏರಿತ್ತ-
ನೆಲ-ಗೋಡೆಗಳಂತಹ ನಿರ್ಜೀವ ಸ್ಥಾವರಗಳಿಗೆ ಗುರಿಯಿಟ್ಟು ಪಿಚಕಾರಿ ಹೊಡೆಯುವುದಷ್ಟೇ ಆಗಿದ್ದರೆ ಆ ಕಡೆ ಹಾಳಾಗಲಿ ಬಿಟು ಅಂತ ಬಿಡಬಹುದಿತ್ತೇನೋ ಆದರೆ ಸ್ವಚ್ಛ ಬಟ್ಟೆ ಧರಿಸಿ ಶುಚಿರ್ಭೂತರಾದ ಭಾವದೊಂದಿಗೆ ರಸ್ತೆಗಳಲ್ಲಿ ನಡೆಯುವಾಗ, ದ್ವಿಚಕ್ರ ವಾಹನಗಳಲ್ಲಿ ಕೂತು ಗಾಳಿ-ಬೆಳಕು-ಬಿಸಿಲಿನ ಜೊತೆಗೆ ಅನುಸಂಧಾನ ನಡೆಸುತ್ತ ಸಾಗುವಾಗ ಇದ್ದಕಿದ್ದ ಹಾಗೆ ಪೂರ್ವ ಜನ್ಮದ ಕರ್ಮವೊಂದು ನೆನಪಿಟ್ಟು ಬೆನ್ನಟ್ಟಿ ಬಂದು ಪಿಚಕ್ಕನೆ ಆವರಿಸುವ ಹಾಗೆ ಬೆಲೆ ಬಾಳುವ ಉಡುಪಿನ ಮೇಲೆ ಅಥವಾ ಮುಖ-ಕೈ-ಕತ್ತುಗಳ ಮೇಲೆ ಅಪ್ಪಳಿಸುತ್ತದೆ. ಹೇಳತೀರದ ಹೇವರಿಕೆಯೊಂದು ಹುಟ್ಟಿ, ನರನಾಡಿಗಳಲ್ಲಿ ಅಸಹ್ಯ ಬೆರೆತ ರೋಷವು ಸಿಟ್ಟಾಗಿ ಪ್ರವಹಿಸಿ ನಾವು ಕಾರಣೀಕರ್ತವನ್ನು ಹುಡುಕಿ ತದುಕ ಬೇಕೆನ್ನುವಷ್ಟರಲ್ಲಿ ಪಕ್ಕದ ಬಸ್ಸಿನ ಕಿಡಕಿಯಿಂದಲೋ, ರಿಕ್ಷಾದಿಂದಲೋ ತನ್ನ ಬಣ್ಣಗಾರಿಕೆ ಮುಗಿಸಿದ ಆ ಮುಖ ಮಾಯವಾಗಿಬಿಟ್ಟಿರುತ್ತದೆ. ಈ ತೆರನಾದ ಅನಿರೀಕ್ಷಿತ ಪಿಚಕ್ಕಿಗೆ ಬಲಿಯಾದ ಎಷ್ಟೋ ಜನ ತಾವು ಹೊರಟ ಕೆಲಸಕ್ಕೆ ಆಸ್ಥಿತಿಯಲ್ಲಿ ಹೋಗಲಾರದೇ ಮರಳಿ ಮನೆಗೆ ಹೋಗಿ ಬಟ್ಟೆ ಬದಲಿಸುವ, ಕೆಲವು ಸಲ ಸ್ನಾನ ಮಾಡಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಕೆಲವರಂತೂ ಇಂತಹ ಅವಾಂತರಗಳಲ್ಲಿ ತಂತಮ್ಮ ಬಸ್ಸು ಟ್ರೇನುಗಳನ್ನು ತಪ್ಪಿಸಿಕೊಂಡಿದ್ದಾರೆ. ಬೇರೆ ಊರಿಂದ ಇನ್ಯಾವುದೋ ಊರಿಗೆ ಲಗ್ನಕ್ಕೆ ಹೊರಟಿದ್ದ ಒಬ್ಬನಂತೂ ಒಂದು ಸಲ ಏನೋ ಕೊಳ್ಳಲು ರಸ್ತೆಯಲ್ಲಿ ಓಡಾಡುವಾಗ ಇಂತಹ ಪಿಚಕ್ ಧಾಳಿಗೆ ಒಳಗಾಗಿ, ಅಸಹ್ಯ ಸ್ಥಿತಿಯಲ್ಲಿ ಮುಂದುವರೆಯುವ ಧೈರ್ಯವೂ ಇಲ್ಲದೇ, ಬೇರೆ ಬಟ್ಟೆ-ಬರೆ ತಂದಿಲ್ಲದೇ ಇದ್ದ ಕಾರಣ, ಬಟ್ಟೆ ಅಂಗಡಿಗಳು ತೆರೆಯುವ ಸಮಯವೂ ಆಗಿರದಿದ್ದರಿಂದ ಕಂಗೆಟ್ಟು ತನ್ನ ಊರಿಗೆ ಹೋಗಿಬಿಟ್ಟ.
ಈ ಪಿಚಕ್ ಬಗ್ಗೆ ಗೊಣಗುವವಳು ನಾನೊಬ್ಬಳೇ ಇರಬೇಕು ಎಂಬ ಉದಾಸಭಾವದಲ್ಲಿ ಕಿರಾಣಿ ಕೊಳ್ಳುವಾಗ ಪರಿಚಯದವರೊಬ್ಬರು ಬಂದರು. ನನ್ನ ಮಗನ್ನ ರೆಸಿಡೆನ್ಶಿಯಲ್ ಸಾಲಿಗೆ ಒಗದ ಬಂದೆ ನೋಡ್ರಿ ಮೇಡಂ, ಇಲ್ಲೆ ಚಟವಾನ್ ಗೆಳ್ಯಾರ ಕೂಡ ಸೇರಿ ಹಾಳಾಗಾಕ ಹತ್ತಿದ್ದ ಅಂದರು. ಸಮಾನ ಚಿಂತಕರೊಬ್ಬರು ಸಿಕ್ಕರಲ್ಲ ಎಂಬ ಖುಷಿಯಿಂದ ಪುಳಕಿತಳಾಗಿ ಕೈಯ ಪೊಟ್ಟಣವನ್ನು ಸಂಭಾಳಿಸಿ ಪ್ರತಿಭಾಷಣಕ್ಕೆ ನಾಲಿಗೆ ಎಳೆಯುವಷ್ಟರಲ್ಲಿ ಕಿಸೆಯಿಂದ ನಾಣ್ಯ ತೆಗೆದು ಟಣ್ಣನೆ ಗಾಜಿನ ಬಾಟಲಿ ಮುಚ್ಚಳದ ಮೇಲಿಟ್ಟು ಒಂದು ಗುಟಕಾ ಕೊಡಪಾ ಎಂದರು. ಬಂದಷ್ಟೇ ವೇಗವಾಗಿ ಒಳ ಹೋದ ನಾಲಿಗೆ ಹಲ್ಲು ಸಂದಿಯಲ್ಲಿ ಮುದುಡಿ ಕೂತು ಕುಯ್ಯೋಂ ಎಂದಿತು. ಜಾರಿ ಬೀಳಲಿದ್ದ ಪೊಟ್ಟಣ ಸಾವರಿಸುವಾಗ ಬೀದಿಯಲ್ಲಿ ಪುಟ್ಟ ಮಕ್ಕಳ ಗುಂಪೊಂದು ಆಡುತ್ತಿತ್ತು. 6-7 ವರ್ಷದ ಹುಡುಗನೊಬ್ಬ ತುಂಬಾ ಸ್ಟೈಲೀಶ ಆಗಿ ಸ್ಯಾಶೆಯನ್ನು ಹಲ್ಲಿಂದ ಹರಿದು ಬಾಯಿಗಸೆದು ಕೈ ಮೈ ಕುಣಿಸಿ ಹಾಡತೊಡಗಿದಗುಟಕಾ ಲಗಾ ದಿಯಾ ಹಮನೆ, ಚಿಟಕೀ ಬಜಾ ದಿಯಾ ತೂನೆ, ತಡಾ ತುಂ ತುಂ ತಡಾ ಸುತ್ತಲಿನ ಚಿಲ್ಟಾರಿಗಳು ಚಪ್ಪಾಳೆ, ಚಿಟಕಿಗಳಿಂದ ಅವನ ಅಸೀಮ ಸಾಹಸಕ್ಕೆ ಅಗತ್ಯ ಹಿನ್ನೆಲೆ ಸಂಗೀತ ಒದಗಿಸಿ ರಸಸೃಷ್ಟಿಯ ಪುಳಕದಲ್ಲಿ ಕುಣಿಯುತ್ತಿದ್ದರು. ಎದೆಹಾಲ ಪಸೆ ಆರದ ಹೂತುಟಿಗಳು ಸುಡುಬೆಂಕಿಯಲ್ಲಿ ಸಿಕ್ಕಿವೆಯಲ್ಲ ಎಂದು ಪರಮ ರೋಷದಿಂದ ಬೈಯಲು ಅತ್ತ ಹೆಜ್ಜೆ ಹಾಕತೊಡಗಿದಾಗ ಪಿಚಕ್ ಎಂದು ಹೆಗಲು ಒದ್ದೆಯಾಯಿತು. ಭರ್ ಎಂದು ಓಡುತ್ತಿದ್ದ ತುಂಬಿತುಳುಕುವ ಬಸ್ಸಿನ ಕಿಡಕಿಯಿಂದ ಬಾಯೊಂದು ಹೊರ ಬಂದು ನೆಲದ ಬರಿಮೈಗೆ ಚಿತ್ತಾರದ ಕೆಂಪಂಗಿ ತೊಡಿಸುತ್ತಿತ್ತು.








Rasavattagide!
navu avra 🙂
ಬದಲಾವಣೆ ಸ್ವೀಕರಿಸುವ ಮನೋಭಾವ ಇಲ್ಲದಿರುವಾಗ `ಕಾಲ ಕೆಟ್ಟು ಹೋಯ್ತು’ ಎನ್ನುವ ಗೊಣಗಾಟ ಸಾಮಾನ್ಯ. ಇದು ಉಡುಪಿನ ವಿನ್ಯಾಸ ಬದಲಾವಣೆ, ಜಾತ್ಯತೀತ ಮನೋಭಾವ, ಅಂತರ್ಜಾತಿ ವಿವಾಹ ಇಂಥ ಸಂದರ್ಭಗಳಲ್ಲಿ ಹೆಚ್ಚು.
ಉಡುಪಿನ ವಿಷಯಕ್ಕೆ ಬರುವುದಾದರೆ ೪೦ ವರ್ಷದ ಹಿಂದಿನ ಭಾರತೀಯ ಚಲನಚಿತ್ರಗಳಲ್ಲಿ ನಾಯಕಿಯರು ಸಲ್ವಾರ್ ಕಮೀಜ್, ಮಿನಿ,ಮಿಡಿ, ಸ್ಲೀವ್ ಲೆಸ್ ಬ್ಲೌಸ್, ಜೀನ್ಸ್, ಟೀ ಶರ್ಟ್ ಧರಿಸುತ್ತಿದ್ದರು. ಕೇವಲ ೨೦ ವರ್ಷದಿಂದ ಈಚೆಗೆ ಈ ಉಡುಪುಗಳು ಸಮಾಜದಲ್ಲಿ ಸಾಮಾನ್ಯವಾಗಿವೆ. ಇದು ಭಾರತೀಯ ಮಧ್ಯಮ ವರ್ಗದ ಮನಸ್ಥಿತಿ ಬದಲಾವಣೆ ಎಷ್ಟೊಂದು ನಿಧಾನ ಎನ್ನುವುದನ್ನು ತೋರಿಸುತ್ತದೆ.
ಪ್ರಜ್ಞ್ನಾ ಅವರಲೇಖನ ಸುಂದರವಾಗಿದೆ
ಮಹಾಂತೇಶ ನವಲಕಲ್