ಗುಜ್ಜಾರ್ ಕುರಿತ ಅವಧಿ ಬರಹ ನನಗೆ ನನ್ನ ಎಂ ಜಿ ರೋಡ್ ದಿನಗಳನ್ನು ನೆನಪಿಸಿತು. ಗುಜ್ಜಾರ್ ಎಂದ ತಕ್ಷಣ ನೆನಪಾಗುವುದೇ ಅವರ ಹಾಸ್ಯ. ಚಂದ್ರನಾಥ್, ಸೂರಿ, ಗುಜ್ಜಾರ್, ಮನೋಹರ್, “ಶ್ರೀ” -ಪಡೆ ಹೊಂದಿದ್ದ ಸುಧಾ ಬಳಗ ಎಷ್ಟು ಚೆನ್ನಾಗಿತ್ತು! ಇವರೆಲ್ಲರಿಗೆ ಗುರುವಾಗಿ ಇದ್ದವರು ಜಿ ಎಸ್ ಸದಾಶಿವ. ಎಲ್ಲರೂ ಗಂಭೀರ ತುಂಟರೇ. ಗುಜ್ಜಾರ್ ಒಮ್ಮೆ ಸುಧಾ ಮಕ್ಕಳ ಕತೆಗೆ ಚಿತ್ರ ಬರೆದಿದ್ದರು. ಆ ಕತೆಯಲ್ಲಿ ನಾಯಕನಿಗೆ ಬಲಗಾಲು ಇರಲಿಲ್ಲ. ಆದರೆ ಗುಜ್ಜಾರ್ ಚಿತ್ರದಲ್ಲಿ ಎಡಗಾಲು ಇರಲಿಲ್ಲ. ಓದುಗರೊಬ್ಬರು ಈ ಬಗ್ಗೆ ಪತ್ರ ಬರೆದಿದ್ದರು. ಇದನ್ನು ಗುಜ್ಜಾರ್ ಬಣ್ಣಿಸಿ ಹೇಳುತ್ತಿದ್ದ ರೀತಿ ಎಷ್ಟು ಚೆನ್ನಾಗಿರುತ್ತಿತ್ತು!
ಗುಜ್ಜಾರ್ ಕಾರ್ಟೂನ್ ಗಳಿಗಿಂತ ನನಗೆ ಅವರ ಕ್ಯಾರಿಕೇಚರ್ ಗಳು ತುಂಬಾ ಇಷ್ಟ. ಅವರ ದೇಸಿ ರಾಜಕೀಯ ಜ್ಞಾನಕ್ಕಿಂತ ಅವರ ಅಂತಾರಾಷ್ಟ್ರೀಯ ದೃಷ್ಟಿಕೋನ ಚೆನ್ನಾಗಿತ್ತು. ಅವರು ಬಹುಶಃ ನಮ್ಮ ನಡುವಿನ ಅದ್ಭುತ ರಾಜಕೀಯ ಕಾರ್ಟೂನಿಸ್ಟ್. ಈಗ ಆ ಕೊರತೆ ತುಂಬುತ್ತಿರುವುದು ಪಿ ಮೊಹಮ್ಮದ್ ಹಾಗೂ ಎಸ್ ವಿ ಪದ್ಮನಾಭ.
ಗುಜ್ಜಾರ್ ಆಗೊಮ್ಮೆ ಈಗೊಮ್ಮೆ ಫೋನ್ ಮಾಡುತ್ತಾರೆ. ಅವರ ಫೋನ್ ಬಂದಾಗ ನನಗೆ ಯಾಕೊ ಸದಾಶಿವ, ಎಮ್ ಜಿ ರೋಡ್, ಈಗಿಲ್ಲದ ಕಾಫೀ ಹೌಸ್ ನೆನಪಾಗುತ್ತದೆ. ಗುಜ್ಜಾರ್ ಚಿತ್ರಗಳನ್ನು ನಿಮ್ಮಿಂದಾಗಿ ಮತ್ತೆ ಕಂಡಾಗ ನಿಮ್ಮ ಮೂಲಕವೇ ಗುಜ್ಜಾರ್ ಗೆ ಹಲೋ ಹೇಳೋಣ ಎನ್ನಿಸಿತು.
-ಜಿ ಎನ್ ಮೋಹನ್





ಥ್ಯಾಂಕ್ಯೂ ಮೋಹನ್, ಸದಾಶಿವರನ್ನು ನೆನಪಿಸಿದ್ದಕ್ಕೆ. ಅವರ ಜೊತೆಗೆ ವೈಎನ್ಕೆ ನೆನಪಾಗುತ್ತಾರೆ. ಹೀಗೆ ಏನೋ ಹೇಳುತ್ತಾ ಏನೋ ಬರೆಯುತ್ತಾ ಏನೋ ಓದುತ್ತಾ ಹೇಗೆ ನಮ್ಮ ನೆನಪಿನ ಚಿತ್ರಶಾಲೆಯಿಂದ ಒಬ್ಬೊಬ್ಬರೇ ಹೊರಗೆ ಬರುತ್ತಾರೆ ನೋಡಿದ್ರಾ. ಒಂಥರ ಖುಷಿಯಾಗುತ್ತೆ, ಅವರು ಜೊತೆಗಿಲ್ಲದ ನೋವಿನೊಟ್ಟಿಗೆ. ಪ್ರೀತಿ ಅಂದ್ರೆ ಇದೇನಾ.
ಜೋಗಿ