ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಏನಿಲ್ಲ ನನ್ನ ಟೈಮು ಬಂದಿತ್ತು ಪೆಟ್ಟು ಬಿತ್ತು…

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು.

ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ ಪುರಾಣ ಹಾಸ್ಯ ಲೇಖನ ಸಂಕಲನ… ಮಕ್ಕಳಿಗಾಗಿ ಅಜ್ಜನ ಹಲ್ಲುಸೆಟ್ಟು (ಮಕ್ಕಳ‌ ಕವಿತೆಗಳ ಸಂಕಲನ) ಮಾಸಂಗಿ (ಮಕ್ಕಳು ಬರೆದ ಕತೆಗಳ ಸಂಪಾದನೆ) ಮಕ್ಕಳೇನು ಸಣ್ಣವರಲ್ಲ (ಮಕ್ಕಳ ಕತಾ ಸಂಕಲನ) ಕೃತಿಗಳು…

ಬಹತೇಕ ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಲಲಿತ ಪ್ರಬಂಧ, ಹಾಸ್ಯ ಲೇಖನ, ಮಕ್ಕಳ‌ ಕತೆ, ಕವಿತೆ, ನಾಟಕಗಳು ಪ್ರಕಟವಾಗಿವೆ. ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕರಾಗಿ ಹಲವಾರು ಮಕ್ಕಳ‌ ಕಮ್ಮಟ, ರಂಗಶಿಬಿರ, ಸಾಹಿತ್ಯಿಕ‌ ಚಟುವಟಿಕೆಗಳನ್ನು ಸಂಘಟಿಸಿದ್ದಾರೆ…

12

ನಮ್ಮ ಹೊಲ ಮಾಡುವ ರೈತ ದೇವಣ್ಣ ಬೆಳಿಗ್ಗೆ ಬೆಳಗ್ಗೆ ಮನೆಗೆ ಬಂದ.

“ಬಾ…..ದೇವಣ್ಣ.. ಏನು ಇಷ್ಟು ಬೇಗ ಬಂದು ಬಿಟ್ಟಿದ್ದಿ.. ಒಮ್ಮೊಮ್ಮೆ ಮನೆಗೆ ಬಾ ಅಂದ್ರ ಬರತಿರಲಿಲ್ಲ.. ಬಹಳ ದಿವಸ ಆಗಿತ್ತು.. ಮನಿಗೆ ಬರದ.”
“ಹಾಕಿದ ಸ್ವಲ್ಪ ನೆಲ್ಲಿಗೆ ದ್ವಾಮಿ ಬಾಳ ಬಿದ್ದವರಿ.. ಕೆಳಗ ತೂತ ಹಾಕಿ ಎಲ್ಲ ರಸ ಹೀರಕತವ್ರಿ.. ಕಾಳುಕಟ್ಟದಂಗ ಮಾಡಕತಾವರಿ…ಇದುದ್ದೆಲ್ಲ ಎಣ್ಣಿ ಹೊಡದು ನೋಡಿದೆ… ಹೂಂ.. ಹು೦.. ಕೆಲಸ ಆಗಲಿಲ್ಲರಿ… ನೋಡಿ ಹೇಗೆ ರಸ ಹೀರಿ ತೆನೆಯಲ್ಲಿ ಜೋಳ್ಳು ಮಾಡಿದೆ” ಎಂದು ಬಿಳುಚು ಹೊಡೆದಿದ್ದ ತಂದಿದ್ದ ತೆನೆಯನ್ನ ತೋರಿಸಿ ಹೇಳಿದ.

“ಈ ದ್ವಾಮಿ ಇರಲಾರದ ಜಾಗ ಯಾವು ಸಾಕುಸಾಕಾಗಿ ಹೋಗ್ಯಾದ. ಮನ್ಯಾಗ ಹೊರಾಗ ಕೂತ್ರ ಕಡಿತಾವ ಎಲ್ಲೆರ ಮಾತಾಡಿಕೊತ ನಿಂತರೂ ಕಾಲು ಕಾಲ ಕಡಿತಾವ. ನೋಡು ಎಮ್ಮೆ ದನ ಕರಗಳಿಗೂ ಮನುಷ್ಯರಂಗ ಮಚ್ಚರದಾನಿ ಬಂದವ,.. ಎಲ್ಲೆ ಹೋಗಿ ಸಾಯಬೇಕು. ಮನುಷ್ಯ ಮುಂದೊ೦ದು ದಿನ ಸತ್ತರ ಈ ಸೊಳ್ಳೆಯಿಂದನ ನೋಡು…”ಎಂದ ಅಪ್ಪ.

ಅಲ್ಲೆ ಇದ್ದ ನಾನು ‘ಸೊಳ್ಳೆ ನಾವು ಸಸ್ಯದ ರಸ ಹೀರತೀವಿ ಅಂತ ಕೇಳಿದ್ದು ನೆನಪು ಮಾಡಿಕೊಂಡು’ “ದೇವಣ್ಣ ಹ್ಯಾಂಗ ಹೀರತಾವ.. ಗಿಡ ಸಸಿ ಗಟ್ಟಿರಲ್ಲೇನು.” ಎಂದೆ

“ಇಲ್ರಿ.. ಅದರ ಕೊಂಡಿ… ಬಲು ಸ್ಟ್ರಾ೦ಗು… ಬುಡದಲ್ಲಿ ತೂತ ಹಾಕಿ.. ತೆನೆಯ ರಸ ಹೀರತಾವ.. ಅಲ್ಲೆ ಮರಿ ಮಾಡತಾವ.. ಅಲಕ್ಷ ಮಾಡಿದ್ರ ಗದ್ದಿಗದ್ದಿನ ಜೊಳ್ಳು ಮಾಡಿಬಿಡತಾವ” ಎಂದು “ನೋಡ್ರಿ, ಇಲ್ಲಿ ಹ್ಯಾಂಗ ಮಾಡ್ಯಾವ” ಎಂದು ಕಿತ್ತಿಕೊಂಡು ಬಂದಿದ್ದ ಸಸಿನ ತೋರಿಸಿದ.. ಭತ್ತದ ತೆನೆಯಲ್ಲ ಬೀಳುಪಾಗಿತ್ತು.. ಅದರಲ್ಲಿ ಏನೇನು ಇರಲಿಲ್ಲ

“ಅವುಕ್ಕ ಎಣ್ಣಿ ಹೊಡದ್ರ … ಪಾಪ! ಸಾಯಂಗಿಲ್ಲೇನು ದೇವಣ್ಣ” ಎಂದೆ
“ಅವನ್ನು ಬಿಟ್ರ ನಾವು ಸಾಯ್ತಿವಲ್ರಿ… ಊಟಕ್ಕನ ಸಿಗಲ್ಲ ಆದರೂ ಮಂಡ ಕುಲದವು.. ಏನು ಹೊಡದ್ರು.. ತಾತ್ಕಾಲಿಕ.. ಮತ್ತೆ ಬರತಾವ.. ಹೊಡಿತಾನ ಇರಬೇಕು”
“ಮನೆಯಲ್ಲಿ ನೋಡಿಲ್ವೇನು..ದ್ವಾಮಿ ಎಷ್ಟು ಕಾಡತಾವ. ಏನು ಕ್ವಾಯಲ್ ಹಚ್ಚಿದ್ರೂ…ಧೂಪ ಹಾಕಿದ್ರೂ ಹೋಗ್ತಾವೇನೂ.. ನಮ್ಮಪ್ಪ ಸಂಜೆ ಹೊತ್ತು ಲಕ್ಷ್ಮೀ ಬರೊ ಹೊತ್ತು ಬಾಗಲ ಹಾಕಬಾರದು ಅಂತಿದ್ದ.. ಈಗ ಸೊಳ್ಳೆ ಸಲುವಾಗಿ ಮೂರ ಸಂಜೆನ ಬಾಗಲ ಹಾಕಿಕೊಂಡು ಕುಡ್ರಬೇಕಾದ ಪರಿಸ್ಥಿತಿ” ಎಂದ ಅಪ್ಪ.

“ಹೌದ್ರಿ ಧಣೆರ, ಊರಾಗ ಪಂಚಾಯತೇರು ಅದೇನೋ ಫಾಗಿಂಗ ಅಂತ ಗನ್ ಹಿಡಕೊಂಡ೦ಗ ಬಂದು ಹೊಗಿ ಬಿಟ್ಟು ಹೋಗತಾರ. ಅದರ ವಾಸನೆ ಕೂಡದ್ರ ಮನಷ್ಯರಗ ಉಸರಗಟ್ಟತ್ತ.. ಕಟ್ಟಿದ ಎತ್ತ ವಾಸನಿಗೆ ಹೇಗರಾಡತಾವ.. ಆದರ ಈ ದ್ವಾಮಿ… ಆ ಟೈಮನ್ಯಾಗ ಗಾಯಬ್ ಆಗತಾವ… ಮತ್ತೆ ಮರುದಿನನ ತಮ್ಮ ಚೆಲ್ಲಾಟ ನಡಸ್ತಾವ” ಎಂದ ದೇವಣ್ಣ

“ಹಿಂದಕ ಡಿ.ಡಿ.ಟಿ ಅಂತ ಹೊಡಿತಿದ್ರಲ್ಲ… ಅದು ಹೋಗೆ ಬೀಡ್ತು. ಯಾಕ. ಸೊಳ್ಳೆಗೆ ಅದನ್ನು ಹೊಡಿಸಿಕೊಂಡು ಹೊಡಿಸಿಕೊಂಡು ದಕ್ಕಿಸಿಕೊಳ್ಳೊ ತಾಕತ್ತು ಬಂದು ಬಿಡ್ತು. ಅದರ ಜೊತಿ ಅಡ್ಜಸ್ಟ ಆಗಿ ಬಿಟ್ಟೊರಂಗ. ಹೊಡಿಯೋ ಮಿಶನ್ ಮ್ಯಾಲೆ ಕುಳತ್ರ.. ಏನು ಮಾಡಬೇಕು ಹೇಳು.. ಈಗ ನೋಡ್ತಿ ಇಲ್ಲ ಮನ್ಯಾಗ ಬಳಸೊ ಎಲ್ಲಾ ಸೊಳ್ಳೆ ನಾಶಕದ ಹಣೆಬರಹನೂ ಅಷ್ಟ ಆಗ್ಯಾವ ದೇವಣ್ಣ” ಎಂದ ಅಪ್ಪ.

“ಆದ್ರೂ ಪಾಪ ಅಲ್ಲ… ಸೊಳ್ಳೆನ ಕೊಲ್ಲೊದು” ಎಂದೆ
“ಪಾಪ ಅಂತ ಪಾಪ… ಕಡಿಸಿಕೊಂಡು ರೋಗ ಬಂದು ಅನುಭವಿದವರಿಗೆ ಗೊತ್ತಾಗೋದು.. ನಿನಗೂ ಗೊತ್ತಿಲ್ಲೇನು?” ಎಂದು ಬೈದು ಸಮು “ಎಲ್ಲರಿಗೂ ಊರಿಗೆ ಹೋಗಾಕ ಬೇಗ ರೆಡಿಯಾಗ ಹೇಳು ಎಣ್ಣಿ ಕೊಡಸಿ ಬರ್ತಿನಿ”ಅಂತ ಹೋದ.

ಒಳಗ ಮೊಬೈಲ್ ಆಡತಾ..ನನ್ನನ್ನು ನೋಡುತ್ತಿದ್ದ ರಾಜು “ಸಮ್ಮು ಏನು ನಿನ್ನೆಯಿಂದ ಸೊಳ್ಳೆ ಸುತ್ತ ಮಾತುಕತೆ ನಡದದಲ್ಲ… ಏನು ವಿಷಯ…? ನನಗ ಹೇಳಲ್ವೇನು?” ಎಂದ.

“ಕಾಗಿ ಕುಡಾಕ ಟೊಂಗಿ ಮುರಿಯಾಕ’ ಅಂತ ನಮ್ಮ ಸರ್ ಹೇಳುತಿರತಾರ ಹಾಂಗ ಆಯ್ತು ನೋಡು ನಾನು ಕೆಳಂಗ ಕೇಳದೆ ನೀನು ಹೇಳಿದೆ. ದೇವಣ್ಣನೂ ಬಂದು ಅದೆ ಎತ್ತಿದ.. ಅಪ್ಪನೂ ಅದ ಮಾತಾಡಿದ ಎಲ್ಲ ಸರಿ ಹೋಗುಬಿಡ್ತು…” ಎಂದೆ.

“ಅಮ್ಮಾ, ರಾತ್ರಿಯಲ್ಲ ಸೊಳ್ಳೆ ಕಚ್ಚಿ ಮೈ ತುಂಬ ಗಾದರಿ ಗಾದರಿ ಆಗ್ಯಾವ ನೋಡು” ನೋಡು ಎಂದು ಗೋಳಾಡುತ್ತಾ ಅಮ್ಮನ ಮುಂದೆ ಬಂದು ತೋರಿಸಿದ್ಲು… ಅಶು.

“ಎಲ್ಲರಿಗೂ ಕಚ್ಚಲಾರದವು ನಿನಗ್ಯಾಕೆ ಕಚ್ಚುತ್ತದ… ಬೆಳತನ ಮೊಬೈಲ್ ಹಿಡುಕೊಂಡಿರತಿ. ಲೈಟಿನ ಬೆಳಕಿಗಿಗೆ ಬಂದಿರತಾವ.. ಕಚ್ಚಿರತಾವ.. ಚಲೊ ಆತು ದಿನಾ ಕಚ್ಚಲಿ ಆಗಾದರೂ ಈ ಮೊಬೈಲ್ ಚಟ ಬಿಡತಿ” ಎಂದು ರಾಜು ರೇಗಿಸಿದ.
“ರಾಜು ಮಾಮಾ.. ಅಶುಂದು ಓ ಪಾಜಿಟೀವ್ ಹೌದಲ್ಲ..”ಎಂದು ನಕ್ಕೆ

“ಎಸ್.ಎಸ್… ಜೊತಿಗೆ ಸಿಕ್ಕಾಪಟ್ಟೆ ಗೋಡಂಬಿ ದ್ರಾಕ್ಷಿ ತಿಂತಾಳ.. ಅದಕ್ಕ.. ಗ೦ಟುಬಿದ್ದಿರತಾವ” ಎ೦ದು ಮಾತು ಸೇರಿಸಿದ.
“ಬರಿ ನಿಂದು ಇದೆ ಆಯ್ತು. ನೋಡಮ್ಮ ಇವತ್ತನಿಂದ ಮೊಬೈಲ್ ಮುಟ್ಟೊದಿಲ್ಲ. ಬೇಕಾದಷ್ಟು ಬಳಸ್ತೀನಿ” ಎಂದಳು.
“ನ೦ಬಬೇಕಾ….”ಎ೦ದ ರಾಜು.

“ಹೌದು ಏನಾಗ್ಯಾದ ಅಶುಗ… ಎದ್ದು ಕೂಡಲೆ ತಾಸು ಗಟ್ಟಲೆ ಮೊಬೈಲ್ ಹಿಡದು ಕುಳಿತುಕೊಳ್ಳುತ್ತಿದ್ದಳು. ಇವತ್ತು ಮೊಬೈಲ ನ ಹಿಡದಿಲ್ಲ” ಎಂದೆ.
ಅಶು “ಹೌದಲ್ಲ.. ಯಾಕನ ಇವತ್ತ ಹಿಡಿಯೋಕೆ ಮನಸ್ಸಾಗಿಲ್ಲ ನೋಡು” ಎಂದು ಗಾಭರಿಯಾದಳು.
“ರಾಜು ನಿನಗೇನಾದ್ರೊ ಸೊಳ್ಳೆ…. ಕಚ್ಚಿತಾ?”
“ಇಲ್ವಲ್ಲ”
“ಅಮ್ಮಾ…. ಒಳ್ಳೆದಾಯ್ತು ಇಲ್ಲದಿದ್ರೆ ಅನಾಹುತ ಆಗತಿತ್ತು”
“ಏನೋ…?”
“ಏನಿಲ್ಲ ಏನಿಲ್ಲ” ಎಂದು ಮಾತು ಹಾರಿಸಿದೆ.. ಅಷ್ಟರೊಳಗೆ ಅಪ್ಪನೂ ಬಂದ್ರು
“ಬೇಗ ಬೇಗ ರೆಡಿಯಾಗ್ರಿ… ಹೋಗೋಣ” ಎಂದು ಅವಸರ ಮಾಡಿದ.

ಎಲ್ಲರೂ ಸಿದ್ಧರಾಗಿ ನಡೆದರು. ಹೋಗುವಾಗ ನನಗೆ ಚಾಕಲೇಟು, ಕುರುಕುರೆ ಕೊಡಿಸಿದ್ರು. “ಬಸ್ ಸ್ಟ್ಯಾ೦ಡಿಗೆ ಹೋಗಿ ಇವರನ್ನ ಬಿಟ್ಟ ಬರತೀನಿ.. ಮನಿ ಕಡೆ ಜೋಪಾನ” ಎಂದು ಅಪ್ಪ ಹೇಳಿದ. “ಆಯ್ತಪ್ಪ..ಹೋಗಿ ಬಾ. ನಾನು ಇಲ್ಲೆ ಇರುತಿನಿ” ಎಂದು ಎಲ್ಲರಿಗೂ ಟಾಟಾ ಮಾಡಿ ಬಾಗಿಲುಹಾಕಿಕೊಂಡು. ಸ್ಟಡಿ ಟೇಬಲ್ ಕಡೆ ಓಡಿದೆ. ಸೊಳ್ಳೆನ ಕರೆಯುವುದಕ್ಕೂ ಮುಂಚಿತವಾಗಿ ಮತ್ತೊಮ್ಮೆ… “ಎಲ್ಲಿ ಅಶು ಊರಿಗೆ ಹೋಗೋದು ಬಿಟ್ಟು ಸಿ.ಐ.ಡಿ ಕೆಲಸ ಮಾಡಕ ಬರತಾಳ” ಅಂತ ಹೆದರಿ ಓಡಿ ಹೋಗಿ ಬಾಗಲ ತೆರೆದು ಖಾತ್ರಿಪಡಿಸಿಕೊಂಡು ಕಿಲಿಹಾಕಿಕೊಂಡು ಒಳಬಂದು ಕುಳಿತೆ.

“ಸೊಳ್ಳೆ ಫ್ರೆಂಡು.. ಬಾ ಫ್ರೆಂಡು…. ಇವತ್ಯಾರೂ ಇಲ್ಲ ನಾನು ನೀನು ಇಬ್ಬರ… ಮನಸಾರೆ ಮಾತಾಡಿ ಬಿಡೋಣ” ಎಂದು ಕರದೆ.. ಕರದ ಕೂಡಲೆ ಬರೊ ಸೊಳ್ಳೆ ಬರಲಿಲ್ಲ. ಅಲ್ಲೆ ಇಲ್ಲೆ ಹುಡುಕಾಡಿದೆ. ಕೆಳಗೆ ನೋಡಿದೆ. ಸಂಧಿಯಲ್ಲಿ ತಡಕಾಡಿದೆ. ಭಯವಾಯಿತು.. ಎಲ್ಲಾದ್ರೂ ಜೇಡರ ಬಲೆಗೆ ಬಿದ್ದಿದೆಯಾ..? ಜೇಡರ ಬಲೆಗಳನ್ನೆಲ್ಲಾ ಹುಡುಕ್ಯಾಡಿದೆ… ಯಾವ ಬಲೆಯಲ್ಲೂ ಕಾಣಲಿಲ್ಲ. ಅಯ್ಯೊ! ಜೇಡ ಏನಾದರು ತಿಂದು ಮುಗಿಸಿದಿಯಾ..? ಇಲ್ಲಿಲ್ಲ ಆಗಿರಲಿಕ್ಕಿಲ್ಲ… ಆತಂಕದಿ೦ದ “ಸೊಳ್ಳೆ ಫ್ರೆಂಡು ಎಲ್ಲಿದ್ದೀಯಾ ಬೇಗ ಬಾ.. ನಿನ್ನ ಜೊತೆ ಮಾತಾಡಬೇಕು.. ಬೇಗ ಬಾ” ಎಂದು ಕೂಗಿದೆ.
ಆಗಲೂ ಬರಲಿಲ್ಲ

“ಮತ್ತೇನಾದ್ರೂ ಅಶು… ಗೊತ್ತು ಹಿಡಿದು ಏನಾರ ಮಾಡಿದಳೊ..? ಇಲ್ಲಿಲ್ಲ….. ಹೌದೌದು… ಬೆಳತನ ಸೊಳ್ಳೆಯಿಂದ ಕಡಿಸಿಕೊಂಡು ಒದ್ಯಾಡಿನಿ ಅಂದಿದ್ಲು. ಆಕೇನಾದ್ರೂ….? ಮೊದಲ ಸಿಟ್ಟಿನಾಕಿ… ಹಿಡದು ಹಿಡಿದು ಕೊಲ್ಲಾಕಿ.. ಆಕಿ ಕೈಯಾಗ ಸಿಕ್ಕು… ಇಲ್ಲಿಲ್ಲ… ಹಾಗೆ ಆಗಿರಲಿಕ್ಕಿಲ್ಲ…ಇರಬಹುದಾ?” ಎಂದು ಅಂಜಿ ಗಾಭರಿಯಿಂದ “ಸೊಳ್ಳೆ ಫ್ರೆಂಡು ಸೊಳ್ಳೆ ಫ್ರೆಂಡು.. ಆರ್ ಯೂ ಒ.ಕೆ…ಬಾ ಬೇಗ, ನಾನು ಬಂದಿನಿ” ಎಂದೆ. ಆಗಲೂ ‘ರೆಸ್ಪಾನ್ಸ್’ ಬರಲಿಲ್ಲ. ‘ಒನ್ ಮಿನಿಟ್’ ಎಂದು ಅಮ್ಮ ಅಡುಗೆ ಮನೆಯಲ್ಲಿ ಮಾಡಿಟ್ಟಿದ್ದ ನಾಲ್ಕಾರು ತಿಂಡಿ ತಂದು ಇಟ್ಟೆ.. ಅಮ್ಮನ ತಿಂಡಿ ಅದಕ್ಕಿಷ್ಟ ಆಗಿತ್ತು, ಅದಕ್ಕಾದರೂ ಖಂಡಿತ ಬರುತ್ತದೆ ಎಂದು. ಅಷ್ಟಕ್ಕೂ ಬರಲಿಲ್ಲ.

“ಫ್ರೆಂಡು ಫ್ರೆಂಡು ಬೇಗ ಬಾರೊ..ಯಾರೂ ಇಲ್ಲ… ಸಂಜೆ ಎಲ್ಲರೂ ಬಂದು ಬಿಡತಾರೆ. ಆಮೇಲ ಕಷ್ಟ… ಎಷ್ಟು ದಿನ ಆಯ್ತು… ನಿನ್ನ ಜೊತೆ ಪೂರ್ತಿಯಾಗಿ ಮಾತಾಡಬೇಕಂದ್ರ ಆಗತಾನೆ ಇಲ್ಲ” ಎಂದು ಕೂಗಿದೆ.

ಆತಂಕ ಹೆಚ್ಚಾಗ ತೊಡಗಿತು. ಅಯ್ಯೊ ದೇವರೆ ನನ್ನ ಫ್ರೆಂಡಗೆ ಏನು ಆಗದಿರಲಿ, ನಿನಗೆ ಒಂದು ತೆಂಗಿನ ಕಾಯಿ ಒಡಸ್ತೀನಿ ಅಂತ ಪ್ರಾರ್ಥಿಸಿದೆ.
ಅಷ್ಟರೊಳಗೆ ನಿಧಾನವಾಗಿ ಕುಂಟುತ್ತಾ… ಸೊಳ್ಳೆ ಬಂತು…

ನಾನು ಗಾಭರಿಯಿಂದ “ಏನಾಯ್ತು ಫ್ರೆಂಡು?” ಎಂದೆ.
“ಏನಾಗಿಲ್ಲ ಸಮು… ನನ್ನ ಟೈಮು ಮುಗಿಯಾಕ ಬಂತು.. ನಿನ್ನೆನೂ ನಿಮ್ಮ ಅಶು… ಈ ಟೇಬಲ್ಲನಲ್ಲಿ ಏನೋ ಇದೆ.. ಎಂದು ಕಂಡು ಹಿಡಿಯಾಕ ಏನೇನೋ ಕಿತ್ತಿ ಕಿತ್ತಿ ಹುಡುಕೊ ಪ್ರಯತ್ನ ಮಾಡತಿರಬೇಕಾದ್ರೆ ನನ್ನ ಕಾಲಿನ ಹತ್ತಿರ ಬುಕ್ ಬಂದು ಬಿತ್ತು. ಪುಣ್ಯಕ್ಕ ನನ್ನ ಮ್ಯಾಲೆ ಬೀಳಲಿಲ್ಲ. ಇಲ್ಲದಿದ್ರೆ ನಿನ್ನೆನೆ ನಾನು ಶಿವನ ಪಾದ ಸೇರತಿದ್ದೆ. ಸ್ವಲ್ಪ ಪೆಟ್ಟಾಯಿತು ಅಷ್ಟ” ಎಂದಿತು.

“ಅಯ್ಯೊ…! ಅಶು ಅಷ್ಟು ಸಿರಿಯಸ್ಸಾಗಿ ತೊಂಡಳಾ?…ಹಾ೦ಆಕಿ ಹಾಂಗ.. ತಲೆಯಲ್ಲಿ ಹೊಕ್ಕಿದ್ದನ್ನ ಸಾಧಿಸೋದತನ ಬಿಡೊಲ್ಲ. ಅಣ್ಣ ಒಂದು ಏಟು ಹೊಡದಿದ್ದರೂ ರಾತ್ರಿ ಒಳಗ ಎರಡು ಏಟುಗಳನ್ನ ಹೊಡಕೊಂಡು ಬಿಟ್ಟಿರತಾಳ. ಅಂದು ಮನೆಮುಂದಿನ ಚಪ್ಪಲಿ ಕಳುವಾಗಿದ್ವು..ಎಲ್ಲರೂ ಹೋಗಲಿ ಅಂತ ಬಿಟ್ಟಿದ್ರು.. ಆದರ ಮುಂಜಾನಿ೦ದ ಬಂದವರನ್ನ ಗಮನಿಸಿ ಇಂತವರ ಒಯ್ದರ ಅಂತ ಕರೆಕ್ಟ ಆಗಿ ಹೇಳಿ ಬಿಟ್ಟಳು… ಆಕಿ ಭಾರಿ ಬ್ರಿಲಿಯಂಟ್ ಇದ್ದಾಳ.. ಪೊಲೀಸ್ ಗೀಲಿಸ್ ಏನಾದ್ರೂ ಆದರ ಕಳ್ಳರ ಕತಿ ಅಷ್ಟ. ಹೌದಪ ಆಕಿ ಹಾಗೆನೆ.. ಇರಲಿ ಬಿಡು.. ಈಗ ನಿನಗೇನು ಆಗಿಲ್ಲ ತಾನೆ..?” ಎಂದೆ

“ಏನಿಲ್ಲ ನನ್ನ ಟೈಮು ಬಂದಿತ್ತು ಪೆಟ್ಟು ಬಿತ್ತು…”
“ಅಂದ್ರೆ ..”
“ಹೇಳಿದೆನಲ್ಲ.. ನಮ್ಮ ವಯಸ್ಸು ಬಹಳ ಕಡಿಮೆ…”
“ಅಯ್ಯೊ ಫ್ರೆಂಡು ಹಾಂಗನ್ನಬೇಡ.. ನೀನು ನನ್ನ ಬಿಟ್ಟು ಹೋಗಬೇಡ…. ನಿನ್ನ ಬಿಟ್ಟು ಇರೋಕೆ ಆಗಲ್ಲ…”
“ಎಲ್ಲಾರೂ ಇದೆ ಮಾತ ಆಡೋರು.. ಕಾಲ ಎಲ್ಲವನ್ನು ಮರೆಸುತ್ತದ, ಮರೆವು ನಮಗ ಔಷದಿ.. ಜೀವನ ಅಂದ್ರ ಬಸ್ ಜರ್ನಿ ಇದ್ದಾಂಗ, ಯಾರೋ ಬರತಾರ, ಮಾತಾಡ್ಸತಾರ, ಆತ್ಮೀಯರಾಗತಾರ, ಮತ್ತೆ ಸ್ಟೇಜ್ ಬಂದ ಮೇಲೆ ಇಳಿದು ಹೋಗತಾರ.. ನಮ್ಮ ಸ್ಟೇಜು ಬಂದ ಮೇಲೆ ನಾವು ಇಳಿಬೇಕಾಗುತ್ತದ”

“ಏನು ಫ್ರೆಂಡು? ವೇದಾಂತಿಗಳ ತರಹ ಮಾತಾಡತಿ”
“ಇದು ಜೀವನಾನುಭವ.. ವಯಸ್ಸಾದರಿಗೆಲ್ಲ ಬರೋದು ಸಹಜ. ನಿನಗೆ ಆಗಿಲ್ಲಲ್ಲ”
“ನಿನಗೆಲ್ಲಿ ವಯಸ್ಸಾಯಿತು ಫ್ರೆಂಡು”
“ಅಯ್ಯೊ ಹುಚ್ಚಪ್ಪ ಹತ್ತದಿನ ಅಂದ್ರ ನೂರ ವರ್ಷ ಇದ್ದಾಂಗ ಹಾಗಾಗಿ ನಾನು ವಯಸ್ಸಾದವ”
“ಬೇಡ ದೋಸ್ತ ಹೋಗಬೇಡ”
“ಇರಲಿ..ಹೇಳಬೇಕಾಗಿರುವ ಎಲ್ಲ ವಿಷಯ ಕೇಳಿಬಿಡು ನನಗೂ ಟೈಮಿಲ್ಲ… ಸಾಯುವುದರೊಳಗೆ ಹಾಗೆ ಸಾಯಬಾರದು ಒಂದು ಜೀವಿಗೆ ನನ್ನ ದೇಹ ಆಹಾರ ಆಗಬೇಕು”
“ನಿನ್ನ ಮಾತು ಒಗಟಾಗಿವೆ… ಒಂದೂನು ಅರ್ಥ ಆಗತಿಲ್ಲ”
“ಕೇಳು ನಿಮ್ಮ ಡಾಕ್ಟರ್ ಮಾಮಾ ಊರಿಗೆ ಬಂದದ್ದು ಚಲೊ ಆಯ್ತು. ಆಗಲೆ ಎಲ್ಲಾ ಹೇಳ್ಯಾನ..ಆದರೂ ಕೆಟ್ಟದಾಗಿ ಹೇಳಿದ.. ಕಚ್ಚಬೇಕೆನಿಸಿತ್ತು. ನೀನು ಬೇಡ ಅಂದದ್ದಕ್ಕ ಬಿಟ್ಟೆ.. ಎಲ್ಲಾನೂ ನಿಮ್ಮ ಅಶು ಮೇಲೆ ತೀರಿಸಿಕೊಂಡುಬಿಟ್ಟೆ”
“ಒಳ್ಳೆದಾಯ್ತು ಬಿಡು”
“ಯಾಕೆ?”
“ ನೀನು ಕಚ್ಚಿದೊರೆಲ್ಲ ಬದಲಾಗ್ಯಾರ.. ನಿನ್ನಿಂದ ಅವಳ ಮೊಬೈಲ್ ಹುಚ್ಚು ಕಡಿಮೆ ಮಾಡಿಸಿದೆಯಲ್ಲ”
“ಇಲ್ಲಲ್ಲ!”
“ನನಗೆಲ್ಲ ಗೊತ್ತಾಗುತ್ತೆ”
“ಹೊ.. ಹೊ.. ನನ್ನ ಡೈಲಾಗು ನನಗ ತಿರುಗಿ ಹೇಳುತ್ತಿದ್ದಿ” ಎಂದು ನಕ್ಕು “ಇರಲಿ, ಬರುವ ದಿನಗಳು ಮನುಷ್ಯನಿಗೆ ಸರಿ ಇಲ್ಲ… ಎಚ್ಚರದಿಂದ ಇರಬೇಕು ಫ್ರೆಂಡು”
“ಯಾಕೆ?”
“ವಿಶೇಷ ಶಕ್ತಿ ಪಡದಿವಿ ಅಂತ ಆ ಬಗ್ಗೆ ಹೇಳಿದೆನಲ.. ಇನ್ನುಂದ ನಮ್ಮದೆ ಸೌಂಡ್.. ನಮ್ಮದೆ ದರ್ಬಾರ್ ಭೂಮಿ ಮೇಲೆ”
“ಹೌದು.. ಅವಾಗ.. ಅಂದಿ ಏನು ಶಕ್ತಿ ಅಂತಹದು? ಯಾರು ಕೊಟ್ಟರು.. ದೇವರಾ!”

ನಗುತ್ತಾ “ಸಂಕಟ ಬಂದಾಗ ವೆಂಕಟರಮಣ ಅನ್ನೋರು ನೀವು… ಪ್ರಕೃತಿಯಲ್ಲಿ ಬೇಡುವ ಕುಲವೆಂದರೆ ಮನುಷ್ಯ ಮಾತ್ರ…. ದೇವಸ್ಥಾನಕ್ಕ ಹೋದ್ರ ನೀವು ಇಡುವ ಬೇಡಿಕೆಗಳ ಪಟ್ಟಿಗೆ ದೇವರ ಅಂಜಿಕೊ೦ಡು ಹೋಗಬೇಕು ಹಾಗ ಮಾಡತಿರಿ”
“ಒಗಟೊಗಟಾಗಿ ಮಾತಾಡಬೇಡ ಫ್ರೇಂಡು… ನಾವು ಏನು ಮಾಡಿವಿ”

“ಏನು ಮಾಡಿರಾ…? ದೇವಸ್ಥಾನ, ಮಸೀದಿ, ಚರ್ಚಗೆ ಹೋಗೊ ಒಬ್ಬರಾದ್ರೂ… ಎಲ್ಲ ಜೀವರಾಶಿಗಳನ್ನ ಸುಖವಾಗಿ ಇಡು ಅಂತ ಕೇಳಿಕೊಂತಿರಾ…? ಬರೀ ಸ್ವಾರ್ಥ…. ನಾನು, ನನ್ನ ಮಕ್ಕಳು, ಅರಾಮ ಇರಲಿ ಅಂತಾನೆ ಹೊರತು ಬೇರೆ ಏನು ಅದ ಹೇಳಿ.. ಒಮ್ಮೊಮ್ಮೆ ಸಂಕಟಕ್ಕ ಇನ್ನೊಬ್ಬರನ್ನ ಹಾಳು ಮಾಡು ಅಂತಾನೂ ಕೇಳಿಕೋತಿವಿ…”

ಸತ್ಯ ಇದ್ದ ವಿಷಯಕ್ಕ ಮೌನವಾದೆ.
“ಯಾಕಪ ಸೈಲೆಂಟ ಆದಿ?”
“ಹೌದು ಫ್ರೆಂಡು ಪರೀಕ್ಷೆಗೆ ಹೋಗಬೇಕಾದ್ರ ನಾನು ಪ್ಯಾಡು ಪೂಜೆ ಮಾಡಿ… ದೇವಸ್ಥಾನಕ್ಕ ಹೋಗಿ…. ಬೇಡಿಕೆ ಇಟ್ಟು ಬರೋದು ನೆನಪಾಯಿತು.. ಅದಕೆ ಸೈಲೆಂಟ್ ಆದೆ”
ನಕ್ಕು “ಫ್ರೆಂಡು.. ನೀವು ಸಣ್ಣೊರು.. ನಿಮಗ ಗೊತ್ತಾಗದೆ ಕೇಳ್ತಿರಾ… ಅದೆ.. ಉಳಿದವರು… ಇರಲಿ ಬಿಡು ನೀನು ಸಣ್ಣವ ಅರ್ಥ ಆಗೊಲ್ಲ.. ಮುಂದೆ ತಿಳಿತದ”
“ಇರಲಿ ಫ್ರೆಂಡು, ನಿನ್ನ ಸಂಗದಲ್ಲಿ ಎಲ್ಲವೂ ಗೊತ್ತಾಗುತ್ತಿದೆ. ಹೇಳೊದ್ರಲ್ಲಿ ಯಾವು ತಪ್ಪು ಇಲ್ಲ… ನೀವು ಶಕ್ತಿ ಪಡುಕೊಂಡಿರಿ ಅಂದ್ರಲ್ಲ ಹೇಗೆ? ಯಾರು ಕೊಟ್ಟರು”

“ಎಷ್ಟು ಕುತೂಹಲ ಅಲ್ಲ… ಗುಟ್ಟು ತಿಳಿಯೋದಕ್ಕೆ! ಪಡೆಯಬೇಕು ಅಷ್ಟೆ, ಯಾರೊ ಕೊಡಬೇಕು ಅಂತೇನು ಇಲ್ಲ…. ನಮಗೆ ನಾವೇ ದಾರದೀಪಗಳು ಅಂತ ಬಸವಣ್ಣನವರು ಹೇಳಿಲ್ಲನು? ಅವಶ್ಯಕತೆ ಬಿದ್ದಾಗ ಶಕ್ತಿ ತಾನಾಗಿಯೆ ಬರುತ್ತದೆ ಸಮು.. ‘ಸ್ಟ್ರಗಲ್ ಫಾರ್ ಎಕ್ಸಿಸ್ಟೆನ್ಸ್’ ಅಂತ ನಿಮ್ಮ ಡಾರ್ವಿನ್ ಸಿದ್ಧಾಂತ ಅದಲ್ಲ ‘ಉಳಿವಿಕೆಗಾಗಿ ಹೋರಾಟ’ ಅದರಿಂದಾಗಿ ಸಹಜವಾಗಿ ಕೆಲವೊಂದು ಬಂದು ಬೀಡತಾವ…ನೀವು ಮೊದಲೆಲ್ಲ ಕೋತಿಯಂತೆ ಇದ್ದವರು ಏನೆಲ್ಲಾ ಅದ್ರಿ. ಈ ನೂರು ವರ್ಷದಲ್ಲಿ ಹೇಗಿದ್ದವರು ಸ್ಮಾರ್ಟ ಯುಗದಲ್ಲಿ ಏನೆಲ್ಲಾ ಬದಲಾವಣೆ ಆಗಿರಿಲ್ಲ? ನಾವು ನಿಮ್ಮ ಹಾಗೆ..”

“ನಿಜ ಫ್ರಂಡು ಬದಲಾಗಿವೆ.. ಆದರೆ ನಾವು ನಮ್ಮ ಬುದ್ಧಿ ಶಕ್ತಿಯಿಂದ ಮುಂದಾಗಿವಿ.. ಯಾರಿಗೇನು ಅನ್ಯಾಯ ಮಾಡಿಲ್ಲ”

“ಏನು ಅನ್ಯಾಯ ಮಾಡಿಲ್ಲೇನು? ಮಾಡಲಾರದು ಯಾವವು ಉಳದಾವ ಅಂತ ಕೇಳಿ… ಎಲ್ಲವನ್ನು ಸ್ವಚ್ಛ ಮಾಡಿರಿ. ‘ಬದುಕ್ರಿ ಬದುಕಲು ಅವಕಾಶ ಕೊಡ್ರಿ’ ಅಂತ ಕೋಚಿಗೊಂತ್ರಿ, ಉಳಿದ ಜೀವಸಂಕುಲಕ್ಕೂ ಜೀವ ಇದೆ ಎಂಬುದನ್ನು ಮರತಿರಿ. ಪರಿಸರನ ಮನಸೋ ಇಚ್ಛೆ ಬಳಸಿಕೊಂತ ಪರಿಸರದ ಜೊತೆಗೆ ಇಡಿ ಜೀವಸಂಕಾಲಕ್ಕೆ ಉಳಿಗಾಲ ಇಲ್ಲದಾಂಗ ಮಾಡಿರಿ”

“ಪ್ರಾಣಿ ಸಂಕುಲದ ಉಳಿಸುವುದಗೋಸ್ಕರ ಅಭಯರಾಣ್ಯಗಳನ್ನ ಮಾಡಿದ್ದಾರಲ್ಲ. ಪ್ರಾಣಿ ಸಂಗ್ರಾಹಲಯಗಳಿವೆಯಲ್ಲ”
“ಫ್ರೆ೦ಡು… ಜೈಲಿನಲ್ಲಿ ನಿಮಗ ಹಾಕಿದ್ರೆ ಹೇಗಾಗುತ್ತೆ… ಹಾಗೆ ಆ ಕೃತಕ ಕಾಡಿನ ಬದುಕು… ಎಷ್ಟು ಸ್ವಚ್ಛಂದ ಇತ್ತು..! ಎಲ್ಲನ್ನು ನಾಶ ಮಾಡಿದಿರಿ.. ಅಪ್ಪಿ ತಪ್ಪಿ ಹಾದಿ ತಪ್ಪೊ ಹುಲಿನೊ ಚಿರತೆನೊ ಊರೊಳಗೆ ಅಥವಾ ಹೊಲದೊಳಗೆ ಬಂದ್ರ. ಹಸಿವೆಗಾಗಿ ಕುರಿನ್ನೊ… ಮೇಕೆಯನ್ನೊ ತಿಂದ್ರ.. ನಿಮ್ಮ ಮಾಧ್ಯಮದವರು ಏನೆಲ್ಲಾ ಸುದ್ದಿ ಮಾಡತಿರಪಾ… ೨೪*೭ ತೋರಿಸಿದ್ದೆ ತೋರಿಸಿದ್ದು… ನಿತ್ಯ ಲಕ್ಷಗಟ್ಟಲೆ ಕುರಿ ಕೋಳಿ, ದನ ಕರಗಳನ್ನ ನಿಮ್ಮ ಹೊಟ್ಟೆಗಾಗಿ ತಿಂತಿರಲ್ಲ.. ಅವ ಸುದ್ದಿ ಆಗತಾವ.”

ಸೊಳ್ಳೆಯ ತಾರ್ಕಿಕ ಮಾತುಗಳಿಗೆ ಉತ್ತರಿಸಲಾಗಲಿಲ್ಲ. ಸೊಳ್ಳೆ ಮುಂದುವರಿದು ಇನ್ನೊಂದು ಮಹತ್ವದ ಸಂಗತಿ ಫ್ರೆಂಡು ಕೇಳಿಕೊ “ನಿಮಗೆಲ್ಲ ಬುದ್ದಿಕಲಿಸೋಣ ಅಂತಾನೆ ಎಲ್ಲ ಪ್ರಾಣಿ ಪಕ್ಷಿ ಕೀಟ ಸಂಕಲಗಳು ಮೊದಲು ಮಾಡಿ ಸಭೆ ಸೇರಿದೆವು. ಮಾನವರ ಕಿರುಕುಳಕ್ಕೆ ಎಷ್ಟು ದಿನ ಇನ್ನೂ ಉಳಿದಿರುತ್ತೇವೊ ಗೊತ್ತಿಲ್ಲ ಆದರೆ ವಿನಾಕಾರಣ ಹಿಂಸಿಸಿರುವ ಮಾನವರ ಮೇಲೆ ಸೇಡು ತೀರಿಸು ಕೊಳ್ಳೋದು ಮಾತ್ರ ಬಿಡಬಾರದು. ಪರಿಸರವನ್ನು ನಾಶಮಾಡಿ ನಮ್ಮ ಅಸ್ತಿತ್ವವನ್ನು ಹಾಳು ಮಾಡಿದ ತಪ್ಪಿಗೆ ಮಾನವರು ಪ್ರಾಯಶ್ಚಿತ್ತ ಅನುಭವಿಸಬೇಕು. ಅಂತಹ ಉಪಾಯ ಹುಡುಕರಿ ಅಂತ ಚರ್ಚೆ ನಡಿತು”

ಸೊಳ್ಳೆ ಹೇಳುವ ವಿಷಯದಲ್ಲಿ ಕುತೂಹಲ ಉಕ್ಕಿ ‘ಆಮೇಲೆ?’ ಎಂದೆ.
“ಮನುಷ್ಯನನ್ನು ನಿರಂತರವಾಗಿ ಪೀಡಿಸುವ ಶಕ್ತಿ ಯಾರಿಗಿದೆ. ಆ ಧೈರ್ಯ ಯಾರು ಮಾಡತಿರಿ? ಎಂಬ ಚರ್ಚೆ ಬಂದಾಗ ತೋಳ, ನರಿ, ಮೊಲ ಮೊದಲಾದ ಬುಧ್ಧಿ ಜೀವಿ ವರ್ಗ ‘ಈ ಕೆಲಸ ನಮ್ಮಿಂದ ಆಗದು. ಅವರು ಮಹಾ ಚಾಣಾಕ್ಷರು’ ಎಂದು ಹಿಂದೆ ಸರಿದವು. ಉಳಿದ ಯಾವ ಪ್ರಾಣಿಗಳು ಮುಂದೆ ಬರದಿದ್ದಾಗ ಸಿಂಹರಾಜ ತನ್ನ ಹಿಂದಿನ ಅನುಭವವನ್ನು ನೆನಪು ಮಾಡಿಕೊಂಡು ‘ನೋಣಗಳು ಒಂದು ಹಂತಕ್ಕೆ ಓ.ಕೆ ಆದರೂ ನಮ್ಮ ಮಿಶನ್ ಯಶಸ್ವಿಯಾಗಬೇಕಾದರೆ ಇದಕ್ಕೆ ಸೊಳ್ಳೆಗಳು ಸೂಕ್ತ’ ಎಂದಾಗ, ಎಲ್ಲರು ಗೊಳ್ಳೆಂದು ನಕ್ಕುದುಂಟು.

“ಯಾಕೆ ನಗೋದು? ಸೊಳ್ಳೆಗಳಿಗೆ ಮಾತ್ರ ಎಲ್ಲಾ ಕಾಲಕ್ಕೂ ಬದುಕುವ ಶಕ್ತಿ ಇದೆ. ಅರಮನೆ, ಎ.ಸಿ ರೂಮಿರಲಿ, ಕೊಚ್ಚೆ ಮರುಭೂಮಿ ಇರಲಿ ಎಲ್ಲ ಕಡೆ ಅದು ಬದುಕ ಬಲ್ಲದು, ಅದಕ್ಕೆ ವಿಶಿಷ್ಟವಾದ ಕೊಂಡಿಗಳಿವೆ… ಸಮಯ ಬಂದರೆ ರೋಗವನ್ನು ಹರಡುವ ಶಕ್ತಿ ಅವುಗಳ ಪ್ರಬೇಧಗಳಿವೆ.. ಆಹಾರ ನೀರು ಸಿಗದಿದ್ದರೂ ಮನುಷ್ಯನ ದೇಹದ ನೀರು ರಕ್ತ ಹೀರಿ ಬದುಕುವ ಶಕ್ತಿ ಇದೆ” ಎಂದು ನಮ್ಮನ್ನು ಉತ್ತೇಜಿಸಿತು.

ಎಂದಿಗೂ ಬೆಲೆ ಸಿಗದ, ಸದಾ ನಿರ್ಲಕ್ಷಕ್ಕಿಡಾಗಿದ್ದ ನಮಗೆ ಈ ಕಾಲಕ್ಕಾದರು ಬೆಲೆ ಸಿಕ್ಕಿತಲ್ಲ ಅಂತ ಸಿಂಹರಾಜ ಹೇಳಿದ ಮಾತಿಗೆ ಒಪ್ಪಿಕೊಂಡೆವು. ಸಿಂಹರಾಜನ ಅಪ್ಪಣೆಯಂತೆ ನಕ್ಕವರ ಮೇಲೆ ಪ್ರಾಯೋಗಿಕ ಪರೀಕ್ಷೆ ಕೈಗೊಂಡಾಗ ನಮ್ಮ ಉಪಟಳಕ್ಕೆ ಸಾಕಾಗಿ ಮೈಯಲ್ಲ ಪರಿಚಿಕೊಂಡು ‘ಹೌದು ಸಿಂಹರಾಜನ ನಿರ್ಧಾರ ಸರಿ ಇದೆ’ ಎಂದು ಒಮ್ಮತ ಸೂಚಿಸದವು”

“ಆಮೇಲೆ ಎನಾಯ್ತು?” ಅಂದೆ
“ಆಕ್ಷನ್ ಪ್ಲಾನ್ ಸಿದ್ಧ ಮಾಡಿದಿವಿ, ಲಕ್ಷ ವರ್ಷದಿಂದ ನಾವ್ಯಾರಿಗೂ ಸತಾಯಿಸಿರಲಿಲ್ಲ.. ಮನುಷ್ಯರ ತಂಟೆಗೆ ಹೋಗಿರಲಿಲ್ಲ, ನೀವು ಚೇಂಜ ಆದ ಮ್ಯಾಲೆ ನಾವು ಚೇಂಜ್ ಆದಿವಿ… ಅದಕ್ಕಾಗಿ ಸುಧೀರ್ಘ ಅಧ್ಯಯನ ಮಾಡಿದಿವಿ.. ನೀವು ಸೈಕೊಲಾಜಿ ಸ್ಟಡಿ ಮಾಡ್ತಿರಲ್ಲ ಹಾಗೆ ನಿಮ್ಮ ಸೈಕೊಲಾಜಿ ಸ್ಟಡಿ ಮಾಡಿದಿವಿ”
“ಏನು ಕಂಡುಕೊ೦ಡ್ರಿ”
“ಮನುಷ್ಯ ಯಾವುದಕ್ಕೂ ವೇದನೆ ಯಾತನೆ ಪಡದಿದ್ದರೂ ನಮ್ಮಿಂದ ಒಂದಿಲ್ಲಾ ಒಂದು ಯಾತನೆಯನ್ನು ಅನುಭವಿಸೇ ಅನುಭಸ್ತಾನ”
“ಹೌದು ಫ್ರೆಂಡು ಸತ್ಯ. ನಿತ್ಯ ಎಲ್ಲರೂ ಅನುಭವಸ್ತಾರ”
“ಮಾನವರಿಗೆ ಸಮಸ್ಯೆ ಯಾವುದೇ ಇರಲಿ ಅದನ್ನು ಪರಿಹರಿಸುವ ಮಾರ್ಗ ಗೊತ್ತಿದ್ದರೂ ಒಗ್ಗೂಡಿ ಪ್ರಯತ್ನಿಸುವ, ಹೋರಾಡುವ ಸುಬುದ್ದಿ ಇಲ್ಲ ಎಂಬುದನ್ನು ಕಂಡುಕೊ೦ಡಿವಿ”

ಸೊಳ್ಳೆಯ ಮಾತನ್ನು ಅಲ್ಲಗಳೆಯಲಾಗಲಿಲ್ಲ “ಹೌದು… ಹೌದು… ಫ್ರೆಂಡು, ಎಲ್ಲ ನವನವಿನ ಸಮಸ್ಯೆ, ಅನಾಹುತಗಳಿಗೆ ನೈರ್ಮಲ್ಯದ ಕೊರತೆ. ಪರಿಸರ ನಾಶ ಅಂತ ಗೊತ್ತಿದ್ದು ಯಾರು ನಾವು ಒಟ್ಟಾಗಿ ಸರಿಪಡಸಾಕ ಪ್ರಯತ್ನಿಸುತ್ತಿಲ್ಲ” ಎಂದೆ.

“ಆಗಿಲಿಕ್ಕೆ ಹಾಂಗ ಸಾಧ್ಯನಾ ಇಲ್ಲ. ಪ್ಲೇಗ, ಮಲೇರಿಯಾ, ಮೆದುಳು ಜ್ವರ ಅವೆಲ್ಲ ಬಿಡಿ ಹಳೆವು ಆದವು. ಮೊನ್ನೆ ನಮ್ಮ ಬಳಗದವರು ಚಿಕನ್ ಗುನ್ಯಾ ಡೆಂಗ್ಯೂ ರೋಗ ಇಂಟ್ರುಡ್ಯೂಸ್ ಮಾಡಿದೆನಲ್ಲ, ಆ ಟ್ರೀಟ್‌ಮೆಂಟ್ ಹ್ಯಾಂಗಿತ್ತು?” ಎಂದಾಗ ಆ ಬಾಧೆಯಿಂದ ಒದ್ದಾಡಿದವರ ನೋವು ನೋಡಿದ್ದೆ, ಡೆಂಗ್ಯೂನಿ೦ದ ಬಳಲಿದ್ದ ನನಗೆ ಮೈ ಝುಂ ಎಂತು.

“ಆ ನಿಮ್ಮ ಬ್ಯಾನಿಗೆ ಸ್ಪೆಸಿಫಿಕ್ ಔಷಧ ಕಂಡು ಹಿಡ್ಯಾಕ ಸಾಧ್ಯ ಆಯ್ತಾ?”
“ನೆನಸಬಾರದು ಫ್ರೆಂಡು, ಅದರಿಂದ ಪಟ್ಟ ತ್ರಾಸನ್ನ” ಎಂದು “ಹೌದು ನೆಕ್ಸ್ಟ ಏನ್ ಸ್ಕೇಚ್ ಹಾಕಿರಿ ” ಅಂತ ಕೇಳಿದೆ ಅವುಗಳ ಕಾರ್ಯಯೋಜನೆ ತಿಳಿಯಬೇಕು ಎನ್ನುವ ಕುತೂಹಲದಿಂದ.

“ಸಮು.. ನಿಮ್ಮ ಮನದಾಗಿಂದು ಗೊತ್ತಾಗುತ್ತೆ. ಆದ್ರೂ ಹೇಳ್ತಿನಿ ಕೇಳಿ. ಮೊನ್ನೆ ನಿಮ್ಮ ಲೋಕವನ್ನೆಲ್ಲ ಅಲ್ಲಾಡಸ್ತಲ್ಲಾ ಕರೋನಾ”
“ಅದರ ಹೆಸರು ಎತ್ತಬೇಡ ಫ್ರೆಂಡು ಎರಡು ವರ್ಷ ಇಡಿ ಜಗತ್ತನ್ನೆ ಲಾಕ್ ಮಾಡಿಬಿಡ್ತು.. ದೀಪ ಬೆಳಗಂಗ ಮಾಡಿತು, ಗಂಟಿ ಹೊಡಿಯೊಂಗ ಮಾಡಿತು ಎಷ್ಟೊ ಲಕ್ಷ ಜನರನ್ನ ತಿಂದು ತೇಗಿಬೀಡ್ತು…”

“ಹೌದು ಮತ್ತೆ ಪ್ರಕೃತಿಗೆ ವಿರುದ್ಧವಾಗಿ ನಡದ್ರೆ ಹೀಗೆ ಆಗೋದು… ನೀವು ಪ್ರಕೃತಿನ ಗೆಲ್ಲಬೇಕಂತ ಹೊರಟಿರಿ. ಪ್ರಕೃತಿನೂ ಕೋರ್ಟ ಇದ್ದಾಂಗ, ಸ್ವಹಿತಾಸಕ್ತ ಅರ್ಜಿ ಹಾಕಿಕೊಂಡು… ಕರೋನಾದ ಮೂಲಕ ನಿಮಗೂ ಶಿಕ್ಷೆ ನೀಡಿತು. ಮನಿಯಲ್ಲೆ ಕೂಡುವ ಹಾಗೆ.. ಮುಖ ಮುಚ್ಚಿಕೊಂಡು ಅಡ್ಡಾಡುವ, ಮನೆಯವರೂ ಕೂಡಾ ದೂರ ನಿಂತು ಮಾತಾಡುವ ಹಾಗೆ ಮಾಡಿತು… ಏನೆಲ್ಲ ಮಾಡಿದ್ರು ಅಟ್ಯಾಕ್ ಮಾಡಿ ಹಲವು ಜೀವಗಳನ್ನ ತಿಂತು.. ಹೌದಲ್ಲ?”

“ಆದರೂ ಅದಕ ಮದ್ದು ಕಂಡು ಹಿಡಿದು ಬಿಟ್ರು ನೋಡು, ನಮ್ಮವರು” ಎಂದೆ ಬಾಯಿ ತಪ್ಪಿ.
“ಪ್ರಕೃತಿ ಮನಸ್ಸು ಮಾಡಿತು ಅಂದ್ರ ನೀವ್ಯಾರು ಇರೊಲ್ಲ.. ಕರೋನಾ ಬಂದಾಗ ವೇದಾಂತಿಗಳ ಹಾಗೆ ಆಗಿದ್ರಿ. ಬದುಕಿನ್ಯಾಗ ಏನಿಲ್ಲ ಅಂತ.. ಮತ್ತೆ ಈಗ ಮೊದಲಿನಂಗ ಆಗಿರಿ.” ಎಂದಿತು ತುಸು ಸಿಟ್ಟನಿಂದ.

“ಹೌದು ಪ್ರೆಂಡು… ನಿಜ, ಆಗೆಲ್ಲ ‘ಫೋನನಲ್ಲಿ ಬರಿ ಏನದ ಜೀವನದಾಗ.. ಅವರು ಹೋದ್ರು ಇವರು ಹೋದ್ರು… ಸತ್ತವರ ಮುಂದು ಹೋಗೋಕು ಆಗಲಿಲ್ಲ’ ಅಂತೆಲ್ಲ ಅಪ್ಪ ಅಮ್ಮ ಮಾತನಾಡೋದನ್ನ ಕೇಳಿನಿ, ಮನಿ ಪಕ್ಕ, ಓಣ್ಯಾಗ ಎಲ್ಲರ ಬಾಯಲ್ಲೂ ಅದ ಮಾತು.. ನಾವು ಮಾತ್ರ ಸಾಲಿ ಇಲ್ಲದ ಖುಷಿ ಖುಷಿಯಾಗಿ ಆಡಿಕೊಂಡು ಇದ್ವಿ.”

“ಲಾಕ ಡೌನ್ ಆದಾಗ ಪ್ರಕೃತಿ ಎಷ್ಟು ಚಂದ ಆಗಿತ್ತಲ್ಲ.. ಮಾಲಿನ್ಯ ಅನ್ನೋದ ಇರಲಿಲ್ಲ”
“ಹೌದು ಫ್ರೆಂಡು ಪಂಜಾಬ್ ರಾಜ್ಯದಿಂದ ಹಿಮಾಲಯ ಪರ್ವತ ಕಾಣತಿತ್ತು..ಅಂತ ನಾನು ಟಿವಿಯಲ್ಲಿ ನೋಡಿನಿ”
“ಮತ್ತೆ. ಈಗ ಸತ್ಯ ನೀನ ಹೇಳು… ತಪ್ಪು ಯಾರದದ!”
“ನಾವು ಪ್ರಕೃತಿನ ಹಾಳು ಮಾಡುತ್ತಿದು ಸತ್ಯ ಅದ”
“ಹೌದು ಮತ್ತೆ… ಕಾಡಿನಲ್ಲಿ ನಾವು ಹಾಯಾಗಿದ್ದೆವು… ನೀವೇ ಕರೆಸಿಕೊಂಡಿದ್ದು. ಪಡಕೊ೦ಡಿದ್ದು.. ನಿಮ್ಮಲ್ಲಿ ಅವಲ್ಲ ಅಸರಕಾರದಲ್ಲಿ ಹಲವು ಭಾಗ್ಯಗಳಂಗ ಪ್ರಕೃತಿಯಿಂದ ಪಡೆದದ್ದು ಉಚಿತ ಸೊಳ್ಳೆ ಭಾಗ್ಯನ” ಎಂದು ನಕ್ಕಿತು.
“ಹೇಗೆ?”
“ಮತ್ತೆ ಅದೆ ಕೇಳ್ತಿಯಲ್ಲಾ ಫ್ರೆಂಡು… ಕಾಡು ನಾಶ ಮಾಡಿದದಕ ನಮಗ ತಿನ್ನೊಕೆ ಕಡಿಮೆಯಾದಕ, ನಮ್ಮ ಬಳಗಕ್ಕ ಕೊಟ್ಟ ಮಾತು ಈಡೇರಿಸಿದಂಗನೂ ಆತು..ನಮ್ಮ ಬದುಕು ಆಯ್ತು ಅಂತ… ನಾವು ಸ್ವಲ್ಪ ಜನ ನಾಡಿಗೆ ಬಂದಿವಿ… ನೀವು ಜಾಣರೆ… ಏನೆ ಬರಲಿ ಅದಕ್ಕ ಪರಿಹಾರ ಕಂಡುಹಿಡಿಕೊಳ್ಳಾಕತಿರಿ… ನೀವು ಸುಧಾರಿಸಿಕೊಳ್ಳಲಿಲ್ಲ ಅಂದ್ರ ನಾವು ಮತ್ತೊಂದು ಟಾಸ್ಕ ಕೊಡತಾನ ಇರತಿವಿ”
“ನೀವು ಏನೆ ಮಾಡಿದ್ರು.. ಅದಕ್ಕ ಔಷಧಿ ಹುಡುಕತಿವಿ..”

“ಕೊರನಾಕ್ಕ ಔಷದ ಕಂಡುಹಿಡಿಬಹುದು ಅದರಂತಹ ನೂರು ರೋಗಬಂದ್ರೂ ಕಂಡುಹಿಡಿತಿರಿ ಅನ್ನೊದು ಗೊತ್ತು ಫ್ರೆಂಡು.. ನಾವು ಕೊಡೊ ಕಿರುಕುಳಕ್ಕ, ನಮ್ಮನ್ನ ನಾಶ ಮಾಡೋಕ ಶಾಶ್ವತ ಔಷಧಿ ಕಂಡು ಹಿಡಿಯಲು ಸಾಧ್ಯವಾಗ್ಯಾದನಾ?”
“ನಿಜ ಫ್ರೆಂಡು.. ಸಾಧ್ಯಾ ಆಗಿಲ್ಲ.. ಆಗೋದು ಇಲ್ಲ.. ಆಗಲೆ ನೀನು ಹೇಳಿದ್ದ ವಿಚಾರ ಎಲ್ಲಾ ಸರಿ ಅವ”
“ಹೌದಲ..? ನಮ್ಮವರಲ್ಲಿ ಎಂಬತ್ತರಿ೦ದ ತೊಂಬತ್ತರಷ್ಟು ಬಂಧುಗಳು ಕಾಡಲ್ಲೆ ಹುಟ್ಟಿ ಕಾಡಲ್ಲೆ ಸಾಯುತ್ತಾರೆ, ನಿಮ್ಮ ಸಂಪರ್ಕ ಬರೋದು ಹತ್ತರಿಂದ ಇಪ್ಪತ್ತು ಶೇಕಡಾ ಮಾತ್ರ. ಆದರ ಎಲ್ಲರಿಗೂ ನಿಮ್ಮ ರಕ್ತ ಹೀರುವ ಭಾಗ್ಯ ಇಲ್ಲ. ಕೇವಲ ಶೇಕಡಾ ಹತ್ತರಲ್ಲಿ ಒಂದೊ ಎರಡೊ ಸೊಳ್ಳೆಗಳು ಮಾತ್ರ. ನೀರು ನಮಗ ಸಂಪತ್ತ ಇದ್ದಂಗ. ಕಡಿಮೆ ಬಿದ್ರೆ ವಾತವರಣ ಶುಷ್ಕವಾದರೆ ನಿಮ್ಮ ದೇಹದ ನೀರನ್ನು ಹೀರೊಕೊಳ್ಳಾಕದ್ರೂ ಬರಬೇಕಾಗುತ್ತದ. ಇರೊ ಬರೊದನ್ನೆಲ್ಲ ನಾಶ ಮಾಡಿದ್ರೆ… ಸಿಟ್ಟಿಗೆದ್ದು ೩೫೦೦ ನಮ್ಮ ಜಾತಿಯ ಸೊಳ್ಳೆಗಳ ಪ್ರಭೇಧಗಳಿ ಅಟ್ಯಾಕ ಮಾಡಿದ್ರೆ? ಯೋಚಿಸಿ…. ಈಗಾಗಲೆ ನಿಮ್ಮ ಸಾಕು ಪ್ರಾಣಿಗಳಿಗೆಲ್ಲ ಕಡಿತಿದ್ವಿ… ನೀವು ಸೊಳ್ಳೆ ಪರದೆ ಹಾಕಿದ್ರೂ. ನಾವು ಅದೆ ಚರ್ಚೆ ನಡೆಸಿವಿ. ಎಷ್ಟೆಲ್ಲಾ ಡೇಂಜರಸ್ ವೈರಸ್ ಅವನೊ, ಹೊಸವು… ಮುಂದ ಬರುವವು ಯಾವವು ಅವನೊ ಅವೆಲ್ಲವುಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಅವುಗಳೆಲ್ಲವನ್ನು ನಿಮ್ಮ ಮೇಲೆ ಪ್ರಯೋಗಸ್ತಿವಿ”

“ಅಮ್ಮಾ…. ಹೇಗೆ?”
“ಎಟ್ ಎ ಟೈಮ್ ಚೆಸ್ ಆಟದಾಗ ಅತ್ತಿತ್ತ ಅಗಲದಂತೆ ರಾಜಗ ಚೆಕ್ ಕೊಟ್ಟಾಂಗ, ನಿಮ್ಮ ಮುನಷ್ಯ ಕುಲಕ್ಕೂ ನಾವು ಸೇವಿಸುವ ಹೂಗಳಲ್ಲಿ, ಆಹಾರ ಉತ್ಪನ್ನಗಳ ಸೇವಿಸುವ ಮರಗಿಡಬಳ್ಳಿಗಳಲ್ಲಿ, ಹಣ್ಣು ಕಾಯಿಗಳಲ್ಲಿ ಇಂಜೆಕ್ಟ ಮಾಡಬೇಕು ಅಂತ ಅನುಕೊಂಡಿವಿ, ಈಗಾಗಲೆ ನಿಮ್ಮ ಸಾಕು ಪ್ರಾಣಿಗಳಿಗೂ ಕಾಟ ಕೊಡತಿದ್ವಿ.. ಮನುಷ್ಯರಿಂದ ಬಿಟ್ಟು ಹೋಗ್ರಿ, ಅವನಿಗೆ ಸಹಾಯ ಮಾಡಬೇಡಿ ಅಂತ.. ನೀವೇನೊ ಮಚ್ಚರದಾನಿ ಹಾಕಿ ಕಾಪಾಡತಿದ್ದೀರಿ.. ಅವುಕ್ಕು… ವೈರಸ್ ಗಳನ್ನು ಇಂಜೆಕ್ಟ ಮಾಡಿದ್ರ.. ಅದರ ಉತ್ಪನ್ನಗಳನ್ನು ತಿನ್ನುವುದರ ಮೂಲಕವು ರೋಗ ಹರಡಸ್ತೀವಿ. ಒಟ್ಟಿನಲ್ಲಿ ಎಷ್ಟು ಸಾಧ್ಯವೊ ಅಷ್ಟ ಕಡೆ ನಿಮ್ಮನ್ನೆಲ್ಲ ಟ್ಯಾಕಲ್ ಮಾಡವ ಯೋಚನೆ ಇದೆ… ಬಿ ಕೇರ್‌ಫುಲ್ ” ಅಂತ ನಕ್ಕಿತು.
“ಹಾಗಾದರೆ ನಮ್ಮ ಪಾಡು”

“ಮಾಡಿದ್ದುಣ್ಣೊ.. ಮಹಾರಾಯ… ನಿಮಗ ಸ್ವಚ್ಛತಾ ಜ್ಞಾನ ಬರೊಕೆ ಸಾಧ್ಯ ಇಲ್ಲ… ಪರಿಸರನ್ನ ಹಾಳು ಮಾಡೋದು ಬಿಡಲ್ಲ… ಹಾಗಾಗಿ ನಿಮಗ ನಮ್ಮಿಂದ ನೆಮ್ಮದಿನ ಇಲ್ಲ… ನೀವು ಹೀಗೆ ಹೋಗೊದು”
“ಹೌದು…! ಇಷ್ಟೆಲ್ಲ ನನಗ್ಯಾಕ ಹೇಳಿದಿ.. ನೀನು ಯಾರು? ಇಷ್ಟು ಒಳ್ಳೆವ ಇದ್ದಿ? ಯಾರು ನೀನು?”

“ನಿಮ್ಮ ರಾಮಾಯಣದಲ್ಲಿ ಬರೋ, ವಿಭಿಷಣನಂಗ, ಮಹಾಭಾರತದಲ್ಲಿ ಬರೋ ಯುಯುತ್ಸನಂಗ ಅಂತ ನನ್ನನ್ನು ತಿಳುಕೊ.. ಅವತ್ತು ನಿಮ್ಮ ರೋನಾಲ್ಡ ರಾಸ್ ಬಹುತೇಕ ರೋಗಗಳಿಗೆ ಸೊಳ್ಳೆನ ಕಾರಣ ಅದರಲ್ಲಿ ಮಲೇರಿಯಾ ರೋಗಕ್ಕ ಅನಾಫೆಲೆಸಿ ಹೆಣ್ಣು ಸೊಳ್ಳೆ ಕಾರಣ ಅಂತ ತಿಳಿಸಿ ತಪ್ಪು ಮಾಡಿದ.. ಇಲ್ಲಂದ್ರ ನಿಮ್ಮ ಅನೇಕ ನಮ್ಮಿಂದ ಹರಡುವ ರೋಗಗಳಿಗೆ ಯಾರು ಯಾರು ಅಂತ ತಲೆಕೆಡಸಿಕೊಳ್ಳ ಬೇಕಾಗಿತ್ತು”
“ಅಮ್ಮಾ… ಇಷ್ಟೆಲ್ಲಾ ನೀನು ಹೇಳೊದು ನೋಡಿದ್ರ… ನನ್ನದೊಂದು ಆಸೆ ಅಗಲಿಕತ್ತದ.. ಈಡೇರಸ್ತೀಯಾ?”
“ಏನಪ್ಪ ಅಂತಹ ಆಸೆ”
“ಹೇಳತೀನಿ… ಐದು ನಿಮಿಷ.. ಸೂಸುಗೆ ಹೋಗಿ ಬರತೀನಿ.. ಮೊದಲು”ಎಂದೆ
“ಥೋ.. ಥೋ… ಆಯ್ತಪ್ಪ ಹೋಗಿ ಬಾ” ಎಂದಿತು ಸೊಳ್ಳೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

April 24, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. Basavaraj Maski

    ಬರಹ ತುಂಬಾ ಚೆನ್ನಾಗಿದೆ, ನಮ್ಮ ಭಾಷೆಯ ಸೊಗಡಿನಲ್ಲಿ ಗುಂಡೂರಾವ್ ದೇಸಾಯಿ ಸರ್ ಅವರ ಬರವಣಿಗೆ ಅದ್ಭುತವಾಗಿ ಮೂಡಿ ಬಂದಿದೆ.. ಸೊಳ್ಳೆಗಳು ನಮಗೆ ಯಾವ ರೀತಿಯಿಂದ ತೊಂದರೆ ಕೊಡುತ್ತವೆ ಮತ್ತು ನಮ್ಮ ಜೊತೆಗಿದ್ದು ನಮಗಿಂತ ತುಂಬಾ ಶಕ್ತಿಶಾಲಿಯಾಗಿದಾವೆ ಎಂಬುದನ್ನು ಅದ್ಭುತವಾಗಿ ತಮ್ಮ ಬರವಣಿಗೆಯ ಮೂಲಕ ತುಂಬಾ ಸುಂದರವಾಗಿ ನಿರುಪಿಸಿದ್ದಾರೆ. ಧನ್ಯವಾದಗಳು ಸರ್ ನಿಮ್ಮ ಬರವಣಿಗೆ ಇದೇ ರೀತಿ ಮುಂದುವರೆಯಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: