ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಥ್ಯಾಂಕ್ಸ ದೋಸ್ತ, ನನ್ನ ಬಚಾವ್ ಮಾಡಿದೆ…

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು.

ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ ಪುರಾಣ ಹಾಸ್ಯ ಲೇಖನ ಸಂಕಲನ… ಮಕ್ಕಳಿಗಾಗಿ ಅಜ್ಜನ ಹಲ್ಲುಸೆಟ್ಟು (ಮಕ್ಕಳ‌ ಕವಿತೆಗಳ ಸಂಕಲನ) ಮಾಸಂಗಿ (ಮಕ್ಕಳು ಬರೆದ ಕತೆಗಳ ಸಂಪಾದನೆ) ಮಕ್ಕಳೇನು ಸಣ್ಣವರಲ್ಲ (ಮಕ್ಕಳ ಕತಾ ಸಂಕಲನ) ಕೃತಿಗಳು…

ಬಹತೇಕ ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಲಲಿತ ಪ್ರಬಂಧ, ಹಾಸ್ಯ ಲೇಖನ, ಮಕ್ಕಳ‌ ಕತೆ, ಕವಿತೆ, ನಾಟಕಗಳು ಪ್ರಕಟವಾಗಿವೆ. ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕರಾಗಿ ಹಲವಾರು ಮಕ್ಕಳ‌ ಕಮ್ಮಟ, ರಂಗಶಿಬಿರ, ಸಾಹಿತ್ಯಿಕ‌ ಚಟುವಟಿಕೆಗಳನ್ನು ಸಂಘಟಿಸಿದ್ದಾರೆ…

10

ಶಾಲೆಗೆ ಬಂದೋಡನೆ…ಸೈನ್ಸ್ ಪ್ರೊಜೆಕ್ಟನ್ನು ತೋರಿಸುವ ಗಲಾಟೆಯಲ್ಲಿ ಬಿದ್ದೆ…. ಸೈನ್ಸ್ ಸರ್ ಟೇಬಲ್ ಮುಂದೆ ದೊಡ್ಡ ಕ್ಯೂ ಇತ್ತು. ಲೇಟಾಗಿ ಕೊಟ್ಟಿದ್ದಕ್ಕೆ ಜೊತೆಗೆ ಚೆಕ್ ಮಾಡಿ ಚೆಕ್ ಮಾಡಿ ಬೈತಾ ಇದ್ರು. ಜೊತೆಗೆ ಹಿಂದಿನ ದಿನ ದೊಡ್ಡ ದೊಡ್ಡ ಮಾತಾಡಿದವರಿಗೆ ಸರಿಯಾಗಿ ಝಾಡಿಸಿ “ಅರ್ಥ ಆಗಿಲಿಕ್ಕೆ ಅಂದ್ರ ಹತ್ತು ಸಾರಿ ಕೇಳಿ ಅಂದಿನಿ, ಕೇಳೊಲ್ಲ…ಪರೀಕ್ಷೆಯಲ್ಲಿ ಒದ್ದಾಡತಿರಿ….ಏನಾದ್ರೂ ಅಂದ್ರೆ ಸಿಟ್ಟು ಬರುತ್ತೆ….ಓದಬೇಕು..ಇದು ಕಾಂಪಿಟೇಶನ್ ಯುಗ” ಅಂತ ತಿಳಿ ಹೇಳುತ್ತಿದ್ದರು.

ಸಾಲಿನಲ್ಲಿ ನಿಂತು ಪಾಳಿ ಬಂದಾಗ ತೋರಿಸಿದೆ. ನನ್ನ ಪ್ರೊಜೆಕ್ಟ ಬಹಳತ್ತನ ನೋಡಿದ್ರು.. ‘ಸೊಳ್ಳೆ ಐಡಿಯಾ ಕೊಟ್ಟಿದ್ದು ಗೊತ್ತಾಯಿತಾ? ಅಥವಾ ಸೊಳ್ಳೆ ಯಾರದಾದರೂ ಕಾಪಿ ಮಾಡಿ ಹೇಳಿದಿಯಾ? ಅವಾಗಿನಿಂದ ತಿರುವಿ ತಿರುವಿ ನೋಡುತ್ತಿದ್ದಾರೆ’ ಎಂದು ಭಯಗೊಂಡೆ. ಎಲ್ಲವನ್ನು ಪರಿಶೀಲಿಸಿ “ಗುಡ್ ಒನ್, ಇನಸ್ಪೈರ್ ಅವಾರ್ಡಗೆ ಇಂತಹ ಪ್ರೊಜೆಕ್ಟ ಬೇಕಿತ್ತು.. ಇದನ್ನೆ ಕಳಿಸೋಣ” ಎಂದು ಶಭಾಶಗಿರಿ ಕೊಟ್ರು. ಅವರಿಂದ ಭೇಷ್ ಎನಿಸಿಕೊಂಡು ತರಗತಿಯೊಳಗೆ ಬಂದು ಕುಳಿತಾಗಲೆ ಹೊತ್ತಾಗಿತ್ತು. ರೆಸ್ಟ ಪಿರಿಡ್ ಇದ್ದುದರಿಂದ ಎಲ್ಲರೂ ಹೊರಗೆ ಹೋಗಿದ್ದರು.

ಆ ಕೂಡಲೆ ನೆನಪಾಗಿದ್ದು ಸೊಳ್ಳೆ.. ಅಯ್ಯೊ ಇವತ್ತು ಅದನ್ನು ಮಾತಾಡಿಸೋದು ಮರೆತುಬಿಟ್ಟಿನಲ್ಲ. ನನ್ನ ಪ್ರೊಜೆಕ್ಟನ ಯಶಸ್ಸಿಗೆ ಅದೆ ಕಾರಣ. ಇದನ್ನೆ ಇನಸ್ಪೈರ ಅವಾರ್ಡಗೆ ಕಳಿಸೋಣ ಎಂದಿದ್ದಾರೆ. ಇನಸ್ಪೈರ್ ಅವಾರ್ಡಗೆ ಮಾದರಿ ತೆಗೆದಕೊಂಡು ಹೋಗುವುದು ಸುಲಭವಲ್ಲ. ಜಿಲ್ಲಾ ಮಟ್ಟದಲ್ಲಿ ಆಯ್ಕೆ ಆದರೆ ರಾಜ್ಯ ಮಟ್ಟಕ್ಕೆ, ಆಮೇಲೆ ರಾಷ್ಟ್ರಮಟ್ಟಕ್ಕೆ. ಅದು ದೊಡ್ಡ ಗೌರದ ವಿಷಯ. ಎಲ್ಲಾ ಕಡೆ ನನ್ನ ಹೆಸರು ಬರುತ್ತದೆ. ಎಲ್ಲಿಗೂ ಖುಷಿ. ಹೌದು ಅದಕ್ಕಾಗಿ ನಾನು ಶಕ್ತಿ ಮೀರಿ ಯತ್ನಿಸಬೇಕು ಅಲ್ಲಿವರೆಗೂ ಸೊಳ್ಳೆ ಜೊತೆಯಲ್ಲಿದ್ದರೆ….ಏನೆಲ್ಲ ಐಡಿಯಾ ಕೊಡುತ್ತದೆ… ಅದನ್ನೆ ಮರೆತು ಬಿಟ್ಟಿದ್ದೇನೆ ಏನು ಅಂದುಕೊಳ್ಳಕ್ಕಿಲ್ಲ ಅದು. ಮೊದಲೆ ಮನುಷ್ಯರ ಬಗ್ಗೆ ಅಸಹನೆ ಇದೆ ಅದಕ್ಕೆ. ಮೊದಲು ಮಾತಾಡಸಬೇಕು, ಸ್ವಾರಿ ಕೇಳಬೇಕು. ಏನೆಲ್ಲ ವಿಷಯ ಹೇಳುವ ಸೊಳ್ಳೆ, ಅನೇಕ ಸುದ್ದಿ ಹೇಳುವ ಸೊಳ್ಳೆ, ನನಗೆ ಪ್ರೊಜೆಕ್ಟಗೆ ಒಳ್ಳೆಯ ಐಡಿಯಾ ಕೊಟ್ಟ ಸೊಳ್ಳೆ. ‘ಎಲ್ಲಿದ್ದಿಯಾ ಫ್ರೆಂಡು..ಎಲ್ಲಿದ್ದಿಯಾ ಬಾ ಬಾ’ ಎಂದು ಕರೆದೆ. ಗಡಿಬಿಡಿಯಲ್ಲಿ ಮರೆತೆ ಹೋಗಿತ್ತು. ಡೆಸ್ಕಗೆ ಬಂದು…ಬ್ಯಾಗನ್ನೆಲ್ಲಾ ತಡಕಾಡಿದೆ. ಸಿಗಲಿಲ್ಲ. ಮನೆಯಲ್ಲಿ ಮರೆತುಬಂದೆನೋ ಏನೋ…ಇಲ್ಲ…ಓಡೋಡಿ ಬರುವಾಗ ಅದಕ್ಕೆನಾದರೂ ಪೆಟ್ಟಾಯಿತೊ..ಇಲ್ಲ ಇಲ್ಲ…ಬೆನ್ನಿಗೆ ಹಾಕಿಕೊಂಡು ಬಂದರೆ ತೊಂದರೆ ಎಂದು ಕೈಯಲ್ಲಿ ಹಿಡಿದುಕೊಂಡು ಬಂದಿದ್ದು. ಮತ್ತೆ…ಎಲ್ಲಿಗೆ ಹೋಗಿದೆ ಮೊದಲು ಬಂದು ವಿಶ್ ಮಾಡುತ್ತಿತ್ತು. ಇವತ್ತು ಹೀಗೆಕೆ ನಾನು ಅವಸರದಲ್ಲಿ ಅದು ಕೂಗಿದರೂ ಕೇಳದೆ ಹೋದೆನೊ…? ಎಲ್ಲಿ ಹೋಗಿರುವೆ ಡಿಯರ್ ಫ್ರೆಂಡು ಎಲ್ಲಿದ್ದಿಯಾ? ಎಲ್ಲಿದ್ದಿಯಾ? ಎಂದು ಮೇಲೆ ಕೆಳಗೆ ತಡಕಾಡಿದೆ. ಎಲ್ಲಿಯೂ ಸಿಗಲಿಲ್ಲ.

ಸ್ವಲ್ಪ ಸಮಯದ ನಂತರ ಕೆಳಗಡೆಯಿಂದ ನರಳುವ ಧ್ವನಿ ಕೇಳಿತು. ಬಗ್ಗಿ ನೋಡಿದೆ. ಜೀಡರ ಬಲೆಯೊಳಗೆ ಸಿಕ್ಕು ಒದ್ದಾಡುತ್ತಿದೆ. ಥಟ್ಟನೆ ಬೆಳಿಗ್ಗೆ ಹೇಳಿದ್ದು ನೆನಪಾಯಿತು…ಸಿಕ್ಕಿಬಿದ್ದಿದ್ದ ಸೊಳ್ಳೆಯನ್ನು ತಿನ್ನಲು ಜೇಡ ಬರುವದಕ್ಕೂ ಆ ಜೇಡರ ಬಲೆಯನ್ನು ಕೆಡಿಸಿದ್ದಕ್ಕೂ ಸರಿಹೋಯಿತು. ಸೊಳ್ಳೆ ಹಾರಿ ಹೋಯಿತು ಜೇಡ ಕೈಗಂಟಿಕೊ೦ಡಿತು… ಜೇಡ ಅದು ಹೇಗೆ ಚಂದವಾಗಿ ಬಲೆ ಹೆಣೆದರೂ ಅದು ಕೈಗೆ ಅಂಟಿಕೊ೦ಡರೆ ಏನೋ ಒಂದು ಕಸಿವಿಸಿ. ಜೇಡ ಹಾನಿಕಾರಕವಲ್ಲವಾ..? ಅದರ ಪಾಡಿಗೆ ಅದು ಇದ್ದರೆ ಹಾನಿಕಾರಕವಲ್ಲ. ಅದರ ಮನೆಯನ್ನು ಕೆಡಿಸಿದರೆ ಆ ಕ್ಷಣದಲ್ಲಿ ಕೋಪದಲ್ಲಿ ಕಂಡವರಿಗೆ ಕಚ್ಚುತ್ತದೆ. ಅದರ ಕೆಲ ಜಾತಿ ಜೇಡಗಳ ಕಚ್ಚುವಿಕೆ ಅಪಾಯಕಾರಿ ಎಂದು ಕೇಳಿದ್ದೆ. ಸ್ಪೈಡರ್ ಮ್ಯಾನ್ ಆಗಲು ಹೋಗಿ ಮುದ್ದಾ ಕಚ್ಚಿಸಿಕೊಂಡು ಒದ್ದಾಡಿದ್ದೆ. ಈಗ ಅದರ ಆಹಾರವನ್ನ ನಾನು ತಪ್ಪಿಸಿದುದಲ್ಲದೆ ಅದರ ಮನೆಯನ್ನು ಹಾಳುಮಾಡಿದೆ. ಅದಕ್ಕೆ ಕೋಪ ಬಾರದೆ ಇರುತ್ತದೆಯೆ…ಅದು ಕೂಡಲೆ ನನ್ನ ಅಂಗೈ ಮೇಲಿಂದ ನನ್ನ ಅಂಗಿ ಮೇಲೆ ಏರಿ ಒಳಹೋಗಲು ಪ್ರಯತ್ನಿಸಿತು. ನನಗೆ ನನ್ನ ಭಯ. ಅದು ಸೇಡಿನಿಂದ ಕಚ್ಚಲು ಬಂದಿರಬಹುದೆ೦ದು, ಪಾಪಾ ಅದಕ್ಕೆ ತನ್ನ ರಕ್ಷಣೆ ಮಾಡಿಕೊಳ್ಳಲು ಎಲ್ಲೊ ಸಂಧಿ ಹುಡುಕುತ್ತಿರಬಹುದು ಎಂಬ ಭಾವ ನಮ್ಮಲ್ಲಿ ಮೂಡೋದೆ ಇಲ್ಲ.

ಅವತ್ತು ಹಾಗೆ ಆಗಿತ್ತು..ಮಕ್ಕದ ಮನೆಯ ಪಕ್ಕದ ಮನೆಯ ಸೀನು ಶಾಲೆಗೆ ರೆಡಿ ಆಗಿ ಹೊರಗೆ ಬರುತ್ತಲೆ ಚೀರಲು ಆರಂಭಿಸಿದ್ದ. ನನ್ನ ಅಂಗಿಯೊಳಗೆ ಹಾವಿದೆ ಎಂದು ಓಡಿದ್ದೆ ಓಡಿದ್ದು. ಎಲ್ಲರೂ ಹಿಡಿದು ಪರಿಶೀಲಿಸಿದಾಗ ಅದು ಹಾವಾಗಿರದೆ ಹಲ್ಲಿಯಾಗಿತ್ತು. ಅವನು ಎದೆಹೊಡೆದುಕೊಂಡು ಬಿಟ್ಟಿದ್ದ. ಪಾಪಾ ಅವನ ತ್ರಾಸ ಅವನಿಗೆ. ಅಂಗಿ ಕೀಳಿದಾಗ ಬೆನ್ನಿನ ಮೇಲೆ ಹಲ್ಲಿ ಗಟ್ಟಿಯಾಗಿ ಹಿಡಿದು ಕೊಂಡು ಬಿಟ್ಟಿತ್ತು. ಅದನ್ನು ನೋಡಿ ಎಲ್ಲರೂ ಹೆದರಿದ್ದೆ ಹೆದರಿದ್ದು ಇವ ಓಡಿದ್ದೆ ಓಡಿದ್ದು. ಅದೂ ಅಂಜಿ ಕೆಳಗೆ ಇಳಿದು ಚಡ್ಡಿ ಒಳಗೆ ಹೊರಡಲು ಮುಂದಾಗಿತ್ತು. ನಾನೇ ಪ್ಲಾನು ಮಾಡಿ ಒಂದು ಕೋಲಿನಿಂದ ಹಲ್ಲಿಯನ್ನು ಚಿಮ್ಮಿ ಅವನನ್ನು ಕಾಪಾಡಿ ಹಿರೋ ಆಗಿದ್ದೆ. ಹಿರೋ ಆ ಕಾಲ ಸಂದರ್ಭಕ್ಕೆ ಆದರೂ ಅದು ನಮ್ಮ ಹತ್ತಿರಕ್ಕೆ ಬಂದಾಗ ಜಿರೊ ಅಲ್ಲವೆ, ಈಗ ಏರುತ್ತಿದ್ದುದು ಕಪ್ಪು ಹೆಣ್ಣು ಜೇಡ. ಸ್ವಲ್ಪ ಅಪಾಯಕಾರಿ ಎಂದು ಓದಿದ್ದೆ. ತೋರು ಬರಳಿನಿಂದ ಗೋಲಿಯನ್ನು ಚಿಮ್ಮವ ಹಾಗೆ ಚಿಮ್ಮಿದೆ. ಅದು ದೂರದಲ್ಲಿ ಹೋಗಿ ಬಿದ್ದಿತು. ಕಾಣಲೆ ಇಲ್ಲ.
“ಥ್ಯಾಂಕ್ಸ ದೋಸ್ತ ಇವತ್ತು ನೀನು ನನ್ನ ಬಚಾವ ಮಾಡಿದೆ” ಎಂದಿತು ಸೊಳ್ಳೆ
“ಅದಿಕ್ಯಾಕೆ ಥ್ಯಾಂಕ್ಸ ಫ್ರೆಂಡು…ನನ್ನ ಕರ್ತವ್ಯ”
“ಇಲ್ಲಪ ನಾವೇನು ನಿಮ್ಮ ಹಾಗೆ ದೊಡ್ಡ ಆಯಸ್ಸು ಪಡೆದವರಾ..? ನಾನು ನಿನಗೆ ಹೇಳಬೇಕಾದ ವಿಷಯ ಮುಟ್ಟಿಸದೆ ಸತ್ತುಹೋಗತಿದ್ದೆನಲ್ಲ” ಎಂದು ನೋವಾಗುತ್ತಿದೆ.

“ಅದೆ ಮೊನ್ನೆಯಿಂದ ಏನೊ ಹೇಳಲು ಹೊರಟಿರುವೆ, ಆದರೆ ಪೂರ್ತಿಯಾಗತಾ ಇಲ್ಲ. ಎಲ್ಲಾ ಅರ್ಧ ಅರ್ಧ ಅರ್ಧ…ನನಗೂ ಕೇಳುವ ಆಸೆ. ಬೆಳಿಗ್ಗೆ ನಿಮ್ಮ ಬಗ್ಗೆ ಏನೆಲ್ಲ ಹೇಳಿದಾಗ ನಿನ್ನ ಬಗ್ಗೆ ಇನ್ನೂ ಅಭಿಮಾನ ಹೆಚ್ಚಿತು. ಹೇಳಿಬೀಡು ಈಗ”
“ಸರಿ…..ಅದೂ….” ಎಂದು ಏನೊ ಹೇಳೊ ಹೊರಟಾಗ ಗೆಳೆಯರೆಲ್ಲ ದುಬುದುಬು ತರಗತಿ ಒಳಗೆ ಓಡಿಬಂದರು ಏನೊ ಕಂಡು ಹೆದರಿಕೊಂಡು ಓಡಿಬಂದವರ೦ತೆ..
ಸೊಳ್ಳೆ ಸೈಡ್‌ಗೆ ಸರಿಯಿತು.
“ಯಾಕ್ರೋ…? ಏನಾಯಿತು! ಓಡುತ್ತಾ ಬಂದಿರಿ” ಎಂದೆ.
“ಗೆಳೆಯ, ನಿನಗ ಹಿಂದೆಲ್ಲ ಅನ್ಯಾಯ ಮಾಡಿರಬಹುದು. ಹಂಗಿಸಿರಬಹುದು, ಸುಳ್ಳು ಆರೋಪಮಾಡಿರಬಹುದು, ಹೆದರಿಸಿರಬಹುದು, ಬಡಿದಿರಬಹುದು..ದಯವಿಟ್ಟು ಮರತು ಬಿಟ್ಟ ನಮ್ಮನ್ನ ಉಳುಸು ದೋಸ್ತಾ” ಎಂದ ನಾಗ.
“ಹೌದು ಕಣೊ..ಗೆಳೆಯರ ಮಧ್ಯ ಇವು ಕಾಮನ್ನು..ನಾವು ನಿಮಗೆ ಮಾಡಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಮ್ಮನ್ನ ಇವತ್ತ ಕಾಡಬಾರದು” ಎಂದ ಅನಂತು.


“ಹೌದು..ಇವತ್ತನಿ೦ದ ನಿನ್ನ ಮಾತು ಮೀರಲ್ಲ…ನೀನಗ ಬಾಡಿಗಾರ್ಡ ಆಗಿರತೀನಿ…ಆದರ ನನ್ನ ಉಳಸೋ” ಎಂದ ಭೀಮ.
“ಹೌದು ಕಣೊ..ಪ್ಲೀಜ್..” ಎಂದ ಸತೀಶ. ಸತೀಶ ಪೂರ್ತಿ ಕಾಂಪಿಟೇಟರ್..ಒ೦ದು ಸಾರಿ ಅವ ಫಸ್ಟ ಬಂದ್ರೆ ಇನ್ನೊಂದು ಸಾರಿ ನಾನು ಬರುತಿದ್ದೆ. ಎಂದೂ ಕೂಡಾ ಮಾತಾಡದವನು ಇಂದು ಮಾತನಾಡುತ್ತಿದ್ದಾನೆ ಜೊತೆಗೆ ನನ್ನನ್ನು ದ್ವೇಷಿಸುವವರೆಲ್ಲ ಇಷ್ಟು ಪ್ರೀತಿಯಿಂದ ಮಾತಾಡಿಸೋದು ನೋಡಿ ಬಹಳ ಖುಷಿಯಾಯಿತು. ಎಲ್ಲಾ ಸರಿ ನೀವು ಏನೆ ಮಾಡಿದ್ರೂ ನನ್ನ ಗೆಳೆಯರು. “ನಿಮ್ಮ ಬಗ್ಗೆ ಏನೂ ದ್ವೇಷ ಇಲ್ಲ. ಈಗಲಾದ್ರೂ ಅರ್ಥಮಾಡಿಕೊಂಡ್ರಲ್ಲಾ ಎಂದು ಆಗಿದ್ದಾದರೂ ಏನು?” ಎಂದು ಕೇಳಿದೆ.

“ಇಂಗ್ಲೀಷ್ ಸರ್ ಆನಸರ್ ಪೇಪರ್ ಜೊತೆ ದೊಡ್ಡ ಬೆತ್ತ ಹಿಡುಕೊಂಡು ಬರತಿದ್ದಾರೆ. ನಮೆಲ್ಲರ ಕತಿ ಮುಗುದಾಂಗೆ. ಹೋದ ವರ್ಷ ಅರ್ಧ ಮಂದಿ ಇವರ ಹೊಡತಕ್ಕ ಬಿಟು ಬೇರೆ ಕಡೆ ಹೋದ್ರು. ನಾವು ಬಿಡಬೇಕಂದ್ರು ಮನೆಯಲ್ಲಿ ಇದೆ ಶಾಲೆಯಲ್ಲಿ ಬಡಸಿಕೊಂಡು ಸಾಯಿ ಅಂತಿದ್ದಾರೆ ..ಕರಳು ಕಕಲಾತಿ ಮರೆತಿದ್ದಾರೆ ಹೇಗಾದರೂ ಮಾಡಿ ಆ ಬೆತ್ತದ ಏಟಿನಿಂದ ಉಳಿಸೋ ಮಾರಾಯ” ಎಂದ ಭೀಮ.
ಸತೀಶನೂ ಇಂಗ್ಲೀಷ್ ಪೇಪರ್ ಸರಿಯಾಗಿ ಬರೆದಿಲ್ಲ ಎಂದು ಗೊತ್ತಾಯಿತು.
“ನನಗೂ ನಾಲ್ಕು ಮಾರ್ಕ ತೊಗೊಂಡದಕ, ಹೋದ ಸಾರಿ ಸತೀಶ ಎರಡು ಮಾರ್ಕ್ಸ ತೊಂಗೊ೦ಡದಕ ಬಡಿಸಿಕೊಂಡ್ವಿ, ಸಾಕಾಗಿದೆ ಗೆಳೆಯ ಬಡಿಸಿಕೊಂಡು… ಏನಾದರೂ ಮಾಡೋಣ ಎಂದು ಸುಮ್ಮನಾಗಿಸಿದೆ”
“ಹೌದು ಸಮು ಹೇಗಾದರೂ ಮಾಡಿ ಕಾಪಾಡೊ” ಎಂದು ಅನಂತು
“ಸರಿ ಪ್ರಯತ್ನ ಮಾಡ್ತೀನಿ ನಾನು ಕಡಿಮೆ ತೊಗೊಂಡಿದ್ದರೆ ನನಗೂ ತಪ್ಪಿದ್ದಲ್ಲ ಏಟುಗಳು. ಎಲ್ಲರೂ ಕೂಡಿ ಎದುರಿಸೋಣ” ಎಂದೆ
‘ಸರ್ ಸಿಟ್ಟಿನ ಮುಖದಿಂದ ಒಳಗೆ ಎಂಟ್ರಿಕೊಟ್ಟರು.
“ಗುಡ್…..ಮಾ…ರ್ನಿಂ…ಗ್…ಸಾ..ಆ…ಆ…ಆ…ಆ.. ರ್…..” ಎಂದು ಕಿರಿಚಿದ್ವಿ.
“ನಿಮ್ಮ ಗುಡ್ ಮಾರ್ನಿಂಗ ಹಾಳಾಗಿ ಹೋಗ್ಲಿ… ಹ್ಯಾಂಗ ಒದರತಾವ್ ನೋಡು ಗೋಸುಂಬೆಗಳು.. ನಿಮಗೆಲ್ಲ ಬ್ಯಾಡ ಮಾರ್ನಿಂಗ, ಸಿಟ್ ಡಾವನ್” ಎಂದು ಚೀರಿದರು..

ಅದರಲ್ಲಿ ಮಹೇಶ ಎದ್ದು ನಿಂತು “ಸಾರ್ ಇಂಟ್ರೊಲ್ ಡ್ರಿಂಕ೦ಗ್ ಗೆ ಹೋಗ್ತೀನಿ ಸಾರ್ “ಎಂದು ಬಲಗೈನ ಮೂರು ಮಧ್ಯದ ಬೆರಳನ್ನು ಮಡಚಿ ರೆಸ್ಟೊ ಹೋಗೋಕೆ ನೀರು ಕುಡಿಯೋಕೆ ಅಂತ ತೋರಿಸಿದ. ಅವ ಇಂಗ್ಲೀಷ ಮಿಡಿಂನಿದಮ ನಮ್ಮ ಶಾಲೆಗ ಬಂದಿದ್ದ.. ಸಿಟ್ಟಿನ ಇಂಗ್ಲೀಷ್ ಮೇಷ್ಟ್ರ ಮುಖದಲ್ಲಿ ನಗು ಬಂದು “ಲೇ ಮುಠ್ಠಳ ನನ್ಮಗನೆ. ಹ್ಯಾಂಗ ಕಲ್ತು ಬಂದಿರಲೇ ಇಂಟ್ರೋಲ್ನ ಡ್ರಿಂಕ್ ಮಾಡತಾರೇನೊ?’ ಎಂದು ಬೈದು ದಬ್ಬಿದ್ರು….ಎಲ್ಲರೂ ಗೊಳ್ಳೆಂದು ನಕ್ಕೆವು.

“ಹಾಂ..ನಗರಿ…ನಗಗಿ, ನಗರಪಾ ನಗರಿ, ‘ನಗಿ ಹೋಗಿ ಹಗಿ’ ಆಗತ್ತನ್ನೋದು..ಪೇಪರ್ ತೆಗದಾಗನ ಗೊತ್ತಾಗುತ್ತದ” ಎಂದ್ರು
ತರಗತಿ ಏಕದಂ ಸೈಲೆಂಟ್ ಆಯ್ತು.
ಹೊರಗೆ ಹೋಗಿದ್ದ ಗೆಳೆಯನೊಬ್ಬ “ಐ ಆಮ್ ಕಮಿಂಗ್ ಸರ್” ಎಂದ
“ಅಪ್ಪಾ ಬಂಗಾರ ನೀನು ಬರತಾ ಇದ್ದಿಯಪ್ಪ..ಯು ಆರ್ ಕಮಿಂಗು, ವೈ ಆರ್ ಯು ಆಸ್ಕಿಂಗೂ..ಮತ್ತೆನು ಕೇಳೊದದ ಸ್ಟುಪಿಡ್ ಫೆಲೊ” ಎಂದ್ರು.
“ಅಲ್ಲ ಸರ್…ನಿಮ್ಮ ತರಗತಿಯಲ್ಲಿ ಇಂಗ್ಲೀಷನಲ್ಲಿ ಮಾತಾಡಬೇಕಲ್ಲ ಸರ್”
“ಮೆ ಐ ಕಮ್ ಇನ್ ಸರ್ ಅಂತ ಕೇಳಬೇಕಲೇ ಇನ್ ಫ್ಯೂಚರ್ ಟೆನ್ಸ್ನಲ್ಲಿ”
“ಓಕೆ ಸರ್…” ಎಂದು “ಮೇ ಐ ಕಮ್ ಇನ್ ಸರ್ ಇನ ಫ್ಯೂಚರ್ ಟೆನ್ಸ್” ಎಂದ.
ಎಲ್ಲರಿಗೂ ನಗು ಬಂದಿತ್ತಾದರೂ….ಹೊರಗ ಬರಲಿಲ್ಲ.

“ನಿಮ್ಮಂತವರಿಗೆ ಪಾಠ ಮಾಡದ ಬೇಕಾದ ಕರ್ಮ ನಂದು” ಎಂದು “ಗೆಟ್ ಇನ್” ಅಂತ ಕ್ಯಾಕರಸಿ ನೋಡತಾ ಒಳಗ ಕರದ್ರು.
ನಿಧಾನವಾಗಿ ಎದ್ದುನಿಂತು ಚಾಳಿಸು ತೆಗೆದಿಟ್ಟು. ಹೇರ್ ಸ್ಟೈಲ್‌ನ ಸರಿಮಾಡಿಕೊಂಡು ಕೈಲ್ಲಿದ್ದ ಬಂಗಾರದ ಉಂಗುರಗಳನ್ನ ತೆಗೆದಟ್ಟು “ನಿಮ್ಮ ಅಪ್ಪಾ ಬರಲಿ, ನಿಮ್ಮವ್ವ ಬರಲಿ…ಏನು ಮಾಡಿಕೋತಾರೊ ಮಾಡಿಕೊಳ್ಳಲಿ ಆದರ… ನನ್ನ ಪೇಪರನ್ನ ಸರಿಯಾಗ ಬರದಿವರನ್ನ ಗತಿ ಕಾಣಸೆ ಕಾಣಸ್ತೀನಿ” ಎಂದು ರೆಡಿಯಾಗಿ ನಿಂತರು.

ಚಾಳಿಸು ಟೇಬಲ್ ಮೇಲೆ ಇಟ್ರಂದ್ರ ಏಟು ಕೊಡಾಕ ಅಂತ ಎಲ್ಲರಿಗೀ ಗೊತ್ತಿತ್ತು. ಆಗಲೆ ಮಲ್ಲಯ್ಯ ಚಡ್ಡಿ ತೊಯ್ದಿತ್ತು. ಉತ್ತರ ಪತ್ರಿಕೆಯಲ್ಲಿಯ ‘ನಾಗ’ ಅಂತ ಹೆಸರು ಹೇಳುತ್ತಿದ್ದ ಹಾಗೆ ‘ಫಡ್’ ಅಂತ ಸೌಂಡ ಮಾಡಿದ್ದ..ಅವನು ಆಸ್ಪೋಟಕ್ಕ ತರಗತಿ ಕೋಣೆಯಲ್ಲ ಗಮ್ಮೆಂದು ವಾಸನೆ ಎದ್ದಿತ್ತು. ಅವನನ್ನು ಸಿಕ್ಕಹಾಗೆ ಬೈದು, ಜೊತೆಗೆ ತೊಯ್ಸಿಕೊಂಡಿದ್ದ ಮಲ್ಲಯ್ಯನನ್ನು ಹೊರ ದಬ್ಬಿ ಉಳಿದವರಿಗೆ “ಏನ್ರೊ ಹೀಗೆ ಬರಿಯೋದಾ?” ಅಂತ ಕ್ಲಾಸ್ ತೆಗೆದುಕೊಳ್ಳ ಹತ್ತಿದ್ರೂ..ಆಗಲೆ ದಪ್ಪ ಬೆತ್ತ ಟೇಬಲ್ ಮೇಲೆ ನಗುತಿತ್ತು.

“ಬೇಡ ಸಾರ್… ಇನ್ನೊಂದು ಚಾನ್ಸ್ ಕೊಡಿ. ನೀವು ಇಂಗ್ಲೀಷ್ನಲ್ಲಿ ಪಾಠ ಮಾಡೋದು ಖರೆ. ಆದರೆ ನಮಗೆ ಬೇಸಿಕ್ ವೀಕ್ ಇದೆರಿ. ಹಾಗಾಗಿ ಬೇಗ ಅರ್ಥಮಾಡಿಕೋಲ್ಳೊಕೆ ಸಾಧ್ಯವಾಗೊಲ್ಲರಿ. ಎಲ್ಲರ ಪರವಾಗಿ ವಿನಂತಿ ಮಾಡಿಕೋತಿನಿ. ಈ ಒಂದು ಸಾರಿ ಕ್ಷಮಿಸಿಬಿಡಿ ಸರ್” ಎಂದೆ
“ಏನೋ ನನಗ ಪಾಠ ಮಾಡಕ ಬರಲ್ಲ ಅಂತ ಹೇಳ್ತಿ ಏನೊ ಸಮು” ಎಂದು ಎದ್ದು ನಿಂತರು.

“ಇಲ್ಲ ಸಾರ್.. ನೀವು ಬರುವುದಕ್ಕಿಂತ ಮುಂಚೆ ಇಂಗ್ಲೀಷ್ ಶಿಕ್ಷಕರಿರಲಿಲ್ಲ. ಹಾಗಾಗಿ. ಸ್ವಲ್ಪ ತೊಂದರೆ ಆಗತಿದೆ” ಅನ್ನುತ್ತಿರುವಾಗಲೆ
“ಸ್ಟುಪಿಡ್ ಫೇಲೊ…ರ‍್ಯಾಸ್ಗಲ್.. ಶಾಲೆಯಲ್ಲಿ ದೊಡ್ಡ ಲೀಡರ್ ಆದೇನೊ..ಸೊಕ್ಕು ಬಂತೇನೊ ನೂರಕ್ಕ ನೂರು ತೊಂಗೊ೦ಡಿಯ೦ತ” ಎಂದು ಬೈಯುತ್ತಾ ನನ್ನತ್ರ ಬರತಿರಬೇಕಾದ್ರೆ… ‘ಅಮ್ಮ ಅಪ್ಪಾ’ ಎಂದು ಕಪಾಳಕ್ಕೆ ತಾವೆ ಹೊಡೆದುಕೊಳ್ಳ ತೊಡಗಿದರು..ಬೆನ್ನಿಗೆ ಸೊಂಟಕ್ಕೆ ಹೊಡೆದುಕೊಳ್ಳ ತೊಡಗಿದರು. “ಏನಾಯ್ತು ಸಾರ್” ಎಂದು ಹತ್ತಿರ ಓಡಿದೆ.

“ಏನಾಗುತ್ತೆ ಸಮು, ಸುಮ್ಮ ಸುಮ್ಮನೆ ಬರಿ ನಮಗೆಲ್ಲ ಹೊಡಿತಾ ಇದ್ರೆ ದೇವರು ನೋಡಿಕೊಂಡು ಸುಮ್ಮನಿರತಾನಾ.. ಏನೊ ತೊಂದರೆ ಕೊಡ್ತಾನೆ..ಮಕ್ಕಳು ದೇವರ ಅಂತಾರ, ದೇವರಂತ ನಮ್ಮನ್ನ ಹೊಡದ್ರೆ” ಎಂದು ಮೂಲೆನಿಂದ ಸೌಂಡ್ ಮಾಡಿದ ಭೀಮ.

ಹತ್ತಿರ ಬಂದು “ಏನಾಯ್ತು ಸರ್?” ಎಂದು ಕೇಳಿದಾಗ “ಏನಿಲ್ಲರೊ ಸೊಳ್ಳೆ ಕಡಿತಿವೆ..ಹೇಗೆ ಗಾದರಿ ಗಾದಿ ಎದ್ದಿವೆ ನೋಡಿ..ರೂಮ್‌ನ್ನ ಕ್ಲೀನಾಗಿ ಇಡೊಲ್ಲ…ನೀವು” ಎಂದು ಬೈಯುತ್ತಾ ಒಮ್ಮಿಂದೊಮ್ಮೆಲೆ ಚೇಂಜ್ ಆಗಿ “ನಾನೇನು ಕೆಟ್ಟವನೇನ್ರೋ? ನಿಮ್ಮ ಒಳ್ಳೆದಯಕ್ಕ ಹೇಳೊದಲ್ಲ…ನಾನೇನು ನಿಮ್ಮ ಶತ್ರುನಾ. ಇಂಗ್ಲೀಷ್ ಮುಂದಿನ ಭವಿಷ್ಯಕ್ಕೆ ಬೇಕು ಹಾಗಾಗಿ ಒತ್ತಾಯ ಮಾಡತೀನಿ. ನನಗೆ ಪಾಠ ಹೇಳಿದ್ರೂ ಪಗಾರ ಕೊಡತಾರೆ, ಪಾಠ ಹೇಳಲಿಕೂ ಬರುತ್ತದೆ. ಸರಿ ಬಿಡಿ. ನಿಮಗೆ ನನ್ನಿಂದ ನೋವಾಗತಿದೆ ಎಂದ ಮೇಲೆ, ನಾನೇ ಹಿಂದೆ ಸರಿದು ಪಾಠ ಮಾಡ್ತೀನಿ. ನಿಮ್ಮ ಭಾವನೆಗಳನ್ನ ನೋಡಿದ್ರ ಬಡಿಯೋದು ವೇಷ್ಟ ಅನಸ್ತದ. ಓ.ಕೆ ನೀವು ಇಂಗ್ಲೀಷ್ ಬಗ್ಗೆ ಅಷ್ಟು ಚಿಂತಿ ಮಾಡಬೇಡಿ..ಎಷ್ಟು ಸಾಧ್ಯ ಆಗುತ್ತದ ಅಷ್ಟಾದರೂ ಓದಿ. ‘ಭಯದಿಂದ ಕಲಿಬೇಡಿ ಪ್ರೀತಿಯಿಂದ ಕಲಿಯಿರಿ” ಎಂದು ಕುರ್ಚಿಯ ಮೇಲೆ ಕುಳಿತರು.

“ಭಯದಿಂದ ಕಲಿಬೇಡಿ ಪ್ರೀತಿಯಿಂದ ಕಲಿಯಿರಿ” ಎಂದು ಗುರುಗಳು ಸಾವಧಾನದಿಂದ ಮಾತಾಡಿದ್ದನ್ನು ನೋಡಿದ ಎಲ್ಲರಿಗೂ ಅಚ್ಚರಿ.. ಸರ್ ಒಮ್ಮೆಲೆ ಬದಲಾದದ್ದು. ಎಲ್ಲರಿಗೂ ಆದ ಖುಷಿ ಅಷ್ಟಿಷ್ಟಲ್ಲ.

“ಸ್ವಾರಿ ಸರ್, ನೀವು ಎಷ್ಟು ಒಳ್ಳೆಯವರು” ಎಂದು ಎಲ್ಲರೂ ಬಂದು ಅಂಟಿಕೊ೦ಡ್ರು…” ಭಯದ ವಾತಾವರಣ ಕಳೆದು ಪ್ರೀತಿಯ ವಾತಾವರಣ ಸೃಷ್ಟಿಯಾಗಿದ್ದು, ನನ್ನ ಗೆಳೆಯರು ಬದಲಾಗಿದ್ದು, ಸರ್ ಹೀಗಾಗಿದ್ದು ನನಗ ಇದೆಯಲ್ಲ ನಮ್ಮ ಫ್ರೆಂಡು ಮಹಿಮೆನಾ ಅಂತ ಅನುಮಾನನೂ ಬಂತು.
ಅಮೇಲೆ ಕೇಳಿದ್ರಾಯ್ತು ಅಂದಾಗಲೆ ಗಂಟಿ ಹೊಡೆದಿತ್ತು.
ಎಲ್ಲರೂ ಹೋದ ಮೇಲೆ “ಎಲ್ಲಿ ಫ್ರೆಂಡು?” ಅಂದೆ.
“ಇನ ಯುವರ್ ಬ್ಯಾಗ್” ಅಂತ ಅಣಿಕಿ ಹಾಕಿತು
“ಅಂತೂ ನೀನು ಎಲ್ಲ ಅರ್ಥಮಾಡಿಕೊಂಡು ಬಿಟ್ಟಿದ್ದಿಯಾ?”
“ಎಲ್ಲರೂ ನೋಡುತ್ತಿದ್ದಾರೆ, ನಡಿ ಮಾತಾಡತಾ ಸಾಗೋಣ. ಹಾಗೆ ಹೊರಟರೆ ಸಮುಗ ಏನಾಗಿದೆ ಹಿಂಗ ಮಾತಾಡತಾ ಇದ್ದಾನೆ” ಅಂತ ನಗೆ ಆಡಲ್ವಾ
“ಹೌದೌದು ಸರಿ ಸರಿ ನಡಿ” ಎಂದು ಹೊರಗೆ ಬಂದೆ. ಅಪ್ಪನ ಗಾಡಿ ಆಗಲೆ ಕಾಯುತ್ತಿತ್ತು.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

April 10, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: