ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ಚಮತ್ಕಾರ ನೋಡಿ ಚೆಪ್ಪಾಳೆ ಹಾಕಿದವು..

ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು.

ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ ಹಾಗೂ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ಹಲವು ಕತೆ,ಕವಿತೆಗಳನ್ನು ಬೆಂಗಳೂರಿನ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಪೂರಕ ಪಠ್ಯಗಳಾಗಿ ಬಳಸಿಕೊಂಡಿದೆ.

ಇದೆ ಅವಧಿಯಲ್ಲಿ ಪ್ರಸಾರವಾದ ‘ಸೊಳ್ಳೆ ಫ್ತೆಂಡು ಒಳ್ಳೆ ಫ್ರೆಂಡು’ ಕೃತಿಗೆ ಜಿ.ಬಿ ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ, ಕಲಬುರಗಿ ಯ ಕನ್ನಡ ನಾಡು ಓದುಗರ ಹಾಗೂ ಲೇಖಕರ ಸರಕಾರಿ ಸಂಘದ‌’ ಉತ್ತಮ‌ಕಾದಂಬರಿ ಪ್ರಶಸ್ತಿ ದೊರಕಿದೆ.

ಪೆಣ್ಣತ್ತ ಖುಷಿಗೆ ಕಸಾಪದ ಕುಂಭಾಸ ಹಾಸ್ಯ ಸಾಹಿತ್ಯ ದತ್ತಿ ಗೌರವ, ಚಾರ್ಲಿ ಚಾರ್ಲಿ ವೇರ್ ಆರ್ ಯೂ ಕೃತಿಗೆ ಜನಸಿರಿ ಸಾಹಿತ್ಯ ಪ್ರಶಸ್ತಿ ದೊರಕಿದೆ. ಹಲವು ಪತ್ರಿಕೆಗಳಲ್ಲಿ ಇವರ ಕತೆ, ಕವಿತೆ, ನಾಟಕ, ಪ್ರಬಂಧ, ಹಾಸ್ಯ ಬರೆಹಗಳು ಪ್ರಕಟವಾಗಿವೆ.

ಭಾಗ –8

ಬೆಳಿಗ್ಗೆ ಶಾಲೆಗೆ ಬ್ಯಾಗಿನ ಜೊತೆ ಪಟವನ್ನು ಹಿಡಿದು ಹೊರಟೆ.
“ಏ ನಿನಗೆಂತಹ ಹುಚ್ಚು. ಶಾಲೆಗೆ ಯಾರಾದರೂ ಪಟ ಒಯ್ಯತಾರಾ” ಎಂದರು ಅಪ್ಪ.
“ಲೋ . . . ನೀನು ಹೈಸ್ಕೂಲ್ ಹುಡುಗ ಅದಾದರೂ ಜ್ಞಾನವಿರಲಿ. ಸ್ಪರ್ಧೆಗೆ ಒಯ್ಯೋದು ಸಹಜ ಆದರೆ ಸಣ್ಣ ಮಕ್ಕಳ ಹಾಗೆ ಶಾಲೆಗೆ ಒಯ್ಯೋದಾ” ಎಂದು ಅಮ್ಮ ನಕ್ಕಳು.
“ಹೌದಲ್ಲ, ನಾನು ಹೈಸ್ಕೂಲ್ ಹುಡುಗ, ಯಾಕೆ ಇದನ್ನ ತೆಗೆದುಕೊಂಡೆ” ಎನ್ನುವ ಆಲೋಚನೆ ಬಂದರೂ ಮಿ.ಕೈಟ್‌ಗೆ ನಮ್ಮ ಶಾಲೆಯನ್ನು ತೋರಿಸಬೇಡವೇ ಎಂದುಕೊ೦ಡು ಅಪ್ಪ ಅಮ್ಮ ಬೈದರು ಕೇಳಲಿಲ್ಲ. ಇವತ್ತು ಒಂದು ದಿನ ಒಯ್ಯುವೆ ಎಂದು ಹಿಡಿದು ಹೊರಟೆ.
ಅದರ ಜೊತೆ ಆಡುತ್ತಾ ಮಾತನಾಡುತ್ತಾ ಹಾರಿಸುತ್ತಾ ಹೊರಟೆ. ಮಕ್ಕಳು, ನಾನು ಗಾಳಿಪಟದೊಂದಿಗೆ ಹಾರಿಸುತ್ತಿದ್ದು ನೋಡಿ ಖುಷಿ ಪಡುತ್ತಿದ್ದವು. ಆ ಮಕ್ಕಳಿಗೆ ವಿವಿಧ ಆಂಗಲ್‌ಗಳಲ್ಲಿ ಪಟವನ್ನು ಹಾರಿಸಿ, ಎ.ಬಿ.ಸಿ.ಡಿ ಆಕಾರದಲ್ಲಿ ಪಟವನ್ನು ಹಾರಿಸಿ ತೋರಿಸಿ ತೋರಿಸಿ ಖುಷಿಪಡಿಸಿದೆ. ಚಿಕ್ಕಮಕ್ಕಳೆಲ್ಲ ಆ ಚಮತ್ಕಾರ ನೋಡಿ ಚೆಪ್ಪಾಳೆ ಹಾಕಿದವು. ಅವುಗಳೆಲ್ಲಾ ನನ್ನ ಹಿಂದೆನೆ ಬೆನ್ನು ಹತ್ತಿದವು.

ಅಷ್ಟರಲ್ಲಿ ಶಾಲೆ ಬಂತು, ಭಯ ಸ್ಟಾರ್ಟ ಆಯ್ತು. “ಹೇಗೆ ಒಯ್ಯೋದು? ಏನು ಮಾಡೋದು? ಮಕ್ಕಳು ಬೇರೆ ಹೀದೆ ಹಿಮದೆ ಕಿಂದರ ಜೋಗಿಗೆ ಗಂಟು ಬಿದ್ದ ಹಾಗೆ ಬಿದ್ದವೆ. ಹೇಗೆ ತಪ್ಪಿಸಿಕೊಲ್ಳೊದು” ಅಂತ ಚಿಂತೆಯಲ್ಲಿದ್ದೆ. “ಸಾಹೇಬ್ರು ಏನೋ ಚೇರ್ ಹಾಕಿ ಕುಡುಸ್ತಿನಂದಿದ್ರು” ಎಂದಿತು.
“ನೀನೇ ಹೇಳಿದೆಲ್ಲ, ಇಮೇಜ್ ಅದು ಇದು ಅಂತ”
“ನಾನೇನು ಮಾಡಲಿ ಗುರವೇ ಈಗ”
“ನನ್ನ ಕಾರ್ಯಕ್ರಮ ನೋಡಬೇಕು”
“ಅದೇ ಹೇಗೆ?”
“ಎಲ್ಲಾ ಬಲ್ಲವರಿಗೆ ನಾನು ಹೇಳಿಕೊಡಬೇಕಾ?” ಎಂದೆ.
“ಆಯ್ತಪ್ಪ, ಆಜ್ಞೆ ಮಾಡಿರುವೆ, ನಿನ್ನ ಕಾರ್ಯಕ್ರಮ ನೋಡುವೆ. ಡೋಂಟವರಿ, ಈ ಮಕ್ಕಳು ಬೇರೆ ಗಂಟು ಬಿದ್ದಿದ್ದಾರೆ, ಆ ಸಂಧಿಯಲ್ಲಿ ಹೋಗಿ ಕೈ ಬಿಡು ಎಂದಿತು” ಎಂದಿತು. ನಾನು ಹಾಗೆ ಮಾಡಿದೆ.

ಮಕ್ಕಳು ಸಂಧಿಯಲ್ಲಿ ಹೋಗೆ ಗಾಳಿಪಟ ಇಲ್ಲದೆ ಬಂದುದನ್ನು ನೋಡಿ ‘ಅಣ್ಣಾ ಅಣ್ಣಾ ಗಾಳಿಪಟ ಎಲ್ಲಿ ಹೋಯ್ತು’ ಎಂದವು.
“ನಾನು ಅವರಿಂದ ತಪ್ಪಿಸಿಕೊಳ್ಳಲು ಮೇಲೆ” ಎಂದು ತೋರಿಸಿದೆ. ನೋಡಿದ್ರೆ ಪಟ ಮೇಲೆ ಹಾರುತ್ತಿತ್ತು. “ಎಲಾ ಮಿ.ರೆಡ್‌ಕೈಟ?’ ಎಂದುಕೊ೦ಡು ಆ ಮಕ್ಕಳಿಂದ ತಪ್ಪಿಸಿಕೊಂಡು ನಾನು ಶಾಲೆಯ ಒಳಹೊಕ್ಕೆ.ಸ್ವಲ್ಪ ಹೊತ್ತಿನಲ್ಲಿ ಪ್ರೇಯರ್ ಗಂಟೆ ಬಾರಿಸಿತು. ಎಲ್ಲರೂ ಸಾಲಾಗಿ ನಿಂತೆವೂ. ಪ್ರೇಯರ್ ಸ್ಟಾರ್ಟ ಮಾಡಿದ ಮೇಲು ಗುಜುಗುಜು ಸದ್ದು ಎಲ್ಲರೂ ನೋಡುತ್ತಿದ್ದರು. ಆ ಕಡೆ ನೋಡುತ್ತಿದ್ದರು. ನಾನು ಮೇಲೆ ನೋಡಿದೆ. ಮಿ.ಕೈಟ್ ವಯ್ಯಾರದಿಂದ ಹಾರುತಿತ್ತು. ‘ಪಟ ಪಟ’ ಎಂದು ಸಣ್ಣಮಕ್ಕಳು ಕೂಗತೊಡಗಿದರು. “ಎಲ್ಲಿ ಎಲ್ಲಿ?” ಎಂದರು ಪಿ.ಟಿ ಸರ್. ಮಕ್ಕಳು ಮೇಲೆ ತೋರಿಸಿದರು. “ನಾನ್‌ಸೆನ್ಸ್, ಶಾಲೆಗೆ ಬರದೆ ಗಾಳಿಪಟವಾಡಿಸುತ್ತಿದ್ದಾರೆ, ಮೊದಲು ಪೆರೆಂಟ್ಸ್ಗೆ ಬುದ್ಧಿ ಇಲ್ಲ” ಎಂದು ಬೈದು “ನೋಡಿಕೊಂಡು ರ‍್ರೊ. ಯಾರು ಆಡಿಸೋರು, ನಮ್ಮ ಶಾಲಿ ಹುಡುಗುರಾದ್ರ ದರದರ ಎಳೆದುಕೊಂಡು ಬನ್ನಿ, ಮಾಡ್ತಿನಿ ಅವರಿಗೆ” ಎಂದು ಇಬ್ಬರು ಮಕ್ಕಳಿಗೆ ಹೇಳಿದರು. ನನಗೆ ಭಯವಾಗು ಕೈಟನ್ನು ನೆನಸಿಕೊಂಡೆ, ಕ್ಷಣಾರ್ಧದಲ್ಲಿ ಮರೆಯಾಯಿತು. ಹೋಗುತ್ತಿದ್ದ ಮಕ್ಕಳನ್ನು “ಹೋಯ್ತು ರ‍್ರಿ” ಎಂದು ಕರೆದರು. ಪ್ರೇಯರ್ ಮುಗಿಯಿತು. ತರಗತಿಗೆ ನಾವೆಲ್ಲಾ ಹೋದೆವು.

ಒಂದು ಪಿರೀಡ್ ನಂತರ ಅವಾರ್ಡ ನೀಡುವ ಕಾರ್ಯಕ್ರಮ ನಡೆಯಿತು. ಪ್ರಾರ್ಥನೆ, ಸ್ವಾಗತ ನಂತರ ಉದ್ಘಾಟನೆ ಕಾರ್ಯನಡೆಯಿತು.. ನಂತರದ ಪ್ರಾಸ್ತವಿಕ ಮಾತುಗಳಲ್ಲಿ, ಅತಿಥಿಗಳ ಮಾತುಗಳಲ್ಲಿ ನನ್ನ ಗುಣಗಾನ. ಗಾಳಿಪಟದಲ್ಲಿ ಗೆದ್ದಿದ್ದು, ಕ್ರಿಕೆಟ್‌ಲ್ಲಿ ಸಾಧನೆ ಮಾಡಿದ್ದು, ದಶಕಗಳಿಂದ ಸಿಗದ ಕಪ್ ನ್ನು, ಮೊದಲ ಬಾರಿ ನಾಯಕತ್ವದಲ್ಲಿ ಪಡೆದ ನನ್ನ ಯಶಸ್ಸನ್ನು ಹೇಳಿ ಹಾಡಿ ಹೊಗಳಿದ್ದೆ ಹೊಗಳಿದ್ದ. ಹುಡುಗಿಯರೆಲ್ಲ ಸಿಕ್ಕಾಪಟ್ಟೆ ಚೆಪ್ಪಾಳೆ ಹಾಕುತ್ತಿದ್ದರು. ಅದು ರಾಮು ಹಾಗೂ ರಾಕೇಶನಿಗೆ ಇರಿಸುಮುರಿಸು ಮಾಡುತ್ತಿತ್ತು. ನನ್ನ ತಂಡವನ್ನು ಕರೆದು ಪಾರಿತೋಷಕ ನೀಡಿದ ನಂತರ ನನಗೆ ವಿಶೇಷ ಸನ್ಮಾನಕ್ಕೆ ಕರೆದರು. ನಾನು ವೇದಿಕೆಗೆ ಬರುತ್ತಿದ್ದಂತೆ ಚಪ್ಪಾಳೆಗಳ ಸುರಿಮಳೆ ನಡೆದವು. ನಾನು ಇದಕ್ಕೆ ಕಾರಣನಾದ ಮಿ.ಕೈಟ್ ನ್ನು ನೆನಸಿಕೊಂಡೆ. ಅದು ನನ್ನ ಸನ್ಮಾನ ಮಾಡುವಾಗ ನೇರಕ್ಕೆ ಹಾರುತ್ತಾ ಬಂದು ಸ್ಟೈಲ್ ಕೊಟ್ಟಿತು. ನಾನು ಭಾವುಕನಾದೆ. ಸಣ್ಣಮಕ್ಕಳು “ಅಯ್ಯಿ, ಕೈಟ್ ಶಾಲೆಗೆ ಬಂದಿದೆ, ಕೈಟ್ ಶಾಲೆಗೆ ಬಂದಿದೆ” ಎಂದು ಕೂಗತೊಡಗಿದವು. “ನೋಡಿ ಕಲೀರಿ, ಶಾಲೆ ಕಲಿಯಲು ಇಷ್ಟುದಿನ ನಾಯಿ, ಬೆಕ್ಕು ಬರುತ್ತಿದ್ದವು, ಈಗ ಕೈಟ್ ಕೂಡಾ ಬಂದಿದೆ. ಅವುಗಳಿಗೆ ಇರುವ ಇಂಟರೆಸ್ಟ್ ನಿಮಗಿಲ್ಲ ನೋಡಿ” ಎಂದು ಬೈದು “ಲೇ ನೋಡ್ರೋ ಯಾರು ಅವ ಗಾಳಿಪಟ ಹಾರಸ್ತಿರೋದು, ನೋಡ್ರಿ, ದಾರ ಕಟ್ ಮಾಡಿ, ಸಿಕ್ರ ಅವನನ್ನು ಹಿಡುಕೊಂಡು ಬರದೆ” ಎಂದು ಪಿ.ಟಿ ಸರ್ ಆದೇಶ ಮಾಡಿದ್ರು. ಶಾಲೆಗೆ ಬರದವರನ್ನು ಗಲಾಟೆ ಮಾಡುವವರನ್ನು ಹಿಡಿದುಕೊಂಡು ಬರಲು ಹೋಗುತ್ತಿದ್ದ ಭೀಮ, ಗಿರೀಶ ಮೊದಲು ಓಡಿಹೋದರು. ನಾನು ಮನದಲ್ಲಿ ಮರೆಯಾಗು ಎಂದು ಗಾಳಿಪಟಕ್ಕೆ ಕೇಳಿಕೊಂಡೆ. ಅದು ಮಕ್ಕಳನ್ನೆಲ್ಲ ರಂಜಿಸಿ ಲಾಗ ಹಾಕುತ್ತಾ ಮೇಲೆ ಹೋಗಿ ಮರೆಯಾಯಿತು. ಕೆಲಕ್ಷಣ ಗಾಳಿಪಟದಿಂದಾಗಿ ಗೊಂದಲ ಶುರವಾಗಿತ್ತು. ದು ಮರೆಯಾದ ಮೇಲೆ ನಂತರ ನನ್ನನ್ನು ಮಾತನಾಡಲು ಆಹ್ವಾನಿಸಿದರು. ನಾನು “ನಮ್ಮ ತಂಡ ಗೆದ್ದಿದ್ದು ಟೀಮ್ ವರ್ಕನಿಂದಾಗಿ, ರಾಮು, ರಾಕೇಶನ ಮಾರ್ಗದರ್ಶನದಿಂದಾಗಿ, ಪಿ.ಟಿ ಸರ್ ಅವರು ಇಟ್ಟಿದ್ದ ವಿಶ್ವಾಸದಿಂದಾಗಿ” ಎಂದು ಹೇಳಿದೆ. ಎಲ್ಲರೂ ಖುಷಿಯಾದರೂ ಒಮ್ಮೆಲೆ ಶೈನ್ ಆದ ಇವನ ಹಿಂದಿನ ಶಕ್ತಿ ಬಗ್ಗೆ ರಾಮು, ರಾಕೇಶ ಯೋಚಿಸ ತೊಡಗಿದರು.

ಕಾರ್ಯಕ್ರಮ ಮುಗಿದ ಮೇಲೆ ‘ರೀಟಾ’ ನನ್ನ ಹತ್ತಿರ ಬಂದು ‘ಎಕ್ಸೆಲೆಂಟ್ ಕಿಪ್ ಇಟ್ ಅಪ್’ ಎಂದಳು. ನಾನು ಸ್ಟನ್ ಆದೆ. ನಾನು ಹಿಂದಿನ ದಿನ ಕೈಟ್‌ಗೆ ಹೇಳಿದ ಹುಡುಗಿಯೇ ಆಗಿದ್ದಳು. ಎಂದೂ ಕೂಡಾ ಯಾವ ಹುಡುಗಿ ಮಾತಾಡಿಸುವದೇನು ಬಂತು ಕಣ್ಣೆತ್ತಿಯೂ ಸಹ ನೋಡಿರಲಿಲ್ಲ. ಆದರೆ ರೀಟಾ ನಮ್ಮ ಶಾಲೆಗೆ ದಾಳಲಾದ ಮೇಲೆ, ಮೊದಲ ನೋಟದಲ್ಲೆ ಆಕರ್ಷಿಸಿದ್ದಳು. ಹಾಗಾಗಿ ನನಗೆ ಅವಳು ಮೆಚ್ಚುವ ಹಾಗೆ ನಡೆದುಕೊಳ್ಳಬೇಕು ಎಂದು ಬಯಸಿದ್ದೆ. ಕ್ರಿಕೆಟ್ ಗೆದ್ದ ಮೇಲಾದರೂ ನನ್ನ ಸಾಧನೆಯಿಂದ ಇಂಪ್ರೆಸ್ ಮಾಡಬಹುದು ಎಂದುಕೊ೦ಡಿದ್ದೆ. ಎಂದು ಪ್ರೇಯರ್ ಸಾಂಗ್ ಹಾಡದವಳು ಇಂದು ಹಾಡಿದ್ದು ಅಚ್ಚರಿ ತಂದಿತ್ತು. ರೀಟಾ ‘ಯಾವ ಮೋಹನ ಮುರುಳಿ ಕರೆಯಿತು’ ಹಾಡು ಹಾಡುತ್ತಿದ್ದಾಗ ಕೇಳುತ್ತಾ ನನ್ನದೇ ಲೋಕದಲ್ಲಿ ತೇಲಿದ್ದೆ. ಏನಾದರೂ ಅಂದುಕೊಳ್ಳಲಿ ನಾನು ಇವತ್ತು ಮಾತಾಡಿಸಿ ‘ಬಹಳ ಚೆನ್ನಾಗಿ ಹಾಡಿದಿರಿ’ ಎಂದು ಹೇಳಬೇಕೆಂದು ನಿರ್ಧಾರವನ್ನು ಮಾಡಿದ್ದೆ. ಆ ಹಾಡು ಹಾಡಿದ್ದು, ಈಗ ಮಾತನಾಡಿಸಿದ್ದು ಎಲ್ಲಾ ಕಾಕತಾಳಿಯವೆನಿಸಿ ಗಾಳಿಪಟ ಸ್ಪರ್ಧೆ, ಕ್ರಿಕೆಟ್ ಗೆದ್ದುದಕ್ಕಿಂತಲೂ ಹೆಚ್ಚು ಖುಷಿಕೊಟ್ಟಿತು. ದಿಢೀರನೇ ರೀಟಾ ಬಂದು ಹೀಗೆ ಹೇಳಿದಾಗ ನಂಬಲಾಗಲಿಲ್ಲ. ಇದು ಕನಸಾ ಎಂದು ಆಕೆಗೆ ಕಾಣದೆ ಚಿವಟಿಕೊಂಡು ವಾಸ್ತವ ಎಂದು ಖಾತ್ರಿಪಡೆಸಿಕೊಂಡೆ. ಸಿಕ್ಕಿರುವ ಚಾನ್ಸ್ ಬಿಡಬಾರದೆಂದು ಎಂದು “ನೀವು ಬಹಳ ಸೊಗಸಾಗಿ ಹಾಡಿದಿರಿ, ಅದ್ಭುತ ಕಂಠರಿ” ಎಂದೆ. “ಹೋ . . . ಹೌದಾ? ತ್ಯಾಂಕ್ಯೂ ದಿನು . . ” ಎಂದು ನಗೆಚೆಲ್ಲಿ ಹೋದಳು. ಇದು ಕೈಟ್‌ನ ಕಿತಾಪತಿನಾ ಎನ್ನುವ ಅನುಮಾನ ಬಂದಿತು. ರೀಟಾ ‘ತ್ಯಾಂಕ್ಯೂ ದಿನು . . .” ಎಂದು ಹಾಗೆ ಹೇಳಿ ಹೋದ ಮೇಲೆ ನಾನು ನಾನಗಲಿಲ್ಲ. ರಫಿಯೂ ಬಂದು “ಏನು ದಿನೂ , , , ಇರಲಿ ಇರಲಿ” ಎಂದು ಏನೇನೋ ಹೇಳಿ ಆಸೆ ಹುಟ್ಟಿಸಿದ ಮೇಲಂತೂ ನನ್ನ ಹೆಜ್ಜೆಯನ್ನೆ ಮುಂದೆ ಕಿತ್ತಲಾಗಲಿಲ್ಲ. ಸನ್ಮಾನದ ಸಂಭ್ರಮಕ್ಕಿ೦ತಲೂ ಮಾತಾಡಿಸಿದ ಸಂಭ್ರಮ ಮೇಲಾಗಿ ಕಂಡಿತು. ಮಧ್ಯಾಹ್ನದ ತರಗತಿಯಲ್ಲಿ ಮೇಷ್ಟ್ರು ಪಾಠ ಮಾಡುವಾಗಲೂ ಮನಸ್ಸು ಎತ್ತಲೋ ಓಡಾಡುತ್ತಿತ್ತು. ತರಗತಿಯಲ್ಲಿ ಮನಸ್ಸು ಅವಳನ್ನೆ ನೋಡಲು ತಡವರಿಸುತ್ತಿತ್ತು. ನಾನು ಯಾರಿಗೂ ಕಾಣದಂತೆ ಅತ್ತ ನೋಡುವ ಪ್ರಯತ್ನ ಮಾಡುತ್ತಿದ್ದೆ. ಆದರೆ ಅವಳು ಮಾತ್ರ ನನ್ನನ್ನು ನೋಡಲಿಲ್ಲ.

ಶಾಲೆಯ ಗಂಟೆ ಹೊಡೆಯಿತು. ಎಲ್ಲರೂ ಹೊರಟರು. ನಾನು ರೀಟಾಳನ್ನು ಮತ್ತೆ ಮಾತನಾಡಿಸಬೆಕೆಂದು ಬಯಸಿದೆ, ಹಿಂಬಾಲಿಸಿದೆ. ತಿರುಗಿ ನೊಡುತ್ತಾಳೆ ಎಂದು ಭಾವಿಸಿದೆ. ಅಷ್ಟರಲ್ಲಿ ಅವರಪ್ಪ ಅವಳನ್ನು ಕರೆದುಕೊಂಡು ಹೋದರು. ನಾನು ನಿರಾಶೆಯಿಂದ ಹೊರಟೆ. ರಫಿಯ ಜೊತೆ ಒಂದಿಬ್ಬರು ಗೆಳೆಯರು ಜೊತೆಯಾದರು. “ಏನಮ್ಮಾ ಪಾಟಿ ಆಗಬೇಕಮ್ಮ? ಎಂತಹ ಲಕ್ಕಿಯಮ್ಮ” ಎಂದು ಮತ್ತಷ್ಟು ಉಬ್ಬಿಸಿದರು. ಶಾಲೆಯ ಪಕ್ಕದಲ್ಲಿದ್ದ ಬೇಕರಿಗೆ ಕರೆದೊಯ್ಯದು ಅದು ಇದು ತಿಂದರು. ನನಗೂ ಒತ್ತಾಯ ಮಾಡಿ ತಿನ್ನಿಸಿದರು. ಗೆಳೆಯರು ನನ್ನನ್ನು ಕಂದಕದಲ್ಲಿ ತಳ್ಳಲು ಹೇಳುತ್ತಿದ್ದ ಮಾತುಗಳು ಖುಷಿಕೊಡುತ್ತಿದ್ದವು. ಹಾಗಾಗಿ ಅವರಿಂದ ಅಂತಹ ಮಾತುಗಳನ್ನು ನಿರೀಕ್ಷಿಸುತ್ತಿದ್ದೆ. ಅವರು ಹೇಳುತ್ತಾ ನಡೆದರು. ನಾನು ನನ್ನ ಲೋಕದಲ್ಲಿ ತೇಲುತ್ತಾ ನಡೆದೆ. ಅವರೆಲ್ಲರೂ ತಮ್ಮ ಮನೆಯ ಕಡೆ ಹೊದ ಮೇಲೆ ನನ್ನ ಮನೆಯತ್ತ ನಡೆದೆ. ಆದರೆ ಮಿ.ಕೈಟನ್ನು ಮರೆತೆ. ಬೆಳಿಗ್ಗೆಯಿಂದ ರಿಟಾ ಹೇಳಿದ ಮಾತುಗಳು ಕಾಡುತ್ತಿದ್ದವು. ‘ವಾಟ್ ಎ ಸ್ವೀಟ್ ವಾಯ್ಸ್, ಕಿಪ್ ಇಟ್ ಅಪ್, ಕೀಪ್ ಇಟ್ ಅಪ್, ಕಿಪ್ ಇಟ್ ಅಪ್’ ಆ ಧ್ವನಿ ಮತ್ತೆ ಮತ್ತೆ ರಿಂಗಣಿಸುತ್ತಿತ್ತು. ಮನೆಯನ್ನು ಮುಟ್ಟಿದ ಮೇಲೆ ಕೈಟ್ ನೆನಪು ಬಂದದ್ದು. ‘ಅಯ್ಯೋ. ಮರೆತುಬಿಟ್ಟಿರುವೆ ಮಿ.ರೆಡ್ ಕೈಟನ್ನು’ ಎಂದು ಓಡಲು ಅನುವಾದೆ.
“ಅಷ್ಟು ತೊಂದರೆ ತೊಗಬ್ಯಾಡಪ್ಪ, ನಾನು ಹಿಂದನ ಬಂದಿನಿ”

“ಸ್ವಾರಿ ಕೈಟ್ . . . ಯಾವುದೋ ಮೂಡಲ್ಲಿ ಹಾಗೆ ಬಂದೆ”
“ಹೌದಪ, ನಿನ್ನ ಸ್ಥಿತಿ ನೋಡಿ ಮರುಕ ಆಗಲಿಕತ್ಯಾದ, ನಿನ್ನೆ ಹೇಳಿದ್ದು, ಉಪದೇಶ ಹೊಳೆಯಲ್ಲಿ ಹುಣಸೆ ಹಣ್ಣು ತೊಳದ ಹಾಗಾಗಲಿಕ್ಕೆ ಹತ್ಯಾದ” ಎಂದಿತು ಹಿಂದಿನಿ೦ದ ಬಂದು.
“ಹಾಂಗ್ಯಾಕ ಅಂತಿಯಾ?”
“ಏನನ್ನಬೇಕು, ನಿನ್ನ ಬಿಟ್ಟು ಒಂದು ಅರಘಳಿಗೆ ಇರೋದಿಲ್ಲ ಅನ್ನತ್ತಿದ್ದವ, ಇವತ್ತು ಮರೆತ ಬಂದಿ, ಚಿತ್ತ ಕೆಟ್ಟದ ಅಷ್ಟ”
“ಇಲ್ಲ ಕೆಟ್ಟಿಲ್ಲ, ಯಾವುದೊ ಮೂಡಲ್ಲಿ ಇದ್ದೆ, ಮರೆತು ಬಂದೆ ಎಂದು ಹೇಳಿದೆನಲ್ಲ”
“ತಲೆಯಲ್ಲಿ ಈ ವಯಸ್ಸಿನ ಹುಳಾ ಬಿಟ್ಟುಕೊಂಡ್ರ ಹಿಂಗ ಆಗೋದು”
“ನಾನೇನು ಬಿಟ್ಟುಕೊಂಡಿದ್ದಲ್ಲ, ಆಕೆಯ ಬಂದು ಮಾತಾಡಿಸಿದಳು”
“ಬಂದು ಮಾತಾಡಿಸದಳಲ್ಲ, ಅಷ್ಟೆ ಅಲ್ಲೆ ಬಿಡಬೇಕು, ಆ ಮಾತನ್ನು ಕ್ಲಾಸಿನ್ಯಾಗ, ಶಾಲೆ ಬಿಟ್ಟ ಮೇಲೂ,… ಈಗಲೂ ಇಟ್ಟುಕೊಂಡಿರೋದಾ? ಆ ಹುಡುಗಿ ನಿನ್ನ ಹಾಗೆ ಇಟ್ಟುಕೊಂಡಾಳೇನು? ನಿನ್ನ ಬೆಳವಣಿಗೆ ನೊಡಿ ಖುಷಿ ಆಗಿದೆ, ಅಪ್ರೆಸಿಯೇಶನ್ ಕೊಟ್ಟಿದ್ದಾಗಲೆ, ಹಾಗಿದ್ದರೆ ಆಕೆ ನಿನ್ನ ಹಾಗೆ ಆಗಬೇಕಿತ್ತಿಲ್ಲೊ?”
“ಆದರೂ . . .”
“ಆದರೂ ಇಲ್ಲ ಗಿದರೂ ಇಲ್ಲ”
“ನಿಜ ಹೇಳು, ಆಕೆ ಮಾತಾಡುವಂತೆ ಮಾಡಿದ್ದು ನೀನು ತಾನೆ”
“ವಿದ್ಯಾರ್ಥಿ ಬದುಕಿನಲ್ಲಿ ವಿದ್ಯಾರ್ಥಿಯಾಗಿ ಭವಿಷ್ಯ ಕಟ್ಟಕೊಳ್ಳಬೇಕು ಎಂದು ಉಪದೇಶ ಮಾಡಿದವನು ನಾನು. ಇದನ್ನು ಬೆಂಬಲಿಸುತ್ತೀನಾ?”
“ಹೌದೌದು, ನೀನು ನಮ್ಮ ಹಾಗೆ ಮನುಷ್ಯನಾಗಬೇಕಿತ್ತು, ಆವಾಗ ಮನಸ್ಸಿನಂದು ಗೊತ್ತಾಗತ್ತಿತ್ತು.”
“ಹೌದಪ ಶ್ಯಾಣ್ಯಾ . . . ಆಯ್ತು ಈಗ ನಿನ್ನ ದಾರಿಗೆ ಬರತೀನಿ, ನಿನಗ ಸಪೋರ್ಟ ಕೊಡ್ತಿನಿ ಮುಂದುವರತಿಯಾ?”
“ದೋಸ್ತ ನೀನು ಹೇಳೊ ಮಾತಾ?”
“ಹೌದು, ನಾನಾ ಹೇಳೊದು”
“ತ್ಯಾಂಕ್ಯೂ ದೊಸ್ತ. ಹಾಗಾದರೆ ನನ್ನ ಕಡೆ ಅವಳನ್ನು ಇಂಪ್ರೆಸ್ ಮಾಡುವ ಹಾಗೆ ಮಾಡುತ್ತಿಯಾ?”
“ಆಯ್ತು ಮಾಡುತ್ತೇನೆ”
“ಹೋ . . . ತ್ಯಾಂಕ್ಯೂ ತ್ಯಾಂಕ್ಯೂ ತ್ಯಾಂಕ್ಯೂ ದೋಸ್ತ. ಮೈ ಲವ್ಲಿ ರೆಡ್‌ಕೈಟ್”
“ಹಾಹಾಹಾ! ಎಷ್ಟು ನುಲಿತಿಯಪ್ಪ, ಮುಂದ ಏನು ಮಾಡಬೇಕು ಹೇಳು?”
“ಅವಳ ಕೂಡಾ ಸುತ್ತಾಡುವ ಹಾಗೆ ಮಾಡಸ್ತಿಯಾ?”
“ಎಸ್..”
“ಎಂತಹ ಕೆಟ್ಟ ಒಳ್ಳೆಯವನೋ ನೀನು!”
“ಹಾಂ . . . ನಾನು ಒಳ್ಳೆಯವವನ”
“ಅಲ್ಲ, ಫೊನ್ ನಲ್ಲಿ . . .”
“ಎಸ್. . . ಅದನ್ನೂ”
ನಾನು ಮುಂದುವರೆದು “ಫಿಲ್ಮ್ನಲ್ಲಿ . . . ಮಾಡುತ್ತಾರಲ್ಲ ಹಾಗೆ ಮಾಡಬಹುದಾ?
“ಎಲ್ಲಾನೂ ಮಾಡಸ್ತೀನಿ ಮಾತಾಡಿಸೋದು, ಸುತ್ತಾಡಿಸೋದು”
“ಲವ್ ಯೂ ದೋಸ್ತ”
“ಹೌದೌದು, ಇರಲಿರಲಿ, ನಿಮ್ಮ ದೋಸ್ತರು ಈಗ ಉಬ್ಬಿಸಿ ಉಬ್ಬಿಸಿ ಎರಡು ನೂರು ರುಪಾಯಿ ಟೋಪಿ ಹಾಕಿ ಹೋದ್ರು. ನಿಮ್ಮ ಮನುಷ್ಯರ ಹಣೆಬರಹನ ಇಷ್ಟು. ನೀವು ಹಾಳಾಗೋದು ಹೊಗಳುವವರ ಹೊಗಳಿಕೆ ಮಾತು ಕೇಳಿ”
“ನೀನು ಅಂತಹ ಕೆಟಗೇರಿಯವನಲ್ಲ ನೋಡು”
“ಅಲ್ಲ, ಆದರೆ ಹಿಡಿದ ಕೆಲಸ ಬಿಡುವವನು ಅಲ್ಲ ಅನ್ನೊದು ನಿನಗ ಗೊತ್ತಿರಲಿ”
“ಅಂದ್ರೆ” ಎಂದೆ.
“ನಿನ್ನ ಮನಸಿನಂತೆ ಎಲ್ಲಾ ಮಾಡಸ್ತಿನಿ, ನನ್ನ ಮನಸ್ಸಿನಂತೆನೂ”
“ಅಷ್ಟ ಮಾಡು ಫ್ರೆಂಡು”
“ಇಷ್ಟ ಅಲ್ಲ ನಿಮ್ಮಬ್ಬರ ಮದುವೆನೂ ಮಾಡಸ್ತಿನಿ”
ಮದುವೆ ಅಂದ ಕೂಡಲೇ “ಹಾಂ . . . ! ಮದುವೆನಾ.. ಈ ವಯಸ್ಸಿನಲ್ಲಿ?”ಎಂದೆ.
“ಏನು ಮಾಡಬೇಕು ಅಂತ ಮಾಡಿದ್ದೀ, ನಾನು ಮದುವೆ ಮಾಡಿಸುವವನಾ?”
“ಅಲ್ಲ ಓದೆ ಮುಗಿದಿಲ್ಲ, ಉದ್ಯೋಗ ಎಲ್ಲೆದ, ನೋಡಿದವರು ಏನಂತಾರಾ?
“ಏನ೦ತರಾ?”
“ನಗುತ್ತಾರಾ”
“ಹಿ೦ಗ ಮಾತಾಡೋದು ಸುತ್ತಾಡೋದು ನೋಡಿದ್ರ ನಗುವುದಿಲ್ಲನೂ” ಎಂದೆ
“ಅಲ್ಲ”
“ಅಲ್ಲನೂ ಇಲ್ಲ ಬೆಲ್ಲನೂ ಇಲ್ಲ”
“ನಾನು ಹೇಳುವುದಾದರೂ ಕೇಳು”
“ನೀನೇ ಹೇಳಿಬಿಡು”
“ಅಲ್ಲ ಅದೂ… ಮದುವೆ-ಗಿದುವೆ ಅಂದ್ರ’
“ಈ ಪ್ರೀತಿ ಪ್ರೇಮ ಎಲ್ಲಾ ಮುಗಿದ ಮೇಲೆ ಅದಕ್ಕ ಬರಬೇಕಲ್ಲಪಾ?”
“ಆದರ . . . ”
“ಈ ವಯಸ್ಸಿನ ಗುಣನ ಇದು, ಆಗಿನ ಪೂರ್ತಿ ತಲೆ ಓಡೊದು. ಯಾರಾದರೂ ಏನಾದ್ರೂ ಅಂದರೆ ಮೈಂಡ್ ಬ್ಲಾಕ್, ಅಪಸೆಟ್ ಆಗೋದು, ಆಸಕ್ತಿ ಹೀನರಾಗಿಬಿಡೋದು,”
“ಅಂದ್ರ ನಾವು ಮಾಡೋದೆಲ್ಲ ತಪ್ಪನೂ”
“ನಿಮ್ಮ ತಪ್ಪಲ್ಲ, ನಿಮ್ಮ ವಯಸ್ಸಿನ ತಪ್ಪು. ನಿಮ್ಮ ದೇಹದ ಹಾರ್ಮೋನಗಳಲ್ಲಾಗುವ ಬದಲಾವಣೆ ತಪ್ಪು. ಸೈನ್ಸ್ ಮೇಷ್ಟ್ರುಗಳಿಗೆ ಸಮಸ್ಯೆ ಬರೊದೆ ಸಂತಾನೋತ್ಪತ್ತಿ ಪಾಠ ಮಾಡುವಾಗ. ಅವರು ಆತಂಕದಿ೦ದನ ಹೇಳುತ್ತಿರುತ್ತಾರ. ‘ಇದು ಪ್ರೌಢಕ್ಕೆ ಬಂದಾಗ ಗಂಡುಮಕ್ಕಳಲ್ಲಿ, ಹೆಣ್ಣುಮಕ್ಕಳಲ್ಲಿ ಆಗುವ ದೈಹಿಕ ಬದಲಾವಣೆ, ಅದು ಭವಿಷ್ಯಕ್ಕೆ ಎಷ್ಟು ಪೂರಕ. ಅದರ ಬಗ್ಗೆ ಎಚ್ಚರ ಇರಬೇಕು’ ಅಂತ. ಆದರೇ ನೀವು ಯೋಚನೆ ಮಾಡೋದೆ ಬೇರೆ. ಮನೆಯಲ್ಲಿ ಹೋಗಿ ಕದ್ದು ಮುಚ್ಚಿ ಆ ವಿಷಯವನ್ನೆ ಓದೋದು, ಅದರ ಚಿತ್ರನ ನೋಡೊದು. ಅಂತಹ ಸಾಹಿತ್ಯ, ವಿಡಿಯೋ ಓದಿ, ನೋಡಿ ಏನೋ ಸಮಾಧಾನ ಪಟ್ಟುಕೊಳ್ಳೊದು. ಅದನ್ನು ಪ್ರಾಕ್ಟಿಕಲ್ ಸಾಧ್ಯನಾ ಎಂದು ಕೆಟ್ಟದಾಗಿ ಆಲೋಚಿಸೋದು. ನಿಜವಾಗಿ ವಿಷಯವನ್ನ ಅರ್ಥೈಸಿಕೊಂಡರೆ ಅರಾಮಾಗಿಯೇ ಇರುತ್ತೀರಿ. ನಿಮಗಿರೋದು ದೊಡ್ಡ ಕೊರತೆ ದೇಹದ ಬದಲಾವಣೆಯನ್ನ ಗಂಭೀರವಾಗಿ ತೆಗೆದುಕೊಳ್ಳೊದೆ ಇರೋದು. ಈ ವಯಸ್ಸಿನಲ್ಲಿ ಅನ್ಯ ಚಟುವಟಿಕೆಗಳ ಬಗ್ಗೆ ಆಸಕ್ತಿ ವಹಿಸಿ ಮನಸ್ಸನ್ನು ಕ್ರಿಯಾಶೀಲಗೊಳಿಸಬೇಕು. ಈಗಂತೂ ನಿಮ್ಮ ಕೈಯಲ್ಲಿ ಮೊಬೈಲು, ನೋಡೋಕೆ ಟಿ.ವಿ. ನಿಮ್ಮನ್ನು ಹಿಡಿಯುವವರೆ ಇಲ್ಲ. ಮೊದಲು ಪಾಲಕರು ಅದರಿಂದ ದೂರವಾದರೆ ಮಕ್ಕಳು ಆಗೊದು. ಅವರು ದೂರವಾಗಿ ಬುಕ್ ಹಿಡಿಯೊದಿಲ್ಲ, ಹಾಗಾಗಿ ಅವರಲ್ಲೂ ನೋಡಬ್ಯಾಡ ಅಂತ ಹೇಳಲು ನೈತಿಕತೆ ಇಲ್ಲ. ಎಲ್ಲಿ ಕಿರಿಕಿರಿ ಅಂತ ನಿಮಗೊಂದು ಕೊಡಿಸಿಬಿಡುತಾರ”

“ಆಯ್ತಪ್ಪ. ನೀನು ಹೇಳೊದ ಸರಿ. ನಾನು ಸಿರಿಯಸ್ ಆಗಿ ತೊಗೊಲ್ಲೇಳು”
“ತೊಗೊಂಡ್ರು ತೊಗಳಿಕ್ರೂ ನನಗೇನು ಆಗಬೇಕಿಲ್ಲ. ಹಾಳಾದ್ರ ನೀವು ಹಾಳಾಗುತಿರಿ”
“ಹೋ. . .” ಎಂದು ಹಣೆಹಣೆ ಬಡಿದುಕೊಂಡು “ನಿನ್ನದೊಳ್ಳೆ ಕಿರಿಕಿರಿ ಆಯ್ತು, ಗೆಟ್ ಲಾಸ್ಟ್” ಎಂದು ಸಿಟ್ಟನಿಂದ ಕೈ ಮಾಡೋಕೆ ಹೋದೆ.
ಸಡನ್ ಆಗಿ ಪಟ ದೂರಸರಿಯಿತು.
ಆ ಸಿಟ್ಟಿನಲ್ಲಿ ನಾನು ಹಾಗೇಕೆ ಮಾಡಿದೆನೋ ತಿಳಿಯಲಿಲ್ಲ. ವಾಸ್ತವಕ್ಕೆ ಬಂದು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಪಶ್ಚಾತ್ತಾಪ ಪಟ್ಟು “ಮಿ.ರೆಡ್ ಕೈಟ್. ಮಿ.ರೆಡ್ ಕೈಟ್ ಎಲ್ಲಿ ಹೋದೆ” ಎಂದು ಹುಡುಕಿದೆ.
ಪ್ಲೀಜ್ ಮಿ.ರೆಡ್ ಕೈಟ್ ಫಾರ್ ಗೀವ್ ಮಿ, ಪ್ಲೀಜ್ ಕಮ್’ ಎಂದು ಬೇಡಿಕೊಂಡರೂ ಅದು ಬರಲಿಲ್ಲ. ಎಲ್ಲ ಕಡೆ ಹುಡುಕಿದ, ಓಡಾಡಿದ, ಏನೋ ಕಳೆದುಕೊಂಡವರ೦ತೆ ಅತ್ತೆ, ಅದರೂ ಅದು ಬರಲಿಲ್ಲ.

। ನಾಳೆಗೆ ।

‍ಲೇಖಕರು Admin

23 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading