ಡಾ ಎಸ್ ಬಿ ಜೋಗೂರ್
ಒಂದು ಬಾಟಲ್ ವ್ಹಿಸ್ಕಿಗಾಗಿ ಮರ್ಡರ್ ಮಾಡುವ ಜಮಾನಾ ಇದು ಎಂದು ಅನೇಕ ಬಾರಿ ಮಾತಾಡುವದನ್ನು ಕೇಳಿದ್ದೇನೆ. ಆಗ ಹೀಗೇ ಆಲೋಚನೆ ಮಾಡಿ ಸುಸ್ತಾಗಿದ್ದೇನೆ. ಮದ್ಯ ಎನ್ನುವುದು ಮನುಷ್ಯನನ್ನು ಮೃಗವನ್ನಾಗಿ ಮಾಡಿಯೇ ತೀರುತ್ತದೆ ಎನ್ನುವ ಬಗ್ಗೆ ರಷ್ಯಾದ ಅದ್ಭುತ ಕತೆಗಾರ, ಕಾದಂಬರಿಕಾರ ಲೀಯೋ ಟಾಲಸ್ಟಾಯ್ ಬರೆದ ‘ಇಂಪ್ ಆಂಡ್ ಕ್ರಸ್ಟ್’ ಎನ್ನುವ ಕತೆಯಲ್ಲಿ ಬರುತ್ತದೆ. ಆ ಕತೆಯಲ್ಲಿ ಒಬ್ಬ ಸಾಮಾನ್ಯ ರೈತನನ್ನು ಹಾಳುಗೆಡಹುವ ಹಿನ್ನೆಲೆಯಲ್ಲಿ ಎರಡು ಪಿಶಾಚಿಗಳು ಮಾಡುವ ಷಡ್ಯಂತ್ರವನ್ನು ಕುರಿತು ಕತೆ ರೂಪಿಸಲಾಗಿದೆ. ಆ ಕತೆಯ ಆರಂಭದಲ್ಲಿ ಯಜಮಾನ ಪಿಶಾಚಿ ತನ್ನ ಆಳು ಪಿಶಾಚಿಯನ್ನು ಕರೆದು ಆ ರೈತನಿಗೆ ಹೇಗಾದರೆ ಮಾಡಿ ಸಿಟ್ಟು ಬರುವಂತೆ ಮಾಡು, ಅವನನ್ನು ಹಾಳುಗೆಡವಬೇಕು ಎಂದು ಅಜ್ಞಾಪಿಸುತ್ತದೆ. ಆಗ ಆ ಆಳು ಪಿಶಾಚಿ ಆ ರೈತ ಹೊಲವನ್ನು ಉಳುಮೆ ಮಾಡುವಾಗ ಬದುವಿನಲ್ಲಿ ಇಟ್ಟಿರುವ ಅವನ ರೊಟ್ಟಿಯ ಬುತ್ತಿಯನ್ನು ಕದಿಯುತ್ತದೆ. ಸ್ವಲ್ಪ ಹೊತ್ತಿನ ಮೇಲೆ ರೈತ ಹಸಿವಾಗಿ ಊಟ ಮಾಡಲೆಂದು ಆ ಬದಿ ಬಂದಾಗ ಅಲ್ಲಿ ರೊಟ್ಟಿಯ ಬುತ್ತಿ ಇರುವುದಿಲ್ಲ.
ಆಗ ರೈತ ಆ ಬಗ್ಗೆ ಎಳ್ಳಷ್ಟೂ ಬೇಸರಿಸಿಕೊಳ್ಳದೇ ತನಗಿಂತಲೂ ಹಸಿದವರು ಯಾರಾದರೂ ಇದ್ದಿರಬಹುದು ಅದಕ್ಕೆಂದೇ ಬುತ್ತಿಯನ್ನು ಕದ್ದಿರಬಹುದು ಎಂದು ಯೋಚಿಸಿ ಸುಮ್ಮನಾದ. ಆಗ ಆ ಆಳು ಪಿಶಾಚಿ ಯಜಮಾನ ಪಿಶಾಚಿಯಿಂದ ಹೊಡೆತ ತಿನಬೇಕಾಯಿತು. ಒಂದು ಸಣ್ಣ ಕೆಲಸ ಮಾಡಲಾಗಲಿಲ್ಲವಂದ್ರೆ ಹೇಗೆ..? ಈ ಬಾರಿ ಹೀಗೆ ಸೋತು ಹಿಂದುರುಗಬೇಡ ಎಂದು ವಾನರ್ಿಂಗ್ ಮಾಡಿ ಮತ್ತೆ ಕಳುಹಿಸಿತು. ಈ ಬಾರಿ ಆ ಆಳು ಪಿಶಾಚಿ ಒಬ್ಬ ಸಾಮಾನ್ಯ ಕೃಷಿಕೂಲಿ ಮಾಡುವವನ ಹಾಗೆ ವೇಷ ಮಾಡಿಕೊಂಡು ರೈತನಲ್ಲಿಗೆ ಬಂದು ತಾನು ಅವನ ಬಳಿ ಜೀತದಾಳಾಗಿ ಕೆಲಸ ಮಾಡುವದಾಗಿ ಹೇಳಿ ಉಳಿಯಿತು. ರೈತನಿಗೆ ಸಾಹುಕಾರ್ರೆ ಈ ಬಾರಿ ನೀವು ತಗ್ಗಿನಲ್ಲಿ ಗೋಧಿ ಹಾಕಬೇಡಿ ಮೇಲಿನ ಭಾಗದಲ್ಲಿ ಹಾಕಿ ನೋಡಿ, ಸಾಕಷ್ಟು ಮಳೆಯಾಗಲಿದೆ ಎಂದು ಹೇಳಿತು. ಅವನ ಮಾತನ್ನು ಕೇಳಿ ಆ ರೈತ ಅದೇ ಭಾಗದಲ್ಲಿ ಗೋದಿ ಹಾಕಿದ. ಚೆನ್ನಾಗಿ ಮಳೆ ಬಂದು ವಿಪುಲವಾಗಿ ಬೆಳೆ ಬೆಳೆದ. ಏನು ಮಾಡಬೇಕು ಎಂದು ತೋಚದಷ್ಟು ಗೋದಿ ಬೆಳೆದ. ಆಗ ಆ ಆಳು ಪಿಶಾಚಿ ಆ ರೈತನಿಗೆ ಹೆಚ್ಚುವರಿ ಗೋದಿಯಿಂದ ಮದ್ಯ ತಯಾರಿಸಿ ಎಂದು ಸಲಹೆ ನೀಡಿತು. ಆ ರೈತ ಹಾಗೇ ಮಾಡಿದ. ಒಂದು ದಿನ ಸ್ನೇಹಿತರಿಗೆ ಸಬಂಧಿಗಳಿಗೆ ಭೋಜನಕೂಟಕ್ಕೆ ಆಹ್ವಾನಿಸಿದ.
ಎಲ್ಲರೂ ಸೇರಿ ಮದ್ಯ ಸೇವಿಸುತ್ತಾ ಮಜಾ ಮಾಡುತಾ ಹೋದರು. ಅಷ್ಟರಲ್ಲಿ ಆ ರೈತನ ಹೆಂಡತಿ ಅಲ್ಲಿಗೆ ಆಗಮಿಸಿ ಮದ್ಯ ವಿತರಿಸುವಾಗ ಒಂದು ಗ್ಲಾಸು ಕೈಜಾರಿ ಕೆಳಗೆ ಬೀಳುತ್ತದೆ. ಆಗ ಆ ರೈತ ಜೋರಾಗಿ ಅವನ ಹೆಂಡತಿಯ ಕೆನ್ನೆಗೆ ಬಾರಿಸುತ್ತಾನೆ. ಆಗ ಆಳು ಪಿಶಾಚಿಗೆ ತುಂಬಾ ಖುಷಿಯಾಗುತ್ತದೆ. ತಾನು ಬಂದ ಕೆಲಸ ಸಾಧಿಸಿದೆ ಎನ್ನುವ ಸಮಾಧಾನವಾಗುತ್ತದೆ. ಯಾವದೇ ಕಾರಣಕ್ಕೂ ಹೆಂಡತಿಯ ಮೇಲೆ ಸಿಟ್ಟಿಗೇರದ ಆ ರೈತ ಕೇವಲ ಒಂದು ಗ್ಲಾಸ್ ಮದ್ಯ ಕೆಳಗೆ ಚೆಲ್ಲಿದ ಕಾರಣಕ್ಕೆ ಆ ಪರಿ ಹೊಡೆದದ್ದು ಆ ಪಿಶಾಚಿಗೆ ವಿಚಿತ್ರವೆನಿಸಿತು. ತಡ ರಾತ್ರಿಯವರೆಗೆ ಎಲ್ಲರೂ ಕುಡಿಯುತ್ತಾ ಹೋದರು. ಆಮೇಲೆ ತಮ್ಮ ತಮ್ಮಲ್ಲಿಯೇ ನಾಯಿ, ನರಿ, ತೋಳ, ಹಂದಿಗಳ ಹಾಗೆ ಕಚ್ಚಾಡತೊಡಗಿದರು. ಆ ಸನ್ನಿವೇಶವನ್ನು ನೋಡಿದ ಯಜಮಾನ ಪಿಶಾಚಿಗೆ ಕುತೂಹಲ ತಡೆಯಲಾಗಲಿಲ್ಲ. ಅವರೆಲ್ಲಾ ಹಾಗೆ ನಾಯಿ, ತೋಳ, ನರಿಗಳಂತೆ ಕಚ್ಚಾಡುವಂತೆ ಮಾಡಲು ನೀವು ಆ ಮದ್ಯದಲ್ಲಿ ಅವುಗಳ ರಕ್ತ ಏನಾದರೂ ಬೆರೆಸಿರುವೆಯಾ..? ಎಂದು ಕೇಳಿತು.

ಆಗ ಆ ಆಳು ಪಿಶಾಚಿ ‘ಅಂಥಾ ಯಾವುದನ್ನೂ ಬೆರೆಸುವ ಅವಶ್ಯಕತೆಯಿಲ್ಲ ಆ ಬಗೆಯ ಗುಣಗಳು ಮನುಷ್ಯನಲ್ಲಿ ಮೊದಲೇ ಇವೆ ಮದ್ಯ ಸೇವಿಸಿದಾಗ ಅವು ಜಾಗೃತವಾಗುತ್ತವೆ’ ಎಂದು ಹೇೆಳುತ್ತದೆ. ಈ ಕತೆಯ ತಾತ್ಪರ್ಯ ಮದ್ಯಕ್ಕಾಗಿ ಮನುಷ್ಯ ಯಾವ ಹಂತಕ್ಕಾದರೂ ತಲುಪುತ್ತಾನೆ ಎನ್ನಲಿಕ್ಕೆ ಇದೊಂದು ಕತೆಯಷ್ಟೆ. ವಾಸ್ತವ ಬದುಕಿನಲ್ಲಿಯೂ ಮದ್ಯ ಮಾಡಬಾರದ ಕೆಲಸಗಳನ್ನು ಕುಡಿದವನಿಂದ ಮಾಡಿಸುತ್ತದೆ. ಕುಡಿದು ಅಮಲೇರಿರುವ ವ್ಯಕ್ತಿಗೆ ಸರಿ-ತಪ್ಪುಗಳ ತಿಳುವಳಿಕೆ ಇರುವದಿಲ್ಲ ಎಂದಲ್ಲ. ಟಾಲಸ್ಟಾಯ್ ತನ್ನ ಕತೆಯಲ್ಲಿ ಹೇಳಿದಂತೆ ದುಷ್ಟ ಪ್ರಾಣಿಗಳ ಗುಣಗಳು ಜಾಗೃತವಾಗುತ್ತವೆ. ಆತ ವಿಪರೀತ ಕುಡಿದ ಕಾರಣಕ್ಕೆ ಊಟ ಮಾಡದೇ ಮಲಗಬಹುದು ಆದರೆ ತಪ್ಪಿ ಹೊಲಸನ್ನು ತಿನ್ನುವುದಿಲ್ಲ. ಹಾಗಾಗಿ ಆತ ಕುಡಿದಿದ್ದ ಎನ್ನುವ ನೆಪವೇ ಸರಿಯಾದುದಲ್ಲ.
ಈಚೆಗೆ ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ಈ ಮದ್ಯದ ಚಟವನ್ನೇ ಮುಂದೆ ಮಾಡಿಕೊಂಡು ನಡೆೆಯಬಾರದ ಘಟನೆಯೊಂದು ನಡೆದಿದೆ. ಹೆಂಡತಿಯನ್ನು ಚಟಕ್ಕಾಗಿ ಮಾರುವುದು, ಒತ್ತೆ ಇಡುವುದು, ಮನೆಯಲ್ಲಿಯ ಸಾಮಾನುಗಳನ್ನೆಲ್ಲಾ ಮಾರುವುದು ನಾವೆಲ್ಲಾ ಕೇಳಿರುವುದಿದೆ. ಆದರೆ ಜನುಮ ನೀಡಿದ ತಂದೆಯೇ ತನ್ನ ಮದ್ಯದ ತೆವಲಿಗಾಗಿ ಮಗಳನ್ನು ಕೇವಲ 200 ರೂಪಾಯಿಗಳಿಗೆ ಮಾರಾಟ ಮಾಡಿದ ಘಟನೆ ದಾತಿಯಾ ಜಿಲ್ಲೆಯಲ್ಲಿ ನಡೆದಿರುವುದಿದೆ. ಆ ಜನುಮದಾತನ ಹೆಸರು ಮೋಹನ ಧಿಮಾರ್ ಆತನ ಹೆಂಡತಿಯ ಹೆಸರು ಪುಷ್ಪಾ. ಆಕೆ ಅಲ್ಲೇ ತನ್ನ ನೆರೆಯ ಗೆಳತಿಯ ಮನೆಗೆ ಹೋಗಿ ಬರುವಷ್ಟರಲ್ಲಿ ಮಗಳು ರಾಧಾ ಮಂಗಮಾಯವಾಗಿರುವುದು ಕಂಡು ಈಕೆ ತನ್ನ ಕುಡುಕ ಗಂಡನ ಮೇಲೆ ಸಂಶಯ ಪಟ್ಟು ನೆರೆಹೊರೆಯಲ್ಲಿ ವಿಚಾರಿಸುತ್ತಾಳೆ. ಆಕೆಯ ನೆರೆಯವರು ಅವಳ ಗಂಡ ಮೋಹನ ತನ್ನ ಒಂದು ವರ್ಷದ ಮಗಳು ರಾಧಿಕಾಳನ್ನು ಯಾವುದೋ ಓರ್ವ ಅಪರಿಚಿತ ಮಹಿಳೆಗೆ ಕೇವಲ 200 ರೂಪಾಯಿಗೆ ಮಾರಾಟ ಮಾಡಿರುವುದಾಗಿ ಹೇಳಿದಾಗ ತಾಯಿ ಪುಷ್ಪಾಗೆ ಗರ ಬಡಿದಂತಾಯಿತು.
ಮೋಹನ ತನ್ನ ಕುಡಿತದ ಚಟಕ್ಕೆ ಮನೆಯಲ್ಲಿರುವ ಪಾತ್ರೆ ಪಗಡೆಗಳನ್ನು ಮಾರಿದವನು. ನೆರೆಯವರು ಹೇಳಿದಾಗ ಅವನ ಮೇಲಿನ ಸಂಶಯ ಇನ್ನಷ್ಟು ದೃಢಪಟ್ಟಿತು. ಹೆತ್ತ ಮಗಳನ್ನೇ ಕುಡಿತದ ಚಟಕ್ಕಾಗಿ ಮಾರಿದ ಗಂಡನನ್ನು ನೆನೆದು ಮೈಯೆಲ್ಲಾ ಬೆಂಕಿಯಾದ ಪುಷ್ಪಾ, ಪೋಲಿಸ್ ಕಂಪ್ಲೆಂಟ್ ಮಾಡಿದ್ದೇ ತಡ ತಂದೆ ಎನಿಸಿಕೊಂಡ ಕುಡುಕ ಪ್ರಾಣಿ ಪೋಲಿಸರ ಅತಿಥಿಯಾಗಬೇಕಾಯಿತು. ಕುಡಿತದ ಕೆಡಕುಗಳು ಯಾವ ಮಟ್ಟಕ್ಕಾದರೂ ಹೋಗಬಹುದು ಎನ್ನಲಿಕ್ಕೆ ಇದೊಂದು ಜೀವಂತ ನಿದರ್ಶನ. ಇಂಥಾ ಅದೆಷ್ಟೋ ಘಟನೆಗಳು ನಮ್ಮ ಸುತ್ತ ಮುತ್ತ ಜರುಗುತ್ತಿರುತ್ತವೆ. ಆದರೆ ಹೀಗೆ ತನ್ನ ಕುಡಿತದ ಚಟಕ್ಕಾಗಿ ಕೇವಲ 200 ರೂಪಾಯಿಗಳಿಗಾಗಿ ಒಂದು ವರ್ಷದ ತನ್ನದೇ ಮಗಳನ್ನು ಮಾರಾಟ ಮಾಡಿದ ಘಟನೆ ಇದೇ ಮೊದಲಿರಬೇಕು. ಕಡು ಬಡತನದ ಹಿನ್ನೆಲೆಯಲ್ಲಿ, ಪೋಷಣೆ ಮಾಡಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಯಲ್ಲಿದ್ದ ಕೆಲ ಪಾಲಕರು ಈ ಮುಂಚೆ ಮಕ್ಕಳನ್ನು ಮಾರಿರುವುದು ಮತ್ತು ಕೊಂಡಿರುವುದು ಇದೆ. ಹತ್ತಾರು ಬಗೆಯ ಹರಕೆ ಹೊತ್ತು, ಅನೇಕ ಆಸ್ಪತ್ರೆಗಳಿಗೆ ಭೇಟಿ ನೀಡಿದ ಮೇಲೆಯೂ ಸಂತಾನ ಪ್ರಾಪ್ತವಾಗದ ದಂಪತಿಗಳದು ಒಂದು ಬಗೆಯ ಸಮಸ್ಯೆಯಾದರೆ, ವರ್ಷಕ್ಕೊಂದು ನಿಯಮಿತವಾಗಿ ಜನಿಸುವ ಮೂಲಕ ಆ ಬಡ ಪಾಲಕರು ಕಂಗೆಡುವಂತಾಗುವ ಸಮಸ್ಯೆ ಇನ್ನೊಂದು ಬಗೆಯದು. ಅಪಾರ ಜನಸಂಖ್ಯೆ ಇರುವ ನಮ್ಮಂಥಾ ರಾಷ್ಟ್ರಗಳಲ್ಲಿ ಮಕ್ಕಳನ್ನು ಮಾರುವ ಮತ್ತು ಕೊಳ್ಳುವ ಸಂಗತಿ ವಿಶಿಷ್ಟ ಗಮನ ಸೆಳೆಯುತ್ತಿಲ್ಲ.
ಹಾಗಾಗಿಯೇ ಕೆಲ ಜಿಲ್ಲೆಗಳಲ್ಲಿ ಮಕ್ಕಳನ್ನು ಮಾರುವ ದಂಧೆ ಅವ್ಯಾಹತವಾಗಿ ನಡೆದಿದೆ. ಒಂದು ಬಗೆಯ ಅಸಹಾಯಕ ಸ್ಥಿತಿ ಹೀಗೆ ತಮ್ಮ ಒಡಲ ಕುಡಿಯನ್ನು ಮಾರಾಟಮಾಡುವುದಕ್ಕೂ ಕೇವಲ ಒಂದು ಬಾಟಲ್ ವ್ಹಿಸ್ಕಿಗಾಗಿ ಮಗುವನ್ನು ಮಾರುವುದಕ್ಕೂ ತುಂಬಾ ವ್ಯತ್ಯಾಸಗಳಿವೆ. ಮೊದಲನೆಯದರಲ್ಲಿ ಒಂದು ಬಗೆಯ ಮರುಗುವಿಕೆಯಿದ್ದರೆ, ಎರಡನೆಯ ಪ್ರಕಾರದಲ್ಲಿ ಅಂಥಾ ಯಾವ ಮರಗುವಿಕೆ.. ಕೊರಗುವಿಕೆ ಇಲ್ಲ. ಇದ್ದದ್ದು ಕೇವಲ ನಶೆಯ ಹಂಗು ಮಾತ್ರ. ಮನೆಯಲ್ಲಿಯ ಪಾತ್ರೆ ಪಗಡೆಗಳನ್ನು ಹೊತ್ತೊಯ್ದು ಮಾರುವಲ್ಲಿರುವ ಸೆಂಟಿಮೆಂಟ್ ಗಳೇ ಇಲ್ಲಿಯೂ ಇರುತ್ತವೆ ಅಷ್ಟೇ.. ಕೊನೆಗೂ ಇವನು ಮಾಡುವುದು ಗುಂಡಿನ ಮತ್ತಿಗಾಗಿ.. ಗಮತ್ತಿಗಾಗಿ.
***
ಈ ಲೇಖನ ಬರೆದು ಮುಗಿಸುವದರೊಳಗೆ ಬೀದರ ಜಿಲ್ಲೆಯಲ್ಲೊಬ್ಬ ಕಿರಾತಕ ಕೇವಲ 500 ರೂಪಾಯಿಗಾಗಿ ತನ್ನ ಹೆತ್ತ ತಾಯಿಯ ಮೇಲೆ ಸೀಮೆ ಎಣ್ಣೆ ಸುರಿದು ಕೊಳ್ಳಿ ಇಟ್ಟು ಬಿಟ್ಟ. ಆ ತಾಯಿ ತನ್ನದೇ ಕುಪುತ್ರನಿಂದ ಕೊಲೆಯಾಗಬೇಕಾದದ್ದು ಆಕೆಯ ದುರ್ದೈವ. ತನ್ನ ಹೆಂಡತಿಯನ್ನು ತವರಿನಿಂದ ಕರೆತರಲು ಈ ಗಂಡಸಿಗೆ ಐದು ನೂರು ರೂಪಾಯಿ ಬೇಕಿತ್ತು. ನಾಳೆ ಬೇಕಾದರೆ ಕೊಡ್ತೀನಿ ಇವತ್ತು ನನ್ನತ್ರ ಇಲ್ಲ ಎಂದದ್ದಷ್ಟೆ. ತನ್ನದೇ ಹೆತ್ತಮ್ಮಳ ಮೈಮೇಲೆ ದುಬುದುಬು ಸೀಮೆ ಎಣ್ಣೆ ಸುರಿದು, ಬೆಂಕಿ ಇಟ್ಟೇ ಬಿಟ್ಟ. ಹೆತ್ತ ಹೊಟ್ಟೆ ಮಾತ್ರವಲ್ಲ, ಅವಳ ಮೈಯನ್ನೂ ಧಗ ಧಗ ಅಂತ ಉರಿಯುವ ಹಾಗೆ ಮಾಡಿದ ಇಂಥಾ ಸಂತಾನ ಯಾವ ಸೈತಾನರಿಗೆ ಕಡಿಮೆ ನೀವೇ ಹೇಳಿ. ಎಲ್ಲ ಮನುಷ್ಯ ಸಂಬಂಧಗಳು ಜಿಗಿ ಸಾಯುತ್ತಿವೆ. ನೂರೋ ಇನ್ನೂರೋ ರೂಪಾಯಿಗೆ ಅವು ಹರಾಜಾಗುತ್ತಿವೆ, ಬಲಿಯಾಗುತ್ತಿವೆ ಎನ್ನುವುದು ಈ ಶತಮಾನದ ಮಾನವ ಜನಾಂಗದ ಬಹು ದೊಡ್ದ ಅಣಕ…!






0 Comments