ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೀತಾ ನಾರಾಯಣ್ ಹೊಸ ಕವಿತೆ- ಕಾಲದ ಕನ್ನಡಿಯೊಳಗೆ

ಕಾಲದ ಕನ್ನಡಿಯೊಳಗೆ

-ಗೀತಾ ನಾರಾಯಣ್

ನಡುಮನೆಯ ಪೂರ್ವದ ಗೋಡೆಯಲ್ಲಿ ಪಶ್ಚಿಮದ ಕಡೆಗೆ ನೋಡುತ್ತಲೇ ಇರುವ ಕನ್ನಡಿಯಲ್ಲಿ ಸದಾ ಅಮ್ಮನ ಚಲನೆಯ ಬಿಂಬಗಳು ಹಾದು ಮರೆಯಾಗುತ್ತವೆ…

ಅಪ್ಪ ರೇಡಿಯೋದಲ್ಲಿ ವಾರ್ತೆ ಕೇಳುವಾಗ ಅಮ್ಮ ಹೊರಗಿನ ಅಂಗಳದಲ್ಲಿ
ಎಳೆಯ ರಂಗೋಲಿಯೊಳಗೆ
ಬದುಕನ್ನೇ ಕಡೆದಿರುತ್ತಾಳೆ
ಬಾಗಿ ನೇರವಾಗುವ ಎಳೆಗಳಲ್ಲಿ

ಚಿಮಣಿಯ ಕಿಟ್ಟು ಕಾಲವನ್ನೆಲ್ಲ ದಟ್ಟಮಸಿಯೊಳಗೆ ಜಗಿದು ಶಾಂತವಾಗಿದೆ
ಜೋಡೊಲೆ; ಕೋಡೊಲೆಗಳು ಬೆಂದು ಬೆಂದು ಅಮ್ಮನ ಹಣೆಯಲ್ಲಿ ಲೋಕದ ಉಳಿವ ಕಾಣಿಸಿವೆ….

ಕಡಗೋಲು ತಿರುಗುವಾಗ
ಮಜ್ಜಿಗೆಯ ಸೋರೆ ಅದೆಷ್ಟು ಹಾಡುಗಳ ಗುನುಗಿದೆಯೋ ಕಾಲಗಳು ಲೆಕ್ಕವಿಡಲಿಲ್ಲ ಅಮ್ಮನ ಶ್ರಮದ ನಿಷ್ಠೆಯನು
ಉಂಡೆಗಟ್ಟಿದ ಬೆಣ್ಣೆಯಲ್ಲಿ ಚುಕ್ಕಿಗಳು ಕರಗಿಹೋದವು

ತರಾವರಿ ಸಾರುಗಳ ಗಮಲಲ್ಲಿ
ಅಮ್ಮ ಕಾರವಾಗಿ ಅರೆದರೆದು ಕರಗಿ ಅದೆಷ್ಟು ರುಚಿಯಾದಳು!
ಕಣಜದ ಮಗ್ಗುಲಲ್ಲಿ ಸದಾ ಮಲಗಿರುವ ಪರಕೆಗೆ ಎಚ್ಚರ ಕಲಿಸಿದವಳೇ ಅಮ್ಮನಲ್ಲವೇ!
ಮನೆಯ ತುಂಬಾ ಅವಳ ಕೈಹಿಡಿದೇ ನಡೆದಾಡುವ ಪರಕೆಯೂ ಸವೆಯುತ್ತದೆ ಅಮ್ಮನಂತೆಯೇ….

ಅಡಿಗೆ ಮನೆಯ ಕಿಟಕಿಯಲ್ಲಿ
ತಗ್ಗಿನಗದ್ದೆಯ ಏರುಪೇರುಗಳನ್ನು ಸದಾ ನೋಡುವ ಅಮ್ಮ ಅದೆಷ್ಟು ಹಾದಿ ಸವೆಸಿಲ್ಲ ತೆನೆಗಟ್ಟಲು….
ಗದ್ದೆಯ ಪೈರಿನ ನೆತ್ತಿ ತಣ್ಣಗಿರಲು ಅವಳ ಅಂಗಾಲು ಸುಟ್ಟುಕೊಂಡಿವೆ……..

ಸೇದುವ ಬಾವಿಯ ಆಳದಲ್ಲಿ
ಇವಳದೆಷ್ಟು ಕಾಲ ಮುಳುಗಿ ಜಲತಂದಳೋ?! ಮಕ್ಕಳ ಕೈಯಲ್ಲಿ ಬರೆಗಳು ಎಳೆದಂತೆ ತಾನೇ ಹಗ್ಗ ಹಿಡಿದು ನೀರಾದವಳು; ನೀರಮನೆಯಲ್ಲಿ ಮನೆಮಂದಿಗೆಲ್ಲ ಚೆಲುವ ತಂದಳು

ಕಾಲವನ್ನೇ ಹೆದರಿಸಿ ದೀರ್ಘ ಕಾಲ ದುಡಿದೇ ದುಡಿದು ಅವಳಿಗಿಷ್ಟವಾಗುವ ಹಿಡಿ ಹಸಿ ಕಡಲೇಕಾಯಿ ತಿನ್ನುವಾಗಲೂ ಅಡಿಗೆಯ ಹದವ ಕುರಿತೇ ಚಿಂತಿಸಿದವಳು; ತನ್ನೆಲ್ಲ ಸುಖವ
ಒಕ್ಕಲುತನದ ಗೋಡೆಗೆ ಬಳಿದು
ಮನೆಮಂದಿಯ ನಗೆಯಾದಳು

ಹೊಸ ಕಾಲವೀಗ ಮರುಕಳಿಸಿದೆ ಅಮ್ಮನಾಗಿರುವ ನಾನು ನನ್ನಮ್ಮನಾಗಲು ಆಗಲೇ ಇಲ್ಲ…….
ಅವಳೊಳಗೆ ಕರಗಿ ಬೆಳೆದರೂ ಅವಳಷ್ಟು ಮೌನದ ಮಮತೆಯಾಗುವಲ್ಲಿ ಪರಾಭವಗೊಂಡು ಅವಳನ್ನೇ ಮತ್ತೆ ಮತ್ತೆ ನನ್ನೊಳಗೆ ಧರಿಸುತ್ತೇನೆ
ಜಗದ ಕಾಲವೆಲ್ಲ ಅಮ್ಮನಂತಾಗಲಿ…..
ಕಾಲದ ಬೆಣ್ಣೆ ತುಪ್ಷದ ಗಮಲ ಹೊತ್ತು ಪ್ರೀತಿಯಾಗಿ ಪೊರೆಯಲಿ….

‍ಲೇಖಕರು avadhi

3 February, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading