ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೀತಾ ಜಿ ಹೆಗಡೆ ಕಲ್ಮನೆ ಕವಿತೆ- ಆಹಾ! ಮಣ್ಣ ಘಮಲು…

ಗೀತಾ ಜಿ ಹೆಗಡೆ

ಮೊದಲ ಮಳೆಯ ಆಗಮನಕೆ
ಮನಸ್ಸು ಕೊಂಚ ತಲ್ಲಣ
ಒಂದಷ್ಟು ಖುಷಿ
ಮಗದೊಂದಷ್ಟು ಗಡಿಬಿಡಿ
ಬಢಾರ್ ಬಾಗಿಲು ಬಡಿದ ಸೌಂಡ್
“ಅಯ್ಯೋ! ದೇವರೆ ಎಂತಾತು?”

ಬಡಕ್ಕನೆ ಎದ್ದು ಹೋಗೋ ಅವಸರದಲ್ಲಿ
ತಡವರಿಸಿದ ಬೆಕ್ಕು
ಮ್ಯಾವ್ ಅಂದಾಗ
ಪಾಪ! ಎಂದ್ಯಾರಿಗೆ ಹೇಳಲಿ
ಬೆಕ್ಕಿಗಾ ಬಾಗಿಲಿಗಾ?

ಚಿಲಕ ಜಡಿದ ಮನಸ್ಸು ಕಿಸಕ್ಕೆಂದಾಗ
ಓಹೋ, ಇದಕಿನ್ನೂ ಭಯಂಕರ ಸಂತೋಷ
“ಸೆಖೆಗೆ ಹೈರಾಣಾಗಿ ಸಾಕಾತನ”
ಮೌನ ಮಾತಾಡುತ್ತದೆ
ತೆರೆದ ಬಾಗಿಲು ತನ್ನಷ್ಟಕ್ಕೇ ಮುಚ್ಚಿ
ಮೆಟ್ಟಲೇರುವ ಧಾವಂತ ತಪ್ಪಿದ್ದಕ್ಕೆ
ಖುಷಿ ಪಡುತ್ತದೆ.

ಇತ್ತೀಚೆಗೆ ಹಾಗೆ
ಉತ್ಸಾಹ ಮುಗಿಲೆತ್ತರ
ಶಕ್ತಿಕುಂದಿ ದೇಹ ವಲ್ಲೆ ಅಂದಾಗೆಲ್ಲ
ಮನಸ್ಸೆಲ್ಲ ಮ್ಲಾನ
ಒಂದಷ್ಟು ಹುಡುಕಾಟ
ಈ ಮೊದಲ ಮಳೆಯಂತೆ;

“ಎಷ್ಟು ಧೂಳು, ಕಸ, ಕಡ್ಡಿ ಮನೆಯೊಳಗೆ ತಂದಾಕ್ಲಿ”
ಕಾದು ಕೂತಂತೆ ದಿಢೀರ್ ಬರುವ ಮಳೆ

ಹಾಗೆ ದಿಢೀರ್ ಅಂತ ಬಂದುಬಿಡಬೇಕಪ್ಪಾ ಶಕ್ತಿ
ಅಣಿಯಾಗಿ ಬಿಡುತ್ತದೆ ಚಿತ್ತ
ಒಂದಿನ ಬಿಡದೇ ಯೋಗ, ವಾಕಿಂಗ್, ಡಯಟ್ಟು…..
ಮಣ್ಣೂ ಮಸಿ… ತೀರ್ಮಾನ.

ಥೋ… ಎಲ್ಲಾ ಡಬ್ಬಾಕಿ
ಪೊಗದಸ್ತಾಗಿ ಗೊರಕೆ ಹೊಡೆಸುತ್ತದೆ
ಈ ಮೊದಲ ಮಳೆಯ ತಂಪು!

ಮಳೆ ಬಲೂ ಹುಷಾರು
ತನ್ನ ಬೇಳೆ ಬೇಯಿಸಿ ಪರಾರಿ
ಆದರೆ ನನ್ನ ತೀರ್ಮಾನ ಎಕ್ಕುಟ್ಟೋಯ್ತಲ್ಲಾ
ಅಂಡು ಸುಟ್ಟ ಬೆಕ್ಕಿನಂತೆ ವಿಲ ವಿಲ
ಸೆಟಗೊಂಡ ಮನ ಬರಲಿ ಮತ್ತೆ
ಗುರಾಯಿಸುತ್ತದೆ ದೊಣ್ಣೆ ಹಿಡಿದು.

ಬೆಳಗ್ಗೆ ಎದ್ದು ನೋಡಿದರೆ
ಒಂದಾ ಎರಡಾ ಥೋ…
ಸೊಂಟಕ್ಕೆ ಸಿಕ್ಕಿಸಿದ ಸೆರಗು
ಗಂಟಾಕಿದ ಮುಡಿ
ಬಿಚ್ಚೋಕೂ ಟೈಮಿಲ್ಲ
ಮನೆಯೆಲ್ಲ ಧೂಳೋ ಧೂಳು
ಛೆ… ಹಬ್ಬದ ಕ್ಲೀನೆಲ್ಲಾ ಎಕ್ಕುಟ್ಟೋಯ್ತಲ್ಲಾ
ಕಣ್ಣು ಕೆಂಪಾಗಿ
ಅಳೊದೊಂದು ಬಾಕಿ.

ಆದರೂ ಈ ಮೊದಲ ಮಳೆಯಲ್ಲಿ
ಒಂಥರಾ ಹಿತವಿತ್ತು
ಶಕ್ತಿ ಬಂದುಬಿಡ್ತು
ಸಣ್ಣಗೆ ನೇವರಿಸಿದ ಮಣ್ಣ ಘಮಲು
ಮೂಗೆಲ್ಲ ಎಡತಾಕಿದಾಗಾ
ನೆಟ್ಟ ಗಿಡಗಳು ಮೈಕೊಳೆ ತೊಳೆದು ತೊನೆದಾಡುವಾಗಾ…
ಆಹಾ! ನೋಡೋಕೆ ಕಣ್ಣೆರಡು ಸಾಲದು!

ಬಪ್ಪರೆ ಮೊದಲ ಮಳೆಯೇ
ಮತ್ತೆ ಬಂದು ಬಿಡು
ತಣ್ಣಗಾಯಿತು ಮನ
ಉರಿ ಕೆಂಡ ಹೊತ್ತ ಹಂಡೆ ಒಲೆಗೆ
ಬುಸ್… ಎಂದು
ತಣ್ಣನೆಯ ನೀರು ಸುರಿದಂತೆ!

‍ಲೇಖಕರು avadhi

29 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading