ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಿರಿಜಾ ಶಾಸ್ತ್ರಿ ಬರೆದ ಎರಡು ಕವಿತೆಗಳು

ಪರೀಕ್ಷಿತ..

ಗಿರಿಜಾ ಶಾಸ್ತ್ರಿ

ಮೂಲಾಧಾರದಿಂದ ಹೆಡೆಯೆತ್ತಿ
ನಿಲ್ಲುತ್ತಾನೆ ಶೇಷ
ಆಸೆಗಳ ಆಸೆ ಗೆಲ್ಲುವಾಸೆ
ಅನಾಹತದ ಮೂಲಕ
ಸಹಸ್ರಾರಕೆ ಚಿಮ್ಮುವನಕ
ಸಿಸಿಫಸ್ಸಿನ ನಿಷ್ಫಲ ಯಾತ್ರೆ
 
ಬಾಲಬಡಿದು ಒಳಗೇ ಬುಸುಗುಡುವ ಇವನಿಗೆ
ಎಷ್ಟೆಂದು ಬಡಿದು ಹಾಕಲಿ ಮಂಡೂಕ ಮೂಷಿಕ
ತಿಂದಷ್ಟೂ ಹಸಿವು ಹಾಹಾಕಾರ
ಭೂತಗಳ ಕಟ್ಟಿಕೊಂಡು ಜಾತ್ರೆ ಕುಣಿಯುತ್ತಾನೆ
ಜಗ್ಗುಣಕ… ಜಗ್ಗುಣಕ…. ಜಗ್ಗುಣಕ…

ಸುತ್ತು ಸಿಂಬಿಗಳೊಳಗೆ
ಸಾವಿರ ಕೊಕ್ಕೆಗಳು
ಅವಕ್ಕೆ ತೂಗುವ
ಹಸಿ ಹಸಿ ಮಿಕಗಳು
ಹೊಂಚಿ ಕಾಯುತ್ತಾನೆ ವಾತಾಪಿ
ಉರಿ ನಾಲಗೆಗಳ ವೃಕೋದರ
ಪರೀಕ್ಷಿತನ ಪಣಕೊಡ್ಡಿದ ಯಜ್ಞಧೀಕ್ಷಿತ
 
ಕುತ್ತಿಗೆಯಲಿ ಹಾರಮಾಡಿಕೊಳ್ಳುವ ತಾಕತ್ತಿಲ್ಲ ನನಗೆ
ಗರಳದಲಿ ಹೊರುವ ಹಿಮ್ಮತ್ತು
ನಖ ಶಿಖಾಂತ ತಣ್ಣಗೆ ಹರಿವ ಇವನನ್ನು
ಹೇಗೆ ಕಾಣಲಿ ನಾನು
ಕಣ್ಣೊಳಗೆ ಕಿಟಕಿಯೇ ಮೂಡಿಲ್ಲವಲ್ಲ ಇನ್ನೂ..
 

***

ಹಾಡಿನ ಹೊನಲು

ಆ ಕಣ್ಣ ಕಡಲಳೊಗೆ
ಹಾಡಿನ ಹೊನಲೊಳಗೆ
ಹೇಗೋ ಜಾರಿಬಿಟ್ಟೆ
 
ತೇಲಲೀಯದು ಕಡಲು
ಮುಳಗಲೀಯದು ಹೊನಲು
 
ರೆಕ್ಕೆ ಮುರಿದಿತ್ತು
ಬಾನು ಕರೆದಿತ್ತು
ಎಂದಿನಂತೆ
 
ಹರಿದೆ ಹಾಡು ಹರಿದತ್ತ
‘ಗಾಳಿ ಹೆಜ್ಜೆಯ ಹಿಡಿದು’
ಹೆದ್ದೆರೆಗಳ ಹೆಬ್ಬಾವುಗಳ ಮೇಲೆ
ಉಸಿರು ಕಟ್ಟಿ ಉಯ್ಯಾಲೆ ಲೀಲೆ
ಅಲೆದೆ ದಡಾ..ದಡ
ಒಡಕು ಬಿದ್ದು ಧಡ…ದಢಾ..
 
 
ಕಲ್ಲಾದರೂ ಆಗಿದ್ದರೆ
ಉರುಳುರುಳಿ ರೂಪುಗೊಳ್ಳುತ್ತಿದ್ದೆ
ಅರೂಪ ಪುಜೆಗೊಳ್ಳುತ್ತಿದ್ದೆ
 
‘ಕಾಯಗೊಂಡೆ’ನಲ್ಲಾ
ಕೃಪೆ ನಿನ್ನದಲ್ಲಾ
 

‍ಲೇಖಕರು G

10 November, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading