ಗಿರಿಜಾ ಶಾಸ್ತ್ರಿ
ಪಂಡಿತಾ ರಮಾಬಾಯಿಯವರ “ಉಚ್ಚ ಜಾತಿಯ ಹಿಂದು ಮಹಿಳೆ”
ಪಂಡಿತಾ ರಮಾಬಾಯಿಯವರಿಗೆ (೧೮೫೮-೧೯೨೨) ಬಹಳ ಜನಪ್ರಿಯತೆಯನ್ನು ತಂದು ಕೊಟ್ಟ ಪುಸ್ತಕವೆಂದರೆ ಅವರ “ಉಚ್ಚಜಾತಿಯ ಹಿಂದು ಮಹಿಳೆ” (High Caste Hindu Woman). ಭಾರತದಲ್ಲಿ ಹೆಚ್ಚು ತುಳಿತಕ್ಕೆ ಒಳಗಾದ ಉಚ್ಚಜಾತಿಯ ಮಹಿಳೆಯರ ಬಗೆಗಿನ ಪ್ರಾಮಾಣಿಕವಾದ ಕಳಕಳಿ ಇದರಲ್ಲಿ ವ್ಯಕ್ತವಾಗಿದೆ.
ಸ್ವತಃ ರಮಾಬಾಯಿಯವರು ಉಚ್ಚಜಾತಿಗೆ ಸೇರಿದವರಾಗಿದ್ದರಿಂದಲೋ ಏನೋ, ಉಚ್ಚಜಾತಿಯ ಮಹಿಳೆಯರಿಗೆ ನಿಜವಾಗಿ ಕಾಯಕಲ್ಪವಾಗಬೇಕಾದುದನ್ನು ಅವರು ಬಹುಶಃ ಮನಗಂಡಿರಬೇಕು. ಆದುದರಿಂದಲೇ ಅವರ ಈ ಕೃತಿ ಹೆಚ್ಚು ಪ್ರಾಮಾಣಿಕವಾಗಿದೆ. ಆ ಕಾರಣಕ್ಕಾಗಿಯೇ ಜನಪ್ರಿಯವೂ ಆಯಿತು. ಹಿಂದೂಧರ್ಮದ ಬಗೆಗೆ ಇದ್ದ ಮಿಷನರಿಗಳ ಪೂರ್ವಗ್ರಹಗಳನ್ನು ಅವರ “ಭಾರತೀಯ ಧರ್ಮ” ಎನ್ನುವ ಲೇಖನವು ವ್ಯಕ್ತಪಡಿಸಿದರೆ, ಉಚ್ಚಜಾತಿಯ ಹಿಂದೂ ಮಹಿಳೆಯರ ದೈನ್ಯ ಸ್ಥಿತಿಯ ಸ್ವರೂಪ ಪ್ರಸ್ತುತ ಕೃತಿಯಲ್ಲಿದೆ. ಒಂದು ಕಡೆ, ನಮ್ಮ ಧರ್ಮದಲ್ಲಿಯೇ ಇರುವ ಇತ್ಯಾತ್ಮಕ ಅಂಶಗಳನ್ನು ಎತ್ತಿ ಹಿಡಿದರೆ ಇನ್ನೊಂದು ಕಡೆ ಅದರ ಅನಿಷ್ಠ ರೂಪವನ್ನು ತೆರೆದು ತೋರಿಸುತ್ತಾರೆ. ಇದು ಹಿಂದೂ ಧರ್ಮದ ಬಗೆಗಿನ ಅವರ ನಿಷ್ಪಕ್ಷಪಾತ ನಿಲುವನ್ನು ತೋರಿಸುತ್ತದೆ.
ಹಿಂದೂ ಮಹಿಳೆಯರ ಹೀನ ಸ್ಥಿತಿ ಬ್ರಿಟಿಷರ ಆಧುನಿಕ ಕಣ್ಣಿಗೆ ಬಿದ್ದು ಅವರ ಸ್ಥಿತಿ ಸುಧಾರಿಸಬಹುದು ಎಂಬ ದೂರದ ಆಸೆಯೂ ಬಹುಶಃ ರಮಾಬಾಯಿಯವರಿಗೆ ಇದ್ದಿರಬಹುದು. ಆದುದರಿಂದಲೇ ಅವರು ಕೃತಿಯ ಕೊನೆಗೆ “ದಿ ಅಪೀಲ್” ಎನ್ನುವ ಶೀರ್ಷಿಕೆಯಡಿ ಒಂದು ಸಾರ್ವಜನಿಕ ಕೋರಿಕೆಯನ್ನು ಇಡುತ್ತಾರೆ. ಅದೆಂದರೆ “ಈ ಪುಸ್ತಕವನ್ನು ಓದಿದ ನೀವೆಲ್ಲರೂ, ನನ್ನ ದೇಶದ ಮಹಿಳೆಯರನ್ನು, ಜೀವನ ಪರ್ಯಂತ ದಹಿಸುತ್ತಿರುವ ಅವರ ಕಷ್ಟಗಳಿಂದ, ದಾಸ್ಯದಿಂದ ಮುಕ್ತಗೊಳಿಸುವ ಒಂದು ಸಮಾನವಾದ ಉದ್ದೇಶದಿಂದ ಉತ್ತೇಜಿತರಾಗಿ ಜಾಗೃತರಾಗಲಾರಿರಾ? ಸ್ನೇಹಿತರೇ, ಹಿತಚಿಂತಕರೇ, ಶಿಕ್ಷಕರೇ…. ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ, ನಿಮಗೇನಾದರೂ ನಿಮ್ಮ ಸಹಜೀವಿಗಳಲ್ಲಿ ಅನುಕಂಪವಿದ್ದಲ್ಲಿ ನನ್ನ ಭಾರತೀಯ ಹೆಣ್ಣುಮಕ್ಕಳ ಅಳಲು, ಅದು ಎಷ್ಟೇ ಕ್ಷೀಣವಾಗಿದ್ದರೂ ನಿಮ್ಮ ಕಿವಿಗಳನ್ನು ತಲಪಲಾರದೇ? ಮಾನವೀಯತೆಯ ಹೆಸರಿನಲ್ಲಿ, ಎಲ್ಲದಕ್ಕಿಂತ ಹೆಚ್ಚಾಗಿ ದೇವರ ಹೆಸರಿನಲ್ಲಿ ನಾನು ನಿಮಗೆ ಕೋರಿಕೊಳ್ಳುತ್ತಿದ್ದೇನೆ, ಅಮೇರಿಕೆಯ ಸ್ತ್ರೀ ಪುರುಷರೇ, ಜಾತಿ ಜನಾಂಗ ಭಾಷೆ, ದೇಶಗಳನ್ನು ಗಣನೆಗೆ ತಂದುಕೊಳ್ಳದೇ ಶೀಘ್ರವಾಗಿ ನಿಮ್ಮ ಸಹಾಯ ಹಸ್ತವನ್ನು ಚಾಚಲಾರಿರಾ?” ಎಂದು ಅಂಗಲಾಚುತ್ತಾರೆ. ಇದು ಅವರ ಭಾರತೀಯ ಹೆಣ್ಣು ಮಕ್ಕಳ ಬಗೆಗಿನ ಅವರ ಕಳಕಳಿಯ ತೀವ್ರತೆಯನ್ನು ಬಯಲಾಗಿಸುತ್ತದೆ.

ಈ ಕೃತಿಯಲ್ಲಿ ಹಿಂದೂ ಧರ್ಮದ ಮೇಲ್ಜಾತಿಯ ಮಹಿಳೆಯರ ಸ್ಥಾನಮಾನಗಳನ್ನು ವಿವರವಾಗಿ ಅವರ ಬಾಲ್ಯ, ಯೌವನ, ಮದುವೆ, ವೈಧವ್ಯ, ತಾಯ್ತನದ ಮುಂತಾದ ಪರಿಕಲ್ಪನೆಗಳಡಿ ಪ್ರತ್ಯೇಕವಾಗಿ ವಿವರಿಸಿದ್ದಾರೆ. ಕಲಿತ ವಿದ್ಯಾವಂತ ಪಂಡಿತರೆನ್ನುವವರು ಮನುಧರ್ಮಶಾಸ್ತ್ರದಲ್ಲಿನ ತಮಗೆ ಲಾಭದಾಯಕವಾದ ಅಂಶಗಳನ್ನು ಮಾತ್ರ ಆಯ್ಕೆಮಾಡಿಕೊಂಡು ಪಿತೃಪ್ರಧಾನ ವ್ಯವಸ್ಥೆಯನ್ನು ಹೇಗೆ ಗಟ್ಟಿಗೊಳಿಸುತ್ತಾ ಬಂದರು ಎಂಬುದನ್ನು ಹೇಳುತ್ತಾರೆ. ಭಾರತೀಯ ಮೇಲುಜಾತಿಯ ಹೆಣ್ಣುಗಳ ಅನೇಕ ಘಟ್ಟಗಳನ್ನು ಮನುಸ್ಮೃತಿಯ ಆಧಾರದೊಂದಿಗೆ ಇಲ್ಲಿ ಚರ್ಚಿಸಲಾಗಿದೆ.
ಆಗಿನ ಕಾಲಕ್ಕೆ ಹೆಣ್ಣು ಶಿಶು ಹತ್ಯೆಯು ಧಾರ್ಮಿಕ ಪರವಾನಗಿಯನ್ನು ಪಡೆದುಕೊಂಡಿರದಿದ್ದರೂ, ಸಾಮಾನ್ಯವಾಗಿ ಸಾಮಾಜಿಕ ಶಿಕ್ಷೆಗೆ ಅರ್ಹವಾದುದಾಗಿರಲಿಲ್ಲ. ೧೮೦೨ ರ ಹೊತ್ತಿಗೇ ಬ್ರಿಟಿಷ್ ಸರ್ಕಾರವು ಇಂತಹ ಹೀನಕೃತ್ಯಗಳ ವಿರುದ್ಧ ಕಾನೂನನ್ನು ಜಾರಿಗೆ ತಂದಿತಾದರೂ, ನಲವತ್ತು ವರುಷಗಳ ನಂತರ ಮೇಜರ್ ಲಡ್ಲೋ ಎನ್ನುವ ಇಂಗ್ಲಿಷ್ ದಯಾಳು ಒಬ್ಬನು ವರದಕ್ಷಿಣೆ ಹಾಗೂ ಅದ್ಧೂರಿ ವಿವಾಹವನ್ನು ರದ್ದು ಪಡಿಸುವ ಕಾನೂನೊಂದನ್ನು ಉಪಸ್ವತಂತ್ರ ರಾಜ್ಯಗಳಲ್ಲಿ ಜಾರಿಗೆ ತಂದಿದ್ದನು. ಹೀಗಿದ್ದಾಗ್ಯೂ ರಮಾಬಾಯಿಯವರು ಬರೆಯುತ್ತಾರೆ ”ಅನಗತ್ಯ ಖರ್ಚು ವೆಚ್ಚಗಳನ್ನು ಕಾನೂನಿಂದ ತಡೆಯಬಹುದಾದರೂ ಶತ ಶತಮಾನಗಳಿಂದ ಜನರ ಹೃದಯದಲ್ಲಿ ಆಳವಾಗಿ ಬೇರೂರಿರುವ ಧಾರ್ಮಿಕ ಆಚರಣೆಗಳನ್ನು ಹೊರಗಿನ ಕಾನೂನುಗಳಿಂದ ನಿರ್ಮೂಲನ ಮಾಡಲು ಸಾಧ್ಯವಿಲ್ಲ” ಅವರು ಮುಂದುವರೆದು ಹೇಳುತ್ತಾರೆ “ ೧೮೭೦ ರ ಜನಗಣತಿಯ ಪ್ರಕಾರ ಅಮೃತಸರ ಶಹರದೊಳಗೆ ಮುನ್ನೂರು ಶಿಶುಗಳನ್ನು ಒಂದೇ ವರುಷದಲ್ಲಿ ತೋಳಗಳು ಕೊಂಡೊಯ್ದವು!! ಆಶ್ಚರ್ಯವೆಂದರೆ ಆ ಮುನ್ನೂರು ಶಿಶುಗಳೂ ಹೆಣ್ಣು ಶಿಶುಗಳೇ ಆಗಿದ್ದವು” ಎಂದು ಹೆಣ್ಣು ಶಿಶುಗಳ ಬಗ್ಗೆ ಇರುವ ಸಾಮಾಜಿಕ ಅನ್ಯಾಯವನ್ನು ಬಯಲಿಗೆಳೆಯುತ್ತಾರೆ. ಅಲ್ಲದೆ ಸ್ತ್ರೀಯರ ಸಂಖ್ಯೆ ಕಡಿಮೆಯಾಗಲು ಉಳಿದ ಪೂರಕ ಕಾರಣಗಳೆಂದರೆ ಸ್ತ್ರೀ ಸಂಬಂಧಿತ ರೋಗಗಳಿಗೆ ಸಿಕ್ಕ ಅನಾದರಣೆ ಮತ್ತು ಅಲಕ್ಷಿತ ಉಪಚಾರಗಳು, ನೈರ್ಮಲ್ಯದ ಕೊರತೆ ಇವುಗಳೇ ಆಗಿದ್ದುದನ್ನು ಚರ್ಚಿಸುತ್ತಾರೆ.
ಬಾಲ್ಯ ವಿವಾಹ ಪದ್ಧತಿ, ಸ್ತ್ರೀಯರ ವೈವಾಹಿಕ ಹಕ್ಕುಗಳು ಬ್ರಿಟಿಷ್ ರಾಜ್ಯದಲ್ಲಿಯೂ ಹೇಗೆ ಮನುವಿನ ಪೂರ್ವಗ್ರಹಗಳಿಂದ ತಪ್ಪಿಸಿಕೊಳ್ಳಲು ವಿಫಲವಾದವು ಎಂಬುದನ್ನು ಪ್ರಸಿದ್ಧ ರಖುಮಾಬಾಯಿಯ ಮೊಕದ್ದಮೆಯ ಮೂಲಕ ವಿವರಿಸುತ್ತಾರೆ. ರಮಾಬಾಯಿಯ ಹತ್ತಿರದ ಸಂಬಂಧಿಯಾದ ರಖುಮಾ ಬಾಲ್ಯದಲ್ಲಿಯೇ ವಿವಾಹಿತಳಾಗಿದ್ದರೂ ವಿದ್ಯಾವಂತಳಾಗಿ ವಯಸ್ಸಿಗೆ ಬಂದ ಹೊತ್ತಿಗೆ ಅವಿದ್ಯಾವಂತ ಪತಿಯೊಡನೆ ಸಂಸಾರಮಾಡಲು ನಿರಾಕರಿಸುತ್ತಾಳೆ. ಆಗ ಅವಳ ಪತಿಯಾದ ದಾದಾಜಿ ಬಿಕಜಿಯು ಅವಳ ವಿರುದ್ಧವಾಗಿ ಮೊಕದ್ದಮೆ ಹೂಡುತ್ತಾನೆ. ಪಿನ್ಹೆ ಎನ್ನುವ ನ್ಯಾಯವಾದಿಯು ರಖುಮಾಳ ಪರವಾಗಿ ತೀರ್ಪು ನೀಡುತ್ತಾನೆ. ಇದರಿಂದ ಕ್ರೋಧಗೊಂಡ ಸಂಪ್ರದಾಯವಾದಿ ಹಿಂದೂಗಳು ಹಣ ಸಂಗ್ರಹಿಸಿ ಮತ್ತೆ ಕೋರ್ಟಿನಲ್ಲಿ ದಾವೆ ಹೂಡುತ್ತರೆ. ‘ಕೇಸರಿ’ ಪತ್ರಿಕೆಯಂತೂ ಹಿಂದೂ ಧರ್ಮದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಬ್ರಿಟಿಷ್ ಸರ್ಕಾರವನ್ನು ಖಂಡಿಸುತ್ತದೆ. ಅಲ್ಲದೇ ಸ್ತ್ರೀ ಶಿಕ್ಷಣವೇ ಇದಕ್ಕೆಲ್ಲಾ ಮೂಲವೆಂದು ಜರೆಯುತ್ತದೆ. ಇದು ರಖುಮಾಳಿಗೆ ಬೆಂಬಲವಾಗಿದ್ದ ರಮಾಬಾಯಿಯಮೇಲೆ ತಿಲಕರು ಮಾಡಿದ ವೈಯಕ್ತಿಕ ಆಕ್ರಮಣವೇ ಆಗಿದ್ದಿತು.
ರಖುಮಾ ಮೊಕದ್ದಮೆಯನ್ನು ಸೋತ ಸಂದರ್ಭದಲ್ಲಿ ೧೮ ರ ಮಾರ್ಚ್ ೧೮೮೭ ರಂದು ರಮಾಬಾಯಿಯವರಿಗೆ ರಖುಮಾ ಬರೆದ ಪತ್ರವೊಂದರ ಉಲ್ಲೇಖಿಸುತ್ತಾರೆ “ ನಾಲ್ಕು ಸಾವಿರ ವರುಷಗಳ ಈ ಉತ್ಕೃಷ್ಟ ಪರಂಪರೆಯಲ್ಲಿ ಸುಶಿಕ್ಷಿತ ನಾಗರಿಕರೆಂದು ಹೇಳಿಕೊಳ್ಳುವ ಪುರುಷರು ಅಮಾನವೀಯವಾದ ಕಾನೂನನ್ನು ಎತ್ತಿಹಿಡಿದಿದ್ದಾರೆ. ನನ್ನನ್ನು ಒಲ್ಲದ ಗಂಡನ ಜೊತೆಗೆ ಬದುಕಲು ಒತ್ತಡವನ್ನು ಹೇರುತ್ತಿರುವುದಲ್ಲದೆ ಕೋರ್ಟಿನ ಖರ್ಚನ್ನೂ ತುಂಬಬೇಕೆಂದು ಹೇಳುತ್ತಿದ್ದಾರೆ. ನ್ಯಾಯ ಸಮಾನತೆಯನ್ನು ಕೊಚ್ಚಿಕೊಳ್ಳುವ ನಿಷ್ಪಕ್ಷಪಾತವಾದ ಬ್ರಿಟಿಷ್ ಸರಕಾರದಲ್ಲಿ ಅಲ್ಲವೇ ನಾವಿರುವುದು? ತಾನೂ ಒಬ್ಬ ಹೆಣ್ಣಾದ ವಿಕ್ಟೋರಿಯಾಳ ಪ್ರಜೆಗಳೇ ನಾವಲ್ಲವೇನು? ಎಂದು ಬರೆಯುತ್ತಾಳೆ.
ಇದಕ್ಕೆ ಪ್ರತಿಕ್ರಿಯೆಯಾಗಿ ರಮಾಬಾಯಿಯವರು “ಬ್ರಿಟಿಷ್ ರಾಜ್ಯವಾಗಲೀ, ಹಿಂದೂ ರಾಜ್ಯವಾಗಲೀ ಭಾರತದಲ್ಲಿ ಮಹಿಳೆಯರಿಗೆ ಮಾತ್ರ ಯಾವ ಭರವಸೆಗಳೂ ಇಲ್ಲವಾಗಿವೆ. ನಿರಾಧಾರಳಾದ ರಖುಮಾಬಾಯಿಯು ಶಕ್ತಿಶಾಲಿಯಾದ ಹಿಂದೂ ಧರ್ಮದ ವಿರುದ್ಧ, ಬ್ರಿಟಿಷ್ ಆಡಳಿತದ ವಿರುದ್ಧ, ೧೨೯ ಮಿಲಿಯ ಪುರುಷರ ವಿರುದ್ಧ ಹಾಗೂ ೩೩ ಕೋಟಿ ದೇವರುಗಳ ವಿರುದ್ಧ ದನಿಯೆತ್ತಿದಳು. ಈ ಎಲ್ಲವೂ ಒಟ್ಟಿಗೇ ಸೇರಿ, ಬಡಪಾಯಿಯಾದ ಅವಳನ್ನು ನುಚ್ಚು ನೂರು ಮಾಡಿ ನಾಶಮಾಡಿಬಿಟ್ಟವು. ಒಂಟಿ ಹೆಂಗುಸೊಬ್ಬಳನ್ನು ರಕ್ಷಿಸಲಾರದ್ದಕ್ಕೆ ಬ್ರಿಟಿಷ್ ಸರ್ಕಾರವನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ ಭಾರತದ ಪುರುಷರ ಜೊತೆ ಅದು ಮಾಡಿಕೊಂಡ ಒಪ್ಪಂದವನ್ನು ನಿಭಾಯಿಸಬೇಕಾಗಿದೆ. ಬ್ರಿಟಿಷರ ಲಾಭಬಡುಕತನಕ್ಕೆ ಅವರ ಆಳ್ವಿಕೆಗೆ ರಖುಮಾಳ ಜಯವು ಅಪಾಯಕಾರಿಯಾಗಿದ್ದಿತು. ನೂರು ಮಿಲಿಯ ಹೆಣ್ಣು ಮಕ್ಕಳ ಸವಲತ್ತು, ತ್ಯಾಗ ಬಲಿದಾನಗಳ ಬಲದಿಂದಲೇ ಬ್ರಿಟಿಷ್ ಸರ್ಕಾರಕ್ಕೆ ಜಯವಾಗಲಿ!” ಎಂದು ನೋವಿನಿಂದ ಕಟಕಿಯಾಡುತ್ತಾ ಬ್ರಿಟಿಷ್ ಸರ್ಕಾರ ಹಾಗೂ ಸಂಪ್ರದಾಯವಾದಿಗಳಿಬ್ಬರ ಪೊಳ್ಳುತನಗಳನ್ನೂ ಬಯಲು ಮಾಡುವುದರ ಹಿಂದೆ ರಮಾಬಾಯಿಯವರ ಎಣೆಯಿಲ್ಲದ ಧೈರ್ಯ, ಸಾಹಸಗಳ ಪರಿಚಯವಾಗುತ್ತದೆ. ಇದು, ಮಹಿಳಾಪ್ರಶ್ನೆ ಎನ್ನುವುದು ತನ್ನ ನೆಲೆಯನ್ನು ಹೇಗೆ ಕಳೆದುಕೊಳ್ಳುತ್ತಾ ಬಂದಿತು ಎನ್ನುವುದನ್ನೂ ಪ್ರತಿಬಿಂಬಿಸುತ್ತದೆ.






High Caste Hindu Woman – This book is available in Kannada. Translation: Dr D.A. Shanker. Publisher Navakarnataka
Wow good news. Thank you
ತುಂಬಾ ಚೆನ್ನಾಗಿದೆ, ಗಿರಿಜಾ. ಕೇಸರಿ ಪತ್ರಿಕೆಯ ಮೂಲಕ ತಿಲಕರು ಈ ನಿಲುವಿನ ಅರಿವಿರಲಿಲ್ಲ.
ತಿಲಕರು,ಅ ಗರ್ಕರ್
ಮುಂತಾದವರೆಲ್ಲ ರಮಾಬಾಯಿಯ ವಿರುದ್ಧ ಕತ್ತಿಮಸೆಯುತ್ತಿದ್ದರು