ಕಮರಿಹೋದ ನೆಲದ ಬಳ್ಳಿ : ಪಾಪು

ಸತೀಶ ಕುಲಕರ್ಣಿ, ಹಾವೇರಿ

ಪಾಟೀಲ ಪುಟ್ಟಪ್ಪ ಎಂಬ ಸಿಂಹ ಧ್ವನಿಯೊಂದು ಮೌನವಾಗಿದೆ. ಹಾವೇರಿ ನೆಲದ ಕುಡಿ ಪಾಪು ನಿಧನದ ಸುದ್ಧಿ ಇಡೀ ಕರ್ನಾಟಕವನ್ನು ಆವರಿಸಿದರೆ, ನಾಡ ತುಂಬ ಹಬ್ಬಿದ ನೆಲದ ಕರುಳ ಬಳ್ಳಿ ಬಾಡಿ ಬಿದ್ದಿದೆ ಎಂಬ ಭಾವ ಹಾವೇರಿ ನೆಲದವರಿಗೆ.

ಹುಟ್ಟೂರು ಕುರುಬುಗೊಂಡದಿಂದ ಆರಂಭವಾದ ಪಾಪುವಿನ ಪುಟ್ಟ ಪುಟ್ಟ ಹೆಜ್ಜೆಗಳು ಹಲಗೇರಿ ಬ್ಯಾಡಗಿ, ಹಾವೇರಿ ಧಾರವಾಡ, ಅಮೇರಿಕಾದ ಕ್ಯಾಲಿಫೋರ್ನಿಯಾ ಸುತ್ತಿ ಹೆಗ್ಗುರುತುಗಳ ಬಿಟ್ಟು ಹೋದದ್ದು ಈಗ ಇತಿಹಾಸ.

ಒಂದು ಸಾತ್ವಿಕ ಸಿಟ್ಟು, ಒಮ್ಮೊಮ್ಮೆ ಅಗತ್ಯಕ್ಕಿಂತ ಹೆಚ್ಚು ನಿಷ್ಠುರ ಸೆಡವು. ಅವರ ಮಾತು ಮಿಸೈಲ್ ಇದ್ದಂತೆ. ಶತೃ ಪಾಳಯಕ್ಕೂ ಬೀಳಬಹುದು, ಒಮ್ಮೊಮ್ಮೆ ಮಿತ್ರ ಪಾಳಯಕ್ಕೂ. ಪಾಪು ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಮಾತು ಹಾವೇರಿ ಜನರ ಬಾಯಲ್ಲಿ ಸದಾ ಇದೆ. ಹೊಸಮನಿ ಸಿದ್ಧಪ್ಪ, ಮಹಾದೇವ ಬಣಕಾರ, ಮೈಲಾರ ಮಹಾದೇವ ದಿಟ್ಟ ದನಿಗಳೊಂದಿಗೆ ಮತ್ತೊಂದು ದನಿ ಮೌನವಾಗಿದೆ.
ಹಾವೇರಿ ಎಂದರೆ ಪುಟ್ಟಪ್ಪನವರಿಗೆ ಎಲ್ಲಿಲ್ಲದ ವ್ಯಾಮೋಹ. ರಾಜಧಾನಿಯಿಂದ ಹುಬ್ಬಳ್ಳಿಗೆ ಹೊರಟರೆ, ಹಾವೇರಿ ಒಂದು ಕಡ್ಡಾಯದ ನಿಲ್ದಾಣ. ಯಾರದೋ ಮನೆಯ ಆತಿಥ್ಯ, ಮಾತು, ಹರಟೆ, ನಗು, ನಡುನಡುವೆ ಚಾಬೂಕಿನಂತಹ ಗುದ್ದು ಈ ಎಲ್ಲ ಗುಂಗಿಟ್ಟುಗಳು ಇನ್ನು ನೆನಪಿನ ಗಂಟುಗಳು.

ಹೋದಲ್ಲಿ ಬಂದಲ್ಲಿ ಹಾವೇರಿಯ ಮುನ್ಸಿಪಲ್ ಹೈಸ್ಕೂಲ್, ಅಲ್ಲಿಯ ಹುಚ್ಚಪ್ಪ ಬೆಂಗೇರಿ ಅವರು ಮತ್ತು ಶಿವರಾಂ ಕಾರಂತರು ಸಂಪಾದಿಸಿದ ಕನ್ನಡ ಕಸ್ತೂರಿ ಕೋಶ ಅದೆಲ್ಲಕ್ಕಿಂತ ಹೆಚ್ಚಾಗಿ ಹೊಸಮನಿ ಸಿದ್ಧಪ್ಪನವರ ಬಗ್ಗೆ ಮಾತನಾಡದಿದ್ದರೆ ಸಮಾಧಾನವೇ ಆಗುತ್ತಿರಲಿಲ್ಲ. ಇಡೀ ದೇಶದಲ್ಲಿ ತಾನು ಕಟ್ಟಿದ ಶಾಲೆಯ ಮುನ್ಸಿಪಲ್ ಹೈಸ್ಕೂಲ್‌ನ ಅಡಿಗಲ್ಲಿನಲ್ಲಿ ಹೆಸರೇ ಹಾಕಿಕೊಳ್ಳದ ನಿಜ ಅರ್ಥದ ಸಮಾಜ ಜೀವಿ ಎಂದು ಸಿದ್ಧಪ್ಪನವರನ್ನು ಹೊಗಳುತ್ತಿದ್ದರು.

ಪಂ. ಜವಹಾರಲಾಲ್ ನೆಹರೂ ಹಾವೇರಿಗೆ ಬಂದಾಗ ಸಮಾರಂಭವೊಂದಕ್ಕೆ ತಡವಾಗಿ ಬಂದ ಕಾರಣಕ್ಕಾಗಿ ತೆಕ್ಕೆಯಿಂದ ಹೊಡೆದದ್ದು, are you from moghal empire? ಎಂದು ಕೇಳಿದ್ದನ್ನು ಮತ್ತೆ ಮತ್ತೆ ಹೇಳುತ್ತಿದ್ದರು. ಜೊತೆಗೆ ಗಿಡದಿಂದ ಸಾಕ್ಷಿ ಹೇಳಿಸಿದ ಹಾವೇರಿ ನ್ಯಾಯದ ಬಗ್ಗೆ ಹಲವು ಬಾರಿ ವೇದಿಕೆಯಲ್ಲಿ ಪ್ರಸ್ತಾಪಿಸುತ್ತಿದ್ದರು.

ಇದೇ ನೆಲದ ಜಾನ ಪೀಠ ಪುರಸ್ಕೃತ ಡಾ.ವಿ.ಕೃ. ಗೋಕಾರ ಬಗ್ಗೆ ಇನ್ನಿಲ್ಲದ ಪ್ರೀತಿ. ಗೋಕಾಕರ ಹೆಸರಿನಲ್ಲಿ ಕರ್ನಾಟಕ ಸರಕಾರ ಸ್ಥಾಪಿಸಿದ ಡಾ.ವಿ.ಕೃ. ಗೋಕಾರ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾಗಿ ಹಲವು ನೆನಪಿಡುವ ಕೆಲಸಗಳನ್ನು ಮಾಡಿ ಹೋಗಿದ್ದಾರೆ. ಹಾವೇರಿ, ಧಾರವಾಡ ಹಾಗೂ ಸವಣೂರಿನಲ್ಲಿ ಆಳೆತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಗೋಕಾಕರನ್ನು ಅವರ ನೆಲದಲ್ಲಿಯೇ ಚಿರಕಾಲ ನೆನಪುಳಿಯುವಂತೆ ಮಾಡಿದ ಕೀರ್ತಿ ಪಾಪು ಅವರದು.

ಹಾವೇರಿಯ ಗುರುಭವನದೆದರು ಗೋಕಾಕರ ಮೂರ್ತಿಯನ್ನು ಪ್ರತಿಷ್ಠಾಪಿಸಿದಾಗ ಗುರಭವನದೆದರು ಕನ್ನಡದ ಗುರು ಗೋಕಾಕರ ಮೂರ್ತಿ ಎಂದು ಉದ್ಘರ್ಷಿಸಿದ್ದರು. ಅತ್ಯಂತ ಸ್ಮರಣೀಯ ಕೆಲಸವೆಂದರೆ ಮೂರುವರೆ ಕೋಟಿ ಅಂದಾಜಿನ ಗೋಕಾಕ್ ಭವನದ ಕೆಲಸ. ಈಗಾಲೇ ಅದು ಸಿದ್ಧವಾಗಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಳೆದ ವರ್ಷ ಉದ್ಘಾಟಿಸಿದ್ದರು. ಗೋಕಾಕ್‌ರ ಫೋಟೊ ಗ್ಯಾಲರಿ, ಅವರು ಬಳಸುತ್ತಿದ್ದ ಸಾಮಗ್ರಿಗಳ ಮ್ಯೂಜಿಯಂ, ಗೋಕಾಕ್‌ರ ಸಮಗ್ರ ಸಾಹಿತ್ಯ ಗ್ರಂಥಾಲಯ ಮುಂತಾದವನ್ನು ಪೂರ್ಣಗೊಳಿಸುವ ಕನಸು ಪಾಪು ಅವರದ್ದಾಗಿತ್ತು.

ಹಾವೇರಿಗೆ ಬಂದರೆ ಬಸೆಗಣ್ಣಿ ಕುಟುಂಬ, ಹಿರಿಯ ಲೇಖಕಿ ಸಂಕಮ್ಮ ಸಂಕಣ್ಣನವರ, ಎಸ್.ಎಫ್.ಎನ್. ಗಾಜೀಗೌಡ್ರ ಕಡ್ಡಾಯವಾಗಿ ಭೇಟಿಯಾಗಲೇಬೇಕು. ಸಂಗೂರಿನ ಬಸೆಗಣ್ಣಿ ಮನೆಯ ಕೆನೆ ಮೊಸರು ತಿಂದು ಹೋದರೆ ಅವರಿಗೆ ಸಮಾಧಾನ. ಹೊಸಮನಿ ಸಿದ್ಧಪ್ಪನವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ಹೋರಾಡಿದ ಗಾಜೀಗೌಡ್ರ ಬಗ್ಗೆ ವಿಶೇಷ ಪ್ರೀತಿ.

೧೯೮೩ ರಲ್ಲಿ ಉತ್ತುಂಗದಲ್ಲಿದ್ದ ಗೋಕಾಕ ಚಳವಳಿಯ ಸಂದರ್ಭದಲ್ಲಿ ಹಾವೇರಿಗೆ ಡಾ. ರಾಜಕುಮಾರರೊಂದಿಗೆ ಬಂದಾಗ ಇದೆ ನೋಡ್ರಿ ನಾ ಕಲತ್ ಸಾಲಿ ಎಂದು ಡಾ. ರಾಜ್ ಗೆ ಮುನ್ಸಿಪಲ್ ಹೈಸ್ಕೂಲ್ ತೋರಿಸಿದ್ದರು.
ಒಂದುಬಾರಿ ಇಲ್ಲಿಯ ಕೆ.ಇ.ಬಿ ನೌಕರರ ಸಂಘದ ಕಛೇರಿಗೆ ಭೇಟಿ ಕೊಟ್ಟು, ಅವರಣದಲ್ಲಿರುವ ಕಾರ್ಮಿಕ ಸ್ಮಾರಕವನ್ನು ನೋಡಿ ಸಾಂಸ್ಕೃತಿಕ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬೇಕಾದರೆ ಕೆ.ಇ.ಬಿ ಯಂತಹ ಕಾರ್ಮಿಕ ಸಂಘದಿಂದ ಇತರ ಸಂಘಗಳು ಕಲಿಯಬೇಕು ಎಂದು ಸಂದರ್ಶನ ಪುಸ್ತಕದಲ್ಲಿ ಬರೆದಿರುವರು.

ಹಾವೇರಿ ಒಡಲಿನೊಂದಿಗೆ ನೂರಾರು ನೆನಪುಗಳ ಸುರಳಿ ಬಿಟ್ಟು ಹೋದ ಪಾಪು ಇನ್ನಿಲ್ಲವೆಂದು ಊಹಿಸುವುದು ಅಸಾಧ್ಯ. ಏಕೀಕರಣ, ಗೋಕಾಕ್ ಚಳವಳಿ, ಮುನ್ಸಿಪಲ್ ಹೈಸ್ಕೂಲ್, ಸವಣೂರಿನ ಗೋಕಾಕ್ ಭವನ ಅನೇಕ ಹೆಜ್ಜೆಗುರುತುಗಳು ಈ ನೆಲದಲ್ಲಿವೆ.

 

‍ಲೇಖಕರು avadhi

March 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: