ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಿರಡ್ಡಿಯಂಥವರಿಗೆ ಒಂದು ಮಾತು ಹೇಳಬಯಸುತ್ತೇನೆ..

ಕೆ.ವಿ.ತಿರುಮಲೇಶ್

ಧಾರವಾಡದ `ಸಾಹಿತ್ಯ ಸಂಭ್ರಮ’ ಎಂಬ ಕಾರ್ಯಕ್ರಮದ ಬಗ್ಗೆ ಈಗಾಗಲೇ ಈ ವೇದಿಕೆಯಲ್ಲಿ ಸಾಕಷ್ಟು ಚರ್ಚೆಯಾಗಿದೆ. ಅನೇಕ ಮಂದಿ ಕನ್ನಡಿಗರು ಇಂಥ ಪ್ರತ್ಯೇಕತೆಯ (exclusivity)ವಿರುದ್ಧ ದನಿಯೆತ್ತಿದ್ದಾರೆ. ಇಲ್ಲಿ ಇನ್ನು ಸೇರಿಸುವಂಥದು ಏನೂ ಇಲ್ಲ.
ಆದರೂ ಗಿರಡ್ಡಿಯಂಥವರಿಗೆ ಒಂದು ಮಾತು ಹೇಳಬಯಸುತ್ತೇನೆ: ಆಧುನಿಕ ಸಾಹಿತ್ಯವಂದರೇ ಅದು ಸಮಾನತೆ, ಸ್ವಾತಂತ್ರ್ಯ, ಜನಪರತೆ ಮುಂತಾದ ಕೆಲವು ಮೌಲ್ಯಗಳ ಮೇಲೆ ನಿಂತುದು. ನೀವು ಸಾಹಿತ್ಯ್ದದಲ್ಲಿ ಇದನ್ನೆಲ್ಲ ಕೊಂಡಾಡುತ್ತೀರಿ; ಆದರೆ ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಳ್ಳುವುದಿಲ್ಲ!
ಬಡವರ ಬಗ್ಗೆ ಕತೆ ಬರೆಯುತ್ತೀರಿ; ಆದರೆ ಅವರಿಗೆ ಪ್ರವೇಶ ನಿರಾಕರಿಸುತ್ತೀರಿ. ದಲಿತರ, ಗ್ರಾಮೀಣರ ಬಗ್ಗೆ ನಾಟಕ ಬರೆಯುತ್ತೀರಿ. ಅಂಥ ನಾಟಕಗಳನ್ನು ಬೆಂಗಳೂರಿನಂಥ ಕೇಂದ್ರಗಳಲ್ಲಿ ದುಬಾರಿ ಪ್ರವೇಶ ಧನ ಇರಿಸಿ ಪ್ರದರ್ಶಿಸುತ್ತೀರಿ. ಅಲ್ಲಿಗೆ ಬರುವ ಮಂದಿ ಯಾರು? ನಿಮ್ಮಂಥವರೇ. ಬಡತನ, ಅನ್ಯಾಯ, ಅಸಮಾನತೆ ಮುಂತಾದುವು ನಿಮಗೆ ಕೇವಲ ಸಾಹಿತ್ಯ `ವಸ್ತು’ಗಳಾಗಿಬಿಟ್ಟಿವೆ! ಅವುಗಳನ್ನು ನಂತರ ಪ್ರದರ್ಶನಕ್ಕೆ ಇಡುತ್ತೀರಿ; ಅಥವಾ ಯುನಿವರ್ಸಿಟಿಗಳಲ್ಲಿ ಪಾಠ ಮಾಡುತ್ತೀರಿ. ಉದ್ಯೋಗವೂ ಆಯಿತು, ಪಾಪಪ್ರಜ್ಞೆಯೂ ತೊಳೆಯಿತು!
ದೇವನೂರು ಮಹಾದೇವರ ಕೃತಿಗಳನ್ನೂ ನೀವು ಬಿಟ್ಟಿಲ್ಲ. ಈಗ ಅದೇ ಕೆಲಸವನ್ನು ಜೈಪುರ ಮಾಡೆಲಿನಲ್ಲಿ ಮಾಡಬಯಸುತ್ತೀರಿ. ಜನರನ್ನು ದೂರವಿಟ್ಟು ನಡೆಸುವ ನಿಮ್ಮ `ಸಾಹಿತ್ಯ ಸಂಭ್ರಮ’ ಎಂಥದು? ಇದು ಕ್ಲಬ್ಬುಗಳಲ್ಲಿ ಶ್ರೀಮಂತರು ಹೋಗಿ ಕುಣಿಯುವಂತೆ. ನಿಜವಾದ ಸಾಹಿತ್ಯ ಸಂಭ್ರಮ ಎಲ್ಲರನ್ನೂ ಒಳಗೊಳ್ಳಬೇಕು–ಯಾರು ಬೇಕೋ ಅವರು ಬಂದರೆ ಅಲ್ಲವೇ ಅದೊಂದು ಸಂಭ್ರಮ?
ಅದಕ್ಕೇ ನನಗೆ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನವೇ ಇಷ್ಟವೆನಿಸುವುದು. ಅಲ್ಲಿ ದೊಡ್ಡ ಲೊಳಲೊಟ್ಟೆಗಳು (ಅರ್ಥಾತ್ ಸೈದ್ಧಾಂತಿಕ ಚರ್ಚೆಗಳು) ಸಂಭವಿಸದೆ ಇರಬಹುದು. ಆದರೆ ಜನಸಾಮಾನ್ಯರಿಗೆ ಪ್ರವೇಶವಿರುತ್ತದೆ. ಅವರೂ ಸಂಭ್ರಮದಲ್ಲಿ ಪಾಲುಗೊಳ್ಳುತ್ತಾರೆ. ನೀವು ಯಾರ ಕುರಿತು ಬರೆದು ಕವಿಗಳು, ಕತೆಗಾರರು, ನಾಟಕಗಾರರು ಆಗಿ ಸಾಹಿತಿಯೆಂದೂ ಚಿಂತಕರೆಂದೂ ಪ್ರಸಿದ್ಧಿ ಗಳಿಸಿದ್ದೀರೋ ಅವರೇ ಈ ಜನ. ಆದರ ನಿಮಗೆ ಕಣ್ಣು ಜ್ಞಾನಪೀಠ ಮತ್ತು ನೊಬೇಲ್ ಪ್ರಶಸ್ತಿಗಳ ಮೇಲೆ! ಬಾಯಲ್ಲಿ ದೇಸಿ, ಬಗಲಲ್ಲಿ ವಿದೇಶಿ.
ನಾನು ಕೆಲವು ಕಾಲ ಯೆಮೆನ್ ದೇಶದಲ್ಲಿ ಕಲಿಸುತ್ತಿದ್ದೆ. ಒಮ್ಮೊಮ್ಮೆ ಕ್ಲಾಸು ನಡೆಯುತ್ತಿದ್ದಾಗಲೇ ಕ್ಲಾಸಿನೊಳಕ್ಕೆ ಬಡಬಗ್ಗರು ಧನಸಹಾಯ ಕೋರಿ ಪ್ರವೇಶಿಸುತ್ತಿದ್ದರು. ಅವರನ್ನು ಯಾರೂ ಛೂ ಹೋಗಾಚೆ ಎಂದು ಗದರಿಸಿದ್ದಿಲ್ಲ. ವಿದ್ಯಾರ್ಥಿಗಳು, ಅಧ್ಯಾಪಕರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಇದು ನನಗೆ ಅಚ್ಚರಿ ಮೂಡಿಸಿದ್ದು ನಿಜ; ಆದರೆ ಜನಪ್ರೀತಿಯೆಂದರೆ ಇದುವೇ ಎಂದೆನಿಸಿತು. ನಮ್ಮ ದೇಶದ ಸಾಹಿತಿಗಳು ಬಾಯಲ್ಲಿ ಹೇಳುತ್ತಾರೆ; ಆದರೆ ಆಚರಣೆಯಲ್ಲಿ ತರುವುದಿಲ್ಲ.
ನೀವೇನೂ ನನ್ನನ್ನು ಈ ಸಂಭ್ರಮಕ್ಕೆ ಕರೆದಿಲ್ಲ. ಆದ್ದರಿಂದ ನನಗೆ ಮಾತಾಡುವ ಹಕ್ಕಿಲ್ಲ ಎಂದು ಹೇಳಬಹುದು. ಆದರೆ ನಾನು ಇಂಥ ಪ್ರತ್ಯೇಕವಾದಿ ಸೆಮಿನಾರುಗಳಿಗೆ ಹೋಗದೆ ವರ್ಷಗಳೇ ಕಳೆದಿವೆ–ಇನ್ನು ಹೋಗುವವನೂ ಅಲ್ಲ. ಕನ್ನಡ, ಕನ್ನಡಿಗರು ಎಂಬ ಭಾವನಾತ್ಮಕ ಸಂಬಂಧದಿಂದ ಮೇಲಿನ ಮಾತುಗಳನ್ನು ಹೇಳಿದ್ದೇನೆ.
ಇಂಥದೇ ಪ್ರತ್ಯೇಕತೆಯನ್ನು ನಾನು ಪುಸ್ತಕ ಪ್ರಕಾಶಕರಲ್ಲೂ ಕಂಡಿದ್ದೇನೆ. ಅಂಥದೊಂದು ಪ್ರಕಾಶನ ಸಂಸ್ಥೆಯೂ ಈ `ಸಂಭ್ರಮ’ದ ಹಿಂದೆ ಇದೆ. ಇನ್ನು ಜ್ಞಾನ ಪೀಠಿಗಳ ಬಗ್ಗೆ ನನ್ನಂಥ ಹುಲು ಮಾನವರು ಮಾತಾಡುವುದು ಒಳ್ಳೆಯದಲ್ಲ. ಇಂಥವರಿರುವ ಕಡೆ ಕಾಲಿರಿಸಲು ನಾನು ಭಯಪಡುತ್ತೇನೆ.
 
 

‍ಲೇಖಕರು G

21 January, 2013

8 Comments

  1. Radhika

    So very true Sir!

  2. P. Bilimale

    Simply wonderful Tirumalesh sir, I agree with you

  3. jagadishkoppa

    ಸಾರ್ ನಿಮ್ಮ ಬಗ್ಗೆ ಗೌರವ ಮೂಡುವುದು ಈ ಕಾರಣಕ್ಕಾಗಿ. ನಾನಾಗಲಿ, ನನ್ನ ಸಮಾನ ಮನಸ್ಕ ಗೆಳೆಯರಾಗಲಿ ಜ್ಞಾನಪೀಠಿಗಳಷ್ಟು ಪ್ರಬುದ್ದರಲ್ಲ ನಿಜ, ಆದರೆ ಯಾವುದು ವಿವೇಕ, ಯಾವುದು ಅವಿವೇಕ ಎಂಬುದನ್ನು ಗುರುತಿಸುವಷ್ಟು ಪ್ರಬುದ್ದತೆಯನ್ನು ಬೆಳಸಿಕೊಂಡಿದ್ದೇವೆ. ನಮ್ಮ ಪ್ರತಿಭಟನೆಗೆ ನಿಮ್ಮಂತಹ ಹಿರಿಯರ ಬೆಂಬಲ ಸಿಕ್ಕಿದ್ದು ನಮ್ಮ ನೈತಿಕತೆಯನ್ನು ಮತ್ತಷ್ಟು ಹೆಚ್ಚಿಸಿದೆ.
    ಇಂತಿ ಗೌರಪೂರ್ವಕವಾಗಿ, ಜಗದೀಶ್ ಕೊಪ್ಪ, ಧಾರವಾಡ.

  4. bmbasheer

    ಸರ್, ಇದು ನನ್ನೆದೆಯ ಮಾತೂ ಹೌದು.

  5. Ramesh Aroli

    ಸರ್ ಬರೋಬ್ಬರಿ ಹೇಳಿದ್ರಿ.ಅಲ್ರೀ ಸಾಂಸ್ಕೃತಿಕ ರಾಜಧಾನಿ ಅಂತ ಕರಿಯೋ ಊರಾಗ ಯಾರ ಸಾಹಿತ್ಯದ ಬಗ್ಗೆ ಯಾರು ಸಂಭ್ರಮ ಪಡಾಕ ಹೊಂಟಾರ ಅಂತ ತಿಳಿವಲ್ಲದು.ಕನ್ನಡ ಸಾಹಿತ್ಯ, ಚಳುವಳಿಗೆ ಎಷ್ಟೆಲ್ಲಾ ಹೊಸಬರನ್ನು ಪರಿಚಯ ಮಾಡಿ ಕೊಟ್ಟಂತ ನೆಲ ಈಗ ಅವರಿಂದ ರೊಕ್ಕ ಪಡೆದು ಸಂಭ್ರಮ ಮಾಡೋಣ ಅಂತ ಕರದರ ‘ಹಬ್ಬಕ್ಕ ಬರ್ರಿ,ಆದರ ಊಟ, ವಸತಿ ನಿಮ್ದ’ ಅಂದ್ಹಾoಗ ಐತಿ.ಇದು ಅಲ್ಲ ಬಿಡ್ರಿ.

  6. gangadhar kolgi

    sir, neevu helhiddu nannolagina matu anta anistide. sahitya andre janara naduve iruvantaddu. irbeku. nimma katuvada abhipraya ee samayadlli sariyagide

  7. prasad raxidi

    ಎಲ್ಲವನ್ನೂ ಮಾರಾಟದ ಸರಕಾಗಿ ನೋಡಲು ಪ್ರಾರಂಭಿಸಿದವರಿಂದ ಇನ್ನೇನನ್ನು ಬಯಸಲು ಸಾಧ್ಯ ತಿರುಮಲೇಶ್ ಸರ್…

  8. viddullata

    arthapoorna lekhana. aadare tirumalesh avaru u r anantamurtyyavarannu kaviyendu sthapisalu tinukadiddu sari iralilla.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading