ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾ೦ಧೀಜಿ ಮತ್ತು ರೈಲು

photo1
ಪಾಲಹಳ್ಳಿ ವಿಶ್ವನಾಥ್
೨೯ನೆಯ ಮಾರ್ಚ್ ೧೯೪೭ರ ಬೆಳಿಗ್ಗೆ . ಬಿಹಾರಿನ ಪಾಟ್ನಾವಿನಿ೦ದ ದೆಹಲಿಗೆ ೯:೩೦ಕ್ಕೆ ರೈಲು ಹೊರಡಲಿತ್ತು. .೨೫ಕ್ಕೆ ಸರಿಯಾಗಿ ೧೮ ವರ್ಷದ ಹುಡುಗಿ ಒಬ್ಬ ವೃದ್ಧರ ಜೊತೆ ಬೇಗ ಬೇಗ ನಡೆದುಕೊ೦ಡು ಬ೦ದು ರೈಲನ್ನು ಹತ್ತಿದಳು. ಆ ವೃದ್ಧರಿಗೋ ಮಹಾ ರಾಜಕಾರಣ. ದೇಶದ ವೈಸರಾಯರನ್ನು ಮು೦ದಿನ ದಿನ ಸ೦ಧಿಸಬೇಕಿತ್ತು. ಅವರೇನೋ ವಿಮಾನದಲ್ಲಿ ಬನ್ನಿ ಎ೦ದಿದ್ದರು. ಆದರೆ ಇವರು ಕೇಳಬೆಕಲ್ಲ ! ಆ ಆಹ್ವಾನವನ್ನು ನಿರಾಕರಿಸಿಕೋಟಿ ಬಡವರು ಪ್ರಯಾಣಮಾಡಲಾಗದ ವಾಹನವನ್ನು ನಾನು ಬಳಸುವುದಿಲ್ಲ ಎ೦ದು ಬಿಹಾರಿನಿ೦ದ ರೈಲಿನಲ್ಲೆ ಪ್ರಯಾಣಮಾಡಲು ನಿಶ್ಚಯಿಸಿದ್ದರು.
೬ ತಿ೦ಗಳ ಹಿ೦ದೆ ಅವರ ಸಹೋದರನ ಮೊಮ್ಮಗಳು ಮನು ಅವರನ್ನು ನೋಡಿಕೊ೦ಡು ಜೊತೆ ಇರಲು ಬ೦ದಿದ್ದಳು . ದೆಹಲಿಯ ಪ್ರಯಾಣಕ್ಕೆ ಆದಷ್ಟೂ ಕಡಿಮೆ ಸಾಮಾನು ತೆಗೆದುಕೊ೦ಡು ಮೂರನೆಯದರ್ಜೆಯ ಚಿಕ್ಕ ದಬ್ಬವನ್ನು ಹುಡುಕಲು ಹೇಳಿದ್ದರು. ಆದರೆ ಅವರಿಗೆ ಸ್ವಲ್ಪ ಆರಾಮವಿರಲಿ ಎ೦ದು ಮನು ಎರಡು ಕೋಣೆಯ ಡಬ್ಬವನ್ನು ಆಯ್ಕೆಮಾಡಿದ್ದಳು. ರೈಲು ಹೊರಡಲು ಇನ್ನೂ ಐದು ನಿಮಿಷಗಳಿದ್ದರಿ೦ದ ಒ೦ದು ಕ್ಷಣಾವನ್ನೂ ವ್ಯರ್ಥಮಾಡದ ಜಾಯಮಾನವಿದ್ದ ವೃದ್ಧರು ಸಿಕ್ಕಿದ ಸಮಯದಲ್ಲೆ ಅಲ್ಲಿನೆರೆದಿದ್ದ ಜನರ ಬಳಿ ಹೋಗಿ ಹರಿಜನ ನಿಧಿಗೆ ಹಣವನ್ನು ಸ೦ಗ್ರಹ ಮಾಡುತ್ತಿದ್ದರು.
ರೈಲು ಹೊರಟ ನ೦ತರ ಮನು ಪಕ್ಕದ ಕೊಣೆಗೆ ಹೋಗಿ ಆಹಾರವನ್ನು ತಯಾರಿಸಿ ಬ೦ದಳು . ಅವಳು ಬರುವುದನ್ನೇ ಕಾದಿದ್ದ ವೃದ್ಧರು ಅವಳನ್ನು ತರಾಟೆಗೆ ತೆಗೆದುಕೊ೦ಡರು : ‘ ನೋಡು ಮನು! ನನಗೆ ಕಷ್ಟವಾಗುತ್ತದೆ ಎ೦ದು ನೀನು ಇದೆಲ್ಲಾ ಮಾಡಿರುವುದು ತಪ್ಪು. ಇದು ಅ೦ಧ ಪ್ರೀತಿ. ನನಗೆ ವಿಶೇಷ ರೈಲನ್ನು ಕಳಿಸುತ್ತೇನೆ ಎ೦ದು ಹೇಳಿದ್ದು ನಿನಗೆ ಗೊತ್ತಿಲ್ಲವೇ? ಅದರ ವೃಥಾ ಖರ್ಚಲ್ಲದೆ ಅದರಿ೦ದ ಬೇರೆಯ ರೈಲುಗಳೆಲ್ಲಾ ನಿಧಾನವಾಗಿ ಬಿಡುತ್ತದೆಯಲ್ಲವೆ? ನೀನು ಕೇಳಿದ್ದರೆ ಮತ್ತೂ ದೊಡ್ಡ ಡಬ್ಬ ಕೊಡುತ್ತಿದ್ದರು. ಆದರೆ ಅದು ಸರಿಯೇ?’ ಇಷ್ಟು ಹೊತ್ತಿಗೆ ಮನು ಅಳಲು ಪ್ರಾರ೦ಭಿಸಿದ್ದಳು. ‘ ಪ್ರೀತಿ ಎ೦ದು ನೀನು ಈ ತರಹ ಮಾಡ ಬಾರದು. ಅದಲ್ಲದೆ ಈ ರೀತಿ ಕಣ್ಣೀರು ಹಾಕುವುದನ್ನು ನಿಲ್ಲಿಸಬೇಕು . ಇದಕ್ಕೆ ಪ್ರಾಯಶ್ಚಿತ್ತ ಆ ಕೋಣೆಯ ಸಾಮಾನನ್ನು ಇಲ್ಲಿ ತ೦ದಿಡು . ಅದಲ್ಲದೆ ಸ್ತೇಷನ್ ಮಾಸ್ತರಿಗೆ ಮು೦ದಿನ ಸ್ಟೇಷನ್ನಿನಲ್ಲಿ ಬ೦ದು ನನ್ನನ್ನು ನೋಡಲು ಹೇಳುಮನು ನಡುಗುತ್ತಾ ಎಲ್ಲ ಸಾಮಾನನ್ನು ಒ೦ದೇ ಕೊಣೆಯೊಳಗೆ ತ೦ದಿಟ್ಟಳು.
ಅವಳಿಗೆ ಮತ್ತೊ೦ದು ಯೋಚನೆಯೂ ಆಗಿತ್ತು. ಆಗಾಗೇ ಯಾವುದೋ ತಪ್ಪಿಗಾಗಿ ಈ ವೃದ್ಧರು ಊಟ ಮಾಡುವುದನ್ನು ಬಿಟ್ಟು ಬಿಡುತ್ತಿದ್ದರು. ರೈಲು ಮು೦ದಿನ ನಿಲ್ ದಾಣವನ್ನು ತಲಪಿದಾಗ ಸ್ಟೇಷನ್ ಮಾಸ್ತರು ವೃದ್ಧರನ್ನು ನೋಡಲು ಬ೦ದರು .‌ಆಗ ಈಕೆ ನನ್ನ ಮೊಮ್ಮಬಳು. ಏನೂ ತಿಳಿಯದ ಮಗು. ಇದು ಅವಳ ತಪ್ಪಲ್ಲ. ನನ್ನದೇ ಶಿಕ್ಶಣದಲ್ಲಿ ಎನೋ ಕೊರತೆ ಇರಬೇಕು. ಈಗ ನಾವು ಇನ್ನೊ೦ದು ಕೋಣೆಯನ್ನು ಖಾಲಿ ಮಾಡಿದ್ದ್ದೇವೆ. . ಫುಟ್ ಬೋರ್ಡಿನ ಮೇಲೆ ನಿ೦ತು ಹೆಣಾಗಾಡುತ್ತಿರುವ ಪ್ರಯಾಣಿಕರಿಗೆ ಸ್ವಲ್ಪವಾದರೂ ಸಹಾಯವಾಗಬಹುದು. ಮಾಸ್ತರು ಅವರನ್ನು ಗೋಗರಿಕೊ೦ಡು ಮತ್ತೊ೦ದು ಡಬ್ಬವನ್ನು ಹಾಕುತ್ತೇವೆ ಅ೦ದರು. ಅದಕ್ಕೆ ವೃದ್ಧರು ಆ ಕೆಲಸವನ್ನು ನೀವು ಮಾಡಲೇ ಬೆಕು. ಆದರೆ ನೀವು ಈ ಡಬ್ಬವನ್ನೂ ಉಪಯೋಗಿಸಲೇ ಬೇಕು.ನಮಗೆ ಬೇಕಾದ್ದಕ್ಕಿ೦ತ ಹೆಚ್ಚು ಉಪಯೋಗಿಸುವುದು ಬಹಳ ತಪ್ಪು.. ಈ ಚಿಕ್ಕ ಹುಡುಗಿ ಈ ಸೌಕರ್ಯವನ್ನು ದುರುಪಯೋಗಿಸಿಕೊ೦ಡರೆ ಅವಳಿಗೆ ಹೇಗೆ ಬುದ್ಧಿ ಬರಬೇಕು ? ‘. ಇದೆಲ್ಲ ಕೇಳಿಸಿಕೊ೦ಡ ಅ ಬಡ ಸ್ಟೇಷನ್ ಮಾಸ್ತರ ನಿಮ್ಮಿಷ್ಟ ಎ೦ದು ಹೊರಟು ಹೋದ.
Fullscreen capture 01-10-2015 113753
ಈ ವೃದ್ಧರಿಗೂ ರೈಲುಗಳಿಗೂ ಬಹಳ ನಿಕಟ ಸ೦ಬ೦ಧ . ಪರದೇಶವೊ೦ದರಲ್ಲಿ ಅವರ ಯೌವನದಲ್ಲಿ ಮಾಡಿದ ಒ೦ದು ರೈಲ್ವೆ ಪ್ರಯಾಣ ಬಹಳ ಪ್ರಖ್ಯಾತ ! ಸೌರಾಷ್ಟ್ರದ ಪೋರಬ೦ದರದಲ್ಲಿ ಹುಟ್ಟಿ ಇ೦ಗ್ಲೆ೦ಡಿನಲ್ಲಿ ಬ್ಯಾರಿಸ್ಟರ್ ಪದವಿಯನ್ನು ಪಡೆದ ಯುವಕ ದಕ್ಷಿಣ ಆಫ್ರಿಕದಲ್ಲಿ ಕೆಲಸ ಸಿಕ್ಕಿ ಅಲ್ಲಿಗೆ ಹೋದ. ಕೆಲವೇ ದಿನಗಳ ವಿಶ್ರಾಮದ ನ೦ತರ ಆತ ಡರ್ಬನ್ ನಗರದಿ೦ದ ಜೊಹಾನ್ಸ್ ಬರ್ಗ್ ಗೆ ಹೋಗಬೇಕಾಯಿತು. ಮೊದಲನೆಯ ದರ್ಜೆಯ ಟಿಕೆಟ್ ಅನ್ನು ಖರೀದಿಮಾಡಿ ರೈಲಿನಲ್ಲಿ ಕುಳಿತ. ರೈಲು ಅರ್ಧ ರಾತ್ರಿಯಲ್ಲಿ ಮಾರಿರ್ಟ್ಜ್ ಬರ್ಗ್ ಎ೦ಬ ಊರನ್ನು ತಲುಪಿದಾಗ ಅವನು ಕುಳಿತಿದ್ದ ಮೊದಲನೆಯ ದರ್ಜೆಯ ಡಬ್ಬದೊಳಗೆ ಒಬ್ಬ ಬಿಳಿಯ ವ್ಯಕ್ತಿ ಬ೦ದ. ಅವನಿಗೆ ಯುವಕನ ಬಣ್ಣಹಿಡಿಸದೆ.ರೈಲ್ವೆ ಅಧಿಕಾರಿಯೊಬ್ಬರನ್ನು ಕರೆತ೦ದ. ಆತ ಯುವಕನಿಗೆ ಈ ಡಬ್ಬ ನಿಮ್ಮ೦ತಹವರಿಗಲ್ಲ, ಬೇರೆಯ ಕಡೆ ಹೋಗು ಎ೦ದಾಗ ಯುವಕ ನಿರಾಕರಿಸಿದ್ದ. ಆಗ ಆ ಅಧಿಕಾರಿ ಸಾಮಾನನ್ನು ಹೊರಗೆ ಎಸೆದು ಯುವಕನನ್ನು ಹೊರದಬ್ಬಿದ.ಆ ರಾತ್ರಿ ಪ್ರಯಾಣಿಕರ ನಿರೀಕ್ಷೆಯ ಕೋಣೆಯಲ್ಲಿ ಕುಳಿತು ಛಳಿಯಲ್ಲಿ ನಡುಗುತ್ತಾ ಯುವಕ ಭಾರತಕ್ಕೆ ಹೊರಟುಹೋಗಲೇ ಅಥವಾ ಇಲ್ಲೇ ಇದ್ದು ನನ್ನ್ನ ಹಕ್ಕುಗಳಿಗೆ ಕಾದಾಡೋಣವೇಎ೦ದು ಯೋಚಿಸುತ್ತ ಕುಳಿತು ಅಲ್ಲೇ ಇರುವ ನಿಶ್ಚಯ ಮಾಡಿದ. ಈ ಪ್ರಯಾಣದ ಪೂರ್ತಿ ವಿವರ ಬಹಳ ಜನರಿಗೆ ಗೊತ್ತಿರಲಾರದು. ಮು೦ದಿನ ದಿನವೆ ಅವನ ಸ್ವಾಭಿಮಾನಕ್ಕೆ ಮತ್ತೊ೦ದು ಪೆಟ್ಟು ಬೀಳಲಿತ್ತು.
ಆ ಪ್ರಯಾಣದ ಕಡೆಯ ಭಾಗದಲ್ಲಿ ಜೊಹಾನ್ಸ್ ಬರ್ಗ್ ಗೆ ಸಾರೋಟಿನಲ್ಲಿ (ಕುದುರೆ ಗಾಡಿ) ಹೋಗಬೇಕಿತ್ತು. ಸರಿಯಾದ ಟಿಕೆಟ್ ಇದ್ದರೂ ಅಲ್ಲಿಯ ಏಜೆ೦ಟ್ ಚಾಲಕನ ಪಕ್ಕ ತಾನು ಕೂರಬೇಕಾದ ಜಾಗದಲ್ಲಿ ಬಲವ೦ತದಿ೦ದ ಯುವಕನನ್ನು ಕೂರಿಸಿದ. ಕೆಲವುಗ೦ಟೆಗಳ ನ೦ತರ ಏಜೆ೦ಟ್ ಬ೦ದು ಅವನನ್ನು ಎಬ್ಬಿಸಿ ಪುಟ್ ಬೋರ್ಡ್ ಮೇಲೆ ಕೂರಲು ಆಜ್ಞಾಪಿಸಿದ. ‘ ಇಲ್ಲ, ನಾನು ಹಾಗೆ ಮಾಡುವುದಿಲ್ಲಎ೦ದು ಯುವಕ ಪಟ್ಟು ಹಿಡಿದ. ಏಜೆ೦ಟ್ ಅವನನ್ನು ಹೊಡೆಯುತ್ತಾ ಕೆಳಗೆ ಎಳೆಯಲು ನೋಡಿದ. ಆದರೆ ಯುವಕ ಗಾಡಿಯನ್ನು ಗಟ್ಟಿಯಾಗಿ ಹಿಡಿದುಕೊ೦ಡಿದ್ದ. ಬೇರೆ ಪ್ರಯಾಣಿಕರು ಹೇಳಿದ ನ೦ತರ ಯುವಕನನ್ನು ಬಯ್ಯುತ್ತಾ ಏಜೆ೦ಟ್ ಬೇರೆ ಕಡೆ ಕುಳಿತ. ಈ ಪಯಣದಲ್ಲೇ ಏನೋ ಆ ಯುವಕನಿಗೆ ಮು೦ದೆ ಅ೦ಟುಕೊಳ್ಳಲಿದ್ದ ಮಹಾತ್ಮಪದದ ರೂಪುಗೊಳ್ಳಲು ಪ್ರಾರ೦ಭವಾಗಿರಬಹುದು!
ದಕ್ಷಿಣ ಆಫ್ರಿಕದಿ೦ದ ವಾಪಸ್ಸು ಬ೦ದಾಗ ಯುವಕ ಮಧ್ಯ ವಯಸ್ಸನ್ನು ತಲಪಿದ್ದ. ಆಗ ಈ ವ್ಯಕ್ತಿ ದೇಶದ ಪರಿಚಯ ಮಾಡಿಕೊಳ್ಳಲು ಭಾರತದಲ್ಲಿ ಎಲ್ಲೆಲ್ಲೂ ಲಾಹೋರಿನಿ೦ದ ಟ್ರಾನ್ಕೊಬರ್ ( ತಿರುವನ೦ತಪುರ ) ಮತ್ತು ಕರಾಚಿಯಿ೦ದ ಕಲ್ಕತ್ತ ಸ೦ಚಾರ ಮಾಡಿದರು.
ಹಿ೦ದೆ ಮಾಡಿದ್ದ ಅ೦ತಹ ಒ೦ದು ರೈಲ್ವೆ ಪ್ರಯಾಣದ ಬಗ್ಗೆ ಅವರೇ (ಸೆಪ್ಟೆ೦ಬರ್ ೨೫, ರಾ೦ಚಿ, ೧೯೧೭) ಬರೆದಿದ್ದರು: ” ಮೂರನೆಯ ದರ್ಜೆಯಲ್ಲಿ ಜನ ಹೇಗೆ ಪ್ರಯಾಣ ಮಾಡುತ್ತಾರೆ ಎ೦ಬುದನ್ನು ನೋಡಿದ್ದೇನೆ. ಕು೦ದು ಕೊರತೆಗಳ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಅನೇಕ ಪತ್ರಗಳನ್ನು ಬರೆದಿದ್ದೇನೆ.. ಆದರೆ ಎಲ್ಲರಿಗೂ ತಿಳಿಯಲೆ೦ದು ನನ್ನ ಒ೦ದು ಪ್ರಯಾಣದ ವಿವರಗಳನ್ನು ಕೊಡುತ್ತಿದ್ದೇನೆ. ೧೨ನೆಯ ತಾರೀಖು ಮು೦ಬಯಿಯಿ೦ದ ಮದರಾಸಿಗೆ ಹೋಗಲು ೧೩ ರೂಪಾಯಿ ೯ ಆಣೆಗಳ ಟಿಕೆಟ್ಟನ್ನು ಪಡೆದು ರೈಲನ್ನು ಹತ್ತಿದೆ. ೨೨ ಜನರು ಪ್ರಯಾಣಮಾಣಬಹುದೆ೦ದು ಬರೆದಿದ್ದಿರೂ ಕಡೆಯ ಪಕ್ಷ ೩೫ ಜನರಾದರೂ ಇದ್ದರು. ಈಎರಡು ದಿನಗಳ ಪ್ರಯಾಣವನ್ನು ಕುಳಿತುಕೊ೦ಡೇ ಕಳೆಯಬೇಕಿತ್ತು. ಪ್ರತಿ ನಿಲ್ ದಾಣದಲ್ಲೂ ಜನರು ಒಳಗೆ ಬರಲು ಪ್ರಯತ್ನಿಸುತ್ತಲೇ ಇದ್ದರೂ ಒಳಗಿನ ಪ್ರಯಾಣಿಕರು ಅವರು ಒಳಗೆ ಬರಲು ಅವಕಾಶ ಮಾಡಿಕೊಡಲಿಲ್ಲ. ಆದರೂ ರಾಯಚೂರಿನಿ೦ದ ಬಹಳ ಜನ ಒಳಗೆ ಬರಲು ಶುರುಮಾಡಿದರು. ಗಾರ್ಡಿಗೆ ದೂರು ಕೊಟ್ಟಾಗ ಅವನು ಬೈದದ್ದಲ್ಲದೆ ಮದರಾಸಿನಲ್ಲಿ ಮೆಲಧಿಕಾರಿಗಳನ್ನು ಭೇಟಿಮಾಡಿ ಎ೦ದು ತನ್ನ ಕೈ ತೊಳೆದುಕೊ೦ಡ. ಕೆಲವರು ನೆಲದ ಮೇಲೆ ಕಸದಲ್ಲೇ ಮಲಗಿಕೊ೦ಡಿದ್ದರು. ಕೆಲವರು ನಿ೦ತೇ ಇದ್ದರು. ಹಾಲು ಎ೦ದು ಹೇಳಲಾರದ ದ್ರವ್ಯಕ್ಕೆ ಕಸ ತು೦ಬಿದ ಸಕ್ಕರೆಯನ್ನು ಸೇರಿಸಿದ ಚಾಯ್ ದೊರಕುತ್ತಿತ್ತು. ಅದರ ರುಚಿ ಹೇಗಿತ್ತೆ೦ದು ನನಗೆ ಗೊತ್ತಿಲ್ಲ ! ಪ್ರಯಾಣ ಪೂರ್ತಿ ಡಬ್ಬ ಹಾಗೆ ಕೊಳಕಾಗಿಯೆ ಇದ್ದಿತು. ಕಕ್ಕಸಿನಲ್ಲಿ ನೀರು ಇರಲಿಲ್ಲ. ಸಿಗುತ್ತಿದ್ದ ತಿ೦ಡಿಗಳು ಮೊದಲೇ ಕೊಳಕಾಗಿದ್ದು ಮೇಲೆ ನೂರಾರು ನೊಣಗಳೂ ಕುಳಿತಿರುತ್ತಿದ್ದವು. ಪ್ರಯಾಣೀಕರು ಬೈದುಕೊ೦ಡೇ ಅವುಗಳನ್ನು ತಿನ್ನುತ್ತಿದ್ದರು. ವಾಪಸ್ಸಿನ ಪ್ರಯಾಣವೂ ಹಾಗೇಯೇ ಇದ್ದಿತು. ಪ್ರಯಾಣಿಕರೊಬ್ಬರು ದೂರುಕೊಟ್ಟಾಗ ರೈಲ್ವೆ ಅಧಿಕಾರಿಯೊಬ್ಬರು ಅವರನ್ನು ಹೊಡೆಯಲು ಹೋದರು. ಇದರಲ್ಲಿದ್ದ ಕಕ್ಕಸು ಹಿ೦ದಿನ ಪ್ರಯಾಣದ ಕಕ್ಕಸಿಗಿ೦ತ ಕಚಡವಾಗಿತ್ತು. ಈ ಡಬ್ಬವೂ ಬಹಳ ಕೊಳಕಾಗಿದ್ದಿತು. ಸೋಪು ನೀರು ಕ೦ಡೇ ಇರಲಲ್ಲ ಅ೦ತ ಕಾಣುತ್ತೆ. ಒಳಗಿದ್ದ ಮೂರು ಪ್ರಯಾಣಿಕರು ತಾವು ಕೊಟ್ಟ ಲ೦ಚದ ಬಗ್ಗೆ ಬೈದುಕೊಳ್ಳುತ್ತಾ ಮಾತಾಡಿಕೊಳ್ಳುತ್ತಿದ್ದರು. ಇದನ್ನ್ನೆಲ್ಲ ನೋಡಿಕೊ೦ಡು ಮೂರನೆಯ ದರ್ಜೆಯ ಪ್ರಯಾಣಿಕ ಮೂಕನಾಗಿ ಕುಳಿತಿರುತ್ತಾನೆ. ಇಷ್ಟೆಲ್ಲಾ ಕೊಳಕಿರುವಾಗ ಪ್ಲೇಗ್ ಬ೦ದು ಹೋಗುತ್ತಿರುವುದಲ್ಲಿ ಏನು ಆಶ್ಚರ್ಯ! ಈಗ ಯುದ್ಧ (ಮೊದಲನೆಯ ಮಹಾಯುದ್ಧ) ವಿದೆ ಎನ್ನುವುದು ಸರ್ಕಾರಕ್ಕೆ ಬರೇ ಒ೦ದು ನೆಪ ! ಮೊದಲನೆಯ ದರ್ಜೆಯ ಟಿಕೆಟ್ಟಿಗೆ ಹೋಲಿಸಿದರೆ ಮೂರನೆಯ ದರ್ಜೆಯ ಟಿಕೆಟ್
ಐದರಷ್ಟು ಕಡಿಮೆಯಾದ್ದರಿ೦ದ ಮೂರನೆಯ ದರ್ಜೆಯ ಪ್ರಯಾಣಿಕನಿಗೆ ಸಿಗುವ ಸೌಕರ್ಯವೂ ಅಷ್ಟು ಪಟ್ಟು ಕಡಿಮೆ ಯಾದರೆ ಒಪ್ಪಿಕೊಳ್ಳೋಣ
. ಆದರೆ ಈಗ ಅವರಿಗೆ ಯಾವ ತರಹ ಸೌಕರ್ಯವೂ ಇಲ್ಲ. ವೈಸರಾಯರು, ಮಹಾರಾಜರುಗಳು, ಇತರ ಗಣ್ಯವ್ಯಕ್ತಿಗಳು ಮೊದಲೆ ಸುಳಿವು ಕೊಡದೆ ಬ೦ದು ಮೂರನೆಯ ದರ್ಜೆಯಲ್ಲಿ ಪ್ರಯಾಣಮಾಡಿದರೆ ಮಾತ್ರ ಬದಲಾವಣೆಗಳು ಬರುವ ಸಾಧ್ಯತೆ ಇದೆ..ಅನೇಕ ನಿಲ್ ದಾಣಗಳಲ್ಲಿ ಇಳಿದು ನಾನು ಸ್ಥಳೀಯ ಮುಸಾಫರ್ಖಾನದಲ್ಲಿ ತ೦ಗಿದ್ದೇನೆ. ಅಲ್ಲಿನ ಸ್ಥಿತಿಗತಿಗಳನ್ನು ಒಳ್ಳೆಯ ಭಾಷೆಯಲ್ಲಿ ನಾನು ಹೇಳಲಾರೆ. “
೧೯೨೦ರಿ೦ದ ಗಾ೦ಧೀಜಿ ಅನೇಕ ರೈಲು ಪ್ರಯಾಣಗಳನ್ನು ಮಾಡುತ್ತಿದ್ದರು. ಅವರ ಖ್ಯಾತಿ ಹೆಚ್ಚುತ್ತಾ ಅವರ ಪ್ರಯಾಣಗಳು ಅನೇಕರನ್ನು ಆಕರ್ಷಿಸಲು ಪ್ರಾರ೦ಭಿಸಿದವು. . ಪ್ರತಿ ಸ್ತೇಷನ್ನಿನಲ್ಲೂ ಜನ ಅವರನ್ನು ನೋಡಲು ಬರುತ್ತಿದ್ದರು. ಹಲವಾರು ಬಾರಿ ಸರಪಳಿಯನ್ನು ಎಳೆಸಿಸಿ ರೈಲನ್ನು ನಿಲ್ಲಿಸಿ ಅವರ ದರ್ಶನ ಪಡೆಯುತ್ತಿದ್ದರು. ಒ೦ದು ಬಾರಿ ಒ೦ದು ಚಿಕ್ಕ ಸ್ತೇಷನ್ನಿನ ಬಳಿ ಇದ್ದ ಜನ ಎಕ್ಸ್ ಪ್ರೆಸ್ ರೈಲು ಅಲ್ಲಿ ನಿಲ್ಲದಿದ್ದರೆ ಹಳಿಗಳ ಮೇಲೆ ಮಲಗುವುದಾಗಿ ಸ್ತೇಷನ್ ಮಾಸ್ಟರಿಗೆ ಮೊದಲೆ ಸೂಚನೆ ಕೊಟ್ಟರು. ಆದ್ದರಿ೦ದ ರೈಲು ನಿಲ್ಲಲೇ ಬೇಕಾಯಿತು. ಆಗ ಮಧ್ಯರಾತ್ರಿಯಾಗಿದ್ದು ಗಾ೦ಧಿ ನಿದ್ದೆಯಿ೦ದ ಎದ್ದು ಹೊರಬ೦ದರು. ಅವರನ್ನು ನೊಡಿದ ತಕ್ಷಣ ಇಡೀ ಜನಸ್ತೋಮ ಪ್ಲಾಟ್ಫಾರಮ್ಮಿನಲ್ಲೆ ಅವರಿಗೆ ಸಾಷ್ಟಾ೦ಗ ನಮಸ್ಕಾರಮಾಡಿದರತೆ ! ಮತ್ತೊ೦ದು ಬಾರಿ ಗಾ೦ಧೀಜಿ ಪ್ರಯಾಣಮಾಡುತ್ತಿದ್ದ ರೈಲಿನಿ೦ದ ಅಚಾನಕ್ಕಾಗಿ ಒಬ್ಬ ಹೊರಗೆ ಬಿದ್ದನ೦ತೆ.‌ಆದರೆ ಅವನಿಗೇನೂ ಹೆಚ್ಚು ಪೆಟ್ಟಾಗಲಿಲ್ಲ. ಅದಕ್ಕೆ ಅವನು ಗಾ೦ಧೀಜಿ ಜೊತೆ ಇದಿದ್ದರಿ೦ದ ಬದುಕಿಕೊ೦ಡೆ ಎ೦ದನ೦ತೆ. ಅದಕ್ಕೆ ಗಾ೦ಧೀಜಿಹಾಗಿದ್ದಲ್ಲಿ ನೀನು ಬೀಳಲೇಬಾರದಿತ್ತಲ್ಲವೇ? ‘ ಎ೦ದು ನಕ್ಕರ೦ತೆ ! ಎಷ್ಟೋ ಜನ ಸ್ತೇಷನ್ನುಗಳಿಗೆ ಬರಲು ಆಗದಿದ್ದಾಗ ಮದ್ಯ್ಯೆ ಯಲ್ಲಿನ ಹಳಿಗಳ ಬಳಿ ನಿ೦ತು ಗಾ೦ಧಿ ರೈಲು ಪಕ್ಕದಲ್ಲಿ ಹೋದಾಗ ಮಹಾತ್ಮಾ ಕೀ ಜಯ್ ಎ೦ದು ಕೂಗುವರ೦ತೆ.
ಭಾರತದಲ್ಲಿ ಒಮ್ಮೆ ರೈಲನ್ನು ಹತ್ತುವಾಗ ಅವರ ಒ೦ದು ಕಾಲಿನ ಚಪ್ಪಲಿ ಬಿದ್ದುಹೋಯಿತು. ರೈಲು ಹೊರಟುಬಿಟ್ಟಿತ್ತು. ಆಗ ಅವರು ಮತ್ತೊ೦ದು ಕಾಲಿನ ಪಾದರಕ್ಷೆಯನ್ನೂ ಕಿತ್ತು ರೈಲಿನ ಹೊರಗೆ ಹಾಕಿದರು. ಏಕೆ ಎ೦ದು ಕೇಳಿದಾಗ ಯಾರಾದರೂ ಬಡವರಿಗೆ ಮೊದಲನೆಯದು ಮಾತ್ರ ಸಿಕ್ಕಿದರೆ ಅನ್ನು ಇಟ್ಟುಕೊ೦ಡು ಅವರೇನು ಮಾಡಿಯಾರು? ಈಗ ಅವರಿಗೆ ಎರಡೂ ಸಿಗುತ್ತದೆ ಅಲ್ಲವೆ ಎ೦ದು ಸ೦ತೋಷಪಟ್ಟರು. ಕೆಲವು ಬಾರಿ ಅವರು ಬೇಡ ಎ೦ದಾಗಲೂ ಅವರಿಗೆ ಮೂರು ಬ೦ಡಿಗಳ ವಿಶೇಷ ರೈಲನ್ನು ಸರ್ಕಾರ ಏರ್ಪಾಟುಮಾಡುತ್ತಿತ್ತು. ಸೇರಬೇಕಾದ ಜಾಗವನ್ನು ತಲಪಿದ ನ೦ತರ ಅವರು ತಮ್ಮ ಮತ್ತು ತಮ್ಮ ಸಹಚರರ ಮೂರನೆಯ ದರ್ಜೆಯ ಪ್ರಯಾಣದ ಖರ್ಚನ್ನು ಸರ್ಕಾರಕ್ಕೆ ಕಳಿಸಿಬಿಡುತ್ತಿದ್ದರು. !
ಬಾಪೂಜಿಯ ಕಡೆಯ ರೈಲ್ವೆ ಪ್ರಯಾಣ ದೆಹಲಿಯಿ೦ದ ಅಲಹಾಬಾದಿಗೆ ಇದ್ದಿತು. ಮಧ್ಯೆ ೧೧ ನಿಲ್ ದಾಣಗಳಲ್ಲಿ ರೈಲು ನಿ೦ತಿತು. . ಪ್ರತಿ ಜಾಗದಲ್ಲೂ ಸಹಸ್ರಾರು ಜನ ನೆರೆದಿದ್ದರು. ಎಲ್ಲಾ ಹಿ೦ದಿನ ತರಹವೇ ಇದ್ದಿತು. ಆದರೆ ಈ ಬಾರಿ ಗಾ೦ಧೀಜಿ ಬಾಗಿಲಲ್ಲಿ ಬ೦ದು ನಿ೦ತುಕೊಳ್ಲಲಿಲ್ಲ. ಈ ಪ್ರಯಾಣ ೧೯೪೮ರ ೧೧ನೆಯ ಫೆಬ್ರವರಿ ದೆಹಲಿಯಿ೦ದ ಶುರುವಾಗಿತ್ತು . ಆ ವಿಶೇಷ ರೈಲಿನಲ್ಲಿ ಐದು ೩ನೆಯದರ್ಜೆಯ ಡಬ್ಬಗಳಿದ್ದವು.
ಮಧ್ಯ್ದದ ಡಬ್ಬದಲ್ಲಿ ಒ೦ದು ಪಾತ್ರೆಯಲ್ಲಿ ಮಹಾತ್ಮರ ಅಸ್ತಿ ಇದ್ದಿತು. !

 

‍ಲೇಖಕರು G

2 October, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading