ಗಾಳಿಪಟ – Love is in the air

ಹರಿ ಪರಾಕ್

ನಾವು ಯಾವುದಾದ್ರೂ ಟ್ರಿಪ್ ಗೆ ಹೋಗುವಾಗ ನಮಗೆ ತುಂಬಾ ಎಕ್ಸೈಟ್ ಮೆಂಟ್ ಇರುತ್ತೆ. ಆದ್ರೆ ಅದೇ ಟ್ರಿಪ್ ಮುಗಿಸಿಕೊಂಡು ವಾಪಸ್ ಬರುವಾಗ, ದಾರಿಯಲ್ಲಿ, ಅಯ್ಯೋ, ಟ್ರಿಪ್ ಮುಗಿದು ಹೋಯ್ತಲ್ಲ, ಮತ್ತೆ ನಾಳೆಯಿಂದ ಆಫೀಸಿಗೆ ಹೋಗಬೇಕಲ್ಲ ಅನ್ನೋ ಬೇಸರ ಶುರುವಾಗುತ್ತೆ. ಯೋಗರಾಜಭಟ್ಟರ ಗಾಳಿಪಟ 2 ಕೂಡ ಅಂಥದ್ದೇ ಫೀಲ್ ಕೊಡುವ ಸಿನಿಮಾ.

ಸಿನಿಮಾ ಮುಗಿದ ಮೇಲೆ ಆಕಾಶ ಇಷ್ಟೇ ಯಾಕಿದೆಯೋ ಅನ್ನೋ ಫೀಲಿಂಗ್. ಮತ್ತೆ ಮತ್ತೆ ಓದಬೇಕು ಅನ್ನಿಸೋ ಕ್ವಾಲಿಟಿ ಇರೋ ಪುಸ್ತಕದ ರೀತಿಯ ಸಿನಿಮಾ ಇದು. ಪ್ರಮೋಷನಲ್ ಸಿನಿಮಾಗಳ ಮಧ್ಯೆ ಒಂದು ಅಪರೂಪದ ಎಮೋಷನಲ್ ಸಿನಿಮಾ ಗಾಳಿಪಟ 2.

ಯೋಗರಾಜ ಭಟ್ಟರು ಮುಂಗಾರು ಮಳೆ ಸಿನಿಮಾ ಮಾಡಿದಾಗ ಸುರಿದಿದ್ದು ಬರೀ ಮಳೆ ಮಾತ್ರ ಅಲ್ಲ. ಅದರ ಜೊತೆ ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯ ಗಾಳಿ ಕೂಡಾ ಬೀಸಿತ್ತು. ಅದೇ ಗಾಳಿಯಲ್ಲಿ ಭಟ್ಟರು ಗಾಳಿಪಟವನ್ನ ಹಾರಿಸಿದ್ದರು. ಈಗ ಲವ್ ಈಸ್ ಇನ್ ದಿ ಏರ್ ಅಂತ ಮತ್ತೊಮ್ಮೆ ಹೇಳಿದ್ದಾರೆ.

ಬೇರೆ ನಿರ್ದೇಶಕರಾಗಿದ್ರೆ ಗಾಳಿಪಟ ಹಿಟ್ಟಾದಾಗ್ಲೇ ಅದರ ಸೀಕ್ವೆಲ್ ಮಾಡ್ತಾ ಇದ್ರು. ಆದರೆ ಇಷ್ಟು ವರ್ಷಗಳ ನಂತರ ಅದರ ಸೀಕ್ವೆಲ್ ಮಾಡಿರೋದ್ರಿಂದ ಭಟ್ಟರ ಮನೋಭಾವವನ್ನು ಗಾಳಿ ಬಂದ ಕಡೆ ತೂರಿಕೋ ಅಂತ ಅರ್ಥೈಸೋಕಾಗಲ್ಲ.

ಎಂದಿನಂತೆ ಗಾಳಿಪಟದಲ್ಲಿ ಉಡಾಫೆ ಮತ್ತು ಫಿಲಾಸಫಿ, ನಗು ಮತ್ತು ಅಳು ಅನ್ನೋದು ಈ ಸಿನಿಮಾದಲ್ಲಿ ಭಟ್ರು ಮತ್ತು ಗಣೇಶ್ ಥರ ಮಿಕ್ಸ್ ಆಗಿವೆ. ಜೊತೆಗೆ ದಿಗಂತ್ ಇದ್ದಾರೆ.ಇಲ್ಲಿ ಬೀಸಿರೋ ಬದಲಾವಣೆಯ ಗಾಳಿಯಲ್ಲಿ ರಾಜೇಶ್ ಕೃಷ್ಣನ್ ಜಾಗಕ್ಕೆ ಪವನ್ ಕುಮಾರ್ ಬಂದಿದ್ದಾರೆ. ಬಹುಷಃ ಅವರ ಹೆಸರು ‘ಪವನ್’ ಆಗಿರೋದ್ರಿಂದ ಅವರನ್ನ ‘ಗಾಳಿ’ಪಟ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ ಭಟ್ರು ಅನ್ಸುತ್ತೆ.

ಭಟ್ಟರ ಈ ಎರಡನೇ ಗಾಳಿಪಟ, ಅವರದ್ದೇ ಆದ ಗಾಳಿಪಟ ಚಿತ್ರದ ಜೊತೆ ದಿಲ್ ಚಾಹ್ತಾ ಹೈ, ಜಿಂದಗೀ ನಾ ಮಿಲೇಗಿ ದುಬಾರಾ ಚಿತ್ರಗಳ ಧಾಟಿ ಇರೋ ಸಿನಿಮಾ. ಆದರೆ ಭಟ್ಟರ ಟಚ್ ಇದೆ. ಅದು ಪ್ರೇಕ್ಷಕರಿಗೂ ಟಚ್ ಆಗುತ್ತೆ.

ಸಿನಿಮಾ ಹೆಸರು ಗಾಳಿಪಟ ಆದ್ರೆ ಜರ್ನಿ ಸಿನಿಮಾ. ಹಾಗಾಗಿ ಸಿನಿಮಾದ ಪ್ರಯಾಣ ಗಾಲಿಗಳ ಮೇಲೇ ಜಾಸ್ತಿ. ಅದೇ ಮೂರು ಜನರ ಕಥೆ ಆದ್ರೂ, ಮೂರು ಮತ್ತೊಂದು ಅನ್ನೋ ಥರದ ಸಿನಿಮಾ ಖಂಡಿತಾ ಅಲ್ಲ.

ಮೊದಲರ್ಧ ಪೂರ್ತಿ ಮೂವರು ತರಲೆ ಸ್ನೇಹಿತರ ತುಂಟರಗಾಳಿ.
ಇಂಟರ್ ವಲ್ ಹೊತ್ತಿಗೆ ಸುಂಟರ ಗಾಳಿ. ಒಂದೇ ಇಂಟರ್ ವಲ್ ನಲ್ಲಿ ಮೂರ್ ಮೂರು ಬ್ರೇಕಪ್ಪು, ಹ್ಯಾಗ್ ಸ್ವಾಮಿ ತಡ್ಕೊಳ್ಳೋದು ಜೀವ ಅಂದ್ಕೊಂಡ ಮೇಲೆ, ಸೆಕೆಂಡ್ ಹಾಫ್ ನಲ್ಲಿ ಇರುವುದನೇ ಕಳೆದು ತಿರುಗಿ ಪಡೆದುಕೊಳ್ಳಿ ಅನ್ನೋ ಫಿಲಾಸಫಿ. ಯೋಗರಾಜ್ ಭಟ್ ನೇತೃತ್ವದಲ್ಲಿ ಪ್ರೇಕ್ಷಕರಿಗೆ ವಿದೇಶ ಪ್ರಯಾಣದ ಯೋಗ.

ನಿರ್ದೇಶಕ ಮತ್ತು ನಟರಿಗೆ ತಾವು ಏನು ಮಾಡಬೇಕು ಅನ್ನೋ ಬಗ್ಗೆ ಸ್ಪಷ್ಟ ಕಲ್ಪನೆ ಇರೋದ್ರಿಂದ, ಗಾಳಿ ಪಟ ಚಿತ್ರದಲ್ಲಿ ಗಾಳಿ ಜೊತೆ ಗುದ್ದಾಟ ಇಲ್ಲ, ಏನಿದ್ರೂ ಬರೀ ಮುದ್ದಾಟ. ಪ್ರೀತಿ ಮಾಡಿ ವಾಸ್ತು ಪ್ರಕಾರ, ಸಿನಿಮಾ ಮಾಡಿ ವಸ್ತು ಪ್ರಕಾರ ಅಂತಾರೆ ಭಟ್ಟರು.

ಈ ಸಿನಿಮಾದಲ್ಲಿ ಕನ್ನಡ ಭಾಷೆ ಅಷ್ಟೇ ಅಲ್ಲ, ಜಿಯೋಗ್ರಫಿ, ಸೋಶಿಯಾಲಜಿ, ಫಿಲಾಸಫಿ, ಹೀಗೆ ಎಲ್ಲ ಸಬ್ಕೆಕ್ಟ್ ಗಳೂ ಇವೆ. ಅವು ನಿರ್ಮಾಪಕರ ಎಕನಾಮಿಕ್ಸ್ ಚೆನ್ನಾಗಿ ಆಗೋದಕ್ಕೆ ಸಹಾಯ ಮಾಡಿದ್ರೆ ಸಾಕು. ಆದ್ರೆ, ಆರಕ್ ಆರು ಸಬ್ಜೆಕ್ಟೂ ಔಟ್ ಅಂತ ಹಾಡು ಬರೆದಿರೋ ಭಟ್ರು, ಸಿನಿಮಾದ ಎಲ್ಲಾ ಸಬ್ಜೆಕ್ಟ್ ನಲ್ಲೂ ಡಿಸ್ಟಿಂಕ್ಷನ್ ಪಡೆದಿದ್ದಾರೆ.

ಒಂದೇ ಸಮನೆ ನಿಟ್ಟುಸಿರು, ಕರಗುತಿದೆ ಕನಸಿನ ಬಣ್ಣ ಎನ್ನುತ್ತಿದ್ದಂತೆ ಮತ್ತೆ, ಜೀವ ಕಳೆವಾ ಅಮೃತಕೆ ಒಲವೆಂದು ಹೆಸರಿಡಬಹುದೇ ಅನ್ನೋ ಹಾಡು ನೆನಪಿಸುತ್ತೆ ಭಟ್ಟರ ನಿರೂಪಣಾ ಶೈಲಿ.

ಈ ಚಿತ್ರದಲ್ಲಿ ಪಾತ್ರಗಳು ಅರಳೋ ಜಾಗಗಳೇ ಒಂಥರಾ ವಿಭಿನ್ನ. ಈ ಚಿತ್ರದಲ್ಲೂ ನೀರುಕೋಟೆಯಲ್ಲಿ ಕನ್ನಡ ಕಲಿಕೆಯ ಮೂಲಕ ಸಿನಿಮಾ ತೆರೆದುಕೊಳ್ಳುತ್ತೆ. ಭಟ್ಟರ ಸಿನಿಮಾ ಅಂದ್ರೆನೇ ಅದೊಂಥರಾ ಆಧುನಿಕ ಕನ್ನಡ ಪಾಠಶಾಲೆ. ಅಂಥದ್ರಲ್ಲಿ ಈ ಸಿನಿಮಾದಲ್ಲಿ ಕನ್ನಡ ಕಲಿಸಕ್ಕೆಂದೇ ಒಂದು ಪ್ರತ್ಯೇಕ ಶಾಲೆ ಇದೆ.

ಮಾಮೂಲಿ ಸಿನಿಮಾಗಳನ್ನು ನೋಡಿ ಗಾಳಿಪಟದಂಥ ಸಿನಿಮಾ ನೋಡುವಾಗ, ಪ್ರೇಕ್ಷಕರಿಗೆ ಇಲ್ಲಿ ಬೀಸುವ ಗಾಳಿ ಊರಲ್ಯಾಕಿಲ್ಲ? ಇಲ್ಲಿ ಸಿಕ್ಕುವ ಪಾಠ ಶಾಲೆಲ್ಯಾಕಿಲ್ಲ? ಅನ್ನಿಸೋದು ಸಹಜ. ಗಾಳಿಪಟ ಹಾರುತ್ತಿದ್ದರೆ, ಆಕಾಶ ಇಷ್ಟೇ ಯಾಕಿದೆಯೋ, ಬಾನಿಗೊಂದು ಎಲ್ಲೆ ಎಲ್ಲಿದೆ ಹಾಡುಗಳ ಮಧುರ ನೆನಪು.

ಇಲ್ಲಿ ಹೀರೋಗಳ ವೈಭವೀಕರಣ ಇಲ್ಲ, ಇಲ್ಲೇನಿದ್ರೂ ಬರೀ ಪ್ರೀತಿ ಪ್ರೇಮದ ವ್ಯಾಕರಣ, ಅದಕ್ಕೆ ತಂಪೆರೆಯುವ ವಾತಾವರಣ. ಗ್ರಾಫಿಕ್ಸ್ ನ ಕೃತಕ ಸೃಷ್ಠಿ ಇಲ್ಲ, ವಿಕೃತ ಮನುಷ್ಯರಿಲ್ಲ, ಏನಿದ್ರೂ ಪ್ರಕೃತಿಯ ಸೃಷ್ಠಿಯೇ ಈ ಚಿತ್ರದ ಆಸ್ತಿ.

ಇಲ್ಲಿ, ದುಬಾರಿ ಸೆಟ್ ಗಳಿಲ್ಲ. 100, 200 ಕೋಟಿ ಬಜೆಟ್ ಇಲ್ಲ. ಹಾಗಾಗಿ, ಬಂಗಾರ ಸಿಂಗಾರ ಸಾಕಾಗಿ ಹೋಯಿತು, ಅರಮನೆ ಆನಂದ ಬೇಸತ್ತು ಹೋಯಿತು ಅನ್ನೋ ಪ್ರೇಕ್ಷಕರಿಗೆ ಇದು ಹೊಸ ಅನುಭವ.

ಹಾಲು ಮತ್ತು ಜೇನಿನ ಕಾಂಬಿನೇಷನ್ ಗಮ್ಮತ್ತು, ಎಲ್ಲರಿಗೂ ಗೊತ್ತು. ಈಗಿನ ಜೆನರೇಶನ್ ನವರ ಧಾಟಿಯಲ್ಲಿ ಹೇಳೋದಾದ್ರೆ ಐಸ್ ಕ್ರೀಮ್ ಮತ್ತು ಗುಲಾಬ್ ಜಾಮೂನ್ ನಂಥ ಜೋಡಿ ಯೋಗರಾಜ್ ಭಟ್ ಮತ್ತು ಗಣೇಶ್ ಅವರದ್ದು. ಅವರಿಬ್ಬರೂ ಜೊತೆಯಾಗಿ ಬಂದರೆ ಪ್ರೇಕ್ಷಕರಿಗೆ ರಸದೌತಣ.

ಗಣೇಶ್ ಅವರ ಅಭಿನಯದ ಬಗ್ಗೆ ಹೇಳೋದಾದ್ರೆ, ಈಗಿನ ತಲೆಮಾರಿನ ನಟರಲ್ಲಿ, ಈ ಪಾತ್ರನಾ ಇವರೊಬ್ಬರೇ ಮಾಡೋಕೆ ಸಾಧ್ಯ ಎನ್ನುವಂಥ ನಟ ಯಾರಾದ್ರೂ ಇದ್ರೆ ಅದು ಗಣೇಶ್ ಮಾತ್ರ. ನಗಿಸೋದು ಅಳಿಸೋದು ಎರಡನ್ನೂ ಸಿದ್ದಿಸಿಕೊಂಡಿರೋ ಗಣೇಶ್ ಅವರದ್ದು ಈ ಚಿತ್ರದಲ್ಲಿ ಬಹಳ ದಿನಗಳವರೆಗೆ ನೆನಪಿರುವಂಥ ಅಭಿನಯ.

ಅವರ ಅಭಿನಯದಲ್ಲಿ ಸಿದ್ಧ ಸೂತ್ರಗಳೆಲ್ಲಾ ಗಾಳಿಗೆ, ಅದೇನಿದ್ದರೂ ಅವರನ್ನು ತೆರೆಯ ಮೇಲೆ ನೋಡಿ ಎಂಜಾಯ್ ಮಾಡೋ ಅಮೃತ ಘಳಿಗೆ.

ಕಳೆದುಹೋದ ಮಗನಿಗಾಗಿ ಹುಡುಕಾಟ ನಡೆಸುವ ಅನಂತ್ ನಾಗ್ ಅವರ ಅಭಿನಯದಲ್ಲಿ, ವಯಸ್ಸಾಗ್ತಾ ಆಗ್ತಾ ಸಹಜತೆ ಜಾಸ್ತಿ ಆಗ್ತಾ ಇದೆ ಅನ್ನಿಸುತ್ತೆ.

ದಿಗಂತ್, ಭಟ್ಟರ ಸಿನಿಮಾದಲ್ಲಿ ಮಾತ್ರ ಯಾಕೆ ಅಷ್ಟೊಳ್ಳೆ ನಟ ಅನ್ನಿಸ್ತಾರೆ ಅನ್ನೋದನ್ನು ದಿಗಂತ್ ಮತ್ತು ಭಟ್ಟರೇ ಹೇಳಬೇಕು. ಪವನ್ ಮೀಸೆ ತೆಗೆದಾಗ ನೋಡೋದು ಕಷ್ಟ ಆದ್ರೂ, ಅಭಿನಯದಲ್ಲಿ ಮೋಸ ಮಾಡಿಲ್ಲ.

ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್, ಶರ್ಮಿಳಾ ಮಾಂಡ್ರೆ ಚಿತ್ರದ ನಾಯಕಿಯರು. ಮೂವರು ನಾಯಕರು, ಮೂವರು ನಾಯಕಿಯರು ಇದ್ದರೂ ಯಾರಿಗೂ ಅವಕಾಶ ಇಷ್ಟೇ ಯಾಕಿದೆಯೋ ಅನ್ನುವಂತಿಲ್ಲ. ಎಲ್ಲರ ಪಾತ್ರಗಳಿಗೂ ತೂಕ ಇದೆ. ಆದರೂ ಅವು ಗಾಳಿಪಟದಂತೆ ಹಾರಾಡುವಷ್ಟು ಹಗುರವಾಗಿನೂ ಇವೆ.

ನಾನು ಹೇಳೋದು ನಿನ್ನ ಒಳ್ಳೇದಕ್ಕೆ, ಸ್ವಲ್ಪ ಮಾತು ಕೇಳ್ತೀಯಾ ಅನ್ನೋ ಗಾಳಿಪಟ ಚಿತ್ರದ ರಂಗಾಯಣ ರಘು ಇಲ್ಲೂ ಇದ್ದಾರೆ. ಅವರ ಜೊತೆ ತಾಯಿ ಆಗಿ ಸುಧಾ ಬೆಳವಾಡಿ ಗಾಳಿಪಟಕ್ಕೆ ರಂಗು ತಂದಿದ್ದಾರೆ.

ಅರ್ಜುನ್ ಜನ್ಯ ಅವರ ಹಾಡುಗಳನ್ನು ಚಿತ್ರೀಕರಣ ಮಾಡಿರೋ ಪ್ಲೇಸ್ ಮತ್ತು ಸಿನಿಮಾಗಳಲ್ಲಿ ಅವುಗಳ ಪ್ಲೇಸ್ ಮೆಂಟ್ ಎರಡೂ ಚೆನ್ನಾಗಿದೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣದಲ್ಲಿ ಸಹಜ ಸೌಂದರ್ಯ ಇದೆ.

ತಮ್ಮದೇ ಆದ ಸೂತ್ರ ಹಿಡ್ಕೊಂಡು ಸಿನಿಮಾ ಮಾಡೋ ಯೋಗರಾಜ್ ಭಟ್ ಈ ಚಿತ್ರದ ಸೂತ್ರಧಾರ ಆಗಿ, ಗಾಳಿ ಪಟದ ಸೂತ್ರದ ದಾರವನ್ನ ಚೆನ್ನಾಗೇ ಕಂಟ್ರೋಲ್ ಮಾಡಿದ್ದಾರೆ. ಅಲ್ಲದೆ, ಕೆಲವು ದಿನಗಳ ಹಿಂದೆ, ನಾನು ಹಿಂದಿ ಪಂಡಿತ ಕೂಡಾ ಎಂದಾಗ ಯೋಗರಾಜ್ ಭಟ್ಟರ ಕನ್ನಡ ಪ್ರೇಮವನ್ನು ಟ್ರೋಲ್ ಮಾಡಿದವರೂ ಕೂಡ ಈ ಸಿನಿಮಾದಲ್ಲಿ ಅವರ ಕನ್ನಡತನ ನೋಡಿ, ನೋಡಿ ಮರುಳಾಗುತ್ತಾರೆ. ಒಟ್ಟಿನಲ್ಲಿ, ಮುಂಗಾರು ಮಳೆ, ಗಾಳಿಪಟ, ಮುಗುಳುನಗೆ ಚಿತ್ರಗಳನ್ನು ಇಷ್ಟಪಟ್ಟವರಿಗೆ ಗಾಳಿಪಟ 2 ಇಷ್ಟಪಡದೇ ಇರೋಕೆ ಕಾರಣಗಳೇ ಇಲ್ಲ ಅಂತ ಹೇಳಬಹುದು.

ಕೊನೆಗೊಂದು ಮಾತು, ಪ್ರಯಾಣ ಮಾಡುವಾಗ ವಿಂಡೋ ಸೀಟ್ ಬೇಕು ಅನ್ನೋರಲ್ಲಿ ಎರಡು ಕೆಟಗರಿ. ಒಂದು ವಾಂತಿ ಬರುತ್ತೆ ಅನ್ನೋ ಕಾರಣಕ್ಕೆ ಕಿಟಕಿ ಪಕ್ಕ ಕೂರೋರದ್ದು, ಇನ್ನೊಂದು ಗಾಳಿಗೆ ಮುಖವೊಡ್ಡಿ ಪ್ರಯಾಣ ಮತ್ತು ಪ್ರಕೃತಿ ಸೌಂದರ್ಯವನ್ನ ಅನುಭವಿಸೋ ರಸಿಕತೆ ಇರೋರದ್ದು. ಈ ಗಾಳಿಪಟ 2 ನೋಡಿದ ಮೇಲೆ, ನಿಮಗೆ ಸಿನಿಮಾ ಇಷ್ಟ ಆಯ್ತೋ ಇಲ್ವೋ ಅನ್ನೋದು, ನೀವು ಯಾವ ಕೆಟಗರಿಯ ಜನ ಅನ್ನೋದನ್ನ ನಿರ್ಧಾರ ಮಾಡುತ್ತೆ.

‍ಲೇಖಕರು Admin

August 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: