ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧೀಬಜಾರು ಇನ್ನು ಗಾಂಧೀಬಜಾರಲ್ಲ! – ಜೋಗಿ ಬರಹ

ಗಾಂಧೀಬಜಾರು ಇನ್ನು ಗಾಂಧೀಬಜಾರಲ್ಲ!         – ಜೋಗಿ ಹೂವು, ಹಣ್ಣು, ತರಕಾರಿ, ಪಂಚೆಯುಟ್ಟ ಹಿರಿಯರು, ತಣ್ಣನೆಯ ಮುಂಜಾನೆ, ಲವಲವಿಕೆಯ ಮುಸ್ಸಂಜೆ, ಮಸಾಲೆದೋಸೆ, ಸುಬ್ಬಮ್ಮನ ಅಂಗಡಿಯ ಚಟ್ನಿಪುಡಿ, ಕಾಂಗ್ರೆಸ್ ಕಡ್ಲೆಬೀಜ, ಕನ್ನಡ ಪುಸ್ತಕ ಮತ್ತು ಬಿಸಿಬಿಸಿ ಕಾಫಿ!   ಇಷ್ಟನ್ನೂ ಒಟ್ಟಾಗಿ ಕರೆದರೆ ಅದು ಗಾಂಧೀಬಜಾರು. ಒಳಗೆ ಕಾಲಿಡುತ್ತಿದ್ದಂತೆ ನಿಮ್ಮನ್ನು ಸ್ವಾಗತಿಸುವುದು ಮಲ್ಲಿಗೆ, ಸೇವಂತಿಗೆ, ಸುಗಂಧರಾಜದ ಪರಿಮಳ. ಜರಿಲಂಗ, ತುಂಬುತೋಳಿನ ರವಕೆ ಹಾಕಿಕೊಂಡು ವ್ಯಾಪಾರಕ್ಕೆ ಕುಳಿತ ಹೊಳಪುಗಣ್ಣಿನ ಬಾಲಿಕೆಯರು. ಬೆಂಗಳೂರಲ್ಲಿ ಋತುಮಾನದ ಬದಲಾವಣೆ ಗೊತ್ತಾಗುವುದೇ ಗಾಂಧೀಬಜಾರಿನಲ್ಲಿ. ಕಾಲಕಾಲಕ್ಕೆ ಮಾವಿನ ಮಿಡಿ, ಅಮಟೇಕಾಯಿ, ಅವರೇಕಾಯಿ, ಕಡ್ಲೇಕಾಯಿ, ಬಗೆಬಗೆಯ ಹೂವು, ವಿಧವಿಧದ ಹಣ್ಣು ಅಲ್ಲಿನ ಮಾರುಕಟ್ಟೆಯಲ್ಲಿ ಕಂಗೊಳಿಸಿದರೇನೇ ಅದು ಗಾಂಧಿಬಜಾರು. ಹಬ್ಬಗಳ ಸಡಗರ ಶುರುವಾಗುವುದೂ ಅಲ್ಲಿಯೇ. ತುಳಸೀಗಿಡ, ನೆಲ್ಲಿಕಾಯಿ ಗಿಡ, ಬಾಳೆಕಂಬ, ಮಾವಿನ ಎಲೆ, ಗರಿಕೆಗೆ ಬೇಕು ಗಾಂಧೀಬಜಾರು. ಮನೆಗೆ ಪಂಚೆಯುಟ್ಟ ನೆಂಟರು ಬಂದರೆ ಸ್ಕೂಟರು ಹತ್ತಿ ಗಾಂಧೀಬಜಾರಿಗೆ ಜಾರಿದರೆ ಹಸಿರು ಬಾಳೆಎಲೆ ಎಲ್ಲಾ ಕಾಲದಲ್ಲೂ ಲಭ್ಯ. ಗಾಂಧೀಬಜಾರು ಬೆಂಗಳೂರಿನ ಸರ್ವಋತು ಬಂದರು. ಈಗಲೂ ಅಷ್ಟೇ. ಮೆಜೆಸ್ಟಿಕ್ಕು ಬೆಂಗಳೂರಿನ ನೆತ್ತಿಯಾದರೆ, ಗಾಂಧೀಬಜಾರು ಸೊಂಟ. ಆ ಸೊಂಟದಲ್ಲಿರುವ ಬುಟ್ಟಿಯ ತುಂಬ ಹೂವು. ಈ ಹೂವಾಡಗಿತ್ತಿ ಕಾಲಿಗೆ ತೊಡರುತ್ತಾಳೆಂದೋ ದಾರಿಗೆ ಅಡ್ಡವಾಗಿದ್ದಾಳೆಂದೋ ಯಾರೂ ತಕರಾರು ಮಾಡಿದ್ದೇ ಇಲ್ಲ. ಬೆಂಗಳೂರಿನ ಮನಸ್ಸುಗಳಿಗೆ ಕಾಲುಗಳಿಗೆ ಅದೆಷ್ಟರ ಮಟ್ಟಿಗೆ ಅಭ್ಯಾಸ ಆಗಿತ್ತೆಂದರೆ ಗಾಂಧೀಬಜಾರಿಗೆ ಹೋದರೆ ಹುಟ್ಟೂರಿಗೆ ಮರಳಿದ ಅನುಭವ. ಅಲ್ಲೇ ಎಲ್ಲೋ ಸಂದಿಯಲ್ಲಿ ಹಳೆಯ ಸ್ಕೂಟರ್ ನಿಲ್ಲಿಸಿ, ಮಕ್ಕಳ ಕೈ ಹಿಡಕೊಂಡು ಆ ತುದಿಯಿಂದ ಈ ತುದಿಗೆ ಅಡ್ಡಾಡಿದರೆ ನಂದನವನದಲ್ಲಿ ಓಡಾಡಿದಂತೆ. ಪುಟ್ಟ ಮಗುವಿನಿಂದ ಹಿಡಿದು ಹಿರಿಯರ ತನಕ ಎಲ್ಲರಿಗೂ ಗಾಂಧಿಬಜಾರು ಸರ್ಕಲ್ಲೆಂದರೆ ಅಮ್ಮನ ಮನೆ. ಸಾಹಿತಿಗಳ ಪಾಲಿಗೆ ಗಾಂಧೀಬಜಾರು ಮನಸು, ಮನಸು ಗಾಂಧೀಬಜಾರು. ಮಾಸ್ತಿ ಆ ತುದಿಯಿಂದ ಈ ತುದಿಗೆ ನಡೆಯುತ್ತಾ ಹಾದಿಯಲ್ಲಿ ಸಿಗುವ ಮಕ್ಕಳ ಕೈಗೆ ಪೆಪ್ಪರಮೆಂಟಿಟ್ಟು, ಗಾಂಧೀಬಜಾರಿನ ತುದಿಯಲ್ಲಿರುವ ಮರದಲ್ಲಿರುವ ಹಕ್ಕಿಗಳ ಚಿಲಿಪಿಲಿ ಕೇಳುತ್ತಾ, ಹಕ್ಕಿಗಳ ಹಿಕ್ಕೆಯಿಂದ ಕಾಪಾಡಲು ಕೊಡೆ ಬಿಡಿಸಿ ಹಿಡಕೊಂಡು ಕ್ಲಬ್ಬಿನೊಳಗೆ ಕಾಲಿಟ್ಟರೆ ಅಲ್ಲೊಂದು ಸಾಹಿತ್ಯ ಸಮ್ಮೇಳನ.               ಅಷ್ಟಕ್ಕೂ ಗಾಂಧೀಬಜಾರಿನಲ್ಲಿ ಓಡಾಡಿದ ಸಾಹಿತಿಗಳು ಒಬ್ಬಿಬ್ಬರಲ್ಲ. ಡಿವಿಜಿ ಅಲ್ಲೇ ಇದ್ದವರು. ಸುಮತೀಂದ್ರ ನಾಡಿಗರ ಪುಸ್ತಕದ ಅಂಗಡಿಯಿದ್ದದ್ದೂ ಅಲ್ಲೇ. ಲಂಕೇಶರ ಕಛೇರಿಯೂ ಅಲ್ಲೇ ಇತ್ತು. ವೈಯನ್ಕೆ ಅಲ್ಲಿ ನಡೆದಾಡದ ದಿನ ಏನೋ ಕಳಕೊಂಡಂತೆ ಆಡುತ್ತಿದ್ದರು. ಎಚ್ಎಸ್ವಿ ಎಲ್ಲಿಗೆ ಹೋದರೂ ಅಲ್ಲಿಗೆ ಬಂದೇ ಹೋಗುತ್ತಾರೆ. ಕೆ ಎಸ್ ನಿಸಾರ್ ಅಹಮದ್ ಗಾಂಧೀಬಜಾರಿನ ಬಗ್ಗೆ ಕವಿತೆ ಬರೆದುಬಿಟ್ಟಿದ್ದಾರೆ. ಕವಿಗಳು ಬದಲಾದರೂ ಗಾಂಧೀಬಜಾರು ಬದಲಾಗಲಿಲ್ಲ. ಈಗ ಎಲ್ಲವೂ ಬದಲಾಗಿದೆ. ಕವಿಗಳ ಸ್ಪೂರ್ತಿಯ, ಮನೆಮಂದಿಯ ಪ್ರೀತಿಯ, ಮಕ್ಕಳ ಅಕ್ಕರೆಯ, ತಾಯಂದಿರ ಆಪ್ತತೆಯ, ಮುದುಕರ ಭರವಸೆಯ, ಹರೆಯದ ಹುಡುಗಿಯರ ಷೋಕಿಯ, ಹುಡುಗರ ಪೋಕರಿಯ, ತಿಂಡಿಪೋತರ ಅಭಿರುಚಿಯ ಗಾಂಧಿಬಜಾರು ಮೊದಲಿನಂತಿಲ್ಲ. ಅಲ್ಲಿ ಹಸಿರಿಲ್ಲ, ಕಂಪಿನ ಉಸಿರಿಲ್ಲ. ಮಲ್ಲಿಗೆಯ ಮಾಲೆಯಿಲ್ಲ, ಸುಗಂಧರಾಜದ ಘಮವಿಲ್ಲ. ಕನಕಾಂಬರದ ಬಣ್ಣವಿಲ್ಲ, ಮಿಡಿಮಾವಿನಕಾಯಿಯ ರಸವಿಲ್ಲ. ಅನಾಥ ಫುಟ್ಪಾತ್ ಉದ್ದಕ್ಕೂ ಅನಾಥಪ್ರಜ್ಞೆ. ಇಲ್ಲಿ ರಸ್ತೆಬದಿಗಳಲ್ಲಿ ಮುತ್ತುರತ್ನಗಳನ್ನು ಮಾರುತ್ತಿದ್ದರು ಎಂದು ಚರಿತ್ರಕಾರರು ಬರೆದಂತೆ, ಮುಂದೊಂದು ದಿನ ಇಲ್ಲಿ ರಸ್ತೆ ಬದಿಯಲ್ಲಿ ಹೂಹಣ್ಣು ತರಕಾರಿ ಮಾರುತ್ತಿದ್ದರು ಎಂದು ಬರೆಯಬೇಕಾದೀತು. ಕವಿ ನಿಸಾರ್ ಬರೆದಂತೆ: ಸಂದಜೀವನದೊಂದು ರೀತಿಯಂತೆ, ಸರಳ ಸದಭಿರುಚಿಯ ಖ್ಯಾತಿಯಂತೆ ಇದ್ದ ಗಾಂಧೀಬಜಾರಿನ ಹಣೆ ಬೋಳಾಗಿದೆ. ಕೆನ್ನೆಯಲ್ಲಿ ಅರಿಶಿನ ಇಲ್ಲ. ಇನ್ನು ಗಾಂಧೀಬಜಾರು ಗಾಂಧೀಬಜಾರೂ ಅಲ್ಲ!    ]]>

‍ಲೇಖಕರು G

26 January, 2012

11 Comments

  1. surekha

    ಆ ಹಸಿರು. ಬಣ್ಣ ಬಣ್ಣದ ಹೂವುಗಳು ನೋಡಲು ಸಿಗುವುದೇ ಗಾಂಧಿಬಜಾರನಲ್ಲಿ. ಹೌದು ಸರ್ ನೀವು ಹೇಳುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ. ಯಾವ ಹಬ್ಬ ಬಂದರೂ ಗಾಂಧಿಬಜಾರ್ ಮಾರ್ಕೆಟು ಹಣ್ಣು – ಹೂವು ಗಳಿಂದ ನಳನಳಿಸುತ್ತಿತ್ತು. ಅದೇ ದಾರಿಯಲ್ಲಿ ನಡೆದು ಮನೆಗೆ ಬರುತ್ತಿದ ನನಗೆ ಬಾಳೆ ಎಲೆ, ಬಾಳೆ ಹಣ್ಣು ಹಲಸಿನ ಹಾಗು ಮಾವಿನ ಮಿಡಿ ನೋಡಿದಾಗ ನಮ್ಮ ಹಳ್ಳಿಗೆ ಬಂದಷ್ಟು ಖುಷಿ ಕೊಡುತ್ತಿತ್ತು. ನೀವು ವೈಯನ್ಕೆ, ಡಿವಿಜಿ, ಮಾಸ್ತಿ ಯವರು ಇಲ್ಲೇ ನಡೆಯುತ್ತಿದರು ಎಂದಾಗ ನಾನು ಕೂಡ ಅವರ ಸಾಲಿಗೆ ಸೇರಿದವಳು ಅನಿಸುತಿದೆ. ಆದರೆ ಈ ಎರಡು ದಿನದ ಬದಲಾವಣೆ ನೋಡಿದರೆ ಕಟುಕನ ಕಣ್ಣಲೂ ಕೂಡ ಕಣ್ಣೀರು ಸುರಿಯುತ್ತದೆ. ಅಷ್ಟೊಂದು ಕೆಟ್ಟದಾಗಿ ವ್ಯಾಪಾರಿಗಳ ಮೇಲೆ ಅನ್ಯಾಯವಾಗಿದೆ. ಕೆಲವರು ಹಾಗೆ ಆಗಬೇಕ್ಕಿತು ಎಂದು ಖುಷಿ ಪಡುವವರು ಇದ್ದಾರೆ. ಆದರೆ ಗಾಂಧಿಬಜಾರ್ ಮಾರ್ಕೆಟು ಸ್ಮಶಾನವಾಗಿದೆ.

  2. Ahalya Ballal

    🙁

  3. ಜಯಲಕ್ಷ್ಮಿ

    ಹೌದು,ಮೊನ್ನೆ ಎಂದಿನಂತೆ ತರಕಾರಿ,ಹಣ್ಣುಹಂಪಲು ತರೋಣ ಎಂದು ಸಂಭ್ರಮದಿಂದ ಗಾಂಧೀಬಜಾರಿಗೆ ಹೋದವಳಿಗೆ ಅಲ್ಲಿನ ದೃಶ್ಯ ಅಳಿದ ವೈಭವದ ಪಳೆಯುಳಿಕೆಗಳಂತೆ ಕಾಣಿಸಿ ಅಚ್ಚರಿ,ಬೇಸರ ಆಯಿತು,ಬಿಬಿಎಂಪಿ ಪ್ರತಾಪ ಎಂದು ಅರಿವಾಗಿ ‘ಏನ್ಬೇಕವ್ವ’ ಅಂತ ಕಕ್ಕುಲಾತಿಯಿಂದ ವಿಚಾರಿಸುತ್ತಿದ್ದ ನನ್ನ ತರಕಾರಿಯಮ್ಮ,‘ಯಾಕ್ರವ್ವ,ಬಾಳ ದಿನ ಆಯ್ತು ಈ ಕಡಿಗ್ಬಂದು,ನಮ್ ಹತ್ರ ತೆಂಗಿನ್ಕಾಯ್ ಬ್ಯಾಡ್ವಾ’ ಅಂತ ಗದರುವಂತೆ ವಿಚಾರಿಸುತ್ತಿದ್ದ ತೆಂಗಿನಕಾಯಿ ಮಾರೋ ಹೆಂಗಸು..ಇವರೆಲ್ಲರ ಬಳಿ ಹೋಗಿ ಕೇಳಲಾಗಿ ಯಾರೂ ಸರಿಯಾಗಿ ಮಾತೇ ಆಡಲೊಲ್ಲರು,ಅವರ ಮುಖದಾಗಿನ ಅಪರಿಚಿತ ನೋಟಕ್ಕೆ ಖೇದವೆನಿಸಿತು,ನನಗೆ ಬಾಳೇಹಣ್ಣು ಬೇಕಿರಲಿ,ಬೇಡವಿರಲಿ,ಆ ಕಡೆ ಹಾದುಹೋದರೆ ತಪ್ಪದೆ ಮುಗುಳ್ನಗುವೊಂದನ್ನು ಬೀರುತ್ತಿದ್ದ ಅಜ್ಜಿಗಾಗಿ ಬಹಳ ಹುಡುಕಿದೆ,ಆಕೆ ಕಾಣಲೇ ಇಲ್ಲ,ಬೇರೆಲ್ಲೂ ಬಾಳೇಹಣ್ಣು ಕೊಳ್ಳುವ ಮನಸ್ಸಾಗಲಿಲ್ಲ.

  4. sandhya

    ಗಾ೦ಧಿ ಬಜ಼ಾರ್ ಎ೦ದರೆ ಹೂವು, ಸೇವ೦ತಿ, ಗುಲಾಬಿ, ಘ೦ ಎನ್ನುವ ದು೦ಡು ಮಲ್ಲಿಗೆ ಜಾಜಿ, ಕಣ್ಣು ತು೦ಬುವ ರುದ್ರಾಕ್ಷಿ ಹೂಗಳ ಮಾಲೆ, ಒತ್ತೊತ್ತಾಗೆ ಜೋಡಿಸಿದ ದ೦ಡೆಗಳು, ಗಾ೦ಧಿ ಬಜ಼ಾರ್ ಎ೦ದರೆ ಹಚ್ಚನೆ ಬಾಳೆ ಎಲೆ, ಬಾಳೆ ಕ೦ಬ, ಗಾ೦ಧಿ ಬಜ಼ಾರ್ ಎ೦ದರೆ ನಾಲಿಗೆ ಯಲ್ಲಿ ನೀರೂರಿಸುವ ವಿದ್ಯಾರ್ಥಿ ಭವನ, ಉಡುಪಿ ಕೃಷ್ಣ ಭವನ್ ದೋಸೆ, ಗಾ೦ಧಿ ಬಜ಼ಾರ್ ಎ೦ದರೆ ಅ೦ಕಿತಾ ಪುಸ್ತಕ. ಒಮ್ಮೆ ಗಾ೦ಧಿ ಬಜ಼ಾರ್ ಹೊಕ್ಕರೆ ಸ೦ಕ್ರಾ೦ತಿ ಎಳ್ಳು-ಬೆಲ್ಲ, ಹೂ ಹಣ್ಣು, ತರಕಾರಿ, ಪುಸ್ತಕ ಎಲ್ಲಾ ಕೈಯಳತೆಯಲ್ಲೆ… ಮನಸಿನ೦ತೆ.. ಮನಸು ಗಾ೦ಧಿ ಬಜ಼ಾರ್. ಈಗ ಗಾ೦ಧಿ ಬಜ಼ಾರ್ ಮನಸ್ಸಿಲ್ಲದ ಮನೆಯ೦ತಾಗಿದೆ

  5. vijayaraghavan

    ಈಗ ಬಳ್ಳಾರಿಯಲ್ಲಿರುವ ನನಗೆ ಇದನ್ನೆಲ್ಲ ಕೇಳಿಯೇ ದು:ಖವಾಗುತ್ತಿರಬೇಕಾದರೆ ನೋಡುವವರಿಗೆ ಹೇಗಾಗಬೇಡ. ಅಮೆರಿಕ ಇತ್ಯಾದಿಗಳು ಜನರಿಗಾಗಿ ಯುದ್ಧ ಮಾಡಿದ ಕಾಬೂಲು ಮುಂತಾದ ಪಟ್ಟಣಗಳಂತೆ ಕಾಣುತ್ತಿದೆ ಈ ಫೋಟೋದಲ್ಲಿ ಗಾಂಧಿ ಬಜಾರು. ಮನಸ್ಸು ಮರುಗುತ್ತಿದೆ. ಗಾಂಧಿ ಬಜಾರಿನ ಮೇಲೊಂದು ಚರಮ ಗೀತೆಯ ಬರೆಯವಷ್ಟು ದುಃಖವಾಗಿದೆ.
    ಆರ್. ವಿಜಯರಾಘವನ್‌

  6. jagadishkoppa

    ಜೊಗಿಯವರಿಗೆ ನಮಸ್ಕಾರ. ಗಾಂಧಿ ಬಜಾರ್ ಅಂಗಡಿಗಳ ದುರಂತ ಮನಕಲಕುತಿದೆ. 1972 ರಲ್ಲಿ ಚಾಮರಾಜಪೇಟೆಯ ನಾಲ್ಕನೇ ಮುಖ್ಯರಸ್ತೆಯಲ್ಲಿ ಸಾಹಿತ್ಯ ಪರಿಷತ್ತಿನ ಹಿಂಬಾಗ ರಾಮಮಂದಿರವಿದೆ ಅಲ್ಲಿ ನನಕ್ಕನ ಮನೆಯಿತ್ತು. ಆವಾಗ ಬೆಂಗಳೂರಿಗೆ ಬಂದ ನಾನು ಪ್ರತಿದಿನ ಅಕ್ಕನ ಹಿಂದೆ ಶಂಕರಮಠದ ಮುಂದಿನ ರಸ್ತೆಯಲ್ಲಿ ನಡೆದು ಹೋಗಿ ಹೂ, ಹಣ್ಣು ತರಕಾರಿ ಹೊತ್ತು ತರುತ್ತಿದ್ದೆ. ಇದೇ ಜನವರಿ 14ರಂದು ಬೆಳಿಗ್ಗೆ ಅಲ್ಲಿ ಸುತ್ತಾಡಿದಾಗ ಹಳೆಯ ನನೆಪುಗಲೆಲ್ಲಾ ಮರುಕಳಿಸಿದವು. ಈಗ ಅವೆಲ್ಲಾ ಕೇವಲ ನೆನಪುಗಳು.ಇವೆಲ್ಲಾ ನಮ್ಮ ಕಣ್ಣಮುಂದೆ ಕರಗಿಹೋಗುತ್ತಿರುವ ವಾಸ್ತವಗಳು.ಇತ್ತೀಚೆಗೆ ನನಗೆ ಬೆಂಗಳೂರು ನನ್ನದಲ್ಲದ ನಗರ ಎನಿಸತೊಡಗಿದೆ.
    ಜಗದೀಶ್ ಕೊಪ್ಪ, ಧಾರವಾಡ

  7. Kruti

    ಬೇಜಾರು, ಆದರೂ ಮಿತಿಮೀರಿತ್ತು… ಅನ್ನೋದು ನಿಜ.

  8. Vikram Hathwar

    Perfect way of a writer’s protest. Do Bureaucrats have minimum inclination towards the sensitivity of people; to read, understand and realize what have they done?
    They don’t want Bangalore to be Bangalore. They want to make it Singapore….Fooolss…

  9. ಮೂರ್ತಿ

    ಅಯ್ಯೋ ಈಗ ಗಾಂಧಿ ಬಜಾರ್ ಬರೀ ಬೇಜಾರ್ ಆಗಿದೆ

  10. D.RAVIVARMA

    . ನಿಮ್ಮ ಗಾಂಧೀ ಬಜಾರ್ ನ ಲೇಖನ ಮನಮಿಡಿಯುವಂತಿದೆ ದೂರದ ಹೊಸಪೇಟೆಯಿಂದ bangalorege ಬಂದಾಗಲೆಲ್ಲ . ಒಮ್ಮೆ ಗಾಂದಿ ಬಜಾರ್ ಸುತ್ತಾಡಿ ಬರುತ್ತಿದ್ದೆ . ಅಲ್ಲೊಂದು ಹಳ್ಳೀತ್ತು.ಅದಕ್ಕೊಂದು ಪ್ರೀತಿಯ ಪರಿಸರವಿತ್ತು. ಆತ್ಮೀಯತೆ ಇತ್ತು ನೀವು ಬರೆದ ಲೇಖನ ಓದಿದಮೇಲೆ ಕರುಳು ಕಿವಿಚಿಗೊಲ್ತು ,ಮುಂದೊಮ್ಮೆ ಇದು “ಗಂದೀ ಬಜಾರ್” ಆಗಬಹುದೇನೋ. ನೋಡ್ತೈರೀ, ನಮ್ಮೆಲ್ಲರ ಮೌನ ಇಡೀ bangalorenne ವಿದೇಶಿ ನಗರವಾಗಿ ಬದಲಾಯಿಸುವ, ನಮ್ಮ ಮಕ್ಕಳು ಬ್ಯಾಂಗಲೋರ್,ಹಿಂದಿನ bangalorennu ಇತಿಹಾಸದಲ್ಲೋ,ಕವಿಗಳ ಪುಸ್ತಿಕೆಗಲ್ಲೋ ಓದಿ ತಿಲೋಕೊಬೇಕಸ್ಟೇ
    ರವಿ ವರ್ಮ ಹೊಸಪೇಟೆ . ,

  11. ಜಯಲಕ್ಷ್ಮಿ

    ಮತ್ತೆ ಹೋಗಿದ್ದೆ ಗಾಂಧೀ ಬಜಾರಿಗೆ,ತರಕಾರಿ,ಹೂವಿನವರು ಮೆಲ್ಲ ಮೆಲ್ಲನೆ ತಮ್ಮ ತಮ್ಮ ಸ್ಥಳಗಳಲ್ಲಿ ಸ್ಥಾಪಿತರಾಗಿದ್ದಾರೆ,ಹಿಂದಿನ ವೈಭವ ಮರಳಿಲ್ಲ,ಆದರೆ ಮರಳುವ ಆಶಯವಿದೆ,ನನ್ನ ಬಾಳೇಹಣ್ಣಿನಜ್ಜಿ ಮತ್ತೆ ಸಿಕ್ಕಿದ್ದಾಳೆ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading