
ಕೃಷ್ಣ ಮಾಸಡಿ
ಬೆಂಗಳೂರಿನ ಗಾಂಧಿಬಜಾರ್‍ಗೆ ಹೋದ ತಕ್ಷಣ ಸಾವಿರ ನೆನಪುಗಳು.
ಈ ನೆನಪಿನ ಜಾಡು ಹಿಡಿದು ಮನಸ್ಸು ಮತ್ತೆ ಮತ್ತೆ ಗಾಂಧಿಬಜಾರ್‍ನಿಂದ ಪಡೆದದ್ದನ್ನು ಹೇಳಿಕೊಳ್ಳಬೇಕಿನಿಸುತ್ತದೆ.
ಮಾಸಡಿ, ಮೈಸೂರು, ಶಿವಮೊಗ್ಗ, ಸಾಸ್ವೆಹಳ್ಳಿ ಮತ್ತು ಹೊನ್ನಾಳಿಗೆ ಸೀಮಿತವಾಗಿದ್ದ ನಾನು ಎಲ್ಲಕ್ಕಿಂತ ಈ ಗಾಂಧಿಬಜಾರನ್ನು ಕನವರಿಸುವುದು ಏಕೆಂದರೆ ನನ್ನ ಯೌವನದ ದಿನಗಳ ವಿಕಾಸ ನಡೆದಿದ್ದು ಇಲ್ಲಿ.
ನಾನು ಇಲ್ಲಿ ಏನೇ ಹೇಳಿದರೂ ಕೆಲವರಿಗೆ ರುಚಿಸುವುದಿಲ. ಹಾಗೆಂದು ನಡೆದ ಘಟನೆಗಳನ್ನು ಹೇಳದಿದ್ದರೆ ತಪ್ಪಾಗುತ್ತದೆ ಮತ್ತು ಈಗ ಇವುಗಳಿಗೆ ಸಾಕ್ಷಿಯಾಗಿರುವ ಕೆಲವರಾದರೂ ಇರುವುದು ನನಗೆ ಬರೆಯಲು ಬಲ ತಂದುಕೊಟ್ಟಿದೆ.

1972 ನೇ ಇಸವಿಯ ಒಂದು ದಿನ ಶಿವಮೊಗ್ಗದ ನೆಹರೂ ರಸ್ತೆಯಲ್ಲಿ ಲಂಕೇಶ್ ಪಂಚೆ ಉಟ್ಟುಕೊಂಡು ಕೈಯಲ್ಲಿ ಪುಸ್ತಕಗಳ ರಾಶಿಯನ್ನು ಅಪ್ಪಿಕೊಂಡು ಅಮೀರ್ ಅಹಮದ್ ಸರ್ಕಲ್‍ನಿಂದ ಗೋಪಿ ಸರ್ಕಲ್ ಕಡೆ ನಡೆದುಕೊಂಡು ಹೋಗುವುದು ಕಂಡ ನಾನು ಅವರನ್ನು ಮಾತನಾಡಿಸಿದೆ. ಅವರು ಸಾಗರದಿಂದ `ಸಂಕ್ರಾತಿ’ ನಾಟಕದ ಪ್ರಥಮ ಮುದ್ರಣದ ಪುಸ್ತಕಗಳನ್ನು ಹಿಡಿದುಕೊಂಡು ಬಂದಿದ್ದರು. ಇದು ನನ್ನ ಅವರ ಮೊದಲ ಭೇಟಿ.
ಅವರ ಮಾವನ ಮನೆಯವರೆಗೆ ನನ್ನನ್ನು ಕರೆದುಕೊಂಡು ಹೋಗಿ ಅಂದು ರಾತ್ರಿ ಹೊರಡುವ ಬಸ್ಸಿನ ಬಳಿ ಬರಲು ಹೇಳಿದರು. ನಾನು ಅಂದು ರಾತ್ರಿ ಆಗ ಜೊತೆಯಲ್ಲಿದ್ದ ಮಹಮದ್ ಅಹಮದ್ ಮತ್ತು ಎಂ. ಚಂದ್ರಶೇಖರಯ್ಯ ಎಂಬ ಗೆಳೆಯರನ್ನು ಕರೆದುಕೊಂಡು ಹೋಗಿದ್ದೆ. ಅವರನ್ನು ಕಳಿಸಿದ ನಾವು ಆ ರಾತ್ರಿ ಆಕಾಶದಲ್ಲಿ ತೇಲಾಡುತ್ತಾ ಅಮೀರ್‍ಅಹಮದ್ ಸರ್ಕಲ್‍ನಲ್ಲಿ ರಾತ್ರಿ 2 ಘಂಟೆಯವರೆಗೆ ತಗೆದಿರುತ್ತಿದ್ದ ಮಲೆಯಾಳಿ ಹೋಟಲ್‍ನಲ್ಲಿ ಚಾ.. ಕುಡಿದಿದ್ದೇ ಕುಡಿದಿದ್ದು. ನನಗಾಗ 17-18 ರ ಹರೆಯ.
1972 ರಿಂದ 1976 ರ ಆ ನಾಲ್ಕು ವರ್ಷಗಳ ಬಗ್ಗೆ ಬಹಳಷ್ಟು ಹೇಳಿಕೊಳ್ಳುವುದಿದೆ. ಅದನ್ನು ಹೇಳಲು ಬಹಳ ಸಮಯಬೇಕಿದೆ. ಲಂಕೇಶ್‍ರ `ಪಲ್ಲವಿ’ ಸಿನಿಮಾ ಬಂದಿತ್ತು. ಇನ್ನೊಂದು ಸಿನಿಮಾ `ಅನುರೂಪ’ ದ ತಯಾರಿ ನಡೆದಿತ್ತು. ನಾನು ಅವರ ಜೊತೆ ಕೆಲಸ ಮಾಡಲು ನಿಯೋಜಿತಗೊಂಡಿದ್ದೆ. ಅಲ್ಲಿಯವರೆಗೆ ಬೆಂಗಳೂರಿಗೆ ಬಂದವನು ಅಲ್ಲಿ-ಇಲ್ಲಿ ಉಳಿದು ಹೋಗುತ್ತಿದ್ದೆ.
ಲಂಕೇಶ್‍ರು `ಕಾಳೇಗೌಡರ ಕಡೆ ಹುಡುಗ ಒಬ್ಬನೇ ಇದ್ದಾನೆ, ಅವನಿಗೆ ಹೇಳಿದ್ದೇನೆ ಅವನ ಜೊತೆ ಇಲ್ಲಿಯೇ ಇದ್ದು ಬಿಡು’ ಎಂದರು. ಹಾಗೇಯೇ ಬಿಎಂಎಸ್ ಮಹಿಳಾ ಕಾಲೇಜ್ ಎದುರಿಗೆ ಇದ್ದ `ಗೋಕುಲ ಬಿಲ್ಡಿಂಗ್’ ಎಂಬಲ್ಲಿಗೆ ಕರೆದುಕೊಂಡು ಹೋದರು. ಅಲ್ಲಿ ಒಬ್ಬ ಕಟ್ಟು ಮಸ್ತಾದ ವ್ಯಕ್ತಿ ಇದ್ದರು. `ಇವನೇ ಕಣಯ್ಯ ನಿನ್ನ ರೂಂ ಮೇಟ್’ ಎಂದು ಅವರಿಗೆ ಪರಿಚಯಿಸಿದರು.
ಟಿ. ಎಂ. ಶ್ರೀಧರಮೂರ್ತಿ ಎಂಬ ಅವರು ಲಾ ಕಾಲೇಜಿನ ಕೊನೆಯ ಹಂತದಲ್ಲಿದ್ದರು. ಮೂವರೂ ಆಗ ಗಾಂಧಿಬಜಾರ್‍ನಲ್ಲಿದ್ದ `ಗೀತಾ ಹೋಟೆಲ್’ ಗೆ ಬಂದು ಕಾಫಿ ಕುಡಿದೆವು. ಶ್ರೀಧರ್ `ಅನುರೂಪ’ ಸಿನಿಮಾದಲ್ಲಿ ಅನಂತ್‍ನಾಗ್‍ರ ಶಿಷ್ಯರಾಗಿ ನಟಿಸುತ್ತಿದ್ದು ನಾನು ಸಹನಿರ್ದೇಶಕ ಮತ್ತು ಸಿನಿಮಾದ ಮೇನೇಜರ್ ಕೆಲಸ ಸಹ ಮಾಡುತ್ತಿದ್ದೆ. ಲಂಕೇಶ್‍ರ ಊರ ಕಡೆಯ ಹುಡುಗನೆಂದು ನನಗೆ ಎಲ್ಲರೂ ಗೌರವ ಕೊಡುತ್ತಿದ್ದರು.
ಹೀಗೆ ಶ್ರೀಧರ್ ಜೊತೆಗಿನ ಸಂಬಂಧ ಶುರುವಾಯಿತು. ಬೆಂಗಳೂರಿನಲ್ಲಿ ಪರಿಚಯವಾದ ಆತ್ಮೀಯ ಸ್ನೇಹ ಬಳಗಕ್ಕೆ ಸೇರಿಕೊಂಡರು. ಅದಕ್ಕೂ ಮೊದಲು ಕ್ಯಾಮರಾಮನ್ ಗೌರಿಶಂಕರ್ ಮತ್ತು ಹುಲಿ ಚಂದ್ರಶೇಖರ್ ಪಟ್ಟಾಭಿರಾಮರೆಡ್ಡಿಯವರ ಮೂಲಕ ಸ್ನೇಹ ಬಳಗದಲ್ಲಿ ಸೇರಿದ್ದರು. ಈಗ ‘ಅಗ್ನಿ ಶ್ರೀಧರ್’ ಎಂದು ಖ್ಯಾತರಾಗಿರುವ ಶ್ರೀಧರ್ ನನ್ನ ಸಂಬಂಧಕ್ಕೆ ನಾಲ್ಕು ದಶಕಗಳು. ಈ ನಾಲ್ಕು ದಶಕಗಳು ಅಂದರೆ ಶತಮಾನದಷ್ಟು ಸವೆಯಲಾರದ ನೆನಪುಗಳು ಮತ್ತು ಘಟನಾವಳಿಗಳು. ಹೀಗೆ ಇವುಗಳ ನೆನಪಿನಲ್ಲಿ ಬರುವ ಪ್ರಸಿದ್ಧರು-ಸುಪ್ರಸಿದ್ಧರು ಮುಂತಾಗಿ ಎಲ್ಲವನ್ನೂ ದಾಖಲಿಸುವ ಹಂಬಲ ನನಗಿದೆ.

ಗೋವಿಂದಪ್ಪ ರಸ್ತೆ ಮತ್ತು ಗೋಕುಲ ಬಿಲ್ಡಿಂಗ್‍ಗೆ ಅಷ್ಟೇನು ದೂರವಿರಲಿಲ್ಲ. ಡಿವಿಜಿ ರಸ್ತೆ ಮತ್ತು ಗಾಂಧಿಬಜಾರ್ ನಡುವೆ ಬರುತ್ತಿತ್ತು. ನನಗೆ ಇಡೀ ಬೆಂಗಳೂರಿನ ಸಾಂಸ್ಕೃತಿಕ ಲೋಕ ಪರಿಚಯವಾಗಿದ್ದು ಮತ್ತು ತೆರೆದುಕೊಂಡಿದ್ದು ಲಂಕೇಶ್‍ರ ಮೂಲಕ.
ಗೋವಿಂದಪ್ಪ ರಸ್ತೆಯ ಲಂಕೇಶ್‍ರ ಮನೆಯಲ್ಲಿ ಮೇಷ್ಟ್ರು ಒಂದು ಬನಿಯನ್ ಅಥವಾ ಬರೀ ಮೈಯಲ್ಲಿ ಟವಲ್ ಹೊದ್ದುಕೊಂಡು ಕುಳಿತುಕೊಳ್ಳುತ್ತಿದ್ದರು. ಆ ಕುರ್ಚಿ ಬೆತ್ತದ್ದಾಗಿದ್ದು ಹಾಸಿಗೆಯ ತರಹ ವಾಲಿರುತ್ತಿತ್ತು. ಅದಕ್ಕೆ ಆಗೆಲ್ಲಾ `ಆರಾಮ್‍ಚೈರ್’ ಎಂದು ಕರೆಯುತ್ತಿದ್ದರು. ಎದರುಗಡೆ ಒಂದು ಸಣ್ಣ ಟೀಪಾಯ್ ಮೇಲೆ ಆಸ್ಟ್ರಾ ಇರುತ್ತಿತ್ತು. ಮೇಷ್ಟ್ರು ಸದಾ ಗೋಲ್ಡ್ ಫ್ಲೇಕ್ ಸಿಗರೇಟು ಸೇದುತ್ತಿದ್ದರು. ಅವರು ಎಡಕೈಯ ಕಿರು ಬೆರಳುಗಳ ಸಂದಿಯಲ್ಲಿ ಸಿಗರೇಟನ್ನು ಇಟ್ಟುಕೊಂಡು ಧಂ ಎಳೆಯುತ್ತಿದ್ದರು.
ಅವರು ಸಿಗರೇಟು ಸೇದುವ ಸ್ಟೈಲ್ ಅನ್ನು ನಾವೆಲ್ಲಾ ಅವರ ಬೆನ್ನ ಹಿಂದೆ ಅಣಕಿಸುತ್ತಿದ್ದೆವು. ನಾವೆಲ್ಲಾ ಅಂದರೆ ಒಬ್ಬರೆ – ಇಬ್ಬರೆ ಹೇಳಲು.. ಶ್ರೀಧರ್, ಗೌರಿ, ಹುಲಿ, ಟಿ.ಎನ್.ಸೀತಾರಾಂ, ಟಿ.ಎಸ್. ರಂಗ, ರಾ.ನಾಗೇಶ್, ಎಲ್.ಕೃಷ್ಣಪ್ಪ, ಶೂದ್ರ, ಅಗ್ರಹಾರ, ಡಿ.ಆರ್, ಕೀರಂ, ಮೋಹನ್ ಕೊಂಡಜ್ಜಿ, ಕೋಡಳ್ಳಿ ಶಿವರಾಂ, ಮೋಹನ್‍ರಾಂ… ಹೀಗೆ ಪಟ್ಟಿ ಹನುಮಂತನ ಬಾಲದಂತೆ ಬೆಳೆಯತ್ತಾ ಹೋಗುತ್ತದೆ. ಅವರಿಗೆ ಸಿಟ್ಟು ಬಂದಾಗ ಅಥವಾ ಜೋರಾಗಿ ಚರ್ಚೆ ಮಾಡುವಾಗ ` ಫೂಲ್ಸ್.. ನೀಮ್ಗೇನು ಬುದ್ಧಿ-ಗಿದ್ಧಿ ಇಲ್ವೇನ್ರಯ್ಯಾ..’ ಎನ್ನುವ ಮಾತನ್ನು ಕಿರು ಬೆರಳಲ್ಲಿ ಸಿಗರೇಟು ಪುಸ್-ಪುಸ್ ಎಳೆಯುತ್ತಾ ಬಯ್ಯುವ ಲಂಕೇಶ್‍ರನ್ನು ಅನುಕರಣೆ ಮಾಡುತ್ತಿದ್ದೆವು.

ಆಗ ಗಾಂಧಿಬಜಾರ್‍ನಲ್ಲಿ ವಾಸವಾಗಿದ್ದ ಕೀರಂ ಸಾಮಾನ್ಯವಾಗಿ ಮೇಷ್ಟ್ರ ಗೋವಿಂದಪ್ಪ ರಸ್ತೆಯ ಮನೆಗೆ ಹೆಚ್ಚು ಬರುತ್ತಿದ್ದರು. ಅವರಿಗಿಂತ ಚಿಕ್ಕ ವಯಸ್ಸಿನವರು ಬಂದರೆ ಟವಲ್ ಹೊದ್ದುಕೊಂಡೇ ಮಾತನಾಡಿಸುತ್ತಿದ್ದರು. ಸ್ವಲ್ಪ ದೊಡ್ಡವರು ಬಂದರೆ ಜಿಎಸ್‍ಎಸ್ ಅಥವಾ ಕೆ.ಎಸ್.ನರಸಿಂಹಸ್ವಾಮಿ ತರಹದವರು ಬಂದರೆ ಒಳಗಡೆ ಹೋಗಿ ಅಂಗಿ ಹಾಕಿಕೊಂಡು ಬರುತ್ತಿದ್ದರು. ಅವರ ವಾರಿಗೆಯ ಸ್ನೇಹಿತರು ಬಂದರೆ ಹಾಗೆಯೇ ಇರುತ್ತಿದ್ದರು. ಅವರ ಸ್ನೇಹಿತರಲ್ಲಿ ಕೆಲವರು `ಏನ್ ಲಂಕೇಶ್.. ಅಂಗಿ ಹಾಕ್ಕೋಂಡಿಲ್ಲ..’ ಎಂದರೆ ` ಏನ್ ಮಾಡೋದು ಸ್ವಾಮಿ ಬಡತನ ನಿನ್ನಂತ ಸಾಹುಕಾರ್ರು ಬರಲೀ ಅಂತನೇ ಕಾಯ್ತಿದ್ದೆ..’ ಎಂದು ನಗಿಸುತ್ತಿದ್ದರು.
ನನಗೆ ತಿಳಿದಂತೆ ಆ ಕುರ್ಚಿಯನ್ನು ಒಬ್ಬರಿಗೆ ಮಾತ್ರ ಎದ್ದುನಿಂತು ಬಿಟ್ಟುಕೊಡುತ್ತಿದ್ದರು. ಅವರೇ ರಾಜೀವ್ ತಾರಾನಾಥ್. ಪಲ್ಲವಿ, ಅನುರೂಪ ಚಿತ್ರಗಳ ಸಂಗೀತ ನಿರ್ದೇಶಕರಾಗಿಯೂ ಇದ್ದ ರಾಜೀವ್ ತಾರಾನಾಥ್ ರದು ಅಜಾನುಭಾಹು ವ್ಯಕ್ತಿತ್ವವಾಗಿತ್ತು.
ಬಹುಷಃ ಇದರಿಂದಲೇ ಆರಾಮ್ ಚೇರ್‍ನ್ನು ಅವರೊಬ್ಬರಿಗೆ ಬಿಟ್ಟುಕೊಟ್ಟು ವಿಧೇಯ ವಿಧ್ಯಾರ್ಥಿಯಂತೆ ಅವರೆದುರಿಗೆ ಕುಳಿತುಕೊಂಡಿರುತ್ತಿದ್ದರು. ಲಂಕೇಶ್‍ರಿಗೆ ಅಪಾರವಾದ ಹಾಸ್ಯಪ್ರಜ್ಞೆ ಇತ್ತು. ನಾನು ಟಿ.ಎಸ್. ರಂಗಾರನ್ನು ಲೇವಾದೇವಿ ಮಾಡುವ ಶ್ರೀಮಂತ ಮಾರ್ವಾಡಿ ಅಂತನೇ ಎಷ್ಟೋ ಕಾಲ ತಿಳಿದುಕೊಂಡಿದ್ದೆ. ಹಾಗಂತ ಲಂಕೇಶ್‍ರು ನನಗೆ ಪರಿಚಯಿಸಿದ್ದರು. ರಂಗ ನಗುತ್ತಾ ಕುಳಿತಿದ್ದು ಹಾಗೆ ಮಾಡಿತ್ತು. ಇನ್ನು ಶೂದ್ರ ಶ್ರೀನಿವಾಸ್‍ರನ್ನು `ಶನಿ ಪರಮಾಪ್ತನ ಸಂಬಂಧಿ..’ ಎಂದು ಪರಿಚಯಿಸಿದ್ದು ಶೂದ್ರ ನಕ್ಕಿದ್ದು ನನಗಿನ್ನು ಹಸಿರಾಗಿದೆ.

ಕೀರಂ ಮತ್ತು ಲಂಕೇಶ್ ಬಗ್ಗೆ ಈಚೆಗೆ ಹೆಚ್ಚು ಹೆಚ್ಚು ಸಮಾರಂಭಗಳು ನಡೆದು ಗಾಂಧಿಬಜಾರ್ ಕಡೆ ಹೋದಾಗ ನಡೆದುಹೋದ ಬದುಕು ಜನ- ಅವರೊಂದಿಗೆ ಹೆಜ್ಜೆ ಹಾಕಿದ್ದು ಇತ್ಯಾದಿ.. ಇವುಗಳಲ್ಲಿ ಕೀರಂ ಎಂಬ ಒಂದು ವಿಸ್ಮಯದ ಬಗ್ಗೆ ಹಲವಾರು ಜನ ಹಲವಾರು ರೀತಿಯಲ್ಲಿ ಕರೆದಿದ್ದಾರೆ. ಕಾವ್ಯದ ಗಾರುಡಿಗ ಮುಂತಾಗಿ ಕರೆಸಿಕೊಳ್ಳುತ್ತಿದ್ದ ಕೀರಂರಿಗೆ ಲಂಕೇಶ್‍ರನ್ನು ಕಂಡರೆ ಸ್ವಲ್ಪ ಅಳುಕು ಇತ್ತು.
ನನಗೂ ಸಹ ಅವರನ್ನು ಕಂಡರೆ ಅದೇ ಅಳುಕು ಹೆದರಿಕೆ ಇರುತ್ತಿತ್ತು. ಅದಕ್ಕೆ ಸರಿಯಾಗಿ ಮೇಷ್ಟ್ರು ರೇಗಾಡಿ ಬಿಡುತ್ತಿದ್ದರು. ಅನಂತಮೂರ್ತಿಯವರಿಗೆ ಅರವತ್ತು ತುಂಬಿದಾಗ ರೇಸ್‍ಕೋರ್ಸ್‍ನಲ್ಲಿ ನಡೆದ ಸಮಾರಂಭ ಹೇಗೆ ಕೆಟ್ಟೋಯ್ತು, ಅಲ್ಲಿ ಲಂಕೇಶ್ ಮತ್ತು ಕೀರಂ ನಡೆಯ ಬಗ್ಗೆ ಈಗಾಗಲೇ ಹಲವರು ಬರೆದಿದ್ದಾರೆ. ನಡೆದುಹೋದ ಕೆಲವು ಘಟನೆಗಳು ಉಳಿಸಿಹೋಗುವ ಪ್ರಭಾವ ಮಾತ್ರ ಅಪಾರವಾಗಿರುತ್ತದೆ. ನನಗೆ ಕೀರಂ ಯಾವ ಇಸವಿಯಲ್ಲಿ ಎಂಬುದು ನೆನಪಿಲ್ಲದಷ್ಟು ಹಳೆಯ ಪರಿಚಯ. ಅವರೊಂದಿಗೆ ಗಾಂಧಿಬಜಾರ್‍ನ ಎಲ್ಲಾ ಬಾರ್ ಮತ್ತು ವೈನ್‍ಸ್ಟೋರುಗಳಿಗೆ ಹೋಗಿದ್ದೇನೆ ಹಾಗಾಗಿ ಸಲಿಗೆ ಸ್ವಲ್ಪ ಜಾಸ್ತಿ ಎಂದೇ ಹೇಳಬಹುದು.
ಇಲ್ಲಿ ಮೇಷ್ಟ್ರು ಮತ್ತು ಕೀರಂ ನಡುವೆ ನಡೆದ ಒಂದು ಪ್ರಸಂಗ ಪದೇ ಪದೇ ನೆನಪಿಗೆ ಬರುತ್ತದೆ. 1976 ರಲ್ಲಿ `ಅನುರೂಪ’ ಸಿನಿಮಾದ ಮೂಲಕ ಬೆಳೆದ ಈ ಬೆಂಗಳೂರಿನ ನಂಟು ಈಗಲೂ ಮುಂದುವರಿದಿದೆ. ಲಂಕೇಶ್‍ರು `ಖಂಡವಿದೆಕೋ..’ ಮತ್ತು `ಎಲ್ಲಿಂದಲೋ ಬಂದವರು’ ಸಿನಿಮಾಗಳನ್ನು ಮಾಡಿ `ಲಂಕೇಶ್ ಪತ್ರಿಕೆ’ 1980 ರಲ್ಲಿ ಆರಂಭಿಸಿದರು. ಈ ವರ್ಷಗಳ ನನ್ನ ಅನುಭವ ಬಹಳ ದಟ್ಟವಾಗಿವೆ ಮತ್ತು ಅದನ್ನ ಬೇರೆಡೆ ದಾಖಲಿಸುತ್ತಿದ್ದೇನೆ.

ಪತ್ರಿಕೆ ಆರಂಭದ ದಿನಗಳು. ಪತ್ರಿಕೆಯಲ್ಲಿ ಜಾಣಗೆರೆ ಮತ್ತು ನಾನು ಮತ್ತು ಸಿದ್ದಪ್ಪ. ಪ್ರಸನ್ನ ಆರಾಧ್ಯ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದು ದಿನವೂ ಬರುತ್ತಿದರು. ಅದೇ ಗೋವಿಂದಪ್ಪ ರಸ್ತೆಯ ಮೇಷ್ಟ್ರ ರೂಂನಲ್ಲಿ ಅದೇ ಚಿಕ್ಕ ಟೀಪಾಯ್ ಮತ್ತು ಮೇಜಿನ ಮೇಲೆ ಪತ್ರಿಕೆಯ ಮೊದಲ ಸಂಚಿಕೆಗಳ ತಯಾರಿಯಾಗುತ್ತಿದ್ದವು. ಪತ್ರಿಕೆ ನಡೆದಷ್ಟು ದಿನ ನಡೆಯಲಿ ಮತ್ತೆ ಹೊಸ ಸಿನಿಮಾ ಮಾಡೋಣವೆಂದು ಮೇಷ್ಟ್ರು ಹೇಳುತ್ತಿದ್ದರು. ಪತ್ರಿಕೆಗೆ ಬರೆಯುವ ಕೆಲವರು ಬಂದು ಹೋಗುತ್ತಿದ್ದರು. ನಾನು ಆಗಾಗ ಮೇಷ್ಟ್ರಿಂದ ಮರೆಯಾಗಿ ಗಾಂಧಿಬಜಾರ್‍ನಲ್ಲಿ ಕಳೆದುಹೋಗುತ್ತಿದ್ದೆ.
ಡಿವಿಜಿ ರಸ್ತೆಯಲ್ಲಿ ಇದ್ದ ಮಾರ್ಡನ್ ಹೋಟಲ್‍ನಲ್ಲಿ ಕಾಫಿಗೆಂದು ಹೋಗುವಾಗ ಅಲ್ಲಿ ಕೀರಂ ಸಿಕ್ಕು ನನಗಾಗಿ ಕಾಯುತ್ತಿರುವುದಾಗಿ ಹೇಳಿ ನಕ್ಕರು. `ಯಾಕೆ ಸಾರ್..’ ಎಂದು ಕೇಳಿದೆ. `ಹೇಗೆ ಹೇಳಿಕೊಳ್ಳುವುದು ಮಾಸಡಿ.. ಸಣ್ಣ ಸಹಾಯ ನಿಮ್ಮಿಂದ ಆಗಬೇಕು..’ ಎಂದರು. ` ಅದೇನು ಹೇಳಿ ಸಾರ್..’ ಅಂದೆ. ಅವರು ಕಾಫಿ ಕುಡಿಯುತ್ತಾ ಹೇಳುವುದು ಬೇಡವೋ ಎಂಬ ಹೊಯ್ದಾಟಕ್ಕೆ ಬಿದ್ದರು. ಏನೋ ಆಗಬಾರದ್ದು ಆಗಿರಬೇಕೆಂದು ಹೇಗೆ ಅವರನ್ನು ಒತ್ತಾಯಿಸುವುದು ಎಂದು ಪುಸಲಾಯಿಸತೊಡಗಿದೆ. ` ಏನಿಲ್ಲಾ .. ಪತ್ರಿಕೆ ಚೆನ್ನಾಗಿ ಬರ್ತಾಯಿದೆ. ಅದೂ ಮೇಷ್ಟ್ರ ಹತ್ತಿರ ಮಾತಾಡಬೇಕಿತ್ತು..’ ` ಅದಕ್ಕೇನು ಸಾರ್.. ನಿಮಗೆ ಯಾವ ಸಮಯದಲ್ಲಾದರೂ ಅವರು ಮಾತಾಡ್ತಾರೆ..’ ನಾನು ಹೇಳಿದೆ.
` ಅದು ಸ್ವಲ್ಪ ಕಷ್ಟದ್ದು.. ನೀವೇ ನನ್ನ ಪರವಾಗಿ ಮಾತಾಡಿ..’ ಎಂದು ಮುಂದುವರಿಸಿದರು. `ನನಗೆ ಸ್ವಲ್ಪ ದುಡ್ಡು ಬೇಕಿತ್ತು.. ಮೇಷ್ಟ್ರ ಬಳಿ ಕೇಳಬೇಕಿತ್ತು..’ ಎಂದರು. ನನ್ನ ಆತಂಕ ಮಾಯವಾಯಿತು.
`ಅಯ್ಯೋ ಅಷ್ಟೇನಾ.. ನಾನು ಅದರಲ್ಲಿ ಪಳಗಿದ್ದೇನೆ ಬಿಡಿ. ಮೊನ್ನೆ ತಾನೆ ಊರಿಂದ ಬಂದಿದ್ದ ಅವರಣ್ಣ ಶಿವರುದ್ರಪ್ಪರಿಗೆ ಮೇಷ್ಟ್ರಿಂದ ದುಡ್ಡು ಇಸಿದು ಕೊಡಿಸಿದ್ದೇನೆ. ನಿಮಗೆ ಎಷ್ಟು ಬೇಕು ಅಂತಾ..’ ಅಂದು ಕೇಳಿದೆ. ` ಹಾಗಲ್ಲ ಇಷ್ಟು ಅಷ್ಟು ಅಂತಲ್ಲ.. ಸುಮ್ಮನೆ ಕೀರಂಗೆ ದುಡ್ಡು ಬೇಕಂತೆ ಅಂತ ಕೇಳಿ. ನಾನು ಇಲ್ಲಿಯೇ ಎಲ್ಲಾದರೂ ಸಿಗುತ್ತೇನೆ.’ ಎಂದರು.
ನಾನು ಮೇಷ್ಟ್ರ ಬಳಿ ಸುಮ್ಮನೆ ನಿಂತುಕೊಂಡೆ. `ಏನೋ ನಿಂದು..’ ಎಂದು ನಾನು ಹಾಗೆ ನಿಂತಾಗ ಕೇಳುವುದು ವಾಡಿಕೆಯಾಗಿತ್ತು. `ಸಾರ್ ಕೀರಂ ಸಿಕ್ಕಿದ್ದರು.’ ಅಂದೆ. `ಏನಂತೆ ಅವನಂದು..’ ಅಂದರು. `ಏನಿಲ್ಲಾ ಸ್ವಲ್ಪ ದುಡ್ಡು ಇದ್ದರೆ ಕೇಳಿ ಇಸ್ಕೋಂಬನ್ನಿ ಅಂದ್ರು’ ಎಂದೆ. `ಅವನಿಗೆ ಬರ್ಲಿಕ್ಕೆ ಏನಾಗಿತ್ತು ಧಾಡಿ..’ ಎಂದು ಗದರಿದರು. ನಾನು ಯಥಾ ರೀತಿ ಸುಮ್ಮನೆ ನಿಂತೆ. ಕೊನೆಗೆ ಎಂಟುನೂರು ರೂಪಾಯಿ ಕೊಟ್ಟು ಕೊಡಲು ಹೇಳಿದರು. ಕೆಳಗಿಳಿದು ಮತ್ತದೇ ಹೋಟೆಲ್ ಬಳಿ ಹೋದೆ. ಕೀರಂ ಕಾಯುತ್ತಿದ್ದರು. ` ಸಾರ್ ಮೇಷ್ಟ್ರು ಎಂಟುನೂರು ಕೊಟ್ಟಿದ್ದಾರೆ..’ ಎಂದೆ. ಅವರು ಖುಷಿಯಾಗಿ ಮೇಷ್ಟ್ರು ಏನೇನು ಹೇಳಿದರು ಎಂದು ಕೇಳಿ ಸಂಜೆ ಮಾರ್ಕೆಟ್ ಬಳಿ ಇರುವ ಕಂಟ್ರಿ ಸಾರಾಯಿ ಅಂಗಡಿಗೆ ಕರೆದುಕೊಂಡು ಹೋಗುವುದಾಗಿ ಕಣ್ಣು ಮಿಟುಕಿಸಿ ಹೋದರು.

ಇದಾಗಿ ಆರೇಳು ತಿಂಗಳಲ್ಲಿ `ಲಂಕೇಶ್ ಪತ್ರಿಕೆ’ ನಾಡಿನಲ್ಲಿ ಪ್ರಸಿದ್ಧಿ ಪಡೆದು ಮೊದಲನೆ ಮಹಡಿಯ ಮೇಷ್ಟ್ರ ಮನೆ ಮೇಲೆ ನಮಗೆಂದು ತಾತ್ಕಾಲಿಕ ಒಂದು ರೂಂನ್ನು ಕಟ್ಟಿಸಿಕೊಂಡೆವು. ಪತ್ರಿಕೆಯ ವಿಷಯಗಳನ್ನು ಆಗೆಲ್ಲಾ ಮೊಳೆಯಲ್ಲಿ ಜೋಡಿಸಿ ಅಚ್ಚು ಹಾಕಿಸಬೇಕಿತ್ತು. ಮೇಲ್ಗಡೆಯ ರೂಂನಲ್ಲಿ ಜಾಣಗರೆಯ ಸ್ನೇಹಿತರು ಪತ್ರಿಕೆಯ ವಿಷಯಗಳನ್ನು ಜೋಡಿಸಿ ಈ ಅಚ್ಚು ಹಾಕುವ ಕೆಲಸಕ್ಕೆ ನೇಮಕಗೊಂಡಿದ್ದರು. ಅವರಲ್ಲಿ ಗೋಪಾಲ್ ಎಂಬುವರಿಗೆ ಸಾಹಿತಿಗಳು ಮುಂತಾಗಿ ಗೊತ್ತಿತ್ತು.` ನಿಮಗಾಗಿ ಕೀರಂ ಕಾಯ್ತಾ ಇದಾರೆ ಹೋಗಿ’ ಎಂದು ಹೇಳಿದರು. ಸರ್ಕಲ್‍ನಲ್ಲಿ ನಿಂತು ಸಿಗರೇಟು ಏಳೆಯುತ್ತಿದ್ದ ಕೀರಂ ಸಿಕ್ಕು ಮತ್ತೆ ಅದೇ ಲಂಕೇಶ್‍ರ ಬಳಿ ಹಣ ಕೇಳಲು ಹೇಳಿದರು. ಸಾರ್ ಹಿಂದಿನದು ತೀರಿಸಿದಿರಾ ಮುಂತಾಗಿ ಕೇಳಿದ್ದಕ್ಕೆ ಅವರ ಯಥಾರೀತಿಯ ಕಣ್ಣುಮಿಟುವಿಕೆಯಿಂದ ನಕ್ಕರು.

ಮೇಷ್ಟ್ರು ಆಗಾಗ ಮೇಲೆ ಬರುತ್ತಿದ್ದು ಕೆಳಗಿನ ಮನೆಯಲ್ಲಿರುತ್ತಿದ್ದರು. ನಾನು ಯಥಾ ರೀತಿ ನಿಂತುಕೊಂಡೆ. ಅದೇ ದೃಶ್ಯ. ಈಗ ಮೇಷ್ಟ್ರು ಸ್ವಲ್ಪ ಅಧಿಕಾರಯುತವಾಗಿ ಕೆಲವೊಮ್ಮೆ ಸಿಟ್ಟಿನಿಂದ ನಡೆದುಕೊಳ್ಳತೊಡಗಿದ್ದರು. ಹೀಗೆ ಕೇಳಿದ ಕೀರಂರಿಗೆ ಸಿಕ್ಕಾಪಟ್ಟೆ ಬೈದು ಎರಡು ಸಾವಿರದ ಇನ್ನೂರು ರೂಪಾಯಿ ಕೊಟ್ಟರು. ಅವರು ಯಾವಾಗಲೂ ಹೇಳುವ `ಇಸ್ಕೊಂಡು ಸಾಯಲಿಕ್ಕೆ ಹೇಳು..’ ಎಂದು ಸುಮ್ಮನಾದರು.
ನಾನು ಸ್ವಲ್ಪ ತಡವಾಗಿ ಕೀರಂರನ್ನು ಕೂಡಿಕೊಂಡೆ. ` ಸಾರ್ ಅವರು ಬೈದಿದ್ದು ಏನು ಹಚ್ಕೋಬೇಡಿ..ಇಲ್ಲಿದೆ ನೊಡಿ ದುಡ್ಡು..’ ಎಂದೆ. ಎಣಿಸಿದ ಅವರು `ಅರೆ ಸಾಲ ಎಲ್ಲಾ ತೀರಿದಂಗಾಯ್ತು ಮಾಸಡಿ..’ ಎಂದರು. ` ಯಾವ ಸಾಲ ಸಾರ್..’ ಎಂದೆ. ` ಅದೇ ನಾನು ಅವರಿಗೆ ಕೊಟ್ಟ ಸಾಲ..’ ಎಂದರು. ನಾನು ಪೆಚ್ಚಾದೆ. ಅರೆ `ನೀವು ಕೊಟ್ಟ ಸಾಲ ಕೇಳಲಿಕ್ಕೆ ಹಿಂಗಾ’ ಅಂದೆ. ಅವರು ನಕ್ಕು ವಿಧ್ಯಾರ್ಥಿ ಭವನಕ್ಕೆ ಎಳೆದುಕೊಂಡು ಹೋದರು. ನಾನು ಅವರಿಗೆ ಸಾಲ ಕೊಡಿಸುತ್ತಾ ಬಂದಿದ್ದೇನೆ ಎಂಬ ಒಂಥರಾ ಅಹಂ ನನ್ನೊಳಗೆ ಬೆಳೆದಿತ್ತು. ಅವರ ದುಡ್ಡು ಅವರು ಪಡೆಯಲು ಇಷ್ಟೊಂದು ಕಸರತ್ತು ನಡೆಸಬೇಕಿತ್ತೇ ಎಂಬ ಪ್ರಶ್ನೆ ಕಾಡತೊಡಗಿತ್ತು.

1980 ರ ಇಸವಿ ಹೋಗಿ ಕಾಲವು ಹಿಂದೆ ಸರಿದಂತೆ ಕೀರಂ ನಾನು ಇಬ್ಬರೇ ಸೇರಿದಾಗ ಅವರು ನಾನು ಬರುವುದನ್ನು ಕಾಯುತ್ತಿದ್ದದ್ದನ್ನು ಹೇಳಿ ನಗಾಡುತ್ತಿದ್ದೆವು. ಕೆಲವೊಮ್ಮೆ ಹತ್ತಿರದವರಿಗೆ ನಾನು ಈ ವಿಷಯ ಅವರೆದುರಿಗೆ ಹೇಳುತ್ತಿದ್ದೆ. ಎದುರಿಗೆ ಕೂತವರನ್ನು ಕಾವ್ಯದ ಮೂಲಕ ಅಥವಾ ಸಂಗೀತದ ಮೂಲಕ ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತಿದ್ದ ಅನೇಕ ವಿಶೇಷಣಗಳ ಗಾರುಡಿಗ ಕೀರಂ ನಾಗರಾಜ ಲಂಕೇಶ್‍ರೊಟ್ಟಿಗೆ ಮಾಡಿಕೊಂಡ ಈ ವ್ಯವಹಾರ ಆ ಇಬ್ಬರೂ ಇಲ್ಲದ ಸಮಯದಲ್ಲಿ ಇರುವ ಗಾಂಧಿಬಜಾರ್‍ನಲ್ಲಿ ನನಗೆ ಕಾಡುತ್ತದೆ.



0 Comments