ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಲ್ಲಕಚ್ಚಿದ ಅರಿಷಿಣ ಕೆಂಪಾಗಿ ಬಿಡಲಿ ದಿನ ದಿನವು..

chandrakanta kusanuru

ಚಂದ್ರಕಾಂತ ಕುಸನೂರ

`ಬೊಗಸೆ’ ಓದುತ್ತಿರುವಾಗ Roman Jakobsons ಅವರ ಕೆಲವು ಸಾಲುಗಳು ನೆನಪಾದವು.   “Poetry is the shaping of the autonomous word”ರ  ಅವರು ಹೇಳುವ ಒಟ್ಟಾರೆ ಮಾತುಗಳು ಹೀಗಿವೆ. ‘’If the plastic arts involve the shaping of the autonomous material of visual representations, music the shaping of autonomous sound material, choreography of the material of autonomous gesture, then poetry is the shaping of autonomous word.’’

ರೇಣುಕಾ ಅವರು ತಮ್ಮ ಕವಿತೆಗಳಲ್ಲಿ ‘autonomous  shaping’ ಅನ್ನು ತುಂಬಾ ಜಾಣತನದಿಂದ ಬಳಸಿಕೊಂಡಿದ್ದಾರೆ. ಪ್ರೇಮ, ಕಾಮ, ಮಧು, ಬಟ್ಟಲು, ನೀನು-ನಾನು ಇಂಥ ಗಜಲಿನ ಗೂಡಿನಿಂದ ತಂದ ಕೆಲವು ಶಬ್ದಗಳು ಅಲ್ಲಲ್ಲಿ ಕಾಣಿಸಿಕೊಂಡರೂ, ಗಜಲಿನ ಪಂಜರಕ್ಕೆ ಸಿಕ್ಕಾಕಿ ಕೊಂಡಿಲ್ಲ. ಅವರ ಮುಕ್ತ ಛಂದ ಇದಕ್ಕೆ ಕಾರಣವಿರಬಹುದು ಹೀಗಿದ್ದರೂ, `ಗಜಲ್’ ಇವರ ಬೆನ್ನು ಹತ್ತಿದ್ದು ನಿಜ. `ಗಜಲ್’ ಇದೊಂದು `ನಿಶೆ’ `ಅಮಲು. ನಾಜೂಕು ವಿಷಯಗಳನ್ನು ಅಷ್ಟೇ ನಾಜೂಕು ಶಬ್ದಗಳಿಂದ ಹೇಳುವ ಶೈಲಿ, ತುಂಬ ಮೋಹಕವಾಗಿದೆ.

ಮಾತುಗಳೆಲ್ಲವನು ಉಸಿರಲಿ ಹೊದ್ದು
ನೆನಪಿನಿಂದಲೇ ನಾಚಿ ನೀರಾಗಿ
ನಿಂತಿದ್ದೇನೆ
ನಿನ್ನ ಬರುವಿಗಾಗಿ
ವಾಕ್ಯರಚನೆ, ಶಬ್ದಗಳ ಜೋಡಣೆ ಅವುಗಳ Placement ಎಲ್ಲವು ‘shaping of the autonomous word’. ಆಗಿವೆ. ಒಂದು ಮೂರು ಈ ಗುಂಪಿನಲ್ಲಿ ಭಾವ ಒಂದೇ ಆದರೆ `ರೂಪಾಕೃತಿ’ ಬೇರೆ `ಕಾದು ಕುಳಿತಿರುವುದು’ ನಿಜ, ಆದರೆ ಚಿತ್ರ ಬೇರೆ ಬೇರೆ ಬಣ್ಣದ ಬೆಳಕಿನಲ್ಲಿ ಕಾಣಿಸಿಕೊಳ್ಳುತ್ತದೆ. ಇಲ್ಲಿ ಮುಗ್ಧ ಮನಸ್ಸಿನ ಛಾಯಾಗ್ರಹಣದ process ಕಂಡು ಬರುತ್ತದೆ. ಇಂಥ ಚಮತ್ಕಾರಿಕ ಸ್ಪರ್ಶ ಬಹುತೇಕ ಎಲ್ಲ ಕವಿತೆಗಳಲ್ಲಿ ನೋಡಬಹುದಾಗಿದೆ.

BogaseTumbaBelaku-final

ತಟ್ಟುವ ಕೈಯೊಳಗೆ
ರೊಟ್ಟಿ ಬೆಂಕಿಯಿಲ್ಲದೆ
ಬಿಸಿಯಾಗುತ್ತಿದೆ
ಬೀದಿಯಲಿ ಬಿದ್ದವರ ಬೊಗಸೆಯೊಳಗೆ
ಹಸಿವು
ಕಣ್ಣ ಹನಿಯಾಗಿ
ಉಕ್ಕುತಿದೆ

ನಿಶ್ಚಿತವಾಗಿ ಕನ್ನಡ ಕಾವ್ಯ ಪ್ರಪಂಚದಲ್ಲಿ ಗಟ್ಟಿಯಾಗಿ ನಿಲ್ಲುವ ಚಿತ್ರವಿದು `ರೇಣುಕಾ’ ತಮ್ಮ ಕಾವ್ಯದ ಮೇಲೆ ಭರವಸೆಯನ್ನಿಟ್ಟುಕೊಂಡ ಲೇಖಕಿ ಕಲ್ಪನೆಯ `ಕಣಜ’ ಮುಂದೆ ನಿಂತಿದೆ.

ಗಲ್ಲಕಚ್ಚಿದ ಅರಿಷಿಣ
ಕೆಂಪಾಗಿ ಬಿಡಲಿ ದಿನ ದಿನವು

ರಮ್ಯತೆಗೆ ಸಾಕ್ಷಿ ಇಂಥ ಸಾಲುಗಳು. ಆಶಾವಾದ, ಅನುಕಂಪ, ಅಲ್ಲಲ್ಲಿ ಕಾಣಿಸಿದರೂ, ಅವು ಅನಿಷ್ಟ ಮೋಡದಂತೆ ಆವರಿಸುವುದಿಲ್ಲ ಭಾವನೆ ಮೇಲಿನ ಸಂಯಮನಿಯಂತ್ರಣ ರಚನೆಯಲ್ಲಿ ದೃಷ್ಟಿಗೊಚರವಾಗುತ್ತದೆ.

ಸಂಧಿಗಳೆದುರು ನೊಂದ ಬದುಕಿನ
ಬೊಗಸೆ ಖಾಲಿಯೇ ಇದೆ
ನಿನ್ನ ರೂಪದ ಹೊರತು
ಕಣ್ಣು ಬೇರೇನೂ ಕಾಣಬಾರದು
ಕುರುಡಾಗಲಿ ಬಿಡು ಇಂದೆ

ಅಷ್ಟಿಷ್ಟೇ ಅತಿರೇಕದ ಆವೇಗ, ಕಾವ್ಯಕ್ಕೆ ದಕ್ಕುವ ಗುಣ ಸ್ವಭಾವಕೂ ದಕ್ಕಬೇಕು ಹಾಗಾದಲ್ಲಿ ಕಾವ್ಯ ಮತ್ತು ಬದುಕಿನ ನಡುವಿದ್ದ ಸಂಬಂಧ ಹಸನಾಗುತ್ತದೆ. ರೇಣುಕಾ ಅವರು ಅಲ್ಲಲ್ಲಿ ಇಂಥ ಪ್ರಯತ್ನ ಮಾಡಿದ್ದಾರೆ. ಚಿಕ್ಕ ಚಿಕ್ಕ ಕವಿತೆಗಳಲ್ಲಿ ಒಂದು ವಿಚಾರ ಪ್ರಖರವಾಗುತ್ತದೆ. ಇಷ್ಟಕ್ಕೆ ಅದರ `ಕಾಯಕ’ ಮುಗಿಯಿತು.

ಸಂಸಾರದ ಸಂತೆಯೊಳಗೂ
ಧ್ಯಾನಕೆ ಕೂತಿದ್ದೇನೆ
ನದಿಯಾಗಿ ನೋವುಗಳನ್ನೆಲ್ಲ
ಮರೆತಿದ್ದೇನೆ

ಇಂಥ ಸುಂದರ ಸಾಲುಗಳುಗಳಿಂದ ಮನಸ್ಸಿಗೆ ಖುಷಿಯಾಗುತ್ತದೆ. ಸಮಾಧಿಗೆ ಹೋಗಿರುವ ಸಾಹಿತ್ಯ ಸಿದ್ದಿಯ ಕ್ರಮ ಇದಲ್ಲ ಜಾಗೃತ ಪ್ರಜ್ಞೆಯಿಂದ ಹುಟ್ಟಿದ ಸಾಲುಗಳಿವು. .“Perhaps generally a great part of the delight of poetry  consults in pronunciation in the independent donee of the organs of speech”  (Eicherbscon — ( Shklovasky on  poetry and Nonsense language) ¸ಸಾಲುಗಳು ನೃತ್ಯದ ಅಭಾಸವನ್ನುಂಟು ಮಾಡುತ್ತವೆ. ಓದುಗರ ಅನುಭವಕ್ಕೆ ಬಿಟ್ಟ ವಿಷಯಗಳಿವು. ರೇಣುಕಾ ಅವರು ಕನಸಿನಿಂದ ಒಂದಿಷ್ಟು ಆಚೆ ಬರಬೇಕೇನೋ! ಕಾರಣ ಕನಸಿನ ಕಾಡುವಿಕೆಯಿಂದ ವಾಸ್ತವ ಇರುವಿಕೆಯಲ್ಲಿ ಗೊಂದಲಗಳಾಗುವ ಸಾಧ್ಯತೆಗಳಿರುತ್ತವೆ, ಆದರೆ ಸದ್ಯ ಮಾತ್ರ ಇಂಥ ಭಯವೇನಿಲ್ಲ.

ಭಾವಕ್ಕೆ
ರಾಗಕ್ಕೆ
ಜೀವಕ್ಕೆ
ನಿನಾದ ತುಂಬಿ
ಬೆರಳ ಸ್ಪರ್ಶದಿ
ನಗುವ
ತರುವವರು ಯಾರು ?
ಕಾಲು ದಾರಿಗೆ
ಕಂದೀಲು
ಹಿಡಿಯಬೇಕಿದೆ
ನಿಲ್ಲದ ಹೆಜ್ಜೆಗಾಗಿ

ಕವಿತೆಯಲ್ಲಿನ ನಡಿಗೆ ಸುಂದರವಾಗಿದೆ.

ಅವ್ವ,
ನಾನಾಡುವ ಪರಿ ಪರಿ ಆಟಗಳಿಗೆ
ಹೊಸ ಹೊಸ ರೂಪ ನೀಡಿದೆ
ನೋವಿನಲ್ಲಿ ನೀ ಖುಷಿಸಿದೆ….

`ಖುಷಿಸಿದೆ’, ತರಹದ ಪದ ಪ್ರಯೋಗ ಸಮರ್ಪಕವಲ್ಲ. ಯಾಕೆಂದು ವಿಚಾರ ಮಾಡಿ, ರೇಣುಕಾ ಅವರೇ `ಇಲ್ಲದ ಹಸಿರು, ಇದರಲ್ಲಿ `ತಲಾಬ್’- (ತಾಲಾಬ್) ಹೊಂದಿಕೊಳ್ಳುವುದಿಲ್ಲ. ಇನ್ಯಾವುದೋ ಪರ್ಯಾಯ ಕನ್ನಡ ಶಬ್ದ ಹಾಕಬಹುದಾಗಿತ್ತು ಒಂದು ವಸ್ತುವಿನ/ ವಿಚಾರದ ಅಲಂಕರಣಕ್ಕೆ ಆಯಾಸ ಮಾಡಿಕೊಂಡು, ಬೇರೊಂದು ವಸ್ತುವಿನಿಂದ `ಚೆಲುವು’ ಹೆಚ್ಚಿಸುವ ಆತುರದಲ್ಲಿ ಮೂಲವಸ್ತುವಿನ ಸೌಂದರ್ಯಕ್ಕೆ ಧಕ್ಕೆ ಉಂಟಾದರೆ ಹೇಗೆ?

ಎಲ್ಲ ಇಲ್ಲಗಳ ನಡುವೆಯೂ
ಭರವಸೆಯ ರೊಟ್ಟಿ ತಟ್ಟಬೇಕು
ಬದುಕಲು ಬದುಕಿಸಲು
ಆಕರ್ಷಕ ಸಾಲುಗಳು.

ಗಜಲುಗಳಿಗೆ ತಮ್ಮದೇಯಾದ ಮೈಕಟ್ಟು, ಬಣ್ಣ, ಸ್ವಭಾವ, ಶೀಲ, ಸಂಯಮ ಇರುತ್ತದೆ. ಅವುಗಳನ್ನು ಕಾಪಾಡಿಕೊಳ್ಳುವ ಪ್ರಯತ್ನ ಪ್ರಶಂಸನೀಯ

ದೀಪ ಹಚ್ಚಿದ್ದೇನೆ ಹೊತ್ತೆ ಹೋಗದ ಗೊತ್ತೆ ಆಗದ ಸಮಯ ದೂಡಲು ಸಾಕಿ
ಕೂಡಿಟ್ಟ ಭಾವನೆಗಳ ಚಿಟ್ಟೆ ಹಾರಿ ಬಿಟ್ಟಿದ್ದೇನೆ ನಿನ್ನ ಕೂಡಲು ಸಾಕಿ

ರೇಣುಕಾ ಅವರು ಆಯ್ದಕೊಂಡ ಹಾದಿ ತುಂಬ ಪ್ರಶಸ್ತವಾಗಿದೆ. ಎರಡೂ ಬದಿಗೂ ಹಸಿರು ಮರಗಳಿವೆ. ನೋಡಿದ ಕಣ್ಣುಗಳಲ್ಲಿ ಸಸ್ಯ ಸಂಪತ್ತಿನ ಬಣ್ಣವಿದೆ. ಹಕ್ಕಿ ಪಕ್ಷಿಗಳಿವೆ ಇಷ್ಟೆಲ್ಲದರ ಜೊತೆಗೆ, ಗೊತ್ತಿಲ್ಲದ ಗೊಂದಲಗಳು ಇವೆ ಹೀಗಿದ್ದರೂ ತುಂಬ ಉತ್ಸಾಹ ಮತ್ತು ಧೈರ್ಯದಿಂದ ನಡೆಯುವ ಅದಮ್ಯ ಚೈತನ್ಯ ಇವರಲ್ಲಿದೆ. ಇವರಿಗೆ ಎಲ್ಲ ತರಹದ `ಯಶಸ್ಸು’ ಸಿಗಲಿ. ನನ್ನ ಶುಭಾಶಯಗಳು.

‍ಲೇಖಕರು admin

17 March, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading