ವೀಣಾ ಭಟ್
ಗಣಪನ ಹಬ್ಬ ಬಂದೇ ಬಿಡ್ತು ….ಎಲ್ಲಿ ನೋಡಿದರೂ ಗಣಪನೆ.ಬಣ್ಣ ಬಣ್ಣದ ಗಣಪ,ಬಣ್ಣ ಇಲ್ಲದ ಗಣಪ ..ದೊಡ್ಡ ಗಣಪ,ಸಣ್ಣ ಗಣಪ…ಇಲಿ ಮೇಲೆ ಕುಳಿತ ಗಣಪ .. ಲಡ್ಡು ಹಿಡಿದಿರುವ ಗಣಪ..ಓದುವ ಗಣಪ,ಕ್ರಿಕೆಟ್ ಆಡುವ ಗಣಪ ,
ಡಾನ್ಸ್ ಮಾಡುವ ಗಣಪ ಹೀಗೆ ನಾನಾ ರೂಪ.ಗಣಪನಿಗೆ ನಾನಾ ರೂಪ ಕೊಟ್ಟು ಖುಷಿ ಪಡುವವರಿಗೆ ಏನೂ ಕಮ್ಮಿ ಇಲ್ಲ .ಇಷ್ಟು ಫ್ರೆಂಡ್ಲಿ ದೇವರು ಗಣಪ ಒಬ್ಬನೇ …
ಗಣಪ ಮಕ್ಕಳಿಗೂ ಬೆಸ್ಟ್ ಫ್ರೆಂಡ್….. ಅದೂ ಅಲ್ಲದೆ ನಮ್ಮ ಗಣಪ ಆಲ್ ರೌಂಡರ್ .ಮಹಾ ಬುದ್ಧಿವಂತ ,ವಿಘ್ನ ವಿನಾಶಕ ,ಆಪ್ತ ಬಂಧು …ನಂಬಿದರೆ ಎಲ್ಲಾ ..ಇವನೇ.ಗಣಪನ ಗುಣಗಾನ ಎಷ್ಟು ಮಾಡಿದರೂ ಸಾಲದು .

ಗಣಪನ ಜೊತೆ ಇಲಿ ಇರಲೇಬೇಕು .ಅದು ಅವನ ವಾಹನ .ಈ ಗಣಪನ ಇಲಿಯೇ ಬೇರೆ ,ನಮ್ಮ ಜೊತೆಗಿರುವ ವಿಧ್ವಂಸಕ ಮಹಾಶಯ ಇಲಿಯೇ ಬೇರೆ . .. .ಭೂಮಿ ಮೇಲಿರುವ ಈ ಇಲಿಯ ಕಿತಾಪತಿ ಕಂಟ್ರೋಲ್
ಮಾಡೋದಕ್ಕೆ ಆ ಗಣೇಶನೇ ಬರಬೇಕು ….!!ಆದರೆ … ಗಣಪನ ಚಿತ್ರದ ಜೊತೆ ಇಲಿಗೆ ಪೂಜೆ ಮಾಡುವ ನಾವು ನಿಜವಾದ ಇಲಿ ಕಂಡರೆ ಹೌ ಹಾರಿ ಬೀಳ್ತೇವೆ.ನಿಜ ತಾನೆ ..??
ಹೌದು ….ಈ ಗಣಪನ ಹಬ್ಬದ ಸಡಗರದಲ್ಲಿ ಹೀಗೇ ಆಯ್ತು .ಮನೇಲಿದ್ದ ಗಣಪನ ಮೂರ್ತಿಗಳನ್ನೆಲ್ಲಾ ಧೂಳು ಹೊಡೆದು ಶುಚಿಗೊಳಿಸ್ತಾ ಇದ್ದೆ. ದೊಡ್ಡ ಗಣಪನ ಮೂರ್ತಿ ಎರಡು ಕೈಯಲ್ಲಿ ಎತ್ತಿದ್ದೆ .. ಅಷ್ಟರಲ್ಲಿ ಚಂಗನೆ
ಒಂದು ಪುಟಾಣಿ ಇಲಿ ಕೈ ಮೇಲೆ ಹಾರಿತು …!!!ಪಕ್ಕನೆ ಬೆಚ್ಚಿ ಬಿದ್ದೆ .ನೋಡುತ್ತಿದ್ದಂತೆಯೇ ಎದುರು ಬಾಗಿಲಿನಿಂದ ಹೊರಗೆ ಹೋಯಿತು . ಓಹ್ ..ಕೂಡಲೇ ನೆನಪಾಯಿತು ..ಕೆಲವು ದಿನಗಳ ಹಿಂದೆ ಮನೆಯೊಳಗೆ ಮರಿ ಇಲಿ
ಸೇರಿಕೊಂಡಿತ್ತು .ಇದು ಅದೇ ಇಲಿ ….ಆ ದಿನ ಮನೆಯಿಡೀ ಓಡಾಡಿ ..ರಣ ರಂಗವಾಗಿತ್ತು .ಬುಕ್ ಶೆಲ್ಫ್ ,ಶೂ ಸ್ಟ್ಯಾಂಡ್ ,ಸೋಫಾ ಎಲ್ಲಾ ಆಕಡೆ ಈಕಡೆ ಸರಿಸಿದರೂ ಇಲಿ ಕಂಡಿರಲಿಲ್ಲ .ಮಗ ಟೇಬಲ್ ಮೇಲೆ ಹತ್ತಿ ಕುಳಿತು
ತಮಾಷೆ ನೋಡ್ತಾ ಇದ್ದ .ಅರ್ಧ ಗಂಟೆ ಹುಡುಕಿದರೂ ಇಲಿ ಸಿಕ್ಕಿರಲಿಲ್ಲ .
ಇಲಿಯನ್ನು ಕೊಲ್ಲುವುದಂತೂ ಅಸಾಧ್ಯ….ಕೊಲ್ಲುವ ಉದ್ದೇಶವೂ ಇರಲಿಲ್ಲ ಅನ್ನಿ …ಮನೆಯಿಂದ ಹೊರಗಾದರೂ ಕಳಿಸೋಣ ಅಂತ ಅಂದುಕೊಂಡಿದ್ದೆ .ಆ ರಾತ್ರಿ ಸರಿಯಾಗಿ ಕೂಡಾ ನಿದ್ದೆ ಬಂದಿರಲಿಲ್ಲ .
ರಾತ್ರಿಯೆಲ್ಲಾ ಇಲಿಯದ್ದೆ ಕನಸು .ಇಲಿ ಅಡಿಗೆ ಮನೆಯಲ್ಲಿ ಕುಳಿತುಕೊಂಡು ಆಲೂಗಡ್ಡೆ ತಿಂದಂತೆ ..,ಎಲ್ಲಾ ಡಬ್ಬಗಳ ಮೇಲೆ ಹಾರಿದಂತೆ ,ಡಬ್ಬದ ಮುಚ್ಚಳ ಕೂಡಾ ತೆಗೆದು ಒಳಗೆ ಕುಳಿತು ಬೆಲ್ಲ ತಿಂದಂತೆ….ಗಣಪನ ಚಿತ್ರದ ಮೇಲೆ ಓಡಾಡಿ ಪೇಪರ್ ಕತ್ತರಿಸಿದಂತೆ ……ನನ್ನ ಹೊಸ ರೇಷ್ಮೆ ಸೀರೆ ಕಡಿದಂತೆ ….ಹೀಗೇ ಇಲಿ ವಿವಿಧ ರೀತಿಯಲ್ಲಿ ಕಾಡಿಸಿತ್ತು . ನಂತರ ಎರಡು ದಿನ ಹೀಗೇ ಕತ್ತಲೆಯಾದಂತೆ ಇಲಿ ಹುಡುಕಾಟ ಪ್ರಾರಂಭವಾಗ್ತಾ ಇತ್ತು .ಮತ್ತೆರಡು ದಿನದಲ್ಲಿ ಉಳಿದವರೆಲ್ಲ ಇಲಿಯ ಬಗ್ಗೆ ಮರೆತೇ ಬಿಟ್ಟಿದ್ದರು .ನಾನು ಮಾತ್ರ ಆಗಾಗ ಇಲಿ ಬಗ್ಗೆ ಯೋಚಿಸಿ ಬೆಚ್ಚಿ ಬೀಳುತ್ತಿದ್ದೆ .ಹೀಗೇ ಮತ್ತೆರಡು ದಿನ ಕಳೆದಿತ್ತು .ಅಷ್ಟರಲ್ಲಿ ಆಶ್ಚರ್ಯಕರವಾಗಿ ನಾನೂ ಮರೆತೆ.ಮತ್ಯಾವತ್ತೂ ಆ ಇಲಿ ಕಾಣಿಸಿಕೊಳ್ಳಲಿಲ್ಲ . ಈಗ ಕ್ಲೀನ್ ಮಾಡಲು ಹೊರಟಾಗ ಇಲಿಯ ವಾಸ ಸ್ಥಾನ ಗೊತ್ತಾಯ್ತು …ಅಲ್ಲಿ ಅರ್ಧ ಆಲೂಗಡ್ಡೆ ,ಕೆಲವು ಕಡಲೆ ಬೀಜ [ನಾನು ರಾತ್ರಿ ನೆನಿಸಿಟ್ಟದ್ದು],ಕತ್ತರಿಸಿದ ಬಟ್ಟೆ ಚೂರುಗಳು ಎಲ್ಲಾ ಸೇರಿ ಒಂದು ಕರಿ ಗುಡ್ಡೆಯಾಗಿತ್ತು .ಕೈಲಾಸದ ಸುಂದರ ಹಾಲು ಬಿಳುಪಿನ ಪರ್ವತ ಭೂಮಿ ಮೇಲೆ ಈ ರೂಪ ತಾಳಿದೆ …ಅಂತ ಸಮಾಧಾನ ಮಾಡಿಕೊಂಡೆ … ಇದು ಗಣಪನ ಮಹಿಮೆಯೇ ಇರಬೇಕು ..ಇದು ನನ್ನ ಅದೃಷ್ಟವೇ ಸರಿ ..ಅಂತಲೂ ಯೋಚಿಸಿದೆ …!!
ಟಾಮ್ ಮತ್ತೆ ಜೆರಿ ಕಾರ್ಟೂನ್ ನಲ್ಲಿ ಇಲಿಯನ್ನು ನೋಡಿದ ನನ್ನ ಮಗನಿಗೆ ಈ ಇಲಿಯೂ ಆಪ್ತವಾಗಿಯೇ ಕಂಡಿತ್ತು . ಗಣಪನ ಇಲಿಯ ಕತೆ ,ಗಣಪ ಚಂದ್ರರ ಕತೆ,ಗಣಪನ ತಲೆ ಹೇಗೆ ಬಂತು ಎಂಬ ಕತೆ ಎಲ್ಲಾ ..ಇನ್ನೊಮ್ಮೆ ನೆನಪಿಸಿಕೊಂಡಾಯ್ತು ..ಈ ಇಲಿ ಅಂತಿಂಥಾ ಇಲಿಯಲ್ಲ..ಸಾಕ್ಷಾತ್ ಗಣಪನ ಇಲಿ , ನಿಜವಾದ ಗಣಪನೇ ಬಂದು ರಕ್ಷಣೆ ಕೊಟ್ಟಿದ್ದಾನೆ ….ಅಂತ ಹೇಳ್ಕೊಂಡು ಮನೆಯವರೆಲ್ಲ ನಕ್ಕಿದ್ದಾಯ್ತು.. ಖುಷಿ ಪಟ್ಟಿದ್ದಾಯ್ತು…
ಬರೀ ಮಣ್ಣಿನ ಗಣಪ ತಗೊಳ್ಳೋದು ಅಂತ ಹೇಳಿದ್ರೆ ಮಗ ಗಲಾಟೆ ಮಾಡ್ತಾನೆ ಅಂತ ಗೊತ್ತು .ಆದರೆ ಈಗಿನ ಮಕ್ಕಳು ಜಾಣರು .ಬಣ್ಣ ನೀರಲ್ಲಿ ಕರಗೋಲ್ಲ ,ನೀರು ಕಲುಷಿತವಾಗುತ್ತೆ..ಅಂತೆಲ್ಲ ಹೇಳಿದ ಮೇಲೆ ಒಪ್ಕೊಂಡೇ ಬಿಟ್ಟ .ಒಂದು ಗಣಪ ತಗೊಂಡು ಬಣ್ಣ ಹಚ್ಚಿ ಹಾಗೇ ಇಟ್ಟುಕೊಳ್ಳೋಣ ಅಂತ ಅವನೇ ಸಲಹೆ ಕೂಡಾ ಕೊಟ್ಟ.
ಇಷ್ಟೆಲ್ಲಾ ..ಆದ ಮೇಲೆ ಈ ಸಲ ಗಣಪನ ಜೊತೆ ಇಲಿಗೂ ಖುಷಿಯಿಂದ ಪೂಜೆ ಮಾಡೋಣ ಅಂತ ಮಗನ ಜೊತೆ ಸೇರ್ಕೊಂಡು ನಾನೂ ತೀರ್ಮಾನ ಮಾಡಿದ್ದೀನಿ .ಬಹುಶಃ ಈಗಿನ ಇಲಿಯನ್ನು ಪ್ರೀತಿಸಲು ನಾನೂ ಮಕ್ಕಳಂತೆ ಯೋಚಿಸಬೇಕು ..ಇಲ್ಲದಿದ್ದರೆ ಸಾದ್ಯವಿಲ್ಲ ಅಂತ ಮನಸ್ಸಲ್ಲೇ ಅಂದುಕೊಂಡೆ .ಗಣಪನನ್ನು ಸ್ವಾಗತಿಸುವ ಉತ್ಸಾಹದಲ್ಲಿ ನಾನೂ ನನಗರಿವಿಲ್ಲದಂತೆ ಮಗುವಾಗಿದ್ದೆ…!!!
ಅಂತೆಯೇ ..ಈ ಸಲ ಬೇಡಿಕೆಗಳ ಪಟ್ಟಿಯ ಜೊತೆ ಹೊಸದೊಂದು ಬೇಡಿಕೆ ಗಣಪನ ಮುಂದಿಟ್ಟೆ ..”ಭೂಮಿ ಮೇಲಿರೋ ಎಲ್ಲಾ ಇಲಿಗಳನ್ನು ಕೈಲಾಸಕ್ಕೆ ಕರೆದುಕೊಂಡು ಹೋಗು ಗಣನಾಯಕಾ….!!”
ವೀಣಾ ಭಟ್ .






ಲೇಖನ ಬಹಳ ಖುಷಿ ಕೊಟ್ಟಿತು…
ಧನ್ಯವಾದಗಳು ಸಾವಿತ್ರಿ ಅವರಿಗೆ ..:)