-ಡಾ ಲಕ್ಷ್ಮಿಕಾಂತ ಮಿರಜಕರ
ಸಿಹಿ ಹೀರಬೇಕೆನಿಸಿತು ಅವಳ ತುಟಿಗಳ ಬಾವಿಗಳಲ್ಲಿ ಇಳಿದುಬಿಟ್ಟೆ
ಮತ್ತೇರಬೇಕೆನಿಸಿತು ಅವಳ ಮೈಸುಗಂಧದಲ್ಲಿ ಒಂದಾಗಿ ಬಿಟ್ಟೆ
ಶೃಂಗಾರ ಮಾಸ ಸಖಿಯ ಮೃದುಲದೇಹವ ತಿದ್ದಿ ತೀಡಿ ಕೆತ್ತಿರಬಹುದು
ಜಾರಬೇಕೆನಿಸಿತು ಅವಳ ಕೆನ್ನೆಗಳ ಇಳಿಜಾರಿನಲ್ಲಿ ನೆಗೆದುಬಿಟ್ಟೆ.
ನಿರಾಭರಣ ಸುಂದರಿ ನನ್ನ ಸಖಿ, ಕರಗದ ಕನಸುಗಳ ಕಾಣಿಸಿದವಳು
ಈಜಬೇಕೆನಿಸಿತು ಅವಳ ಜೋಡಿ ಕಣ್ಣ ಸಮುದ್ರದಲ್ಲಿ ಜಿಗಿದುಬಿಟ್ಟೆ
ಸಖಿಯನ್ನು ಅಪ್ಪಿ ನನ್ನೆದೆಯೊಳಗೆ ಬಿಗಿದೆಳೆದುಕೊಂಡೆ ನಿಧಾನವಾಗಿ
ಹತ್ತಿಳಿಯಬೇಕೆನಿಸಿತು ಅವಳ ಎದೆಯ ಮಲೆಗಳಲ್ಲಿ ಸರಿದಾಡಿಬಿಟ್ಟೆ
ಸೌಂದರ್ಯ ಸಮರ ಸಾರುವಂತಿದೆ ಸಖಿಯ ಕಪ್ಪು ಕೂದಲ ಜಲಪಾತ
ಮುಳುಗಬೇಕೆನಿಸಿತು ಅವಳ ಕಪ್ಪು ಕೇಶರಾಶಿಯಲ್ಲಿ ಮರೆಯಾಗಿಬಿಟ್ಟೆ
ಕೋಮಲ ಅಂಗಾಂಗ ಸ್ಪರ್ಶಿಸಿ ಒಲವಿಗಾಗಿ ಹಾತೊರೆಯುತಿರುವೆ ಕಾಂತ
ವಿರಹ ಸಾಕೆನಿಸಿತು ಅವಳ ತೋಳ ಸುಖತೆಕ್ಕೆಯಲ್ಲಿ ಕಳೆದೋಗಿಬಿಟ್ಟೆ






0 Comments