ಗಂಡ ಹೆಂಡತಿ ಜಗಳದಲಿ ಕೂಸು ಗಟ್ಟಿಯಾಯಿತು!

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ.

ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು.

ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ ಚಿತ್ರ ನಿರ್ದೇಶಕಿಯೂ ಆದರು.

ಒಂದು ಸುಂದರ ಕಾವ್ಯದಂತಿರುವ ‘ಅಮ್ಮಚ್ಚಿ ಎಂಬ ನೆನಪು’ ತೆರೆಯ ಮೇಲೆ ಅರಳಿದ ಕಥೆ ನಿಮ್ಮ ಮುಂದೆ..

|ಕಳೆದ ಸಂಚಿಕೆಯಿಂದ|

ನಮ್ಮ ಮದುವೆಯಾದಾಗ ನನಗೆ 19, ಶೆಟ್ರಿಗೆ 25 ವರ್ಷಗಳು ಆನಗಳ್ಳಿ ಸರ್ ನಿಮ್ಮದು ಬಾಲ್ಯ ವಿವಾಹ ಅಂತಾ ತಮಾಷೆ ಮಾಡುತ್ತಿದ್ದರು. ಈ “ಅಮ್ಮಚ್ಚಿ”ಗೂ ನಮ್ಮ ಮದುವೆಗೂ ಏನು ಸಂಬಂಧ? ಅನ್ನಿಸಿದರೆ, ಇಲ್ಲೇ ಇದೆ ಉತ್ತರ. ಅಷ್ಟು ಚಿಕ್ಕ ವಯಸ್ಸಿನಲ್ಲಿ ಮದುವೆ, ಅದೂ ಪ್ರೇಮ, ಅದರಲ್ಲೂ ಅಂತರ್ಜಾತಿ ವಿವಾಹವಾದರೂ ನಮ್ಮ ನಡುವೆ ಸಣ್ಣ ಪುಟ್ಟ ಮುನಿಸುಗಳನ್ನು ಬಿಟ್ಟರೆ ಒಂದು ದಿನವೂ ದೊಡ್ಡ ಗಲಾಟೆ ಆಗಿದ್ದಿಲ್ಲ ಆದರೆ ಈ “ಅಮ್ಮಚ್ಚಿ” ಇದ್ದಾಳಲ್ಲ ಇವಳಿಂದ ನಾವು ಜಗಳವಾಡಿದ್ದು ಅಷ್ಟಿಷ್ಟಲ್ಲ. ನಮ್ಮೀ ಜಗಳಗಳಿಗೆ ಪ್ರತ್ಯಕ್ಷ ಸಾಕ್ಷಿಗಳು ವೇಣು, ಗೀತಾ ಸುರತ್ಕಲ್, ಮತ್ತು ನಮ್ಮ ಇಬ್ಬರು ಮಕ್ಕಳು. ಜೊತೆಗೆ, ನಮ್ಮ ಎಡಿಟರ್ ಹರೀಶ್.

“ಮಕ್ಕಳು ಯಾಕಮ್ಮಾ ಇಷ್ಟು ಜಗಳ‌ ಮಾಡುತ್ತಿದ್ದೀರಾ” ಅಂದರೆ, ಒಮ್ಮೆ ರೈಲ್ವೇ ಸ್ಟೇಷನ್ ಪ್ಲಾಟ್ ಫಾರಂನಲ್ಲಿ ರೈಲಿಗಾಗಿ ಕಾದು ಕುಳಿತಿದ್ದಾಗ ಒಂದು ಹಾಡಿಗೆ ತಬಲ ಇರಲಿ ಅಂತಾ ನಾನು ಬೇಡಾ ಅಂತಾ ಶೆಟ್ರು, ಎಷ್ಟು ಗಲಾಟೆಯೆಂದರೆ, ವೇಣು “ಅಬ್ಬಾ ನಾನೀಗ ಓಡಿ ಹೋಗುತ್ತೇನೆ” ಅಂದಾಗಲೇ ನಮ್ಮ ಗಲಾಟೆ ನಿಂತಿದ್ದು, ಇನ್ನು ಎಡಿಟಿಂಗ್ ರೂಮಿನಲ್ಲಿ, ಶೆಟ್ರು ಈ ಶಾಟ್ ಬೇಡ ಅಂದರೆ ನನಗೆ ಅದು ಬೇಕೇ ಬೇಕು. ನಾನು ಇಲ್ಲಿ ಈ ಮ್ಯೂಸಿಕ್ ಬೇಡ ಅಂದರೆ ಅದು ಅವರಿಗೆ ಬೇಕು ಹೀಗೆ, ಆಗಾಗ ಭಯಂಕರ ಕಿರಿಕ್ ಆಗುತ್ತಿತ್ತು ಪಾಪಾ ಬಡಪಾಯಿ ಹರೀಶ್ ಯಾರ ಮಾತು ಕೇಳಬೇಕು?

ಸಂಸಾರದಲ್ಲಿನ ಸಣ್ಣ ಪುಟ್ಟ ಜಗಳದಲ್ಲಿ ಸದಾ ಸೋಲು ನನ್ನದೇ ಆದರೂ, ಸಿನೆಮಾ ವಿಷಯದಲ್ಲಿ ಮಾತ್ರ ನನ್ನದು ಕೆಟ್ಟ ಹಟ. ಅದಕ್ಕೇ ಅಷ್ಟು ಗಲಾಟೆ. ಹರೀಶ್ ಅಂತೂ ಇಷ್ಟು ವರ್ಷ ಇವರು ಒಟ್ಟಿಗೆ ಹೇಗಿದ್ದರಪ್ಪಾ ಅಂತಾ ಯೋಚಿಸಿರಬಹುದು. ಆದರೆ ಸಿನೆಮಾದ ಮೊದಲ ಕಾಪಿ ಬಂದ ಕೂಡಲೆ ನಮ್ಮ ಗಲಾಟೆ ಕ್ರಮೇಣ ಕಡಿಮೆಯಾಗಿ ಮುಂಚಿನ ಹಾಗೇ ತಣ್ಣಗಾದಾಗ ಮಕ್ಕಳಿಗೆ ಖುಷಿ.

ಇನ್ನೇನು ನಮ್ಮ ಜಗಳಗಳಿಗೆ ಪೂರ್ಣ ವಿರಾಮ ಅಂದುಕೊಳ್ಳುವಷ್ಟರಲ್ಲೇ ಮತ್ತೆ ಯುದ್ಧ ಘೋಷಣೆ. ಸಿನೆಮಾ ಈಗಲೇ ರಿಲೀಸ್ ಆಗಬೇಕೆಂದು ನಾನು, ಹಲವಾರು ಫೆಸ್ಟಿವಲ್ ಗಳಿಗೆ ಕಳುಹಿಸಿ ನಂತರ ರಿಲೀಸ್ ಮಾಡೋಣ ಅಂತಾ ಶೆಟ್ರು. ನಾನು ಹಾಗೆ ಹೇಳಲು ಕಾರಣವಿತ್ತು. ನಾನು “ಅಮ್ಮಚ್ಚಿ”ಯನ್ನು ನಿರ್ದೇಶಿಸುವಾಗ ನನ್ನ ಉದ್ದೇಶವಿದ್ದದ್ದೇ ಥಿಯೇಟರ್ ನಲ್ಲಿ ಸಿನೆಮಾ ರಿಲೀಸ್ ಆಗಿ ಜನ ನೋಡಬೇಕು ಎಂದು. ಹಾಗೆಂದು ಫೆಸ್ಟಿವಲ್ ಗಳಿಗೆ ಕಳುಹಿಬಾರದೆಂದಲ್ಲ. “ಅಮ್ಮಚ್ಚಿ”ಯಂತಹ ಸಿನೆಮಾವನ್ನು ಫೆಸ್ಟಿವಲ್ ಗಳಲ್ಲಿ ಹೇಗೆ ರಿಸೀವ್ ಮಾಡುತ್ತಾರೆ ಎಂಬ ಅನುಮಾನವಷ್ಟೇ. ಹಾಗಾಗಿ ಮೊದಲು ಜನ ಸಿನೆಮಾ ನೋಡಲಿ ನಂತರ ಫೆಸ್ಟಿವಲ್ಸ್ ಗಳಿಗೆ ಕಳುಹಿಸಬಹುದು ಎಂಬ ನನ್ನ ಆಸೆಗೆ ಕೊನೆಗೂ ನನ್ನವರು ಒಪ್ಪಿ ರಿಲೀಸ್ ಮಾಡುವ ತೀರ್ಮಾನವಾಯಿತು.

ತೀರ್ಮಾನವೇನೋ ಆಯಿತು ಆದರೆ ರಿಲೀಸ್ ಮಾಡುವುದಾದರೂ ಹೇಗೆ? “ವಿಶ್ವನಾಥ ಶೆಟ್ಟಿ”ಯವರಂತಹ ಕಲಾಭಿಮಾನಿಗಳಿಂದ ಹಣದ ಸಹಾಯವೇನೋ ದೊರಕಿತು, ಆದರೆ ಸಿನೆಮಾ ರಿಲೀಸ್ ಮಾಡುವುದೆಂದರೆ ಸಿನೆಮಾ ನಿರ್ದೇಶನ‌ ಮಾಡುವುದಕ್ಕಿಂತ ದೊಡ್ಡ ಸಾಹಸ. ದೊಡ್ಡ ದೊಡ್ಡ ನಿರ್ಮಾಪಕರೇ ಸಿನೆಮಾ ನಿರ್ಮಾಣ ಮಾಡಿ ರಿಲೀಸ್ ನ ಜವಾಬ್ದಾರಿಯನ್ನು ಮತ್ಯಾವುದೋ ವಿತರಕರಿಗೆ(ಡಿಸ್ಟ್ರಿಬ್ಯೂಟರ್) ಕೊಟ್ಟುಬಿಡುತ್ತಾರೆ. ಇನ್ನು ನಮ್ಮಂತಹ ಸಣ್ಣಾತಿಸಣ್ಣ ನಿರ್ಮಾಪಕರು ಸಿನೆಮಾ ರಿಲೀಸ್ ಮಾಡುವುದಾದರೂ ಹೇಗೆ?

ಇಂತಹ ಸಂದಿಗ್ಧ ಸ್ಥಿತಿಯಲ್ಲಿರುವಾಗ ನಮ್ಮ ನೆರವಿಗೆ ಬಂದದ್ದು ಬಾಲು ಅವರು. ರಾಜ್ ಶೆಟ್ಟಿಯವರಿಂದ ಬಾಲು ಅವರ ಪರಿಚಯವಾದರೂ, ನಮ್ಮೆಲ್ಲಾ ನಾಟಕಗಳ ಮೂಲಕ ಬಾಲು ಅವರಿಗೆ ನಮ್ಮ ತಂಡದ ಬಗ್ಗೆ ಮೊದಲೇ ಪರಿಚಯವಿತ್ತು. ಒಂದೇ ಮಾತು ಬಾಲು ಅವರದ್ದು “ರಂಗಭೂಮಿಯವರು ಸಿನೆಮಾ ಮಾಡುತ್ತಿದ್ದೀರಾ ನನ್ನಿಂದಾದ ಸಹಾಯ ಖಂಡಿತಾ ಮಾಡುತ್ತೇನೆ” ಎಂದರು.

ಅವರಾಗಲೇ ಒಂದು ಪ್ರಖ್ಯಾತ ಪ್ರೊಡಕ್ಷನ್ ಹೌಸ್ ನಲ್ಲಿ ಕೆಲಸ ಮಾಡುತ್ತಾ ಹಲವು ಸಿನೆಮಾಗಳನ್ನು ಬಿಡುಗಡೆ ಮಾಡಿದ್ದ ಅನುಭವ ಹೊಂದಿದ್ದರಿಂದ ನಮಗೂ ಸ್ವಲ್ಪ ಧೈರ್ಯ ಬಂದಿತು. ಆದರೆ ಮತ್ತೆ ಆತಂಕ ಶುರುವಾದದ್ದು ಬಾಲು ಅವರು “ಅಮ್ಮಚ್ಚಿ” ಯ ಟೆಕ್ನಿಕಲ್ ಶೋ ನೋಡಿದ ಮೇಲೆ.

“ಅಮ್ಮಚ್ಚಿ”ಯನ್ನು ನೋಡಿದ ಬಾಲು “ಸಿನೆಮಾ ಏನೋ ಅದ್ಭುತ ಆದರೆ ಇಂತಹಾ ಸಿನೆಮಾಗಳಿಗೆ ಡಿಸ್ಟ್ರಿಬ್ಯೂಟರ್ ಗಳು ಸಿಗುವುದು ಕಷ್ಟ” ಎಂದಾಗ, ನಮಗಾದ ನೋವಿಗೆ ತಕ್ಷಣವೇ ಪರಿಹಾರ ಕೊಟ್ಟವರೂ ಬಾಲು ಅವರೇ… “ಅವರಿವರು ಏಕೆ..? ಸಿನೆಮಾವನ್ನು ನೀವೆ ಏಕೆ ರಿಲೀಸ್ ಮಾಡಬಾರದು? ನೀವು ಒಪ್ಪುವುದಾದಾರೆ ಬಿ ಕೆ ಗಂಗಾದರ್ ಅವರ ಮೂಲಕ ನೀವೆ ರಿಲೀಸ್ ಮಾಡಬಹುದು ಗಂಗಾದರ್ ಅವರಿಗೆ ನಾನು ಹೇಳುತ್ತೇನೆ” ಅಂದಾಗ, ಆಗಲೇ ಸಿನೆಮಾ ರಿಲೀಸ್ ಆಗಿಯೇ ಬಿಟ್ಟಿತು ಎಂಬಷ್ಟು ಖುಷಿ ನಮಗೆ. ಅಲ್ಲಿಂದ ಶುರುವಾಯಿತು ನಮ್ಮ ಸಿನೆಮಾ ರಿಲೀಸ್ ನ ಪಯಣ.

ಇದೇ ಸಮಯದಲ್ಲಿ, ನಮ್ಮ ಆಡಿಯೋ ರೈಟ್ಸ್ ಅನ್ನು “ಪುನಿತ್ ರಾಜ್‌ಕುಮಾರ್” ಅವರ P R K ಆಡಿಯೋ ದವರು ತೆಗೆದುಕೊಂಡಾಗ ಒಂದು ಸಣ್ಣ ಧೈರ್ಯ ಬಂದಿತ್ತು. ಆ ಆತ್ಮವಿಶ್ವಾಸದಲ್ಲೇ ಸಿನೆಮಾ ರಿಲೀಸ್ ನ‌ ಮೊದಲ ಹೆಜ್ಜೆಯಾಗಿ ನಿರ್ಧಾರವಾದದ್ದು ಆಡಿಯೋ ರಿಲೀಸ್ ನ ದಿನ. ನಮ್ಮೆಲ್ಲಾ ಕಾರ್ಯಕ್ರಮಗಳನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ ನಮಗೆ ಬೆಂಬಲ ನೀಡುವ “ನಾಗತಿಹಳ್ಳಿ ಚಂದ್ರಶೇಖರ್” ಸರ್ ಮತ್ತು ಎಲ್ಲಾ ಹಾಡುಗಾರರನ್ನೂ ನಮಗೆ ಪರಿಚಯಿಸಿದ “ಕಪ್ಪಣ್ಣ” ಸರ್ ಅವರೊಂದಿಗೆ, “ವೈದೇಹಿ” ಮೇಡಂ, “ರಾಜ್ ಶೆಟ್ಟಿ” ಮತ್ತು ಸಂಗೀತ ನಿರ್ದೇಶಕರಾದ “ಪಂಡಿತ್ ಕಾಶೀನಾಥ್ ಪತ್ತಾರ್” ಅವರುಗಳ ಸಮ್ಮುಖದಲ್ಲಿ ರೇಣುಕಾಂಬ ಸ್ಟುಡಿಯೋದಲ್ಲಿ “ಅಮ್ಮಚ್ಚಿ” ಸಿನೆಮಾದ ಆಡಿಯೋ ಬಿಡುಗಡೆ ಸಮಾರಂಭ ಅತ್ಯಂತ ಆತ್ಮೀಯವಾಗಿ ನಡೆಯಿತು. ಅಲ್ಲಿ ನಮ್ಮ ಸಿನೆಮಾದ ಮೊದಲ ಹಾಡನ್ನು (ಹೊಳೆವ ಹೊಳೆಯಾಚೆಗೆ) ಪರದೆಯ ಮೇಲೆ ಪ್ರದರ್ಶಿಸಿದಾಗ ಬಂದ ಪ್ರೇಕ್ಷಕರು ಮತ್ತು ಮಾಧ್ಯಮ ಮಿತ್ರರ ಅದ್ಭುತ ಪ್ರತಿಕ್ರಿಯೆ, ನಮ್ಮ ಸಿನೆಮಾ ರಿಲೀಸ್ ಮಾಡುವ ಧೈರ್ಯಕ್ಕೆ ಮತ್ತಷ್ಟು ಬಲ‌ ನೀಡಿತ್ತು.

ಇವೆಲ್ಲದರ ಜೊತೆಗೆ ಬಾಲು ಅವರ ಸೂಚನೆಯ ಮೇರೆಗೆ ರಿಲೀಸ್ ಗೆ ಬೇಕಾದ ಟೆಕ್ನಿಕಲ್ ಕೆಲಸಗಳು ಭರದಿಂದ ಸಾಗಿದ್ದವು. ಪೋಸ್ಟ್ ಪ್ರೊಡಕ್ಷನ್ ವೇಳೆ ಎಲ್ಲರಿಗೂ ವರ್ಷಗಟ್ಟಲೆ ಪೇಮೆಂಟ್ ಕೊಟ್ಟು ಸಹಾಯಕರನ್ನು ಉಳಿಸಿಕೊಳ್ಳುವ ಶಕ್ತಿ ನಮ್ಮಲ್ಲಿ ಇರಲಿಲ್ಲವಾದ್ದರಿಂದ ಶೆಟ್ರ ಜೊತೆ ಮೂರ್ನಾಲ್ಕು ಜನರ ಒಂದು ಪುಟ್ಟ ತಂಡವೇ ಎಲ್ಲಾ ಕೆಲಸಗಳನ್ನೂ ಮಾಡಬೇಕಾಯಿತು.

ಒಂದು ಹಾರ್ಡಿಸ್ಕ್ ಅನ್ನು ಒಂದೆಡೆಯಿಂದ ಮತ್ತೊಂದೆಡೆಗೆ ತಲುಪಿಸುವುದರಿಂದ ಹಿಡಿದು, ಯು ಎಫ್ ಓ , ಕ್ಯೂಬ್ ಗಳಿಗೆ ಸಿನೆಮಾ ಅಪ್ಲೋಡ್ ಮಾಡಲು ಬೇಕಾದ ಟೆಕ್ನಿಕಲ್ ತಯಾರಿಯ ಜೊತೆಗೆ, ಚೆನೈಗೆ ತೆರಳಿ ರಾತ್ರಿ ಇಡೀ ಎಚ್ಚರವಿದ್ದು ಒಂದೇ ರಾತ್ರಿ ಮೂರು ಬಾರಿ ಸಿನೆಮಾ ನೋಡುವವರೆಗೂ ನೂರಾರು ಜವಾಬ್ದಾರಿಗಳನ್ನು ಸ್ವತಃ ನಾವುಗಳೇ ತೆಗೆದುಕೊಂಡದ್ದರಿಂದ “ಅಮ್ಮಚ್ಚಿ” ಸಿನೆಮಾ ನಮಗೊಂದು ದೊಡ್ಡ ಯೂನಿವರ್ಸಿಟಿಯೇ ಆಗಿಬಿಟ್ಟಿತು. ಒಟ್ಟಾರೆ, ಸ್ಕ್ರಿಪ್ಟ್ ತಯಾರಿಯಿಂದಾ ಸಿನೆಮಾ ರಿಲೀಸ್ ನ ವರೆಗಿನ ಸತತ ಒಂದು ವರುಷಗಳ ಕಾಲ ಹಗಲು ರಾತ್ರಿ ಎನ್ನದೇ ನಮ್ಮ ಮೈಮನಗಳನ್ನು ಆವರಿಸಿಕೊಂಡು ಬಿಟ್ಟಿದ್ದಳು “ಅಮ್ಮಚ್ಚಿ”.

ಅಂತೂ, ರಾಜ್ ಶೆಟ್ಟಿ, ಬಾಲು, ಪ್ರಮೋದ್ ಶೆಟ್ಟಿ ನಿಖಿಲ್ ಭಾರದ್ವಾಜ್ ಅವರ ಸಲಹೆ ಸೂಚನೆಗಳ ಜೊತೆಗೆ, ನಮಗೆ ತಿಳಿದಿದ್ದ, ತಿಳಿದುಕೊಂಡಿದ್ದ, ಎಲ್ಲಾ ಎಫರ್ಟ್ ಗಳನ್ನೂ ಧಾರೆ ಎರೆದು ಅಮ್ಮಚ್ಚಿಯನ್ನು ಪರದೆಯ ಮೇಲೆ ತರಲು ತಯಾರು ಮಾಡಿಯೇ ಬಿಟ್ಟೆವು. ರಿಲೀಸ್ ನ ಹಿಂದಿನ ದಿನ ತಂಡದವರು, ಕೆಲವು ಹಿತೈಶಿಗಳು ಮತ್ತು ಮಾಧ್ಯಮದವರಿಗಾಗಿ “ಜಿ ಟಿ ಮಾಲ್” ನಲ್ಲಿ ಅಮ್ಮಚ್ಚಿಯ ಮೊದಲ ಪ್ರದರ್ಶನ ಏರ್ಪಡಿಸಿದ್ದೆವು. ಅಲ್ಲಿ ನಮಗೆ ಸಿಕ್ಕ ಪ್ರತಿಕ್ರಿಯೆಯಿಂದ ಸಿನೆಮಾ ಗೆದ್ದೇ ಬಿಟ್ಟಿತು ಎಂಬ ಭರವಸೆಯಲ್ಲೇ ಮರುದಿನ, ಅಂದರೆ, ನವೆಂಬರ್ 1. 2018 ಇಡೀ ತಂಡದ ಅಗಾಧವಾದ ಆಸೆ, ಕನಸುಗಳನ್ನು ಹೊತ್ತುಕೊಂಡು “ಅಮ್ಮಚ್ಚಿ” ರಾಜ್ಯಾದ್ಯಂತ ಬಿಡುಗಡೆಯಾದಳು.

ಸಿಂಗಲ್ ಥಿಯೇಟರ್ ಗಳಲ್ಲಿ ಮೊದಲೇ ಹಣ ಕಟ್ಟಿ ರಿಲೀಸ್ ಮಾಡಲು ಶಕ್ತಿ ಇಲ್ಲದ ಕಾರಣ ತಾವಾಗೇ ಮುಂದೆ ಬಂದು ತೆಗೆದುಕೊಂಡ ನಾಲ್ಕೈದು ಸಿಂಗಲ್ ಥಿಯೇಟರ್ ಗಳು ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಮಲ್ಟಿಪ್ಲೆಕ್ಸ್( 46) ಥಿಯೇಟರ್ ಗಳಲ್ಲಿ ಅಮ್ಮಚ್ಚಿ ಬಿಡುಗಡೆಗೊಂಡಳು. ಪಕ್ಕಾ ಕಮರ್ಷಿಯಲ್ ಸಿನೆಮಾಗಳ ಜೊತೆಗಿನ ಪೈಪೋಟಿಯಲ್ಲಿ ಇಂತದ್ದೊಂದು ಕತೆಯಾಧಾರಿತ ಸಿನೆಮಾ ಮೂವತ್ತೊಂದು ದಿನಗಳ ಕಾಲ ಥಿಯೇಟರ್ ನಲ್ಲಿ ಇದ್ದುದು ತುಂಬು ಗೃಹಗಳ ಪ್ರದರ್ಶನ ಕಂಡಿದ್ದು ನಮ್ಮ ಮಟ್ಟಿಗೆ ನಿಜಕ್ಕೂ ಒಂದು ಸಾಧನೆಯೇ ಸರಿ. ಅದು ನಮ್ಮ ಭರವಸೆಯನ್ನು ನಿಜ ಮಾಡಿದ್ದೂ ಅಲ್ಲದೆ ಇಂತಹ ಇನ್ನಷ್ಟು ಸಿನೆಮಾ ಮಾಡಬೇಕೆನ್ನುವ ನಮ್ಮೆಲ್ಲರ ಆಸೆಗೆ ಮುನ್ನುಡಿ ಹಾಡಿತ್ತು.

ಮತ್ತೊಂದು ಸಿನೆಮಾ ಅಂದ ಕೂಡಲೇ “ಅಯ್ಯೋ ಬೇಡಪ್ಪಾ ಸಿನೆಮಾನೂ ಬೇಡಾ, ಮತ್ತೊಂದಷ್ಟು ಜಗಳವೂ ಬೇಡಾ ಈಗಲೇ ಆರಾಮಾಗಿದೆ.” ಅಂತಾ ನಾನು, “ಅದು ಹೇಗಾಗುತ್ತೆ ನೀನು ಇನ್ನಷ್ಟು ಸಿನೆಮಾ ಮಾಡಬೇಕು ನಾನು ಹೀಗೇ ಗಲಾಟೆಯೂ ಮಾಡಬೇಕು. ಇದು ಕೃತಿಗಾಗಿ ಮಾಡುವ ಜಗಳ ಅದು ಇರಲೇಬೇಕು” ಅಂತಾ ಶೆಟ್ರು.

ಗಂಡ ಹೆಂಡತಿ ಜಗಳದಲಿ ಕೂಸು ಬಡವಾಯ್ತು ಅನ್ನುವ ಬದಲು ಇಲ್ಲಿ ಗಂಡ ಹೆಂಡತಿ ಜಗಳದಲಿ ಕೂಸು ಗಟ್ಟಿಯಾಯಿತು ಅನ್ನಬಹುದೇನೋ. ಇದೀಗ ಸದ್ಯದಲ್ಲೇ ಇಂತದ್ದೇ ಮತ್ತೊಂದು ಯುದ್ಧ ಘೋಷಣೆಯಾಗಲಿದೆ. ಅದರ ಬಗ್ಗೆ ಕಡೆಯ ಸಂಚಿಕೆಯಲ್ಲಿ ಹೇಳುತ್ತೇನೆ. ಅದಕ್ಕೆ ಮುನ್ನ ಅಷ್ಟು ಆಸ್ತೆ ವಹಿಸಿ ರಿಲೀಸ್ ಮಾಡಿದ “ಅಮ್ಮಚ್ಚಿ”ಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿತ್ತು? ಮಾಧ್ಯಮದವರು ಏನು ಹೇಳಿದರು? ನಮ್ಮ ಕನಸಿನ ಕೂಸು “ಅಮ್ಮಚ್ಚಿ” ಹೇಗೆ ಬೆಳೆದಳು? ಎಲ್ಲವೂ |ಮುಂದಿನ ಸಂಚಿಕೆಯಲ್ಲಿ|

‍ಲೇಖಕರು ಚಂಪಾ ಶೆಟ್ಟಿ

November 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: