ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖಡ್ಗದಷ್ಟು ಕಟ್ಟಿಂಗ್ ಆಗಿ ಬರೆಯಬಲ್ಲ ಕವಿ – ಭಾಗ ೨

ಭಾಗೇಶ್ರೀ ಕತ್ತಲು ಕವಿಯುವುದು ಮತ್ತು ಬೆಳಕು ಮೂಡುವುದರ ಬಗ್ಗೆ ಅದೆಷ್ಟು ಕವಿಗಳು ಬರೆದಿದ್ದಾರೋ! ಜಾನ್ ಡನ್ ತನ್ನ ಪ್ರೇಯಸಿಯಿಂದ ತನ್ನನಗಲಿಸುವ ಸೂರ್ಯನನ್ನು “busy old fool” ಅಂತ ಬೈದು ಜಾಲಾಡುವುದರಿಂದ ಹಿಡಿದು “ಬೆಳ್ಳಿ ಮೂಡಿತೋ ಕೋಳಿ ಕೂಗಿತೋ” ಅಂತ ಹಾಡುವ ನಮ್ಮದೇ ಖಾಸಾ ಕವಿರತ್ನ ಕಾಳಿದಾಸನವರೆಗೆ… ಲಕ್ಷಲಕ್ಷ.   ಫೈಜ್ ನ ಸುಮಾರು ಕವಿತೆಗಳೂ ಬೆಳಕು, ನೆರಳು, ಕತ್ತಲೆಯ ಇಮೇಜುಗಳ ಸುತ್ತ ಹೆಣೆದವು. ಇಲ್ಲಿ ನನಗೆ ಚೆಂದ ಅನ್ನಿಸಿದ ಎರಡು ಸ್ವಲ್ಪ ಧೀರ್ಘ ಮತ್ತು ಒಂದು ಪುಟ್ಟ ಕವನದ ಅನುವಾದ ಇದೆ. ಎರಡನೆಯದು ಟಿಪಿಕಲ್ ಫೈಜ್ ಪದ್ಯ. ತುಂಬಾ ರೊಮ್ಯಾಂಟಿಕ್ ಇಮೆಜುಗಳಿಂದ ಶುರುವಾಗಿ ಮತ್ತೆ ಇನ್ನೆಲ್ಲಿಗೋ ಓದುಗರನ್ನು ಎಳೆದುಕೊಂಡು ಹೋಗುವಂಥದು.   ನಿಜ ಹೇಳಬೇಕೆಂದರೆ ಮೂರನೆಯದು ಅನುವಾದ ಅನ್ನಿಸಿಕೊಳ್ಳಲಾರದೇನೋ. ಅಲ್ಲಿ ಬಳಸುವ “ಸಾಕಿಗರಿ” ಅನ್ನುವ ಶಬ್ದಕ್ಕೆ ಏನು ಹೇಳುವುದಪ್ಪ ಅಂತ ಹುಡುಕ ಹೊರಟು ಅದು ಬೇರೆಯೇ ಆಗಿಬಿಟ್ಟಿದೆ. ಸಾಕಿ ಅನ್ನುವ ಪದವನ್ನು ಕನ್ನಡ ಗಜಲುಗಳಲ್ಲಿ ಬಳಸುತ್ತಾರಾದರೂ ಅದು ಸರಿ ಹೋಗೋದಿಲ್ಲ ಅನ್ನಿಸಿ ಅದನ್ನು ಬಿಟ್ಟು ಬೇರೆ ಅರಸಿದ್ದರ ಫಲ ಮೂರನೆ ಪದ್ಯ. ಕನ್ನಡದಲ್ಲಿ ನಾವು ಜಾಣತನದಿಂದ ಭಾವಾನುವಾದ ಅನ್ನುವ ಪದ ಬಳಸಿ ಎಂಥ ಆಟ ಆಡಿಯೂ ತಪ್ಪಿಸಿಕೊಳ್ಳಬಹುದಲ್ಲ. ಆ ಧೈರ್ಯದ ಮೇಲೆ ಮೂರನೆಯದನ್ನೂ ಸೇರಿಸುತ್ತಿದ್ದೇನೆ!   ಸೆರೆಮನೆಯಲ್ಲೊಂದು ಸಂಜೆ   ನೀಹಾರಿಕೆಗಳ ಸುರುಳಿ ಸುರುಳಿ ಮೆಟ್ಟಿಲುಗಳ ಇಳಿಯುತ್ತಾ ಬರುತ್ತಿದೆ ಸದ್ಡಿಲ್ಲದೆ ರಾತ್ರಿ. ಬೀಸುವ ಗಾಳಿ ಹತ್ತಿರ, ಹತ್ತಿರ ಸುಳಿದಿದೆ ಯಾರೋ ಪ್ರೀತಿ ಮಾತು ಕಿವಿಯಲುಸುರಿದ ಹಾಗೆ. ಅಂಗಳದಲಿ ನಿಂತ ನಿರಾಶ್ರಿತ ಮರಗಳು ನಭದ ಸೆರಗಲಿ ಬಿಡಿಸಿವೆ ಮರಳುವ ನಾಡಿನ ನಕ್ಷೆ.   ಚಾವಣಿಯ ಮೇಲೆ ಮೆರುಗುತ್ತಿವೆ ಬೆಳದಿಂಗಳ ಕರುಣೆಯ ಬೆರಳು. ಕಣಕಣದಲಿ ಕರಗಿದೆ ನಕ್ಷತ್ರದ ಹೊಳಪು ನೀಲಿ ಕದಡಿದೆ ಆಗಸದ ತುಂಬಾ. ಹಸಿರು ಮೂಲೆಗಳಲ್ಲಿ ಕಡು ನೀಲಿ ನೆರಳು, ಆವರಿಸಿದಂತೆ ಮನಸ ಸ್ವಲ್ಪ ಸ್ವಲ್ಪವೇ ವಿರಹದ ನೋವು.   ಆಹಾ! ಎಷ್ಟು ಸಿಹಿ ಈ ಗಳಿಗೆ. ಗೆಲ್ಲಲಾರದು ಇಂದು ಎಂದೆಂದೂ ಇಲ್ಲಿ ವಿಷವ ಬೆರೆಸುವ ಮನಸು. ಮಿಲನದ ಮನೆಯ ದೀಪ ಆರಿಸಿಯಾರು ಬಿಡಿ. ಚಂದ್ರನನ್ನಳಿಸುವವರು ಯಾರಾದರೂ ಇದ್ದರೆ ಹೇಳಿ.   ಸೆರೆಮನೆಯಲ್ಲೊಂದು ಬೆಳಗು   ಚಂದ್ರ ದಿಂಬಿನ ಪಕ್ಕ ನಿಂತು ‘ಏಳು, ಬೆಳಗಾಯಿತು’ ಅಂದಾಗ ಇನ್ನೂ ರಾತ್ರಿ ಸ್ವಲ್ಪ ಬಾಕಿ ಇತ್ತು. ‘ಏಳು! ಈ ರಾತ್ರಿಯ ನಿನ್ನ ಪಾಲಿನ ನಿದ್ದೆಯ ಮದಿರೆ ತುಟಿಯಿಂದ ಇಳಿದಿಳಿದು ತಳ ಕಂಡಿದೆ’ ಅಂದ.   ಪ್ರಿಯತಮೆಯ ಬಿಂಬಕ್ಕೆ ವಿದಾಯ ಹೇಳಿ ಹೊರಳಿದೆ. ರಾತ್ರಿಯ ಕರಿ ಹೊದಿಕೆಯ ತೆರೆತೆರೆಗಳ ಮೇಲೆ ಅಲ್ಲಿಲ್ಲಿ ಬೆಳ್ಳಿ ಸುಳಿಸುಳಿಗಳ ನರ್ತನ. ಚಂದ್ರನ ಕೈಯ್ಯಿಂದ ಉದುರುತ್ತಿವೆ ಒಂದೊಂದೆ ತಾರೆ ತಾವರೆಯ ಪಕಳೆಗಳು. ಮುಳುಗುತ್ತ, ಏಳುತ್ತ, ಈಜುತ್ತ, ಮುದುಡುತ್ತ, ತೆರೆಯುತ್ತ ರಾತ್ರಿ ಬೆಳಗನು ತಬ್ಬಿ ಕರಗಿದ್ದು ಅದೆಷ್ಟೋ ಹೊತ್ತು.   ಸೆರೆಮನೆಯ ಅಂಗಳದಲ್ಲಿ ನನ್ನ ಸಂಗಾತಿಗಳ ಹೊಳೆವ ಮುಖ ಮೆಲ್ಲನೆ ಮೂಡುತ್ತಿದೆ ಕಪ್ಪು ಕತ್ತಲೆಯ ಮೀರಿ. ನಿದ್ದೆ ಚೆಲ್ಲಿದ ಮರವಳಿಕೆಯ ಹನಿಹನಿ ಅಳಿಸಿದೆ ದೇಶದ ಚಿಂತೆ, ಕಾಣದ ಗೆಳತಿಯ ನೆನಪಿನ ನೋವು. ದೂರದಲ್ಲೆಲ್ಲೋ ನಗಾರಿ ಬಡಿವ, ವಜ್ಜೆ ಹೆಜ್ಜೆ ಎಳೆವ ಸದ್ದು. ಸತಾಯಿಸುವ ಹಸಿವ ಹೊತ್ತು ಗಸ್ತಿಗೆ ಹೊರಟ ಕಾವಲುಗಾರ. ಜೊತೆಗೆ ಕೈಕೈ ಹಿಡುದು ನಡೆದಿದೆ ಕೈದಿಗಳ ಆಕ್ರಂದನ. ಕಮ್ಮನೆ ಕನಸಿನ ಕಂಪ ಇನ್ನೂ ಹೊತ್ತ ಗಾಳಿ ಮೆಲ್ಲನೆದ್ದಿದೆ. ಎದ್ದಿವೆ ಹಾಲಾಹಲ ಕದಡಿ ಒಡೆದ ಸೆರೆಮನೆಯ ಸದ್ದುಗಳು. ಅಲ್ಲಿ ಯಾರೋ ಕದ ತೆರೆದ, ಇಲ್ಲಿ ಯಾರೋ ಮುಚ್ಚಿದ ಸಪ್ಪಳ. ಮೆಲ್ಲ ಮುಲುಕಾಡಿದೆ ಸರಪಳಿ, ಮುಲುಕಿ ಬಿಕ್ಕುತ್ತಿದೆ ಎಲ್ಲೋ. ಯಾವುದೋ ಬೀಗದ ಎದೆ ಹೊಕ್ಕಿದೆ ಚೂರಿಯ ಚೂಪು. ಕಿಟಕಿ ಡಬಡಬಡಬ ತಲೆಯ ಚಚ್ಚಿಕೊಂಡಿದೆ ಇನ್ನೆಲ್ಲೋ.   ನಿದ್ದೆಯಿಂದ ಮತ್ತೆ ಎದ್ದಂತಿದೆ ಜೀವದ ವೈರಿಗಳು. ಕಲ್ಲು ಕಬ್ಬಿಣವ ಕಡಿದು ಕೆತ್ತಿದ ಗಟ್ಟಿ ರಕ್ಕಸರು, ಹಿಂಡಿ ಹಿಪ್ಪೆ ಮಾಡಿ ಅಹೋರಾತ್ರಿ ಅಳಿಸುತ್ತಿದ್ದರೆ ನನ್ನ ನಾಜೂಕು ಬೆಳಗು ಬೈಗಿನ ಕಿನ್ನರಿಯರ.   ಉರಿವ ಭರವಸೆಯ ಬಾಣ ತುಂಬಿದ ಬತ್ತಳಿಕೆ ಹೊತ್ತು ಬರುವ ರಾಜಕುವರನ ಹಾದಿ ಕಾದಿವೆ ಹಿಡಿದಿಟ್ಟ ಜೀವಗಳು .   ಒಂಟಿತನ   ಸಂಜೆ ಮಾಗಿದ ಹಾಗೆ ಒಟ್ಟೊಟ್ಟಿಗೆ ಹೆಂಡ ಹೀರುವ ಹಳೆಯ ಗೆಳೆಯರಂತೆ, ಇಂದು ನನ್ನ ಜೋಡಿ ನನ್ನ ಒಂಟಿತನ. ಇಬ್ಬರೂ ಕಾದಿದ್ದೇವೆ ಚಂದ್ರನುದಯಕ್ಕಾಗಿ ಕಾಣಲು ನಿನ್ನ ಪ್ರತಿಬಿಂಬ ಪ್ರತಿ ಛಾಯೆಯಲ್ಲೂ    ]]>

‍ಲೇಖಕರು G

14 January, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading