ಕ್ಷಿತಿಜ ಪೂರ್ತಿ ಬೆತ್ತಲಾಗಿದೆ…

ಚಂದ್ರಶೇಖರ ಹೆಗಡೆ

ಹೆಣ್ಣಿಗಾಗಿ ಸತ್ತವರು ಕೋಟಿ
ಮಣ್ಣಿಗಾಗಿ ಸತ್ತವರು ಕೋಟಿ
ಹೊನ್ನಿಗಾಗಿ ಸತ್ತವರು ಕೋಟಿ
ಗುಹೇಶ್ವರಾ
ನಿನಗಾಗಿ ಸತ್ತವರನಾರನೂ ಕಾಣೆ

ಎಂಬ ವಚನದಂತೆ ಕಾವ್ಯವನ್ನೇ ಉಸಿರಾಡಿ ಕಾವ್ಯವನ್ನೇ ಬದುಕಿ ಕಾವ್ಯಕ್ಕಾಗಿ ಸತ್ತವರು ಕಸ್ತೂರಿ ಬಾಯರಿಯವರು. ಹತ್ತಿರ ಬಂದವರೆಲ್ಲರಿಗೂ ಕಾವ್ಯರಸಾಯನವನ್ನು ಕುಡಿಸಿಯೇ ಕಳುಹಿಸಬೇಕು ಎನ್ನುವುದು ಬಾಯರಿಯವರ ಆತಿಥ್ಯದ ಮಾದರಿ. ಹೀಗಾಗಿ ಎದುರಾದವರಿಂದ ಆಗ್ರಹಿಸಿ ಕಾವ್ಯವಾಚನ ಮಾಡಿಸುತ್ತಿದ್ದರು. ಒಲ್ಲೆ ಎಂದವರ ಕೈಗೆ ಪೆನ್ನನಿತ್ತು ತಾವೇ ಕಟ್ಟಿದ ಕಾವ್ಯಕ್ಕೆ ಲಿಪಿಕಾರರನ್ನಾಗಿ ಮಾಡುತ್ತಿದ್ದರು. ಅದೂ ಸಾಧ್ಯವಾಗದಿದ್ದರೆ ತಾವೇ ಅಮೃತದ ಗುಟುಕಿನಂತೆ ಅನುಭವಿಸುತ್ತಾ ಕಾವ್ಯವನ್ನು ಹಾಡಿಕೊಳ್ಳುತ್ತಿದ್ದರು ಎನ್ನುವುದು ಬಾಹ್ಯಪ್ರಪಂಚಕ್ಕೆ ತಿಳಿಯದ ಸಂಗತಿ. ಕಾವ್ಯ ಎಂದರೆ ನಿತಾಂತವಾಗಿ ನಿನಾದಗೈಯ್ಯುತ್ತಾ ಹರಿಯುವ ನದಿಯಾಗುತ್ತಿದ್ದ ಬಾಯರಿಯವರ ಕವನ ಸಂಕಲನಗಳಿವು – ‘ಕಾತ್ಯಾಯಿನಿ’, ‘ನದಿಯಾದವರು’, ‘ಗಂಧವತಿ’ ‘ಇನ್ ಕ್ರೆಡಿಬಲ್ ವಾಯ್ಸಿಸ್’ ಇತ್ಯಾದಿ.

“ಬಯಲು ಬಯಲನೇ ಬಿತ್ತಿ ಬಯಲು ಬಯಲನೇ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯ”

ಎಂದು ಕಾವ್ಯ ಬಯಲನ್ನಪ್ಪಿಕೊಂಡು ಬಯಲಾಗಿ ಹೋದವರು ಕಸ್ತೂರಿಬಾಯರಿಯವರು. ಬಾಯರಿಯವರ ಕಾವ್ಯಾರಾಧನೆಯನ್ನು ನಾನು ಅಲ್ಲಮನ ವಚನಗಳ ಮೂಲಕ ಹೀಗೆ ಆರಂಭಿಸುತ್ತಿರುವುದಕ್ಕೂ ಬಲವಾದ ಕಾರಣವಿದೆ. ಅವರ ಮನ ಸೆಳೆಯುವ ಮತ್ತೊಂದು ಕವನ ಸಂಕಲನ ‘ಅಲ್ಲಮನೆಡೆಗೆ’. ಅವರವರ ಭಾವಕ್ಕೆ ಅವರವರ ಭಕುತಿಗೆ ಆಹಾರವಾದ ಶ್ರೇಷ್ಠ ತತ್ವಜ್ಞಾನಿಯೆಂದರೆ ಅದು ಅಲ್ಲಮ. ಅಕ್ಕಮಹಾದೇವಿ ಅಲ್ಲಮನನ್ನು ಸಾಕ್ಷಾತ್ ಜ್ಯೋತಿರ್ಲಿಂಗವನ್ನಾಗಿಯೇ ಕಾಣುತ್ತಾಳೆ. ಸಂ. ಶಿ ಭೂಸನೂರಮಠರವರು ಇದನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತಾರೆ.

‘ಮಾತೆಂಬುದು ಜ್ಯೋತಿರ್ಲಿಂಗ’ ಅಲ್ಲಮನ ವಚನ‌. ಆದರೆ ಕಸ್ತೂರಿ ಬಾಯರಿಯವರಲ್ಲಿ ಕಾವ್ಯವೇ ಜ್ಯೋತಿರ್ಲಿಂಗ; ಕಾವ್ಯವೇ ಲಿಂಗಾಂಗ. ಅಲ್ಲಮನ ಬಯಲನ್ನು ತಮ್ಮದೇ ಒಲವಿನಾರಾಧನೆಯ ಬಗೆಯನ್ನಾಗಿ ರೂಪಿಸಿಕೊಳ್ಳುವ ಬಾಯರಿಯವರ ಕಾವ್ಯದ ಜೀವಸೆಲೆ ಲೌಕಿಕವಾದದ್ದೋ ಅಥವಾ ಅಲೌಕಿಕವಾದದ್ದೋ ಇಲ್ಲವೇ ಎರಡೂ ಬೆರೆತ ಹಾಲು ಸಕ್ಕರೆಯೋ ಎಂಬ ಜಿಜ್ಞಾಸೆಗಿಂತ ದಕ್ಕಿದ್ದನ್ನು ಚಪ್ಪರಿಸಿಬಿಡುವುದೇ ಹಿತವಾಯಿತೆನಗೆ.

“ನಿನ್ನ ಅರಸಿ ಎಲ್ಲೆಲ್ಲೇ ತಿರುಗಾಡಿದೆ
ನೀ ಮಾತ್ರ ನನ್ನ ಅಂಗಳದ
ರಂಗೋಲಿಯಲಿ ಅರಳಿದೆ
ಚುಕ್ಕಿ ಚಂದ್ರಮ ಬೆಳಕು ಆಕಾಶದಲಿ ಅರಸಿದೆ
ನೀ ಮನೆಯ ಮುಂದಿನ
ಇಬ್ಬನಿಯಲಿ ಪ್ರತಿಬಿಂಬಿಸಿದೆ”

ಹೀಗೆ ಬಾಯರಿಯವರು ಶೋಧಿಸುವುದು ಬೇರಾರನ್ನೂ ಅಲ್ಲ. ಅವರು ಹುಡುಕ ಹೊರಟಿದ್ದು ಇದೇ ಅಲ್ಲಮನನ್ನು. ಅವರ ಅಲ್ಲಮನೆಡೆಗೆ ಕವನ ಸಂಕಲನವಿಡೀ ಅಲ್ಲಮನ ಶೋಧನೆಗೆಂದೇ ಮೀಸಲಾಗಿರುವುದು ಅವರ ಅಂತರಂಗದ ದರ್ಶನ ದಾಹವನ್ನು ಪರಿಚಯಿಸುತ್ತದೆ. ಅಕ್ಕಮಹಾದೇವಿ ತನ್ನ ಅಲೌಕಿಕ ಪತಿಯನ್ನು ಹುಡುಕುವ ಪರಿ ವಿಭಿನ್ನವಾಗಿದೆ-

“ಚಿಲಿಪಿಲಿ ಎಂದೋದುವ ಗಿಳಿಗಳಿರಾ ನೀವು ಕಾಣಿರೆ ನೀವು ಕಾಣಿರೆ
ಸರವೆತ್ತಿ ಪಾಡುವ ಕೋಗಿಲೆಗಳಿರಾ ನೀವು ಕಾಣಿರೆ ನೀವು ಕಾಣಿರೆ
ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣಿರೆ, ನೀವು ಕಾಣಿರೇ
ಕೊಳನ ತಡಿಯೊಳಾಡುವ ಹಂಸೆಗಳಿರಾ, ನೀವು ಕಾಣಿರೆ, ನೀವು ಕಾಣಿರೆ ”
ಎಂದು ಅಕ್ಕ, ಚೆನ್ನಮಲ್ಲಿಕಾರ್ಜುನನನ್ನು ಅರಸಿದರೆ, ಬಾಯರಿಯವರು ಅಲ್ಲಮನನ್ನು ರಂಗೋಲಿಯಲ್ಲಿ ತಮ್ಮ ಮನೆಯ ಮುಂದಿನ ಇಬ್ಬನಿಯಲ್ಲಿ ಅರಸಿ ಕಂಡುಕೊಳ್ಳುತ್ತಾರೆ. ದರ್ಶನವೆಂಬುದು ಕಣ್ಣಿಗೆ ಕಾಣದ ರಹಸ್ಯವೆಂಬ ಶತಶತಮಾನಗಳ ಸಿದ್ಧಾಂತವನ್ನು ಮುರಿದು, ಬಂಡಾಯವೆಂಬಂತೆ ತಮ್ಮ ಮನದಂಗಳದಲ್ಲಿ ಅಲ್ಲಮನನ್ನು ಕಾಣುವ ಬಗೆಯು ವಿಶಿಷ್ಟವಾಗಿದೆ.

ತಮ್ಮ ಇಡೀ ಕವನಸಂಕಲನದಲ್ಲಿ ಒಂದಿಲ್ಲೊಂದು ಬಗೆಯಲ್ಲಿ ಅಲ್ಲಮನ ಶೋಧನೆಗಿಳಿಯುವ ಕವಯಿತ್ರಿಯ ಕಾವ್ಯಪ್ರತಿಭೆ ಒಲವಿನ ಸಮಾರಾಧನೆಯನ್ನೂ ಶ್ರದ್ಧೆಯಿಂದ ಮಾಡುತ್ತದೆ. ಬಾಯರಿಯವರಿಗೆ ಒಲವೆಂದರೆ ಕಾವ್ಯ; ಕಾವ್ಯವೆಂದರೆ ಒಲುಮೆ. ಓಶೋ ಹೀಗೆ ಹೇಳುತ್ತಾನೆ – “Life should be lived existentially not by intellectually ” ಈ ಸತ್ಯವನ್ನರಿತು ಕಾವ್ಯದಲ್ಲಿ ಬದುಕಾದವರು ಬಾಯರಿಯವರು. ಹಾಗೆಯೇ ಬದುಕಿನಲ್ಲಿ ಕಾವ್ಯವಾದವರು.

“ದಿನಾಲು ಉರಿಯುವ ಸೂರ್ಯನ
ಒಂದು ಕಿಡಿಯ ತೆಗೆದು ಪ್ರಣತಿ
ಎಣ್ಣೆಯಲಿ ಅದ್ದಿದ ಬತ್ತಿಗೆ ಸೋಕಿಸಿ
ದೀಪ ಹಚ್ಚುವ ಕಾಲ ಮತ್ತು ನಾನು
ಖಾಸಾ ಗೆಳೆಯರು”

ತಮ್ಮ ಕಾವ್ಯದ ಮೂಲಕ ಬೆಳಕನ್ನು ಹರಡುವ ಕವಯಿತ್ರಿಯ ಆಪ್ತ ಗೆಳೆಯನೇ ಈ ಕಾಲ. ಈ ಕಾಲವೇ ಅಲ್ಲಮನಾಗಿ, ನಲ್ಲನಾಗಿ ಪ್ರಕೃತಿಯಾಗಿ, ಗಾಂಧಿಯಾಗಿ, ಪ್ರೇಮವಾಗಿ, ಬೆಳಕಾಗಿ, ನದಿಯಾಗಿ, ನಕ್ಷತ್ರವಾಗಿ, ಆಕಾಶವಾಗಿ, ಭೂಮಿಯಾಗಿ ಕಾಡಿದ್ದಾನೆ ಕಸ್ತೂರಿ ಬಾಯರಿಯವರಿಗೆ. ಈ ಕಾರ್ಯದಲ್ಲಿನ ದೀಪ ಹಚ್ಚುವ ಹಾಗೂ ಕಾಲನ ಸ್ನೇಹ ಎಂಬ ಎರಡು ಸಂಗತಿಗಳು ಗಮನ ಸೆಳೆಯುತ್ತವೆ. ದೀಪ ಹಚ್ಚುವ ಪರಂಪರೆಯೊಂದು ನಮ್ಮ ನಾಡಿನಲ್ಲಿ ಹಾಸುಹೊಕ್ಕಾಗಿರುವುದು ತಿಳಿದಿರುವ ಸಂಗತಿಯೇ.

ಜಿ.ಎಸ್. ಎಸ್ ಕೂಡ ಹಣತೆ ಹಚ್ಚುತ್ತಾರೆ ಹೀಗೆ –

“ಹಣತೆ ಹಚ್ಚುತ್ತೇನೆ ನಾನು,
ಕತ್ತಲೆಯನ್ನು ದಾಟುತ್ತೇನೆಂಬ
ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ
ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು
ಆಸೆಯಿಂದ;
ಹಣತೆ ಆರಿದ ಮೇಲೆ, ನೀನು
ಯಾರೋ, ಮತ್ತೆ ನಾನು ಯಾರೋ.

ಎಲ್ಲ ಬಗೆಯ ಸಾವಿನ ನಂತರ ಉಳಿಯುವ ಒಂದೇ ಒಂದು ಪ್ರಶ್ನೆಯಿದು. ಆದರೆ ಕಸ್ತೂರಿಬಾಯರಿಯವರಲ್ಲಿ ಬೆಳಕನ್ನು ಸಂಭ್ರಮಿಸುವುದು ಮಾತ್ರ ಮುಖ್ಯ. ನಂತರ ಹುಟ್ಟುವ ದಿಗಂತದಾಚೆಯ ತತ್ವಜ್ಞಾನದ ಕಡೆಗೆ ಅವರ ಆಸಕ್ತಿಯಿಲ್ಲ. ಈ ಜ್ಯೋತಿಯನ್ನು ಕಾಲನೊಂದಿಗೆ ಸೇರಿ ಹಚ್ವುವುದು ಕವಯಿತ್ರಿಯವರ ವಿಶೇಷ. ಬೇಂದ್ರೆಯವರು

“ಇರುಳಿರಳಳಿದು ದಿನದಿನ ಬೆಳಗೆ
ಸುತ್ತಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದಕೆ
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ?”

ಇಂಥ ಕಾಲನೊಂದಿಗೆ ಸೇರಿ ದೀಪ ಹಚ್ಚುತ್ತಾರೆ ಬಾಯರಿಯವರೆಂದರೆ ಕಾಲನ ಮೇಲಿನ ಅವರ ಅಪಾರವಾದ ಭರವಸೆಯನ್ನು ಕಾಣಬಹುದು. ಆ ನಂಬಿಕೆಯ ಸ್ವರೂಪವನ್ನು ನಾನು ಅವರನ್ನು ಭೇಟಿಯಾದಾಗ ಕಂಡಿದ್ದೇನೆ. ಅವರ ಇಳಿಸಂಜೆಯ ಕೊನೆಗಾಲದಲ್ಲಿಯೂ ಎರಡು ಮೂರು ಕೃತಿಗಳನ್ನು ಹೊರತರುವ ಉಲ್ಲಾಸದಲ್ಲಿದ್ದರು.

ಕೆ. ಎಸ್.‌ ನರಸಿಂಹಸ್ವಾಮಿಯವರು ಇದೇ ಕಾಲನನ್ನು ಕುರಿತು ಹೀಗೆ ಹಾಡುತ್ತಾರೆ.

“ಬದುಕು ನಮ್ಮ ಮುಂದೆ ನೂರೆಂಟು
ಗಡಿಯಾರಗಳನ್ನಿಡುತ್ತದೆ.
ಒಂದೊಂದು ಹಾದಿಗೆ ಅದರದರದೇ
ಟೈಮ್ ಝೋನು..! ನನಗೆ ಆ
ಕ್ಷಣಕ್ಕೆ ಸರಿಕಂಡ ಸಮಯವನ್ನ ನನ್ನ
ಕೈಯಿನ ಗಡಿಯಾರಕ್ಕೆ
ಹೊಂದಿಸಿಕೊಂಡೆ. ಏನೋ ಕೆಲಸ್,
ಮತ್ತೇನೋ ಹಳವಂಡ. ಹೋಗಿ
ಮುಗಿಸಿ ಮತ್ತೆ ಗಡಿಯಾರದಂಗಡಿಯ ಮುಂದೆ.”

ಬಯಸಿ ಕಾಲವನ್ನು ಕೆಣಕಿ ಪಳಗಿಸಿದ ಪೂರ್ವಸೂರಿಗಳ ದೊಡ್ಡ ಪಡೆಯೇ ನಮ್ಮಲ್ಲಿರುವುದು ಕರುನಾಡಿನ ಹೆಮ್ಮೆ. ಕಸ್ತೂರಿ ಬಾಯರಿಯವರು ಒಲವನ್ನೇ ತಮ್ಮ ಬೆಳಕನ್ನಾಗಿ ಮಾಡಿಕೊಂಡ ಶ್ರಾವಣದ ಕವಿತೆಯ ಸಾಲುಗಳನ್ನು ಗಮನಿಸಿ-

“ನಾದ ನಿನಾದ ಶಬ್ದರೂಪಗಳ ರೂಪಂಗಳ
ಬರೆದ ಒಡಲು ತುಂಬಿದ ಹಸಿರು ಮಥಿಸಿ
ಒಲವಾದ ಬದುಕು ಅರಳಿದ ಶ್ರಾವಣದ
ಸಂಜೆ ಸಂತಳಾದ ಕವಿತಾ ಬೆಳಕ
ಹಿಡಿದಳು ( ಶ್ರಾವಣ ಕವಿತೆ)

ಇಲ್ಲಿ ಒಲವೇ ಬದುಕು. ಬದುಕೇ ಶ್ರಾವಣ, ಶ್ರಾವಣವೇ ಬೆಳಕು. ಎಂಬಂತಹ ತಾತ್ವಿಕತೆಯು ಮೈದಾಳಿರುವುದನ್ನು ಗಮನಿಸಬೇಕು. ಈ ಕವಿತೆಯಲ್ಲಿನ ಐದು ಮುಖ್ಯವಾದ ಝರಿಗಳೆಂದರೆ ಒಲವು, ಬದುಕು, ಶ್ರಾವಣ, ಕವಿತೆ, ಬೆಳಕು. ಈ ಪಂಚಾರತಿಯಿಂದಲೇ ಕಾವ್ಯವನ್ನು ಬೆಳಗಬೇಕೆನ್ನುವ ಬಾಯರಿಯವರ ಕಾವ್ಯಪ್ರತಿಭೆ ಉಜ್ವಲವಾದುದು. ಈ ಪದ್ಯ ಕಾವ್ಯವನ್ನು ಒಲವಿನ ಆಧ್ಯಾತ್ಮಿಕತೆಯನ್ನು ದರ್ಶಿಸುವಂತೆ ಮಾಡುತ್ತದೆ. ಈ ಸಾಲುಗಳು ಬೇಂದ್ರೆಯವರ ಶ್ರಾವಣ ಕವಿತೆಯನ್ನು ಸ್ಮರಿಸುವಂತೆ ಮಾಡುತ್ತವೆ ಹೀಗೆ-

ಬೆಟ್ಟ ತೊಟ್ಟಾವ ಕುತನಿಯ ಅಂಗಿ
ಹಸಿರು ನೋಡ ತಂಗಿ
ಹೊರಟಾವೆಲ್ಲೊ ಜಂಗಿ
ಜಾತ್ರಿಗೇನೋ ನೆರದsದ ಇಲ್ಲೆ ತಾನೋ

ಈ ಕವಿತೆಯಲ್ಲಿಯೂ ಕೂಡ ಮೇಲಿನ ಐದು ಸಂಗತಿಗಳೇ ಪಂಚಾಮೃತವಾಗಿ ಬೇಂದ್ರೆಯವರು ಹಂಚಿರುವುದನ್ನು ಕಾಣಬಹುದು. ಪ್ರಕೃತಿಯಲ್ಲಿಯೇ ದೈವವನ್ನು ಶೋಧಿಸಿದ ಬೇಂದ್ರೆಯವರ ಕಾವ್ಯಗುಣದ ಮೂಲ ಆಧ್ಯಾತ್ಮಿಕತೆ. ನಿಸರ್ಗದ ಅಂಗಾಂಗಗಳನ್ನು ಲಿಂಗವಾಗಿ ಕಾಣುವ ಪ್ರಕೃತಿ ಆರಾಧನೆ ಬೇಂದ್ರೆಯವರದಾದರೆ, ಒಲವಿನ ಕವಿತೆಯಲ್ಲಿ ಕಂಡ ಬೆಳಕನ್ನೇ ಶ್ರಾವಣ ಹಬ್ಬವನ್ನಾಗಿ ಸಂಭ್ರಮಿಸುವ ಹಾದಿ ಬಾಯರಿಯವರದು.

“ಆ ಹಳೇ ಮರದ ಬೇರುಗಳು ನನ್ನ
ಎದೆಯ ಗೂಡಿನೊಳಗೆ ಇಳಿದು
ಭಾಷೆ ಪರಿಭಾಷೆಯಾಗಿ
ಸಂವತ್ಸರಗಳು ಉರುಳಿ
ಓದುತ್ತಿರುವ ಅಕ್ಷರಗಳು
ಸಾಕ್ಷಿಯಾಗಿವೆ ಕವಿತೆಗಳು ( ಮರುಹುಟ್ಟು)

ಇದು ಮರುಹುಟ್ಟು. ಇದೇ ಬಯಲು. ಸ್ವಾಮಿ ವಿವೇಕಾನಂದರು ಹೇಳುವ ಮರುಹುಟ್ಟಿನ ತಾತ್ವಿಕತೆಯೊಂದಿಗೆ ಅನುಸಂಧಾನ ಮಾಡಿದಂತಿದೆ ಈ ಪದ್ಯ. ಪರಂಪರೆಯೆಂಬ ಮರದ ಬೇರುಗಳಲ್ಲಿನ ನೆಲಮೂಲ ಸಂಸ್ಕೃತಿಯನ್ನೇ ಸಂಸ್ಕರಿಸಬಲ್ಲ ಅಕ್ಕಸಾಲಿಗರೆಂದರೆ ಬಾಯರಿಯವರು. ಅವರು ಹೆಕ್ಕಿ ತೆಗೆದಿದ್ದು ಭಾವಗಳೊಂದಿಗೆ ಹರಿದು ಬರುವ ಅಕ್ಷರಗಳನ್ನು. ಟಿ.ಎಸ್.‌ಇಲಿಯಟ್ ಹೇಳುವ ಹಾಗೆ ಪರಂಪರೆಯಿಂದ ಹೊರತಾದವರನ್ನು ಕವಿಗಳೆನ್ನಲಾಗದು. ಬೇರುಗಡಿತರಾದವರಿಂದ ಹಸಿರು ಕಾವ್ಯ ಚಿಗುರನ್ನು ಬಯಸುವುದು ಸಾಧ್ಯವಿಲ್ಲ. ಪರಂಪರೆಯ ಭಾಗವಾಗಿಯೇ ಕವಿತೆಗಳನ್ನು ಕಟ್ಟುವ ಕರಕುಶಲಿಗರಾಗಿ ಬಾಯರಿಯವರು ಗಮನಸೆಳೆಯುತ್ತಾರೆ. ಹಾಗೆ ಪರಂಪರೆಯೊಂದಿಗೆ ಬೆಸೆದುಕೊಂಡಾಗಲೇ ಅವರಲ್ಲಿ ಕಾವ್ಯದ ಜೀವಸೆಲೆ ಪುಟಿದು ಹರಿದಿರುವುದನ್ನು ಕಾಣುತ್ತೇವೆ. ಪರಂಪರೆಯ ಪ್ರಜ್ಞೆಯು ಬಾಯರಿಯವರಿಗೆ ಅಕ್ಷರಗಳನ್ನು ಕಡೆಯುವುದರಲ್ಲಿ, ಪದಗಳನ್ನು ಹೆಣೆಯುವುದರಲ್ಲಿ ಅಂತಃಶಕ್ತಿಯನ್ನೊದಗಿಸಿದೆ. ಒಮ್ಮೊಮ್ಮೆ ಬಯಲೂ ಕೂಡ ಹೇಗೆ ಬಂಧನವಾಗಬಲ್ಲದು ಎಂಬುದಕ್ಕೆ ಬಾಯರಿಯವರ ಕೆಳಗಿನ ಕವಿತೆಯ ಸಾಲುಗಳನ್ನು ಗಮನಿಸಿ- “ನಿನ್ನ ಶಬ್ದಜಾಲದಲಿ ಸಿಲುಕಿರುವೆ ; ನಾ ಧೋ ಎಂಬ ಸುರಿವ ಮಳೆಗೆ (ದಾಹ -ಕವಿತೆ). ಮಹಾತ್ಮಾ ಗಾಂಧಿಯನ್ನು ಕವಿತೆಯಲ್ಲಿ ಕಟ್ಟಿ ಕಸ್ತೂರ ಬಾಯರಿಯವರು ಕಸ್ತೂರ ಬಾ ಆಗಿಯೂ ಕಾಣುತ್ತಾರೆ. ಇಂತಹ ಆಗುವಿಕೆಯನ್ನೇ ಆಲಾಪಿಸುವ ಅವರ ಮಾತುಗಳನ್ನೇ ಕೇಳಿ –

“ನನ್ನ ಮನೆಯ ಎಲ್ಲಾ
ಕಿಟಕಿ ಬಾಗಿಲುಗಳು ತೆರೆದಿವೆ
ನೀನು ಬೆಳಕ ಕಿರಣಗಳ ಹಿಡಿದು
ಒಳಗೆ ಬಾ ಶಾಂತಿ ಪ್ರಕಾಶಿಸುತ್ತದೆ (ವಿಸ್ಮಯ)

ಈತ ಅಲ್ಲಮನೇ ಆಗಿರಬೇಕು. ಬೆಳಕಿನ‌‌ ಕಿರಣಗಳನ್ನು‌ ಹಿಡಿದು ಬರುವವನು ಮತ್ತಾರೂ ಅಲ್ಲ ಬಾಯರಿಯವರ ಸಂದರ್ಭದಲ್ಲಿ ಆತ ಅಲ್ಲಮನೆ ಇರಬೇಕು. ಹೀಗಾಗಿ ಬಾಯರಿಯವರು ಕೆಲವೊಮ್ಮೆ ಗೊತ್ತಿಲ್ಲದೇ ಮಾಯಾದೇವಿಯ ಸ್ವರೂಪವನ್ನು ಪಡೆಯುತ್ತಾರೆ‌. ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ಎಂಬ ವಚನ ನೆನಪಾಗುತ್ತದೆ ನನಗೆ. ಮತ್ತೆ ಈ ಪದ್ಯದಲ್ಲಿಯೂ ಬೆಳಕೇ ಹಾದಿಯಾಗಿ ಇಣುಕುತ್ತದೆ. ಅವರ ಮನಸ್ಸು ಅದೆಷ್ಟು ಬಯಲಾಗಿದೆ ಎಂಬುದನ್ನು ಈ ಸಾಲುಗಳು ಮಾರ್ಮಿಕವಾಗಿ ತೋರುತ್ತವೆ. ಮನಸೀಗ ಮುಕ್ತ ಮುಕ್ತ ಎನ್ನುವಂತಹ ಭಾವವನ್ನು ಆಸ್ವಾದಿಸುತ್ತಿದೆ.

ಮನೆಯ ಕಿಟಕಿ ಬಾಗಿಲುಗಳನ್ನು ತೆರೆದಿಟ್ಟರೂ ಅಂತಿಮವಾಗಿ ಮುಕ್ತಿ ಲಭಿಸುವುದು, ನಂಬಿದವನು ಬೆಳಕಿನ ಕಿರಣಗಳನ್ಮು ಹಿಡಿದು ತಂದಾಗಲೇ ಎನ್ನುವುದು ಅನ್ಯಾದೃಶ್ಯವಾಗಿದೆ. ಶಾಂತಿ ಕಾಲಿಡುವುದು ಅವನ ಬರುವಿಕೆಯಿಂದಲೇ. ‘ನೀನು ತೆರೆದ ಆಕಾಶ’ ಎನ್ನುವುದು ಕಸ್ತೂರಿ ಬಾಯರಿಯವರ ಕವಿತಾ ಸಂಕಲನದ ಹೆಸರು. ನೀನು = ತೆರೆದ ಆಕಾಶ ಎನ್ನುವುದು ಒಂದರ್ಥವಾದರೆ, ನೀನು ತೆರೆದ ‘ಆಕಾಶ’ ಎಂಬುದು ಮಗದೊಂದು ಆಯಾಮ. ಪದಗಳೊಂದಿಗಿನ ಜೂಟಾಟವು ಬಾಯರಿವರ ಕಾವ್ಯದ ಸಹಜ ಗುಣವಾಗಿತ್ತು.

“ದಣಿವ ಆರಿಸಲು ಮಧ್ಯ ಕೂಗುತ್ತಿದ್ದಾರೆ.
ಸೂರ್ಯ ಅವರ ಬೆವರ ಹನಿ ಕುಡಿದಿದ್ದಾನೆ…..
ಕಟ್ಟುವವರ ಕೈಚಳಕದಲಿ ಶ್ರಮದಲಿ
ಅರಳುತ್ತವೆ ಇನ್ಯಾರದೋ
ಕನಸುಗಳು” (ಕಟ್ಟುವವರು)

ಸೂರ್ಯನು ಹಾಗೆಯೇ ಬೆಳಗಲು ಸಾಧ್ಯವಿಲ್ಲ. ಅವನಿಗೆ ನಮ್ಮ ಬೆವರ ಹನಿಯ ಭಕ್ಷೀಸನ್ನು ಕೊಡಲೇಬೇಕು. ಅದರಲ್ಲೂ ವಿಶೇಷವಾಗಿ ಕಟ್ಟುವವರ ಶ್ರಮದ ಹನಿಗಳೇ ಅವನಿಗೆ ಕ್ಷೀರಾಭಿಷೇಕ ಎನ್ನುವುದೊಂದು ಬಹುದೊಡ್ಡ ವ್ಯಂಗ್ಯ. ಜೈವಿಕ ಉತ್ಪನ್ನವಾಗಿ ತಂಪನ್ನೆರೆಯುವ ಕನಿಷ್ಠ ಬೆವರನ್ನೂ ಸೂರ್ಯ ಕುಡಿದು ತೇಗುತ್ತಿದ್ದಾನೆ ಎಂದರೆ ಬಡವರ ದುಸ್ಥಿತಿಯನ್ನು ಅರಿಯಬೇಕು. ಶ್ರಮಿಕ ವರ್ಗದ ನೋವು ಸಂಕಟಗಳನ್ನು ಹತ್ತಿರದಿಂದ ಬಲ್ಲವರಾಗಿದ್ದ ಬಾಯರಿಯವರಿಗೆ ಮಾತ್ರ ದಕ್ಕಬಹುದಾದ ಸಾಲುಗಳಿವು.

ಸಕಲ ಜೀವಿಗಳ ಬಾಳಿಗೆ ಬೆಳಕಾಗಬಲ್ಲ ನೇಸರನೂ ಬಾಯಾರಿಕೆಯಾದರೆ ಬಹುರಾಷ್ಟ್ರೀಯ ಕಂಪೆನಿಗಳ ಮಾಲೀಕರಾದ ಕ್ಯಾಪಿಟಲಿಸ್ಟ್ ಗಳನ್ನು ಹುಡುಕಿ ಹೋಗುವುದಿಲ್ಲ. ಬದಲಾಗಿ ಸರಳವಾಗಿ ಕೈಗೆಟುಕುವ ಕಾರ್ಮಿಕರ ಬೆವರನ್ನೇ ಆಶ್ರಯಿಸುತ್ತಾನೆ ಎನ್ನುವುದು ಕಾರ್ಲ್ ಮಾರ್ಕ್ಸ ವಾದದ ನೆರಳಿನಂತಿದೆ. ವಸಾಹತುಶಾಹಿ ಮಾರುಕಟ್ಟೆ ತಂದ ದುರಂತಗಳಲ್ಲಿ ಬಾಯರಿಯವರ ಕಾವ್ಯದೊಳಗಿನ ಬೆವರು ಕುಡಿಯುವ ನೇಸರನ ನಿದರ್ಶನವೂ ಒಂದು. ಇದು ಪ್ರಕೃತಿಯ ಸಹಜ ಗುಣಕ್ಕಿಂತ ತದ್ವಿರುದ್ಧವಾದ ಪ್ರಕ್ರಿಯೆ. ಈ ಮೂಲಕ ಬಾಯರಿಯವರು ನಿತ್ಯಜೀವನದ ವೈರುಧ್ಯಗಳ ಲೋಕವೊಂದನ್ನು ಕಟ್ಟಿಕೊಡುತ್ತಾರೆ.

ಒಮ್ಮೆ ಮನೆಯ ಪಕ್ಕದ ಮಗುವೊಂದು ಬಾಯರಿಯವರ ಹತ್ತಿರ ಬಂದು ಕೇಳಿತಂತೆ – ಚಂದ್ರ ಯಾಕೆ ಮಾಸ್ಕ ಧರಿಸಿಲ್ಲವೆಂದು. ಕವಯಿತ್ರಿಯ ಮನಸು ಪ್ರಫುಲ್ಲವಾಗಿ “ನೀನೊಬ್ಬ ದೊಡ್ಡ ಕವಿಯಾಗ್ತಿಯಾ” ಎಂದು ಆಶೀರ್ವದಿಸಿತಂತೆ. ಇದು ಅವರ ಹತ್ತಿರವೇ ಸುಳಿದಾಡುತ್ತಿದ್ದ ರೂಪಕಗಳ ಬದುಕು. ಹೀಗಾಗಿ ಕಸ್ತೂರಿ ಬಾಯರಿಯವರು ಸಾಯುವ ಕೊನೆಯ ಘಳಿಗೆಯವರೆಗೂ ಕಾವ್ಯದ ಉಸಿರಾಟವನ್ನು ಬಿಟ್ಟಿರಲಾಗಲಿಲ್ಲ. ನಾನೊಮ್ಮೆ‌ ರಾಗಂ ದಂಪತಿಗಳೊಂದಿಗೆ ಅವರ ಮನೆಗೆ ಹೋದಾಗ, ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಂಡು ಬಾಯರಿಯವರು ಮಾಡಿದ ಮೊದಲ ಕಾರ್ಯವೇನೆಂದರೆ ತಮ್ಮ‌ಕೋಣೆಯೊಳಗಿನ ನೋಟಪುಸ್ತಕವನ್ನು ತರಿಸಿ ಡಾ. ರಾಜಶೇಖರ ಮಠಪತಿ (ರಾಗಂ) ರವರಿಂದ ತಮ್ಮ ಕಾವ್ಯವೊಂದನ್ನು ಉಕ್ತಲೇಖನವಾಗಿ ಬರೆಯಿಸಿದ್ದು. ಹೀಗೆ ಮನೆಗೆ ಬಂದ ಅತಿಥಿಗಳಿಂದ ತಮ್ಮ ಆಶುಕವಿತೆಯನ್ನು ಅವರ ಮುಂದೆಯೇ ಹೇಳಿ ಬರೆಯಿಸುತ್ತಿದ್ದ ಬಾಯರಿಯವರ ಕಾವ್ಯಪ್ರತಿಭೆ ಅನ್ಯಾದೃಶ್ಯವಾದುದು.

ವಯೋಸಹಜ ಕಾಯಿಲೆಗಳಿಂದ ಇನ್ನಿಲ್ಲದಂತೆ ಬಳಲುತ್ತಿದ್ದರೂ ಅವರ ಕವಿಮನಸು ಮಾತ್ರ ಸದಾ ಕಾವ್ಯದ ಗುಟುಕಿಗಾಗಿ ಹಾತೊರೆಯುತ್ತಿತ್ತು ಎನ್ನುವುದನ್ನು ಹತ್ತಿರದಿಂದ ಕಂಡಿದ್ದೇನೆ. ತಮ್ಮ ಮನೆಗೆ ಬಂದ ಮಗುವಿನ ಮುಗ್ಧ ಮಾತುಗಳಲ್ಲಿಯೂ ಕಾವ್ಯಾನಂದವನ್ನೇ ಶೋಧಿಸುತ್ತಿದ್ದ ಬಾಯರಿಯವರ ಮನಸು ಕಾವ್ಯಕ್ಕಾಗಿ ಮಗುವಿನಂತಾಗುತ್ತಿತ್ತು. ಅವರ ಸಾವಿನ ಕೊನೆ ಘಳಿಗೆಯಲ್ಲಿ ಕಾಡಿದ ನೋವುಗಳನ್ನೂ ಕೂಡ ತಮ್ಮ ಕಾವ್ಯದ ತಹತಹಿಕೆಗಳನ್ನಾಗಿ ರೂಪಿಸಿಕೊಂಡಿದ್ದರೆಂದರೆ ಅವರ ಸೃಜನಶೀಲತೆ ಇನ್ನೆಷ್ಟು ತೀವ್ರವಾಗಿದ್ದಿರಬೇಕೆಂಬುದನ್ನು ಊಹಿಸಲಾಗದು. ಮರಣಶಯ್ಯೆಯಲ್ಲಿರುವಾಗಲೂ ತಮ್ಮ ಸಮಗ್ರ ಕಾವ್ಯ ಕೃತಿಯನ್ನು ಹೊರತರುವ ಹೆಬ್ಬಯಕೆಯನ್ನಿಟ್ಟುಕೊಂಡು ಕಾಯುತ್ತಿದ್ದರೆನ್ನುವುದೇ, ನಾನು ಇವರನ್ನು ಕಾವ್ಯಕ್ಕಾಗಿ ಸತ್ತವರೆಂದು ಕರೆಯುವುದಕ್ಕೆ ಕಾರಣವಾದ ಸಂಗತಿ.

“ನಾನೇನು ಹೇಳಲಾರೆ ನಿಜವಾಗಿ
ಬರಿ ಕಲ್ಪನೆ
ಎಪ್ರಿಲ್ ಮೇ ತಿಂಗಳಲಿ ಹೂವರಳಿ
ನೀನೊಂದು ಕನ್ನಡಿ”

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ ಎಂದು ಹಾಡಿದ ಬೇಂದ್ರೆಯವರ ಕಾವ್ಯದ ಅಂತರಾಳ ಕಲ್ಪನೆಗಳ ವಿಲಾಸವೇ. ಹೀಗಿದ್ದರೂ ಕವಯಿತ್ರಿ ಇಲ್ಲಿ ಏನನ್ನೂ ಹೇಳಲಾರದ ಹಿಂಜರಿಕೆಗೊಳಗಾಗಿದ್ದಾರೆ. ಕಲ್ಪನೆ ಕೆಲವೊಮ್ಮೆ ಸತ್ಯದ ಪ್ರತಿಪಾದನೆಯಾಗದೇ ಹೋಗಬಹುದು. ಸತ್ಯಂ ಶಿವಂ ಸುಂದರಂ ಎಂದು ನಂಬಿದ ಕವಿಗಳಿಗಿರಬೇಕಾದ ಸಹಜ ವೃತ್ತಿಯಿದು. ಕಾವ್ಯದ ಮೊದಲ ಸಾಲಿನಲ್ಲಿಯೇ ವಾಸ್ತವಿಕ ಸತ್ಯದ ಪ್ರತಿಪಾದನೆಯಿರುವುದು ಇಲ್ಲಿಯ ಬೆರಗು. ಕನ್ನಡಿಯನ್ನು ರೂಪಕವಾಗಿ ಬಣ್ಣಿಸುತ್ತಿರುವ ಈ ಸಾಲುಗಳನ್ನು ಹಾಡುವಾಗ ನನಗೆ

“ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ”
ಎಂಬ ಎಚ್.‌ಎಸ್.‌ವೆಂಕಟೇಶಮೂರ್ತಿಯವರ ಭಾವಗೀತೆಯ ಸಾಲುಗಳು ನೆನಪಾಗುತ್ತವೆ. ಪ್ರತಿಬಿಂಬವು ಕಾಣುತ್ತದೆನ್ನುವುದನ್ನು ಹೊರತುಪಡಿಸಿದರೆ ಅದೂ ಕೂಡ ಕಲ್ಪನೆಯೇ. ಈ ಕಲ್ಪನೆಯಂತೆ ಅದೂ ಕೂಡ ಅಮೂರ್ತವೇ.‌ ಇಂತಹ ಮರೆತುಹೋಗುವ ಸಾವಿರಾರು ಕಲ್ಪನೆಗಳನ್ನು ನಾನು ಹೇಳಬಹುದಷ್ಟೇ. ಅಂತಹ ಕಲ್ಪನೆಗಳಲ್ಲೊಂದು ನೀನು ಕನ್ನಡಿ. ಶಾಶ್ವತವಾದ ಪ್ರತಿಬಿಂಬಗಳ ಒಡೆಯನಲ್ಲ. ಸಾವಿರಾರು ಬಿಂಬಗಳನ್ನು ಮೂಡಿಸಿದರೂ ನಿನಗಾಗಿ ಉಳಿಯುವ ಚೆಲುವುಗಳಿಲ್ಲ.

ಋತುಮಾನದ ಹೂಗಳನ್ನರಳಿಸಿಕೊಂಡ ಶಾಶ್ವತ ಚೆಲುವಾಗಬಲ್ಲೆ ನಾನು. ಆನಂದಿಸಿಬಿಡು ಎನ್ನುವುದು ಕವಯಿತ್ರಿಯ ಭಾವಾಲಾಪ. ಕನ್ನಡಿಯ ರೂಪಕವನ್ನಿಟ್ಟುಕೊಂಡು ಅವನಲ್ಲಿ ತನ್ನ ಪ್ರತಿಬಿಂಬವನ್ನು ಕಂಡು ಸಂಭ್ರಮಿಸಬೇಕೆನ್ನುವ ಹಂಬಲ ಕವಯಿತ್ರಿಯದು. ಗಾಲಿಬ್ ದ್ವಿಪದಿಯಲ್ಲಿಯೂ ಆಗಾಗ ರೂಪಕವಾಗಿ ಇಣುಕುವ ಕನ್ನಡಿಯು, ಒಂದನೆಯ ನಾಗವರ್ಮನ ಕರ್ನಾಟಕ ಕಾದಂಬರಿಯ ಅಚ್ಛೋದ ಸರೋವರದ ವರ್ಣನೆಯಲ್ಲಿ ತ್ರೈಲೋಕ್ಯ‌ ಲಕ್ಷ್ಮಿಯು ತನ್ನ ಸೌಂದರ್ಯವನ್ನು ಗಮನಿಸಲು ಮಾಡಿದ ರನ್ನಗನ್ನಡಿಯಾಗಿಯೂ ಸಿಂಗರಿಸಲ್ಪಟ್ಟಿದೆ‌. ಆ ಸರೋವರವು ರತ್ನದರ್ಪಣವಾಗಿ ರೂಪ ತಾಳಿರುವುದನ್ನು ಅವಲೋಕಿಸಿದರೆ ನಮ್ಮ ಮಹಾಕವಿಗಳನ್ನೂ ಕನ್ನಡಿ ಸೆಳೆಯದೇ ಬಿಟ್ಟಿಲ್ಲ. ಈ ಕನ್ನಡಿಯ ಪರಂಪರೆ ಬಾಯರಿಯವರ ಕಾವ್ಯದ ಮೂಲಕ ಮತ್ತೆ ಮುಂದಡಿಯಿಟ್ಟಿರುವುದು ಸಹಜವೇ.

“ದಾರಿಗಳು ಬೆತ್ತಲಾಗಿವೆ ಕಪ್ಪಾಗಿವೆ
ಎಲ್ಲಾ ಹೆಜ್ಜೆಗಳು ವಾಹನಗಳು
ಹರಿದಾಡದೇ ತಟಸ್ಥವಾಗಿವೆ
ಯಾವುದೋ ಹೊರಳುವಿಕೆಯಲಿ ಮಲಗಿವೆ
ಬಿಡಾಡಿ ದನಕರುಗಳು ನಾಯಿಗಳು
ಒಂದು ಮೌನದ ರಾತ್ರಿ ಮಾತಿನ ಬೆಳಕಿಗೆ ಕಾದಿದೆ. ( ಒಂದು ರಾತ್ರಿ- ಕವಿತೆಯಿಂದ )

ವರ್ತಮಾನದಲ್ಲಿ ರಷ್ಯಾ ಹಾಗೂ ಉಕ್ರೇನ್ ಗಳ ಮಧ್ಯೆ ನಡೆಯುತ್ತಿರುವ ಯುದ್ದಕ್ಕೂ ಬಾಯರಿಯವರ ಕವಿತೆ ಹೇಗೆ ಔಚಿತ್ಯಪೂರ್ಣವಾಗಿ ಅಷ್ಟೇ ಅರ್ಥಪೂರ್ಣವಾಗಿ ಅನ್ವಯವಾಗುತ್ತದೆ ಎಂಬುದನ್ನು ಅವಲೋಕಿಸಿಬಿಡಿ. ಹೌದು ಉಕ್ರೇನ್ ಗಳ ಬೀದಿಗಳು ಬೆತ್ತಲಾಗಿವೆ ; ಕಪ್ಪಾಗಿವೆ, ಅಲ್ಲಿರುವ ಜನರ ಹೆಜ್ಜೆಗಳು ಭಯದಿಂದ ತಲ್ಲಣಿಸಿ ಹರಿದಾಡದೇ ಇಂದು ತಟಸ್ಥವಾಗಿ ನೆಲಮಹಡಿಗಳಲ್ಲಿ ಅಡಗಿ ಕುಳಿತಿವೆ. ಇದೇ ಸರಿಯಾದ ಸಮಯವೆಂದುಕೊಂಡ ಬಿಡಾಡಿ ದನಕರುಗಳು, ನಾಯಿಗಳು ಕೊರಳು ಚಾಚಿಕೊಂಡು ರಸ್ತೆಗೊರಗಿವೆ.

ಈ ಒಂದು ಮೌನದ ರಾತ್ರಿಯೀಗ ಕಾದಿದೆ ಸಂಧಾನದ ಮಾತುಕತೆಯ ಬೆಳಕಿಗಾಗಿ. ಆದರೆ ಇದೇ ಈಗ ಜಗತ್ತಿನ ಸೂಪರ್ ಪವರ್ ರಾಷ್ಟ್ರಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪಕ್ಷಗಳನ್ನು ಹುಟ್ಟುಹಾಕುತ್ತಿರುವುದು ದುರಂತ ಸಂಗತಿ. ಸದ್ಯ ನಮ್ಮ ನಾಡಿನಲ್ಲಿ ಕಂಡುಬರುತ್ತಿರುವ ಧರ್ಮ ಸಂಕಟಗಳಿಗೂ ಈ ಕವಿತೆ ಹೇಗೆ ಉತ್ತರವಾಗಬಲ್ಲದು ಎಂಬುದನ್ನೊಮ್ಮೆ ನಿಕಷಿಸಿ ಹೃದ್ಗತ ಮಾಡಿಕೊಳ್ಳಬೇಕಿದೆ. ಕಾವ್ಯ ಇತಿಹಾಸವನ್ನು ವ್ಯಾಖ್ಯಾನಿಸುವುದರ ಜೊತೆ ಜೊತೆಗೆ ವರ್ತಮಾನದೊಂದಿಗೂ ಅನುಸಂಧಾನ ಮಾಡುತ್ತಿರುತ್ತದೆ ಎಂಬುದಕ್ಕೆ ಮೇಲಿನ ಕವಿತೆ ನಿದರ್ಶನದಂತಿದೆ. ಮಾತೆಂಬುದು ಜ್ಯೋತಿರ್ಲಿಂಗ ಎಂಬ ವಚನ ಹೇಗೆ ಕ್ರಿಯೆಗಿಳಿಯಬಲ್ಲದು ಎಂಬುದನ್ನು ಕವಿತೆ ದರ್ಶಿಸುವಂತೆ ಮಾಡಿದೆ.

ದಾರಿಗಳು ಬೆತ್ತಲಾಗಿವೆಯೆಂಬುದರಲ್ಲಿಯೇ ಮನುಷ್ಯನ ಮುಖವಾಡಗಳನ್ನು ಬಯಲು ಮಾಡುವ ವ್ಯಂಗ್ಯವೂ ಅಡಗಿಕೊಂಡಿರುವುದು ಮಾರ್ಮಿಕವಾಗಿದೆ. “ಕಪ್ಪಾಗಿವೆ” ಎಂಬ ಪದವೇ ವರ್ತಮಾನದ ಯುದ್ಧದ ಭೀಕರ ಕರಾಳತೆ, ಭೀತಿ, ದಟ್ಟವಾದ ಸಂಶಯದ ಹೊಗೆ, ಅಜ್ಞಾನದ ಅಂಧಕಾರ, ಪ್ರತಿಷ್ಠೆಯ ಅಹಂಕಾರಗಳೆಲ್ಲವೂ ಮಡುಗಟ್ಟಿ ಮನದ ಮುಂದೆ ಆವರಿಸಿಕೊಂಡು ಬುದ್ದಿಜೀವಿ ಮನುಷ್ಯನನ್ನು ಮಬ್ಬಾಗಿಸಿರುವುದನ್ನು ವಿಡಂಬಿಸಿ ನಟಿಸುತ್ತಿದೆ. “ತಟಸ್ಥ” ಎಂಬುದು ಮಾನವನ ಜಡತೆಯನ್ನೂ, ಬಿಟ್ಟು ಹೋಗಲಾಗದ ಅವನಲ್ಲಿರುವ ಸ್ಥಾವರ ಗುಣಗಳನ್ನು ಪ್ರತಿನಿಧಿಸಿ ಕ್ರಾಂತಿಯ ಸನ್ನಿವೇಶಕ್ಕೆ ಬೇಕಾದ ಪೂರ್ವಸಿದ್ಧತೆಯನ್ನು ಸೂಚಿಸುವಂತೆ ಕಂಪನವನ್ನುಂಟು ಮಾಡುತ್ತದೆ.

ಈ ತಟಸ್ಥತೆ ಹರಿದಾಡದೇ ಜಿಡ್ಡುಗಟ್ಟಿರುವ ಅನಾದಿ ಕಾಲದ ಅಜ್ಞಾನದ ಆಲೋಚನೆಗಳಿಗೂ ಅನ್ವಯವಾಗುತ್ತದೆನ್ನುವುದು ಕವಯಿತ್ರಿಯ ಸೂಚನೆಯೂ ಆಗಿರಲು ಸಾಧ್ಯವಿದೆ. ಏಕೆಂದರೆ ಇಂದು ಜರುಗುತ್ತಿರುವ ಉಕ್ರೇನ್ ಹಾಗೂ ರಷ್ಯಾ ರಾಷ್ಟ್ರಗಳ ಮಧ್ಯದ ಕದನ ನಾಳೆ ಮೂರನೇ ಮಹಾಯುದ್ಧಕ್ಕೆ ಮುನ್ನುಡಿಯಾಗಬಹುದು. ಈಗಾಗಲೇ ಎರಡು ಮಹಾಯುದ್ಧಗಳನ್ನು ಕಂಡ ಜಗತ್ತು ಇನ್ನೂ ಚೇತರಿಸಿಕೊಳ್ಳುತ್ತಲಿದೆ. ಈಗ ಮತ್ತೆ ಎದುರಾಗಿದೆಯೆಂದರೆ ಇತಿಹಾಸದಿಂದ ಪಾಠ ಕಲಿಯದೇ ನಾವಿನ್ನೂ 1945 ನೇ ವರ್ಷದಷ್ಟು ಹಿಂದಕ್ಕೆ ಹಿಂತಿರುಗುತ್ತಿದ್ದೇವೆ ಎಂದೇ ಅರ್ಥೈಸಿಕೊಳ್ಳಬೇಕಾಗುತ್ತದೆ. ಇದು ದುರಂತವಲ್ಲದೇ ಮತ್ತೇನು ಎನ್ನುವ ಪ್ರಶ್ನೆಯಂತೂ ಕಾಡುತ್ತಲಿದೆ.

“ಕ್ಷಿತಿಜ ಪೂರ್ತಿ ಬೆತ್ತಲಾಗಿದೆ ಒಂದು
ತೇಲುವ ಮೋಡದ ತುಂಡರಿವೆಯೂ ಇಲ್ಲದೇ
ಈ ಮೌನದ ಹೃದಯದಲ್ಲಿ ನೀಲಿ ಆಕಾಶ ತುಂಬಿದೆ
ಯಾರದೋ ನೆನಪಿನಲ್ಲಿ ಕವಿತೆಗಳು ಹುಟ್ಟಿವೆ
(ನೀ ಬರಬೇಕು ಇಂದು)

ಬೆತ್ತಲಾದಂತೆ ಕ್ಷಿತಿಜ, ಬಯಲಾಗಬೇಕಿದೆ ಮನುಷ್ಯ ಕಳಚಿಕೊಂಡು ತನ್ನ ಬಣ್ಣ ಬಣ್ಣದ ತೇಲುವ ಮೋಡದಂತಿರುವ ವೈವಿಧ್ಯಮಯ ನಾಟಕೀಯ ಮುಖವಾಡಗಳನ್ನು. ಹೀಗೆ ಬಯಲಾಗದ ಹೊರತು ಕಾವ್ಯ ದಕ್ಕುವುದಿಲ್ಲ. ಹೀಗೆ ಬೆತ್ತಲಾಗದ ಹೊರತು ಕಾವ್ಯ ಒಳಗಿಳಿಯುವುದಿಲ್ಲ. ಎದೆಯೊಳಗೆ ನೀಲಾಗಸ ತುಂಬಿಕೊಳ್ಳುವುದೇ ಬಯಲಾದ ಮೇಲೆ. ಆಗ ಮಾತ್ರ ಯಾರದೋ ನೆನಪಾಗಿ ಕವಿತೆಗಳು ಹುಟ್ಟುತ್ತವೆ. ಆಗಲೇ ಬೆಳಕು ಹರಿಯಲು ಸಾಧ್ಯ ಹೃದಯದೊಳಗೆ. ಬುದ್ಧಿ, ತರ್ಕ, ಜಿಜ್ಞಾಸೆಗಳ ಹೊರತಾದ ನಿರಮ್ಮಳ ನಿರ್ಮಲ ದಿಗಂಬರವೇ ದಿವ್ಯಾಂಬರವಾಗಬೇಕಿದೆ ಕೊನೆಗೆ.

‍ಲೇಖಕರು Admin

March 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ನನಗೆ ಅಷ್ಟಾಗಿ ಪರಿಚಯವಿಲ್ಲದ ಕವಯಿತ್ರಿ ಕಸ್ತೂರಿ ಬಾಯರಿಯವರ ಕವಿತೆಗಳ ಉತ್ತಮ ಪರಿಚಯ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: